ಸ್ವಾವಲಂಬಿ ಭಾರತದ ಜಾಗತಿಕ ದೃಷ್ಟಿಕೋನ

ಆತ್ಮನಿರ್ಭರ ಭಾರತ್ತತ್ವದ ಅಡಿಯಲ್ಲಿ ದೇಶದಲ್ಲಾಗುತ್ತಿರುವ ಜಾಗತೀಕರಣದ ಪ್ರಗತಿ, ಭಾರತ ಅಭಿವೃದ್ಧಿಯತ್ತ ಇಟ್ಟ ದಿಟ್ಟ ದಾಪುಗಾಲು. ಮುಂದಿನ 5-6 ವರುಷಗಳಲ್ಲಿ ಈ ಯಶೋಗಾಥೆಯ ಫಲವನ್ನು ನಾವು ನೋಡಲಿದ್ದೇವೆ.

1956ರಲ್ಲಿ ಅಂಗಿಕಾರಗೊಂಡ ಅಂದಿನ ಪ್ರಧಾನಿ ಪಂಡಿತ್ ನೆಹರೂ ಅವರ ‘ಕೈಗಾರಿಕಾ ನೀತಿಯ ರೆಸಲೂಷನ್’ ಭಾರತದಲ್ಲಿ ‘ಸಮಾಜವಾದಿ ಮಾದರಿಯ ಸಮಾಜ’ದ ಸ್ಥಾಪನೆಗೆ ಒತ್ತು ನೀಡಿತ್ತು. ನಂತರ ಅಧಿಕಾರದ ಚುಕ್ಕಾಣಿ ಹಿಡಿದ ಇಂದಿರಾಗಾಂಧಿಯವರ ‘ಉಳುವವನೇ ಭೂಮಿಯ ಒಡೆಯ’, ‘ಬ್ಯಾಂಕ್‌ಗಳ ರಾಷ್ಟ್ರೀಕರಣ’ ಮುಂತಾದ ಕ್ರಾಂತಿಕಾರಿ ಹಾಗೂ ವಿವಾದಾತ್ಮಕ ನೀತಿಗಳು ಕಾಂಗ್ರೆಸ್ ಪಕ್ಷಕ್ಕೆ 57 ವರುಷಗಳ ಕಾಲ ದಿಲ್ಲಿ ಗದ್ದುಗೆಯ ಆಡಳಿತವನ್ನೇನೋ ನೀಡಿತು, ಆದರೆ ಭಾರತವನ್ನು ಆರ್ಥಿಕವಾಗಿ ಜರ್ಝರಿಗೊಳಿಸಿತು.

ಸಮಾಜವಾದ ನೀತಿಯ ಅನುಷ್ಠಾನದ ಸೋಗಿನಲ್ಲಿ ಮತ ಬ್ಯಾಂಕ್ ಆಧಾರಿತ ಆರ್ಥಿಕ ನೀತಿ, ವಿಪರೀತವಾದ ಬೆಲೆ ಏರಿಕೆ (1974: 34.7%), ಅತೀ ಕಡಿಮೆ ಜಿಡಿಪಿ ಅಭಿವೃದ್ಧಿಯ ದರ, ಉಸಿರು ಕಟ್ಟಿಸುವ ಮಟ್ಟದ ಸಾಲದ ಮೇಲಿನ ಬಡ್ಡಿಯ ದರ (ಶೇ.20), ಸತತವಾಗಿ ಅಪಮೌಲ್ಯಗೊಳಿಸಲಾಗುತ್ತಿದ್ದ ರೂಪಾಯಿ, ಅಪಾರವಾದ ವಿತ್ತೀಯ ಕೊರತೆ, ಜೊತೆಗೆ ಭ್ರಷ್ಟಾಚಾರದ ಪ್ರತೀಕವಾದ ‘ಪರ್ಮಿಟ್ ರಾಜ್’ ವ್ಯವಸ್ಥೆ…! ಇನ್ನೇನು ಬೇಕು ಆರ್ಥಿಕ ದುರಂತಕ್ಕೆ?

