ಸ್ವಾವಲಂಬನೆ, ಜಾಗತೀಕರಣ ಮತ್ತು ಕೊರೊನ ಸಹಕಾರ-ಸಹಬಾಳ್ವೆಯೇ ಪರಿಹಾರ

ಜಾಗತೀಕರಣವೋ ಅಥವಾ ರಾಷ್ಟ್ರೀಯತೆಯೋ ಅನ್ನುವುದು ಪ್ರಶ್ನೆಯಲ್ಲ. ಅದು ಆಯ್ಕೆಯ ವಿಷಯವಲ್ಲ. ಕೆಲವನ್ನು ಜಾಗತಿಕ ಮಟ್ಟದಲ್ಲಿ ಪರಿಹರಿಸಿಕೊಳ್ಳಬೇಕು. ಕೆಲವಕ್ಕೆ ರಾಷ್ಟ್ರ ಮಟ್ಟದಲ್ಲಿ ತಯಾರಿ ಬೇಕು.

ಕೊರೊನ ಜಗತ್ತನ್ನು ಬಹಳವಾಗಿ ಬದಲಿಸಿದೆ. ನಮ್ಮ ಯೋಚನೆ, ಬದುಕುವ ವಿಧಾನ ಎಲ್ಲವನ್ನು ಪ್ರಭಾವಿಸಿದೆ. ಮತ್ತೆ ಹಳೆಯ ಜಗತ್ತಿಗೆ ಮರಳುತ್ತೇವಾ ಅನ್ನುವ ಅನುಮಾನವನ್ನೂ ಮೂಡಿಸಿದೆ. ಮರೆಯಲ್ಲಿ ಅವಿತಿದ್ದ ನಮ್ಮ ಎಷ್ಟೋ ಕರಾಳ ಮುಖವನ್ನು ತೆರೆದಿಟ್ಟಿದೆ. ಆರ್ಥಿಕವಾಗಿ, ಆರೋಗ್ಯದ ದೃಷ್ಟಿಯಿಂದ ಜಗತ್ತು ಬಳಲಿದೆ. ಆರು ಲಕ್ಷಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಅದರ ನೂರು ಪಟ್ಟು ಜನ ಬದುಕಿನ ಮೂಲವನ್ನೇ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಅಸಹಾಯಕತೆ ಕಾಣಿಸುತ್ತಿದೆ.

ವಿಭಿನ್ನ ಬಗೆಯ ಚಿಂತನೆಗಳು, ಚರ್ಚೆಗಳು ಮುನ್ನೆಲೆಗೆ ಬರುತ್ತಿವೆ. ಸ್ವಾವಲಂಬನೆಯ ಬಗ್ಗೆ ಮಾತನಾಡುತ್ತಿದ್ದೇವೆ. ಯಾವುದಕ್ಕೂ ಸರಳ, ಸಾರ್ವಕಾಲಿಕ ಉತ್ತರವೂ ಸಾಧ್ಯವಿಲ್ಲ. ಇಂದು ಕೊರೊನಾ ಯುಗದಲ್ಲಿ ನಮ್ಮನ್ನು ಕಾಡುತ್ತಿರುವ ಸವಾಲಿನ ಸಂದರ್ಭದಲ್ಲಿ ಪರಿಹಾರವಾಗಿ ಕಾಣಬಹುದಾದದ್ದು, ಮುಂದೆ ಕೊರೊನಾ ಮುಕ್ತ ಸಮಾಜದಲ್ಲಿ ಮಾರ್ಪಾಡನ್ನು ಒತ್ತಾಯಿಸಬಹುದು.

ಈಗ ಜಗತ್ತಿನಾದ್ಯಂತ ರಾಷ್ಟ್ರೀಯತೆಯ ಕೂಗು ಕೇಳಿಸುತ್ತಿದೆ. ಆರ್ಥಿಕ ರಾಷ್ಟ್ರೀಯತೆ ಸ್ಫೋಟವಾಗುತ್ತಿದೆ. ‘ಅಮೇರಿಕಾ ಮೊದಲು’, ‘ಭಾರತ ಮೊದಲು’, ‘ಚೀನಾ ಮೊದಲು’ ಇತ್ಯಾದಿ ಮಾತುಗಳು ಕೇಳಿಬರುತ್ತಿವೆ (ಕೆಲವೊಮ್ಮೆ ಅತಿರೇಕಕ್ಕೆ ಹೋಗಿ ದೆಹಲಿಯ ಆಸ್ಪತ್ರೆಗಳಲ್ಲಿ ಹೊರಗಿನವರಿಗೆ ಅವಕಾಶವಿಲ್ಲ ಅನ್ನುವ ಹೇಳಿಕೆಗಳನ್ನೂ ಕೇಳಿದ್ದೇವೆ). ಅಮೆರಿಕಾ ಹಾಗೂ ಯುರೋಪಿಯನ್ ಯೂನಿಯನ್ನಿನ ಸದಸ್ಯ ದೇಶಗಳೂ ಸೇರಿದಂತೆ ಹಲವು ದೇಶಗಳು ಮಾಸ್ಕ್, ಗೌನು, ಕೈಗವಸು, ವೆಂಟಿಲೇಟರ್, ಪರೀಕ್ಷಾ ಕಿಟ್ಟುಗಳು ಇವೆಲ್ಲಾ ಬೇರೆ ಕಡೆ ಮಾರಾಟವಾಗದಂತೆ ನೋಡಿಕೊಂಡಿದ್ದನ್ನು ಕಂಡಿದ್ದೇವೆ. ರಫ್ತಿನ ಮೇಲೆ ನಿಯಂತ್ರಣವನ್ನು ಹೇರಿದ್ದೂ ಆಗಿದೆ. ಇಂತ ಕೆಟ್ಟ ಸ್ಪರ್ಧೆಯಿಂದ ಈ ಅವಶ್ಯಕ ವಸ್ತುಗಳ ಬೆಲೆ ಗಗನಕ್ಕೆ ಹೋಗಿದ್ದನ್ನೂ ನೋಡಿದ್ದೇವೆ. ಬಡರಾಷ್ಟ್ರಗಳು ಅತ್ಯಂತ ಅವಶ್ಯಕವಾದ ಈ ವಸ್ತುಗಳನ್ನು ತಮ್ಮ ಜನತೆಗೆ ಒದಗಿಸಲಾಗದೆ ನರಳಿದ ಸಂಕಟ ನಮ್ಮೆದುರಿಗಿದೆ.

