ಸ್ವತಂತ್ರ ಪತ್ರಿಕೋದ್ಯಮದ ಉಳಿವಿಗೆ ಸಂವಿಧಾನವೇ ಬುನಾದಿ

ಪತ್ರಿಕೋದ್ಯಮದಲ್ಲಿರುವ ಹಲವರು ಹಗಲಿನಲ್ಲಿ ಸಂಪಾದಕರಾಗಿ, ಪ್ರಸಿದ್ಧ ಪತ್ರಕರ್ತರಾಗಿ; ರಾತ್ರಿ ರಾಜಕಾರಣಿಗಳಾಗುವ; ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ಭಾಗವಹಿಸುವ; ಕಂಟ್ರಾಕ್ಟ್ ಕೊಡಿಸುವ ಅಷ್ಟೇ ಏಕೆ, ವಿಧಾನಪರಿಷತ್ತು, ರಾಜ್ಯಸಭೆಗೆ ಅಭ್ಯರ್ಥಿಗಳನ್ನು ಮಾಡಿಸುವ, ಮಂತ್ರಿಮಂಡಲ ರಚನೆಯಲ್ಲಿ ಪಾತ್ರವಹಿಸುವ ಹಲವರನ್ನು ನಾನೂ ವೈಯಕ್ತಿಕವಾಗಿ ಬಲ್ಲೆ.

-ಡಾ.ಬಿ.ಎಲ್.ಶಂಕರ್

ನಮ್ಮ ಪತ್ರಿಕೆ-ಮಾಧ್ಯಮಗಳು ರಾಜಕೀಯ ಶಕ್ತಿಗಳ ಮುಂದೆ ಮಂಡಿಯೂರಿ ನಿಲ್ಲುವ ಸಂದರ್ಭ ಬಂದದ್ದಾದರೂ ಹೇಗೆ?

ರಾಜಕಾರಣವೂ ಇಂದು ವ್ಯಾಪಾರವಾಗಿದ್ದು, ಬಂಡವಾಳ ಹೂಡಲು ಚುನಾವಣೆಗಳು ಅತ್ಯುತ್ತಮ ಸಂದರ್ಭಗಳು. ಎಲ್ಲಾ ರೀತಿಯ ಭ್ರಷ್ಟಾಚಾರ, ಅನಾಚಾರಗಳ ಬೇರುಗಳು ಟಿಸಿಲೊಡೆಯುವುದು ಚುನಾವಣೆಗಳಲ್ಲಿಯೇ. ಒಂದು ಬಾರಿ ಚುನಾವಣೆ ಗೆದ್ದರೆ ಮುಂದಿನ ಐದು ವರ್ಷ ನಿರಾಳವಾಗಿ ಅಧಿಕಾರದ ಜೊತೆಜೊತೆಗೆ ತಮ್ಮ ತಮ್ಮ ವೈಯಕ್ತಿಕ ವ್ಯವಹಾರಗಳ ಮುಂದುವರಿಕೆಗೆ ಇವರುಗಳಿಗೆ ಸುದ್ದಿಮಾಧ್ಯಮಗಳ ಅವಶ್ಯಕತೆಯೂ ಬಹಳವಿರುತ್ತದೆ. ರಾಜಕಾರಣಿಗಳು ಅಧಿಕಾರಿಗಳನ್ನು; ಅಧಿಕಾರಿಗಳು ಜನರನ್ನು; ಜನರು ಸರ್ಕಾರವನ್ನು; ಸರ್ಕಾರ ಸಾರ್ವಜನಿಕ ಸಂಸ್ಥೆಗಳನ್ನು; ಸಾರ್ವಜನಿಕ ಸಂಸ್ಥೆಗಳು ಪತ್ರಿಕೆ-ಮಾಧ್ಯಮಗಳನ್ನು ಹೀಗೆ ಒಂದು ಆವರ್ತನಕ್ರಮದಲ್ಲಿ ವ್ಯವಸ್ಥಿತವಾಗಿ ತಮ್ಮ ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವಲ್ಲಿ ನಿರತರಾಗುವುದು ರಹಸ್ಯವೇನಲ್ಲ.