ಸಮಾಜವಾದದ ನೀತಿಯ ಅಡಿಯಲ್ಲಿ ಬಡತನವನ್ನು ಹಂಚಲಾಯಿತೇ ವಿನಾ ಶ್ರೀಮಂತಿಕೆಯನ್ನಲ್ಲ (ಬಡತನದ ದರ 1975; ಶೇ.45). ಇವೆಲ್ಲದರ ಸಂಚಿತ ಪರಿಣಾಮವೇ ಅಂತರರಾಷ್ಟ್ರೀಯ ಸಾಲಕ್ಕೆ ಬಡ್ಡಿ ಕೊಡಲೂ ವಿದೇಶಿ ವಿನಿಮಯವಿಲ್ಲದೇ 1991ರಲ್ಲಿ ರಿಸರ್ವ್ ಬ್ಯಾಂಕ್‌ನ ಸುಪರ್ದಿಯಲ್ಲಿದ್ದ 47 ಟನ್ ಚಿನ್ನವನ್ನು ಬ್ಯಾಂಕ್ ಆಫ್ ಇಂಗ್ಲೆಂಡ್‌ಗೆ ಒತ್ತೆಯಿಟ್ಟ ದುಸ್ಥಿತಿಯನ್ನು ಭಾರತ ಎದುರಿಸಬೇಕಾಯಿತು. 1947ರಲ್ಲಿ ಒಂದು ಅಮೆರಿಕನ್ ಡಾಲರ್‌ಗೆ ಒಂದು ರೂಪಾಯಿ ವಿನಿಮಯ ದರವಿದ್ದರೂ, ನಂತರ ರೂಪಾಯಿ ನಿರಂತರವಾಗಿ ಅಪಮೌಲ್ಯಗೊಳ್ಳುತ್ತಾ 1991ರಲ್ಲಿ ಎರಡೇ ದಿನಗಳಲ್ಲಿ ಶೇ.18ರಷ್ಟು ಭಾರತದ ರೂಪಾಯಿಯನ್ನು ಅಪಮೌಲ್ಯಗೊಳಿಸಲಾಯಿತು. ಇದು 1991ರ ಹೊತ್ತಿಗೆ, ಸ್ವತಂತ್ರ ಭಾರತದ 44 ವರುಷಗಳ ನಂತರದ ಪರಿಸ್ಥಿತಿಯ ಪಕ್ಷಿನೋಟ.

ಈ ವಾತಾವರಣದಲ್ಲಿ ನೆಹರೂ ವಂಶಸ್ಥರಲ್ಲದ ಪಿ.ವಿ.ನರಸಿಂಹರಾವ್ ಅವರು ದೇಶದ ಪ್ರಧಾನಿಯಾಗಿ ‘ಸಮಾಜವಾದ ಮಾದರಿಯ ಸಮಾಜ’ದ ಸ್ಥಾಪನೆಗೆ ಪೂರಕವಾದ ಕೈಗಾರಿಕಾ ನೀತಿಯನ್ನು (ಪರ್ಮಿಟ್ ರಾಜ್ ವ್ಯವಸ್ಥೆ) ಬುಡಸಹಿತ ಕಿತ್ತು ಹಾಕಿದ್ದು ಮಾತ್ರವಲ್ಲ, ಆರ್ಥಿಕ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಪರಿವರ್ತನಾ ಮಾದರಿಯ ಸುಧಾರಣೆಗಳನ್ನು ಜಾರಿಗೊಳಿಸುವುದರೊಂದಿಗೆ ‘ಜಾಗತೀಕರಣಕ್ಕೆ’ ಭದ್ರವಾದ ಅಡಿಪಾಯ ಹಾಕಿದರು.

ಅಂತರ್ಜಾಲ ಸಂಶೋಧನೆಯ ನಂತರ ತಂತ್ರಜ್ಞಾನ ಕ್ಷೇತ್ರದಲ್ಲಿ ಕಲ್ಪನೆಗೂ ಮೀರಿದ ಮಟ್ಟದಲ್ಲಿ ಅಭಿವೃದ್ಧಿ ಮತ್ತು ಬದಲಾವಣೆಗಳಾಗುತ್ತಿವೆ. ಇವು ಜಗತ್ತಿನ ಆರ್ಥಿಕತೆ ಜೊತೆಗೆ ಜೀವನದ ಶೈಲಿಯನ್ನೂ ಬದಲಾಯಿಸುತ್ತಿವೆ. ಜಾಗತೀಕರಣದಿಂದಾಗಿ ಇಡೀ ವಿಶ್ವವೇ ಡಿಜಿಟಲ್ ಆರ್ಥಿಕತೆಯಾಗಿ ಹೊರಹೊಮ್ಮುತ್ತಿರುವ ಈ ಸನ್ನಿವೇಶದಲ್ಲಿ ಭಾರತ (ಸಾಕಷ್ಟು ಎಚ್ಚರದಿಂದ) ಜಾಗತೀಕರಣದಲ್ಲಿ ಭಾಗವಹಿಸದಿದ್ದರೆ ನಮ್ಮ ಮುಂದಿನ ಪೀಳಿಗೆಗೆ ನಾವು ಮಾಡುತ್ತಿರುವ ಅನ್ಯಾಯವೇನೋ ಎನ್ನುವ ಭಯ ನನ್ನನ್ನು ಕಾಡುತ್ತಿದೆ.

