ಹಣ ಬೇಕೆ, ತಕ್ಷಣ ಹಣ ಬೇಕೆ…?

ಅಡ ಇಡುವುದು ನಮ್ಮ ಭಾರತೀಯ ಸಂಸ್ಕೃತಿಯ ಭಾಗವೇ ಆಗಿದೆ. ಆದರೆ ‘ಇಂದಿನ ಆನ್ ಲೈನ್ ರೇಟಿಗೆ ಚಿನ್ನವನ್ನು ಮಾರಬೇಕೆ… ನಮ್ಮಲ್ಲಿಗೆ ಬನ್ನಿ’ ಎಂದು ಉಲಿಯುತ್ತ, ನಮ್ಮ ಕಷ್ಟ ಪರಿಹಾರಾರ್ಥವಾಗಿ ತಮ್ಮಲ್ಲಿಗೆ ಬರಲು ನೀಡುವ ಆಹ್ವಾನಗಳನ್ನು ಕುರಿತ ನನ್ನ ಸಂಕಟ ಹಂಚಿಕೊಳ್ಳಲು ಈ ಪ್ರಬಂಧ!

ಟಿವಿ ಕುರಿತು ಕುಟುಂಬದ ಸದಸ್ಯರಲ್ಲಿ ಒಂದು ಅಲಿಖಿತ ಒಪ್ಪಂದ ಇರುತ್ತದೆ. ಅದು ಅವರವರ ನೆಚ್ಚಿನ ಕಾರ್ಯಕ್ರಮಗಳಿದ್ದಾಗ ಇತರರು  ಕಿರಿಕಿರಿ ಮಾಡುವಂತಿಲ್ಲ ಎಂದು. ನಮ್ಮ ಮನೆಯಲ್ಲಿ ನನ್ನವಳ ಮೆಚ್ಚಿನ ಕೆಲ ಧಾರಾವಾಹಿಗಳ ವೇಳೆ ಬಿಟ್ಟು ಉಳಿದ ವೇಳೆಯೆಲ್ಲ ನನ್ನದೆ. ಟಿವಿ ಕುರಿತು ನನ್ನ ದೌರ್ಬಲ್ಯ ಇರುವದು ಅದು ಬಿತ್ತರಿಸುವ ವಾರ್ತೆಗಳಲ್ಲಿ.

ದಿನದುದ್ದಕ್ಕೂ ಬಿತ್ತರಗೊಳ್ಳುವ ಹತ್ತೆಂಟು ಸುದ್ದಿ ಚಾನೆಲುಗಳನ್ನು ಬದಲಾಯಿಸುತ್ತ ಸ್ಥಳೀಯ, ರಾಷ್ಟಿçÃಯ, ಅಂತರಾಷ್ಟಿçÃಯ ಸುದ್ದಿಗಳಿಗಾಗಿ ತಡಕಾಡುತ್ತ, ಬ್ರೇಕಿಂಗ್ ನ್ಯೂಸ್ ಗಾಗಿ ನನ್ನ ಬೆದಕಾಟ ನಡೆಯುತ್ತಲೇ ಇರುತ್ತದೆ. “ಅದೇನ್ ನೋಡಿದ್ದ ನೋಡ್ತಿರಿ, ಕೇಳಿದ್ದ ಕೇಳ್ತಿರಿ, ಎಲ್ಲಾ ಕಡೆ ಅದ ಸುದ್ದಿನ ಬಿಡ್ರಿ” ಅನ್ನುವ ಅಕ್ಷೇಪಣೆಗಳು ಆಗಾಗ ನನ್ನವಳಿಂದ ಬರುತ್ತಿದ್ದರೂ ಸುದ್ದಿ ಕುರಿತು ನನ್ನ ಚಪಲ ತಣಿಯುವದಿಲ್ಲ. ಗಂಡಸರಿಗೆ ಊರ ಉಸಾಬರಿ ಬೇಕಲ್ಲವೆ!

ಇತರೆ ನಾಲ್ಕಾರು ಮೆಚ್ಚಿನ ಚಾನೆಲುಗಳಿದ್ದರೂ ಸುದ್ದಿ ವಾಹಿನಿಗಳೇ ನನ್ನ ಆದ್ಯತೆಗಳು. ಅದರಲ್ಲೂ ಕನ್ನಡ ಸುದ್ದಿ ವಾಹಿನಿಗಳನ್ನು ಸ್ಥಳೀಯ ವಿದ್ಯಮಾನಗಳಿಗಾಗಿ ನೋಡಲೇಬೇಕು. ಅದರಲ್ಲಿ ಸುದ್ದಿಯ ಭಾಗವಾಗಿ ಬರುವ ಖಾಸಗಿ ಜಗಳಗಳು, ವೈಯಕ್ತಿಕ ರಂಪಾಟಗಳು, ಖಾಸಗಿ ಮದುವೆ ಮುಂಜಿವೆಯಂತಹ ಕಾರ್ಯಕ್ರಮಗಳ ಬಿತ್ತರಿಸುವಿಕೆ, ಕಳಪೆ ಚರ್ಚೆಗಳ ಕೂಗಾಟ, ಚೀರಾಟಗಳ ಕುರಿತು ನಾನು ಟಿಪ್ಪಣಿ ಮಾಡಲಾರೆ. ವಾಹಿನಿಗಳಿಗೆ ಅವುಗಳದೇ ಆದ ಹಿತಾಸಕ್ತಿಗಳಿರಬಹುದು. ನಮ್ಮ ಟೀಕೆ ಟಿಪ್ಪಣಿಗಳಿಂದ ವಾಹಿನಿಗಳಿಗೆ ಏನೂ ಆಗಬೇಕಾದ್ದಿಲ್ಲ ಅಲ್ಲವೆ.

