ಸ್ವತಂತ್ರ ಪತ್ರಿಕೋದ್ಯಮ ಸಸ್ತಾ ಸಿಗುವುದಿಲ್ಲ

ಪತ್ರಿಕೋದ್ಯಮದ ಮೊದಲ ಹಾಗೂ ಕೊನೆಯ ಉದ್ದೇಶ ಜನರ ಹಿತವನ್ನು ಕಾಯುವುದು. ತನ್ನ ಹಿತವನ್ನು ಕಾಯುವ ಪತ್ರಿಕಾ ಸ್ವಾತಂತ್ರ್ಯ ಪರಾಧೀನವಾಗದೇ ಉಳಿಯಬೇಕು ಎಂದರೆ ಜನರೂ ಅದಕ್ಕೆ ತಕ್ಕ ಬೆಲೆ ಕೊಡಲು ಕಲಿಯಬೇಕು.

-ಪದ್ಮರಾಜ ದಂಡಾವತಿ

ಇದೇನು ಇಂದು ನಿನ್ನೆಯ ಕಥೆಯಲ್ಲ. ಇತಿಹಾಸವನ್ನು ಒಂದು ಸಾರಿ ತಿರುವಿ ಹಾಕಿದರೆ ಪ್ರಭುತ್ವದ ಅಸಹನೆಯನ್ನು ಪತ್ರಿಕೋದ್ಯಮ ಎದುರಿಸಿಕೊಂಡು ಬಂದಿರುವುದು ಪುಟ ಪುಟಗಳಲ್ಲಿಯೂ ಕಾಣುತ್ತದೆ. ಆ ಸಂಘರ್ಷದ ಕಾರಣವಾಗಿಯೇ ಪತ್ರಿಕೋದ್ಯಮ ವೃತ್ತಿಗೆ ಘನತೆ ಮತ್ತು ಗ್ಲಾಮರ್ ಎರಡೂ ಇವೆ.

ಆಗಸ್ಟಸ್ ಹಿಕಿ ತನ್ನ ಪತ್ರಿಕೆಯನ್ನು ಶುರು ಮಾಡಿದ್ದು 18 ನೇ ಶತಮಾನದ ಕೊನೆಯಲ್ಲಿ. ಅವನು ಒಳ್ಳೆಯ ಪತ್ರಿಕೋದ್ಯಮ ಮಾಡಿದನೋ ಇಲ್ಲವೋ ಎಂಬುದು ಬೇರೆ ಮಾತು. ಆದರೆ, ಅವನು ದಾಕ್ಷಿಣ್ಯಪರನಾಗಿರಲಿಲ್ಲ. ಅವನ ಪತ್ರಿಕೆಯನ್ನು ಅಂಚೆ ಮೂಲಕ ಕಳಿಸಲು ಆಗಿನ ಬ್ರಿಟಿಷ್ ಸರ್ಕಾರ ನಿರ್ಬಂಧ ವಿಧಿಸಿತು. ಭಾರತದಲ್ಲಿ ಪತ್ರಿಕೋದ್ಯಮದ ಸ್ವಾತಂತ್ರ್ಯಕ್ಕೆ ಬಂದ ಮೊದಲ ಕಂಟಕವದು. ಇದು 1790 ರ ಮಾತು. ಪ್ರಭುತ್ವದಿಂದ ತನ್ನ ಸ್ವಾತಂತ್ರ್ಯಕ್ಕಾಗಿ ಬಂಧಿತನಾದ ಮೊದಲ ಪತ್ರಕರ್ತನೂ ಆತನೇ. ಇದು ಕೊನೆಯಿಲ್ಲದ ಕಥೆ.

ಪತ್ರಿಕೋದ್ಯಮ ಇರುವುದು ವಿಮರ್ಶೆ ಮಾಡುವುದಕ್ಕೆ ಮತ್ತು ಪ್ರಭುತ್ವಕ್ಕೆ ನಿಜ ಹೇಳುವುದಕ್ಕೆ. (Speaking truth to the power) ಆದರೆ, ಪ್ರಭುತ್ವಕ್ಕೆ ವಿಮರ್ಶೆ ಮತ್ತು ಸತ್ಯ ಎರಡೂ ಬೇಕಾಗಿರುವುದಿಲ್ಲ. ಅದಕ್ಕಾಗಿಯೇ ಹಿಂದೆ ರಾಜನ ಸುತ್ತಮುತ್ತ ವಂದಿಮಾಗಧರು ಇರುತ್ತಿದ್ದರು. ಅವರು ರಾಜನಿಗೆ ಯಾವಾಗಲೂ “ಭೋಪರಾಕ್” ಹೇಳಿಕೊಂಡಿರುತ್ತಿದ್ದರು. ಪತ್ರಕರ್ತರು ಕೂಡ ವಂದಿಮಾಗಧರ ಹಾಗೆ ಇರಬೇಕು ಎಂದು ಪ್ರಭುತ್ವದಲ್ಲಿ ಇದ್ದವರು ಬಯಸುತ್ತ ಇರುತ್ತಾರೆ. ಈಗ ಅನೇಕ ಪತ್ರಕರ್ತರು ಆ ಕೆಲಸ ಮಾಡಲು ತಾವಾಗಿಯೇ ಮುಂದೆ ಬಂದಿದ್ದಾರೆ. ಆದರೆ, ಪ್ರಭುತ್ವವನ್ನು ಹೊಗಳುವುದು ಪತ್ರಿಕೋದ್ಯಮವಲ್ಲ. ಅದಕ್ಕಿಂತ ಜನವಿರೋಧಿ ಕೆಲಸ ಇನ್ನೊಂದು ಇರಲಾರದು. ಏಕೆಂದರೆ ಹೊಗಳಿಕೆಯು ನಿಜವಾಗಿರಬೇಕು ಎಂದೇನೂ ಇಲ್ಲ!