ಯಾವುದೇ ದೇಶವಿರಲಿ ಅಭಿವೃದ್ಧಿಗೆ 4 ಪ್ರಮುಖ ಆಧಾರಸ್ತಂಭಗಳಿರುತ್ತವೆ: 1) ಖಾಸಗಿ ವಲಯದ ಹೂಡಿಕೆ 2) ಸಾರ್ವಜನಿಕ ವಲಯದಲ್ಲಿ ಹೂಡಿಕೆ (ಸರ್ಕಾರದಿಂದ) 3) ದೇಶೀಯ ಬಳಕೆ 4) ರಫ್ತು ವಲಯ. ಭಾರತದ ದೃಷ್ಟಿಯಿಂದ ಹೇಳುವುದಾದರೆ, ಅಭಿವೃದ್ಧಿಯ ಈ ಇಂಜಿನ್‌ಗಳಲ್ಲಿ ಸಾರ್ವಜನಿಕ ವಲಯದಲ್ಲಿ ಹೂಡಿಕೆ ಮತ್ತು ದೇಶೀಯ ಬಳಕೆ -ಇವೆರಡೂ ನಿರಂತರವಾಗಿ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡುತ್ತಿವೆ. ಖಾಸಗೀ ವಲಯದ ಹೂಡಿಕೆ ನಂಬುವಂತಿಲ್ಲ. ರಫ್ತು ಕ್ಷೇತ್ರದಲ್ಲಿ ಭಾರತದ ಸಾಧನೆ ಹೇಳಿಕೊಳ್ಳುವಷ್ಟಿಲ್ಲ.

ಅಭಿವೃದ್ಧಿಯ ಈ ನಾಲ್ಕು ಇಂಜಿನ್‌ಗಳಲ್ಲಿ ದೇಶವು ಅಭಿವೃದ್ಧಿಶೀಲ ರಾಷ್ಟ್ರದಿಂದ ಅಭಿವೃದ್ಧಿಗೊಂಡ ರಾಷ್ಟ್ರವಾಗಲು ರಫ್ತು ಕ್ಷೇತ್ರದ ಸಾಧನೆಯೇ ಪ್ರಮುಖ. ‘ಏಷ್ಯನ್ ಹುಲಿಗಳು’ ಎಂದೇ ಪ್ರಸಿದ್ಧವಾಗಿರುವ ಜಪಾನ್, ದಕ್ಷಿಣ ಕೊರಿಯ, ತೈವಾನ್, ಸಿಂಗಪೂರ್, ಇಂಡೋನೆಶಿಯ, ಹಾಂಗ್‌ಕಾಂಗ್ ಮುಂತಾದ ದೇಶಗಳ ಸಾಧನೆಗೆ ಅವುಗಳ ರಫ್ತು ನಿರಂತರವಾಗಿ ಕೊಡುಗೆ ನೀಡಿದೆ. ಈ ದೇಶಗಳಲ್ಲಿ ಕಡಿಮೆ ಜನಸಂಖ್ಯೆಯಿಂದಾಗಿ ರಫ್ತಿನ ಸಾಧನೆ ಎದ್ದು ಕಾಣುತ್ತದೆ ಎನ್ನುವುದು ಟೀಕಾಕಾರರ ತರ್ಕ.

ಹಾಗಿದ್ದಲ್ಲಿ ಚೀನಾದ ಉದಾಹರಣೆಯನ್ನು ಗಮನಿಸಿ. 1975ರಲ್ಲಿ ಚೀನಾದ ಜಿಡಿಪಿ 163 ಬಿಲಿಯನ್ ಡಾಲರ್ಸ್ ಮತ್ತು ರಫ್ತಿನ ಪ್ರಮಾಣ 7.7 ಬಿಲಿಯನ್ ಡಾಲರ್ಸ್ ಅಂದರೆ ಜಿಡಿಪಿಯ ಶೇ.4.7 ರಫ್ತು. 1975ರಲ್ಲಿ ಚೀನಾ ಕಡುಬಡತನದ ದೇಶವಾಗಿದ್ದು, ಜನಸಾಮಾನ್ಯರು ದಂಗೆ ಏಳುವುದನ್ನು ತಡೆ ಹಿಡಿಯಲು ಸೇನಾಶಕ್ತಿಗಳ ದುರ್ಬಳಕೆಯಿಂದ ಒಂದು ರೀತಿ ರಾಜಕೀಯ ಅವ್ಯವಸ್ಥೆಗೆ ಹೆಸರಾಗಿತ್ತು.