ನನ್ನ ಉದ್ದೇಶ ಸುದ್ದಿ ವಾಹಿನಿಗಳಲ್ಲಿ ಗಳಿಗೆಗೊಮ್ಮೆ ಬಿಟ್ಟೂಬಿಡದೆ ಪೈಪೋಟಿಗೆ ಬಿದ್ದಂತೆ ಬಿತ್ತರಗೊಳ್ಳವ “ನೀವು ಅಡವಿಟ್ಟ ಬಿಡಿಸಿಕೊಳ್ಳಲಾಗದ ಆಭರಣಗಳನ್ನು….” ಎಂದೋ, “ಹಣ ಬೇಕೆ, ತಕ್ಷಣ ಹಣ ಬೇಕೆ…” ಎಂದೋ, “ನಮ್ಮ…. ಗೋಲ್ಡ್ ಕಂಪನಿಗೆ ಬನ್ನಿ…” ಎಂದೋ, “ನೀವು ನಿಮ್ಮ ಅಡವಿಟ್ಟ ಆಭರಣಗಳಿಗೆ ಬಡ್ಡಿ ಕಟ್ಟುತ್ತಿದ್ದೀರಾ…” ಎಂದೋ, “ಇಂದಿನ ಆನ್ ಲೈನ್ ರೇಟಿಗೆ ಚಿನ್ನವನ್ನು ಮಾರಬೇಕೆ… ನಮ್ಮಲ್ಲಿಗೆ ಬನ್ನಿ” ಎಂದೋ ಉಲಿಯುತ್ತ, ನಮ್ಮ ಹಿತಚಿಂತಕರಾಗಿ, ನಮ್ಮ ಕಷ್ಟ ಪರಿಹಾರಾರ್ಥವಾಗಿ ತಮ್ಮಲ್ಲಿಗೆ ಬರಲು ನೀಡುವ ಆಹ್ವಾನಗಳ ಕುರಿತು ನನ್ನ ಸಂಕಟವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದು. ಈ ಸಂಕಟವನ್ನು ನೀವೂ ಅನುಭವಿಸುತ್ತಿರುವುದು ನನಗೆ ಗೊತ್ತು. ಹಾಗಂತ ನಾನು ಏನನ್ನೂ ಅಡವಿಟ್ಟಿಲ್ಲ. ಸುದ್ದಿ ನೋಡುತ್ತ ಎಲ್ಲವನ್ನೂ ಅನುಭವಿಸಲೇ ಬೇಕಲ್ಲವೆ. ಈ ಜಾಹೀರಾತುಗಳಿಗೆ ಬೇಸತ್ತು ಚಾನೆಲ್ ಬದಲಾಯಿಸಿದರೆ ಮತ್ತೊಂದರಲ್ಲೂ ಅದೇ; ಬಾಣಲೆಯಿಂದ ಬೆಂಕಿಗೆ ಬಿದ್ದಂತೆ. ಅದೇ ಮಾತು, ಅದೇ ಮುಖಗಳು. ಅದೇ ಗೋಲ್ಡ್ ಕಂಪನಿಗಳು.

ಅಧಿಕ ಬೆಲೆ ಕೊಟ್ಟು ಚಾನೆಲುಗಳನ್ನು ಕೊಂಡು, ಅವುಗಳನ್ನು ಅಡವಿಟ್ಟುಕೊಂಡಂತೆ ಅವುಗಳಲ್ಲಿ ಕ್ಷಣಕ್ಕೊಮ್ಮೆ ಜಾಹೀರಾತು ಪ್ರದರ್ಶಿಸುತ್ತ ಗೋಲ್ಡ್ ಕಂಪನಿಗಳು ವೀಕ್ಷಕರನ್ನು ಸತಾಯಿಸುತ್ತಲೇ ಇರುತ್ತವೆ. ಟಿವಿ ವಾಹಿನಿಗಳಿಗೆ ನಮ್ಮನ್ನು ಅಡವಿಟ್ಟುಕೊಂಡ ನಾವು ಚಿನ್ನವನ್ನು ಅಡವಿಟ್ಟಿರಲಿ ಬಿಡಲಿ, ಚಿನ್ನ ಕುರಿತು ಆಸಕ್ತಿ ಇರಲಿ ಬಿಡಲಿ, ಅಡವಿಟ್ಟ ಚಿನ್ನ ಕುರಿತು ಬೈರಿಗೆಯನ್ನು ಸಹಿಸುತ್ತಲೇ ಇರಬೇಕಾಗುತ್ತದೆ. ಈ ಜಾಹೀರಾತುಗಳಿಂದ ಸುದ್ದಿ ವಾಹಿನಿಗಳಿಗೆ ಹಣದ ಹೊಳೆಯೇ ಹರಿದು ಬರುತ್ತಿರಬಹುದು, ಅಥವಾ ಗೋಲ್ಡ್ ಕಂಪನಿಗಳಿಗೆ ಚಿನ್ನದ ಒಡವೆಗಳು ಬಂದು ಬೀಳುತ್ತಿರಬಹುದು. ಆದರೆ ವೀಕ್ಷಕರ ಬಗ್ಗೆ ಇವರಿಗೆ ಒಂದಿಷ್ಟಾದರು ಕರುಣೆ ಇರಬೇಕಿತ್ತು.

