ಸ್ವತಂತ್ರ ಪತ್ರಿಕೋದ್ಯಮ ಸಮಾಜದ ಹೊಣೆ

`ಸಮಾಜಮುಖಿಎತ್ತಿರುವ ಪ್ರಶ್ನೆಗಳಿಗೆ ಉತ್ತರ ಹುಡುಕುವಾಗ ಭಾರತದಲ್ಲಿ ಮಾಧ್ಯಮದ ಹುಟ್ಟು, ಸ್ವಾತಂತ್ರ್ಯಪೂರ್ವದ ಮಾಧ್ಯಮಗಳು, ಸ್ವಾತಂತ್ರ್ಯಾನಂತರ ಇಲ್ಲಿ ಮಾಧ್ಯಮಗಳು ಬೆಳೆದ ಪರಿ, ನಮ್ಮ ಸಮಾಜ ಅದಕ್ಕೆ ಸ್ಪಂದಿಸಿದ ಬಗೆ ಎಲ್ಲವನ್ನೂ ಭೂತಗನ್ನಡಿ ಹಿಡಿದು ನೋಡಬೇಕಾಗುತ್ತದೆ.

-ಮಾಲತಿ ಭಟ್

ಯಾವುದೇ ದೇಶ ತಾನು ಪ್ರಜಾಪ್ರಭುತ್ವವಾದಿ ಎಂದು ಹೇಳಿಕೊಳ್ಳಬೇಕಾದರೆ ಆ ದೇಶದ ರಾಜಕೀಯ ನಾಯಕರು ಪಾರದರ್ಶಕವಾಗಿ ಆಡಳಿತ ನಡೆಸಬೇಕು. ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲದಂತೆ ಕಟ್ಟಕಡೆಯ ಮನುಷ್ಯನಿಗೂ ಸರ್ಕಾರದ ಸೌಲಭ್ಯಗಳು ಸಿಗಲು ಕೆಲಸಮಾಡಬೇಕು. ಅಂತಹ ಆರ್ಥಿಕ ವ್ಯವಸ್ಥೆ ರೂಪಿಸಬೇಕು. ಅದಕ್ಕಿಂತ ಮುಖ್ಯವಾಗಿ ಅಲ್ಲಿ ಸರ್ಕಾರದ ನೀತಿಗಳನ್ನು ಟೀಕಿಸಲು, ಆಡಳಿತ ಪಕ್ಷದ ನಾಯಕರನ್ನು ಚರ್ಚೆಗೆ ಒಳಪಡಿಸಲು ಮುಕ್ತ ಅಭಿವ್ಯಕ್ತಿಗೆ ಅವಕಾಶವಿರಬೇಕು. ಸ್ವತಂತ್ರ ಮತ್ತು ನಿರ್ಭೀತ ಮಾಧ್ಯಮ ಪ್ರಜಾಪ್ರಭುತ್ವದ ಮೂಲ ಲಕ್ಷಣ. ಅದನ್ನು ಕಳೆದುಕೊಂಡಲ್ಲಿ ಪ್ರಜಾಪ್ರಭುತ್ವ ಅರ್ಥಹೀನವಾಗುತ್ತದೆ.

ಭಾರತೀಯ ಮಾಧ್ಯಮ ಇತ್ತೀಚಿನ ವರ್ಷಗಳಲ್ಲಿ ಆಡಳಿತ ಪಕ್ಷ ಮತ್ತು ಸರ್ಕಾರದ ನಡೆಯನ್ನು ವಿಶ್ಲೇಷಣೆಗೆ ಒಳಪಡಿಸುವ ಕಾವಲುನಾಯಿಯಂತೆ ವರ್ತಿಸುವ ಬದಲು ಸಾಕುನಾಯಿಯಂತೆ ಬಾಲ ಅಲ್ಲಾಡಿಸುವ ಪ್ರವೃತ್ತಿಯನ್ನು ಅಪ್ಪಿಕೊಳ್ಳುತ್ತಿದೆ ಎಂಬ ಟೀಕೆ ವ್ಯಾಪಕವಾಗಿ ಕೇಳಿಬರುತ್ತಿದೆ. `ಸಮಾಜಮುಖಿ’ ಎತ್ತಿರುವ ಪ್ರಶ್ನೆಗಳಿಗೆ ಉತ್ತರ ಹುಡುಕುವಾಗ ಭಾರತದಲ್ಲಿ ಮಾಧ್ಯಮದ ಹುಟ್ಟು, ಸ್ವಾತಂತ್ರ್ಯಪೂರ್ವದ ಮಾಧ್ಯಮಗಳು, ಸ್ವಾತಂತ್ರ್ಯಾನಂತರ ಇಲ್ಲಿ ಮಾಧ್ಯಮಗಳು ಬೆಳೆದ ಪರಿ, ನಮ್ಮ ಸಮಾಜ ಅದಕ್ಕೆ ಸ್ಪಂದಿಸಿದ ಬಗೆ ಎಲ್ಲವನ್ನೂ ಭೂತಗನ್ನಡಿ ಹಿಡಿದು ನೋಡಬೇಕಾಗುತ್ತದೆ.

