ಸ್ವರ್ಗವಾಸಿ ಸಾಹಿತಿಗಳ ರಾಜ್ಯೋತ್ಸವ ಸಿದ್ಧತೆ!

ಇಂದ್ರನು ಆತ್ಮಹತ್ಯೆ ಮಾಡಿಕೊಂಡು ಸಾಯಲಾರದ ತನ್ನ ಅಮರತ್ವಕ್ಕೆ ಶಾಪ ಹಾಕುತ್ತಾ ಗೊಳೋ ಎಂದು ಅಳತೊಡಗಿದ. ಕನ್ನಡದ ಹಿತರಕ್ಷಣೆಗಾಗಿ ನೀವೆಲ್ಲಾ ಮತ್ತೆ ಕರುನಾಡಿನಲ್ಲಿ ಜನ್ಮತಳೆಯಬೇಕು ಎಂದು ಬೇಡಿಕೊಂಡ. ಸ್ವರ್ಗವಾಸಿ ಸಾಹಿತಿಗಳೆಲ್ಲರೂ ತುಂಬು ಸಂತೋಷದಿಂದ ಸಮ್ಮತಿ ಸೂಚಿಸಿದರು!

ಸನ್ ಎರಡ್ಸಾವಿರದ ಹತ್ತೊಂಬತ್ತನೇ ಇಸ್ವಿ ಅಕ್ಟೋಬರ್ ವೀಕೆಂಡಿನಲ್ಲಿ ಸಹಸ್ರಾಕ್ಷನಾದ ಇಂದ್ರನು ಸ್ವರ್ಗದಲ್ಲೊಂದು ಮೀಟಿಂಗ್ ಕರೆದ. ಈ ಮೀಟಿಂಗ್ ವಿಶೇಷ ಏನಪಾ ಅಂದ್ರೆ ಇದು ಕನ್ನಡದ ಸಾಹಿತಿಗಳಿಗೆ, ಕರುನಾಡಿಗಾಗಿ ಜೀವತೇಯ್ದ ಹೃದಯವಂತರಿಗೆ ಮಾತ್ರ ಮೀಸಲಾಗಿತ್ತು. ಇದನ್ನು ನವೆಂಬರ್ ಒಂದನೇ ತಾರೀಖು ಕನ್ನಡ ರಾಜ್ಯೋತ್ಸವದ ಬಗ್ಗೆ ನಡೆಯುವ ಪೂರ್ವಭಾವೀ ಸಭೆ ಅಂತ ಹೇಳಬಹುದಾಗಿತ್ತು.

ಇಂದ್ರ ಬಂದು ಕೂತ ಹತ್ತೇ ನಿಮಿಷಕ್ಕೆ ಒಬ್ಬೊಬ್ಬರೇ ಸಾಹಿತಿಗಳು ಬಂದು ತುಂಬಲಾರಂಭಿಸಿದರು. ಆದಿಕವಿ ಪಂಪನಿಂದ ಹಿಡಿದು ಮೊನ್ನೆ ಮೊನ್ನೆ ತಾನೆ ಹೋಗಿ ದಾಖಲಾಗಿದ್ದ ಗಿರೀಶ್ ಕಾರ್ನಾಡ್ ವರೆಗೂ ಎಲ್ಲರೂ ಬಂದು ಸೇರಿದರು.

ಎಲ್ಲರಿಗೂ ಅವರವರ ಅಭಿರುಚಿಗನುಗುಣವಾಗಿ ಚಾ, ಕಾಫಿ, ಲಿಂಬುಸೋಡ ಮತ್ತು ಅಮೃತಗಳನ್ನು ವಿತರಿಸಲಾಯಿತು. ಪಂಪ, ರನ್ನ, ಹರಿಹರ ರಾಘವಾಂಕರ ಸುತ್ತಲೂ ಆಲನಹಳ್ಳಿ, ಪೇಜಾವರ ಸದಾಶಿವ, ಯರ್ಮುಂಜೆ ಮುಂತಾದವರು ಗುಂಪು ಕಟ್ಟಿಕೊಂಡು ಕುಳಿತಿದ್ದರು. ಕುವೆಂಪು ಮತ್ತು ಅಡಿಗರು ಅಕ್ಕಪಕ್ಕದಲ್ಲಿ ಕೂತಿದ್ದರು. ಹಾಗೇ ಬೇಂದ್ರೆ ಮತ್ತು ಶಂಬಾ ಜೋಷಿ ಅಂಟಿಕೊಂಡು ಕುಳಿತಿದ್ದರು. ತೇಜಸ್ವಿ ಮತ್ತು ಲಂಕೇಶರು ಗಹನವಾಗಿ ಏನನ್ನೋ ಚರ್ಚಿಸುತ್ತಿದ್ದರು. ಡಿವಿಜಿ ಮೂರ್ತಿರಾಯರೊಡನೆ ಕುಳಿತು ನಗುತ್ತಿದ್ದರು. ಯಾವುದೇ ಗುಂಪುಗಾರಿಕೆ ಇಲ್ಲದ ಸಾಹಿತಿಸಮೂಹ ನೋಡಿ ಇಂದ್ರನಿಗೆ ಸಂತೋಷವಾಯಿತು.

