ಸ್ಪಷ್ಟೀಕರಣ ನೀಡಬಾರದೇಕೆ?

ಎಚ್.ಎಸ್.ದೊರೆಸ್ವಾಮಿ, ಬೆಂಗಳೂರು.

ರಾಷ್ಟ್ರೀಯ ಸ್ವಯಂಸೇವಕ ಸಂಘ ರಿಜಿಸ್ಟರ್ಡ್ ಸಂಸ್ಥೆ ಅಲ್ಲ. ವಾರ್ಷಿಕ ಆಡಿಟ್ ಆದ ಲೆಕ್ಕವನ್ನು ಅದರ ಸ್ಥಾಪನೆಯಾದಂದಿನಿಂದ ಇಂದಿನವರೆಗೂ ಸಾರ್ವಜನಿಕರ ಮುಂದೆ ಇಟ್ಟಿಲ್ಲ. ಈ ಸಂಸ್ಥೆ ಲೆಕ್ಕವಿಲ್ಲದಷ್ಟು ಹಣವನ್ನು ಸಾರ್ವಜನಿಕರಿಂದ ವರ್ಷವರ್ಷವೂ ಬೇರೆ ಬೇರೆ ಹೆಸರಿನಲ್ಲಿ ಸಂಗ್ರಹ ಮಾಡುತ್ತದೆ. ಆರ್‍ಎಸ್‍ಎಸ್‍ಗೆ ಸೇರಿದ ಕಾರುಗಳು, ಮನೆಗಳು, ದ್ವಿಚಕ್ರವಾಹನಗಳು, ಸ್ಥಿರಾಸ್ತಿಗಳು ಬೇರೆ ಬೇರೆ ಖಾಸಗಿಯವರ ಹೆಸರಿನಲ್ಲಿವೆ ಎಂದು ಹಿಂದೆ ಅನೇಕ ವರ್ಷಗಳ ಕಾಲ ಆರ್‍ಎಸ್‍ಎಸ್‍ನಲ್ಲಿದ್ದು ಹೊರಬಂದು ನಮ್ಮ ಚಳವಳಿಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿರುವ ಸ್ನೇಹಿತರೊಬ್ಬರು ಬಹಿರಂಗ ಪತ್ರ ಹೊರಡಿಸಿದ್ದಾರೆ. ಇನ್ನೂ ಅನೇಕ ಲೋಪದೋಷಗಳನ್ನು ಈ ಬಹಿರಂಗ ಹೇಳಿಕೆಯ ಕರಪತ್ರದಲ್ಲಿ ಪ್ರಕಟಿಸಿದ್ದಾರೆ.

ಈ ರೀತಿ ಸಂಸ್ಥೆಯನ್ನು ರಿಜಿಸ್ಟರ್ ಮಾಡಿಸದಿರುವುದು, ಸಾರ್ವಜನಿಕರಿಂದ ಸಂಗ್ರಹಿಸಿದ ಹಣದ ಆಯವ್ಯಯ ಲೆಕ್ಕದ ಆಡಿಟ್ ಮಾಡಿಸದಿರುವುದು, ಅದನ್ನು ಸಾರ್ವಜನಿಕರ ಮುಂದೆ ಇಡದಿರುವುದು, ಪ್ರತಿವರ್ಷ ನಡೆಯುವ ಗುರುವಂದನೆ ಕಾರ್ಯಕ್ರಮದಲ್ಲಿ ಸಹಸ್ರಾರು ಜನರಿಂದ ಕೊಡಮಾಡುವ ಗುರುದಕ್ಷಿಣೆ ಸಂಗ್ರಹದ ಹಣಕ್ಕೆ ಲೆಕ್ಕ ಇಟ್ಟು, ಅದನ್ನು ಲೆಕ್ಕಪರಿಶೋಧಕರಿಂದ ಆಡಿಟ್ ಮಾಡಿಸಿ, ಆ ಲೆಕ್ಕವನ್ನು ಸಾರ್ವಜನಿಕರ ಮುಂದೆ ಇಡಬೇಕಾದ್ದು ಭಾರತಾದ್ಯಂತ ಇರುವ ಸಂಘದ ಕಾರ್ಯಾಲಯಗಳ ಕರ್ತವ್ಯವಲ್ಲವೇ? ಅದು ಸ್ಥಾಪನೆಯಾದ ದಿನದಿಂದ ಇಂದಿನವರೆಗೆ ಆದಾಯತೆರಿಗೆ ಇಲಾಖೆ, ಅದರ ತನಿಖಾ ತಂಡಗಳು, ಜಾರಿ ನಿರ್ದೇಶನಾಲಯ, ಸಾರ್ವಜನಿಕ ಸಂಸ್ಥೆಗಳನ್ನು ರಿಜಿಸ್ಟರ್ ಮಾಡುವ ಇಲಾಖೆ ಯಾವುದೂ ಈ ಅಕ್ರಮವನ್ನು ತಡೆಗಟ್ಟದಿರುವುದಕ್ಕೆ ಕಾರಣವೇನು? ಎಂದು ಪ್ರಶ್ನಿಸಬೇಕಾಗಿದೆ.