1610-1640ರ ಅವಧಿಯಲ್ಲಿ ಯುರೋಪಿನ ಹಲವು ದೇಶಗಳಲ್ಲಿ ವೃತ್ತಪತ್ರಿಕೆಗಳು ಆರಂಭವಾದರೂ ಭಾರತದಲ್ಲಿ ಮೊದಲ ವೃತ್ತಪತ್ರಿಕೆ ಪ್ರಕಟಗೊಂಡಿದ್ದು 1780ರಲ್ಲಿ. ಭಾರತದಲ್ಲಿ ಬ್ರಿಟಿಷ್ ಆಡಳಿತದ ಕೇಂದ್ರವಾಗಿದ್ದ ಕೋಲ್ಕತ್ತಾದಲ್ಲಿ ಐರಿಷ್ ಮೂಲದ ಜೇಮ್ಸ್ ಆಗಸ್ಟಸ್ ಹಿಕ್ಕಿ ಎಂಬಾತ 1780ರಲ್ಲಿ ಇಂಗ್ಲಿಷ್ ಭಾಷೆಯಲ್ಲಿ `ಹಿಕ್ಕಿಸ್ ಬೆಂಗಾಲ್ ಗೆಜೆಟ್’ ಅನ್ನು ಪ್ರಕಟಿಸಿದ. ಈಸ್ಟ್ ಇಂಡಿಯಾ ಕಂಪನಿ ಹಾಗೂ ಆಗಿನ ಗವರ್ನರ್ ಜನರಲ್ ಆಗಿದ್ದ ವಾರೆನ್ ಹೆಸ್ಟಿಂಗ್ಸ್‍ನ ಕಟು ಟೀಕಾಕಾರನಾಗಿದ್ದ ಹಿಕ್ಕಿ, ಬಂಗಾಳದ ಬಡಜನರ ಬಗ್ಗೆ, ಆಡಳಿತ ವ್ಯವಸ್ಥೆ, ತೆರಿಗೆ ವ್ಯವಸ್ಥೆಯಲ್ಲಿನ ಲೋಪದೋಷಗಳ ಬಗ್ಗೆ ಕಟುವಾಗಿ ಬರೆಯುತ್ತಿದ್ದ. ಆ ಕಾರಣಕ್ಕಾಗಿ 1782ರಲ್ಲಿ ಕಂಪನಿ ಆಡಳಿತ ಆತನ ಮುದ್ರಣ ಯಂತ್ರವನ್ನು ಮುಟ್ಟುಗೋಲು ಹಾಕಿಕೊಂಡು ಪತ್ರಿಕೆಯನ್ನು ಮುಚ್ಚಿಸಿತು. ಸ್ವತಂತ್ರ ಹಾಗೂ ನಿಷ್ಪಕ್ಷಪಾತ ಮಾಧ್ಯಮದ ಎಲ್ಲ ಲಕ್ಷಣಗಳನ್ನು ಹೊಂದಿದ್ದ ಹಿಕ್ಕಿಸ್ ಬೆಂಗಾಲ್ ಗೆಜೆಟ್, `ಸರ್ವರಿಗೂ ಇಲ್ಲಿ ಅಭಿವ್ಯಕ್ತಿಸಲು ಅವಕಾಶವಿದೆ. ಆದರೆ, ಯಾರ ಪ್ರಭಾವಕ್ಕೂ ಒಳಗಾಗುವುದಿಲ್ಲ’ ಎಂಬ ಅಡಿಟಿಪ್ಪಣಿಯನ್ನೂ ಪ್ರಕಟಿಸುತ್ತಿತ್ತು. ತನ್ನ ಮುದ್ರಣಾಲಯವನ್ನು ಮುಟ್ಟುಗೋಲು ಹಾಕಿಕೊಂಡಾಗಲೂ ಹಿಕ್ಕಿ ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆದ ಹಲ್ಲೆ ಎಂದೇ ಪ್ರತಿಭಟಿಸಿದ.

ಆರಂಭಗೊಂಡ ಎರಡು ವರ್ಷಗಳಲ್ಲೇ ಮುಚ್ಚಿಹೋದರೂ `ಹಿಕ್ಕಿಸ್ ಬೆಂಗಾಲ್ ಗೆಜೆಟ್’ ಭಾರತದಲ್ಲಿ ಪತ್ರಿಕೋದ್ಯಮಕ್ಕೆ ಹೆಬ್ಬಾಗಿಲು ತೆರೆಯಿತು. 1784ರಿಂದ 1800ರ ಅವಧಿಯಲ್ಲಿ ಕೋಲ್ಕತ್ತ, ಮುಂಬೈ, ಚೆನ್ನೈಗಳಿಂದ ಕೆಲ ಬ್ರಿಟಿಷರು ಪತ್ರಿಕೆ ಆರಂಭಿಸಿದರು. ಆದರೆ, ಆ ಪತ್ರಿಕೆಗಳಲ್ಲಿ ಕಟ್ಟುನಿಟ್ಟಾಗಿ ಬ್ರಿಟಿಷ್ ಸರ್ಕಾರದ ವಿರುದ್ಧ ಏನೂ ಬರೆಯುವಂತಿರಲಿಲ್ಲ. 1811ರಲ್ಲಿ ಕೆಲ ಬ್ರಿಟಿಷ್ ವರ್ತಕರು `ಕಲ್ಕತ್ತಾ ಕ್ರಾನಿಕಲ್’ ಎಂಬ ಪತ್ರಿಕೆ ಆರಂಭಿಸಿದರು. ಅದರ, ಸಂಪಾದಕ ಸಿಲ್ಕ್ ಬಕಿಂಗ್‍ಹ್ಯಾಮ್ ಪತ್ರಿಕೋದ್ಯಮದ ಕೆಲ ನಿಯಮಗಳನ್ನು ರೂಪಿಸಿದ. ಸ್ಥಳೀಯ ಜನರ ಸಮಸ್ಯೆಗಳ ಬಗ್ಗೆ ಬರೆಯಲಾರಂಭಿಸಿದ. `ಸತಿ’ ಪದ್ಧತಿಯಂತಹ ಅನಿಷ್ಟದ ಬಗ್ಗೆ ಈ ಪತ್ರಿಕೆ ಧ್ವನಿ ಎತ್ತಿತು. ಪತ್ರಿಕೆಗಳು ಸರ್ಕಾರದ ಮೇಲೆ, ಸಾಮಾನ್ಯರ ಮೇಲೆ ಬೀರುತ್ತಿರುವ ಪರಿಣಾಮ ಕೆಲ ವಿದ್ಯಾವಂತ ಭಾರತೀಯರ ಗಮನ ಸೆಳೆಯಿತು. ಸತಿ ಪದ್ಧತಿ ಮತ್ತು ಆಗಿನ ಸಮಾಜದ ಹಲವು ಅನಿಷ್ಟಗಳ ಬಗ್ಗೆ ರಾಜಾರಾಮ್ ಮೋಹನ್‍ರಾಯ್ 1822ರಲ್ಲಿ ಬಂಗಾಳಿಯಲ್ಲಿ `ಸಂವಾದ ಕೌಮುದಿ’ ಮತ್ತು ಪರ್ಷಿಯನ್ ಭಾಷೆಯಲ್ಲಿ `ಮಿರತ್-ಉಲ್-ಅಕ್ಬರ್’ ಪತ್ರಿಕೆಗಳನ್ನು ಆರಂಭಿಸಿದರು. ಅದೇ ವರ್ಷ ಮುಂಬೈಯಲ್ಲಿ ಫರ್ದೊಂಜಿ ಮರ್ಜಬಾನ್ ಎಂಬ ಪಾರ್ಸಿ ವ್ಯಕ್ತಿ ಗುಜರಾತಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ `ಬಾಂಬೆ ಸಮಾಚಾರ್’ ಪತ್ರಿಕೆ ಆರಂಭಿಸಿದ. ಈಗ ಅದು `ಮುಂಬೈ ಸಮಾಚಾರ’ವಾಗಿ 199 ವರ್ಷಗಳೂ ನಂತರವೂ ಜೀವಂತವಾಗಿದೆ.

