ಸ್ವಸ್ಥ ಸಮಾಜಕ್ಕಾಗಿ ಅರಣ್ಯ ಮತ್ತು ಜೀವಿವೈವಿಧ್ಯ!

ಎಲ್ಲಾ ಸಮಸ್ಯೆಗಳಿಗೂ ಮೂಲ ಕಾರಣ ಬೆಳೆಯುತ್ತಿರುವ ಜನಸಂಖ್ಯೆ. ಬೆಳೆಯುತ್ತಿರುವ ಜನಸಂಖ್ಯೆಯ ಅವಶ್ಯಕತೆಗಳನ್ನು ಪೂರೈಸಲು ಎಷ್ಟು ನೈಸರ್ಗಿಕ ಸಂಪತ್ತಿದ್ದರೂ ಸಾಲದು. ಸೀಮಿತವಾಗಿ ಇರುವ ಭೂಪ್ರದೇಶವನ್ನು ಅನಿಯಂತ್ರಿತವಾಗಿ ಅಗೆಯುತ್ತಾ ಹೋದರೆ, ಮುಂದಿನ ಪೀಳಿಗೆ ಏನು ಮಾಡಬೇಕು?

ಜಗತ್ತಿನಲ್ಲಿ ಅತ್ಯಂತ ಹೆಚ್ಚು ಜೀವಿವೈವಿಧ್ಯ ಹೊಂದಿದ ಪ್ರದೇಶಗಳಲ್ಲಿ ಅತಿಮುಖ್ಯವಾದದು ಭಾರತ ಒಕ್ಕೂಟದಲ್ಲಿರುವ ಪಶ್ಚಿಮಘಟ್ಟಗಳು. ಅದರಲ್ಲೂ ಪಶ್ಚಿಮಘಟ್ಟಗಳ ಹೆಚ್ಚು ವ್ಯಾಪ್ತಿ ಕರ್ನಾಟಕದಲ್ಲೇ ಇದೆ. ಇದು ನಮಗೆ ಹೆಮ್ಮೆಯ ವಿಷಯವಾಗಬೇಕಿತ್ತು. ದುರದೃಷ್ಟವೆಂದರೆ, ನಮ್ಮನ್ನಾಳುವವರು ಪಶ್ಚಿಮಘಟ್ಟಗಳನ್ನು ಪರಮಶತ್ರುವಂತೆ ನೋಡುತ್ತಿದ್ದಾರೆ.

