ಹಗಲು ಬಸ್ ಪ್ರಯಾಣದ ಸುಖ!

ಬಸ್ ಪ್ರಯಾಣ ಅದರಲ್ಲೂ ಹಗಲು ಬಸ್ ಪ್ರಯಾಣ ತುಂಬಾ ಸೊಗಸು. ರಾತ್ರಿ ಪ್ರಯಾಣವಾದರೆ ಪಕ್ಕ ಕುಳಿತವರ ತಲೆ ಭಾರವನ್ನು ಹೊರಬೇಕು. ಮಲಗಿದ್ದರೆ ಪಕ್ಕದವರ ಕಾಲು ಕೈಗಳನ್ನು ಹೊರಬೇಕಾಗುತ್ತದೆ. ಇಲ್ಲವೆ ಅವರ ಗೊರಕೆ ಶಬ್ದ ಕೇಳಬೇಕಾಗುತ್ತದೆ!

-ಚೂಟಿ ಚಿದಾನಂದ

ಬಸ್ ಪ್ರಯಾಣ ಅದರಲ್ಲೂ ಹಗಲು ಬಸ್ ಪ್ರಯಾಣ ತುಂಬಾ ಸೊಗಸು. ದಾರಿಯ ಸುತ್ತ ಮುತ್ತಲಿನ ನಿಸರ್ಗ ಸೌಂದರ್ಯ ಹಾಗೂ ಸಹ ಪ್ರಯಾಣಿಕರೊಂದಿಗಿನ ಮಾತು ಕಥೆ ಪ್ರಯಾಣಿಗರ ಮನಸ್ಸಿಗೆ ಮುದ ನೀಡುತ್ತದೆ. ರಾತ್ರಿ ಪ್ರಯಾಣವಾದರೆ ಪಕ್ಕ ಕುಳಿತವರ ತಲೆ ಭಾರವನ್ನು ಹೊರಬೇಕು. ಮಲಗಿದ್ದರೆ ಪಕ್ಕದವರ ಕಾಲು ಕೈಗಳನ್ನು ಹೊರಬೇಕಾಗುತ್ತದೆ ಇಲ್ಲವೆ ಅವರ ಗೊರಕೆ ಶಬ್ದ ಕೇಳಬೇಕಾಗುತ್ತದೆ.

ಆದರೆ ಇತ್ತೀಚಿನ ಮೊಬೈಲ್ ಫೋನ್ ಹಾವಳಿಯಿಂದ ಯಾರೂ ಯಾರನ್ನೂ ಮಾತನಾಡಿಸುವುದಿಲ್ಲ, ಸುತ್ತಮುತ್ತ ನೋಡುವುದೂ ಇಲ್ಲ, ಫೋನ್ ಕೆರೆಯುತ್ತಾ ಕುಳಿತರೆ ತಾವು ಎಲ್ಲಿ ಇಳಿಯಬೇಕೆಂಬುದನ್ನೂ ಮರೆತುಬಿಡುತ್ತಾರೆ. ನಾನು ಮಾತ್ರ ಇಂದಿಗೂ ಹಗಲು ಬಸ್ ಪ್ರಯಾಣವನ್ನೇ ಇಷ್ಟಪಡುತ್ತೇನೆ.