ಇದರ ನಡುವೆ ಮತ್ತೊಂದು ಭಿನ್ನವಾದ ಧಾರೆ ಭಾರತೀಯ ಪತ್ರಿಕಾ ರಂಗದಲ್ಲಿ ಕಾಣಿಸಿಕೊಂಡಿತು. ಇಂಗ್ಲಿಷ್ ಕಲಿತ ಮಧ್ಯಮವರ್ಗದ ಭಾರತೀಯರಿಗೆ ಪ್ರಪಂಚದ ಅರಿವು ಮೂಡತೊಡಗಿತು. ಸ್ವಾತಂತ್ರ್ಯದ ಕನಸು ಅಲ್ಲಲ್ಲಿ ಅರಳತೊಡಗಿತು. ತಾವು ಕಲಿತ ವಿದ್ಯೆ ಬಳಸಿಕೊಂಡು ಕೈಬರಹದಲ್ಲಿ ಸರ್ಕಾರದ ವಿರುದ್ಧ ಲೇಖನ ಬರೆಯಲಾರಂಭಿಸಿದರು. 1857ರ `ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ ಇಂತಹ ಬಿಡಿ ಬಂಡಾಯಗಾರರ ಸ್ಥೈರ್ಯ ಮತ್ತಷ್ಟು ಹೆಚ್ಚಿಸಿತು. ಸಣ್ಣ, ಪುಟ್ಟ ಮುದ್ರಣಾಲಯುಗಳಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಬ್ರಿಟಿಷರನ್ನು ವಿರೋಧಿಸುತ್ತಿದ್ದ ಸರ್ಕಾರಿ ನೌಕರರು, ರಾಷ್ಟ್ರೀಯ ಕಾಂಗ್ರೆಸ್ ಕಾರ್ಯಕರ್ತರು ಗುಪ್ತವಾಗಿ ಸೀಮಿತ ಪ್ರಸರಣದ ಪತ್ರಿಕೆಗಳನ್ನು ಮುದ್ರಿಸಿ ಹಂಚಲಾರಂಭಿಸಿದರು. 1947ರಲ್ಲಿ ರಾಜಕೀಯ ಸ್ವಾತಂತ್ರ್ಯ ದೊರೆಯುವತನಕ ಈ ಮಾದರಿಯ ಪತ್ರಿಕೋದ್ಯಮ ಮುಂದುವರಿಯಿತು. ಇಲ್ಲಿ ಬಂಡವಾಳ ಹೂಡುವವರಿಲ್ಲ. ಸಂಪಾದಕೀಯ ಸಿಬ್ಬಂದಿಗೆ ಸಂಬಳ, ಸಾರಿಗೆ ಕೊಡುವವರಿಲ್ಲ. ಪತ್ರಕರ್ತರಾಗಲು ದೇಶಭಕ್ತಿಯೊಂದೇ ಮುಖ್ಯ ಅರ್ಹತೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಆಗಿನ ಪತ್ರಿಕೋದ್ಯಮ ಗುಡಿಕೈಗಾರಿಕೆಯ ಮಾದರಿಯಲ್ಲಿತ್ತು. ದೇಶ ವಿಭಜನೆಯ ಸಮಸ್ಯೆಗಳು, ಭಾರತ ಒಕ್ಕೂಟದಲ್ಲಿ ಸಂಸ್ಥಾನಗಳ ವಿಲೀನ, ಭಾಷಾವಾರು ಪ್ರಾಂತ್ಯಗಳ ರಚನೆ ಈ ಕಾರಣಗಳಿಂದಾಗಿ ಸ್ವಾತಂತ್ರ್ಯದ ಒಂದೆರಡು ದಶಕಗಳ ನಂತರವೂ ಈ ಮಾದರಿಯ ಪತ್ರಿಕೋದ್ಯಮ ಭಾರತದಲ್ಲಿ ಜಾರಿಯಲ್ಲಿತ್ತು.