ನಾಡಿನ ಸಮಸ್ತ ಜನರಿಗೆ ಶುದ್ಧಗಾಳಿ ಮತ್ತು ನೀರು ನೀಡುವ ಪಶ್ಚಿಮಘಟ್ಟಗಳು ನಿಸರ್ಗ ನೀಡಿದ ವರದಾನವೇ ಸರಿ. ಸದಾ ಓಟಿನ ರಾಜಕಾರಣ ಮಾಡುವ ಆಳುವವರು ಇದೇ ಪಶ್ಚಿಮಘಟ್ಟಗಳನ್ನು ಮನುಕುಲದ ಶತ್ರುವೆಂಬಂತೆ ಬಿಂಬಿಸಲು ಹೊರಟಿರುವುದು ಮಾನವೀಯತೆಯು ಅಧೋಗತಿಗಿಳಿದಿದ್ದಕ್ಕೆ ಸಾಕ್ಷಿಯಾಗಿದೆ. ಯಾವುದೇ ಶುಲ್ಕ ವಿಧಿಸದೇ ಶುದ್ಧಗಾಳಿ ಮತ್ತು ನೀರು ನೀಡುವ ಅರಣ್ಯಗಳು ವಿವಿಧ ಅಭಿವೃದ್ಧಿ ಕೆಲಸಗಳಿಗೆ, ಕೃಷಿಭೂಮಿ, ಪಟ್ಟಣ ವಿಸ್ತರಣೆ, ಹೆದ್ದಾರಿ, ರೈಲು ಮಾರ್ಗ ಮುಂತಾದ ಕಾರಣಗಳಿಂದಾಗಿ ಕಡಿಮೆಯಾಗುತ್ತಲೇ ಇದೆ. ಅತಿಯಾಗಿ ಬೆಳೆಯುತ್ತಿರುವ ಜನಸಂಖ್ಯೆ ಮತ್ತು ಸಾಮೂಹಿಕ ಪರಿಸರ ಸಾಕ್ಷರತೆಯ ಕೊರತೆಯಿಂದಾಗಿ ಕಾಡು ಕ್ಷೀಣಿಸುತ್ತಲೇ ಇದೆ. ಯಾವ ವಿಭಾಗದಲ್ಲೂ ಸುಸ್ಥಿರ ಅಭಿವೃದ್ಧಿಯ ಕಲ್ಪನೆಯಿಲ್ಲ. ಅನಗತ್ಯವಾದ, ಅನಾವಶ್ಯಕವಾದ ಅಭಿವೃದ್ಧಿಗೆ ಮಣೆ ಹಾಕುವವರ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಿದೆ. ಹೀಗೆ ಮಣೆ ಹಾಕುವವರ ಆದಾಯದ ಸೂಚ್ಯಂಕ ಏರುತ್ತಿರುವ ಹೊತ್ತಿನಲ್ಲೇ ಸಾಮೂಹಿಕ ಆರೋಗ್ಯ ಮತ್ತು ನೆಮ್ಮದಿಯ ಸೂಚ್ಯಂಕ ಪಾತಾಳಕ್ಕಿಳಿಯುತ್ತಿದೆ.

ಸುಮಾರು 30 ಲಕ್ಷ ಬಲಿತ ಮರಗಳನ್ನು ಹನನ ಮಾಡಿ ಅಭಿವೃದ್ಧಿಗೊಳಿಸುವ 25 ಯೋಜನೆಗಳು ಪಶ್ಚಿಮಘಟ್ಟಗಳ ಪ್ರದೇಶದಲ್ಲಿ ಹೊಂಚಿ ಕುಳಿತಿವೆ. ಈಗಾಗಲೇ ಅಂಧಾದುಂಧಿ ಅಭಿವೃದ್ಧಿಗಾಗಿ ಹಲವು ಲಕ್ಷ ಮರಗಳನ್ನು ಲೆಕ್ಕವಿಲ್ಲದಷ್ಟು ಗಿಡ-ಬಳ್ಳಿಗಳನ್ನು ನಾಶ ಮಾಡಲಾಗಿದೆ. ದಾರುಣವಾಗಿ ಅಳಿದುಹೋದ ಜೀವಿವೈವಿಧ್ಯದ ಲೆಕ್ಕ ಯಾರ ಬಳಿಯೂ ಇಲ್ಲ. ಇಡೀ ಬೆಂಗಳೂರಿನ ಸಾಮಾನ್ಯ ಆರೋಗ್ಯವನ್ನು ಕಾಪಾಡುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯನ್ನು 100 ಚ.ಕಿ.ಮೀಟರ್ ಕಡಿತಗೊಳಿಸುವ ಆದೇಶ ಬಂದಿದೆ. ಕಾಡಿನಲ್ಲಿರುವ ಪ್ರಾಣಿಗಳು ಬದುಕುಳಿಯುವ ಸಾಧ್ಯತೆ ತೀರಾ ಕಮ್ಮಿ. ಅಂತೂ ಗಣಿ ಮತ್ತು ರಿಯಲ್ ಎಸ್ಟೇಟ್ ಲಾಬಿಗಳು ಬನ್ನೇರುಘಟ್ಟದ 100 ಚ.ಕಿ.ಮೀಟರ್ ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿವೆ. ಸರ್ಕಾರದ ಈ ಕ್ರಮ ಒಂದು ಐತಿಹಾಸಿಕ ದುರಂತವಾಗಿ ದಾಖಲಾಗಲಿದೆ.