ನಾನೊಮ್ಮೆ ಹಗಲಲ್ಲಿ ದಾವಣಗೆರೆಗೆ ಸರ್ಕಾರಿ ಕೆಂಪು ಬಸ್ಸಿನಲ್ಲಿ ಪ್ರಯಾಣಿಸಿದೆ. ಬಸ್ ದಾವಣಗೆರೆ ತಲುಪಿದ ನಂತರ ಬಸ್ ನಿಲ್ದಾಣಲ್ಲಿನ ಹಮಾಲರು ಅಣ್ಣಾ/ಯಜಮಾನ ಮ್ಯಾಲಿನ ಚೀಲಗಳು/ಲಗ್ಗೇಜು ನಿಮ್ಮವಾ, ಇಳಿಸಲಾ ಎಂದು ಪ್ರಯಾಣಿಕರನ್ನು ಕೇಳುತ್ತಿದ್ದರು. ಇದೇ ರೀತಿ ಒಮ್ಮೆ ಯುವ ಹಮಾಲಿಯೊಬ್ಬ ಒಬ್ಬ ಯಜಮಾನನನ್ನು ಹಾಗೆ ಕೇಳಿದ. ಆಗ ಆ ಯಜಮಾನ, ನನ್ನ ಲಗೇಜು ಏನೂ ಇಲ್ಲಪ್ಪಾ, ಕೈಯಾಗ ಇರೋ ಈ ಖಾಲಿ ಕೈಚೀಲ ಬಿಟ್ಟರೆ ಬೇರೆ ಏನೂ ಇಲ್ಲ ಎಂದ.

ಆಗ ಆ ಹಮಾಲಿಯು, ‘ಲಗ್ಗೇಜು ಏನೂ ಇಲ್ಲಾಂದ್ರ ಕತ್ತಿ ಕಾಯೋಕೆ ಬರ್ತಿರೇನು ದಾವಣಗೆರೀಗೆ… ಹಂಗ ದ್ವಾಸಿ ತಿಂದು ಹೋಗಾಕ ಬಂದಿ ಏನು?’ ಎಂದು ಕೇಳಿದ. ಆ ಯಜಮಾನ ಕೋಪಗೊಂಡು, ‘ಯಾಕಲೇ, ನೀನ್ಯಾವನಲೇ ನನ್ನ ಕೇಳಾಕ…’ ಎಂದು ಬಯ್ಯುತ್ತಾ ಬಸ್ಸಿನಿಂದ ಕೆಳಗೆ ಇಳಿಯುವುದರೊಳಗಾಗಿ ಆ ಹಮಾಲಿ ಓಡಿ ಹೋಗಿಬಿಟ್ಟ. ಬಸ್ಸಿನಲ್ಲಿದ್ದ ಜನರೆಲ್ಲಾ ನಗುತ್ತಾ ಇಳಿದರು. ಇದರಲ್ಲಿ ಆ ಹಮಾಲಿಯ ತಪ್ಪೇನೂ ಇಲ್ಲ ಎನಿಸಿತು ನನಗೆ. ಹಮಾಲಿಗಳ ಜೀವನಾಧಾರವೇ ಲಗೇಜುಗಳನ್ನು ಬಸ್ಸಿಗೆ ಹಾಕುವುದು, ಇಳಿಸುವುದು, ಸಾಗಿಸುವುದು. ಪ್ರಯಾಣಿಕರೆಲ್ಲರೂ ಬರೀಗೈಲೆ ಬಂದರೆ ಹಮಾಲಿಗಳ ಜೀವನ ನಡೆಯುವುದಾದರೂ ಹೇಗೆ?  

