ಹಣ ಹಂಚಿಕೆ ಕಾನೂನುಬದ್ಧ ಮಾಡಬಾರದೇಕೆ?

ಚುನಾವಣೆಗಳಲ್ಲಿ ಮತದಾರರಿಗೆ ಹಣ ಹಂಚಿಕೆ ಕಾನೂನುಬದ್ಧ ಮಾಡಬಾರದೇಕೆ?

ಚುನಾವಣೆ ಬಂದಾಗ ಅಭ್ಯರ್ಥಿಗಳ ಗೋಳು ನೋಡಲಾಗುವುದಿಲ್ಲ. ಮನೆ-ಮಠ ಮಾರಿ ಹಾಗೂ ಸಾಲ-ಸೋಲ ಮಾಡಿಯಾದರೂ ಚುನಾವಣೆಯಲ್ಲಿ ವಿತರಣೆ ಮಾಡಬೇಕಾದ ಹಣ ಹೊಂಚಲೇಬೇಕು. ರಾಜ್ಯಾದ್ಯಂತ ವೋಟಿಗೆ ರೂ.500ಗಳು ಅತ್ಯಂತ ಕಡಿಮೆಯ ದರವಾದರೆ, ಕೆಲವು ಕ್ಷೇತ್ರಗಳ ಆಯ್ದ ಭಾಗಗಳಲ್ಲಿ ವೋಟಿಗೆ ರೂ.2,000 ದಿಂದ ರೂ.5,000 ವರೆಗೂ ಕೊಡಬೇಕಾಗುತ್ತದೆ. ಅಭ್ಯರ್ಥಿಯು ವೋಟು ಖರೀದಿಸಲು ಹಣ ನೀಡುವುದಿಲ್ಲ ಎಂದೇನಾದರೂ ಪ್ರಚಾರವಾದರೆ ಅವನ ಮನೆಯ ಬಳಿ ನಾಯಿ-ನರಿಗಳೂ ಸುಳಿಯದ ಪರಿಸ್ಥಿತಿಯಿದೆ.

ಸಮಸ್ಯೆ ಅದಲ್ಲ. ಸಮಸ್ಯೆ ಹಣ ವಿತರಣೆಗೆ ಅಭ್ಯರ್ಥಿಯೊಬ್ಬ ಪಡಬೇಕಾದ ಗೋಳಿನದ್ದು. ಈ ರಂಪ-ರಾಮಾಯಣವನ್ನು ಈ ಕೆಳಕಂಡಂತೆ ಪಟ್ಟಿ ಮಾಡಬಹುದು.