ಒಂದು ಮರದ ಬೆಲೆ ಎಷ್ಟು?
ಒಂದು ಬಲಿತ ಮರ ಅಂದರೆ, 50 ಟನ್ ತೂಗುವ 50 ವರ್ಷ ವಯಸ್ಸಿನ ಮರದ ನೈಸರ್ಗಿಕ ಸೇವೆಯನ್ನು ಹಣದ ರೂಪದಲ್ಲಿ ಅಳೆಯುವುದಾದರೆ…
ಒಂದು ಜೀವಂತ ಮರದ ಬೆಲೆ ಸುಮಾರು ಹದಿನಾರು ಲಕ್ಷ ರೂಪಾಯಿ ಆಗುತ್ತದೆ. ವಿವರ ಹೀಗಿದೆ: ವರ್ಷಕ್ಕೆ 1000 ಕೆ.ಜಿ. ಆಮ್ಲಜನಕ ಉತ್ಪಾದನೆ ರೂ.2.5 ಲಕ್ಷ, ವಾಯುಮಾಲಿನ್ಯ ನಿಯಂತ್ರಣ ಮತ್ತು ವಾತಾವರಣದ ಸ್ವಚ್ಛತೆ ರೂ.5 ಲಕ್ಷ, ಮಳೆನೀರು ಇಂಗಿಸುವಲ್ಲಿ ರೂ.2.5 ಲಕ್ಷ, ಮಣ್ಣಿನ ಸವಕಳಿ ತಡೆಯುವಲ್ಲಿ ರೂ.2.5 ಲಕ್ಷ, ಜೀವಿವೈವಿಧ್ಯಕ್ಕೆ ಆಶ್ರಯ ನೀಡುವಲ್ಲಿ ರೂ.2.5 ಲಕ್ಷ ಹಾಗೂ ಜಾನುವಾರುಗಳಿಗೆ ಮೇವಿನ ರೂಪದಲ್ಲಿ ರೂ.1 ಲಕ್ಷ. (ಆಧಾರ ಜೆಮ್ಸ್ ವರ್ಲ್ಡ್ ಆಫ್ ನಾಲೆಜ್: ಪುಟ ಸಂಖ್ಯೆ 49).
ಉದಾಹರಣೆಯಾಗಿ ತುಮಕೂರು ಹಾಗೂ ಶಿವಮೊಗ್ಗ ಮಧ್ಯದಲ್ಲಿ ಭದ್ರಾವತಿ ಅರಣ್ಯ ಉಪವಿಭಾಗದ ವ್ಯಾಪ್ತಿಯಲ್ಲಿ ರಾಷ್ಟಿçÃಯ ಚತುಷ್ಪಥ ಹೆದ್ದಾರಿ (53 ಕಿಲೋಮೀಟರ್) ನಿರ್ಮಾಣಕ್ಕಾಗಿ 3368 ಬಲಿತ ಮರಗಳನ್ನು ಕಡಿಯಲು ಗುತ್ತಿಗೆದಾರರನ್ನು ಆಹ್ವಾನಿಸಿದ್ದಾರೆ. 3368 ಸಂಖ್ಯೆಯ ಮರಗಳನ್ನು 16 ಲಕ್ಷದಿಂದ ಗುಣಿಸಿದರೆ ಸಿಗುವ ಮೊತ್ತ ರೂ.5388800000. ಇದೇ ತರಹದಲ್ಲಿ ಪಶ್ಚಿಮಘಟ್ಟದಲ್ಲಿ 30 ಲಕ್ಷ ಬಲಿತ ಮರಗಳ ಹತ್ಯೆಯಾದಲ್ಲಿ, ಮರಗಳು ನೀಡುವ ನೈಸರ್ಗಿಕ ಸೇವೆಯನ್ನು ಪಡೆಯುವ ಬದಲಾಗಿ ಹಣ ತೆತ್ತು ಪಡೆಯಬೇಕಾದ ಪರಿಸ್ಥಿತಿ ಬಂದೀತು. ಅಷ್ಟೊಂದು ಹಣ ಯಾರಲ್ಲಿದೆ?