ಆದರೆ 1976ರಲ್ಲಿ ಮಾವೋ ಅವಸಾನದ ನಂತರ ಕೈಗಾರಿಕಾ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಆರಂಭಗೊAಡ ಅಪಾರವಾದ ಸುಧಾರಣೆ ಮತ್ತು ಜಾಗತೀಕರಣದಿಂದಾಗಿ 35 ವರುಷಗಳಲ್ಲಿ, ಅಂದರೆ 2010ರ ಹೊತ್ತಿಗೆ ಚೀನಾದ ರಫ್ತು 1654 ಬಿಲಿಯನ್ ಡಾಲರ್ಸ್ ಅಂದರೆ 1975ರ ರಫ್ತಿನ 215 ಪಟ್ಟು ತಲುಪಿತ್ತು! ಇದೇ ಕಾಲದಲ್ಲಿ ಚೀನಾದ ಜಿಡಿಪಿ 163 ಬಿಲಿಯನ್ ಡಾಲರ್ಸ್ನಿಂದ 2010ರ ಹೊತ್ತಿಗೆ 6000 ಬಿಲಿಯನ್ ಡಾಲರ್ಸ್ ಗೆ ಅಂದರೆ 37 ಪಟ್ಟು ಏರಿತು. ಈ ಏರಿಕೆಯಾದ ಜಿಡಿಪಿಯ ಮೇಲೆ ರಫ್ತಿನ ಪ್ರಮಾಣ ಶೇ.4.7ರಿಂದ ಶೇ.27ಕ್ಕೆ ಏರಿರುವುದು ಗಮನಿಸಬೇಕಾದ ಸಂಗತಿ. 21ನೇ ಶತಮಾನದಲ್ಲಿ ಚೀನಾದ ಸಾಟಿ ಇಲ್ಲದ ಯಶೋಗಾಥೆಗೆ, ಚೀನಾ ರಫ್ತಿನ ಕ್ಷೇತ್ರದಲ್ಲಿ ಸಾಧಿಸಿದ ಯಶಸ್ಸೇ ಪ್ರಮುಖ ಕಾರಣ. ಚೀನಾ ಜಾಗತೀಕರಣದಿಂದ ತನ್ನ ಆರ್ಥಿಕ ಸಮಸ್ಯೆ ಬಗೆಹರಿಸಿಕೊಂಡಿತು. ಆದರೆ ಭಾರತದ ಆರ್ಥಿಕ ವ್ಯವಸ್ಥೆ ನಪಾಸಾಯಿತು.

1991ರಲ್ಲಿ ನರಸಿಂಹರಾವ್ ಅವರು ಭಾರತದ ಆರ್ಥಿಕತೆಯ ದಿಕ್ಕನ್ನೇ ಬದಲಿಸಿದ ನಂತರ, 1996ರಲ್ಲಿ ಭಾರತಕ್ಕೆ ‘ಸರಕುಗಳ ಅಂತರರಾಷ್ಟ್ರೀಯ ಬಿಡಿಭಾಗಗಳ ಪೂರೈಕೆಯ ಸರಪಳಿ’ಗೆ (ಟ್ರಾನ್ಸ್ ನ್ಯಾಷನಲ್ ಸಪ್ಲೈ ಚೈನ್) ಸೇರ್ಪಡೆಯಾಗುವ ಅವಕಾಶವಿತ್ತು. ಚೀನಾ ದೇಶ ಮೊದಲು ಚರ್ಚೆ ಮಾಡಿದ್ದೇ ಭಾರತದೊಂದಿಗೆ. ದೇಶದ ಆರ್ಥಿಕ ಪರಿಸ್ಥಿತಿಯಲ್ಲಿ ಮಹತ್ತರ ಪರಿವರ್ತನೆ ಹಾಗೂ ಹಲವು ದಶಲಕ್ಷ ಉದ್ಯೋಗ ಸೃಷ್ಟಿಮಾಡುವ ಈ ಅಂತರರಾಷ್ಟ್ರೀಯ ಮೆಗಾ ಯೋಜನೆಗೆ ಭಾರತ ಕೈ ಜೋಡಿಸದಿದ್ದದ್ದು ನಮ್ಮ ಯುವ ಪೀಳಿಗೆಯ ದುರಂತವೆಂದರೆ ಉತ್ಪ್ರೇಕ್ಷೆಯಲ್ಲ. ಇಂದು ಜಗತ್ತಿನ ಬೇಡಿಕೆಯ ಶೇ.80 ಲ್ಯಾಪ್‌ಟಾಪ್, ಶೇ.70 ಮೊಬೈಲು, ಶೇ.85 ಏರ್ ಕಂಡೀಷನ್ಸ್ ಇವೆಲ್ಲಾ ಪೂರೈಸುವುದು ಚೀನಾ ನೇತೃತ್ವದ ಸರಕುಗಳ ಅಂತರರಾಷ್ಟ್ರೀಯ ಬಿಡಿಭಾಗಗಳ ಪೂರೈಕೆಯ ಸರಪಳಿ.