ಕನ್ನಡದ ಅಳಿವುಉಳಿವುಗಳ ಬಗ್ಗೆ ದೇವತೆಗಳಂತಹಾ ನೀವು ಚರ್ಚಿಸಿ ಪರಾಂಬರಿಸಬೇಕು ಎಂಬುದೇ ಈ ಸಭೆಯ ಉದ್ದೇಶ’ ಎಂದು ಕೈ ಮುಗಿದ.

ನಿಧಾನವಾಗಿ ಎದ್ದುನಿಂತ ಇಂದ್ರ ಸಾಹಿತಿಗಳಿಗೆ ಕೈಮುಗಿದು ಬಿನ್ನವಿಸಿದ, “ವಿದ್ವಜ್ಜನರೇ, ಕಬ್ಬಿಗರೇ, ಶಕ್ರವಂದ್ಯರೇ, ನಿಮ್ಮ ವೃಂದವನ್ನು ನೋಡಿ ನನಗೆ ಬೆಳ್ದಿಂಗಳಲ್ಲಿ ನೊರೆಹಾಲ ತೊರೆಯಲ್ಲಿ ಮಿಂದು…

“ಮುಚ್ಕೊಂಡು ವಿಷಯಕ್ಕೆ ಬನ್ರೀ” ಲಂಕೇಶರು ಗುಡುಗಿದರು. ಕೆ.ಎಸ್.ನರಸಿಂಹಸ್ವಾಮಿ ಥರಾ ಮಾತನಾಡಬೇಡಿ ಅಂತ ಮೇಷ್ಟ್ರಿಂದ ಬೈಸಿಕೊಂಡ ಇಂದ್ರ ಒಮ್ಮೆ ಮುಖ ಹಿಂಡಿಕೊಂಡು ಮತ್ತೆ ಮುಂದುವರೆಸಿದ.

‘ನೀವೆಲ್ಲ ಇರುವುದರಿಂದಲೇ ಈ ಜಾಗ ಇಂದು ಸ್ವರ್ಗವಾಗಿದೆ. ನೀವೆಲ್ಲ ಇಲ್ಲದೇ ಕರುನಾಡು ನರಕವಾಗಿದೆ. ನೀವು ನೆಟ್ಟ ಕಲ್ಪವೃಕ್ಷ ಇಂದು ನೀರೆರೆಯುವರಿಲ್ಲದೇ ಸೊರಗಿ ಹೋಗುತ್ತಿದೆ. ಹಾಗಾಗಿ ಕನ್ನಡದ ಅಳಿವುಉಳಿವುಗಳ ಬಗ್ಗೆ ದೇವತೆಗಳಂತಹಾ ನೀವು ಚರ್ಚಿಸಿ ಪರಾಂಬರಿಸಬೇಕು ಎಂಬುದೇ ಈ ಸಭೆಯ ಉದ್ದೇಶ’ ಎಂದು ಕೈ ಮುಗಿದ.

ಕನ್ನಡ ಎಂಬ ಪದ ಕಿವಿಯ ಮೇಲೆ ಬೀಳುತ್ತಲೇ ಆದಿಕವಿ ಪಂಪ ತೆಂಕಣ ಗಾಳಿ ಸೋಂಕಿದೊಡಮೊಳ್ನುಡಿಗೇಳ್ದೊಡಮಿಂಪನಾಳ್ದ ಗೇಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಂ ಎನ್ನುತ್ತಾ ಕಣ್ಣಲ್ಲಿ ನೀರು ತುಂಬಿಕೊಂಡ. ಕವಿಯ ಮೃದುಕೋಮಲ ಮನಸನ್ನು ನೋಡಿ ಅಲ್ಲಿದ್ದವರ ಕಣ್ಣೆಲ್ಲಾ ಮಂಜಾಯಿತು.