ಅಂತಹ ಬಡ ತೃತೀಯ ಜಗತ್ತಿನ ರಾಷ್ಟ್ರಗಳಿಗೆ ಈ ಮಹಾಮಾರಿಯನ್ನು ಎದುರಿಸುವುದಕ್ಕೆ ಇರುವ ದಾರಿಗಳೂ ಕೆಲವೇ; ಅವು ಸುಲಭದ ದಾರಿಗಳೂ ಅಲ್ಲ. ಬ್ರೆಜಿಲ್ಲಿನಲ್ಲಿ ಇಂದು ಕೊರೋನಾ ಬಿಕ್ಕಟ್ಟು ತೀರಾ ಗಂಭೀರವಾಗಿದೆ. ಅಲ್ಲಿ ವ್ಯಾಪಕವಾಗಿ ಪರೀಕ್ಷೆಯನ್ನೂ ಮಾಡಲಾಗುತ್ತಿಲ್ಲ. ಅದಕ್ಕೆ ಬೇಕಾದ ರಾಸಾಯನಿಕ ರೀಏಜೆಂಟ್ ಸಿಗುತ್ತಿಲ್ಲ. ಅಮೆರಿಕೆಯಂತಹ ಶ್ರೀಮಂತ ದೇಶಗಳು ಜಾಗತಿಕ ಪೂರೈಕೆಯ ಬಹುಭಾಗವನ್ನು ಕೊಂಡುಕೊAಡಿದ್ದಾರೆ. ಆಫ್ರಿಕದಲ್ಲಿ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. ಜಗತ್ತಿನ ಅತ್ಯಂತ ಬಡರಾಷ್ಟ್ರವಾದ ಕೇಂದ್ರ ಆಫ್ರಿಕನ್ ರಿಪಬ್ಲಿಕ್‌ನಲ್ಲಿ ಕೇವಲ ಮೂರೇ ಮೂರು ವೆಂಟಿಲೇಟರುಗಳಿವೆ. ಅಲ್ಲಿರುವ ಜನಸಂಖ್ಯೆ ನಲ್ವತ್ತು ಲಕ್ಷಕ್ಕಿಂತ ಹೆಚ್ಚು. ಲೈಬೀರಿಯದಲ್ಲಿ ಅದೂ ಇಲ್ಲ ಅನ್ನಿಸುತ್ತದೆ. ಕೆಲವು ಆಫ್ರಿಕನ್ ದೇಶಗಳು ಅವಧಿ ಮುಗಿದ ಮಾಸ್ಕ್ಕ್ಗಳನ್ನೇ ಹತ್ತು ಪಟ್ಟು ಬೆಲೆ ಕೊಟ್ಟು ಪಡೆದುಕೊಳ್ಳುತ್ತಿವೆ. ಅವು ಸಿಗುವ ಖಾತ್ರಿಯೂ ಇಲ್ಲ.

ಅಲ್ಲಿಯ ಜನ ಅಂದಿನ ಊಟವನ್ನು ಅಂದು ದುಡಿದುಕೊಳ್ಳಬೇಕು. ಜೊತೆಗೆ ಅವಶ್ಯಕವಾಗಿರುವ ಸಾಮಾಜಿಕ ರಕ್ಷಣೆಯೂ ಸಿಗುತ್ತಿಲ್ಲ. ಹೆಚ್ಚಿನ ದಿನಗಳಲ್ಲಿ ಉಪವಾಸ ಅನಿವಾರ್ಯ. ಈ ದೇಶದ ಸರ್ಕಾರಗಳಿಗೆ ಅಮೆರಿಕೆಯಲ್ಲಿ ಕೊಡುತ್ತಿರುವಷ್ಟು ಪರಿಹಾರವನ್ನು ಕೊಡುವುದಕ್ಕೆ ಸಾಧ್ಯವಿಲ್ಲ. ಅಮೇರಿಕೆಯಲ್ಲಿ 2 ಟ್ರಿಲಿಯನ್ ನೆರವಿನ ಪ್ಯಾಕೇಜ್ ಘೋಷಿಸಿದ್ದಾರೆ. ಅಂದರೆ ಜಿಡಿಪಿಯ ಶೇಕಡ ಹತ್ತರಷ್ಟು.

ಭಾರತದಲ್ಲಿ ಮೋದಿ ಸರ್ಕಾರ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜನ್ನು ಘೋಷಿಸಿದೆ. ಅದರಲ್ಲಿ ಸರ್ಕಾರದ ವಿತ್ತೀಯ ಹೊರೆ 1.5 ಲಕ್ಷ ಕೋಟಿಯೂ ಇಲ್ಲ. ಉಳಿದದ್ದು ಬ್ಯಾಂಕು ನೀಡುವ ಸಾಲ ಇತ್ಯಾದಿ. ಅಂದರೆ ಸರ್ಕಾರ ತನ್ನ ಜವಾಬ್ದಾರಿಯಿಂದ ಸಂಪೂರ್ಣವಾಗಿ ಕಳಚಿಕೊಂಡಿದೆ. ಪರಿಣಾಮಕಾರಿ ಬೇಡಿಕೆ ಇಲ್ಲದೆ, ಸಾಲವನ್ನಾದರೂ ಉದ್ದಿಮೆಗಳು ಏಕೆ ತೆಗೆದುಕೊಳ್ಳುತ್ತವೆ. ಬಡ್ಡಿ ದರ ಕಡಿಮೆ ಮಾಡುವಂತಹ ಹಣಕಾಸು ನೀತಿಯು ಇಂತಹ ಸಂದರ್ಭದಲ್ಲಿ ಫಲಕಾರಿಯಾಗುವುದಕ್ಕೆ ಸಾಧ್ಯವಿಲ್ಲ.