ಒಂದು ಜಾಹೀರಾತನ್ನು ದಿನಾಲು ಇಂತಿಷ್ಟೇ ಬಾರಿ ತೋರಿಸಬೇಕೆಂಬ ನಿಯಮವಿದ್ದಂತಿಲ್ಲ. ಸರಕಾರ, ಪ್ರಜೆಗಳ ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ಅಂಥ ಒಂದು ನಿಯಮ ಜಾರಿಗೆ ತರುವ ಬಗ್ಗೆ ಕೂಡಲೆ ಯೋಚಿಸಬೇಕು. ‘ಟಿವಿ ನೋಡಲು ನಿಮಗೆ ಯಾರು ಬಲವಂತ ಮಾಡುತ್ತಾರೆ, ಟಿವಿ ಬೇಕು ಜಾಹೀರಾತು ಬೇಡ ಅಂದರೆ ಹೇಗೆ?’ ಎಂದು ನೀವು ಕೇಳಬಹುದು. ಸತ್ಪçಜೆಗಳು ಎಲ್ಲವನ್ನು ಸಹಿಸಿಕೊಳ್ಳಬೇಕು ಎಂಬ ಸಲಹೆಯನ್ನೂ ನೀವು ನೀಡಬಹುದು. ಜಗತ್ತೇ ಇಂದು ಪ್ರಚಾರದ ಮೇಲೆ ನಿಂತಿರುವಾಗ ಈ ಜಾಹೀರಾತು ಬೇಡವೆಂದರೆ ಬೇರೆ ಜಾಹೀರಾತು ಬೇಕಾ, ಎಂದು ಕೇಳಬಹುದು. ಅತಿಯಾದ ಪುನರಾವೃತ್ತಿಯ ಕೆಲವು ಹಿಂಸಕ ಜಾಹೀರಾತುಗಳು ಬೇಡ ಎಂಬುದಷ್ಟೇ ನನ್ನ ಅಳಲು.

ಜಾಹೀರಾತಿನ ಉದ್ದೇಶ ಒಂದೇ; ನೋಡುಗರ ಮನ ಸೆಳೆಯುವದು. ಆದರೆ ಅತಿ ಅನ್ನುವುದು ತದ್ವಿರುದ್ಧ ಪರಿಣಾಮವುಂಟು ಮಾಡುತ್ತದೆ ಅನ್ನುವುದು ಜಾಹೀರಾತುದಾರರಿಗಾಗಲಿ, ವಾಹಿನಿಗಳಿಗಾಗಲಿ ಗೊತ್ತಿರಲಿಕ್ಕಿಲ್ಲ. ಹೀಗಾಗಿ ಇವುಗಳಿಂದ ಮುಕ್ತಿ ಎಂಬುದಿಲ್ಲ. ಎಲ್ಲ ವಾಹಿನಿಗಳು ನಿಂತಿರುವುದೇ ಜಾಹೀರಾತಿಗಾಗಿ, ಅಲ್ಲ ಜಾಹೀರಾತುಗಳಿಂದಾಗಿ, ಅಲ್ಲವೆ? ಜಾಹೀರಾತುಗಳ ಮಧ್ಯೆ ಅಷ್ಟಿಷ್ಟು ಕಾರ್ಯಕ್ರಮವನ್ನೂ ಬಿತ್ತರಿಸುವ ಚಾನೆಲುಗಳೇ ವಾಸಿ. ಅಲ್ಲಿ ನಮಗೆ ವೀಕ್ಷಿಸದಿರುವ ಆಯ್ಕೆ ಆದರೂ ಇರುತ್ತದೆ.

ಗಿರವಿಟ್ಟ ಚಿನ್ನ, ಆಭರಣಗಳ ಕುರಿತು ಇಷ್ಟೊಂದು ಅಬ್ಬರದ ಪ್ರಚಾರವೇಕೆ ಎಂಬುದರ ಜಾಡು ಹಿಡಿದ ನನಗೆ ಚಿನ್ನ ಮತ್ತು ಗಿರವಿ ಕುರಿತು ಸ್ವಲ್ಪ ಜಿಜ್ಞಾಸೆ ಉಂಟಾಯಿತು. ಅಲ್ಲಿ ಹಲವಾರು ಅಚ್ಚರಿಗಳು ಗೋಚರವಾಗತೊಡಗಿದವು. ಚಿನ್ನ ಯಾವಾಗಲೂ ಆಕರ್ಷಕ ಲೋಹವೆ. ಅದು ಗಂಡಿಗೆ ಸಂಪತ್ತು, ಹೆಣ್ಣಿಗೆ ಶೋಭೆ. ಗಿರವಿಗೂ ಚಿನ್ನಕ್ಕೂ ಮೊದಲಿನಿಂದಲೂ ಬಿಡಲಾರದ ನಂಟಿದೆ. ಪತ್ರಿಕೆಗಳಲ್ಲಿ ಆಗಾಗ ಜಿನಗು ಅಕ್ಷರಗಳಲ್ಲಿ ಗೋಲ್ಡ್ ಕಂಪನಿಗಳು, ಪೈನಾನ್ಸ್ ಕಂಪನಿಗಳು ನೀಡುವ ಉದ್ದುದ್ದ ಜಾಹೀರಾತುಗಳನ್ನು ನೀವು ನೋಡಿರಬಹುದು. ನಾಡಿನ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟವಾಗುವ ಈ ಜಾಹೀರಾತುಗಳು ಗಿರವಿ ಇಟ್ಟ ಆಭರಣಗಳ ಹರಾಜು ಕುರಿತಾಗಿ ಇರುತ್ತವೆ. ಅವುಗಳಲ್ಲಿ ಹರಾಜಿಗಿಟ್ಟ ಉಂಗುರ, ಬಳೆಗಳು, ಚೈನು, ನೆಕ್ಲೇಸು ಮುಂತಾದ ಒಡವೆಗಳ ವಿವರಗಳು, ಪಡೆದ ಸಾಲದ ಮೊತ್ತ ಇತ್ಯಾದಿ ನಮೂದಾಗಿರುತ್ತವೆ. ಇದು ಅಡಮಾನ ಲೋಕದ ಸ್ಥೂಲ ನೋಟವನ್ನು ನಮಗೆ ನೀಡುತ್ತದೆ. ಆಭರಣಗಳ ಹರಾಜು ಪ್ರಕ್ರಿಯೆ ಹೇಗೆ ನಡೆಯುತ್ತದೆ ನನಗೆ ಗೊತ್ತಿಲ್ಲ. ಆದರೆ ಹರಾಜಿಗೆ ಬಂದ ಆಭರಣಗಳ ಸಂಖ್ಯೆ, ಮತ್ತು ಅವುಗಳನ್ನು ಗಿರವಿ ಇಟ್ಟು ಬಿಡಿಸಿಕೊಳ್ಳಲಾಗದ ಜನರ ಸಂಕಷ್ಟ ನನಗೆ ನೋವನ್ನುಂಟು ಮಾಡುತ್ತದೆ. ಜನರ ಸಂಕಟವನ್ನೇ ಬಂಡವಾಳ ಮಾಡಿಕೊಳ್ಳುವ ಗೋಲ್ಡ್ ಕಂಪನಿಗಳ ವ್ಯವಹಾರ ಬುದ್ದಿ ಕುರಿತು ಜಿಜ್ಞಾಸೆ ಉಂಟಾಗುತ್ತದೆ.