ತಕ್ಷಣವೇ ರಾಜರತ್ನಂ ಎದ್ದುನಿಂತು, ‘ಸ್ವರ್ಗಕ್ಕೆ ಕರಿಸಿ, ರಂಭೆಯರನು ಕುಣಿಸಿ, ಅಮೃತ ಸುರಿದ್ರೂ ನಮ್ಮ ಕನ್ನಡನಾಡಿನ ದೂಳಿನ ಕಣಕ್ಕೂ ಸಮನಲ್ಲ ಬಿಡ್ರಿ’ ಎಂದು ಎಲ್ಲರನ್ನೂ ನಗಿಸಿ ಸಮಾಧಾನಿಸಿದರು.

ಕರ್ನಾಟಕದಲ್ಲಿ ನಶಿಸುತ್ತಿರುವ ಕನ್ನಡ ಶಾಲೆಗಳ ಬಗ್ಗೆ, ಕೊನೆಯುಸಿರು ಎಳೆಯುತ್ತಿರುವ ಕನ್ನಡ ಪತ್ರಿಕೆಗಳು, ಬೊಂಬಡಾ ಬಜಾಯಿಸುವ ಮಾಧ್ಯಮಗಳ ಬಗ್ಗೆ ದನಿಯೆತ್ತುವವರು ಯಾರೂ ಇಲ್ಲವೇ ಎಂದು ನಿಟ್ಟುಸಿರುಬಿಟ್ಟರು.

ಕುವೆಂಪು ಎದ್ದು ನಿಂತು, `ಪ್ರತಿಯೊಬ್ಬ ಕನ್ನಡಿಗನಲ್ಲೂ ಕನ್ನಡದ ಬಗ್ಗೆ ಕಾಳಜಿ ಮೂಡದೆ ಹೋದರೆ ಕಷ್ಟವಿದೆ. ಕನ್ನಡದಲ್ಲಿ ಏನೂ ಇಲ್ಲ ಎನ್ನುವುದು ಎಷ್ಟು ಮೂರ್ಖತನವೋ, ಕನ್ನಡದಲ್ಲಿ ಎಲ್ಲವೂ ಇದೆ ಎಂದು ಭಾವಿಸುವುದೂ ಅಷ್ಟೇ ಮೂರ್ಖತನ. ಪ್ರಪಂಚದಲ್ಲಿರುವ ಎಲ್ಲಾ ಜ್ಞಾನವೂ ಕನ್ನಡದಲ್ಲಿ ಸಿಗಬೇಕೆಂದು ಆಶಿಸುವ ವಿವೇಚನೆ ನಮ್ಮಲ್ಲಿ ಬೆಳೆದರೆ ಸಾಕು’ ಎಂದು ಎಷ್ಟೋ ವರ್ಷದ ಹಿಂದಿನ ಮಾತನ್ನೇ ಪುನರುಚ್ಚರಿಸಿದರು.

ರಾಷ್ಟ್ರಕವಿಯ ಮಾತು ಕೇಳಿ ಇಂದ್ರನೂ ತಲೆದೂಗಿದ.
ಹಿರಿಯರಾದ ಆಲೂರರು, ವೀಸಿ, ಡಿವಿಜಿ ಮುಂತಾದವರು ಅಂದು ಕಂಡ ವಿದ್ಯುಲ್ಲತೆ ಅದೆಂತು ಮಾಯವಾಯಿತೋ ಎಂದು ಹಳಹಳಿಸಿದರು. ಪ್ರಾಸ್ತಾವಿಕವಾಗಿ ಕನ್ನಡಪರ ಹೋರಾಟ, ಚಳವಳಿಗಳ ಮಾತು ತೇಲಿಬಂತು.