ತುರ್ತುಪರಿಸ್ಥಿತಿ ವಿರುದ್ಧ 1975 ರಿಂದ 77ರವರೆಗೆ ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ, ಇಂದಿರಾ ಗಾಂಧಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸುವಲ್ಲಿ, ಆನಂತರ ನಡೆದ ಚುನಾವಣೆಯಲ್ಲಿ ಜನತಾ ಪಕ್ಷದ ಸರ್ಕಾರ ಅಧಿಕಾರ ಹಿಡಿಯುವಲ್ಲಿ ಪತ್ರಿಕೆಗಳು ಬಹುಮುಖ್ಯ ಪಾತ್ರ ವಹಿಸಿದ್ದವು. ಸುದ್ದಿಗಳನ್ನು ಸೆನ್ಸಾರ್ ಮಾಡಲು ಆದೇಶ ಹೊರಡಿಸಿದ್ದ ಇಂದಿರಾ ಅವರ ವಿರುದ್ಧ ಬಹುತೇಕ ಎಲ್ಲ ಪತ್ರಿಕೆಗಳೂ ಸಿಡಿದೆದ್ದಿದ್ದವು. ಅಭಿವ್ಯಕ್ತಿ ಸ್ವಾತಂತ್ರ್ಯ, ಮಾಧ್ಯಮ ಸ್ವಾತಂತ್ರ್ಯ ಇತ್ಯಾದಿಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆದದ್ದೇ ಆಗ. ಮಾಧ್ಯಮ ಅಂದರೆ ತಮ್ಮ ಸಮಸ್ಯೆಗಳಿಗೆ ದನಿಯಾಗುವ, ಸರ್ಕಾರಕ್ಕೆ ಅದನ್ನು ಮುಟ್ಟಿಸುವ ದಾರಿ ಎಂದೇ ಜನ ತಿಳಿದುಕೊಂಡಿದ್ದರು. ಅನಕ್ಷರಸ್ಥರೇ ಹೆಚ್ಚಿದ್ದರೂ ಹಳ್ಳಿ, ಹಳ್ಳಿಗಳಲ್ಲಿ ಪತ್ರಿಕೆಗಳನ್ನು ಓದಿ ಹೇಳುವ ಜನರೂ ಇದ್ದರು. `ವಾಚಕರ ವಾಣಿ’ಯಂತಹ ಅಂಕಣಗಳಿಗಿರುವ ಮಹತ್ವವೇ ಅದು.

1980ರ ನಂತರ ಭಾರತೀಯ ಪತ್ರಿಕೋದ್ಯಮದಲ್ಲಿ ಹೊಸ ಯುಗ ಆರಂಭವಾಯಿತು. ದೇಶದ ಕೆಲ ವಿಶ್ವವಿದ್ಯಾಲಯಗಳು ಪತ್ರಿಕೋದ್ಯಮ, ಸಮೂಹ ಸಂವಹನದಲ್ಲಿ ಕೋರ್ಸ್ ಆರಂಭಿಸಿದವು. ಹವ್ಯಾಸಕ್ಕಾಗಿ ಬರವಣಿಗೆ ಆರಂಭಿಸಿದವರು, ಹೋರಾಟ, ಬಂಡಾಯದ ಮನೋಧರ್ಮದಿಂದಾಗಿ ಪತ್ರಿಕೋದ್ಯಮಕ್ಕೆ ಬಂದವರ ಹೊರತಾಗಿ, ಪತ್ರಿಕೋದ್ಯಮವನ್ನು ವೃತ್ತಿಪರವಾಗಿ ಕಲಿತವರು ಮುಖ್ಯವಾಹಿನಿ ಪತ್ರಿಕೆಗಳಲ್ಲಿ ಕಾಣಿಸಿಕೊಂಡರು. 90ರ ದಶಕದಲ್ಲಿ ಮಾಧ್ಯಮ ಕ್ಷೇತ್ರ ಮತ್ತೊಂದು ಜಿಗಿತ ಕಂಡಿತು. ಮುದ್ರಣ ಮತ್ತು ದೂರಸಂಪರ್ಕ ಕ್ಷೇತ್ರ ಆಧುನಿಕತೆಗೆ ತೆರೆದುಕೊಳ್ಳುತ್ತಿದ್ದಂತೆ ಬಹುತೇಕ ರಾಷ್ಟ್ರಮಟ್ಟದ ಮತ್ತು ರಾಜ್ಯಮಟ್ಟದ ಪತ್ರಿಕೆಗಳು ಎರಡನೇ ದರ್ಜೆ ನಗರಗಳಲ್ಲಿ ಬ್ಯುರೊಗಳನ್ನು, ಮುದ್ರಣಾಲಯಗಳನ್ನು ತೆರೆದರು. ಹೆಚ್ಚೆಚ್ಚು ಸಿಬ್ಬಂದಿ ನೇಮಿಸಿಕೊಂಡರು. ಪ್ರಸರಣ ಹೆಚ್ಚಿಸಿಕೊಂಡರು.

ಈ ನಡುವೆ 90ರ ದಶಕದಲ್ಲಿ ಆರಂಭಗೊಂಡು ಸೆಟಲೈಟ್ ಆಧಾರಿತ ಮನರಂಜನಾ ವಾಹಿನಿಗಳ ಪ್ರಭಾವದಿಂದ ಮಾಧ್ಯಮದಲ್ಲಿ ಮನರಂಜನೆಗೆ ದೊಡ್ಡ ಜಾಗ ಸಿಕ್ಕಿತು. ಕಪ್ಪು-ಬಿಳುಪು ಮುದ್ರಣ ಹೋಗಿ ವರ್ಣಮಯ ಮುದ್ರಣ ಆರಂಭಗೊಂಡಿತು. ದೊಡ್ಡ ಪತ್ರಿಕೆಗಳು ಕೋಟ್ಯಂತರ ಬಂಡವಾಳ ಹೂಡಿ ಅತ್ಯಾಧುನಿಕ ಮುದ್ರಣಾಲಯಗಳನ್ನು ತೆರೆದವು. ಇಂತಹ ಪತ್ರಿಕೆಗಳು ಸಬ್ಸಿಡಿ ದರದ ನ್ಯೂಸ್‍ಪ್ರಿಂಟ್, ಜಾಹೀರಾತುಗಳಿಗಾಗಿ ಸರ್ಕಾರವನ್ನು ಅವಲಂಬಿಸದೇ ಬೇರೆ ದಾರಿ ಇರಲಿಲ್ಲ. ಆದರೆ, ಸಾಮಾನ್ಯರು, ದಮನಿತರ ಹಕ್ಕುಗಳನ್ನು, ಸಮಸ್ಯೆಗಳನ್ನು ಎತ್ತಿಹಿಡಿಯುವ ಪತ್ರಿಕೆಗಳ ಮೂಲ ಸೈದ್ಧಾಂತಿಕತೆಗೆ ಯಾವ ಧಕ್ಕೆಯೂ ಬಂದಿರಲಿಲ್ಲ.