ಕೊರೋನ ಕಲಿಸಿದ ಪಾಠ

ಈ ವೈರಾಣುವಿನಿಂದ ನಾವು ಒಂದು ಪಾಠ ಕಲಿಯಬಹುದು.  ಅದಕ್ಕೆ ಭೇದಭಾವವಿಲ್ಲ. ಶ್ರೀಮಂತರು, ಬಡವರು, ಹಿಂದುಗಳು, ಮುಸ್ಲಿಮರು, ಹೆಂಗಸರು ಗಂಡಸರು ಅಂತ ಏನೂ ನೋಡುವುದಿಲ್ಲ. ಯಾರಿಗೂ ಬರಬಹುದು. ನಾವು ಹಾಗಲ್ಲ. ನಮಗೆ ತಾರತಮ್ಯ ಅನ್ನೋದು ರಕ್ತಗತವಾಗಿಬಿಟ್ಟಿದೆ. ಆದರೆ ಇದನ್ನು ಎದುರಿಸುವುದಕ್ಕೆ ತಾರತಮ್ಯ ನೀತಿಯನ್ನು ಬಿಡುವುದು ಅನಿವಾರ್ಯ. ಯಾಕೆಂದರೆ ಒಬ್ಬರಿಗೆ ಬಂದರೆ ಎಲ್ಲರಿಗೂ ಬರುತ್ತದೆ. ಯಾವುದೋ ಒಂದು ಗುಂಪಿಗೆ ಸೀಮಿತಗೊಳಿಸಿ ನಾವು ನೆಮ್ಮದಿಯಾಗಿ ಇರಬಹುದು ಅಂತ ಯಾರೂ ಭಾವಿಸುವುದಕ್ಕೆ ಸಾಧ್ಯವಿಲ್ಲ.

ಪಿಡುಗಿನಿಂದ ಎಲ್ಲರನ್ನು ಬಿಡುಗಡೆಗೊಳಿಸಬೇಕು. ಆಗಷ್ಟೇ ನೆಮ್ಮದಿ ಸಾಧ್ಯ. ಹಾಗಾಗಿ ಅದನ್ನು ಎದುರಿಸುವುದಕ್ಕೂ ಅಂತಹದ್ದೇ ಏಕತೆಯ ಮನೋಭಾವ ಬೇಕು. ಅಂತಹ ಮನೋಭಾವ ಇರುವ ದೇಶಗಳಲ್ಲಿ ಇದನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಭಾಯಿಸಲಾಗಿದೆ. ಕೇರಳದಲ್ಲಿ ಸೋಂಕಿನಿAದ ಸಾಯುತ್ತಿರುವ ದರ ಶೇಕಡ 0.34ರಷ್ಟು ಇದೆ. ಗುಜರಾತಿನಲ್ಲಿ ಅದು ಶೇಕಡ 4.4ರಷ್ಟು ಇದೆ. ಲಾಕ್‌ಡೌನಿನ ಸ್ವಾಭಾವದಲ್ಲೇ ತಾರತಮ್ಯದ ಮನೋಭಾವ ಇದೆ. ವಲಸೆ ಕಾರ್ಮಿಕರನ್ನು ನಾವು ನೋಡಿಕೊಂಡ ರೀತಿಯಲ್ಲಿ ಇದು ಕಾಣುತ್ತದೆ. ಹೊರಗಿನಿಂದ ನಮ್ಮ ಮೇಲೆ ಎರಗಿದ ಈ ವೈರಾಣು ನಮ್ಮ ಬದುಕಿನ ಎಷ್ಟೋ ಅಂಶಗಳನ್ನು ಮುನ್ನೆಲೆಗೆ ತಂದಿದೆ. ನಾವು ಎಂತಹ ಜಗತ್ತಿನಲ್ಲಿ ಬದುಕುತ್ತಿದ್ದೇವೆ ಅನ್ನುವುದನ್ನು ತೋರಿಸಿಕೊಟ್ಟಿದೆ.

ಸರ್ಕಾರ ದೊಡ್ಡ ಪ್ರಮಾಣದಲ್ಲಿ ಹೂಡಬೇಕು. ಆದರೆ ದೊಡ್ಡ ಪ್ರಮಾಣದ ಹೂಡಿಕೆಗೆ ಸರ್ಕಾರ ಖಾಸಗಿ ಕ್ಷೇತ್ರವನ್ನು ನೆಚ್ಚಿಕೊಂಡಿದೆ. ಖಾಸಗೀಕರಣದಲ್ಲಿ ಸರ್ಕಾರ ಎಲ್ಲಾ ಬಿಕ್ಕಟ್ಟುಗಳಿಗೂ ಪರಿಹಾರ ಕಂಡುಕೊಳ್ಳುತ್ತಿದೆ. ಅಂಬಾನಿಯAತಹವರಿಗೆ ಎಲ್ಲವನ್ನು ಒಪ್ಪಿಸುವ ಚಿಂತನೆಯಲ್ಲಿದೆ. ಯಾವುದೇ ಬಿಕ್ಕಟ್ಟನ್ನಾಗಲಿ ತಮ್ಮ ಲಾಭಕ್ಕೆ ಬಳಸಿಕೊಳ್ಳುವ ಸಾಮರ್ಥ್ಯ ಇರುವುದು ಅವರಿಗಷ್ಟೇ. ಹಾಗಾಗಿಯೇ ಇಂತಹ ಆರ್ಥಿಕ ದುಃಸ್ಥಿತಿಯಲ್ಲೂ ಅಂಬಾನಿಯವರ ಲಾಭ ವೃದ್ಧಿಯಾಗುತ್ತಿದೆ. ಅತ್ಯಂತ ಶ್ರೀಮಂತ 15 ಉದ್ದಿಮೆದಾರರ ಷೇರು ಬೆಲೆಗಳು ಉತ್ತಮ ಸ್ಥಿತಿಯಲ್ಲಿರುವುದೂ ಇದನ್ನೇ ಹೇಳುತ್ತದೆೆ. ಸರ್ಕಾರದ ಎಷ್ಟೋ ಮಾತುಗಳು ಇವರ ಧ್ವನಿಯಾಗಿರುತ್ತವೆ.