ಪತ್ರಿಕೆ-ಮಾಧ್ಯಮಗಳ ಮಾಲೀಕತ್ವವೂ ಅಗಾಧವಾಗಿ ಬದಲಾಗುತ್ತಿದೆ. ವಿದೇಶೀ ಬಂಡವಾಳವೂ ಹರಿದುಬರುತ್ತಿದೆ. ಹೀಗಾಗಿ ಮಾಲೀಕರಿಗೆ ಇದೊಂದು ವ್ಯಾಪಾರ. ಶೇರುಮಾರುಕಟ್ಟೆಯಿಂದ ಹಣ ಸಂಗ್ರಹಿಸಿ ಪ್ರಕಾಶನ ಸಂಸ್ಥೆಗಳು ಕಂಪೆನಿಗಳಾಗಿ ಮಾರ್ಪಾಡಾಗುತ್ತಿರುವುದರಿಂದ ಶೇರುದಾರರಿಗೆ ಲಾಭನೀಡುವುದು ಅನಿವಾರ್ಯ. ಹೀಗಿರುವಾಗ ಲಾಭಗಳಿಕೆಯೇ ಪ್ರಧಾನವಾಗುವುದು ಸಹಜ. ಜೊತೆಗೆ ಉತ್ಪಾದನಾ ವೆಚ್ಚ, ಮಾರಾಟದ ಬೆಲೆಯಲ್ಲಿ ಭಾರೀ ಅಂತರದಿಂದಾಗಿ ಪತ್ರಿಕೆ-ಮಾಧ್ಯಮವನ್ನು ನಿರಂತರವಾಗಿ ನಡೆಸಿಕೊಂಡು ಬರುವಲ್ಲಿ ಸರ್ಕಾರದ, ದೊಡ್ಡ ಉದ್ಯಮಗಳ, ಗಣಿಮಾಲೀಕರ, ರಿಯಲ್ ಎಸ್ಟೇಟ್ ಮಾಫಿಯಾದ ಜಾಹೀರಾತಿನ ಬೆಂಬಲವೂ ಬೇಕಾಗುತ್ತದೆ.

ಒಂದು ಬಾರಿ ಈ ಬೆಂಬಲ ಗಳಿಸಿಕೊಂಡರೆ ಮುಂದೆ ಅದು ನಿರಂತರವಾಗಿ ಭ್ರಷ್ಟ ಅಧಿಕಾರಿಗಳ ಹಾಗೂ ರಾಜಕಾರಣಿಗಳ ಮುಲಾಜಿಗೆ ಒಳಪಡಿಸುವುದು ಸಹಜವಲ್ಲವೇ? ರಾಜಕಾರಣಿಗಳ ಭ್ರಷ್ಟಾಚಾರವನ್ನು ಬಯಲಿಗೆಳೆದು ಜನತೆಯ ಮುಂದೆ ಅವರನ್ನು ಬೆತ್ತಲುಮಾಡುವ, ಪ್ರಶ್ನೆಮಾಡುವ ಎದೆಗಾರಿಕೆ, ನೈತಿಕತೆ ಒಂದು ಕಾಲದಲ್ಲಿ ಪತ್ರಿಕೆಗಳಲ್ಲಿತ್ತು. ಪ್ರಸ್ತುತ ಕಾಲಮಾನದ ಒಟ್ಟಾರೆ ಪರಿಸ್ಥಿತಿಯನ್ನು ನೋಡಿದಾಗ ಈ ಧೈರ್ಯ ಉಡುಗಿರುವುದು ಅನುಭವಕ್ಕೆ ಬರುತ್ತಿದೆ. ಇದು ರಾಜಕಾರಣಿಗಳಿಗೆ ಒಂದು ರೀತಿಯ ವರದಾನವೇ ಆಗಿರುವುದು ಸುಳ್ಳಲ್ಲ.