ರಾಜ್ಯ ಬಜೆಟ್ಟಿನ ಶೇ.0.67% ಮಾತ್ರದಷ್ಟು ಹಣವನ್ನು ಅರಣ್ಯ ಉಳಿಸುವ ಮತ್ತು ಬೆಳೆಸುವ ಇಲಾಖೆಗೆ ನೀಡಲಾಗುತ್ತಿದೆ. ಇಷ್ಟು ಅಲ್ಪ ಮೊತ್ತದ ಹಣದ ಸಿಂಹಪಾಲು ಅರಣ್ಯ ಭವನದ ಬಿಳಿಯಾನೆಗಳ ಸೇವೆಗಳಿಗೆ ವಿನಿಯೋಗವಾಗುತ್ತದೆ. ನಿಜವಾಗಲೂ ಅರಣ್ಯವನ್ನು ರಕ್ಷಿಸುವ ಕೆಳಹಂತದ ನೌಕರರಿಗೆ ಯಾವುದೇ ಭದ್ರತೆ ಇಲ್ಲದ ವಿಚಿತ್ರವಾದ ಸನ್ನಿವೇಶವಿದೆ. ಪಕ್ಷಾತೀತವಾಗಿ ಇಡೀ ವಿಧಾನಸೌಧವೇ ಅರಣ್ಯ ಇಲಾಖೆಯನ್ನು ಜರೆಯಲು ಬಳಸಿಕೊಳ್ಳುತ್ತಿರುವುದು ಸಾಮೂಹಿಕ ವಿನಾಶಕ್ಕೆ ಮುನ್ನುಡಿಯಂತಿದೆ.
ಹವಾಗುಣ ಬದಲಾವಣೆ, ಜಾಗತಿಕ ತಾಪಮಾನ ಏರಿಕೆಯಿಂದಾಗಿ, ನೆರೆ ಮತ್ತು ಬರ ಏಕಕಾಲಕ್ಕೆ ಸಂಭವಿಸುತ್ತಿವೆ. ಕಾಡಿನ ಬೆಂಕಿ, ಬಿರುಗಾಳಿ, ಚಂಡಮಾರುತಗಳ ಆವರ್ತನ ಮತ್ತು ತೀವ್ರತೆ ಗಣನೀಯವಾಗಿ ಹೆಚ್ಚುತ್ತಿದೆ. ನೆರೆಯಿಂದ ಮನೆ ಮಠ ಕಳೆದುಕೊಳ್ಳುತ್ತಿರುವವರ ಮತ್ತು ಬರದಿಂದ ಬಳಲುತ್ತಿರುವವರ ಸಂಖ್ಯೆ ಏರುಗತಿಯಲ್ಲಿದೆ. ನೈಸರ್ಗಿಕ ವಿಕೋಪಕ್ಕೆ ಸುಲಭಕ್ಕೆ ತುತ್ತಾಗುವವರು ಜನಸಾಮಾನ್ಯರು, ಬಡವರು, ಆರ್ಥಿಕವಾಗಿ ಹಿಂದುಳಿದವರು, ದಲಿತರೇ ಆಗಿರುತ್ತಾರೆ.

ವಾತಾವರಣದಲ್ಲಿನ ಬಿಸಿಯೇರಿಕೆಯನ್ನು ತಡೆಗಟ್ಟಲು, ಕಡಿಮೆ ಮಾಡಲು ಇರುವ ಏಕೈಕ ಸುಲಭದ ದಾರಿಯೆಂದರೆ, ಇರುವ ಅರಣ್ಯ ಪ್ರದೇಶಗಳನ್ನು ಉಳಿಸಿಕೊಳ್ಳುವುದು ಮತ್ತು ಅರಣ್ಯ ಪ್ರದೇಶವನ್ನು ಹೆಚ್ಚಳ ಮಾಡುವುದು ಎಂಬುದು ಜಾಗತಿಕ ಹವಾಮಾನ ತಜ್ಞರ ಏಕಾಭಿಪ್ರಾಯವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಲಕ್ಷಾಂತರ ಮರಗಳನ್ನು ಕಳೆದುಕೊಳ್ಳುತ್ತಿರುವುದು ಸಾಮೂಹಿಕ ಆತ್ಮಹತ್ಯಾಕಾರಕವಾಗಿದೆ.

