ಸ್ವಾವಲಂಬನೆ ವರ್ಸಸ್ ಜಾಗತೀಕರಣ

ಸ್ವಾವಲಂಬನೆ ಮತ್ತು ಜಾಗತೀಕರಣ, ಇವೆರಡೂ ಪರಸ್ಪರ ಭಾವನೆಗಳನ್ನು ಕೆರಳಿಸುವ ಸುಂದರವಾದ ಪರಿಕಲ್ಪನೆಗಳು. ಯಾವುದೇ ಒಂದನ್ನು ಸಂಪೂರ್ಣವಾಗಿ ಅವಲಂಬಿಸುವುದು ಸದಾ ಬದಲಾಗುತ್ತಿರುವ ವಿದ್ಯಮಾನಗಳಲ್ಲಿ ತಂಬಾ ಕ್ಲಿಷ್ಟಕರ ಮತ್ತು ಸರಿಯಾದ ಮಾರ್ಗವಲ್ಲ ಕೂಡಾ.

–  ರಮಾನಂದ ಶರ್ಮಾ

ತೊಂಬತ್ತರ ದಶಕದಲ್ಲಿ ಮನಮೋಹನಸಿಂಗ್ ಮತ್ತು ನರಸಿಂಹರಾಯರ ಸರ್ಕಾರ ಆರ್ಥಿಕ ಸುಧಾರಣೆ ತಂದು, ಜಾಗತೀಕರಣದ ಬೀಜ ಬಿತ್ತಿ ಹದಗೆಡುತ್ತಿರುವ ಆರ್ಥಿಕತೆಯನ್ನು ಹಳಿ ಏರಿಸಲು ಕೆಲವು ದಿಟ್ಟ ನಿರ್ಧಾರ ತೆಗೆದುಕೊಳ್ಳುವವರೆಗೆ, ದೇಶವು ಜವಾಹರಲಾಲ ನೆಹರೂ ಬಿತ್ತಿದ ಸ್ವಾವಲಂಬನೆ ಪಥದಲ್ಲಿ ಸಾಗುತ್ತಿತ್ತು. ಸೇವೆ ಮತ್ತು ಉತ್ಪಾದನೆ ವಿಭಾಗದಲ್ಲಿ ನೆಹರೂ ನಿಲುವು ಸಾಕಷ್ಟು ಯಶಸ್ಸು ಗಳಿಸಿದ್ದರೂ, ದೇಶದ ಆರ್ಥಿಕ ಹಿಂಜರಿಕೆ ನೀಗಿಸಲು, ಚೇತರಿಕೆ ತರಿಸಲು ಜಾಗತೀಕರಣ ಅನಿವಾರ್ಯವಾಗಿತ್ತು. ಜಾಗತೀಕರಣದ ಅಡಿಯಲ್ಲಿ ಅವರು ಕೈಕೊಂಡ ಕೆಲವು ನಿರ್ಧಾರಗಳು ಮತ್ತು ಇಟ್ಟ ಹೆಜ್ಜೆಗಳು ದೇಶದ ಅರ್ಥಿಕತೆಯನ್ನು ಸದೃಢಗೊಳಿಸಲು ಮತ್ತು ದೇಶವನ್ನು ಪ್ರಗತಿಯತ್ತ ಒಯ್ಯಲು ಸಹಾಯಕವಾಗಿದ್ದವು. ಅವರ ಈ ಕ್ರಮಗಳನ್ನು ಜಗತ್ತಿನಾದ್ಯಂತ ಹೊಗಳಿ ಹಾಡಲಾಗಿತ್ತು.

ಕ್ಲಿಷ್ಟಕರ ತಂತ್ರಜ್ಞಾನ, ಉನ್ನತ ವ್ಯಾಸಂಗ, ಕಚ್ಚಾಮಾಲುಗಳ ಆಯಾತ ಮತ್ತು ಆಯಾತ ಮಾಡುವ ಪದಾರ್ಥಗಳನ್ನು ದೇಶೀಯವಾಗಿ ಉತ್ಪನ್ನ ಮಾಡಿ ಅಮೂಲ್ಯ ವಿದೇಶಿ ವಿನಿಮಯ ಉಳಿಸುವುದಕ್ಕೆ ಸೀಮಿತವಾಗಿದ್ದರೆ, ಉದ್ಯೋಗ ಅವಕಾಶಗಳನ್ನು ಕಿತ್ತುಕೊಳ್ಳದಿದ್ದರೆ ಜಾಗತೀಕರಣವನ್ನು ಸ್ವಾಗತಿಸಬಹುದು. ಆದರೆ, ಜಾಗತೀಕರಣವು ತೀರಾ ಸಾಮಾನ್ಯವಾದ ಪದವಿ ಪಡೆಯಲು, ಪಕ್ಕದ ಗಲ್ಲಿಯಲ್ಲಿ ಹಪ್ಪಳ ಸಂಡಿಗೆ ಮಾಡಿ ಬದುಕು ನಡೆಸುವ ಲಕ್ಕಮ್ಮನ ಬದುಕಿನ ಬಂಡಿಯನ್ನು ನಿಲ್ಲಿಸುವುದಿದ್ದರೆ, ನೆಗಡಿ-ಶೀತ-ಕೆಮ್ಮು, ಹಲ್ಲು ನೋವಿನಂತಹ ತೊಂದರೆಗಳಿಗೂ ವಿದೇಶದಲ್ಲಿ ಚಿಕಿತ್ಸೆ ಪಡೆಯುವ ಮಟ್ಟಕ್ಕೆ ಹೋದರೆ? ದೇಶದ ನೀತಿ ಆಯೋಗ, ರಿಸರ್ವ್ ಬ್ಯಾಂಕ್, ಉದ್ಯಮ ಮಂತ್ರಾಲಯ, ಶಿಕ್ಷಣ-ಹಣಕಾಸು ಇಲಾಖೆಗಳು ಚಿಂತಿತರಾಗಬೇಕಾಗುತ್ತವೆ.