ನಮಗೆ ನಮ್ಮ ಸಂವಿಧಾನ ಕೊಟ್ಟ ವಾಕ್ ಸ್ವಾತಂತ್ರ್ಯವು ವಿಮರ್ಶೆಯ ಅಧಿಕಾರ ಕೂಡ ಹೌದು. ಈ ವಿಮರ್ಶೆಯ ಅಧಿಕಾರಕ್ಕೆ ಅನೇಕ ಮಿತಿಗಳು ಇವೆ. ಅವು ಕಾನೂನಾತ್ಮಕವಾಗಿಯೂ ಇವೆ, ವ್ಯಾವಹಾರಿಕವಾಗಿಯೂ ಇವೆ. ಮೊದಲು ವ್ಯಾವಹಾರಿಕ ಮಿತಿ ಕುರಿತು ನೋಡೋಣ:

ಪತ್ರಿಕೆಯನ್ನು ನಡೆಸಲು ಬಹಳ ದೊಡ್ಡ ಬಂಡವಾಳ ಬೇಕು. ಅಲ್ಲಿ ಸಾವಿರಾರು ಜನ ಉದ್ಯೋಗಿಗಳು, ಅವರ ಸಂಬಳ, ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಮುದ್ರಣ ಯಂತ್ರಗಳು, ಮುದ್ರಣ ಘಟಕಗಳು, ಕಂಪ್ಯೂಟರ್‍ಗಳು, ಕಾಗದ, ಮಸಿ… ಒಂದೇ ಎರಡೇ…? ಹೀಗೆ ಹತ್ತು ಹಲವು ವೆಚ್ಚಗಳನ್ನು ಕೂಡಿಸಿ ಒಂದು ಪತ್ರಿಕೆಯ ಸಂಚಿಕೆಯ ಬೆಲೆಯನ್ನು ನಿಗದಿ ಮಾಡಬೇಕು. ಈಗ ಪ್ರಮುಖ ದಿನಪತ್ರಿಕೆಗಳ ಬೆಲೆ ಸರಾಸರಿ ನಾಲ್ಕು ರೂಪಾಯಿಗಳಿಂದ ಆರು ರೂಪಾಯಿ ವರೆಗೆ ಇದೆ. ಆದರೆ, ಒಂದು ಪತ್ರಿಕೆಯ ಉತ್ಪಾದನೆಯ ವೆಚ್ಚ ಕನಿಷ್ಠ ಹತ್ತು ರೂಪಾಯಿಗಳಿಂದ ಹದಿನೈದು ರೂಪಾಯಿ ವರೆಗೆ ಆಗುತ್ತದೆ.

ವಿದೇಶದಿಂದ ಆಮದು ಮಾಡಿಕೊಳ್ಳುವ ಕಾಗದದ ಬೆಲೆ ಪತ್ರಿಕೆಯ ಮುಖಬೆಲೆ ಹೆಚ್ಚೂ ಕಡಿಮೆ ಆಗಲು ಕಾರಣವಾಗುತ್ತದೆ. ಒಂದು ದಿನದ ಸಂಚಿಕೆಯ ಉತ್ಪಾದನೆ ವೆಚ್ಚ ಕನಿಷ್ಠ ಹತ್ತು ರೂಪಾಯಿ ಆಗುತ್ತದೆ ಎಂದೇ ಇಟ್ಟುಕೊಂಡರೆ ಪತ್ರಿಕೆಗಳು ನಿತ್ಯವೂ ಒಂದು ಸಂಚಿಕೆಗೆ ನಾಲ್ಕರಿಂದ ಆರು ರೂಪಾಯಿ ನಷ್ಟ ಅನುಭವಿಸುತ್ತಿವೆ. ಈ ನಷ್ಟವನ್ನು ಅವು ಪ್ರಮುಖವಾಗಿ ಜಾಹೀರಾತಿನ ಮೂಲಕ ಭರಿಸಿಕೊಳ್ಳಬೇಕು. ಅದು ಬಿಟ್ಟರೆ ‘ಕಾಸಿಗಾಗಿ ಸುದ್ದಿ’ ಪ್ರಕಟಿಸುವ ಮೂಲಕ ತುಂಬಿಸಿಕೊಳ್ಳಬೇಕು.