2000ನೇ ಇಸ್ವಿ ಹೊತ್ತಿಗೆ ಭಾರತದ ಮಾಧ್ಯಮದಲ್ಲಿ ಮತ್ತೊಂದು ಕ್ರಾಂತಿ ಶುರುವಾಗಿತ್ತು. 24 ಗಂಟೆಗಳ ಸುದ್ದಿವಾಹಿನಿಗಳು ಮೊದಲು ಇಂಗ್ಲಿಷ್‍ನಲ್ಲಿ, ಆನಂತರ ಪ್ರಾದೇಶಿಕ ಭಾಷೆಗಳಲ್ಲಿ ಒಂದೊಂದಾಗಿ ತಲೆಎತ್ತಿದವು. ಇದೇ ವಾಹಿನಿಗಳಿಂದಾಗಿ ಕಳೆದ ಹತ್ತು ವರ್ಷಗಳಲ್ಲಿ ಪತ್ರಿಕೋದ್ಯಮದ ವ್ಯಾಖ್ಯಾನವೇ ಬದಲಾಗಿದೆ. ಪತ್ರಿಕೆಗಳಲ್ಲಿ ಕಾಣುತ್ತಿದ್ದ ನಿರ್ದಿಷ್ಟ ಸಂಪಾದಕೀಯ ನೀತಿ, ಗಂಭೀರ ಚರ್ಚೆಗಳ ಬದಲಾಗಿ ಸುದ್ದಿವಾಹಿನಿಗಳಲ್ಲಿ ಸುದ್ದಿಗಾಗಿ ಹಪಾಹಪಿತನ, ಸುದ್ದಿಯನ್ನು ಮನರಂಜನೆಯ ಸರಕಾಗಿಸುವ ವಾಚಾಳಿತನ ಕಾಣುತ್ತಿದೆ.

90ರ ದಶಕದ ನಂತರ ಭಾರತದ ರಾಜಕೀಯ ಕ್ಷೇತ್ರದಲ್ಲಾದ ಅಮೂಲಾಗ್ರ ಬದಲಾವಣೆ ಸಹ ಪತ್ರಿಕೋದ್ಯಮದ ಮೇಲೆ, ಪತ್ರಿಕಾ ನೀತಿಗಳ ಮೇಲೆ ಗಮನಾರ್ಹ ಪರಿಣಾಮ ಬೀರಿದೆ. 1992ರ ಬಾಬರಿ ಮಸೀದಿ ಧ್ವಂಸ ಪ್ರಕರಣದ ನಂತರ ನಿಧಾನಕ್ಕೆ ಬಲ ಹೆಚ್ಚಿಸಿಕೊಳ್ಳುತ್ತ ದೇಶದ ರಾಜಕೀಯ ಮುಖ್ಯವಾಹಿನಿಯಲ್ಲಿ ಬಿಜೆಪಿಯ ಹಿಂದುತ್ವ ಐಡಿಯಾಲಜಿ ಈಗ ಕೇಂದ್ರ ಸ್ಥಾನಕ್ಕೆ ಬಂದಿರುವುದು, ಸಮಾಜವಾದಿ ಹಾಗೂ ಜಾತ್ಯತೀತ ತಳಹದಿಯ ಕಾಂಗ್ರೆಸ್ ಮತ್ತು ಎಡಪಕ್ಷಗಳು ಅಂಚಿನತ್ತ ಸರಿಯುತ್ತಿರುವುದು ಒಂದು ವಿದ್ಯಮಾನ. 80ರ ದಶಕದವರೆಗೂ ಸಮಾಜಸೇವೆಗಾಗಿಯೇ ರಾಜಕೀಯಕ್ಕೆ ಇಳಿದ ಮುಖಗಳು ಮರೆಯಾಗಿ ಅಧಿಕಾರ ತಂದುಕೊಂಡುವ ಅತಿಯಾದ ಸವಲತ್ತು ಮತ್ತು ಪ್ರಾಬಲ್ಯಕ್ಕಾಗಿ ರಾಜಕೀಯ ಪ್ರವೇಶಿಸುವವರು ಹೆಚ್ಚಾಗಿರುವುದು ಮತ್ತೊಂದು ವಿದ್ಯಮಾನ. ಪ್ರಚಾರ- ಪ್ರಾಬಲ್ಯಕ್ಕೆ ಹಾತೊರೆಯುತ್ತಿರುವ ಉದ್ಯಮಿ ಕಮ್ ರಾಜಕಾರಣಿಗಳು ತಮ್ಮದೇ ಆದ ಸುದ್ದಿವಾಹಿನಿ, ಪತ್ರಿಕೆಗಳನ್ನು ತೆರೆಯಲು ಆರಂಭಿಸಿರುವುದು ಇತ್ತೀಚಿನ ಎರಡು ದಶಕಗಳಲ್ಲಿ ಕಂಡುಬಂದಿರುವ ಮತ್ತೊಂದು ಬದಲಾವಣೆ.