ಅನಕೃ, ನಿರಂಜನ, ಮುಂತಾದವರು ತತ್ವಾಧಾರಿತ ಹೋರಾಟ ಕನ್ನಡಪರ ಕಾಳಜಿ ನಮ್ಮೊಡನೆಯೇ ಮಣ್ಣಾಗಿ ಹೋಯಿತೋ ಏನೋ ಎಂದು ವಿಷಾದಿಸಿದರು. ಕರ್ನಾಟಕದಲ್ಲಿ ನಶಿಸುತ್ತಿರುವ ಕನ್ನಡ ಶಾಲೆಗಳ ಬಗ್ಗೆ, ಕೊನೆಯುಸಿರು ಎಳೆಯುತ್ತಿರುವ ಕನ್ನಡ ಪತ್ರಿಕೆಗಳು, ಬೊಂಬಡಾ ಬಜಾಯಿಸುವ ಮಾಧ್ಯಮಗಳ ಬಗ್ಗೆ ದನಿಯೆತ್ತುವವರು ಯಾರೂ ಇಲ್ಲವೇ ಎಂದು ನಿಟ್ಟುಸಿರುಬಿಟ್ಟರು.

ಈ ಮಾತು ಕೇಳಿದ ಲಂಕೇಶ್ ಕಿಡಿಕಿಡಿಯಾದರು. ‘ನಾನು ಯಾವತ್ತೋ ಹೇಳಿದ್ನಲ್ರೀ, ನಮ್ಮ ನಾಡಿಗೆ ಬೇಕಾಗಿರುವುದು ಉತ್ತಮ ಇಂಗ್ಲಿಷ್ ಕಲಿಸಬಲ್ಲ ಕನ್ನಡ ಶಾಲೆಗಳು ಮತ್ತು ಉತ್ತಮ ಕನ್ನಡ ಕಲಿಸಬಲ್ಲ ಇಂಗ್ಲಿಷ್ ಶಾಲೆಗಳು ಅಂತ. ಇವತ್ತು ಅವೆರಡೂ ಸತ್ತು ಇಲ್ಲೇ ಎಲ್ಲೋ ಓಡಾಡುತ್ತಿರಬೇಕು ನೋಡಿ. ಇನ್ನು ಓರಾಟಕೋರರ ಬಗ್ಗೆಯಂತೂ ಕೇಳಲೇಬೇಡಿ’ ಅಂತ ಕುಪಿತರಾದರು.

‘ಈ ಮಾಧ್ಯಮಗಳು ಆಗಲೇ ಧಾರಾಳವಾಗಿ ಹಿಂದಿ, ಇಂಗ್ಲಿಷ್ ಉಪಯೋಗಿಸಿ ಕನ್ನಡಿಗರನ್ನು ಎರಡನೇ ದರ್ಜೆ ಪ್ರಜೆಗಳಾಗಿಸುತ್ತಿದ್ದರು. ಆ ನಡವಳಿಕೆ ಇನ್ನೂ ನಿಂತಿಲ್ಲವೇನ್ರೀ? ಎಲ್ಲರೂ ಹಲ್ಕಾಗಳು’ ಎಂದು ಪೂರ್ಣಚಂದ್ರ ತೇಜಸ್ವಿ ಎದ್ದು ರೇಗಿದರು.

ಈ ಮಾತು ಕೇಳಿದ ಕೈಲಾಸಂ ನೀವೆಲ್ಲಾ ಸತ್ತಿದ್ದರಿಂದ ಕನ್ನಡಕ್ಕೆ ಆಗಿರುವ ನಷ್ಟಕ್ಕಿಂತ, ಈಗಿನ ಹೋರಾಟಗಾರರು ಬದುಕಿರುವುದರಿಂದ ಆಗುತ್ತಿರುವ ನಷ್ಟವೇ ಹೆಚ್ಚು ಎಂದರು.

ಅನಂತಮೂರ್ತಿ ಎಂದಿನಂತೆ ದಿವ್ಯನಗೆ ಬೀರುತ್ತಾ ಕನ್ನಡ ಅನ್ನ ಕೊಡುವ ಭಾಷೆಯಾಗದಿದ್ದರೆ ಅದರ ಉಳಿವು ಸಾಧ್ಯವಿಲ್ಲ ಎಂದು ಗೊತ್ತಿಲ್ಲವೇನ್ರೀ? ಕನ್ನಡಿಗರಿಗೇ ನೌಕರಿಯಿಲ್ಲದ ಮೇಲೆ, ನಮ್ಮ ನಾಡಿನಲ್ಲೇ ಕನ್ನಡಿಗ ಪರಭಾಷಿಕರ ಮುಂದೆ ಮಂಡಿಯೂರುವ ಸ್ಥಿತಿ ಬಂದ ಮೇಲೆ ಇನ್ನು ಕನ್ನಡಿಗರನ್ನು ಯಾರು ತಾನೇ ಕಾಪಾಡಲು ಸಾಧ್ಯ ಎಂದು ಖಿನ್ನರಾದರು.