1948 ರಲ್ಲಿ ಪ್ರೊ.ರಾ.ಯ.ಧಾರವಾಡಕರರು “ಪತ್ರಿಕಾ ವ್ಯವಸಾಯ” ಎಂಬ ಒಂದು ಪುಟ್ಟ ಪುಸ್ತಕದಲ್ಲಿ, “ಯಾವಾಗ ವೃತ್ತ ಪತ್ರಿಕೆಯ ಒಡೆಯನು ತನ್ನ ಜಾಹೀರಾತುದಾರರನ್ನು ಪಗಾರ ಕೊಡುವ ವ್ಯಕ್ತಿಗಳೆಂದು ಭಾವಿಸಲು ಪ್ರಾರಂಭಿಸಿದನೋ, ಅಂದಿನಿಂದ ಸತ್ಯ ಸಂಗತಿಗಳನ್ನು ಕೊಡುವ ಮತ್ತು ಸರಿಯಾದ ಅಭಿಪ್ರಾಯಗಳನ್ನು ವ್ಯಕ್ತ ಮಾಡುವ ಅವನ ಶಕ್ತಿಯು ಪರಿಮಿತಿ ಹೊಂದಿತು” ಎಂದು ಬರೆದಿದ್ದಾರೆ. ಆಗ ಖಂಡಿತ ಜಾಹೀರಾತು ಈಗಿನ ಪ್ರಮಾಣದಲ್ಲಿ ಇರಲಿಲ್ಲ. ಈಗ ಜಾಹೀರಾತು ಆದಾಯ ಇಲ್ಲದೇ ಪತ್ರಿಕೆ ನಡೆಸಲು ಆಗದು. ಈಗ ಯಾವ ಪುಟದಲ್ಲಿ ಎಷ್ಟು ಸುದ್ದಿ ಇರಬೇಕು ಎಂಬುದನ್ನು ಜಾಹೀರಾತಿನ ಪ್ರಮಾಣವೇ ನಿರ್ಧರಿಸುತ್ತದೆ. ಪತ್ರಿಕೆಗಳಲ್ಲಿ ಮೊದಲ ಮಣೆ ಇರುವುದು ಜಾಹೀರಾತಿಗೆ. ಇಂಗ್ಲಿಷ್ ಪತ್ರಿಕೆಗಳಲ್ಲಿ ಒಂದು, ಎರಡು, ಮೂರು, ನಾಲ್ಕು ಹೀಗೆ ಹಲವು ಮೊದಲ ಪುಟಗಳನ್ನು ಜಾಹೀರಾತಿಗೆ ಬಿಟ್ಟುಕೊಡುವುದನ್ನು ನಾವು ನೋಡಿದ್ದೇವೆ. ಭಾಷಾ ಪತ್ರಿಕೆಗಳೂ ಹೀಗೆ ಜಾಗ ಬಿಡಲು ಸಿದ್ಧವಿವೆ. ಪತ್ರಿಕೆಗಳ ಮಾಲೀಕರು, ಸಿ.ಇ.ಒ.ಗಳು ಮೊದಲು ನೋಡುವುದು ತಮ್ಮ ಪತ್ರಿಕೆಯಲ್ಲಿ ಯಾವ ಜಾಹೀರಾತು ಮಿಸ್ ಆಗಿದೆ ಎಂದು!

ಜಾಹೀರಾತು ಆದಾಯವೂ ಸಾಲದೇ ಇರುವುದರಿಂದ ‘ಕಾಸಿಗಾಗಿ ಸುದ್ದಿ’ ಎಂಬ ಪಿಡುಗು ಪತ್ರಿಕೋದ್ಯಮಕ್ಕೆ ಅಂಟಿಕೊಂಡಿದೆ. ಜಾಹೀರಾತಿನ ಮೇಲೆ ‘ಜಾಹೀರಾತು’ ಎಂದಾದರೂ ಇರುತ್ತದೆ. ಅದನ್ನು ನಂಬಬಹುದು, ಬಿಡಬಹುದು. ಆದರೆ, ಕಾಸಿಗಾಗಿ ಸುದ್ದಿಯ ಮೇಲೆ ಏನೂ ಇರುವುದಿಲ್ಲ. ಆದರೂ, ಒಂದು ಪತ್ರಿಕೆಯಲ್ಲಿ ಕಾಸು ತೆಗೆದುಕೊಂಡು ಬರೆದ ಸುದ್ದಿ ಯಾವುದು ಎಂದು ತಿಳಿಯಲು ದೊಡ್ಡ ದುರ್ಬೀನು ಏನೂ ಬೇಕಾಗಿಲ್ಲ. ಸರ್ಕಾರದಿಂದ, ರಾಜಕಾರಣಿಗಳಿಂದ ಇಂಥ ‘ಫೀಚರ್’ಗಳನ್ನು ತರಲು ಪತ್ರಿಕಾ ಕಚೇರಿಗಳಲ್ಲಿ ಸಿಬ್ಬಂದಿಯನ್ನೇ ನೇಮಕ ಮಾಡಿಕೊಳ್ಳಲಾಗುತ್ತಿದೆ.