ಜಾಗತೀಕರಣ ಮತ್ತು ಮಾಹಿತಿ ತಂತ್ರಜ್ಞಾನ ಕ್ರಾಂತಿಯಿಂದಾಗಿ ಲಕ್ಷಗಟ್ಟಲೇ ಸಂಬಳ ಎಣಿಸುವ ಯುವಕರು ಹಾಗೂ ದಿಢೀರ್ ಏರಿರುವ ಜೀವನಮಟ್ಟದಿಂದಾಗಿ ಈಗ ಎಲ್ಲರ ಚಿತ್ತ ಹಣ ಗಳಿಸುವತ್ತಲೇ ಇದೆ. ಇದಕ್ಕೆ ಮಾಧ್ಯಮವೂ ಹೊರತಾಗಿಲ್ಲ. ಕಳೆದ ಹತ್ತು-ಹದಿನೈದು ವರ್ಷಗಳಿಂದ ಪತ್ರಿಕಾ ಸಂಸ್ಥೆಗಳಲ್ಲಿ ಸಂಪಾದಕೀಯ ಬಳಗದ ಪ್ರಾಮುಖ್ಯ ಕಡಿಮೆಯಾಗಿ ಸಂಸ್ಥೆಗೆ ಆದಾಯ ತರುವ ಜಾಹೀರಾತು ವಿಭಾಗ ಪತ್ರಿಕಾ ನೀತಿಯನ್ನು ನಿರ್ಧರಿಸುವ ಪ್ರವೃತ್ತಿ ಆರಂಭವಾಗಿದೆ.

ಚುನಾವಣೆಯ ಸಮಯದಲ್ಲಿ ರಾಜಕೀಯ ವ್ಯಕ್ತಿಗಳ ಸಾಧನೆ ಬಗ್ಗೆ ಹಾಡಿಹೊಗಳುವ ಹಾಗೂ ಇತರ ದಿನಗಳಲ್ಲಿ ಗ್ರಾಹಕ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡುವ ಸುದ್ದಿಯ ರೂಪದ ಜಾಹೀರಾತುಗಳು ಎಡ್ವಟೋರಿಯಲ್ ಹೆಸರಿನಲ್ಲಿ ಪ್ರಕಟವಾಗುತ್ತಿವೆ. ಇಂದಿನ ಮಾರುಕಟ್ಟೆ ಆಧರಿಸಿದ ಆರ್ಥಿಕ ವ್ಯವಸ್ಥೆಯಲ್ಲಿ ಪತ್ರಿಕೆಯನ್ನು ಉಳಿಸಿಕೊಳ್ಳಬೇಕಾದರೆ ಈ ಎಲ್ಲ ತಂತ್ರಗಳನ್ನು ಅನುಸರಿಸುವ ಅನಿವಾರ್ಯತೆ ಇದೆ. ಪತ್ರಿಕೆಯನ್ನು ಸಂಪಾದಕ ಮುನ್ನಡೆಸುವ ಬದಲು ಸಿಇಒಗಳು ನಡೆಸುವ ಸನ್ನಿವೇಶ ಉದ್ಭವಿಸಿದೆ. ಕೇವಲ ಮುದ್ರಣ ಮಾಧ್ಯಮವಲ್ಲ, ಟೆಲಿವಿಜನ್ ಮಾಧ್ಯಮ ಸಹ ಇಂತಹದ್ದೇ ಬಿಕ್ಕಟ್ಟು ಎದುರಿಸುತ್ತಿದೆ.

ಮಾಧ್ಯಮಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಈ ರೀತಿ ಹೆಣಗುತ್ತಿದ್ದರೆ ಇಂದಿನ ರಾಜಕಾರಣಿಗಳು ಮಾಧ್ಯಮದಿಂದ ತಮಗಾಗುವ ಅನುಕೂಲ ಮತ್ತು ಅನನುಕೂಲ ಎರಡನ್ನೂ ಅರಿತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಎಲ್ಲ ದೊಡ್ಡ ರಾಜಕಾರಣಿಗಳು ಪತ್ರಕರ್ತರನ್ನು ಮಾಧ್ಯಮ ಸಲಹೆಗಾರರನ್ನು ನೇಮಿಸಿಕೊಳ್ಳುತ್ತಿದ್ದಾರೆ. ಮಾಧ್ಯಮಗಳಲ್ಲಿ ಹೇಗಾದರೂ ಪ್ರಭಾವ ಬೀರಿ ತಮಗೆ ಬೇಕಾದಂತೆ ಸುದ್ದಿ ಬರೆಯಿಸಲು ದಾರಿ ಹುಡುಕಿಕೊಳ್ಳುತ್ತಿದ್ದಾರೆ. ಮಾಧ್ಯಮ ಸಂಸ್ಥೆಗಳ ಮಾಲೀಕರ ಸ್ನೇಹ ಬೆಳೆಸುವ ತಂತ್ರವೂ ಹೆಚ್ಚುತ್ತಿದೆ. ಹಿಂದೆಲ್ಲ ಪತ್ರಿಕೋದ್ಯಮಿಗಳು ಬಂಡವಾಳ ಹೂಡಿದರೂ ಸಂಪಾದಕರ ಮರ್ಜಿಗೆ ಎಲ್ಲವನ್ನೂ ಬಿಡುತ್ತಿದ್ದರು. ಈಗ ಮಾಲೀಕರ ರಾಜಕೀಯ ಒಲವು ಪತ್ರಿಕೆಗಳಲ್ಲಿ ಪ್ರತಿಬಿಂಬಿತವಾಗುತ್ತಿದೆ.

ಯಾವುದೇ ಕಾಲಘಟ್ಟವಿರಲಿ ಮಾಧ್ಯಮ ತನಗೆ ಸರಿಕಂಡ ಯಾವುದೋ ಒಂದು ರಾಜಕೀಯ ಸಿದ್ಧಾಂತವನ್ನು ಬೆಂಬಲಿಸಿಕೊಂಡೇ ಬಂದಿದೆ. ಹಾಗಾಗಿ ಮಾಧ್ಯಮವನ್ನು ನಿಷ್ಪಕ್ಷಪಾತ ಎನ್ನಲಾಗದು. ಆದರೆ, ಹಿಂದಿನ ದಶಕಗಳಲ್ಲಿ ರಾಜಕಾರಣಿಗಳು ತಮ್ಮ ವಿರುದ್ಧ ಬರೆಯುವ ಪತ್ರಿಕೆ, ಸಂಪಾದಕ ಅಥವಾ ಪತ್ರಕರ್ತರಿಗೆ ಗೌರವ ನೀಡುತ್ತಿದ್ದರು. ಈಗ ಮಾಲೀಕರ ಮೇಲೆ ಒತ್ತಡ ತಂದು ಅವರನ್ನು ಕೆಲಸದಿಂದ ಕಿತ್ತುಹಾಕಿಸುವ ಪರಿಪಾಠ ನಡೆಯುತ್ತಿದೆ. ಮಾಧ್ಯಮದ ಬಗ್ಗೆ ಒಳಗೊಳಗೆ ಹೆದರಿಕೆ ಇದೆ ಎನ್ನುವುದೂ ಇಲ್ಲಿ ಅರ್ಥವಾಗುತ್ತದೆ.