ಸಾಮೂಹಿಕ ಆರೋಗ್ಯ ಮತ್ತು ನೆಮ್ಮದಿಯ ಬದುಕಿಗೆ ಗುಡ್ಡಗಾಡು ಪ್ರದೇಶಗಳಲ್ಲಿ 66% ಹಾಗೂ ಸಮತಟ್ಟಾದ ಪ್ರದೇಶದಲ್ಲಿ 33% ಅರಣ್ಯವಿರಲೇ ಬೇಕು ಎಂದು ರಾಷ್ಟಿಯ ಅರಣ್ಯ ನೀತಿ ಹೇಳುತ್ತದೆ. ಅರಣ್ಯ ಇಲಾಖೆಯ ಲೆಕ್ಕದಲ್ಲಿ ಈ ಪ್ರಮಾಣ 22% ಇದೆ. ವಾಸ್ತವಿಕವಾಗಿ ಈ ಪ್ರಮಾಣ ಇನ್ನೂ ಕಡಿಮೆ ಇದೆ. ಏಕಜಾತಿಯ ನೆಡುತೋಪುಗಳ ಹಸುರು ಕವಚಗಳನ್ನೂ ಸೇರಿಸಿ 22% ಅರಣ್ಯ ಪ್ರದೇಶವಿದೆ ಎಂದು ಇಲಾಖೆ ಹೇಳುತ್ತದೆ. ಯಾವುದೇ ಏಕಜಾತಿಯ ನೆಡುತೋಪನ್ನು ಅರಣ್ಯವೆಂದು ಪರಿಗಣಿಸಲು ಬರುವುದಿಲ್ಲ. ಅರಣ್ಯ ಪ್ರದೇಶ ನಿಗದಿತ ಪ್ರಮಾಣದಲ್ಲಿದ್ದಾಗ ಮಾತ್ರ ಆಹಾರ ಭದ್ರತೆ, ಜಲಭದ್ರತೆ, ಮಾಲಿನ್ಯರಹಿತ ಆಮ್ಲಜನಕದ ಲಭ್ಯತೆ ಇತ್ಯಾದಿಗಳ ಕುರಿತಾಗಿ ಚಿಂತೆ ಮಾಡುವ ಅಗತ್ಯವಿರುವುದಿಲ್ಲ. ನೈಸರ್ಗಿಕ ವಿಕೋಪಗಳ ಆವರ್ತನ ಮತ್ತು ತೀವ್ರತೆ ಸಮಾಜವನ್ನು ಬಾಧಿಸುವುದಿಲ್ಲ.