ಮೊದಲು ಸರ್ಕಾರದಿಂದ ಜಾಹೀರಾತು ತರಲು ಆ ವಿಭಾಗದ ಸಿಬ್ಬಂದಿ ಹೋಗುತ್ತಿದ್ದರು. ಈಗ ಸಂಪಾದಕೀಯ ವಿಭಾಗದ ಹಿರಿಯರೇ ಹೋಗಬೇಕಾಗುತ್ತದೆ. ಒಂದು ಪತ್ರಿಕೆಯ ಸಂಪಾದಕೀಯ ವಿಭಾಗದ ಹಿರಿಯರೇ ತಮ್ಮ ಪತ್ರಿಕೆಗೆ ಜಾಹೀರಾತು ಕೊಡಬೇಕು ಎಂದು ಸರ್ಕಾರದ ಬಳಿ ಹೋಗುವುದಾದರೆ ಅವರನ್ನು ನಾಯಿ ಮಾಡಿದವರು ಸರ್ಕಾರದಲ್ಲಿ ಇದ್ದವರೇ ಅಥವಾ ಆ ಪತ್ರಿಕೆಯ ಮಾಲೀಕರೇ? ಮೊದಲು ಪತ್ರಿಕೆಗಳ ಮುಖ್ಯ ಸಂಚಿಕೆಯ ಜೊತೆಗೆ ಸರ್ಕಾರದ ಆಯಾ ವರ್ಷದ ಸಾಧನೆಯ ವಿಶೇಷ ಸಂಚಿಕೆಗಳು ಪುರವಣಿಯಾಗಿ ಬರುತ್ತಿದ್ದುವು. ಈಗ ಮುಖ್ಯ ಆವೃತ್ತಿಯ ಮಧ್ಯದ ಪುಟದಲ್ಲಿ ಇಂಥ ಪುರವಣಿ ಬರಬೇಕು ಎಂದು ಸರ್ಕಾರದಲ್ಲಿ ಇದ್ದವರು ತಾಕೀತು ಮಾಡುತ್ತಾರೆ. ಅದರ ಮೇಲೆ ‘ಜಾಹೀರಾತು ಪುರವಣಿ’ ಎಂದು ಬರೆಯಬೇಡಿ ಎನ್ನುತ್ತಾರೆ. ಬರೆದರೂ ಕಾಣದಂತೆ ಎಲ್ಲಿಯೋ ಕೆಳಗೆ ಹಾಕಿ ಎನ್ನುತ್ತಾರೆ. ನಿಮ್ಮ ಪತ್ರಿಕೆಯ ಸಂಪಾದಕೀಯ ವರದಿಗಾರರಿಗೇ ಸರ್ಕಾರದ ಸಾಧನೆ ಕುರಿತು ಲೇಖನ ಬರೆಯಲು ಹೇಳಿ ಎನ್ನುತ್ತಾರೆ. ಎಲ್ಲವನ್ನೂ ಸಂಪಾದಕೀಯ ಸಿಬ್ಬಂದಿ ಒಪ್ಪಿಕೊಂಡು ಮಾಡಬೇಕು. ಇಲ್ಲವೇ ನೌಕರಿ ಬಿಡಬೇಕಾಗುತ್ತದೆ. ಎಲ್ಲರಿಗೂ ಕುಟುಂಬ, ಹೆಂಡತಿ, ಮಕ್ಕಳು ಎಂದು ಇರುತ್ತಾರಲ್ಲ!

