ಸ್ಮಾರ್ಟ್ ಸಾರ್ವಜನಿಕ ಸಾರಿಗೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳು

ಇತ್ತೀಚೆಗೆ ಸ್ಮಾರ್ಟ್ ಹಾಗೂ ಇಂಟೆಲಿಜೆನ್ಸ್ ಸಾರಿಗೆ ಇತ್ಯಾದಿ ಪದಗಳು ಬಳಕೆಗೆ ಬರುತ್ತಿವೆ. ಈ ವ್ಯವಸ್ಥೆಗಳು ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸುವ, ಪರಿಸರವನ್ನು ಸಂರಕ್ಷಿಸುವ ಹಾಗೂ ಆರ್ಥಿಕ ಉಳಿತಾಯವನ್ನು ಸಾಧಿಸುವ ಉದ್ದೇಶ ಹೊಂದಿವೆ.

ಸಾರ್ವಜನಿಕ ಸಾರಿಗೆಯ ಹೆಚ್ಚಿನ ಬಳಕೆ ಕೇವಲ ನಗರ ಪ್ರದೇಶಗಳಲ್ಲಿರುವ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಮಾತ್ರವಲ್ಲ, ಪರಿಸರ-ಸ್ನೇಹಿ ಸೂತ್ರ ಸಹ ಆಗಿದೆ. ಜಾಗತಿಕ ಮಟ್ಟದಲ್ಲಿ ಹೋರಾಡುತ್ತಿರುವ ಯು.ಐ.ಟಿ.ಪಿ (International Association of Public Transport) ‘ಒಂದು ಪ್ಲಾನೆಟ್-ಒಂದು ಪ್ಲಾನ್’ ಎಂಬ ಅಭಿಯಾನವನ್ನು ಆರಂಭಿಸಿದೆ. ಇದು 2019ರ ಡಿಸೆಂಬರ್ 2 ರಿಂದ 13 ರವರೆಗೆ ಮ್ಯಾಡ್ರಿಡ್‍ನಲ್ಲಿ ನಡೆದ ವಿಶ್ವಸಂಸ್ಥೆಯ ಹವಾಗುಣ ಬದಲಾವಣೆ ಸಮ್ಮೇಳನದಲ್ಲಿನ (ಸಿಒಪಿ-25) ನಿರ್ಣಾಯಕರಿಗೆ ಸ್ಪಷ್ಟ ಸಂದೇಶ ನೀಡುವುದಾಗಿತ್ತು. ಅದೇನೆಂದರೆ ಸಾರ್ವಜನಿಕ ಸಾರಿಗೆ ಜಾಗತಿಕ ವಾಯುಗುಣ ಚರ್ಚೆಗಳ ಕೇಂದ್ರ ಬಿಂದುಗಳಲ್ಲಿ ಒಂದಾಗಿರಬೇಕೆಂಬುದು.

ವಿಶ್ವಸಂಸ್ಥೆಯ ಪ್ರಕಾರ 2018ರಲ್ಲಿ ಪ್ರಪಂಚದ ಶೇಕಡ 55ರಷ್ಟು ಜನಸಂಖ್ಯೆ ನಗರ ಪ್ರದೇಶಗಳಲ್ಲಿದ್ದು, ಅದು 2050ರ ವೇಳೆಗೆ ಶೇಕಡ 80ಕ್ಕೆ ಏರಲಿದೆ. ಜಾಗತಿಕ ಅಔ2 ಹೂರಸೂಸುವಿಕೆಯ ಶೇ. 20 ರಷ್ಟು ಸಾರಿಗೆ ವಲಯದಿಂದ ಬರುತ್ತಿದೆ. ಇದರಲ್ಲಿ ನಗರ ಪ್ರದೇಶಗಳಲ್ಲಿ ಹೊರಸೂಸುತ್ತಿರುವ co ಶೇ. 40ರಷ್ಟಿದೆ. ಈ ಪ್ರಮಾಣವನ್ನು ತಗ್ಗಿಸಲು ಸರ್ಕಾರಗಳು ಅಗತ್ಯ ಕ್ರಮಗಳನ್ನು ಆದ್ಯತೆಯ ಮೇರೆಗೆ ತೆಗೆದುಕೊಳ್ಳುವ ಅನಿವಾರ್ಯತೆಯಿದೆ.