ಈ ಹಿನ್ನೆಲೆಯಲ್ಲಿ ಸ್ವಾವಲಂಬನೆಯನ್ನು ಹೇಗೆ ಅರ್ಥ ಮಾಡಿಕೊಳ್ಳುವುದು? ಎಲ್ಲಾ ಚರ್ಚೆಗಳೂ ‘ನಾವು’ ವರ್ಸಸ್ ‘ಅವರು’ ಅನ್ನುವುದರ ಸುತ್ತಲೇ ನಡೆಯುತ್ತಿವೆ. ಅವರು ತಯಾರಿಸಿದ ವಸ್ತು ಬೇಡ, ನಮ್ಮದನ್ನು ಅವರಿಗೆ ಕೊಡುವುದೂ ಬೇಡ. ಅಂದರೆ ರಫ್ತು ಮತ್ತು ಆಮದಿನ ಮೇಲೆ ನಿಯಂತ್ರಣದ ಮೂಲಕ, ‘ನಾವು’ ವರ್ಸಸ್ ‘ಅವರು’ ಅನ್ನುವ ಭಾಷೆಯಲ್ಲೇ ನಾವು ಸ್ವಾವಲಂಬನೆ ಅಥವಾ ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ವ್ಯಾಖ್ಯಾನಿಸುತ್ತಿದ್ದೇವೆ. ಜಾಗತೀಕರಣದ ಅಂತ್ಯದ ಬಗ್ಗೆ ಮಾತನಾಡುತ್ತಿದ್ದೇವೆ.

ಸ್ವಾವಲಂಬನೆ ಅಂದರೆ ಇದಲ್ಲ

  1. ಸ್ವಾವಲಂಬನೆ ಅಂದರೆ ಖಾಸಗೀಕರಣವಲ್ಲ: ಸ್ವಾವಲಂಬನೆ, ರಾಷ್ಟ್ರೀಯತೆಯ ಬಗ್ಗೆ ಮಾತನಾಡುವ ಧ್ವನಿಗಳೇ, ಖಾಸಗೀಕರಣವನ್ನು ಪ್ರೋತ್ಸಾಹಿಸುತ್ತಿರುವುದು ಢಾಳಾಗಿ ಕಾಣುತ್ತಿದೆ. ಸರ್ಕಾರ ಆಡಳಿತಕ್ಕೆ ಬೇಕಾದ ಬಂಡವಾಳವನ್ನು ಸಾರ್ವಜನಿಕ ಉದ್ದಿಮೆಗಳನ್ನು ಮಾರಿ ಒಟ್ಟುಮಾಡಿಕೊಳ್ಳುತ್ತಿದೆ. ಖಾಸಗೀಕರಣವನ್ನೇ ಎಲ್ಲಾ ಆರ್ಥಿಕ ಸಂಕಟಗಳಿಗೂ ಮದ್ದಾಗಿ ನೋಡಲಾಗುತ್ತಿದೆ. ಖಾಸಗೀ ಕ್ಷೇತ್ರ ಲಾಭವನ್ನು ಬೆನ್ನು ಹತ್ತಿ ಹೋಗುತ್ತದೆಯೇ ಹೊರತು, ಜನರ ಕ್ಷೇಮ ಅದರ ಅಜೆಂಡಾ ಆಗುವುದಕ್ಕೆ ಸಾಧ್ಯವಿಲ್ಲ.

ಇಂದಿನ ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮಹತ್ವ ಅರ್ಥವಾಗುತ್ತಿದೆ. ಖಾಸಗೀ ಆಸ್ಪತ್ರೆಗಳು ಸಾಮಾನ್ಯ ಜನರ ಯೋಗಕ್ಷೇಮವನ್ನು ನೋಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಖಾಸಗೀ ಕ್ಷೇತ್ರ ತುಂಬ ಸಮರ್ಥ ಎಂದು ಜನ ವಾದಿಸುವಾಗ ಅದು ಬಹುಪಾಲು ಜನರಿಗೆ ಎಟಕುವುದಿಲ್ಲ ಅನ್ನುವುದು ಗಮನದಲ್ಲಿರಬೇಕು. ಕೆಲವು ಲಕ್ಷ ರೂಪಾಯಿಗಳನ್ನು ಖರ್ಚು ಮಾಡದೆ ಕೊರೋನಾ ಸೋಂಕಿತನಿಗೆ ಖಾಸಗಿ ಆಸ್ಪತ್ರೆಯಿಂದ ಹೊರಬರುವುದಕ್ಕೆ ಸಾಧ್ಯವಿಲ್ಲ. ಎಲ್ಲವನ್ನೂ ಖಾಸಗೀಕರಣಗೊಳಿಸುವ ಅದರಲ್ಲೂ ಮುಖ್ಯವಾಗಿ ಆರೋಗ್ಯ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಪ್ರಯತ್ನ ದೊಡ್ಡ ತಪ್ಪು ಎಂಬುದು ಹೆಚ್ಚು ಕಮ್ಮಿ ಎಲ್ಲರಿಗೂ ಅರ್ಥವಾಗಿದೆ. ಪ್ರಬಲ, ಪರಿಣಾಮಕಾರಿ ಸಾರ್ವಜನಿಕ ಕ್ಷೇತ್ರ ಸ್ವಾವಲಂಬಿ ಸಮಾಜಕ್ಕೆ ಅನಿವಾರ್ಯ.

  1. ಸ್ವಾವಲಂಬನೆ ಅಂದರೆ ಅಧಿಕಾರದ ಕೇಂದ್ರೀಕರಣವಲ್ಲ: ಬಿಕ್ಕಟ್ಟಿನ ಜೊತೆಯಲ್ಲೇ ಕೇಂದ್ರಿಕರಣದ ಮನೋಭಾವ ಹೆಚ್ಚುತ್ತಿವೆ. ರಾಜ್ಯಗಳ ಸಂಪನ್ಮೂಲಗಳು ಕಡಿಮೆಯಾಗುತ್ತಿದೆ. ಇಂದು ಕೊರೋನಾವನ್ನು ನಿಯಂತ್ರಿಸುವ ಎಲ್ಲಾ ಹೊಣೆಯೂ ರಾಜ್ಯದ್ದೇ. ಆದರೆ ಅವುಗಳಿಗೆ ಇರುವ ಆರ್ಥಿಕ ಸಂಪನ್ಮೂಲ ತೀರಾ ಸೀಮಿತ- ಜಿಎಸ್‌ಟಿ, ಎಕ್ಸೈಸ್ ಸುಂಕ, ಬಿಟ್ಟರೆ ಮಾರುಕಟ್ಟೆಯಿಂದ ಪಡೆದುಕೊಳ್ಳಬಹುದಾದ ಸಾಲ. ಈಗ ಜಿಎಸ್‌ಟಿ ಕಡಿಮೆಯಾಗಿದೆ. ಕೇಂದ್ರದಿAದ ಬರಬೇಕಾದ ಬಾಕಿಯೂ ಪೂರ್ಣ ಬಂದಿಲ್ಲ. ಎಕ್ಸೈಸ್ ಸುಂಕ ಬಹುದಿನ ನಿಂತಿತ್ತು. ಇನ್ನು ಮಾಡಬಹುದಾದ ಸಾಲದ ಪ್ರಮಾಣವನ್ನೂ ಕೇಂದ್ರವೇ ನಿರ್ಧರಿಸುತ್ತದೆ. ಅದಕ್ಕೆ ಅಪಾರ ಬಡ್ಡಿದರ ತೆರಬೇಕು. ಕೇಂದ್ರ ಬ್ಯಾಂಕಿನಿAದ ವಾಣಿಜ್ಯ ಬ್ಯಾಂಕುಗಳಿಗೆ ಕೊಡುವ ಶೇಕಡ 4ರ ಬಡ್ಡಿ ದರದಲ್ಲಿ ಇಂತಹ ಸಂದರ್ಭದಲ್ಲಾದರೂ ರಾಜ್ಯಗಳಿಗೆ ಕೊಡಬಹುದು.