ಹಾಲಿ ಕರ್ನಾಟಕದ ಅರಣ್ಯ ಪರಿಸ್ಥಿತಿಯನ್ನು ಅವಲೋಕನ ಮಾಡಿದಲ್ಲಿ, ಆಶಾದಾಯಕವಾದ ಯಾವ ಅಂಶವೂ ಕಾಣುತ್ತಿಲ್ಲ. ಅಭಿವೃದ್ಧಿ ಹೆಸರಿನ ಪರಿಸರ ನಾಶ ಮತ್ತು ಭ್ರಷ್ಟಾಚಾರದ ವಿರಾಟ್ ಸ್ವರೂಪವನ್ನು ಏಕಕಾಲಕ್ಕೆ ಉದಾಹರಿಸುವುದಾದಲ್ಲಿ ಎತ್ತಿನಹೊಳೆ ಯೋಜನೆ ಮೊದಲಿಗೆ ಬರುತ್ತದೆ. ನೇತ್ರಾವತಿ ಮತ್ತು ಅದರ 9 ಉಪನದಿಗಳು ಈ ದಾರುಣ ಯೋಜನೆಯ ಕಾರಣಕ್ಕೆ ಬತ್ತಿಹೋಗಿವೆ. ಜನರ ತೆರಿಗೆ ಹಣದ ಸಾವಿರಾರು ಕೋಟಿ ರೂಪಾಯಿಗಳು ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳ ಜೇಬನ್ನು ತುಂಬಿಸಿವೆ. “ಕುಡಿಯುವ ನೀರು” ಎಂಬ ಕಾರಣಕ್ಕೆ ರಾಷ್ಟಿಯ ಹಸಿರು ನ್ಯಾಯಮಂಡಳಿ ಕೂಡ ಹೋರಾಟಗಾರರ ಬೆಂಬಲಕ್ಕೆ ಬರಲಿಲ್ಲ. ಇದೇ ಕುಡಿಯುವ ನೀರು ಮಾದರಿಯಲ್ಲಿ ಶಿವಮೊಗ್ಗ ಜಿಲ್ಲೆಯ ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಬೃಹತ್ ಗಾತ್ರದ ಯೋಜನೆ ತಯಾರಾಗುತ್ತಿದೆ. ಪ್ರಪಂಚದಲ್ಲಿ ನದಿ ತಿರುವು ಯೋಜನೆ ಫಲಪ್ರದÀವಾದ ಒಂದೇ ಒಂದು ಉದಾಹರಣೆಯಿಲ್ಲ. ಬದಲಿಗೆ ತಿರುಗಿಸಿದ ನದಿಯು ತನ್ನ ಕೊನೆ ಉಸಿರೆಳದ ಉದಾಹರಣೆಗಳು ಸಿಗಬಹುದು.

ರಾಜ್ಯವೆಂದರೆ ಬೆಂಗಳೂರು ಮಾತ್ರ ಎಂದು ಭಾವಿಸುವ ಸರ್ಕಾರಗಳು ಮತ್ತು ಅಧಿಕಾರಿಗಳು ಎಲ್ಲಾ ಸೌಲತ್ತನ್ನು ಮಾಯನಗರಿಗೆ ಒದಗಿಸಲು ಯೋಜನೆಗಳನ್ನು ರೂಪಿಸುತ್ತಾರೆ. ಬೆಂಗಳೂರಿನ ಐಷಾರಾಮಿ ಮಾಲೊಂದರಲ್ಲಿ ಬಳಸುವ ವಿದ್ಯುತ್ತನ್ನು ಇಡೀ ಒಂದು ಪಂಚಾಯ್ತಿಯ ವ್ಯಾಪ್ತಿಯ ಹಳ್ಳಿಗಳಿಗೆ ನೀಡಬಹುದು. ಎಲ್ಲಾ ತರಹದ ನೈಸರ್ಗಿಕ ಸಂಪನ್ಮೂಲಗಳು ಮಹಾನಗರಗಳ ಹಸಿವನ್ನು ತಣಿಸುವಲ್ಲಿ ಬಳಕೆಯಾದರೆ, ಕ್ರಮೇಣ ಹಳ್ಳಿಗಳು ಖಾಲಿಯಾಗುತ್ತವೆ. ಜೂನ್ ಐದರಂದು ಗಿಡ ನೆಟ್ಟು, ಭಾಷಣ ಬಿಗಿಯುವುದರಿಂದಾಗಲೀ ಅಥವಾ ಅರಣ್ಯ ದಿನ, ಜಲ ದಿನವೆಂದು ಆಚರಣೆ ಮಾಡುವುದರಿಂದಾಗಲೀ ಅರಣ್ಯ ಪ್ರದೇಶ ಹಿಗ್ಗುವುದಿಲ್ಲ.