ಪತ್ರಿಕೋದ್ಯಮ ಹುಟ್ಟಿದಾಗ ಹಾಗೂ ಸ್ವಾತಂತ್ರ್ಯದ ಆರಂಭದ ದಶಕಗಳಲ್ಲಿ ಕಾಣುತ್ತಿದ್ದ ತತ್ವಾದರ್ಶಗಳು ಸಮಾಜದಲ್ಲಿ ಮರೆಯಾಗಿರುವುದರಿಂದ ರಾಜಕಾರಣಿಗಳು ಮಾಧ್ಯಮವನ್ನು ತಮಗೆ ಬೇಕಾದಂತೆ ಕುಣಿಸಲು ಸಾಧ್ಯವಾಗುತ್ತಿದೆ ಎನಿಸುತ್ತಿದೆ. ಇಲ್ಲಿ ಆಡಳಿತಶಾಹಿ ಹಾಗೂ ಪೊಲೀಸ್ ಪಡೆ ಕೂಡ ರಾಜಕಾರಣಿಗಳ ಬೆಂಬಲಕ್ಕೆ ನಿಲ್ಲುತ್ತಿವೆ. ಕಳೆದ ಅಕ್ಟೋಬರ್‍ನಲ್ಲಿ ಉತ್ತರಪ್ರದೇಶದ ಹತ್ರಾಸ್‍ನಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರ, ಸಾವು ಹಾಗೂ ತರಾತರಿಯ ಅಂತ್ಯಸಂಸ್ಕಾರದ ಘಟನೆಗಳ ಬಗ್ಗೆ ವರದಿ ಮಾಡಲು ತೆರಳಿದ್ದ ಪತ್ರಕರ್ತ ಸಿದ್ದಿಕಿ ಕಪ್ಪನ್‍ನ್ನು ಉತ್ತರಪ್ರದೇಶ ಸರ್ಕಾರ ಬಂಧಿಸಿಟ್ಟಿದ್ದು, ಆತನ ವಿರುದ್ಧ ಪೊಲೀಸರು 5000 ಪುಟಗಳ ಆರೋಪಪಟ್ಟಿ ದಾಖಲಿಸಿದ್ದಾರೆ. 2020ರ ಜಾಗತಿಕ `ಮಾಧ್ಯಮ ಸ್ವಾತಂತ್ರ್ಯ ಸೂಚಕ’ದ ಪ್ರಕಾರ 180 ದೇಶಗಳ ಪೈಕಿ ಭಾರತದ 142ನೇ ಸ್ಥಾನದಲ್ಲಿದೆ.

ಆದರೆ, ಇದರಲ್ಲಿ ಪತ್ರಕರ್ತರ ಅಥವಾ ಪತ್ರಿಕೋದ್ಯಮಿಗಳ ಪಾತ್ರದಷ್ಟೇ ಜನಸಮುದಾಯದ ಹೊಣೆಯೂ ಮಹತ್ವದ್ದು. ಕೊವಿಡ್ ಕಾರಣದಿಂದ ಉಂಟಾದ ಆರ್ಥಿಕ ಬಿಕ್ಕಟ್ಟಿನಿಂದಾಗಿ ಕನ್ನಡದ ಬಹುತೇಕ ಪತ್ರಿಕೆಗಳು ಸಿಬ್ಬಂದಿ ಸಂಖ್ಯೆ ಕಡಿತಗೊಳಿಸಿದ್ದು, ಸಂಬಳವನ್ನು ಕಡಿಮೆ ಮಾಡಿವೆ. ಪತ್ರಿಕೆಯ ಪ್ರಸರಣ ಇಳಿಮುಖವಾಗುತ್ತಿದೆ. 6.5 ಕೋಟಿ ಜನಸಂಖ್ಯೆಯ ಕರ್ನಾಟಕದಲ್ಲಿ ಕನ್ನಡದ ಎಲ್ಲ ಪ್ರಮುಖ ಪತ್ರಿಕೆಗಳನ್ನು ಸೇರಿಸಿದರೂ ಪ್ರಸರಣ ಸಂಖ್ಯೆ 20-22 ಲಕ್ಷ ದಾಟದು. ಆದರೆ, ನಮ್ಮ ಪಕ್ಕದ ಕೇರಳದಲ್ಲಿ ಮೊದಲ ಸ್ಥಾನದಲ್ಲಿರುವ `ಮಲಯಾಳ ಮನೋರಮಾ’ ಪ್ರಸರಣ ಸಂಖ್ಯೆಯೇ 22 ಲಕ್ಷದಲ್ಲಿದೆ. ಅದರ ಸಮೀಪದ ಪ್ರತಿಸ್ಪರ್ಧಿ ಮಾತೃಭೂಮಿ ಪ್ರಸರಣ ಸಂಖ್ಯೆಯೂ 20 ಲಕ್ಷದಷ್ಟಿದೆ. ಕೇರಳದ ಹೊರಗೆ ಬಿಡಿ, ವಿದೇಶಗಳಲ್ಲಿಯೂ ಅವು ಪ್ರತ್ಯೇಕ ಆವೃತ್ತಿ ಹೊರತರುತ್ತಿವೆ. ಇದು ಏನನ್ನು ಸೂಚಿಸುತ್ತದೆ. ಮಾಧ್ಯಮಗಳ ಆರ್ಥಿಕ ಶಕ್ತಿಗೂ ಅವುಗಳ ಸ್ವತಂತ್ರ ನಿಲುವಿಗೂ ನೇರ ಸಂಬಂಧ ಇದೆಯಲ್ಲವೇ..? ಮಾಧ್ಯಮಗಳ ಸ್ವಾತಂತ್ರ್ಯ ಕೇವಲ ಮಾಧ್ಯಮಕ್ಕೆ ಮಾತ್ರ ಸಂಬಂಧಿಸಿದ್ದೇ? ಅದರಲ್ಲಿ ಸಮಾಜದ ಹೊಣೆಗಾರಿಕೆ ಇಲ್ಲವೇ.?