ಆದರೆ ಇಂದು ಕೊರೊನಾ ವೈರಸ್‌ನಿಂದಾಗಿ ಈ ಅಂತರರಾಷ್ಟ್ರೀಯ ವಹಿವಾಟಿಗೆ ಬಲವಾದ ಪೆಟ್ಟು ಬೀಳಲಿದೆ. ಚೀನಾದ ಮುಖವಾಡ ನಿಧಾನವಾಗಿ ಕಳಚಿ ಬೀಳಲು ಆರಂಭವಾಗಿದೆ. ಚೀನಾದಿಂದಲೇ ಈ ಮಟ್ಟದಲ್ಲಿ ಕೋವಿಡ್-19 ವಿಶ್ವದಲ್ಲಿ ಹರಡಿದೆ ಎಂದು ವಿಶ್ವಸಮುದಾಯ ವಿಶ್ಲೇಷಿಸಿದೆ. ಚೀನಾ ವಿಶ್ವ ಸಮುದಾಯದ ನಂಬಿಕೆಯನ್ನು ಕಳೆದುಕೊಂಡಿರುವುದು, ಚೀನಾದ ವಿಸ್ತರಣವಾದ, ಇಂಡೋ-ಪೆಸಿಪಿಕ್ ಸಮುದ್ರ ಪ್ರದೇಶದಲ್ಲಿ ಚೀನಾದ ಆಕ್ರಮಣಕಾರಿ ನೀತಿ, ಚೀನಾ-ಅಮೆರಿಕಾ ನಡುವಿನ ವಾಣಿಜ್ಯ ಸಮರ, ಚೀನಾದ ಯೂನಿಪೊಲಾರ್ ರಾಷ್ಟ್ರವಾಗುವ ಹುನ್ನಾರ, ಮುಂತಾದ ಹಲವು ಕಾರಣಗಳಿಂದಾಗಿ ಅಮೆರಿಕವೂ ಸೇರಿ ಎಲ್ಲಾ ಪಾಶ್ಚಾತ್ಯ ರಾಷ್ಟ್ರಗಳು ಚೀನಾದಲ್ಲಿರುವ ತಮ್ಮ ಹೂಡಿಕೆಯ ಶೆ.30ರಷ್ಟು ಭಾಗವನ್ನು ಬೇರೆ ದೇಶಗಳಿಗೆ ವರ್ಗಾಯಿಸಲು ತೀರ್ಮಾನಿಸಿವೆ.

150-170 ಬಹುರಾಷ್ಟ್ರೀಯ ಸಂಸ್ಥೆಗಳು ಈಗಾಗಲೇ ಭಾರತದ ಉನ್ನತಮಟ್ಟದ ಅಧಿಕಾರಿಗಳೊಂದಿಗೆ ಹೂಡಿಕೆಯ ಬಗ್ಗೆ ಚರ್ಚೆ ಆರಂಭಿಸಿವೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ನೂರಾರು ಬಿಲಿಯನ್ ಡಾಲರ್ ಹೂಡಿಕೆಯನ್ನು ಆಕರ್ಷಿಸಲು ಮೋದಿ ಸರ್ಕಾರ ಕಾರ್ಮಿಕ ಕ್ಷೇತ್ರ, ಭೂಮಿ, ತೆರಿಗೆ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸಾಕಷ್ಟು ಸುಧಾರಣೆಗಳನ್ನು ಜಾರಿಗೆ ತಂದಿದೆ. 2019 ಅಕ್ಟೋಬರ್ 1ರ ನಂತರ ಭಾರತದಲ್ಲಿ ಹೊಸದಾಗಿ ಆರಂಭಿಸುವ ಉತ್ಪಾದನಾ ಸಂಸ್ಥೆಗಳಿಗೆ ತೆರಿಗೆ ದರವನ್ನು ಶೇ.16ಕ್ಕೆ ಇಳಿಸಲಾಗಿದೆ.