ಈ ಆಪಾದನೆಗಳೆಲ್ಲ ಸುಳ್ಳಾಗಿದ್ದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥರು ಸಾರ್ವಜನಿಕವಾಗಿ ಅಂಕಿಅಂಶಗಳೊಡನೆ ವಿವರಣೆ ನೀಡಿ ತಮ್ಮ ಸಂಸ್ಥೆಯ ನಿಲುವನ್ನು ಸಮರ್ಥಿಸಿಕೊಳ್ಳಬೇಕು.

ಇತ್ತೀಚಿನ ಸುದ್ದಿಯ ಪ್ರಕಾರ ಕೇರಳ ಮುಖ್ಯಮಂತ್ರಿಗಳು ಆರ್‍ಎಸ್‍ಎಸ್ ಬಗೆಗೆ ಬಂದ ದೂರುಗಳನ್ನು ಪರಿಶೀಲಿಸಿ

ರಾಜ್ಯದ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ದೂರನ್ನು ಕಳಿಸಿರುವುದಾಗಿ ತಿಳಿದು ಬಂದಿದೆ. ಅಲ್ಲದೆ, ಸರ್ವೋಚ್ಚ ನ್ಯಾಯಾಲಯವೂ ಈ ದೂರನ್ನು ಪರಿಶೀಲಿಸುತ್ತಿದೆಯೆಂಬ ಸುದ್ದಿ ಇದೆ.

ಸರ್ವೋಚ್ಚ ನ್ಯಾಯಾಲಯ ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕಾಗಿ ಒಂದು ಟ್ರಸ್ಟ್‍ನ್ನು ರಚಿಸಬೇಕೆಂದೂ ಆ ಟ್ರಸ್ಟ್‍ನಲ್ಲಿ 12 ಮಂದಿ ಸರ್ಕಾರಿ ಅಧಿಕಾರಿಗಳು, 3 ಮಂದಿ ಸಾರ್ವಜನಿಕ ಪ್ರತಿನಿಧಿಗಳೂ ಇರಬೇಕೆಂದು ತೀರ್ಪು ನೀಡಿದೆ. ಅದರಂತೆ ಸಾರ್ವಜನಿಕರನ್ನು ಪ್ರತಿನಿಧಿಸುವವರೆಂದು ಹೇಳಿದ ಸರ್ಕಾರ ಹಿಂದುತ್ವ ಪ್ರತಿಪಾದಿಸುವ ನಿತ್ಯ ಗೋಪಾಲ್‍ದಾಸ್ ಸ್ವಾಮೀಜಿ, ಪೇಜಾವರ ಶ್ರೀಗಳು ಹಾಗೂ ವಿಶ್ವ ಹಿಂದು ಪರಿಷತ್ತಿನ ಚಿಂತಕ ರಾಯೆ ಒಳಗೊಂಡ ಮೂವರನ್ನು ಆಯ್ಕೆ ಮಾಡಿದೆ.

ಇನ್ನೊಂದು ವಿಷಯ. ಅಯೋಧ್ಯಾ ರಾಮಮಂದಿರ ನಿರ್ಮಾಣಕ್ಕೆ ಹಣ ವಸೂಲು ಮಾಡಲು ರಾಷ್ಟ್ರೀಯ ಸ್ವಯಂಸೇವಕ ಸಂಘ ಕರ್ನಾಟಕದಲ್ಲಿ ಕನ್ನಡದಲ್ಲಿ ರಸೀತಿ ಪುಸ್ತಕಗಳನ್ನು ಮುದ್ರಿಸಿ ಸ್ವಯಂಸೇವಕರ ಮೂಲಕ ಚಂದಾ ವಸೂಲು ಮಾಡುತ್ತದೆ.

ಸರ್ವೋಚ್ಚ ನ್ಯಾಯಾಲಯ ರಚಿಸಿರುವ ಟ್ರಸ್ಟ್, ಆರ್‍ಎಸ್‍ಎಸ್ ರಸೀತಿ ಪುಸ್ತಕಗಳನ್ನು ಮುದ್ರಣ ಮಾಡಿಕೊಳ್ಳಲು ಅವುಗಳನ್ನು ವಸೂಲಿಗೆ ಉಪಯೋಗಿಸಲೂ ನಿರ್ಣಯ ಮಾಡಿ ಆರ್‍ಎಸ್‍ಎಸ್‍ಗೆ ಅನುಮತಿ ನೀಡಿದೆಯೇ?

ಎಚ್.ಎಸ್.ದೊರೆಸ್ವಾಮಿ, ಬೆಂಗಳೂರು.

Leave a Reply

Your email address will not be published.