ವಸ್ತುನಿಷ್ಠ ವರದಿಗಾರಿಕೆ ಇಂದು ಅಪರೂಪವೇ. ವ್ಯಕ್ತಿನಿಷ್ಠ ವರದಿಗಾರಿಕೆಯಾಗಿದೆ ಎಂದರೂ ತಪ್ಪಿಲ್ಲ. ವಿಶೇಷತಃ ಚುನಾವಣೆಗಳಂಥ ಅತ್ಯಂತ ಸೂಕ್ಷ್ಮ ಸಂದರ್ಭಗಳಲ್ಲಿ ಒಂದು ನಿರ್ದಿಷ್ಟ ವರ್ಗ, ಸಮುದಾಯ, ಪಕ್ಷ, ನಾಯಕನ ಹಿಂದೆ ಬೀಳುವ ಮನೋಭಾವ ಈ ‘ವಸ್ತುನಿಷ್ಠ ವರದಿಗಾರಿಕೆ’ ಪದೇ ಪದೇ ಸಂಶಯಕ್ಕೆ ಒಳಪಡಿಸುತ್ತಿದೆಯಲ್ಲದೆ, ಈಗಿನ ಎಲ್ಲಾ ಕಲಬೆರಕೆ ಸ್ಥಿತಿಗೂ ಕಾರಣವಾಗಿದೆ. ಇನ್ನು ಪತ್ರಿಕಾ ಮಾಲಿಕತ್ವದ ವಿಚಾರದಲ್ಲಿ ನೋಡುವುದಾದರೆ; ತನ್ನ ಪ್ರತಿಸ್ಪರ್ಧಿಯನ್ನು ಹಳಿಯುವ, ಸೋಲಿಸುವ, ಅಪಮಾನಿಸುವ ಯಾವೊಂದು ಸಂದರ್ಭವನ್ನೂ ಕೈಜಾರಲು ಬಿಡದೆ ಪಕ್ಕಾ ಕಾರ್ಪೋರೇಟ್ ಶೈಲಿಯನ್ನು ಯಥಾವತ್ತಾಗಿ ಕಾರ್ಯರೂಪಕ್ಕೆ ಬಳಸುತ್ತಾರೆ.

ಪತ್ರಿಕೋದ್ಯಮದಲ್ಲಿರುವ ಹಲವರು ಹಗಲಿನಲ್ಲಿ ಸಂಪಾದಕರಾಗಿ, ಪ್ರಸಿದ್ಧ ಪತ್ರಕರ್ತರಾಗಿ; ರಾತ್ರಿ ರಾಜಕಾರಣಿಗಳಾಗುವ; ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ಭಾಗವಹಿಸುವ; ಕಂಟ್ರಾಕ್ಟ್ ಕೊಡಿಸುವ ಅಷ್ಟೇ ಏಕೆ, ವಿಧಾನಪರಿಷತ್ತು, ರಾಜ್ಯಸಭೆಗೆ ಅಭ್ಯರ್ಥಿಗಳನ್ನು ಮಾಡಿಸುವ, ಮಂತ್ರಿಮಂಡಲ ರಚನೆಯಲ್ಲಿ ಪಾತ್ರವಹಿಸುವ ಹಲವರನ್ನು ನಾನೂ ವೈಯಕ್ತಿಕವಾಗಿ ಬಲ್ಲೆ. ಕಾರ್ಯಸೂಚಿಯೇ ಹೀಗಿರುವಾಗ ಮಾಲೀಕರ, ಸಂಪಾದಕರ ವಸ್ತುನಿಷ್ಠತೆ ಪ್ರಶ್ನಾರ್ಹವಾಗಬೇಕಲ್ಲವೇ? ಈ ರೀತಿಯ ಒಳಸುಳಿಗಳನ್ನು, ಪ್ರಮಾದಗಳನ್ನು ಸರಿಪಡಿಸುವ ತಾಕತ್ತು ಸಾಮಾನ್ಯ ಜನತೆಗಿದೆಯೇ?

ದೇಶದಲ್ಲಿ ನಿರ್ಭೀತ ಪತ್ರಿಕೋದ್ಯಮಕ್ಕೆ ಉಳಿಗಾಲವಿದೆಯೇ? ಹೌದಾದಲ್ಲಿ ಹೇಗೆ? ಇಲ್ಲವಾದಲ್ಲಿ ಯಾವ ಕಾರಣಗಳಿಗಾಗಿ?

ಖಂಡಿತಾ ಇದೆ. ತುರ್ತುಪರಿಸ್ಥಿತಿ, ಸೆನ್ಸಾರ್‍ಶಿಪ್ ಇದ್ದಾಗಲೇ ಅಳಿಯಲಿಲ್ಲವೆಂದರೆ ಪತ್ರಿಕೋದ್ಯಮದ ಗಟ್ಟಿತನ ಇರಲೇಬೇಕಲ್ಲವೇ? ಸಂವಿಧಾನಕ್ಕೆ ಸಂಬಂಧಿಸಿದ ಸಂವಾದಗಳಲ್ಲಿ ‘ವ್ಯಕ್ತಿಯನ್ನು’ ಕೇಂದ್ರವಾಗಿರಿಸಿ, ಸಾಂವಿಧಾನಿಕ ನಿಯಮಗಳ ಮೂಲಕ ಆ ಪುಟ್ಟ ಮಾನವನಿಗೆ ರಕ್ಷಣೆಯೊದಗಿಸುವ ಭಾರತದ ಸಂವಿಧಾನ ಆಧುನಿಕ ಪ್ರಜಾತಂತ್ರ ವ್ಯವಸ್ಥೆಯ ಹೆಗ್ಗುರುತು.