  • ಮೊದಲಿಗೆ ಕ್ಷೇತ್ರದ ಎಲ್ಲಾ ಹಳ್ಳಿ-ಮೊಹಲ್ಲಾಗಳಲ್ಲಿ ಹಣ ಹಂಚುವುದಕ್ಕೆ ವಾರಗಳ ಮೊದಲೇ ಆಯಕಟ್ಟಿನ ನಂಬಿಕೆಯ ಜನರ ಮನೆಗಳಲ್ಲಿ ಹಣವನ್ನು ಶೇಖರಿಸಿಡಬೇಕು. ಈ ಶೇಖರಣೆಯ ಸಂದರ್ಭದಲ್ಲಿಯೇ ಶೇ.10 ರಿಂದ 20ರಷ್ಟು ಹಣ ಲೂಟಿಯಾಗುತ್ತದೆ.
  • ಈ ಹಣ ಸಾಗಣೆ ಮತ್ತು ಶೇಖರಣೆಯನ್ನು ಚುನಾವಣಾ ಆಯೋಗ ಮತ್ತು ಆದಾಯ ತೆರಿಗೆ ಇಲಾಖೆಗಳ ಹದ್ದು ಕಣ್ಣಿನಿಂದ ತಪ್ಪಿಸಿ ಮಾಡಬೇಕು. ಹಲವು ಬಾರಿ ಕಾರ್ಯಕರ್ತರ ಹುಂಬತನ ಮತ್ತು ಒಳಜಗಳಗಳಿಂದ ಸಾಗಣೆ-ಶೇಖರಣೆಯ ರಹಸ್ಯಗಳು ಹೊರ ಬೀಳಬಹುದು.
  • ಚುನಾವಣೆಯ ಹಿಂದಿನ ದಿನ ಇಡೀ ಕ್ಷೇತ್ರದಲ್ಲಿ ಹಣ ಹಂಚಬೇಕಾದ ಕಾರಣ ಯಾವುದೇ ಅಭ್ಯರ್ಥಿ ಅದನ್ನು ಖುದ್ದಾಗಿ ಮಾಡಲಾರ. ಅದಕ್ಕೆ ಪ್ರತಿಯೊಂದು ಹಳ್ಳಿ, ಮೊಹಲ್ಲಾಗಳಲ್ಲಿ ಬೂತ್ ಮಟ್ಟದ ಕಾರ್ಯಕರ್ತರನ್ನು ಅವಲಂಬಿಸಬೇಕು. ಈ ಕಾರ್ಯಕರ್ತರು ತಮ್ಮ ಬೂತ್‍ಗೆ ಸಿಕ್ಕ ಹಣದಲ್ಲಿ ಅರ್ಧಕ್ಕರ್ಧ ತಮ್ಮ ಜೇಬಿಗಿಳಿಸಿ, ಉಳಿದರ್ಧವನ್ನು ತಮ್ಮ ಕೈಯಿಂದಲೇ ನೀಡುತ್ತಿರುವಂತೆ ಬಿಂಕದ ಮಾತನಾಡಿ ಬರುವ ವೋಟುಗಳನ್ನೂ ಕಳೆಯುತ್ತಾರೆ. ಹಣ ಹಂಚುವ ವಿಷಯದಲ್ಲಿ ಕಾರ್ಯಕರ್ತರ ನಡುವಿನ ಪೈಪೋಟಿಯಲ್ಲಿ ವೈಮನಸ್ಸು ಮೂಡಿ ಅಭ್ಯರ್ಥಿಯ ಹಣ ‘ಸಿಕ್ಕವರಿಗೆ ಸೀರುಂಡೆ’ ಎಂಬಂತೆ ಹಂಚಲಾಗುತ್ತದೆ.

ಈ ಆಧುನಿಕ ಯುಗದಲ್ಲಿ ಈ ಮಟ್ಟದ ಸೋರಿಕೆ ಮತ್ತು ಅದಕ್ಷತೆ ಸರಿಯೇ?  ಆಧಾರ್ ಹಾಗೂ ಕೆವೈಸಿ ಅನುಷ್ಠಾನದ ನಂತರದಲ್ಲಿ ನಾವು ಈ ವ್ಯವಸ್ಥೆಯನ್ನು ಶಿಸ್ತುಬದ್ಧವಾಗಿಸಿ ಹಣ ಪೋಲಾಗುವುದನ್ನು ತಡೆಯಬಾರದೇ? ಅಭ್ಯರ್ಥಿಯು ಖರ್ಚು ಮಾಡಿದ ಕಟ್ಟಕಡೆಯ ರೂಪಾಯಿಯೂ ಅರ್ಹ ಮತದಾರರಿಗೆ ದಕ್ಕಬಾರದೇ? ಭೀಮ್, ಪೇಪಾಲ್, ಪೇಟಿಎಂ, ಮತ್ತಿತರ ನೂರಾರು ಎಲೆಕ್ಟ್ರಾನಿಕ್ ಪೇಮೆಂಟ್ ಗೇಟ್‍ವೇಗಳಿರುವ ಸಂದರ್ಭಗಳಲ್ಲಿ ಈಗಲೂ ನಾವು ನಗದಿನ ಮೇಲೆ ಏಕೆ ನಿರ್ಭರವಾಗಬೇಕು?