ಸೆಮಿಕಂಡಕ್ಟರ್ ಫ್ಯಾಬ್ರಿಕೇಟರ್ಸ್, ಫೊಟೋ ವೋಲ್ಟಿಕ್ ಸೆಲ್ಸ್, ಲೀಥಿಯಂ ಡ್ರೆöÊ ಸೆಲ್ ಬ್ಯಾಟರಿ ಮುಂತಾದ ಹೆಚ್ಚಿನ ತಂತ್ರಜ್ಞಾನ ಆಧಾರಿತ ಉತ್ಪನ್ನಗಳನ್ನು ಭಾರತದಲ್ಲಿ ತಯಾರಿಸಲು ಈ ವಿದೇಶಿ ಸಂಸ್ಥೆಗಳು ಸಮ್ಮತಿಸಿವೆ. ಇದರೊಂದಿಗೆ ಅಮೆರಿಕವು ಬಾರತವನ್ನು ‘ಬಿಡಿಭಾಗಗಳ ಪೂರೈಕೆಯ ಸರಪಳಿ’ಯಲ್ಲಿ ಜೋಡಿಸಿಕೊಳ್ಳಲು ತಾತ್ವಿಕವಾಗಿ ಸಮ್ಮತಿ ನೀಡಿದೆ. ಇವೆಲ್ಲಾ ಒಂದು ಪೀಳಿಗೆಯಲ್ಲಿ ಒಮ್ಮೆ ಮಾತ್ರ ದೊರೆಯುವಂತಹ ಅವಕಾಶಗಳು. ಈ ಯೋಜನೆಗಳು ಕಾರ್ಯಗತವಾದಾಗ, ದೇಶದಲ್ಲಿ ಬೃಹತ್ ಗಾತ್ರದಲ್ಲಿ ಹೆಚ್ಚಿನ ವೇತನದ ಉದ್ಯೋಗ ಸೃಷ್ಟಿಯಾಗಲಿವೆ. ಭಾರತದ ರಫ್ತು ಇನ್ನು 5-6 ವರುಷಗಳಲಿ 2-3 ಪಟ್ಟು ತಲುಪಿದರೆ ಆಶ್ಚರ್ಯವಿಲ್ಲ. ಇವೆಲ್ಲವುದರಿಂದ ಸೃಷ್ಟಿಯಾಗುವ ಉದ್ಯೋಗ, ತೆರಿಗೆ ಸಂಗ್ರಹಣೆಗಳಿಂದಾಗಿ, ಅಭಿವೃದ್ಧಿಯ ಧನಾತ್ಮಕ ಚಕ್ರ ಸೃಷ್ಟಿಯಾಗುವ ಸಾಧ್ಯತೆ ನಿಚ್ಚಳವಾಗಿದೆ.

ಜಾಗತೀಕರಣದಿಂದಾಗುವ ದೇಶದ ಅಭಿವೃದ್ಧಿಗೂ ಆತ್ಮನಿರ್ಭರ ಭಾರತ್‌ಗೂ ಏನು ಸಂಬAಧ? ಆತ್ಮನಿರ್ಭರ ಭಾರತ್ ಜಾಗತೀಕರಣದ ವಿರುದ್ಧವಾದ ರಕ್ಷಣಾತ್ಮಕ ನೀತಿಯಲ್ಲವೇ? ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಸ್ವಯಂ ಅವಲಂಬಿತ ಭಾರತ ಇಡೀ ವಿಶ್ವವನ್ನೇ ತನ್ನ ಕಾಯಾಚರಣೆಯ ಚೌಕಟ್ಟು ಎಂದು ಭಾವಿಸುತ್ತದೆ. ಜಾಗತೀಕರಣಗೊಂಡ ವ್ಯವಸ್ಥೆಯಲ್ಲಿ ವಿಶ್ವದ ಪ್ರತಿಭೆ (ಟ್ಯಾಲೆಂಟ್), ತಂತ್ರಜ್ಞಾನ (ಟೆಕ್ನಾಲಜಿ) ಮತ್ತು ಬಂಡವಾಳವನ್ನು (ಎಫ್‌ಡಿಐ) ಬಳಸಿಕೊಂಡು ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಭಾರತದ ಯುವಕರಿಗೆ ಕೆಲಸ ಮತ್ತು ಕಡಿಮೆ ಬೆಲೆಯಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಸರಕುಗಳನ್ನು ಉತ್ಪಾದಿಸುವ ಯೋಜನೆ ಇದು. ಇದರಿಂದಾಗಿ ದೇಶೀಯ ಬೇಡಿಕೆಯನ್ನು ಪೂರೈಸುವುದರೊಂದಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆಗೆ ಸರಕುಗಳನ್ನು ಪೂರೈಸುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. 21ನೇ ಶತಮಾನವನ್ನು ಭಾರತದ ಶತಮಾನವನ್ನಾಗಿಸುವ ದೂರದೃಷ್ಟಿಯುಳ್ಳ ಯೋಜನೆ ಇದು.