1949 ನವಂಬರ್ 26ರಂದು ಅಂಗೀಕೃತಕೊಂಡು, 1950 ಜನವರಿ 26ರಂದು ಜಾರಿಯಾದ ಭಾರತೀಯ ಸಂವಿಧಾನ; ಇದು ‘ನಮಗೆ ನಾವೇ ನೀಡಿಕೊಂಡ’ ಸಂವಿಧಾನ. ಸಂವಿಧಾನದ ಮೂಲ ಆಶಯಗಳು, ಬಹುತ್ವ, ಬಹುಸಂಸೃತಿ, ಒಕ್ಕೂಟ ವ್ಯವಸ್ಥೆಯ, ಪ್ರಜೆಗಳ ಹಿತರಕ್ಷಣೆಯ ಸಂವಿಧಾನದ ಹೊಣೆಗಾರಿಕೆಯನ್ನು ವಿಚಲಿತಗೊಳಿಸುವಂಥ (ಪ್ರಸ್ತುತ ದಿನಮಾನದ ಕಾಯ್ದೆಗಳೂ ಸೇರಿದಂತೆ) ಹಲವಾರು ವಿದ್ಯಮಾನಗಳು ಘಟಿಸುತ್ತಿದ್ದು, ಸಂವಿಧಾನ ರಕ್ಷಣೆಯ ಅಂತಿಮ ಹಕ್ಕು ಪ್ರಜೆಗಳ ಕೈಯಲ್ಲೇ ಇದೆ ಎಂಬುದನ್ನು ಮರೆಯಬಾರದು. ಸಂವಿಧಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಇರುವುದರಿಂದ ಜೊತೆಗೆ ನ್ಯಾಯಾಂಗ ಪ್ರಜಾಪ್ರಭುತ್ವದ ಇನ್ನಿತರ ಅಂಗಗಳಷ್ಟು ಕೆಡದೆ ಇರುವುದರಿಂದ ಹಾಗೂ ಪ್ರಾಮಾಣಿಕತೆ, ಬದ್ಧತೆಯಿರುವ, ನಿಷ್ಠುರ ನಿಲುವು ತಳೆಯುವ ಪತ್ರಕರ್ತರು ಮತ್ತು ನಿರ್ಭೀತ ವಿಚಾರಮಂಡನೆಯನ್ನು ಸ್ವೀಕರಿಸುವ ಓದುಗರು ಇನ್ನೂ ಸಾಕಷ್ಟು ಇರುವುದರಿಂದ ಖಂಡಿತಾ ಉಳಿಯುತ್ತವೆ.

ಮಾಧ್ಯಮ-ಪತ್ರಿಕೆಗಳನ್ನು ಕಾಡಿಸಿ, ಪೀಡಿಸಿ ಬಾಲವಾಡಿಸುವ ನಾಯಿಗಳ ಹಾಗೆ ಮಾಡಿರುವ ರಾಜಕೀಯ ಶಕ್ತಿಗಳ ಉದ್ದೇಶವೇನು?

ಉತ್ತರದಾಯಿತ್ವದಿಂದ ತಪ್ಪಿಸಿಕೊಳ್ಳಲು; ಚುನಾವಣೆಗಳಲ್ಲಿ ಭಾವನಾತ್ಮಕ ವಿಷಯಗಳಿಂದ ಗೆಲುವು ಸಾಧಿಸಲು; ತನ್ನ ಜಾತಿ, ಕುಟುಂಬ ಪೋಷಿಸಲು; ಅಕ್ರಮವಾಗಿ ಗಳಿಸಿದ ಹಣ, ಆಸ್ತಿ ಉಳಿಸಿಕೊಳ್ಳಲು ಹೀಗೆ ಈ ಎಲ್ಲಾ ಕಾರಣಗಳಿಗೆ ಪತ್ರಿಕಾ ಮಾಧ್ಯಮವನ್ನು ಬಳಸಿಕೊಳ್ಳುವ ಕಲೆ ರಾಜಕಾರಣಿಗಳಿಗೆ ಸಿದ್ಧಿಸಿದೆ! ಈ ಕಲೆಯನ್ನು ಪರಿಣಾಮಕಾರಿಯಾಗಿ ಕಾಲಕಾಲಕ್ಕೆ ಸರಿಯಾಗಿ ಬಳಸಿಕೊಳ್ಳಲು ಮಾಧ್ಯಮ-ಪತ್ರಿಕೆಗಳು ಇವರಿಗೆ ಬೇಕೇ ಬೇಕು. ಹೇಗಾದರೂ ಸರಿ, ತಮ್ಮ ಸ್ವಂತ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲೋಸುಗ ಪತ್ರಿಕೆಗಳನ್ನು ಗುಡ್‍ಬುಕ್ಸ್‍ನಲ್ಲಿ ಇಟ್ಟುಕೊಳ್ಳಲು ಬಯಸುತ್ತಾರೆ. ‘ಒಂದನ್ನು ಬಿಟ್ಟು ಇನ್ನೊಂದಿಲ್ಲ’ ಎಂಬಂಥ ಸೂಕ್ಷ್ಮ ಸಂಕೀರ್ಣ ಪರಿಸ್ಥಿತಿಯಿದ್ದು, ಪ್ರತಿಯೊಬ್ಬರೂ ತಮ್ಮ ತಮ್ಮ ಸಮರ್ಥನೆಗೆ ಅವಶ್ಯವಿರುವ ಅಸ್ತ್ರಗಳನ್ನು ತಮ್ಮ ತಮ್ಮ ಬತ್ತಳಿಕೆಯಲ್ಲಿ ಇರಿಸಿಕೊಂಡಿರುತ್ತಾರೆ.