ವೋಟಿಗಾಗಿ ಹಣ ನೀಡಬಾರದೆಂಬ ಓಬಿರಾಯನ ಕಾಲದ ಈ ಕಾನೂನನ್ನು ಹಿಂತೆಗೆದುಕೊಂಡರೆ ಸಾಕು, ಈ ಎಲ್ಲಾ ತೊಂದರೆಗಳನ್ನು ಸುಲಭವಾಗಿ ನಿವಾರಿಸಬಹುದು. ಹೇಗಿದ್ದರೂ ಮತದಾರರು ವೋಟಿಗಾಗಿ ಹಣ ಅಪೇಕ್ಷೆಪಡುವುದು ನಿಲ್ಲುವುದಿಲ್ಲ. ಅಭ್ಯರ್ಥಿಗಳು ಹಣ ಕೊಟ್ಟು ಗೆಲ್ಲುವ ಆಸೆ ಬಿಟ್ಟುಕೊಡುವುದಿಲ್ಲ. ಇಂತಹ ಸಂದರ್ಭದಲ್ಲಿ ಈ ಅನಿವಾರ್ಯ ಸಾರ್ವಜನಿಕ ಸತ್ಯವನ್ನು ನಾವು ಇಲ್ಲಸಲ್ಲದ ಮಡಿವಂತಿಕೆ ಬಿಟ್ಟು ಒಪ್ಪಿಕೊಳ್ಳಬಾರದೇಕೆ? ಇದರಿಂದ ಅಭ್ಯರ್ಥಿಯ ಖರ್ಚು ಈಗಿನ ಅರ್ಧದಷ್ಟಾದರೆ, ಮತದಾರರಿಗೆ ಸಿಗುವ ಹಣ ದುಪ್ಪಟ್ಟಾಗಬಹುದು. ಮೇಲಾಗಿ ಸ್ಥಳೀಯ ಮಟ್ಟದ ಸೋರಿಕೆ ತಪ್ಪಿ ಬ್ಯಾಂಕಿಂಗ್ ಹಾಗೂ ಡಿಜಿಟಲ್ ನಗದು ವ್ಯವಸ್ಥೆಗೆ ಉತ್ತೇಜನ ಸಿಗಬಹುದು. ಅಭ್ಯರ್ಥಿಯ ಪರವಾಗಿ ನೇರವಾಗಿ ಪಕ್ಷಗಳ ಖಾತೆಗಳಿಂದ ಅಥವಾ ಗುತ್ತಿಗೆದಾರಹೂಡಿಕೆದಾರರ ಬ್ಯಾಂಕ್ ಖಾತೆಯಿಂದ ಪ್ರತಿಯೊಬ್ಬ ಮತದಾರನ ಖಾತೆಗೆ ಹಣವನ್ನು ಚಿಟಕಿ ಹೊಡೆದ ಹಾಗೆ ವರ್ಗಾಯಿಸಲೂಬಹುದು. ಸ್ಥಳೀಯ ಪುಡಾರಿಗಳ ಹಾವಳಿ ತಪ್ಪಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯಯುತವಾಗಿ ತನ್ನ ವೋಟಿನ ಬೆಲೆ ಸಿಗಬಹುದು.

ಹಣ ಹಂಚುವುದು ಕಾನೂನುಬದ್ಧ ಎಂದ ಮಾತ್ರಕ್ಕೆ ಹಣ ಪಡೆದವನು ಯಾವುದೇ ದಾಕ್ಷಿಣ್ಯಕ್ಕೆ ಅಥವಾ ಕಟ್ಟುಪಾಡಿಗೆ ಒಳಪಡುವ ಅಗತ್ಯವಿಲ್ಲ. ಒಂದೇ ಬ್ಯಾಂಕ್ ಖಾತೆಯಲ್ಲಿ 2-3 ಪಕ್ಷಗಳಿಂದ ಹಣ ಪಡೆದರೂ ಮತದಾರನು ತನಗೆ ಇಷ್ಟ ಬಂದ ಅಭ್ಯರ್ಥಿಗೆ ಮತ ನೀಡಬಹುದು. ನಮ್ಮ ಮುಕ್ತ ಪ್ರಜಾಪ್ರಭುತ್ವ ವ್ಯವಸ್ಥೆಯ ಬೇರುಗಳನ್ನು ಇನ್ನಷ್ಟು ಗಟ್ಟಿಗೊಳಿಸಬಹುದು. ಅನಗತ್ಯ ಬೂಟಾಟಿಕೆಯ ಹಾಗೂ ಇಲ್ಲದ ಸಭ್ಯ ಪ್ರಜಾಪ್ರಭುತ್ವದ ಮುಖವಾಡವನ್ನು ಕಳಚಿ ಹಾಕಬಹುದು.

Leave a Reply

Your email address will not be published.