‘ಈ ಮಾಧ್ಯಮಗಳು ಆಗಲೇ ಧಾರಾಳವಾಗಿ ಹಿಂದಿ, ಇಂಗ್ಲಿಷ್ ಉಪಯೋಗಿಸಿ ಕನ್ನಡಿಗರನ್ನು ಎರಡನೇ ದರ್ಜೆ ಪ್ರಜೆಗಳಾಗಿಸುತ್ತಿದ್ದರು. ಆ ನಡವಳಿಕೆ ಇನ್ನೂ ನಿಂತಿಲ್ಲವೇನ್ರೀ? ಎಲ್ಲರೂ ಹಲ್ಕಾಗಳು’ ಎಂದು ಪೂರ್ಣಚಂದ್ರ ತೇಜಸ್ವಿ ಎದ್ದು ರೇಗಿದರು.

ತದೇಕ ಚಿತ್ತದಿಂದ ಮಂತ್ರಾಲೋಚನೆಯನ್ನು ಆಲಿಸುತ್ತಿದ್ದ ಇಂದ್ರನು ಮೆಲ್ಲನೆ ಬಾಯ್ತೆರೆದನು.

ನವೆಂಬರ್ ನಲ್ಲಿ ಮಾತ್ರ ಸರ್ಕಾರಿ ಕೃಪಾಪೋಷಿತ ಕನ್ನಡ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಕೆಟ್ಟಚಾಳಿ ಬಿಟ್ಟು ವರ್ಷವಿಡೀ ನಮ್ಮ ಸುಸಂಸ್ಕತ ವೈಭವವನ್ನು ಮೆರೆಸಿ ಎಂದು ಪ್ರತಿಭಟನಾಕಾರರು ಕೂಗುತ್ತಿದ್ದರು.

‘ಮಹನೀಯರೆ ತಾವು ವರ್ಷಾನುಗಟ್ಟಲೆ ಕನ್ನಡದ ನಾಡು ನುಡಿಗಾಗಿ, ನೆಲಜಲಕ್ಕಾಗಿ ತಮ್ಮ ತನು ಮನ ಧನ ಪ್ರಾಣಗಳನ್ನು ಧಾರೆಯೆರೆದಿದ್ದೀರಿ. ತಮ್ಮ ಹಾರೈಕೆಗಳು ಇನ್ನೂ ಕನ್ನಡನಾಡಿನ ಗಾಳಿಯಲ್ಲಿ ಗಂಧದಂತೆ ಬೆರೆತಿವೆ. ನಿಮ್ಮೆಲ್ಲರ ಹಲವು ವರ್ಷಗಳ ತಪಸ್ಸು ಇನ್ನೂ ಫಲ ನೀಡುತ್ತಿದೆ. ನಿಮ್ಮ ಸ್ವಾಭಿಮಾನದ ಕೆಚ್ಚೆದೆಯ ತಪೋಧನವು ಕನ್ನಡಿಗರ ಪಾಲಿಗೆ ಶ್ರೀರಕ್ಷೆಯಾಗಿದೆ. ತಾವೆಲ್ಲರೂ ಇಲ್ಲಿಂದ ಒಮ್ಮೆ ಹಾರೈಸಿದರು ಸಾಕು. ಕನ್ನಡಿಕರ ಎದೆಯಲ್ಲಿ ಅಭಿಮಾನವು ಪ್ರಜ್ವಲಿಸಿ ಮತ್ತೆ ಗತವೈಭವವು ನಳನಳಿಸಲಿದೆ’ ಎಂದು ಹೇಳಿದ.

ಸಾಮೂಹಿಕವಾಗಿ ಎದ್ದುನಿಂತ ಕನ್ನಡ ವಿದ್ವನ್ಮಣಿಗಳು ಹೃದಯಪೂರ್ವಕವಾಗಿ ಕನ್ನಡದ ಶ್ರೇಯಸ್ಸಿಗಾಗಿ ತಮ್ಮ ಆಶಿಸ್ಸುಗಳನ್ನು ಧಾರೆಯೆರೆದರು.
*