ಈಗ ಪ್ರತಿಯೊಂದು ರಾಜ್ಯವೂ ಆರ್ಥಿಕ ಬಿಕ್ಕಟ್ಟಿನಲ್ಲಿದ್ದು, ಅಭಿವೃದ್ಧಿಗೆ ಹಣ ಹೂಡುವ ಸ್ಥಿತಿಯಲ್ಲಿ ಇಲ್ಲ. ಇನ್ನು ಪಂಚಾಯತಿ ಮೊದಲಾದ ಸ್ಥಳೀಯ ಸಂಸ್ಥೆಗಳ ಪಾತ್ರವಂತೂ ನಗಣ್ಯವಾಗಿಬಿಟ್ಟಿದೆ. ನಿಜವಾಗಿ ಈ ಮಹಾಮಾರಿಯನ್ನು ಎದುರಿಸುವುದಕ್ಕೆ ಕೆಳಮಟ್ಟದ ಅಂತಹ ಸಂಸ್ಥೆಗಳನ್ನು ಒಳಗೊಂಡಾಗಲೇ ಅದು ಪರಿಣಾಮಕಾರಿಯಾಗುವುದು. ಈ ಸಂಸ್ಥೆಗಳೇ ಕೇಂದ್ರವಾಗದ ವ್ಯವಸ್ಥೆಯು ಸ್ವಾವಲಂಬಿಯಾಗುವುದಕ್ಕೆ ಸಾಧ್ಯವಿಲ್ಲ.

  1. ಸ್ವಾವಲಂಬನೆ ಅನ್ನುವುದು ಅರ್ಥಪೂರ್ಣ ಆಗಬೇಕಾದರೆ ಪ್ರತಿಯೊಂದು ಆರ್ಥಿಕ ಘಟಕವನ್ನೂ ಬಲಗೊಳಿಸಬೇಕು. ಇಂದು ಕೃಷಿಕ್ಷೇತ್ರ ಸೊರಗಿದೆ. ಬೇಡಿಕೆ ಇಲ್ಲದೆ ಬೆಲೆಗಳು ಇಳಿಯುತ್ತಿವೆ. ಎಪಿಎಂಸಿಯನ್ನು ಖಾಸಗೀಕರಣ ಮಾಡಿದರೆ ಆಗುವುದಿಲ್ಲ. ನಿಜವಾಗಿ ಸಮಸ್ಯೆ ಇರುವುದು ಬೇಡಿಕೆಯ ಕೊರತೆಯಲ್ಲಿ. ಕೃಷಿ ಹಾಗೂ ರೈತರಿಗೆ ಸಂಬAಧಿಸಿದAತೆ ಸಮಗ್ರ ಆರ್ಥಿಕ (ಮ್ಯಾಕ್ರೊ) ಪರಿಸ್ಥಿತಿ ಸುಧಾರಿಸದೇ ಹೋದರೆ ಮಾರುಕಟ್ಟೆಗೆ ಸಂಬAಧಿಸಿದAತೆ ಎಷ್ಟೇ ಸುಧಾರಣೆ ತಂದರೂ ರೈತರಿಗೆ ಒಳ್ಳೆಯ ಬೆಳೆ ಸಿಗುವ ಸಾಧ್ಯತೆ ಇಲ್ಲ. ಸರ್ಕಾರ ಹೆಚ್ಚಿನ ಹೂಡಿಕೆಯನ್ನು ಮಾಡಿ ಆರ್ಥಿಕತೆಯಲ್ಲಿ ಬೇಡಿಕೆಯನ್ನು ಹೆಚ್ಚಿಸಬೇಕು. ಆಗ ನಿಜವಾಗಿ ರೈತರ ಆದಾಯ ಹೆಚ್ಚುತ್ತದೆ. ಹಾಗೆಯೇ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಏಳಲಾರದ ಸ್ಥಿತಿಯಲ್ಲಿವೆ. ಅವನ್ನು ಪುನಶ್ಚೇತನಗೊಳಿಸದೇ ಸ್ವಾವಲಂಬನೆ ಹೇಗೆ ಸಾಧ್ಯ?
  2. ಎಲ್ಲದಕ್ಕಿಂತ ಮುಖ್ಯವಾಗಿ ನಿಜವಾದ ಪ್ರಜಾಪ್ರಭುತ್ವ, ಜನಕೇಂದ್ರಿತ ಆಡಳಿತ, ಪಾರದರ್ಶಕತೆ ಇವೆಲ್ಲಾ ಪರಿಣಾಮಕಾರಿಯಾಗಿದ್ದಾಗಲೇ ಸ್ವಾವಲಂಬನೆ ಅರ್ಥಪೂರ್ಣವಾಗುವುದು. ಪಿಎಂ ಕೇರ್ ಫಂಡಿನ ಲೆಕ್ಕಾಚಾರವೇ ಗೊತ್ತಿಲ್ಲದ ಪರಿಸ್ಥಿತಿಯಲ್ಲಿ ನಾವಿರುವಾಗ ಇವನ್ನೆಲ್ಲಾ ಎಲ್ಲಿಂದ ನಿರೀಕ್ಷಿಸುವುದು?

