ಸ್ವಾವಲಂಬನೆ ಬೇಕೆ..? ಜಾಗತೀಕರಣ ಸಾಕೆ..?

ಆಗಸ್ಟ್ ಸಂಚಿಕೆಯ ಮುಖ್ಯ ಚರ್ಚೆ:   

ಸಾಂಕ್ರಾಮಿಕ ರೋಗಗಳಿಂದ ಗ್ರಸ್ತವಾಗಿರುವ ಭಾರತದ ಆರ್ಥಿಕತೆಯ ಪುನಶ್ಚೇತನಕ್ಕೆ ರೂ.20 ಲಕ್ಷ ಕೋಟಿಗಳ ‘ಪ್ಯಾಕೇಜ್’ ಘೋಷಿಸುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶವು ಆತ್ಮನಿರ್ಭರತೆಯ (ಸ್ವಾವಲಂಬನೆಯ) ಹಾದಿಯಲ್ಲಿ ಸಾಗಬೇಕೆಂದು ಕರೆಕೊಟ್ಟಿದ್ದಾರೆ. ಈ ಕರೆಯ ಬಗ್ಗೆ ದೇಶ-ವಿದೇಶಗಳಲ್ಲಿ ವ್ಯಾಪಕ ಚರ್ಚೆ ಹಾಗೂ ವಿವಾದಗಳು ಸೃಷ್ಟಿಯಾಗಿವೆ. 1950ರ ದಶಕದಿಂದಲೇ ಜವಾಹರಲಾಲ್ ನೆಹರೂ ಮುಂದಾಳತ್ವದಲ್ಲಿ ದೇಶವು ಸ್ವಾವಲಂಬನೆಯ ಹಾದಿ ಹಿಡಿದಿದೆ. ಇದರಲ್ಲಿ ಸಾಕಷ್ಟು ಯಶಸ್ಸನ್ನೂ ಕಂಡಿರುವುದರ ಜೊತೆಗೆ ಯಾವ ಉತ್ಪಾದನೆ ಹಾಗೂ ಯಾವ ಸೇವೆಗಳಲ್ಲಿ ನಾವು ಇನ್ನೂ ಪರಾವಲಂಬಿಗಳಾಗಿದ್ದೇವೆ ಎಂಬುದರ ವಿಮರ್ಶೆಯೂ ನಡೆದಿದೆ. ಹಲವು ದಶಕಗಳ ಹಿಂದಿನ ಸ್ವಾವಲಂಬನೆಯ ಸೂತ್ರ ಇಂದು ಸಾಂಕ್ರಾಮಿಕ ರೋಗದ ಕಾರಣಕ್ಕೆ ಪ್ರಸ್ತುತವಾಗಿದೆಯೇ ಎಂಬ ಪರಿಶೀಲನೆಯ ಅಗತ್ಯವೂ ಕಂಡಿದೆ.

ಸಾಂಕ್ರಾಮಿಕ ರೋಗದ ಕಾರಣದಿಂದ ಜಾಗತೀಕರಣಕ್ಕೆ ಆಗಿರುವ ಹಿನ್ನೆಡೆ ತಾತ್ಕಾಲಿಕವೇ ಅಥವಾ ಶಾಶ್ವತವೇ ಎನ್ನುವ ಚರ್ಚೆಯೂ ಬೇಕಿದೆ. ಈ ಸಂದರ್ಭದಲ್ಲಿ ಜಾಗತಿಕ ಅಸ್ಪೃಶ್ಯನಾಗಿರುವ ಚೀನಾ ದೇಶದಿಂದ ಬಹುದೇಶೀಯ ಕಂಪನಿಗಳು ತಮ್ಮ ಉತ್ಪಾದನಾ ಘಟಕಗಳನ್ನು ಹಿಂದೆಗೆಯುವ ಸಾಧ್ಯತೆಯಲ್ಲಿ ಭಾರತ ಮತ್ತಿತರ ದೇಶಗಳಿಗೆ ಹೆಚ್ಚಿನ ಅವಕಾಶ ಸೃಷ್ಟಿಯಾಗಿದೆಯೇ ಎಂಬುದನ್ನೂ ಮನಗಾಣಬೇಕಿದೆ. ಜಾಗತಿಕ ಸರಕು-ಸೇವೆ ಪೂರೈಕೆಯ ಸರಪಳಿಯಲ್ಲಿ ಭಾರತಕ್ಕೆ ಇನ್ನೂ ಹೆಚ್ಚಿನ ಹೂಡಿಕೆ-ಉತ್ಪಾದನೆಯ ಅವಕಾಶಗಳು ಒದಗಲಿದೆಯೇ ಎಂಬುದನ್ನೂ ಸರ್ಕಾರ ಮತ್ತು ದೇಶೀಯ ಕಂಪನಿಗಳು ಪತ್ತೆ ಮಾಡಬೇಕಿದೆ. ಇಂತಹ ಸಂದರ್ಭದಲ್ಲಿ ಈ ಕೆಲವು ಪ್ರಶ್ನೆಗಳೂ ನಮ್ಮ ಮುಂದಿವೆ.