ಇಂಥ ಹುಲುಮಾನವರ ಪಾಡು ಬಿಡಿ. `ಔಟ್‍ಲುಕ್’ ಪತ್ರಿಕೆಯ ದಿಟ್ಟ ಸಂಪಾದಕರಾಗಿದ್ದ ವಿನೋದ್ ಮೆಹ್ತಾ ಅವರು, ರಾಡಿಯಾ ಟೇಪ್ ಪ್ರಕರಣವನ್ನು ಬಯಲಿಗೆ ಎಳೆದ ನಂತರ ತಮ್ಮ ಪತ್ರಿಕೆಯ ಸಂಪಾದಕ ಹುದ್ದೆಯನ್ನು ಬಿಟ್ಟು ಗೌರವ ಸಂಪಾದಕ ಹುದ್ದೆಗೆ ಏರಬೇಕಾಗುತ್ತದೆ. ಅದು ಏರಿಕೆಯೋ ಇಳಿಕೆಯೋ? ಇಡೀ ಜಾಹೀರಾತು ಉದ್ಯಮ ಅದರಲ್ಲಿಯೂ ಟಾಟಾ ಕಂಪೆನಿಯವರು ಮೆಹ್ತಾ ಅವರನ್ನು ಅವಮಾನಿಸಿದ್ದಕ್ಕೆ ಮಿತಿಯೇ ಇರಲಿಲ್ಲ. ಅದಕ್ಕೇ ಮೆಹ್ತಾ ಅವರು ತಮ್ಮ ಆತ್ಮಕಥೆಯ ಎರಡನೇ ಭಾಗಕ್ಕೆ “Editor Unplugged” ಎಂದು ಹೆಸರು ಇಟ್ಟಿದ್ದರು. ಇಲ್ಲಿ ಇನ್ನೂ ಒಂದು ಸೂಕ್ಷ್ಮ ಇದೆ. ಪತ್ರಿಕೆಗಳಿಗೆ ಜಾಹೀರಾತು ಕೊಡುವ ಬಹುಪಾಲು ಉದ್ಯಮಗಳು ಸರ್ಕಾರದ ಮರ್ಜಿಯಲ್ಲಿ ಇರುತ್ತವೆ. ಸರ್ಕಾರದ ಮರ್ಜಿ ಕಾಯದ ಪತ್ರಿಕೆಗಳಿಗೆ ಉದ್ಯಮಗಳ ಮೂಲಕವೇ ಸಂಕೇತ ಹೋಗುತ್ತವೆ. ಪತ್ರಿಕೆಗಳು ಬದುಕಬೇಕು ಎಂದರೆ ಯಾವುದನ್ನು ಆಯ್ದುಕೊಳ್ಳಬೇಕು ಎಂಬುದನ್ನು ಅವುಗಳೇ ನಿರ್ಧರಿಸಬೇಕು!

ಜಾಹೀರಾತು ಹೀಗೆ ನೇರವಾಗಿ ಪತ್ರಿಕೆಯನ್ನು ಉದ್ಯಮಿಗಳ, ಸರ್ಕಾರದ ಮುಂದೆ ಡೊಗ್ಗಾಲು ಮಂಡಿ ಊರಿಸುವಂತೆ ಮಾಡಿದರೆ ಪ್ರಭುತ್ವ ಇದನ್ನು ಇನ್ನೂ ಬಹಳ ಸೂಕ್ಷ್ಮವಾಗಿ ಮಾಡುತ್ತದೆ. ಇದು ಈಗಿನ ಕಥೆಯಲ್ಲ. 1970 ರ ದಶಕದಲ್ಲಿ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ತಮಗೆ ಇರಿಸು ಮುರಿಸು ಉಂಟು ಮಾಡುವ ಪ್ರಶ್ನೆ ಕೇಳಿದರು ಎಂದು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯ ಮುಖ್ಯ ವರದಿಗಾರನನ್ನು ತಮ್ಮ ಪತ್ರಿಕಾ ಗೋಷ್ಠಿಗೆ ಕಳಿಸಬಾರದು ಎಂದು ಫರ್ಮಾನು ಹೊರಡಿಸಿದ್ದರು. ಇರಿಸು ಮುರಿಸು ಆಗುವುದನ್ನು ಪ್ರಭುತ್ವ ಇಷ್ಟ ಪಡುವುದಿಲ್ಲ. ದೇಶದ ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಏಳು ವóರ್ಷಗಳಲ್ಲಿ ಪತ್ರಿಕಾಗೊಷ್ಠಿ ಮಾಡದೇ ಇರುವುದರ ಕಾರಣ ಸ್ಪಷ್ಟವಾಗಿದೆ. ಆ ಸರ್ಕಾರಕ್ಕೆ ಮತ್ತು ಅದರ ಹಿಂದೆ ಇರುವ ಸಿದ್ಧಾಂತಕ್ಕೆ ಪತ್ರಿಕೆಗಳೇ ಬೇಡ ಎಂಬುದು ದೊಡ್ಡ ರಹಸ್ಯವೇನೂ ಅಲ್ಲ.