ವಿಧಾನಸೌಧದ ಹೊರಗೆ ಪ್ರತಿಭಟನೆ ನಡೆಯುತ್ತಿತ್ತು. ಪರಭಾಷಾ ಹೇರಿಕೆಯ ವಿರುದ್ಧ ಪಕ್ಷಭೇದ ಮರೆತು ಎಲ್ಲರೂ ಒಗ್ಗಟ್ಟಾಗಿ ಹೋರಾಡಿ. ಎಂಜಲಿನಾಸೆಗೆ ನಾಯಿಕೊಡೆಗಳಂಥಾ ಇಂಗ್ಲಿಷ್ ಶಾಲೆಗಳಿಗೆ ಪರವಾನಿಗಿ ಕೊಡುವುದನ್ನು ಇಲ್ಲಿಗೇ ನಿಲ್ಲಿಸಿ. ಕನ್ನಡ ಶಾಲೆಗಳಿಗೆ ಬೀಗ ಜಡಿಯುವುದು ಬಿಟ್ಟು ಸುಸಜ್ಜಿತಗೊಳಿಸಿ. ನವೆಂಬರ್ ನಲ್ಲಿ ಮಾತ್ರ ಸರ್ಕಾರಿ ಕೃಪಾಪೋಷಿತ ಕನ್ನಡ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಕೆಟ್ಟಚಾಳಿ ಬಿಟ್ಟು ವರ್ಷವಿಡೀ ನಮ್ಮ ಸುಸಂಸ್ಕತ ವೈಭವವನ್ನು ಮೆರೆಸಿ ಎಂದು ಪ್ರತಿಭಟನಾಕಾರರು ಕೂಗುತ್ತಿದ್ದರು.

ತೂಕಡಿಸುತ್ತಾ ಕುಳಿತಿದ್ದ ರಾಜಕಾರಣಿಯೊಬ್ಬ ದಿಢೀರನೆ ಎಚ್ಚೆತ್ತು ಹೊರಬಂದು, ‘ಥೂ ನಿಮ್ಮದೂ ಒಂದು ಬಾಳೇನ್ರೀ? ಒಂದು ದೇಶ ಒಂದು ಭಾಷೆ ಎಂಬ ಅಭಿಮಾನವಿಲ್ಲದ ನೀವೆಲ್ಲಾ ಯಾಕೆ ಬದುಕಿರಬೇಕೋ ಕಾಣೆ’ ಎಂದು ಉಗಿದು ಒಳಹೋಗಿ ಮತ್ತೆ ತೂಕಡಿಸಲಾರಂಭಿಸಿದ.
*

ಇಲ್ಲಿನ ಜನರೇ ನಿಮ್ಮೂರಿಗೆ ಬಂದು ಕನ್ನಡದಲ್ಲೇ ಮಾತನಾಡು ಎಂದರೆ ನೀವು ಸಿಟ್ಟಿಗೇಳುವಷ್ಟೇ ಸಹಜವಾಗಿ ಇಲ್ಲಿನ ಜನರೂ ಸಿಟ್ಟಿಗೇಳುವುದು ಸಹಜವೇ ಅಲ್ಲವೇ? ಕನ್ನಡಿಗರ ಮೃದು ಸೌಹಾರ್ದದಿಂದ ಆಸ್ತಿಪಾಸ್ತಿ ಗಳಿಸಿರುವ ನೀವು ಅವರ ಅಸ್ತಿತ್ವಕ್ಕೆ ಸಂಚಕಾರ ತರುವುದು ದ್ರೋಹವಲ್ಲದೇ ಮತ್ತೇನು? ಎಂದು ಪ್ರಶ್ನಿಸುತ್ತಿರುವಷ್ಟರಲ್ಲಿ ಪೋಲಿಸರು ಬಂದು ಗೂಂಡಾಕಾಯ್ದೆಯ ಅಡಿ ಬಂಧಿಸಿ ಅವರನ್ನು ಕಂಬಿಯ ಹಿಂದೆ ತಳ್ಳಿದರು.

ಪುಟ್ಟ ಮಗುವೊಂದು ಕಾನ್ವೆಂಟಿನಲ್ಲಿ ತನ್ನ ತಾತ ಹೇಳಿಕೊಟ್ಟ ಬಣ್ಣದ ತಗಡಿನ ತುತ್ತೂರಿ ಹಾಡಿದ್ದಕ್ಕೆ ದಂಡ ವಿಧಿಸಿದ್ದನ್ನು ವಿರೋಧಿಸಿ ಮಗುವಿನ ಪೋಷಕರು ಮುಖ್ಯ ಶಿಕ್ಷಕರೊಡನೆ ಜಗಳಾಡುತ್ತಿದ್ದರು.