  • ಕೋವಿಡ್ ಸಾಂಕ್ರಾಮಿಕದಿAದ ಜಾಗತೀಕರಣದ ಯುಗ ಮುಗಿಯುವಂತೆ ಕಾಣುತ್ತಿದೆಯೇ..?
  • ಜಾಗತೀಕರಣ ವ್ಯವಸ್ಥೆಗೆ ತಡವಾಗಿ 90ರ ದಶಕದಲ್ಲಿ ನಿಧಾನವಾಗಿ ಪ್ರವೇಶ ಪಡೆದ ಭಾರತಕ್ಕೆ ನಿಜವಾಗಲೂ ಜಾಗತೀಕರಣ ಮಾರಕವಾಗಿದೆಯೇ..?
  • ಸ್ವಾವಲಂಬನೆಯ ಹಾದಿಯಲ್ಲಿ ಭಾರತದ ಬಡತನ ಮತ್ತು ನಿರುದ್ಯೋಗ ಸಮಸ್ಯೆ ಪರಿಹರಿಸಲು ಸಾಧ್ಯವಿದೆಯೇ..?
  • ಈಗ ಪ್ರಧಾನಿಯವರು ಸ್ವಾವಲಂಬನೆಯ ಕರೆ ಕೊಡುವ ಅಗತ್ಯವಿತ್ತೇ..?

ಮುಂದಿನ ಕೆಲವು ಮಹತ್ವದ ವರುಷಗಳಲ್ಲಿ ಈ ಪ್ರಶ್ನೆಗಳು ಭಾರತದ ಆರ್ಥಿಕತೆಯನ್ನು ಕಾಡಲಿವೆ. ನಿಮ್ಮ ಸಮಾಜಮುಖಿ ಪತ್ರಿಕೆಯು ಪರ-ವಿರೋಧದ ಅಭಿಪ್ರಾಯಗಳನ್ನೆಲ್ಲಾ ನಿಮ್ಮ ಮುಂದೆ ಇಡುವ ಬಯಕೆಯಲ್ಲಿದೆ. ಪರಿಣತರ ಸಂಶೋಧಿತ ಬರಹಗಳ ಜೊತೆಯಲ್ಲಿ ನಿಮ್ಮ ವೈಯಕ್ತಿಕ ಅನಿಸಿಕೆ ಹಾಗೂ ಅನುಭವಗಳೂ ನಮಗೆ ಬೇಕಿದೆ. ನಿಮ್ಮ ಬರಹಗಳನ್ನು ಜುಲೈ 20ರೊಳಗೆ ನಮಗೆ ತಲುಪಿಸಿ.

 

ಸಮಾಜಮುಖಿ ಮಾಸಪತ್ರಿಕೆ

ನಂ.8, ಡಾ.ಎಚ್.ಎಲ್.ನಾಗೇಗೌಡ ರಸ್ತೆ (ಸರ್ಪೆಂಟೈನ್ ರಸ್ತೆ), ಕುಮಾರ ಪಾರ್ಕ್ ಪಶ್ಚಿಮ, ಶೇಷಾದ್ರಿಪುರಂ, ಬೆಂಗಳೂರು-560020,
ಮೊ: 9606934018  samajamukhi2017@gmail.com

Leave a Reply

Your email address will not be published.