ಪ್ರಧಾನಿ ಎಷ್ಟೇ ಕಡೆಗಣಿಸಲಿ ಪತ್ರಕರ್ತರೇ ಅವರ ಬಾಜಾ ಭಜಂತ್ರಿ ಆಗಿರುವುದು ಈಗಿನ ಕಾಲದ ಪತ್ರಿಕೋದ್ಯಮದ ದುರಂತ ವಿಸ್ಮಯ. ಒಂದು ಸರ್ಕಾರನ್ನು ತಾನು ಮೊದಲು ನಾನು ಮೊದಲು ಎಂದು ಸಮರ್ಥಿಸಲು ಪತ್ರಿಕೆಗಳಲ್ಲಿ, ಅದರಲ್ಲಿಯೂ ಟೀವಿ ವಾಹಿನಿಗಳಲ್ಲಿ ಪೈಪೋಟಿ ಇರುವುದು ಪರಮ ಆಶ್ಚರ್ಯ. ಪತ್ರಿಕೆಗಳ, ವಾಹಿನಿಗಳ ಮಾಲೀಕತ್ವದಲ್ಲಿ ಪಕ್ಷದ ಪದಾಧಿಕಾರಿಗಳು, ನಿಷ್ಠ ಅನುಯಾಯಿಗಳು ಇರುವುದು ಇದಕ್ಕೆ ಒಂದು ಕಾರಣವಾಗಿದ್ದರೆ, ಇನ್ನೊಂದು ಕಾರಣ ಕೇಂದ್ರ ನಾಯಕತ್ವದ ಡೋಲು ಬಾರಿಸುವುದರಿಂದ ಟಿಆರ್‍ಪಿ ಹೆಚ್ಚಾಗುವುದು. ಈಗಿನ ಹೆಚ್ಚು ಜನಪ್ರಿಯ ವಾಹಿನಿಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗಿ ತಿಳಿಯುತ್ತದೆ. ಟಿಆರ್‍ಪಿ ಹೆಚ್ಚಳದಿಂದ ಅತ್ತ ಪ್ರಭುತ್ವ ಸಂತುಷ್ಟವಾಗಿರುತ್ತದೆ. ಇತ್ತ ಜಾಹೀರಾತೂ ಬರುತ್ತದೆ!

ಇನ್ನು ಕಾನೂನಾತ್ಮಕ ವಿಚಾರ: ನಮ್ಮ ದೇಶದ ಅಪರಾಧ ದಂಡ ಸಂಹಿತೆಯ ಮೂರು ಕಲಮುಗಳು-      1. ದೇಶದ್ರೋಹ (ಐಪಿಸಿ 124 ಎ)   2. ಮಾನಹಾನಿ (ಐಪಿಸಿ  505).   3. ಕೋಮು ಸೌಹಾರ್ದ ಕೆಡಿಸುವುದು (ಐಪಿಸಿ 153 ಎ). ನಾಲ್ಕನೆಯದು, ಹಕ್ಕುಚ್ಯುತಿ (ಪ್ರಿವಿಲೆಜ್) ಎಂಬ ಸದನದ ವಿಶೇಷ ಹಕ್ಕು. ಇವೆಲ್ಲವೂ ಪತ್ರಿಕೋದ್ಯಮದ ಸ್ವಾತಂತ್ರ್ಯಕ್ಕೆ ಮಾರಕವಾಗಿವೆ.

ಅತ್ಯಂತ ಅಸ್ಪಷ್ಟವಾದ, 1870ರಲ್ಲಿ ಜಾರಿಗೆ ಬಂದ, ಬ್ರಿಟಿಷ್ ಪ್ರಭುತ್ವಕ್ಕೆ ಅನುಕೂಲಕರವಾಗಿದ್ದ, ದೇಶದ್ರೋಹದ ಕಲಮನ್ನು ಇನ್ನೂ ಇಟ್ಟುಕೊಂಡಿರುವುದಕ್ಕೆ ಏನಾದರೂ ಸಮರ್ಥನೆ ಇರಲು ಸಾಧ್ಯವೇ? 1951ರಲ್ಲಿ ಆಗಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು, “ಈ ಕಾನೂನು ಅತ್ಯಂತ ಆಕ್ಷೇಪಾರ್ಹವಾದುದು ಹಾಗೂ ಅನಿಷ್ಟವಾದುದು. ಇದನ್ನು ನಾವು ಎಷ್ಟು ಬೇಗ ರದ್ದು ಮಾಡುತ್ತೇವೆಯೋ ಅಷ್ಟು ಒಳ್ಳೆಯದು” ಎಂದು ಸಂಸತ್ತಿನಲ್ಲಿ ಹೇಳಿದ್ದರು. ಆದರೆ, ನೆಹರೂ ಅವರಂಥ ಪ್ರಜಾಪ್ರಭುತ್ವವಾದಿಗೂ ಈ ಕಲಮನ್ನು ರದ್ದು ಮಾಡುವುದು ಆಗಲಿಲ್ಲ.

2019ರ ಲೋಕಸಭೆ ಚುನಾವಣೆಯಲ್ಲಿ ಬಿಡುಗಡೆ ಮಾಡಿದ ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ, ಈ ಕಲಮನ್ನು ರದ್ದು ಮಾಡುವುದಾಗಿ ಭರವಸೆ ಕೊಟ್ಟಿತ್ತು! ಇದುವರೆಗೆ ಅದು ನಮ್ಮ ಕಾನೂನಿನ ಭಾಗವಾಗಿ ಉಳಿದಿರುವ ಕಾರಣ, “ಬಾಲ ಬಿಚ್ಚಿದರೆ ಜಡಿಯುತ್ತೇವೆ” ಎಂದು ಬೆದರಿಸಲು ಅಲ್ಲದೇ ಮತ್ತೇನು ಕಾರಣ ಇದ್ದೀತು? ಈ ಕಾನೂನನ್ನು ಪ್ರಭುತ್ವವೇ ಬಳಸಿಕೊಳ್ಳುತ್ತದೆ ಎಂದು ಅಲ್ಲ, ಅದನ್ನು ಆಧರಿಸಿ ದೇಶದ ಯಾವುದಾದರೂ ಮೂಲೆಯಲ್ಲಿ ಕೇಸು ಹಾಕಲು ಯಾರೋ ಒಬ್ಬ ತಲೆತಿರುಕ ಸಿದ್ಧನಿರುತ್ತಾನೆ.