ನೈಸರ್ಗಿಕ ಅರಣ್ಯ ಬೆಳೆಸುವ ಜವಾಬ್ದಾರಿಯನ್ನು ನಿಸರ್ಗ ವನ್ಯಜೀವಿಗಳಿಗೆ ಮತ್ತು ಪಕ್ಷಿಗಳಿಗೆ ನೀಡಿದೆ. ಅವುಗಳ ಆವಾಸಸ್ಥಾನವನ್ನು ರಕ್ಷಣೆ ಮಾಡುವುದರಿಂದಾಗಿ ಹೊಸ ಕಾಡು ಹುಟ್ಟುತ್ತದೆ. ಒಂದು ಮಂಗಟ್ಟೆ ಹಕ್ಕಿ ತನ್ನ ಜೀವಿತಾವಧಿಯಲ್ಲಿ 20 ಸಾವಿರ ಗಿಡಗಳನ್ನು ನೆಡುತ್ತದೆ, ಈ ಕೆಲಸವನ್ನು ಅರಣ್ಯ ಇಲಾಖೆ ಮಾಡಬೇಕೆಂದರೆ ಅದಕ್ಕೆ ಕೋಟ್ಯಾಂತರ ರೂಪಾಯಿಗಳು ಖರ್ಚಾಗುತ್ತದೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಸರ್ಕಾರ ಮತ್ತು ಇಲಾಖೆ ನಡೆದುಕೊಳ್ಳುತ್ತಿದೆ. ಭಾರತದ ಭೌಗೋಳಿಕ ಪ್ರದೇಶದ ಬರೀ 4% ವಿಸ್ತೀರ್ಣವನ್ನು ಮಾತ್ರ ವನ್ಯಜೀವಿಗಳಿಗೆ ಮೀಸಲಾಗಿಡಲಾಗಿದೆ. ಆ ಪ್ರದೇಶದಲ್ಲೂ ಜನ ಚಟುವಟಿಕೆ ನಡೆಯುತ್ತಿದೆ.

ಇಂತಹ ಸಂಕೀರ್ಣ ಪರಿಸ್ಥಿತಿಯಲ್ಲಿ ವನ್ಯಜೀವಿಗಳ ಆವಾಸಸ್ಥಾನವನ್ನು ಕಿರಿದುಗೊಳಿಸುವುದಾಗಲೀ ಅಥವಾ ಆ ಪ್ರದೇಶದಲ್ಲಿ ರೈಲು ರಸ್ತೆ ಮಾರ್ಗಗಳನ್ನು ನಿರ್ಮಿಸುವುದಾಗಲೀ ಮಾನವೀಯತೆಯ ವಿರೋಧಿ ನಡೆಯಾಗುತ್ತದೆ. ನಮ್ಮ ಅಭಿವೃದ್ಧಿಯ ಕಲ್ಪನೆ ಬದಲಾಗಬೇಕು. ಬದುಕು ಮತ್ತು ಬದುಕಲು ಬಿಡು ಎಂಬ ತತ್ವವನ್ನು ಎಲ್ಲರೂ ಅಳವಡಿಸಿಕೊಂಡರೆ ಮಾತ್ರ ಮನುಷ್ಯನ ಭವಿಷ್ಯ ಉತ್ತಮವಾದೀತು. ಇಲ್ಲವಾದಲ್ಲಿ ಚಿಪ್ಪು ಹಂದಿಯಲ್ಲಿರುವ ಕೋವಿಡ್ ನಂತಹ ಇನ್ನೂ ಲಕ್ಷಾಂತರ ವೈರಸ್ ಪ್ರಬೇಧಗಳು ನಾಡಿಗೆ ಬಂದು ಕಂಡು ಕೇಳರಿಯದ ರೋಗಗಳಿಗೆ ಕಾರಣವಾಗುತ್ತವೆ. ಮತ್ತು ಇದರಿಂದಾಗಿ ಮಾನವ ಸಂತತಿ ವಿನಾಶವಾಗುವ ಹಂತ ದೂರವಿಲ್ಲ