ಇಂತಹ ಎಷ್ಟೋ ವಿಷಯಗಳು ಮುಖ್ಯವಾಗದೆ, ಕೇವಲ ಮಾರುಕಟ್ಟೆ ಹಾಗೂ ಖಾಸಗಿ ಕ್ಷೇತ್ರವನ್ನು ಅವಲಂಬಿಸಿದ ಆರ್ಥಿಕತೆ ಸ್ವಾವಲಂಬಿಯಾಗುವುದಿಲ್ಲ. ನಿಜವಾಗಿ ಅದರ ಭಾಗವಾಗಬೇಕಾದ ಬಹುಪಾಲು ಜನ ಹೊರಗುಳಿಯುತ್ತಾರೆ. ಬೆಳವಣಿಗೆಯ ಯಾವುದೇ ಫಲವೂ ಲಭಿಸದೇ ನಿರ್ಗತಿಕರಾಗುತ್ತಾರೆ.

ಜಾಗತೀಕರಣ ಮುಗಿದ ಅಧ್ಯಾಯವೇ?

ಜಾಗತೀಕರಣದ ಪಾತ್ರದ ಬಗ್ಗೆ ಭವಿಷ್ಯ ಹೇಳುವುದಕ್ಕೆ ಇದು ತಂಬಾ ಬೇಗ. ಒಂದಂತೂ ನಿಜ. ಸದ್ಯದ ಪರಿಸ್ಥಿತಿಯಲ್ಲಿ “ಯಾವೊಬ್ಬ ಮನುಷ್ಯನೂ ದ್ವೀಪವಲ್ಲ…” ಮನುಷ್ಯ ಮಾತ್ರವಲ್ಲ ಯಾವ ದೇಶವೂ ದ್ವೀಪವಲ್ಲ್ಲ. ಇದನ್ನು ಕೋವಿಡ್-19ರ ಬಿಕ್ಕಟ್ಟು ಸೊಗಸಾಗಿ ಮನವರಿಕೆ ಮಾಡಿಕೊಟ್ಟಿದೆ. ಕೊರೊನಾ ಪಿಡುಗು, ವಾಯುಮಾಲಿನ್ಯ ಇವೆಲ್ಲಾ ಜಾಗತಿಕ ಸಮಸ್ಯೆಗಳು. ಇವುಗಳಿಗೆ ಒಂದು ದೇಶದ ಮಟ್ಟಿಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಜಾಗತಿಕ ಸಹಕಾರದಿಂದಲೇ ಇವು ಬಗೆಹರಿಯಬೇಕು.

ಕೊರೋನಾ ವಿಶ್ವದ ದೇಶಗಳನ್ನು ಒಟ್ಟಿಗೆ ತಂದಿದೆ. ಎಲ್ಲರೂ ಒಟ್ಟಾಗಿಯೇ ಕೊರೋನಾವನ್ನು ಎದುರಿಸಬೇಕು. ಜಾಗತಿಕ ಮಟ್ಟದ ಸಹಕಾರದಿಂದ ತೀರಾ ಅವಶ್ಯಕವಾದ ಔಷಧಿಗಳನ್ನು ಪೂರೈಸುವುದಕ್ಕೆ, ಹೊಸ ಸಂಶೋಧನೆಗಳಿಗೆ ಅಂತಿಮವಾಗಿ ಕೊರೋನವನ್ನು ಎದುರಿಸುವುದಕ್ಕೆ ಸಾಧ್ಯವಾಗಬಹುದು. ಕೊರೊನಾಗೆ ಯಾರೇ ಲಸಿಕೆ ಕಂಡು ಹಿಡಿದರೂ ಅದು ಸಾರ್ವಜನಿಕ ಆಸ್ತಿಯಾಗಬೇಕು. ಯಾವುದೇ ದೇಶವೂ ಪೇಟೆಂಟ್ ಮಾಡಿಕೊಂಡು ವ್ಯಾಪಾರ ಮಾಡುವುದಕ್ಕೆ ಅವಕಾಶ ಇರಬಾರದು. ಇಂದು ಜಾಗತಿಕ ಸಹಕಾರ ತುಂಬಾ ಬೇಕಾಗಿದೆ.