ಪತ್ರಕರ್ತರಿಗೆ ಹಾಗೂ ಪತ್ರಿಕೆಯ ಮಾಲೀಕರಿಗೆ ಇದಕ್ಕಿಂತ ಹೆಚ್ಚು ಕಿರುಕುಳಕಾರಿಯಾದುದು ಮಾನಹಾನಿ ಕಲಮು. ಭಾರತದಲ್ಲಿ ಮಾತ್ರ ಇದು ಸಿವಿಲ್ ಅಪರಾಧವೂ ಹೌದು. ಕ್ರಿಮಿನಲ್ ಅಪರಾಧವೂ ಹೌದು. ಅಂದರೆ, ಒಂದು ತಪ್ಪಿಗೆ ಎರಡು ಶಿಕ್ಷೆ! ಯಾವ ದೇಶದಲ್ಲಿಯೂ ಮಾನಹಾನಿಗೆ ಎರಡು ಶಿಕ್ಷೆಗಳು ಇಲ್ಲ. ಸುಬ್ರಮಣಿಯನ್ ಸ್ವಾಮಿ, ಅರವಿಂದ ಕೇಜ್ರಿವಾಲ್, ರಾಹುಲ್ ಗಾಂಧಿ ಮತ್ತು ರಾಜದೀಪ್ ಸರದೇಸಾಯಿಯವರು, ‘ಮಾನಹಾನಿ ಎನ್ನುವುದು ಕ್ರಿಮಿನಲ್ ಅಪರಾಧವಲ್ಲ’ ಎಂದು ವಾದಿಸಿ ಸುಪ್ರೀಂ ಕೋರ್ಟಿನ ಮೆಟ್ಟಿಲು ಏರಿದ್ದರು. ಆದರೆ, ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಅವರಿಗೆ ನ್ಯಾಯ ಕೊಡಲಿಲ್ಲ. ಸಂವಿಧಾನದಲ್ಲಿನ ಜೀವಿಸುವ ಹಕ್ಕು ಕೊಡುವ ಪರಿಚ್ಛೇದ 21 ಕ್ಕೆ, ವಾಕ್ ಸ್ವಾತಂತ್ರ್ಯದ 19 (2) ಕಲಮಿನಿಂದ ಧಕ್ಕೆ ಬರಬಾರದು ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.

ಯಾವ ಪತ್ರಿಕೆಯ ಮಾಲೀಕರಿಗೆ ತಮ್ಮ ಪತ್ರಿಕೆಯ ವಿರುದ್ಧ ಮಾನಹಾನಿ ಪ್ರಕರಣಗಳು ಒಂದಾದ ನಂತರ ಒಂದು ಬಂದು ಬೀಳಲಿ ಎಂದು ಅಪೇಕ್ಷೆ ಇರುತ್ತದೆ? ಹಕ್ಕುಚ್ಯುತಿಯ ಆರೋಪದ ಮೇಲೆ ಕರ್ನಾಟಕದಲ್ಲಿ ಇಬ್ಬರು ಪತ್ರಕರ್ತರನ್ನು ಒಂದು ವರ್ಷ ಜೈಲಿಗೆ ಕಳಿಸುವ ನಿರ್ಣಯ ಮಾಡಿದ್ದು ತೀರಾ ಈಚಿನ ಮೂರು ನಾಲ್ಕು ವರ್ಷಗಳ ಇತಿಹಾಸ. ಇವೆಲ್ಲ ಮೂಲತಃ ವಾಕ್ ಸ್ವಾತಂತ್ರ್ಯಕ್ಕೆ ಇರುವ ಮಿತಿಗಳು. ಪತ್ರಿಕಾ ಸ್ವಾತಂತ್ರ್ಯದ ಅಧಿಕಾರ ಸಿಕ್ಕಿರುವುದು ವಾಕ್ ಸ್ವಾತಂತ್ರ್ಯದ ಅಡಿಯಲ್ಲಿಯೇ ಎಂಬುದು ನಮಗೆ ನೆನಪು ಇರಬೇಕು. ಹೀಗಾಗಿ ಇವು ಪತ್ರಿಕಾ ಸ್ವಾತಂತ್ರ್ಯಕ್ಕೂ ಇರುವ ಮಿತಿಗಳು ಮತ್ತು ಆ ಸ್ವಾತಂತ್ರ್ಯವನ್ನು ಅಧೀರಗೊಳಿಸುವ ಕಟ್ಟುಪಾಡುಗಳು. ಹಾಗೆಂದು ಪತ್ರಿಕೆಗಳು ಹೆದರಿವೆ ಎಂದು ಅಲ್ಲ. ಎಲ್ಲ ಕಾಲದಲ್ಲಿಯೂ ಅವು ಅಥವಾ ಅವುಗಳಲ್ಲಿ ಕೆಲವು ತಮ್ಮ ಸ್ವಾತಂತ್ರ್ಯವನ್ನು ಚಲಾಯಿಸಿವೆ. ಈಗಲೂ ಚಲಾಯಿಸುತ್ತಿವೆ.