ಅದಕ್ಕೂ ಮೇಲಾಗಿ ಭಾರತೀಯರು ವಿದೇಶಿ ವ್ಯಾಮೋಹಿಗಳಾಗಿದ್ದು, ಸ್ವದೇಶಿ ಮಂತ್ರ ಮಣ್ಣು ಮುಕ್ಕುತ್ತದೆ. ಹಾಗೆಯೇ ಸ್ವಾವಲಂಬನೆ, ದೇಶಪ್ರೇಮ, ಉದ್ಯೋಗ ಅವಕಾಶ, ಸ್ವಾಭಿಮಾನಗಳು ಸ್ವಾಗತಾರ್ಹ ನಿಲುವುಗಳಾದರೂ, ಸಮಯಘಟ್ಟದಲ್ಲಿ ದೇಶದ ಸರ್ವತೋಮುಖ ಉನ್ನತಿಗೆ ರಾಜಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬರುತ್ತದೆ.

ದೇಶವು ಮಾನವ ಶಕ್ತಿಯ ವಿಷಯದಲ್ಲಿ, ಕಂಪ್ಯೂಟರ್ ವಿಷಯದಲ್ಲಿ ಇತರ ದೇಶಗಳಿಗಿಂತ ಮುಂದೆ ಇದ್ದಿರಬಹುದು. ಆದರೆ ತೈಲ, ಮಷಿನರಿ, ರಕ್ಷಣಾ ಸಾಮಗ್ರಿಗಳು, ಔಷಧಿ, ಆಹಾರ ಸಾಮಗ್ರಿಗಳು ಮುಂತಾದ ಮೂಲಭೂತ ಆವಶ್ಯಕತೆಯ ವಿಷಯದಲ್ಲಿ ನಾವಿನ್ನೂ ಪರಾವಲಂಬಿಗಳು. ಸ್ವಾವಲಂಬನೆ ಹಿಂದಿನ ಉದ್ದೇಶ ಘನವಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಅದನ್ನು ‘ಸ್ವರಕ್ಷಣೆ’ ಕನ್ನಡಿಯಲ್ಲಿ ನೋಡಲಾಗುತ್ತಿದೆ.

ಕಳೆದ ವರ್ಷ ಪ್ರಧಾನಿ ಮೋದಿಯವರು `ಮೇಕ್ ಇನ್ ಇಂಡಿಯಾ’ ಘೋಷಿಸುತ್ತಿದ್ದಂತೆ ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕೂಡಲೇ ಭಾರತೀಯ ವಸ್ತುಗಳ ಮೇಲೆ ಆಯಾತ ಕರ ಹೆಚ್ಚಿಸಿ ಮೋದಿಯವರ ಮಹತ್ವಾಕಾಂಕ್ಷಿ ಕ್ರಮಕ್ಕೆ ಛಾಟಿ ಬೀಸಿದರು. ಇದೂ ಸಾಲದ ಎನ್ನುವಂತೆ, ನಮ್ಮ ಪ್ರಧಾನಿಯವರ `ಆತ್ಮ ನಿರ್ಭರ’ ಘೊಷಣೆಯ ನಂತರ, ಅವರು ಇತ್ತೀಚೆಗೆ ವಲಸಿಗರ ವೀಸಾದ ಮೇಲೆ ನಿಯಂತ್ರಣ ಹೇರಿದ್ದು ಇದು ಭಾರತೀಯ ಟೆಕ್ಕಿಗಳ ಬದುಕಿನ ಕನೆಕ್ಷನ್ ಲಾಗೌಟ ಅಗುವಂತೆ ಮಾಡುತ್ತಿದೆ. ಮಧ್ಯಪ್ರಾಚ್ಯ ದೇಶಗಳಿಂದ ಲಕ್ಷಾಂತರ ವಲಸಿಗರನ್ನು ಹೊರದೂಡುತ್ತಿದ್ದಾರೆ. ಈ ಕ್ರಮಗಳಲ್ಲಿ ‘ಮಣ್ಣಿನ ಮಕ್ಕಳ’ ಥಿಯರಿ ಕಾಣುತ್ತಿದ್ದರೂ ಅ ದೇಶಗಳ ಸ್ವಾವಲಂಬನೆಯ ಕಲ್ಪನೆ ಗೌಪ್ಯವಾಗಿದೆ.