ಸ್ವತಂತ್ರ ನಿರ್ಭೀತ ಪತ್ರಿಕೋದ್ಯಮವಿಲ್ಲದೆ ದೇಶದಲ್ಲಿ ಪ್ರಜಾಪ್ರಭುತ್ವ ಉಳಿದೀತೆ? ಇದು ನಮ್ಮ ದೇಶದ ಜನರಿಗೆ ಮನವರಿಕೆ ಆಗಿದೆಯೇ?

ಪ್ರಜಾಪ್ರಭುತ್ವದ ಬುನಾದಿಯೇ ನಿಷ್ಪಕ್ಷಪಾತವಾದ ನ್ಯಾಯಾಂಗವೆಂಬುದು; ರಾಷ್ಟ್ರದ ಒಟ್ಟು ಹಿತದೃಷ್ಟಿಯಿಂದ ಸ್ವತಂತ್ರ ನಿರ್ಭೀತ ಪತ್ರಿಕೋದ್ಯಮದ ಅವಶ್ಯಕತೆ ಇದೆಯೆನ್ನುವುದು; ಆಂತರಿಕ ಪ್ರಜಾಪ್ರಭುತ್ವ, ಬದ್ಧತೆ, ಉತ್ತರದಾಯಿತ್ವವಿರುವ ರಾಜಕೀಯ ಪಕ್ಷಗಳು ಮತ್ತು ನಾಯಕರು ಇನ್ನೂ ಕೆಲವರಾದರೂ ಇದ್ದಾರೆಂಬ ಆಶಾಭಾವನೆ; ಸಂವಿಧಾನ, ಕಾನೂನಿಗೆ ನಿಷ್ಠವಾದ ಕಾರ್ಯಾಂಗ ಇನ್ನೂ ಅಸ್ತಿತ್ವದಲ್ಲಿದೆ ಎಂಬುದು ಜನರಿಗೆ ಅರ್ಥವಾಗಿದೆ. ಆದರೆ ಚುನಾವಣಾ ಸಂದರ್ಭದಲ್ಲಿನ ಕೊಡುಕೊಳ್ಳುವಿಕೆಯಿಂದಾಗಿ ಮತದಾರರೂ ಭ್ರಷ್ಟಹಾದಿಯಲ್ಲಿ ಸಾಗುತ್ತಿರುವುದರಿಂದ ಈ ಮೇಲಿನ ಅಂಶಗಳನ್ನು ಅರ್ಥಮಾಡಿಕೊಂಡವರ ಸಂಖ್ಯೆ ಸದ್ಯಕ್ಕೆ ಕಡಿಮೆಯಿದೆ. ಕಾಲಚಕ್ರ ನಿಲ್ಲುವುದಿಲ್ಲ; ಉರುಳುತ್ತಿರುತ್ತದೆ.