  1. ಎಷ್ಟೋ ದೇಶಗಳಿಗೆ ಇಂದು ತನ್ನ ಪ್ರಜೆಗಳನ್ನು ಮತ್ತು ತನ್ನ ದೇಶದ ಆರ್ಥಿಕತೆಯನ್ನು ರಕ್ಷಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಸಾಲದ ಭಾರದಲ್ಲಿ ಅವು ಕುಗ್ಗಿ ಹೋಗಿವೆ. ಕೊರೊನಾ ಪಿಡುಗನ್ನು ಎದುರಿಸಲು ಬೇಕಾದ ಹಣ ಅಲ್ಲಿಯ ಸರ್ಕಾರಗಳ ಬಳಿ ಇಲ್ಲ. ಆ ರಾಷ್ಟ್ರಗಳು ಜಿ-20 ದೇಶಗಳ ಜೊತೆಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ಸದ್ಯಕ್ಕೆ ಎರಡು ವರ್ಷಗಳ ಕಾಲ ಸಾಲವನ್ನು ಹಿಂತಿರುಗಿಸಬೇಕಾಗಿಲ್ಲ. ಇದರಿಂದ ಸಮಸ್ಯೆ ಮುಂದೆ ಹೋಗಿದೆ ಅಷ್ಟೆ. ಅಷ್ಟರಲ್ಲಿ ಇನ್ನೊಂದಿಷ್ಟು ಸಾಲ ಸೇರಿಕೊಳ್ಳುತ್ತದೆ. ಹಾಗಾಗಿ ಸಾಲದ ಹೊರೆ ಹೆಚ್ಚುತ್ತದೆ. ಶ್ರೀಮಂತ ರಾಷ್ಟ್ರಗಳು ಅಂತಹ ದೇಶಗಳ ನೆರವಿಗೆ ಬರಬೇಕು. ಅದೇನು ತುಂಬಾ ದೊಡ್ಡ ಮೊತ್ತವಲ್ಲ. ಬಡರಾಷ್ಟ್ರಗಳ ಒಟ್ಟಾರೆ ಸಾಲ ಜಿ-20 ದೇಶಗಳ ಜಿಡಿಪಿಯ ಶೇಕಡ 1 ರಷ್ಟು ಆಗುತ್ತದೆ. ಅದನ್ನು ಸಲೀಸಾಗಿ ರದ್ದು ಮಾಡಬಹುದು. ಅದು ಅವುಗಳ ಕರ್ತವ್ಯ ಕೂಡ. ಕೇವಲ ಬಡ ರಾಷ್ಟ್ರಗಳು ಮಾತ್ರವಲ್ಲ ಹಲವು ಯುರೋಪಿಯನ್ ದೇಶಗಳೂ ಇದೇ ಸ್ಥಿತಿಯಲ್ಲಿವೆ.
  2. ಚರಿತ್ರೆಯಿಂದ ನಾವು ಕಲಿಯಬಹುದಾದದ್ದು ತುಂಬಾ ಇದೆ. ಮೊದಲ ಜಾಗತಿಕ ಯುದ್ಧದ ಸಮಯದಲ್ಲಿ ಮಿತ್ರ ರಾಷ್ಟ್ರಗಳ ನಡುವೆ ಅವಶ್ಯಕ ಪದಾರ್ಥಗಳಿಗೆ ತೀವ್ರ ಸ್ಪರ್ಧೆ ನಡೆಯುತ್ತಿತ್ತು. ಅವುಗಳಿಗೆ ಖಾಸಗಿ ಮಾರುಕಟ್ಟೆಯಲ್ಲಿ ತೀವ್ರವಾದ ಕೊರತೆ ಇತ್ತು. ಜಾಗತಿಕ ಯುದ್ಧದಲ್ಲಿ ಈ ರಾಷ್ಟ್ರಗಳು ಒಂದೇ ಶತ್ರುವಿನ ವಿರುದ್ಧ, ಒಂದೇ ಕೇಂದ್ರ ಶಕ್ತಿಯ ವಿರುದ್ಧ ಹೋರಾಡುತ್ತಿದ್ದವು. ಆದರೆ ಗೋಧಿ, ಕಚ್ಚಾಪದಾರ್ಥಗಳು ಇತ್ಯಾದಿ ಅವಶ್ಯಕ ಪದಾರ್ಥಗಳನ್ನು ಕೊಳ್ಳುವ ವಿಷಯದಲ್ಲಿ ತಮ್ಮಲ್ಲೇ ಕಚ್ಚಾಡಿಕೊಳ್ಳುತ್ತಿದ್ದವು.

 

1917-18ರ ವೇಳೆಗೆ ಕೊರತೆ ಎಷ್ಟು ತೀವ್ರವಾಯಿತೆಂದರೆ ಹೀಗೇ ಮುಂದುವರಿದರೆ ಯುದ್ಧದಲ್ಲಿ ಸೋತು ಬಿಡಬಹುದು ಅನ್ನುವ ಭೀತಿ ಆವರಿಸಿಕೊಂಡಿತ್ತು. ಈಗಿನಂತೆ ಆಗಲೂ ನಾಗರಿಕರು ಸುಸ್ತಾಗಿದ್ದರು. ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದಕ್ಕೆ ಮಿತ್ರ ರಾಷ್ಟ್ರಗಳು ಸಂಘಟನೆಗಳನ್ನು ಮಾಡಿಕೊಂಡು ಕೊರತೆಯಿರುವ ಪದಾರ್ಥಗಳನ್ನು ಕೊಂಡು ಎಲ್ಲಾ ಮಿತ್ರ ದೇಶಗಳಿಗೂ ಅವುಗಳ ಅವಶ್ಯಕತೆಗಳಿಗೆ ತಕ್ಕಂತೆ ತಲುಪಿಸಿದರು. ಮೊತ್ತಮೊದಲ ಬಾರಿಗೆ ಜಾಗತಿಕ ಮಾರುಕಟ್ಟೆಯಲ್ಲಿನ ಬೇಡಿಕೆ ಪೂರೈಕೆಯ ನಿಯಮ ಹಿಂದೆ ಸರಿಯಿತು. ದೇಶಗಳ ಅವಶ್ಯಕತೆಗೆ ಗಮನ ನೀಡಲಾಯಿತು. ಅವಶ್ಯಕತೆ ಆದ್ಯತೆಯಾಯಿತೇ ಹೊರತು ಕೊಳ್ಳುವ ಸಾಮರ್ಥ್ಯವಲ್ಲ. ಇಂತಹ ಅಂತರರಾಷ್ಟ್ರೀಯ ಮಟ್ಟದ ಸಮನ್ವಯ ವ್ಯವಸ್ಥೆ ಮಿತ್ರರಾಷ್ಟ್ರಗಳ ಗೆಲುವಿಗೆ ಬಹುಮಟ್ಟಿಗೆ ಕಾರಣವಾಯಿತು. ಈಗಲೂ ಇದರಿಂದ ಪಾಠ ಕಲಿಯಬಹುದಾಗಿದೆ.

ಜಾಗತೀಕರಣವೋ ಅಥವಾ ರಾಷ್ಟ್ರೀಯತೆಯೋ ಅನ್ನುವುದು ಪ್ರಶ್ನೆಯಲ್ಲ. ಅದು ಆಯ್ಕೆಯ ವಿಷಯವಲ್ಲ. ಕೆಲವನ್ನು ಜಾಗತಿಕ ಮಟ್ಟದಲ್ಲಿ ಪರಿಹರಿಸಿಕೊಳ್ಳಬೇಕು. ಕೆಲವಕ್ಕೆ ರಾಷ್ಟ್ರ ಮಟ್ಟದಲ್ಲಿ ತಯಾರಿ ಬೇಕು.