ಟಿವಿ ವಾಹಿನಿಗಳು ನೀಡುವ ಅಬ್ಬರದ ಸುದ್ದಿಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಫಾಸ್ಟ್‍ಫುಡ್‍ನಂತೆ ಸಿಗುವ ದಿಢೀರ್ ಸುದ್ದಿಗಳಿಂದಾಗಿ ಜನಸಮುದಾಯ ಈಗ ಗಂಭೀರ ಪತ್ರಿಕೋದ್ಯಮಕ್ಕೆ ಬೆನ್ನು ತಿರುಗಿಸಿದಂತೆ ಕಾಣುತ್ತಿದೆ. ಯುವಜನರನ್ನು ಆಕರ್ಷಿಸಲು ವಿಫಲವಾಗುತ್ತಿರುವುದು ಹಾಗೂ ಹೆಚ್ಚುತ್ತಿರುವ ಆರ್ಥಿಕ ಹೊರೆಯಿಂದಾಗಿ ಸಾಂಪ್ರದಾಯಿಕ ಮಾಧ್ಯಮ ಸಂಸ್ಥೆಗಳು ಇನ್ನೆಷ್ಟು ಕಾಲ ಪ್ರಸ್ತುತವಾಗಿರುತ್ತದೆ ಎಂಬ ಪ್ರಶ್ನೆಯೂ ಈಗ ಕಾಡುತ್ತಿದೆ. ಮಾಧ್ಯಮದ ಹೊರಕವಚ ಬದಲಾಗಬಹುದು. ಆದರೆ, ಮಾನವನಲ್ಲಿ ಬಂಡಾಯ ಪ್ರವೃತ್ತಿ ಜೀವಂತವಾಗಿರುವವರೆಗೂ ಅದರ ಮೂಲ ಸಿದ್ಧಾಂತಕ್ಕೆ ಧಕ್ಕೆಯಾಗಲು ಸಾಧ್ಯವಿಲ್ಲ. ಅದು ರೂಪಾಂತರಗೊಳ್ಳುತ್ತ ಹೋಗುತ್ತದೆ ಅಷ್ಟೆ.

ಹಾಗೆಯೇ `ಕ್ರೌಡ್ ಫಂಡಿಂಗ್’ ಅಥವಾ `ಸಮೂಹ ಬಂಡವಾಳ ಹೂಡಿಕೆ’ಯಂತಹ ಉಪಕ್ರಮಗಳಿಂದ ಸಮಾನಮನಸ್ಕರು ಸೇರಿಕೊಂಡು ಸ್ವತಂತ್ರ ಪತ್ರಿಕೋದ್ಯಮವನ್ನು ಖಂಡಿತ ಉಳಿಸಬಹುದಾಗಿದೆ. `ದಿ ವೈರ್, `ದಿ ನ್ಯೂಸ್ ಮಿನಿಟ್’ ಇತ್ಯಾದಿ ವೆಬ್‍ಪತ್ರಿಕೆಗಳು, ಸುಳ್ಳು ಸುದ್ದಿಗಳ ಅಸಲಿಯತ್ತು ಬಯಲಿಗೆಳೆಯುವ `ಆಲ್ಟ್ ನ್ಯೂಸ್’ನಂತಹ ವೆಬ್‍ಸೈಟ್‍ಗಳು ಇದಕ್ಕೆ ಅತ್ಯುತ್ತಮ ಉದಾಹರಣೆ.

ಹಾಗೆಯೇ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್, ಟೈಮ್ಸ್ ಆಫ್ ಇಂಡಿಯಾ, ಹಿಂದೂ ಇತ್ಯಾದಿ ಹಳೆಯ ಪತ್ರಿಕೆಗಳೆಲ್ಲ ತಮ್ಮ ವೆಬ್ ಆವೃತ್ತಿಗೆ ಈಗ ಹೆಚ್ಚಿನ ಮಹತ್ವ ನೀಡುತ್ತಿವೆ. ಚಂದಾದಾರರನ್ನು ಸೆಳೆಯುವ ಮೂಲಕ ವೆಬ್ ಆವೃತ್ತಿಯಲ್ಲಿ ಕೆಲ ವಿಶೇಷ ಸುದ್ದಿಗಳನ್ನು ನೀಡುತ್ತಿವೆ. ಈ ಮಾಧ್ಯಮ ಸಂಸ್ಥೆಗಳ ಮೇಲೆ ವಿಶ್ವಾಸ ಹೊಂದಿರುವ ಓದುಗರು ಇದಕ್ಕೆ ಚಂದಾದಾರರಾಗಿದ್ದಾರೆ ಎನ್ನುವುದು ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯ ಎಂದಿಗೂ ಕೊನೆಯಾಗದು ಎಂಬ ಆತ್ಮವಿಶ್ವಾಸ ಹಾಗೂ ಆಶಾವಾದಕ್ಕೆ ಕಾರಣವಾಗಿದೆ. 

*ಲೇಖಕರು ಹಿರಿಯ ಪತ್ರಕರ್ತೆ; ಪ್ರಜಾವಾಣಿಯ ಮಾಜಿ ಸುದ್ದಿ ಸಂಪಾದಕರು, ಪ್ರಾಫಿಟ್ ಪ್ಲಸ್ ಪತ್ರಿಕೆಯ ಸಂಪಾದಕೀಯ ಸಲಹೆಗಾರರು.

Leave a Reply

Your email address will not be published.