ವಾಸ್ತವದಲ್ಲಿ ಪತ್ರಿಕಾ ವ್ಯವಸಾಯ ಒಂದು ಖಾಸಗಿ ಉದ್ಯಮ ಮತ್ತು ಸಾರ್ವಜನಿಕ ಸೇವೆಯ ಪ್ರತೀಕ. ವರದಿಗಾರರು, ವಿಶ್ಲೇಷಕರು, ಸಂಪಾದಕರಿಗೆ ಮುಕ್ತ ಸ್ವಾತಂತ್ರ್ಯ, ನಿಷ್ಠುರ ನಿಲುವು-ವಿಶ್ಲೇಷಣೆಗಳಿಗೆ ಅವಕಾಶ; ಸ್ವತಂತ್ರ, ನಿರ್ಭೀತ ವರದಿಗಾರರು, ಸಂಪಾದಕರಿಗೆ ನಿರಾಳತೆಯ ಉಸಿರಾಟ ಸ್ಥಿತಿ ಸಾಧ್ಯವಾಗಬೇಕು.

ದೇಶದಲ್ಲಿ ಉಳಿದಿರುವ ಕೆಲವಾರು ಸ್ವತಂತ್ರ ನಿರ್ಭೀತ ಮಾಧ್ಯಮಗಳನ್ನು ಉಳಿಸುವುದು ಹೇಗೆ?

ಹಣ ಕೊಟ್ಟು ಕೊಳ್ಳುವುದರಿಂದ; ಸರ್ಕಾರದ ಜಾಹೀರಾತು ನೀತಿಯಲ್ಲಿ ಆಮೂಲಾಗ್ರ ಬದಲಾವಣೆ ತಂದು ಆಡಳಿತ ಪಕ್ಷದ ಮರ್ಜಿಯಿಂದ ಹೊರಬರುವುದರಿಂದ ಉಳಿಯುವಿಕೆ ಸಾಧ್ಯ. ಜನಸಾಮಾನ್ಯರು, ಸಾರ್ವಜನಿಕರು, ಪತ್ರಿಕೆಗಳಿಗೆ ಬಂಡವಾಳ ಹೂಡುವ ಮೂಲಕ ಮಾಧ್ಯಮ ಸಾರ್ವಜನಿಕ ಆಸ್ತಿಯಾಗಬಲ್ಲದೇ ಎಂಬುದರತ್ತವೂ ಗಮನಹರಿಸಲು ಇದು ಸಕಾಲ. ಆದರೆ ಅದಕ್ಕೂ ಮೊದಲು ತಿಳಿಗೊಳಿಸಬೇಕಾದ ಕೆಲವಾರು ವಿಚಾರಗಳಿವೆ.

ಮೊದಲನೆಯದಾಗಿ; ಓದುಗರಿಗೆ, ವೀಕ್ಷಕರಿಗೆ, ಜನಸಾಮಾನ್ಯರಿಗೆ ಇಂದಿನ ದಿನಗಳ ವರದಿಗಾರಿಕೆಯಲ್ಲಿ ಪಾವತಿ ಸುದ್ದಿ (paid news) ಯಾವುದು? ನೈಜ ಸುದ್ದಿ (Real news) ಯಾವುದೆಂಬ ವ್ಯತ್ಯಾಸ ತಿಳಿಯದಷ್ಟು ಪರಿಸ್ಥಿತಿ ಗೋಜಲಾಗಿದೆ. ಈ ಗೋಜಲನ್ನು ಸರಿಪಡಿಸಬೇಕು. ಇನ್ನು ವರದಿಗಳಲ್ಲಿ ಹಿಂಸೆಯ ವೈಭವೀಕರಣವಂತೂ ಮಿತಿಮೀರುತ್ತಿದ್ದು, ಒಂದು ಲಕ್ಷ್ಮಣರೇಖೆಯನ್ನು ಎಳೆಯಲೇಬೇಕಿದೆ. ಮಾಧ್ಯಮಗಳಲ್ಲಿ ಬಿತ್ತರವಾಗುವ ಸುದ್ದಿ (news) ಯಾವುದು? ದೃಷ್ಟಿಕೋನ (views) ಯಾವುದು? ಎಂಬುದನ್ನು ವರ್ಗೀಕರಿಸಲು ಸಾಧ್ಯವಾಗುತ್ತಿಲ್ಲ. ವೈಯಕ್ತಿಕ ತೇಜೋವಧೆ, ಬ್ಲಾಕ್‍ಮೈಲಿಂಗ್, ಸೌಜನ್ಯತೆಯ ಮಿತಿಮೀರಿದ ಟೀಕೆ ಇವೆಲ್ಲವೂ ಸುಲಭವಾಗಿ ವಿಕೃತಗೊಂಡು ದ್ವೇಷವನ್ನೂ ಅನಂತರ ಹಿಂಸೆಯನ್ನೂ ಪ್ರಚೋದಿಸುತ್ತದೆಂಬ ಪ್ರಜ್ಞೆಯಿರಬೇಕು. ಯಾರದೋ ಕುಮ್ಮಕ್ಕಿಗೆ ಒಳಗಾಗಿ ಇನ್ನಾವುದೋ ವರ್ಗ, ಜಾತಿ, ಸಮುದಾಯದ ವಿರುದ್ಧ ವಿಷಬೀಜ ಬಿತ್ತುವ ಕೈಂಕರ್ಯ ಮಾಧ್ಯಮಗಳ ಮೇಲಿನ ಗೌರವ, ಅಭಿಮಾನವನ್ನು ಖಂಡಿತವಾಗಿಯೂ ಇಲ್ಲವಾಗಿಸುತ್ತದೆ. ಯಾವುದೋ ಒಂದು ಗುರಿಸಾಧನೆ ಟೀಕೆಯ ಹಿಂದಿರುತ್ತದೆಂಬ ಸಂಶಯ ಬಲವಾಗುತ್ತಿದ್ದು, ಈ ಸಂಶಯವನ್ನು ಪರಿಹರಿಸಬೇಕಿದೆ.