ನಿರುದ್ಯೋಗ ಹಾಗೂ ಬಡತನದ ವಿಷಯದಲ್ಲಿ ರಾಷ್ಟ್ರಮಟ್ಟದ ತಯಾರಿ ಹೆಚ್ಚು ಮುಖ್ಯವಾಗುತ್ತದೆ. ದೊಡ್ಡ ಬಂಡವಾಳಿಗರಿಗೆ ಉತ್ತೇಜನ ಕೊಟ್ಟರೆ ಕಾರ್ಮಿಕರ ಬೇಡಿಕೆ ಹೆಚ್ಚುತ್ತದೆ. ಆಗ ಜನ ಹಳ್ಳಿಯಿಂದ ಪಟ್ಟಣಗಳಿಗೆ ವಲಸೆ ಹೋಗುತ್ತಾರೆ ಎಂದು ವಾದಿಸಲಾಗುತ್ತಿದೆ. ಆದರೆ ವಾಸ್ತವ ಅದನ್ನು ಸಮರ್ಥಿಸುವುದಿಲ್ಲ. ಜನಸಂಖ್ಯೆಯ ದರದಲ್ಲಿ ಉದ್ಯೋಗ ಬೆಳೆಯುತ್ತಿಲ್ಲ. ಬೆಳವಣಿಗೆಯ ಮಾದರಿ ಬದಲಾಗಬೇಕು.

ಮೊದಲಿಗೆ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಯಾಗಬೇಕು. ಜನ ಇರುವ ಕಡೆ ಉದ್ಯೋಗ ಹೋಗಬೇಕು. ಗ್ರಾಮೀಣ ಉದ್ದಿಮೆಗಳಿಗೆ, ಕೃಷಿಗೆ ಮಹತ್ವ ಕೊಡಬೇಕು ಕೈಗಾರಿಕೆಗಳು ತನ್ನ ಉತ್ಪನ್ನಗಳನ್ನು ಕೃಷಿಗೆ ರಫ್ತು ಮಾಡಬೇಕು. ಕೃಷಿ ಕ್ಷೇತ್ರದಲ್ಲಿ ಬೆಳವಣಿಗೆಯ ದರ ಹೆಚ್ಚಬೇಕು. ಆಗ ಆಂತರಿಕ ಮಾರುಕಟ್ಟೆ ಸೃಷ್ಟಿಯಾಗುತ್ತದೆ. ಅದು ಕೈಗಾರಿಕೀಕರಣವನ್ನು ಉತ್ತೇಜಿಸುತ್ತದೆ. ಕೈಗಾರಿಕೆಗಳು ಬೆಳೆದು ಹೆಚ್ಚು ಜನರಿಗೆ ತಲುಪುತ್ತದೆ, ಹೆಚ್ಚಿನ ಉದ್ಯೋಗ ಸೃಷ್ಟಿಯಾಗುತ್ತದೆ. ಹೀಗೆ ಮುಂದುವರಿಯುತ್ತಾ ಹೋಗುತ್ತದೆ ಅನ್ನುವ ವಾದ ಹೆಚ್ಚು ಸಮಂಜಸವಾಗಬಹುದು.

ಒಂದು ಮಹಾಮಾರಿಯನ್ನು ನಿಯಂತ್ರಿಸುವುದು ಅಥವಾ ಹವಾಮಾನ ಬದಲಾವಣೆಯನ್ನು ನಿಯಂತ್ರಿಸುವುದು ಇವೆಲ್ಲಾ ಜಾಗತಿಕ ಸಾಮೂಹಿಕ ಕ್ರಿಯೆಯ ಸಮಸ್ಯೆಗಳು. ಇಂತಹ ಜಾಗತಿಕ ಸಮಸ್ಯೆಗಳನ್ನು ಕೇವಲ ವಿಭಿನ್ನ ರೀತಿಯ ಅಂತರರಾಷ್ಟ್ರೀಯ ಸಹಕಾರದಿಂದ ಮಾತ್ರ ಪರಿಹರಿಸಲಿಕ್ಕೆ ಸಾಧ್ಯ. ಕೊರೋನಾ ಇದನ್ನು ಅರ್ಥಮಾಡಿಕೊಳ್ಳುವ ಒಂದು ಅವಕಾಶವನ್ನು ನಮಗೆ ಒದಗಿಸಿದೆ.

ಕೇವಲ ಸೋಂಕಿನ ವಿಷಯದಲ್ಲಿ ಮಾತ್ರವಲ್ಲ, ನಾವು ಸಿಲುಕಿರುವ ಆರ್ಥಿಕ ಸಂಕಷ್ಟದ ವಿಷಯದಲ್ಲೂ ಜಾಗತಿಕ ಸಹಕಾರ ಅನುಕೂಲ ಮಾಡಿಕೊಡಬಲ್ಲದು. ಅಂತರರಾಷ್ಟ್ರೀಯ ವ್ಯಾಪಾರ ಸಮಸ್ಯೆಯೇ ಆಗಬೇಕಾಗಿಲ್ಲ. ಪರಿಹಾರವೂ ಆಗಬಹುದು. ಸ್ಪರ್ಧೆಯ ಬದಲು ಸಹಕಾರ ಆದ್ಯತೆಯಾಗಬೇಕು. ದೇಶದೊಳಗೆ ಹೇಗೆ ದುರ್ಬಲರ ಪಾಡು ಆದ್ಯತೆಯಾಗಬೇಕೋ, ಹಾಗೆ ಜಾಗತಿಕ ಮಟ್ಟದಲ್ಲಿ ಬಡರಾಷ್ಟ್ರಗಳ ಪಾಡು ಗಮನದಲ್ಲಿರಬೇಕು.

 

*ಲೇಖಕರು ಸಂಖ್ಯಾವಿಜ್ಞಾನದ ನಿವೃತ್ತ ಪ್ರಾಧ್ಯಾಪಕರು; ಸಂಗೀತ ಮತ್ತು ಅರ್ಥವಿಜ್ಞಾನಗಳಲ್ಲಿ ವಿಶೇಷ ಆಸಕ್ತಿ. ಕರ್ನಾಟಕ ಶಾಸ್ತ್ರೀಯ ಸಂಗೀತ ತಜ್ಞೆ, ಇಂಗ್ಲಿಶ್ ಸಾಹಿತ್ಯದ ನಿವೃತ್ತ ಪ್ರಾಧ್ಯಾಪಕಿ, ತಮ್ಮ ಬಾಳಸಂಗಾತಿ ಶೈಲಜಾ ಅವರೊಂದಿಗೆ ಹತ್ತಾರು ಪುಸ್ತಕ ರಚಿಸಿ, ‘ರಾಗಮಾಲಾಪ್ರಕಾಶನದಿಂದ ಪ್ರಕಟಿಸಿದ್ದಾರೆ.

 

 

 

*

Leave a Reply

Your email address will not be published.