ಗಿರವಿ, ಅಡವು, ಒತ್ತೆ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಅಡವು ಇಡುವ ಕ್ರಿಯೆ ತುಂಬ ಹಳೆಯದು. ಮಾತು, ಆಣೆ, ಪ್ರಮಾಣ, ಪ್ರಾಮಾಣಿಕತೆಗಳು ಸಾಕಾಗದೆ ಹೋದಾಗ ಅಡವಿಡುವ ಕ್ರಿಯೆ ಜಾರಿಗೆ ಬಂದಿರಬೇಕು. ಮನುಷ್ಯನಿಗೆ ಅನುವು ಆಪತ್ತುಗಳು ಹೇಳಿಕೇಳಿ ಬರುತ್ತವೆಯೆ. ಹಾಗೆ ಬರುವ ತಾಪತ್ರಯಗಳನ್ನು ಎಲ್ಲರಿಗೂ ಎದುರಿಸಲು ಸಾಧ್ಯವಾಗದೇ ಹೋದಾಗ ಪರ್ಯಾಯ ಮಾರ್ಗವಾಗಿ ಒದಗಿ ಬರುವುದೇ ಅಡವಿಡುವ ಕ್ರಿಯೆ. ಅಡಚಣೆ ಬಂದಾಗಲೇ ಅಲ್ಲವೇ ಯಾರಾದರು ಏನನ್ನಾದರು ಅಡವಿಡುವುದು. ಆಗ ಕಾಲಕ್ಕೆ ಒದಗಿ ಬರುವುದೆ ಚಿನ್ನದ ಆಭರಣಗಳು.

ನಮ್ಮಲ್ಲಿ ಆರ್ಥಿಕ ಪ್ರಗತಿ ಏನಿದ್ದರೂ ಅಂಕಿಸಂಖ್ಯೆಗಳಲ್ಲಿ. ಬಡತನ ಇನ್ನೂ ತೊಲಗಿಲ್ಲ. ಬಡವರು, ಒಮ್ಮೊಮ್ಮೆ ಉಳ್ಳವರು ಕೂಡ ಸಾಮಾನು ಸರಂಜಾಮುಗಳನ್ನು, ಒಡವೆಗಳನ್ನು ಒತ್ತೆ  ಇಡುವುದು, ದುಬಾರಿ ಬಡ್ಡಿ ದರದಲ್ಲಿ ಸಾಲ ತರುವದು, ನಂತರ ಸಕಾಲದಲ್ಲಿ ಸಾಲ ತೀರಿಸಲಾಗದೆ ಅವರು ಒತ್ತೆ ಇಟ್ಟ ಸಾಮಾನು ಹರಾಜಿಗೆ ಬರುವುದು, ಅಥವಾ ದುಬಾರಿ ಬಡ್ಡಿ ತೀರಿಸಲಾಗದೆ ಇದ್ದ ಚಿನ್ನ ಬೆಳ್ಳಿ, ಆಸ್ತಿ ಮಾರಾಟ ಮಾಡುವುದು ನಡೆಯುತ್ತಲೇ ಇರುತ್ತದೆ.

ಹೀಗಾಗಿ ಅಡವಿಟ್ಟ ಆಭರಣಗಳನ್ನು ಅಂದಿನ ಮಾರುಕಟ್ಟೆ ಬೆಲೆಗೆ ಕೊಂಡುಕೊಳ್ಳುವ ಅನೇಕರು ಹುಟ್ಟಿಕೊಳ್ಳುತ್ತಾರೆ. ಅವರು ಕೊಂಡು ಕುಬೇರರಾಗುತ್ತಾ ಹೋಗುತ್ತಾರೆ. ಅವರು ಎಲ್ಲ ವಾಹಿನಿಗಳಲ್ಲಿ ಜಾಹೀರಾತು ನೀಡುತ್ತ, ನಮ್ಮನ್ನು ನಿಮ್ಮನ್ನು ಹಿಂಸಿಸುತ್ತ ಮೆರೆಯುತ್ತಾರೆ. ಬಂಗಾರದ ಗಿರವಿ ಮೌಲ್ಯವೇ ಅಂಥದ್ದು. ಬ್ಯಾಂಕುಗಳು ಸಹಿತ ಎಲ್ಲ ಅಧಿಕೃತ, ಅನಧಿಕೃತ, ಖಾಸಗಿ, ಸರಕಾರಿ ಹಣಕಾಸು ಸಂಸ್ಥೆಗಳು ಈ ದಂದೆ ನಡೆಸುತ್ತವೆ. ಅಡವಿಟ್ಟ ಸಾಮಾನುಗಳನ್ನು ಬಿಡಿಸಿಕೊಳ್ಳಲಾಗದೆ ಅಡವಿಟ್ಟವರು ಬಡ್ಡಿ ಗಂಟು ಎಂದು ಆಭರಣಗಳನ್ನು ಮಾರುವುದು ಅಥವಾ ಮುರುಗಡೆ ಮಾಡುವುದೇ ಹೆಚ್ಚು. ಇಂಥ ಅಡಮಾನ ವ್ಯವಹಾರಗಳಲ್ಲಿ ಉದ್ದಾರವಾಗುವವು ಹಣಕಾಸು ಸಂಸ್ಥೆಗಳು, ಅಥವಾ ಖಾಸಗಿ ಲೇವಾದೇವಿಗಾರರು.