“ನಂಬಿಕೆಗೆ ಅರ್ಹವಾದ ಸುದ್ದಿಯನ್ನು ಪಡೆಯದ ಜನರು ಇಂದೋ, ನಾಳೆಯೋ ಸ್ವಾತಂತ್ರ್ಯದ ತಳಪಾಯವನ್ನೇ ಹೊಂದದ ಜನರಾಗುತ್ತಾರೆ” ಎಂದ ಬ್ರಿಟನ್ನಿನ ಸುಪ್ರಸಿದ್ಧ ರಾಜ್ಯಶಾಸ್ತ್ರಜ್ಞ; ಹೆರಾಲ್ಡ್ ಜೆ.ಲಾಸ್ಕಿಯವರ ಮಾತು ಇಂದು ಎಷ್ಟೊಂದು ಪ್ರಸ್ತುತವೆನ್ನಿಸುತ್ತಿದೆ! ಅಭಿವ್ಯಕ್ತಿಯ ಅವಕಾಶಗಳ ಕೊರತೆ ಅನುಭವಿಸುತ್ತಿದ್ದ ಜನಸಾಮಾನ್ಯರಿಗೆ ಫೇಸ್‍ಬುಕ್, ಟ್ವಿಟ್ಟರ್, ವ್ಯಾಟ್ಸಪ್‍ನಂತಹ ಸಾಮಾಜಿಕ ಜಾಲತಾಣಗಳು ಪರ್ಯಾಯ ಮಾಧ್ಯಮಗಳಾಗಿ ಪ್ರತಿಯೊಬ್ಬರನ್ನೂ ಸ್ವಯಂ ‘ವರದಿಗಾರ’ರನ್ನಾಗಿಸಿದೆ ಎಂಬುದನ್ನು ಮರೆಯಬಾರದು. ಸಾಮಾಜಿಕ ಜಾಲತಾಣಗಳು ಜನರನ್ನು ಯಾವ್ಯಾವುದೋ ನೆಲೆಯಲ್ಲಿ ಒಂದುಗೂಡಿಸಿ ಅಭಿಪ್ರಾಯಗಳ ಹಂಚಿಕೊಳ್ಳುವಿಕೆ ಸಾಧ್ಯವಾಗಿಸುತ್ತಿದ್ದು, ಕ್ಷಿಪ್ರಸಮಯದಲ್ಲಿ ಪ್ರಜಾಭಿಪ್ರಾಯ ರೂಪುಗೊಳ್ಳುತ್ತಿರುವುದನ್ನು ಮರೆಯುವಂತಿಲ್ಲ.