ಆತ್ಮನಿರ್ಭರ ಭಾರತ್ ಯೋಜನೆಗೆ ಉದಾಹರಣೆ: ದೇಶದಲ್ಲಿ ಪಿಪಿಇ ಕಿಟ್‌ಗಳ ಉತ್ಪಾದನೆ.

ಮಾರ್ಚ್ 2020: ದೇಶದಲ್ಲಿ ಯಾವುದೇ ಪಿಪಿಇ ಕಿಟ್ ಉತ್ಪಾದನೆ ಇರಲಿಲ್ಲ. ಎಲ್ಲ ಬೇಡಿಕೆಗಳನ್ನು ಆಮದಿನ ಮೂಲಕ ಪೂರೈಸಲಾಗುತ್ತಿತ್ತು.

ಮೇ 2020: ಪ್ರತಿ ತಿಂಗಳು 1.5 ಕೋಟಿ ಪಿಪಿಇ ಕಿಟ್‌ಗಳನ್ನು ಭಾರತದಲ್ಲಿ ಉತ್ಪಾದಿಸಲಾಗುತ್ತಿದೆ.

ಜೂನ್ 2020: ಪ್ರತಿ ತಿಂಗಳು 50 ಲಕ್ಷ ಪಿಪಿಇ ಕಿಟ್‌ಗಳ ರಫ್ತು ಮಾಡಲಾಗುತ್ತಿದೆ.

ರಫ್ತಿನ ಬೇಡಿಕೆಗೆ ಕಾರಣ: ವಿದೇಶಿ ಪಿಪಿಇ ಕಿಟ್‌ಗಳ ಬೆಲೆ 2000 ರೂ. ಇದ್ದು ಭಾರತದ ಪಿಪಿಇ ಕಿಟ್‌ಗಳನ್ನು 1000 ರೂ.ಗಳಿಗಿಂತಲೂ ಕಡಿಮೆ ಬೆಲೆಗೆ (ಉತ್ಪಾದನಾ ವೆಚ್ಚ: 650 ರೂ.) ಮಾರಾಟ ಮಾಡಲಾಗುತ್ತಿದೆ.

ಆತ್ಮನಿರ್ಭರ ಭಾರತ್ ತತ್ವದ ಯಶಸ್ಸಿಗೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕೆ?

ಜಾಗತೀಕರಣದ ಅಂತ್ಯ ಆರಂಭವಾಗಿದೆಯಾ? ಇಲ್ಲ, ಜಾಗತೀಕರಣದ ವ್ಯವಸ್ಥೆಯಲ್ಲಿ ಶೋಷಣೆಗೆ ಮಂಗಳ ಹಾಡಲಾಗುತ್ತಿದೆಯೇ ವಿನಾ ಜಾಗತೀಕರಣಕ್ಕಲ್ಲ. ವಾಸ್ತವದಲ್ಲಿ ಜಾಗತೀಕರಣ ಬದಲಾಯಿಸಲಾಗದ (ರ‍್ರಿವರ್ಸಿಬಲ್) ಮಾರ್ಗ.

ಜಾಗತೀಕರಣ ವ್ಯವಸ್ಥೆಯಲ್ಲಿ ಅನಾನುಕೂಲಗಳಿಲ್ಲವೇ? ಹೌದು ಇವೆ. ಜಾಗತೀಕರಣ ಎನ್ನುವುದು ಗುಲಾಬಿ ಹೂವಿನಂತೆ, ಕೆಳಭಾಗದಲ್ಲಿ ಮುಳ್ಳಿರುವುದು ಸಹಜ. ಹೀಗಾಗಿ ಎಚ್ಚರಿಕೆಯಿಂದ ಅಳವಡಿಸಿಕೊಳ್ಳಬೇಕು. ಜಾಗತೀಕರಣದ ಬಗ್ಗೆ ಕಟುಟೀಕೆ ಮಾಡುತ್ತಿರುವ ಕೇರಳದ ಕಮ್ಯೂನಿಸ್ಟ್ ಸರ್ಕಾರ ಜಾಗತೀಕರಣದಿಂದ ಅತಿ ಹೆಚ್ಚು ಲಾಭ ಪಡೆದ ರಾಜ್ಯವಾಗಿದೆ!