ಮತ್ತೊಮ್ಮೆ ಪ್ರಯಾಣಿಸುತ್ತಿದ್ದಾಗ ಬಸ್ ಒಂದು ಊರಿನಲ್ಲಿ ನಿಂತಿತು. ಅಲ್ಲಿ ಭಿಕ್ಷುಕರು ಮತ್ತು ಹೂವು, ತಿಂಡಿ ತಿನಿಸುಗಳನ್ನು ಮಾರುವವರು ಬಸ್ ಸುತ್ತು ಹಾಕುತ್ತಾ ಕೂಗುತ್ತಿದ್ದರು. ನನ್ನ ಮುಂದಿನ ಸೀಟಿನಲ್ಲಿ ಕುಳಿತಿದ್ದ ಹೆಂಗಸೊಬ್ಬಳು ಎರಡು ಮೊಳ ಮಲ್ಲಿಗೆ ಹೂವನ್ನು ಕೊಂಡಳು. ಪರ್ಸಿನಿಂದ ದುಡ್ಡು ತೆಗೆಯುವುದರೊಳಗಾಗಿ ಹೂವು ಮಾರುವವನು ಬೇರೊಬ್ಬರಿಗೆ ಹೂವು ಕೊಡಲು ಪಕ್ಕದ ಬಸ್ಸಿನ ಕಡೆ ಹೋದನು. ಹೂವು ಕೊಟ್ಟವನ ಸ್ಥಳಕ್ಕೆ ಒಬ್ಬ ಭಿಕ್ಷುಕ ಬಂದು, ‘ಅಮ್ಮಾ… ಭಿಕ್ಷೆ ಹಾಕಿ…’ ಎಂದು ಕೂಗುತ್ತಾ ಪ್ರಯಾಣಿಕರ ಕಡೆ ಕೈ ಚಾಚುತ್ತಿದ್ದ. ಹೂವು ಕೊಂಡ ಹೆಂಗಸು ನೂರು ರೂಪಾಯಿಯ ಒಂದು ನೋಟನ್ನು ‘ತಗೊಳ್ಳಪ್ಪ’ ಎಂದು ಕೊಟ್ಟಳು. ಆದರೆ ಅವನು ಹೂವು ಮಾರುವವನಾಗಿರಲಿಲ್ಲ ಭಿಕ್ಷುಕನಾಗಿದ್ದ. ಆ ಭಿಕ್ಷುಕನು ನೂರರ ನೋಟನ್ನು ತೆಗೆದುಕೊಂಡ ತಕ್ಷಣವೇ ಅಲ್ಲಿಂದ ಮಾಯವಾಗಿಬಿಟ್ಟ.

ಬಸ್ ಹೊರಡಲು ಸ್ಟಾರ್ಟ್ ಆಯಿತು. ಹೂವು ಮಾರುವವನು ಬಂದು, ‘ಬಸ್ ಹೊರಡುತ್ತದೆ ದುಡ್ಡು ಕೊಡಮ್ಮ’ ಎಂದು ಹೂವು ಕೊಂಡವಳನ್ನು ಕೇಳಿದ. ‘ನೂರು ರೂಪಾಯಿ ಕೊಟ್ಟಿದ್ದೀನಲ್ಲಾ, ನೀನೆ ಚಿಲ್ರೆ ಕೊಡಬೇಕು… ಬೇಗ ಕೊಡಪ್ಪಾ’ ಎಂದಳು. ‘ನನಗೆಲ್ಲಿ ದುಡ್ಡು ಕೊಟ್ಟಿದೀಯಮ್ಮಾ, ಬಸ್ ಹೊರಟಿತು ಹೂವು ವಾಪಸು ಕೊಡು’ ಎಂದು ಹೂವನ್ನು ವಾಪಸು ತೆಗೆದುಕೊಂಡ.

ಆ ಹೆಂಗಸು, ‘ಅಯ್ಯೋ… ನನ್ನ ನೂರು ರೂಪಾಯಿ ನಾನು ಯಾರಿಗೆ ಕೊಟ್ಟೆ…’ ಎಂದು ಕೂಗುತ್ತಿದ್ದಳು. ಆಗ ಒಬ್ಬ ಹೆಂಗಸು, ‘ನೀವು ಹಣ ಕೊಟ್ಟದ್ದು ಭಿಕ್ಷುಕನಿಗೆ’ ಎಂದಳು. ‘ನೀವು ಮೊದಲೇ ಏಕೆ ಹೇಳಲಿಲ್ಲ’ ಎಂದು ಆ ಹೆಂಗಸನ್ನು ಕೇಳಿದಾಗ, ‘ನನಗೇನು ಗೊತ್ತು ನೀವು ಭಿಕ್ಷೆ ಹಾಕುತ್ತಿದ್ದೀರೆಂದು ಸುಮ್ಮನಿದ್ದೆ ಅದು ನೂರರ ನೋಟು ಎಂದು ನನಗೆ ಗೊತ್ತಿಲ್ಲ’ ಎಂದಳು. ಬಸ್ ನಿಲ್ಲಿಸಿ ನೂರು ರೂಪಾಯಿ ತೆಗೆದುಕೊಂಡ ಭಿಕ್ಷಕುಕನನ್ನು ಹುಡುಕಿದರೂ ಅವ ಸಿಗಲಿಲ್ಲ. ಆ ಹೆಂಗಸು ಅಳುತ್ತಾ ಕೂತಳು. ನೋಡುಗರಿಗೆ ತಮಾಷೆಯಾಗಿ ಕಂಡರೂ ಆ ಹೆಂಗಸಿಗೆ ಮಾತ್ರ ತುಂಬಾ ನೋವಾಗಿತ್ತು.