ಪತ್ರಿಕೆಗಳು ಪ್ರಪಂಚದ ಕೈಗನ್ನಡಿ. ವಾಸ್ತವಾಂಶಗಳನ್ನು ಅವು ಇದ್ದ ಹಾಗೆಯೇ ಚಿತ್ರಿಸಲು ಮೂಲತಃ ಪತ್ರಿಕೆಗಳು ಸ್ವತಂತ್ರವಾಗಿರಬೇಕು. ಪತ್ರಿಕಾ ಸ್ವಾತಂತ್ರ್ಯಕ್ಕೇನಾದರೂ ಧಕ್ಕೆ ಬಂದರೆ ಉಳಿದೆಲ್ಲಾ ಸ್ವಾತಂತ್ರ್ಯಗಳ ಪರಿಣಾಮ ಶೂನ್ಯ. ನಮ್ಮ ದೇಶದಲ್ಲಂತೂ ಹಿಂದೊಮ್ಮೆ ಇದರ ಅನುಭವವಾಗಿದೆ. ಇಂಥ ಒಂದು ಅಗಾಧಶಕ್ತಿ ದುರುಪಯೋಗವಾಗುತ್ತಿರುವ ಪ್ರಕರಣಗಳೇ ಹೆಚ್ಚುತ್ತಿರುವುದು ಸಾಮಾನ್ಯ ಜನತೆಯೂ ಸಂಶಯದ ದೃಷ್ಟಿಯಿಂದ ನೋಡುವಂತೆ ಮಾಡಿರುವುದು ಸುಳ್ಳಲ್ಲ. ತಳಮಟ್ಟದಲ್ಲಿ ಜನತೆಯೊಂದಿಗೆ ಸದಾ ಸಂಪರ್ಕದಲ್ಲಿರುವ ಪತ್ರಕರ್ತರು, ವರದಿಗಾರರ ನಡೆವಳಿಕೆಯ ಮೇಲೆಯೇ ಪತ್ರಿಕೆಯ ಗುಣಮಟ್ಟ, ಪ್ರಾಮಾಣಿಕತೆ, ಬದ್ಧತೆ ನಿರ್ಧರಿಸಲ್ಪಡುವುದು. ಅವರ ಬರವಣಿಗೆಯಲ್ಲಿ, ವರದಿಗಾರಿಕೆಯಲ್ಲಿ ತಾತ್ವಿಕ ತಳಹದಿಗಳು ಬಹಳ ಗಟ್ಟಿಯಾಗಿ ಕಾಣಿಸಬೇಕು. ವಿಚಾರ ಮುಖ್ಯವಾಗಬೇಕೇ ವಿನಾ ವ್ಯಕ್ತಿಯಲ್ಲ ಎಂಬ ಅರಿವು ಅವರಿಗಿರಬೇಕು.

ನಿಜಾರ್ಥದಲ್ಲಿ ಪತ್ರಿಕೆ-ಮಾಧ್ಯಮಗಳು ಪ್ರಜಾಪ್ರಭುತ್ವದ ರಕ್ಷಾಕವಚ. ಜನತೆಯ ಹಕ್ಕುಬಾಧ್ಯತೆಗಳನ್ನು ಕಾಪಾಡುವ ಮುಖ್ಯ ಸಾಧನ. ತನ್ನ ಅಭ್ಯುದಯ ಮಾತ್ರವಲ್ಲ; ಇತರರ ಅಭ್ಯುದಯಕ್ಕೂ ಹೋರಾಡುವ ಸೈನಿಕ. ರಾಜ್ಯಾಡಳಿತ ಪದ್ಧತಿಯ ಯಶಸ್ಸು ಅಥವಾ ಅವನತಿಯಲ್ಲಿ ನಿರ್ಣಾಯಕ ಪಾತ್ರ ಪತ್ರಿಕೆಗಳದ್ದು. ಅಮೆರಿಕಾದ ಸುಪ್ರಸಿದ್ಧ ಪತ್ರಿಕೋದ್ಯಮ ಪ್ರಾಧ್ಯಾಪಕರಾದ ರೋಲೆಂಡ್ ಇ. ವುಲ್‍ಸೆಲೆಯವರು ಹೇಳಿರುವಂತೆ; “ಸಾರ್ವಜನಿಕ ಸುದ್ದಿಗಳನ್ನು, ಸಾರ್ವಜನಿಕ ಅಭಿಪ್ರಾಯಗಳನ್ನು, ಸಾರ್ವಜನಿಕ ಸತ್ಕಾರ-ವಿನೋದಗಳನ್ನು ಆಧುನಿಕ ಪ್ರಚಾರ ಮಾಧ್ಯಮಗಳ ಮೂಲಕ ಕ್ರಮಬದ್ಧವಾಗಿ ನಂಬಿಕೆಗರ್ಹವಾಗುವಂತೆ ಪ್ರಸಾರಮಾಡುವ ಸಾಧನವೇ ಪತ್ರಿಕೋದ್ಯಮ”.

*ಲೇಖಕರು ಕಾಂಗ್ರೆಸ್ ಪಕ್ಷದ ನಾಯಕರು, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರು, ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸಭಾಪತಿಗಳು.

Leave a Reply

Your email address will not be published.