ಅಡ ಇಡುವುದು ನಮ್ಮ ಭಾರತೀಯ ಸಂಸ್ಕೃತಿಯ ಭಾಗವಾಗಿಯೇ ಬಂದಿದೆ. ಮಹಾಭಾರತದ ಧರ್ಮರಾಯ  ಕೌರವರೊಂದಿಗೆ ಜೂಜಿನಲ್ಲಿ “…ರಾಯ ಸೋತನು ಜೂಜಿನಲಿ… ಕೋಶವನು ಗಜತುರಗ ರಥಸಹಿತ…” ಎಂದು ಸರ್ವಸ್ವವನ್ನು ಕಳೆದುಕೊಂಡು, ದ್ರೌಪದಿ, ಸಹೋದರರ ಸಹಿತ ವನವಾಸಕ್ಕೆ ಹೋಗುತ್ತಾನೆ. ವನವಾಸದ ಅವಧಿ ಮುಗಿದ ಬಳಿಕ ಇಂದ್ರಪ್ರಸ್ಥ ರಾಜ್ಯ ಮರಳಿ ಬರಬೇಕು. ಇದೊಂದು ರೀತಿ ಕೌರವರಿಗೆ ಇಂತಿಷ್ಟು ವರ್ಷ ಎಂದು ರಾಜ್ಯವನ್ನು ಒತ್ತೆ ಇಟ್ಟು ಹೋದಂತೆ. ಮಾತಿಗೆ ತಪ್ಪಿ ನಡೆದ ಕೌರವನಿಂದಾಗಿ ಮಹಾಭಾರತದ ಯುದ್ಧ ನಡೆಯಿತು.

ಧನಕನಕಕ್ಕಾಗಿ ಕಲಹಗಳು ನಡೆಯುತ್ತಲೇ ಬಂದಿವೆ. ಟಿಪ್ಪು ತನ್ನ ಮಕ್ಕಳನ್ನು ಬ್ರಿಟಿಷರ ಕಡೆಗೆ ಅವರೊಂದಿಗೆ ಆದ ಒಪ್ಪಂದದ ಷರತ್ತುಗಳನ್ನು ಪೂರೈಸುವ ಸಲುವಾಗಿ ಒತ್ತೆ ಇಟ್ಟ. ಇತಿಹಾಸದುದ್ದಕ್ಕೂ ಇಂಥ ಎಷ್ಟೋ ಅಡವಿಡುವ ಘಟನೆಗಳು ಬೇರೆಬೇರೆ ಸ್ವರೂಪಗಳಲ್ಲಿ, ಬೇರೆ ಬೇರೆ ಹೆಸರಿನಲ್ಲಿ ನಡೆಯುತ್ತಲೇ ಬಂದಿವೆ. ಆಂಗ್ಲರು ಭಾರತದ ವಿರುದ್ಧ ಒಂದೊಂದು ಯುದ್ಧವನ್ನು ಗೆಲ್ಲುತ್ತ, ಅನೇಕ ಕೊಡಕೊಳ್ಳುವ ಕಪಟ ವ್ಯವಹಾರಗಳ ಮೂಲಕ ದೇಶದ ಮೇಲೆ ಕಬ್ಜಾ ಸಾಧಿಸಿ, ಇಡೀ ದೇಶವನ್ನೇ ಶತಮಾನಗಳ ಕಾಲ ಅಡವಿಟ್ಟುಕೊಂಡು ಸುಲಿಗೆ ಮಾಡಿದರು. ಅದನ್ನು ಬಿಡಿಸಿಕೊಳ್ಳಲು ನಾವು ದೊಡ್ಡ ಬೆಲೆಯನ್ನೇ ತೆರಬೇಕಾಯಿತು.

ಕಳೆದ ತೊಂಬತ್ತರ ದಶಕದಲ್ಲಿ ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ತುಂಬ ಹದಗೆಟ್ಟಿತ್ತು. ದಿವಾಳಿ ಅಂಚಿಗೆ ತಲುಪಿತ್ತು. ಬೇರೆ ಉಪಾಯ ಇಲ್ಲದೆ ಆಗ ನಮ್ಮ ದೇಶ 46.91 ಟನ್ ಬಂಗಾರವನ್ನು ಇಂಗ್ಲಂಡ್ ಮತ್ತು ಜಪಾನ್ ಬ್ಯಾಂಕುಗಳಲ್ಲಿ ಅಡವಿಟ್ಟು, 400 ಮಿಲಿಯನ್ ಡಾಲರ ಹಣವನ್ನು ಸಾಲ ತಂದು ನಮ್ಮ ದೇಶದ ಅಡಚಣೆಯನ್ನು ನೀಗಿಕೊಂಡದ್ದು ತಮಗೆ ನೆನಪಿರಬಹುದು. ಮುಂದೆ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಿದ ಮೇಲೆ ಅಡವಿಟ್ಟ ಚಿನ್ನವನ್ನು ಸರಕಾರ ವಾಪಸ್ಸು ತಂದಿತು. ಅಷ್ಟು ಚಿನ್ನವನ್ನು ಸರಕಾರ ವಿಮಾನದ ಮೂಲಕ ಗುಪ್ತವಾಗಿ ಸಾಗಿಸಿ ವಾಪಸ್ಸು ತಂದದ್ದು ನಮ್ಮ ಸ್ವತಂತ್ರ ದೇಶದ ಇತಿಹಾಸದಲ್ಲಿ ತುಂಬ ದಾರಿದ್ರ್ಯದ ಕಾಲಘಟ್ಟವೂ ಹೌದು.