ನನ್ನ ಸ್ನೇಹಿತನೊಬ್ಬ ಹೊಸಪೇಟೆಯ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕರ ನೇಮಕಾತಿಯ ಸಂದರ್ಶನಕ್ಕೆ ಹಾಜರಾಗಲು ಬಸ್‍ನಲ್ಲಿ ತನ್ನ ಊರಿನಿಂದ ಪ್ರಯಾಣಿಸುತ್ತಿದ್ದಾಗ ನಡೆದ ಘಟನೆ ಇದು. ನನ್ನ ಸ್ನೇಹಿತ ಹೋಗುತ್ತಿದ್ದ ಹೊಸಪೇಟೆಯ ಮಾರ್ಗದಲ್ಲಿ ನನ್ನ ಊರು ಇದೆ. ಅಂದು ನನ್ನ ಸ್ನೇಹಿತ ಹೋಗುತ್ತಿದ್ದ ಬಸ್ ಅನ್ನು ನಾನು ನನ್ನ ಊರಿನಲ್ಲಿ ಹತ್ತಿದೆ. ಅವನನ್ನು ಮಾತನಾಡಿಸಿ ಬೆಸ್ಟ್ ಆಫ್ ಲಕ್ ಹೇಳಿದೆ. ಅವನ ಹತ್ತಿರ ನನಗೆ ಸೀಟು ಸಿಗದ ಕಾರಣ ನಾನು ಹಿಂದೆ ಕುಳಿತೆ.

ಅವನು ಸಂದರ್ಶನಕ್ಕೆ ಹೋಗುತ್ತಿದ್ದುದರಿಂದ ಒಳ್ಳೆಯ ಗರಿಗರಿ ಇಸ್ತ್ರಿ ಮಾಡಿದ ಡ್ರೆಸ್ ಹಾಕಿಕೊಂಡಿದ್ದ. ಬಸ್ ಸ್ವಲ್ಪ ದೂರ ಹೋದ ನಂತರ ಅವನ ಸೀಟಿನ ಹಿಂದೆ ಕುಳಿತಿದ್ದ ಹೆಂಗಸೊಬ್ಬಳು ಕಿಟಕಿ ಮೂಲಕ ವಾಂತಿ ಮಾಡಲು ಎದ್ದು ನಿಂತಳು. ಕಿಟಕಿ ತೆರೆಯುವುದು ತಡವಾದ ಕಾರಣ ನನ್ನ ಸ್ನೇಹಿತನ ತಲೆ ಮೇಲೆ ವಾಂತಿ ಮಾಡಿಬಿಟ್ಟಳು. ಅಂದು ಹಬ್ಬವಿದ್ದ ಕಾರಣ ಆ ಮಹಿಳೆ ತಿಂದಿದ್ದ ಹೋಳಿಗೆ ಮೊದಲಾದವುಗಳು ನನ್ನ ಸ್ನೇಹಿತನನ್ನು ಅಭಿಷೇಕ ಮಾಡಿದ್ದವು. ಅಕ್ಕ ಪಕ್ಕದವರು ಕುಳಿತುಕೊಳ್ಳಲಾರದಷ್ಟು ಕೆಟ್ಟ ವಾಸನೆ ಹರಡಿಬಿಟ್ಟಿತು.

