ಸ್ವತಂತ್ರ ನಿರ್ಭೀತ ಪತ್ರಿಕೋದ್ಯಮವಿಲ್ಲದೆ ದೇಶದ ಪ್ರಜಾಪ್ರಭುತ್ವ ಉಳಿದೀತೇ..?

ನಿರ್ಭೀತ ಮತ್ತು ಸ್ವತಂತ್ರ ಪತ್ರಿಕೋದ್ಯಮ ದೇಶವೊಂದರ ಪ್ರಜಾಪ್ರಭುತ್ವದ ಆರೋಗ್ಯದ ಪ್ರತೀಕವೆಂದು ಹೇಳಲಾಗುತ್ತದೆ. ಹೊಗಳುಭಟ್ಟ ಮತ್ತು ಆತಂಕಿತ ಮಾಧ್ಯಮ ನಾಗರಿಕರ ಮಾನವೀಯ ಹಕ್ಕುಗಳನ್ನು ರಕ್ಷಿಸಲಾಗದೆಂಬುದು ಎಲ್ಲರೂ ಒಪ್ಪುವ ವಿಷಯವೇ ಆಗಿದೆ. ಇಂದಿನ ನಮ್ಮ ಪತ್ರಿಕೋದ್ಯಮ ರಾಜಕೀಯ ಶಕ್ತಿಗಳ ಮುಂದೆ ಮಂಡಿಯೂರಿದಂತೆ ಗೋಚರಿಸುತ್ತಿದೆ. ಬಗ್ಗಿ ನಡೆಯೆಂದರೆ ತೆವಳಲು ಸಿದ್ಧವಾದಂತಿದೆ. ಪತ್ರಿಕಾ ಸ್ವಾತಂತ್ರ್ಯದ ಎಲ್ಲಾ ಆದರ್ಶಗಳನ್ನು ಗಾಳಿಗೆ ತೂರಿ ಸರ್ಕಾರಿ ಎಂಜಲು ತಿನ್ನಲು ಹಾತೊರೆಯುವಂತಿದೆ. ಇದಕ್ಕೆ ಪತ್ರಿಕೋದ್ಯಮಿಗಳು ಹಾಗೂ ಪತ್ರಕರ್ತರೇ ಕಾರಣವಿರಬಹುದು. ಆದರೆ ಇವರನ್ನು ಬಗ್ಗುಬಡಿದು ಮಣಿಸಿ ಸಾಕುನಾಯಿಗಳಂತೆ ಕಾಣುತ್ತಿರುವ ರಾಜಕೀಯ ಶಕ್ತಿಗಳಿಗೆ ಏನೆನ್ನಬೇಕು..? ಈ ಕುರಿತ ಕೆಲವು ಪ್ರಶ್ನೆಗಳು ಹೀಗಿವೆ:

  • ನಮ್ಮ ಪತ್ರಿಕೆ-ಮಾಧ್ಯಮಗಳು ರಾಜಕೀಯ ಶಕ್ತಿಗಳ ಮುಂದೆ ಮಂಡಿಯೂರಿ ನಿಲ್ಲುವ ಸಂದರ್ಭ ಬಂದದ್ದಾದರೂ ಹೇಗೆ..?
  • ದೇಶದಲ್ಲಿ ಸ್ವತಂತ್ರ ನಿರ್ಭೀತ ಪತ್ರಿಕೋದ್ಯಮಕ್ಕೆ ಉಳಿಗಾಲವಿದೆಯೇ..? ಹೌದಾದಲ್ಲಿ ಹೇಗೆ..? ಇಲ್ಲವಾದಲ್ಲಿ ಯಾವ ಕಾರಣಗಳಿಗಾಗಿ..?
  • ಮಾಧ್ಯಮ-ಪತ್ರಿಕೆಗಳನ್ನು ಕಾಡಿಸಿ-ಪೀಡಿಸಿ ಬಾಲವಾಡಿಸುವ ನಾಯಿಗಳ ಹಾಗೆ ಮಾಡಿರುವ ರಾಜಕೀಯ ಶಕ್ತಿಗಳ ಉದ್ದೇಶವೇನು..?
  • ಸ್ವತಂತ್ರ-ನಿರ್ಭೀತ ಪತ್ರಿಕೋದ್ಯಮವಿಲ್ಲದೆ ದೇಶದಲ್ಲಿ ಪ್ರಜಾಪ್ರಭುತ್ವ ಉಳಿದೀತೆ..? ಇದು ನಮ್ಮ ದೇಶದ ಜನರಿಗೆ ಮನವರಿಕೆ ಆಗಿದೆಯೇ..?
  • ದೇಶದಲ್ಲಿ ಉಳಿದಿರುವ ಕೆಲವಾರು ಸ್ವತಂತ್ರ ನಿರ್ಭೀತ ಪತ್ರಿಕೆ-ಮಾಧ್ಯಮಗಳನ್ನು ಉಳಿಸುವುದು ಹೇಗೆ..?

ದೇಶದ ರಾಜಕೀಯ ಶಕ್ತಿಗಳ ಮುಂದೆ ಕಾರ್ಯಾಂಗ-ನ್ಯಾಯಾಂಗಗಳೂ ಮಂಡಿಯೂರಿರುವ ಈ ಸಮಯದಲ್ಲಿ ಪತ್ರಿಕಾರಂಗಕ್ಕೆ ಗುರುತರ ಜವಾಬ್ದಾರಿಯಿದೆ. ಈ ತನ್ನ ಹೊಣೆಗಾರಿಕೆಯನ್ನು ಮತ್ತೆಮತ್ತೆ ದೇಶದ ಜನರೊಡನೆ ಹೇಳಿಕೊಳ್ಳುತ್ತಾ ತನ್ನ ಸ್ವತಂತ್ರ ಮತ್ತು ನಿರ್ಭೀತ ಚರ್ಯೆಯನ್ನು ಉಳಿಸಿಕೊಳ್ಳುವ ಜರೂರತೆಯೂ ಇದೆ. ಸ್ವಾರ್ಥಸಾಧನೆಗಾಗಿ ಈ ಬದ್ಧತೆಯಿಂದ ಹಿಮ್ಮೆಟ್ಟಿದಲ್ಲಿ ದೇಶದ ಅಸ್ತಿತ್ವವೇ ಬುಡಮೇಲಾಗುವ ಸಾಧ್ಯತೆಯಲ್ಲಿ ಪತ್ರಿಕೆ-ಮಾಧ್ಯಮಗಳ ಜವಾಬ್ದಾರಿ ಹೆಚ್ಚಿದೆ. ದೇಶದ ಸಂವಿಧಾನ-ಪ್ರಜಾಪ್ರಭುತ್ವ ಉಳಿಸುವ ಮುಖ್ಯಚರ್ಚೆಯಿದು.

Leave a Reply

Your email address will not be published.