ಅನೇಕ ದೇಶಗಳು ಈಗಲೂ ಇಂಥ ದುಃಸ್ಥಿತಿಯಲ್ಲಿವೆ. ದೇಶಕ್ಕೇ ಹೀಗೆ ಚಿನ್ನವನ್ನು ಅಡವಿಡುವ ಮತ್ತು ಹಿಂತೆಗೆಯುವ ಸಂದರ್ಭಗಳು ಎದುರಾಗುವಾಗ ಇನ್ನು ಜನಸಾಮಾನ್ಯರ ಪಾಡೇನು. ಮೂರ್ನಾಲ್ಕು ದಶಕಗಳ ಹಿಂದೆ ಗ್ರಾಮೀಣ ಭಾಗದಲ್ಲಿ ಬಡತನ ತಾಂಡವವಾಡುತ್ತಿತ್ತು. ಹಣಕಾಸಿನ ಲಭ್ಯತೆ ದುರ್ಲಭ ಇತ್ತು. ಆಗ ತುರ್ತು ಸಂದರ್ಭಗಳಲ್ಲಿ ಗ್ರಾಮಗಳಲ್ಲಿ ಕೈಸಾಲ ಸೌಲಭ್ಯಗಳು ದೊರೆಯುವುದು ದುಸ್ತರವಿತ್ತು. ಅಂಥ ಸಮಯದಲ್ಲಿ ಜಮೀನು, ಮನೆಮಾರು, ವಸ್ತುಒಡವೆಗಳನ್ನು ಅಡವಿಟ್ಟು ಸಾಲ ಪಡೆಯುವದು ಸಾಮಾನ್ಯವಾಗಿತ್ತು. ಗ್ರಾಮಗಳಲ್ಲಿ ಆಗ ಈ ರೀತಿ ಒತ್ತೆ ಇಟ್ಟುಕೊಂಡು ಹಣ ನೀಡುವ ಕುಳಗಳಿರುತ್ತಿದ್ದರು.

ಸಣ್ಣ ಪ್ರಮಾಣದ ಸಾಲಕ್ಕೆ ಪಾತ್ರೆಪಗಡಗಳನ್ನು ಒತ್ತೆ ಇಡುವ ಕ್ರಮವು ಇತ್ತು. ಜೂಜುಗಾರರು, ಕುಡುಕರು, ಇನ್ನಿತರ ಚಟ ಉಳ್ಳವರು ಮನೆಯಲ್ಲಿ ಕೈಗೆ ಸಿಕ್ಕದ್ದನ್ನು ಅಡವಿಟ್ಟು ಸಿಕ್ಕಷ್ಟು ಹಣ ಪಡೆದುಕೊಳ್ಳುವುದು ನಡೆಯುತ್ತಿತ್ತು. ಅಲ್ಪ ಮೊತ್ತಕ್ಕೆ ಮೈಮೇಲಿನ ಗುಂಡಗಡಿಗೆ, ನಡದಲ್ಲಿನ ಉಡಿದಾರ ಒತ್ತೆ ಇಟ್ಟಿದ್ದನ್ನು ನಾವು ನೋಡಿದ್ದೇವೆ. ನಾವು ಕಾಲೇಜಿನಲ್ಲಿ ಓದುವಾಗ ನಮ್ಮ ಮಿತ್ರರೊಬ್ಬರು ಕೈಯಲ್ಲಿನ ಉಂಗುರವನ್ನು ಹೀಗೆ ಅಡಚಣೆ ಬಂದಾಗ ಅಡ ಇಡುವುದನ್ನು, ಮರಳಿ ತರುವುದನ್ನು ಆಗಾಗ ಮಾಡುತ್ತಲೇ ಇದ್ದರು.

ಗ್ರಾಮೀಣ ಪರಿಸರದಲ್ಲಿ ಪ್ರಚಲಿತವಿದ್ದ ಜೀತ ಪದ್ಧತಿ ಒಂದು ರೀತಿ ಮನುಷ್ಯನ ದೈಹಿಕ ಅಡವಿಡುವ ಪದ್ಧತಿಯಾಗಿ ಇತ್ತೀಚಿನವರೆಗೆ ಜಾರಿಯಲ್ಲಿತ್ತು. ಗ್ರಾಮಾಂತರ ಪ್ರದೇಶದ ಆರ್ಥಿಕ ಅಡಚಣೆಗಳು ಹಲವಾರು ರೀತಿಯ ಮಾನಸಿಕ, ದೈಹಿಕ, ಲೈಂಗಿಕ ಶೋಷಣೆಗಳಿಗೆ ಎಡೆಮಾಡಿಕೊಡುತ್ತಿದ್ದವು. ಹಣ ಬೇಕಾದವರು, ತಕ್ಷಣ ಹಣ ಬೇಕಾದವರು ಒಂದಿಲ್ಲೊಂದು ಬಗೆಯ ಶೋಷಣೆಗೆ ಒಳಗಾಗುತ್ತಿದ್ದರು. ಇಂದು ಜಾಹೀರಾತು ಸಹಿತ ಪ್ರಚಾರಗೊಳ್ಳುವ ಸುಸಂಘಟಿತ ಗಿರವಿ ವ್ಯವಹಾರಗಳು ನಯನಾಜೂಕಿನ ಮಕಮಲ್ ಟೋಪಿ ವ್ಯವಹಾರಗಳಷ್ಟೆ.