ವಿಶ್ವದಾದ್ಯಂತ ಸಾರ್ವಜನಿಕ ಸಾರಿಗೆ ಸೇವೆಯನ್ನು ಪ್ರೊತ್ಸಾಹಿಸುವಲ್ಲಿ ಯು.ಐ.ಟಿ.ಪಿ. ಸಂಸ್ಥೆಯ ಪಾತ್ರ ಗಮನಾರ್ಹವಾದದ್ದು. ಈ ಸಂಸ್ಥೆ ಜಾಗತಿಕ ಮಟ್ಟದಲ್ಲಿ ನಗರ ಪ್ರದೇಶಗಳಲ್ಲಿ ಸುಸ್ಥಿರ ಸಾರಿಗೆ ವ್ಯವಸ್ಥೆಗಾಗಿ ಹೋರಾಡುತ್ತಿರುವ ಜಾಗತಿಕ ಜಾಲ ಹೊಂದಿರುವ ಏಕೈಕ ಸಂಸ್ಥೆಯಾಗಿದೆ. ಯು.ಐ.ಟಿ.ಪಿ. ಕಾನೂನು ನಿರ್ಣಾಯಕರು, ಅಂತಾರಾಷ್ಟ್ರೀಯ ಸಂಸ್ಥೆಗಳು ಹಾಗೂ ಇತರೆ ಪ್ರಮುಖ ಪಾಲುದಾರರೊಡನೆ ನಿರಂತರ ಸಂವಾದದಲ್ಲಿ ತೊಡಗಿದ್ದು, ಸಾರ್ವಜನಿಕ ಸಾರಿಗೆ ಹಾಗೂ ಸುಸ್ಥಿರ ಸಾರಿಗೆ ಪರವಾಗಿ ತನ್ನ ವಿಚಾರಗಳನ್ನು ಮಂಡಿಸುತ್ತಿದೆ. ಸಾರ್ವಜನಿಕ ಸಾರಿಗೆಗೆ ಒತ್ತಾಸೆ ನೀಡುವ ಕಾರ್ಯನೀತಿ ಹಾಗೂ ಅನುಕೂಲಕರ ಪರಿಸರವನ್ನು ಪಡೆದುಕೊಳ್ಳುವ ಉದ್ದೇಶದಿಂದ, ಯಾವುದೇ ನಗರ ಪ್ರದೇಶದ ಚಲನಶೀಲತೆ ಕಾರ್ಯನೀತಿಗಳಲ್ಲಿ ಸಾರ್ವಜನಿಕ ಸಾರಿಗೆ ಪ್ರಮುಖ ಪಾತ್ರವಹಿಸಬೇಕೆಂಬ ಅಭಿಪ್ರಾಯವನ್ನು ಯು.ಐ.ಟಿ.ಪಿ. ಉತ್ತೇಜಿಸುತ್ತಿದೆ. ಚಲನಶೀಲತೆಯಲ್ಲದೆ, ಸಾರ್ವಜನಿಕ ಸಾರಿಗೆಯ ಇತರೆ ಪ್ರಯೋಜನಗಳನ್ನು ಎತ್ತಿ ಹಿಡಿದು, ಉನ್ನತ ಮಟ್ಟದ ವಿಶಾಲವಾದ ಕಾರ್ಯನೀತಿ ಚೌಕಟ್ಟುಗಳಲ್ಲಿ ಸಹ ಸಾರ್ವಜನಿಕ ಸಾರಿಗೆಯನ್ನು ಯು.ಐ.ಟಿ.ಪಿ. ಪೆತ್ಸಾಹಿಸುತ್ತಿದೆ.