ನಮ್ಮಪ್ಪ, ನಮ್ಮ ತಾತ ಮುತ್ತಾತಂದಿರು ಯಾವ ಭಾಷೆಯಲ್ಲಿ ಗೌರವಾನ್ವಿತವಾಗಿ ಬಾಳಿ ಬದುಕಿ ಕೀರ್ತಿಶೇಷರಾದರೋ ಅದೇ ಭಾಷೆಯನ್ನು ಮಗು ಆಡಿದರೆ ತಪ್ಪೇನು ಎಂದು ವಾದಿಸಿದ ಮಹಾಪರಾಧಕ್ಕಾಗಿ ಆ ಪೋಷಕರಿಗೆ ವಾಗ್ದಂಡನೆ ವಿಧಿಸಿದ ಕಾನ್ವೆಂಟಿನವರು ಇಷ್ಟ ಇಲ್ಲದಿದ್ದರೆ ನಿಮ್ಮ ಮಗುವನ್ನು ಬೇರೆ ಶಾಲೆಗೆ ಸೇರಿಸಿ. ಇಂಥ ಕಂಟ್ರೀ ಬ್ರೂಟ್ ಗಳಿಂದ ನಮ್ಮ ಘನತೆ ಹಾಳಾಗುತ್ತದೆ ಎಂದು ಹೊರದಬ್ಬಿದರು.
*
ಉತ್ತರ ಭಾರತೀಯ ವಣಿಕರ ಸಂಘದ ಅಧ್ಯಕ್ಷರ ಜೊತೆ ಕನ್ನಡದ ಕಟ್ಟಾಳುಗಳು ವಾದಿಸುತ್ತಿದ್ದರು..

ನಿಮ್ಮ ತಾತನ ಕಾಲದಲ್ಲಿ ಹೊಟ್ಟೆಪಾಡಿಗಾಗಿ ಇಲ್ಲಿ ಬಂದು ಸೇರಿಕೊಂಡ ನೀವು ಇನ್ನೂ ಇಲ್ಲಿನ ಭಾಷೆ, ಸಂಸ್ಕತಿಯನ್ನು ಗೌರವಿಸುವುದು ಕಲಿತಿಲ್ಲವೆಂದರೆ ನಾಚಿಕೆಗೇಡಲ್ಲವೇ. ಯಾರೋ ಬಂದು ನಿಮ್ಮ ಅಂಗಡಿಯ ನಾಮಫಲಕಕ್ಕೆ ಮಸಿ ಬಳಿಯುವವರೆಗೂ ಕಾಯಬೇಕೆ? ಇಲ್ಲಿನ ಜನರೇ ನಿಮ್ಮೂರಿಗೆ ಬಂದು ಕನ್ನಡದಲ್ಲೇ ಮಾತನಾಡು ಎಂದರೆ ನೀವು ಸಿಟ್ಟಿಗೇಳುವಷ್ಟೇ ಸಹಜವಾಗಿ ಇಲ್ಲಿನ ಜನರೂ ಸಿಟ್ಟಿಗೇಳುವುದು ಸಹಜವೇ ಅಲ್ಲವೇ? ಕನ್ನಡಿಗರ ಮೃದು ಸೌಹಾರ್ದದಿಂದ ಆಸ್ತಿಪಾಸ್ತಿ ಗಳಿಸಿರುವ ನೀವು ಅವರ ಅಸ್ತಿತ್ವಕ್ಕೆ ಸಂಚಕಾರ ತರುವುದು ದ್ರೋಹವಲ್ಲದೇ ಮತ್ತೇನು? ಎಂದು ಪ್ರಶ್ನಿಸುತ್ತಿರುವಷ್ಟರಲ್ಲಿ ಪೋಲಿಸರು ಬಂದು ಗೂಂಡಾಕಾಯ್ದೆಯ ಅಡಿ ಬಂಧಿಸಿ ಅವರನ್ನು ಕಂಬಿಯ ಹಿಂದೆ ತಳ್ಳಿದರು.