ಬಂಗಾರಕ್ಕೆ ನಮ್ಮಲ್ಲಿ ಆರ್ಥಿಕ ಭದ್ರತೆಯ ಭಾಗವಾಗಿ ಮಹತ್ವದ ಪಾತ್ರ ಇದೆ. ಅದು ಕೌಟುಂಬಿಕ ಸಿರಿವಂತಿಕೆಯ ಕುರುಹು ಆಗಿ ಕೂಡ ಗಮನ ಸೆಳೆದಿದೆ. ಇತರ ಯಾವುದೇ ಲೋಹಕ್ಕಿಂತ ಚಿನ್ನ ಇಂದಿಗೂ ಮಹಿಳೆಯರ ಮೆಚ್ಚಿನ ಲೋಹವಾಗಿದೆ. ಮೈಮೇಲೆ ಅಧಿಕ ಬಂಗಾರದ ಒಡವೆಗಳಿದ್ದಷ್ಟು ಮಹಿಳೆಯರಿಗೆ ಹಿಗ್ಗು. ಅವರ ಬೆಡಗು ಬಿನ್ನಾಣಕ್ಕೆ ಚಿನ್ನದ ಮೆರಗು. ಅಲ್ಲಲ್ಲಿ ಬಂಗಾರವನ್ನು ಹೇರಿಕೊಂಡು ಮೆರೆವ ಪುರುಷರನ್ನೂ ನೋಡುತ್ತೇವೆ. ಆದರೆ ಮಹಿಳೆಯರಿಗೆ ಶೋಭಿಸಿದಷ್ಟು ಚಿನ್ನ ಪುರುಷರಿಗೆ ಶೋಭಿಸದು. ಮಹಿಳೆಯರ ಅಂಗಾಗದ ರಚನೆಗಳು ಆಭರಣಗಳ ಧಾರಣಕ್ಕೆ ಹೇಳಿ ಮಾಡಿಸಿದಂತಿವೆ. ಹೀಗಾಗಿ ಮನೆಗಳಲ್ಲಿ ಮಹಿಳೆಯರ ಆಭರಣಗಳದ್ದೆ ಸಿಂಹಪಾಲು. ಅಂತೆಯೆ ಅಡವಿಡಲು ಸಕಾಲಕ್ಕೆ ಲಭ್ಯವಾಗುವ ವಸ್ತುಗಳಲ್ಲಿ ಅವುಗಳಿಗೆ ಮೊದಲ ಸ್ಥಾನ. ಕುಡುಕರಿಗೆ, ಜೂಜುಗಾರರಿಗೆ ಹೆಂಡತಿಯ ತಾಳಿ ಸಹಿತ ಎಲ್ಲದಕ್ಕೂ ಗಿರವಿ ಮೌಲ್ಯ ಇದ್ದೇ ಇರುತ್ತದೆ.

ಒತ್ತೆ, ಗಿರವಿ ಅಥವಾ ಅಡವಿಡುವ ಮತ್ತು ಬಿಡಿಸಿಕೊಳ್ಳುವ ಪ್ರಸಂಗಗಳು, ಕ್ರಿಯೆಗಳು ಮಾನವ ಘನತೆಯನ್ನು ಕುಗ್ಗಿಸುತ್ತವೆ. ವೈಯಕ್ತಿಕ ಅಡಮಾನಗಳ ಪ್ರಸಂಗಗಳಲ್ಲಿ ವ್ಯಕ್ತಿಯ ಸ್ವಾಭಿಮಾನವನ್ನೇ ಅಡವಿಡಲಾಗುತ್ತದೆ. ಅಸಾಹಕತೆಯ ಬೆನ್ನೇರಿದ ಗೋಲ್ಡ್ ಕಂಪನಿಗಳು ಹಲವಾರು ಬಗೆಯ ಚತುರ, ಕುಟಿಲೋಪಾಯಗಳ ಮೂಲಕ ಅಡವಿಡಲು, ಇಟ್ಟವುಗಳನ್ನು ಬಿಡಿಸಿಕೊಳ್ಳಲು, ಮಾರಲು ಪುಸಲಾಯಿಸುತ್ತಲೇ ಇರುತ್ತವೆ. ಅವುಗಳ ಲಾಭ ಇರುವುದು ಅಲ್ಲಿಯೆ. ಸಧ್ಯ ಅದಾದರು ವ್ಯವಸ್ಥೆ ಇದೆಯಲ್ಲ ಅಂತ ಅಂಥವರು ಸಮಾಧಾನ ಪಡಬೇಕಷ್ಟೆ.

ಇದು ವಸ್ತು ಒಡವೆಗಳ ಅಡಮಾನದ ವಿಷಯವಾದರೆ ಬೌದ್ಧಿಕ ಲೋಕದಲ್ಲಿ ಈ ಕ್ರಿಯೆ ಬಹಳ ಸೂಕ್ಷ್ಮ ರೂಪದಲ್ಲಿ ನಡೆಯುತ್ತಿರುತ್ತದೆ. ಯಾವುದೋ ಒಂದು ಪಂಥ ಅಥವಾ ವಿಚಾರಧಾರೆಗೆ ಕಟ್ಟುಬಿದ್ದು ತಮ್ಮ ಜೀವನವನ್ನು ಅದಕ್ಕೆ ಅಡವಿಟ್ಟವರಿದ್ದಾರೆ. ನಮ್ಮ ನಡುವಿನ ಎಡಬಲ ವಿಚಾರವಾದಿಗಳು ತಮ್ಮ ವಿಚಾರಧಾರೆಗೆ ಅಂಟಿಕೊಂಡು, ಒಬ್ಬರನ್ನೊಬ್ಬರು ಅವಹೇಳನ ಮಾಡುತ್ತ ಇರುತ್ತಾರೆ. ತಮ್ಮತಮ್ಮ ವಿಚಾರಧಾರೆಗೆ ಅಡವಿಟ್ಟುಕೊಂಡರೆ ಪರಸ್ಪರ ಭರ್ತ್ಸನೆ ತಪ್ಪದು.