ನನ್ನ ಸ್ನೇಹಿತ ಆ ಮಹಿಳೆಯನ್ನು ಬೈಯುತ್ತಾ ಬಸ್ ಡ್ರೈವರ್ ಕೊಟ್ಟ ಪೇಪರ್‍ನಿಂದ ಅದನ್ನು ಒರೆಸಿಕೊಂಡ. ಆದರೂ ವಾಂತಿ ತಲೆ ಮೇಲಿಂದ ಬಿದ್ದಿದ್ದ ಕಾರಣ ಅದು ಹೋಗಲೇ ಇಲ್ಲ, ಅಷ್ಟರಲ್ಲಿ ಹೊಸಪೇಟೆ ಬಂದಿತು. ಅವನು ಸಾಯಂಕಾಲ ತನ್ನೂರಿಗೆ ವಾಪಸು ಹೋಗುತ್ತೇನೆಂದು ಉಟ್ಟ ಬಟ್ಟೆಯಲ್ಲಿಯೇ ಬಂದಿದ್ದ, ಬೇರೆ ಬಟ್ಟೆ ಇರಲಿಲ್ಲ. ಬಸ್ ಇಳಿದ ನಾವಿಬ್ಬರೂ ಏನು ಮಾಡುವುದೆಂದು ಯೋಚಿಸುತ್ತಾ ನಿಂತೆವು.

ಅವನು ಮೊದಲು ತಲೆ ಮತ್ತು ಬಟ್ಟೆ ತೊಳೆದುಕೊಳ್ಳುತ್ತೇನೆ, ಈ ಕೆಟ್ಟ ವಾಸನೆ ಸಹಿಸಲಾರೆ ಎಂದ. ಸಂದರ್ಶನಕ್ಕೆ ಹಾಜರಾಗಲು ಇನ್ನೂ ನಾಲ್ಕು ಗಂಟೆ ಸಮಯವಿದೆ ಎಂದು ಸಂದರ್ಶನಕ್ಕೆ ಹಾಜರಾಗಬೇಕಿದ್ದ ಶಾಲೆಯ ದಾರಿಯಲ್ಲಿ ಹರಿಯುತ್ತಿದ್ದ ಕಾಲುವೆಯಲ್ಲಿ ತಲೆ ಬಟ್ಟೆಗಳನ್ನು ಕಾಲುವೆ ದಂಡೆಯಲ್ಲಿ ಯಾರೋ ಬಿಟ್ಟುಹೋಗಿದ್ದ ಸೋಪಿನಲ್ಲಿ ತೊಳೆದುಕೊಂಡು ಬಟ್ಟೆಗಳನ್ನು ಒಣಗಲು ಹಾಕಿದ.

ಒಂದು ತಾಸಿನಲ್ಲಿ ಬಟ್ಟೆಗಳು ಒಣಗಿದವು, ಅವುಗಳನ್ನು ಹಾಕಿಕೊಂಡು ಸಂದರ್ಶನಕ್ಕೆ ಹಾಜರಾದ. ವಾಂತಿಮಾಡಿಕೊಂಡ ಆ ತಾಯಿಯು ಹಬ್ಬದ ದಿನದಂದು ಒಳ್ಳೆಯ ಮನಸ್ಸಿನಿಂದ ದೇವರ ಪೂಜೆಮಾಡಿ ಹೋಳಿಗೆ ಉಂಡುಬಂದಿರಬೇಕು. ನನ್ನ ಸ್ನೇಹಿತನ ಮೇಲೆ ವಾಂತಿ ಮಾಡಿಕೊಂಡದ್ದು ದೇವರ ಆಶೀರ್ವಾದವಾಯಿತೇನೊ ಅವನಿಗೆ ಅದೇ ಶಾಲೆಯಲ್ಲಿ ನೇಮಕಾತಿಯಾಯಿತು.  ಹಗಲು ಬಸ್ ಪ್ರಯಾಣ ಎಷ್ಟು ಸುಖ ನೋಡಿ!

Leave a Reply

Your email address will not be published.