.
ಕೊನೆಯದಾಗಿ, ಎಲ್ಲಾ ಸಮಸ್ಯೆಗಳಿಗೂ ಮೂಲ ಕಾರಣ ಬೆಳೆಯುತ್ತಿರುವ ಜನಸಂಖ್ಯೆ. ಜನಸಂಖ್ಯಾ ಸ್ಫೋಟವನ್ನು ನಿಯಂತ್ರಿಸುವ ನೀತಿಗಳು ಈ ಹೊತ್ತಿನ ತುರ್ತು. ಆದರೆ, ಈ ಕುರಿತು ಇಡೀ ಒಕ್ಕೂಟ ಮೌನವಾಗಿದೆ. ಬೆಳೆಯುತ್ತಿರುವ ಜನಸಂಖ್ಯೆಯ ಅವಶ್ಯಕತೆಗಳನ್ನು ಪೂರೈಸಲು ಎಷ್ಟು ನೈಸರ್ಗಿಕ ಸಂಪತ್ತಿದ್ದರೂ ಸಾಲದು. ಸೀಮಿತವಾಗಿ ಇರುವ ಭೂಪ್ರದೇಶವನ್ನು ಅನಿಯಂತ್ರಿತವಾಗಿ ಅಗೆಯುತ್ತಾ ಹೋದರೆ, ಮುಂದಿನ ಪೀಳಿಗೆ ಏನು ಮಾಡಬೇಕು?

ಇಡೀ ದೇಶದ ಯಾವ ಭಾಗವೂ ಪ್ಲಾಸ್ಟಿಕ್ ಮುಕ್ತವಾಗಿಲ್ಲ. ನದಿ-ಕೊಳ್ಳ-ಕೆರೆ-ಹಳ್ಳ-ಗುಡ್ಡ-ಬೆಟ್ಟ ಹೀಗೆ ಎಲ್ಲೆಲ್ಲೂ ಸರ್ವಾಂತರಯಾಮಿಯಾಗಿರುವ ಪ್ಲಾಸ್ಟಿಕ್ ತ್ಯಾಜ್ಯಗಳಿಂದಾಗಿ ಪಾರಿಸರಿಕ ಸಮಸ್ಯೆಯ ತೀವ್ರತೆ ದ್ವಿಗುಣಗೊಂಡಿದೆ. ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸಿ, ಅದಕ್ಕೆ ಬದಲಿಯಾಗಿ ಮಣ್ಣಿನಲ್ಲಿ ಬೆರೆಯುವ ಸಾವಯವ ಉತ್ಪನ್ನಗಳಿಗೆ ಸರ್ಕಾರಗಳು ಉತ್ತೇಜನ ನೀಡಿದರೂ ಸಾಕು, ಇಡೀ ದೇಶದ ಅಥವಾ ರಾಜ್ಯದ ನಿರುದ್ಯೋಗ ಸಮಸ್ಯೆ ಬಗೆಹರಿಯುತ್ತದೆ ಮತ್ತು ಪರಿಸರ ಬದುಕುತ್ತದೆ. ಇದನ್ನೆಲ್ಲಾ ಮಾಡಲು ಆಳುವವರಿಗೆ ಇಚ್ಛಾಶಕ್ತಿ ಇರಬೇಕಷ್ಟೆ.

*ಲೇಖಕರು ಸಾಗರ ಬಳಿಯ ಚಿಪ್ಪಳಿ ಗ್ರಾಮದವರು. ಶಿವಪ್ಪನಾಯಕ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರು, ಪರಿಸರ ರಕ್ಷಣೆಯಲ್ಲಿ ನಿರತ ಸ್ವ್ಯಾನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ. ಚಾರ್ವಾಕ ವಾರಪತ್ರಿಕೆಯಲ್ಲಿ ಉಪಸಂಪಾದಕರು.

Leave a Reply

Your email address will not be published.