ಇನ್ನು ರಾಜಕೀಯ ಅಡಮಾನ ವ್ಯವಹಾರಗಳ ಬಗ್ಗೆ ಹೆಚ್ಚಿಗೆ ಹೇಳಬೇಕಿಲ್ಲ. ಮೊದಲನೆಯದಾಗಿ ರಾಜಕಾರಣಿಗಳು ತಮ್ಮನ್ನು ತಾವು ಅಧಿಕಾರಕ್ಕಾಗಿ ಅಡವಿಟ್ಟುಕೊಂಡಿರುತ್ತಾರೆ. ಇದು ಪಕ್ಷಾತೀತವಾಗಿ ಕಂಡುಬರುವ ಗುಣಲಕ್ಷಣ. ಸರಳತೆ, ಸಜ್ಜನಿಕೆ, ಜನಸೇವೆಗೆಂದು ಅರ್ಪಿಸಿಕೊಂಡ ರಾಜಕಾರಣಿಗಳು ಒಂದು ಕಾಲಕ್ಕಿದ್ದರು. ಆದರೆ ಆ ಸಂತತಿ ಬೇಗ ನಾಶವಾಯಿತು. ಈಗ ಹೈಕಮಾಂಡಿಗೆ ತಮ್ಮನ್ನು ತಾವು ಅಡವಿಟ್ಟುಕೊಂಡವರೇ ಹೆಚ್ಚು. ಅಲ್ಲಿ ಅವರ ಸೇವೆ, ಶ್ರದ್ಧೆ ನಿಷ್ಠೆಗನುಗುಣವಾಗಿ ಅವರಿಗೆ ಅಧಿಕಾರ, ಅಂತಸ್ತು ಪ್ರಾಪ್ತವಾಗುತ್ತಿರುತ್ತದೆ. ಕೆಲವು ಶಾಸಕರನ್ನು ಕರೆದೊಯ್ದು ಒತ್ತೆ ಇಟ್ಟುಕೊಂಡು ವ್ಯಾಪಾರ ಕುದುರಿಸಿ ಅಧಿಕಾರ ಗಿಟ್ಟಿಸಿಕೊಳ್ಳುವ ಕ್ರಮವೂ ಜಾರಿಗೆ ಬಂದಿದೆ. ಅಧಿಕಾರಶಾಹಿ ಆಳುವ ವರ್ಗಕ್ಕೆ ತನ್ನನ್ನು ತಾನು ಅಡವಿಟ್ಟುಕೊಂಡು ಮುನ್ನಡೆಯುತ್ತಿರುತ್ತದೆ.

ಜನಸಾಮಾನ್ಯರು ಈಗೀಗ ಮೊಬೈಲ್ ಗೆ ತಮ್ಮನ್ನು ತಾವು ಗಿರವಿ ಇಟ್ಟುಕೊಂಡು ಅದರೊಳಗಿನ ವಿವಿಧ ವಿನೋದಾವಳಿಗಳಿಗೆ ದಾಸರಾಗುತ್ತಿದ್ದಾರೆ. ನಮ್ಮ ದೇಶದ ಸತ್ಪçಜೆಗಳು ಚುನಾವಣೆಗಳು ಬಂದಾಗಲೊಮ್ಮೆ ಗಿಟ್ಟಿಸಿಗೊಳ್ಳಬಹುದಾದಷ್ಟು ಹಣಕ್ಕೆ ತಮ್ಮ ಮತವನ್ನು ಮಾರಿ, ದೇಶವನ್ನು, ರಾಜ್ಯವನ್ನು ಯಾವುದೋ ಒಂದು ಪಕ್ಷಕ್ಕೆ ಗಿರವಿ ಇಟ್ಟು ಮತ್ತೊಂದು ಚುನಾವಣೆ ಬರುವವರೆಗೆ ಕಾಯುತ್ತ ಇರುತ್ತಾರೆ. ಮಧ್ಯೆ ಬಿಡಿಸಿಕೊಳ್ಳಲು ಅವಕಾಶ ಕೂಡ ಇಲ್ಲದ ಗಿರವಿ ಇದು. ಮತ್ತೊಂದು ಚುನಾವಣೆಯಲ್ಲಿ ಯಾರಿಂದ ಹೆಚ್ಚು ಹಣ ಸಿಗುವುದೋ ಅವರಿಗೆ ದೇಶವನ್ನು, ರಾಜ್ಯವನ್ನು ಮತ್ತೆ ಐದು ವರ್ಷಕ್ಕೆ ಗಿರವಿ ಹಾಕಿ ಹಾಯಾಗಿ ಇರುತ್ತಾರೆ. ದುಬಾರಿ ಬೆಲೆಯ ಒಡವೆಗಳನ್ನು ಅಗ್ಗದ ದರಕ್ಕೆ ಗಿರವಿ ಹಾಕಿದಂತೆ ಇದು. ಇದನ್ನು ಬಿಡಿಸಿ ಕೊಳ್ಳುವ ಬಗೆ ಹೇಗೆ ಎಂಬುದೇ ಬಿಲಿಯನ್ ಡಾಲರ್ ಪಶ್ನೆ!

*ಲೇಖಕರು ನಿವೃತ್ತ ಕೆಎಎಸ್ ಅಧಿಕಾರಿ. ಸರಕಾರದ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಕೆಲವು ವರ್ಷ ಶಿಕ್ಷಣ ಇಲಾಖೆಯಲ್ಲಿ ಅಪರ ಆಯುಕ್ತರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಅವರು ಸೃಜನಶೀಲ ಬರಹಗಾರರೂ ಹೌದು.

Leave a Reply

Your email address will not be published.