ಕೋವಿಡ್ ಸಾಂಕ್ರಾಮಿಕದಿಂದ ಜಾಗತೀಕರಣದ ಪ್ರಕ್ರಿಯೆಗೆ ಹೊಡೆತ ಬಿದ್ದದ್ದು ನಿಜವಾದರೂ, ಜಾಗತೀಕರಣದ ಯುಗ ಮುಗಿದಿದೆ ಎಂದು ಹೇಳಲಾಗದು. ಇದೊಂದು ತಾತ್ಕಾಲಿಕ ಸ್ಥಗಿತವಷ್ಟೇ. ಹಿಂದೆ ವಿಶ್ವಯುದ್ಧದ ಕಾಲದಲ್ಲಿ ಮತ್ತು ಜಗತ್ತನ್ನು ಪ್ಲೇಗಿನಂತಹ ಮಹಾರೋಗಗಳು ದಂಗು ಬಡಿಸಿದಾಗ ಇದೇ ಪರಿಸ್ಥಿತಿ ಇತ್ತು. ಕಾಲಕ್ರಮೇಣ ಎಲ್ಲವೂ ಸಹಜ ಸ್ಥಿಗೆ ಮರಳುತ್ತದೆ.

ಜಾಗತೀಕರಣ ಭಾರತಕ್ಕೆ ಮಾರಕ ಎನ್ನುವ ಆರೋಪದಲ್ಲಿ ಹುರುಳಿಲ್ಲ. ಆದರೆ, ಇದರ ದುರುಪಯೋಗ ಆಗಿದೆ ಎನ್ನುವ ಅಭಿಪ್ರಾಯದಲ್ಲಿ ಸತ್ಯವಿಲ್ಲದಿಲ್ಲ. ಎಲೆಕ್ಟ್ರಾನಿಕ್ ಸಲಕರಣೆಗಳ ವಿಚಾರದಲ್ಲಿ ದೇಶಿ ಉದ್ಯಮ ಹಳ್ಳ   ಹಿಡಿದದ್ದನ್ನು ನೋಡಿದರೆ, ಈ ಮಾತಿನ ಅರ್ಥವಾಗದಿರದು. ಹಾಗೆಯೇ ಸ್ವಾವಲಂಬನೆ ಬಡತನ ನಿರ್ಮೂಲನೆ ಮಾಡುತ್ತದೆ ಮತ್ತು ಉದ್ಯೋಗ ಅವಕಾಶಗಳನ್ನು ಹೆಚ್ಚಿಸುತ್ತದೆ ಎನ್ನುವುದು ಮೇಲುನೋಟಕ್ಕೆ ಸರಿ ಎನಿಸಿದರೂ, ವಾಸ್ತವದಲ್ಲಿ ಈ ಹಾದಿ ಸಾಕಷ್ಟು ದುರ್ಗಮ. ಈ ನಿಟ್ಟಿನಲ್ಲಿ ಸ್ಟಾರ್ಟಪ್‌ಗಳ ಬವಣೆ ಗಮನಿಸಬಹುದು. ಸ್ವಾವಲಂಬನೆ ಮತ್ತು ಜಾಗತೀಕರಣ ಜೊತೆ ಜೊತೆಗೆ ಹೋದಾಗಲೇ ಅಭಿವೃದ್ಧಿ ಸಾಧ್ಯ.

ಪ್ರಧಾನಿಯವರು ತಮ್ಮ ಸ್ವಾವಲಂಬನೆ ಕರೆಯಲ್ಲಿ ಜಾಗತೀಕರಣವನ್ನು ವಿರೋಧಿಸಲಿಲ್ಲ. ಅದರ ನಿಯಂತ್ರಣನ್ನು ಪ್ರತಿಪಾದಿಸುತ್ತಾ ಸ್ವಾವಲಂಬನೆಗೆ ಒತ್ತು ನೀಡಿದ್ದಾರೆ. ಯಾವುದು ನಮ್ಮಿಂದ ಸಾಧ್ಯವೋ, ಅಲ್ಲಿ ಸ್ವಾವಲಂಬನೆ ಇರಲಿ, ಜಾಗತೀಕರಣ ಎಲ್ಲದಕ್ಕೂ ವಿಸ್ತರಿಸದಿರಲಿ ಎನ್ನುವುದು

ಅವರ ಕಳಕಳಿ. ಅತಿಯಾದ ಸ್ವಾವಲಂಬನೆ ಜಾಗತಿಕವಾಗಿ ನಮ್ಮನ್ನು ಏಕಾಂಗಿಯಾಗಿ ಮಾಡುತ್ತದೆ. ಈ ನಿಟ್ಟಿನಲ್ಲಿ ಪ್ರಧಾನಿಯವರ ಕರೆ ಸಮಯೋಚಿವಾಗಿದೆ.

Leave a Reply

Your email address will not be published.