ಜಾಗತೀಕರಣವೆಂದರೆ ಕೇವಲ ಆರ್ಥಿಕ, ತಂತ್ರಜ್ಞಾನ, ಕೈಗಾರಿಕಾ ಕ್ಷೇತ್ರ ಮಾತ್ರವಲ್ಲ. ಕಾರ್ಮಿಕ ಕ್ಷೇತ್ರ, ಸಾಂಸ್ಕೃತಿಕ ಕ್ಷೇತ್ರಕ್ಕೂ ಜಾಗತೀಕರಣ ವಿಸ್ತರಿಸಿದೆ. ಅಮೆರಿಕ ಮುಂತಾದ ಪಾಶ್ಚಾತ್ಯ ದೇಶಗಳಲ್ಲಿರುವ ಭಾರತದ ಲಕ್ಷಾಂತರ ಐಟಿ ಉದ್ಯೋಗಿಗಳು ಜಾಗತೀಕರಣದಿಂದಾಗಿ ಲಾಭ ಪಡೆದವರಲ್ಲವೇ? ಪ್ರಮುಖವಾಗಿ ಕೊಲ್ಲಿ ರಾಷ್ಟ್ರಗಳು ಹಾಗೂ ಅಮೆರಿಕ, ಬ್ರಿಟನ್, ಯುರೋಪ್ ದೇಶಗಳಲ್ಲಿರುವ ಭಾರತದ 2.8 ಕೋಟಿ ಅನಿವಾಸಿ ಭಾರತೀಯರು ಜಾಗತೀಕರಣದಲ್ಲಿ ಭಾರತದ ಯಶಸ್ಸಿನ ಸಂಕೇತವಲ್ಲವೇ? ಈ ಅನಿವಾಸಿ ಭಾರತೀಯರು 2019-20ರಲ್ಲಿ ದೇಶಕ್ಕೆ ರವಾನೆ ಮಾಡಿರುವುದು 83 ಬಿಲಿಯನ್ ಡಾಲರ್ ದಾಟಿದೆ. ಅನಿವಾಸಿ ಪ್ರಜೆಗಳು ಸ್ವದೇಶಕ್ಕೆ ಕಳುಹಿಸುವ ಹಣದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಕೊಲ್ಲಿ ರಾಷ್ಟ್ರಗಳಲ್ಲಿರುವ ಅನಿವಾಸಿ ಭಾರತೀಯರಲ್ಲಿ ಪ್ರತಿ ಎರಡನೇ ಭಾರತೀಯ ಉದ್ಯೋಗಿ ಕೇರಳದವರು. ದೇಶಕ್ಕೆ ಪಾವತಿಯಾಗುತ್ತಿರುವ ಹಣದಲ್ಲಿ ಶೇ.20 ಭಾಗ ಕೇರಳಕ್ಕೆ ವರ್ಗಾವಣೆಯಾಗುತ್ತಿದೆ. ಅದಕ್ಕೆ ಪ್ರಾಯಶಃ ಹೇಳುವುದು, ‘ಕೇರಳಾ ಇಸ್ ಎ ಮನಿಯಾರ್ಡರ್ ಎಕಾನಾಮಿ’ ಎಂದು.

ಕಮ್ಯೂನಿಸ್ಟ್ ಗುರು ಕಾರ್ಲ್ ಮಾರ್ಕ್ಸ್ ಕೊಟ್ಟ ಕರೆಯೇನೆಂದರೆ ‘ಜಗತ್ತಿನ ಕಾರ್ಮಿಕರೇ, ಒಂದಾಗಿ’ ಎನ್ನುವುದು ಕಾರ್ಮಿಕರ ಜಾಗತೀಕರಣವಲ್ಲದೇ ಮತ್ತೇನೂ? ಆದುದರಿಂದ ಇದು ಕೇವಲ ಬೂಟಾಟಿಕೆಯ ವಿರೋಧವೇ ಹೊರತು ಸೈದ್ಧಾಂತಿಕವಾದದ್ದಲ್ಲ.

*ಲೇಖಕರು ವಿಜ್ಞಾನ ಮತ್ತು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ರಾಜ್ಯ ಬಿಜೆಪಿಯ ಎಕನಾಮಿಕ್ ಸೆಲ್ ಸಂಚಾಲಕರು. ಎಕನಾಮಿಕ್ ನ್ಯೂಸ್ ಲೆಟರ್ಮಾಸಿಕದ ಸಂಪಾದಕರು. ಕೇಂದ್ರ ಬಜೆಟ್ ಮೇಲೆ ನಿಯಮಿತವಾಗಿ ವರ್ಕ್ ಶಾಪ್ ನಡೆಸುತ್ತಾರೆ.

 

Leave a Reply

Your email address will not be published.