ಪ್ರಭುತ್ವವು ಸರ್ವಾಧಿಕಾರದ ಕಡೆಗೆ ಚಲಿಸುವುದನ್ನು ತಡೆಯುವುದು ಇಂಥ ಸ್ವಾತಂತ್ರ್ಯವೇ. ಒಟ್ಟು ಪತ್ರಿಕೋದ್ಯಮದ ಇತಿಹಾಸದಲ್ಲಿ ಈ ಸಂಘರ್ಷ ಇದ್ದೇ ಇದೆ. ಅಮೆರಿಕಾದಂಥ ಪರಮ ಸ್ವತಂತ್ರ ದೇಶದಲ್ಲಿ, ಹಿಂದಿನ ಅಧ್ಯಕ್ಷ ಟ್ರಂಪ್ ಕಾಲದಲ್ಲಿ, ಪತ್ರಿಕಾ ಸ್ವಾತಂತ್ರ್ಯ ಎದುರಿಸಿದ ಬೆದರಿಕೆ ಕಡಿಮೆಯೇನೂ ಅಲ್ಲ. ಇನ್ನೊಂದು ಅವಧಿಗೆ ಅವರು ಗೆಲ್ಲಲಿಲ್ಲ ಎನ್ನುವುದು ವ್ಯಕ್ತಿ ಸ್ವಾತಂತ್ರ್ಯದಲ್ಲಿ ನಂಬಿಕೆ ಇರುವವರಿಗೆ ಒಂದು ಭರವಸೆಯಲ್ಲವೇ?

ಭಾರತದಲ್ಲಿ ಸದ್ಯ ನ್ಯಾಯಾಲಯ ಮತ್ತು ಕಾರ್ಯಾಂಗದ ನಡುವೆ ನಡೆದಿರುವ ಸಂಘರ್ಷ ಪತ್ರಿಕೋದ್ಯಮವನ್ನು ಪರೋಕ್ಷವಾಗಿ ಬಲಪಡಿಸುವ ಪ್ರಕ್ರಿಯೆಯೇ ಆಗಿದೆ. ಸರ್ವಾಧಿಕಾರೀ ಪ್ರವೃತ್ತಿಯ ವಿರುದ್ಧ ಪ್ರಜಾಪ್ರಭುತ್ವ ಕಂಡುಕೊಳ್ಳುವ ಬಿಡುಗಡೆಯ ದಾರಿಗಳು ಹಲವು. ಮುಂದೆ ಒಂದೊಂದೇ ದಾರಿ ಕಾಣುತ್ತ ಹೋಗುತ್ತವೆ.

ಪತ್ರಿಕೋದ್ಯಮದ ಮೊದಲ ಹಾಗೂ ಕೊನೆಯ ಉದ್ದೇಶ ಜನರ ಹಿತವನ್ನು ಕಾಯುವುದು. ತನ್ನ ಹಿತವನ್ನು ಕಾಯುವ ಪತ್ರಿಕಾ ಸ್ವಾತಂತ್ರ್ಯ ಪರಾಧೀನವಾಗದೇ ಉಳಿಯಬೇಕು ಎಂದರೆ ಜನರೂ ಅದಕ್ಕೆ ತಕ್ಕ ಬೆಲೆ ಕೊಡಲು ಕಲಿಯಬೇಕು. ಸ್ವತಂತ್ರ, ನಿರ್ಭೀತ ಪತ್ರಿಕೋದ್ಯಮ ಸಸ್ತಾ ಸಿಗುವುದಿಲ್ಲ.

*ಲೇಖಕರು ಪ್ರಜಾವಾಣಿಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ನಿವೃತ್ತರು. ನಾಲ್ಕನೇ ಆಯಾಮ (ಆರು ಸಂಪುಟಗಳು), ಹೆಜ್ಜೆ ಮೂಡಿಸಿದ ಹಾದಿ, ಚೌಕಟ್ಟಿನಾಚೆ, ಅವಲೋಕನ, ಆರಂಭ, ಪತ್ರಿಕಾ ಭಾಷೆ, ರಿಪೋರ್ಟಿಂಗ್ ಪ್ರಕಟಿತ ಕೃತಿಗಳು.

Leave a Reply

Your email address will not be published.