ನಗರ ಸಾರಿಗೆಯನ್ನು ಇಂಗಾಲರಹಿತ ಮಾಡುವುದು, ಗ್ರಾಹಕರ ಸಂತೃಪ್ತಿ ಹೆಚ್ಚಿಸಲು ಹೊಸ ಚಲನಶೀಲತೆ ಪರಿಹಾರಗಳನ್ನು ಅಭಿವೃದ್ಧಿಪಡಿಸುವುದು, ಗ್ರಾಹಕರ ಸೇವೆ ವಿಲೇವಾರಿಗೆ ಪ್ರತಿಭಾವಂತ ಸಿಬ್ಬಂದಿಯನ್ನು ನೇಮಿಸುವುದು, ಜಾಲಗಳು ಹಾಗೂ ಸೇವೆಗಳ ಸಮಗ್ರತೆಯನ್ನು ಬಲಪಡಿಸುವುದು

ಈಗಾಗಲೇ ಸಾರ್ವಜನಿಕ ಸಾರಿಗೆ ಕಡಿಮೆ ಇಂಗಾಲ ಹೊರಸೂಸುವ ವಲಯವಾಗಿದ್ದು, ಇಂಗಾಲದ ಹೆಜ್ಜೆಗುರುತುಗಳನ್ನು ಇನ್ನಷ್ಟು ಕಡಿಮೆಗೊಳಿಸಲು ಯು.ಐ.ಟಿ.ಪಿ. ನಿರಂತರವಾಗಿ ಹೊಸ ಆಲೋಚನೆಗಳನ್ನು ತರುತ್ತಿದೆ. ಸ್ವಚ್ಛ ಶಕ್ತಿ ಮೂಲಗಳನ್ನು ಉಪಯೋಗಿಸುವ ಮೂಲಕ, ಸಾರಿಗೆ ವಲಯ ನಗರಗಳನ್ನು ಸುಸ್ಥಿರ ಭವಿಷ್ಯದೆಡೆಗೆ ತೆಗೆದುಕೊಂಡು ಹೋಗಲು ಸಾಧ್ಯವಿದೆ.

ವೈಯಕ್ತಿಕ ಇಂಗಾಲ ಹೆಜ್ಜೆಗುರುತುಗಳನ್ನು ಕಡಿಮೆ ಮಾಡಲು ಸಾರ್ವಜನಿಕ ಸಾರಿಗೆ ನಮಗಿರುವ ಏಕೈಕ ಆಯ್ಕೆಯಾಗಿದೆ. ಸಾರ್ವಜನಿಕ ಸಾರಿಗೆಯ ಬಳಕೆ ಪ್ರತಿ ವ್ಯಕ್ತಿಯ ಅಔ2 ಹೊರಸೂಸುವಿಕೆಯಲ್ಲಿ 4,800 ಪೌಂಡ್‍ಗಳಷ್ಟು ಇಂಗಾಲವನ್ನು ವಾರ್ಷಿಕವಾಗಿ ಕಡಿಮೆ ಮಾಡುವುದು ಮಾತ್ರವಲ್ಲ, ಅಪಾರ ಆರ್ಥಿಕ ಉಳಿತಾಯಕ್ಕೆ ಸಹ ದಾರಿಮಾಡಿಕೊಡುತ್ತದೆ. ಈ ಉಳಿತಾಯ ನಾವು ಪ್ರತಿ ವರ್ಷ ಕಿರಾಣಿ ಅಂಗಡಿಗೆ ಕೊಡುವ ಮೊತ್ತಕ್ಕಿಂತ ಹೆಚ್ಚಾಗಿರುತ್ತದೆ.

ಕಾರುಗಳು ನಮ್ಮ ಜೀವನ ಹಾಗೂ ನಗರ ಪ್ರದೇಶಗಳ ಮೇಲೆ ಪ್ರಾಬಲ್ಯ ಸಾಧಿಸಿದ್ದು, ಹೆಚ್ಚು ಇಂಗಾಲ ಹೆಜ್ಜೆಗುರುತುಗಳಿಗೆ ಹಾಗೂ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ಕಾರುಗಳ ಪ್ರಾಬಲ್ಯದಿಂದ ಹೊರಬಂದು, ಸಾರ್ವಜನಿಕ ಸಾರಿಗೆ ಹಾಗೂ ಬೈಸಿಕಲ್‍ಗಳಂತಹ ಪರಿಸರ ಸ್ನೇಹಿ ವಾಹನಗಳನ್ನು ಬಳಸಿದಲ್ಲಿ ನಗರ ಪ್ರದೇಶಗಳಲ್ಲಿ ಸ್ವಚ್ಛ ಪರಿಸರ ನಿರ್ಮಿಸಲು ಸಾಧ್ಯವಿದೆ.

ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಜನಪ್ರಿಯಗೊಳಿಸಲು ಹಾಗೂ ನಗರಗಳಲ್ಲಿ ಸಾರ್ವಜನಿಕ ಸಾರಿಗೆ ಮೇಲುಗೈ ಸಾಧಿಸುವಂತೆ ಮಾಡಲು ಕಾರ್ಯತಂತ್ರಗಳನ್ನು ಯು.ಐ.ಟಿ.ಪಿ.ಯಂತಹ ಸಂಸ್ಥೆಗಳು ರೂಪಿಸುತ್ತಿವೆ. ನಗರ ಸಾರಿಗೆಯನ್ನು ಇಂಗಾಲರಹಿತ ಮಾಡುವುದು, ಗ್ರಾಹಕರ ಸಂತೃಪ್ತಿ ಹೆಚ್ಚಿಸಲು ಹೊಸ ಚಲನಶೀಲತೆ ಪರಿಹಾರಗಳನ್ನು ಅಭಿವೃದ್ಧಿಪಡಿಸುವುದು, ಗ್ರಾಹಕರ ಸೇವೆ ವಿಲೇವಾರಿಗೆ ಪ್ರತಿಭಾವಂತ ಸಿಬ್ಬಂದಿಯನ್ನು ನೇಮಿಸುವುದು, ಜಾಲಗಳು ಹಾಗೂ ಸೇವೆಗಳ ಸಮಗ್ರತೆಯನ್ನು ಬಲಪಡಿಸುವುದು, ಕಾರ್ಯವಿಧಾನಗಳನ್ನು ಉತ್ತಮಗೊಳಿಸಲು ಡಿಜಿಟಲ್ ತಂತ್ರಜ್ಞಾನವನ್ನು ಬಳಸುವುದು ಈ ಕಾರ್ಯತಂತ್ರಗಳ ಪೈಕಿ ಕೆಲವಾಗಿವೆ.

ಈಗಾಗಲೇ ಸ್ಮಾರ್ಟ್ ಹಾಗೂ ಇಂಟೆಲಿಜೆನ್ಸ್ ಸಾರಿಗೆ ಇತ್ಯಾದಿ ಪದಗಳು ಬಳಕೆಗೆ ಬರುತ್ತಿವೆ. ಈ ವ್ಯವಸ್ಥೆಗಳು ಸಂಚಾರ ದಟ್ಟಣೆಯನ್ನು ಕಡಿಮೆಗೊಳಿಸುವ, ಪರಿಸರವನ್ನು ಸಂರಕ್ಷಿಸುವ ಹಾಗೂ ಆರ್ಥಿಕ ಉಳಿತಾಯವನ್ನು ಸಾಧಿಸುವ ಉದ್ದೇಶಗಳನ್ನು ಹೊಂದಿವೆ. ಸ್ಮಾರ್ಟ್ ಸಾರಿಗೆ ವ್ಯವಸ್ಥೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಹಾಗೂ ಬೆಂಗಳೂರಿನಂತಹ ನಗರಗಳಲ್ಲಿ ಸಾರ್ವಜನಿಕ ಸಾರಿಗೆಯನ್ನು ಜನಪ್ರಿಯಗೊಳಿಸಲು ಹಾಗೂ ಅದರ ಜಾಲ-ಸೇವೆಗಳನ್ನು ವಿಸ್ತರಿಸಲು ಸರ್ಕಾರ ತುರ್ತಾಗಿ ಹೆಜ್ಜೆಯಿಡಬೇಕಾಗಿದೆ.

Leave a Reply

Your email address will not be published.