ಸೆಟಲ್‍ಮೆಂಟ್ ಆಗೋತನಕ ಬಿಡಬೇಡಿ. ಯಾವನಾದರೂ ಕಮಕ್ ಕಿಮಕ್ ಅಂತ ಉಸಿರೆತ್ತಿದರೆ ಕನ್ನಡ ವಿರೋಧಿಯ ಪಟ್ಟ ಕಟ್ಟಿ. ಬೋರ್ಡುಗಳಿಗೆ ಮಸಿ ಬಳಿಯಿರಿ. ನಿಮ್ಮ ಮಕ್ಕಳನ್ನು ಇಂಗ್ಲಿಷ್ ಮಿಡಿಯಂಗೇ ಸೇರಿಸಿ. ಯಾವನು ನಮ್ಮನ್ನ ಕೇಳುತ್ತಾನೋ ನೋಡೋಣ ಎಂದು ಆರ್ಭಟಿಸುತ್ತಿದ್ದ.

*
ಕನ್ನಡದ ಹೆಸರಿನಲ್ಲಿ ಗೂಂಡಾಗಿರಿ, ಮೋಜು ಮಸ್ತಿ ನಡೆಸುತ್ತಾ ಕತ್ತಿನ ಸುತ್ತಾ ಕೆಂಪು ಹಳದಿ ವಸ್ತ್ರವನ್ನು ಸುತ್ತಿಕೊಂಡು, ನಾಲ್ಕೈದು ಉಂಗುರ ಧರಿಸಿ ಯಾವುದೋ ಕಳಪೆ ದೂರದರ್ಶನ ವಾಹಿನಿಯಲ್ಲಿ ಅಟ್ಟಹಾಸ ಮಾಡುತ್ತಿದ್ದ ಕನ್ನಡಪರ ಹೋರಾಟಗಾರ ತನ್ನ ಹಿಂಬಾಲಕರಿಗೆ ಆದೇಶಿಸುತ್ತಿದ್ದ. ಕನ್ನಡ ಉಳಿಸುವುದಾಗಲೀ, ಬೆಳೆಸುವುದಾಗಲೀ, ಬಳಸುವುದಾಗಲೀ ನಮ್ಮ ಕೆಲಸವಲ್ಲ.

ತಮಿಳು, ತೆಲುಗು, ಹಿಂದಿಯವರು ಕಂಡರೆ ಹಿಡಕೊಂಡು ಒದೀರಿ. ಸೆಟಲ್‍ಮೆಂಟ್ ಆಗೋತನಕ ಬಿಡಬೇಡಿ. ಯಾವನಾದರೂ ಕಮಕ್ ಕಿಮಕ್ ಅಂತ ಉಸಿರೆತ್ತಿದರೆ ಕನ್ನಡ ವಿರೋಧಿಯ ಪಟ್ಟ ಕಟ್ಟಿ. ಬೋರ್ಡುಗಳಿಗೆ ಮಸಿ ಬಳಿಯಿರಿ. ನಿಮ್ಮ ಮಕ್ಕಳನ್ನು ಇಂಗ್ಲಿಷ್ ಮಿಡಿಯಂಗೇ ಸೇರಿಸಿ. ಯಾವನು ನಮ್ಮನ್ನ ಕೇಳುತ್ತಾನೋ ನೋಡೋಣ ಎಂದು ಆರ್ಭಟಿಸುತ್ತಿದ್ದ.

ಅವನಿಗೆ ಆ ವರ್ಷದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯ್ತು.

*
ಇದನ್ನೆಲ್ಲಾ ನೋಡುತ್ತಿದ್ದ ಇಂದ್ರನು ಆತ್ಮಹತ್ಯೆ ಮಾಡಿಕೊಂಡು ಸಾಯಲಾರದ ತನ್ನ ಅಮರತ್ವಕ್ಕೆ ಶಾಪ ಹಾಕುತ್ತಾ ಗೊಳೋ ಎಂದು ಅಳುತ್ತಾ ಕನ್ನಡದ ಹಿತರಕ್ಷಣೆಗಾಗಿ ನೀವೇ ಮತ್ತೆ ಕರುನಾಡಿನಲ್ಲಿ ಜನ್ಮತಳೆಯಬೇಕು ಎಂದು ಬೇಡಿಕೊಂಡ. ಎಲ್ಲರೂ ತುಂಬು ಸಂತೋಷದಿಂದ ಸಮ್ಮತಿ ಸೂಚಿಸಿದರು.

ಕನ್ನಡದ ಲಾಲಿ ಜೋಗುಳ ಕೇಳುತ್ತಾ ಮಲಗಿದ್ದ ತೊಟ್ಟಿಲ ಕೂಸೊಂದು ನಿದ್ದೆಯಲ್ಲೇ ಮುಗುಳ್ನಗೆ ಬೀರಿತು.

Leave a Reply

Your email address will not be published.