ಹನುಮನ ಜನ್ಮಸ್ಥಳ ‘ನವೋದ್ಯಮ’ ಆಗಿದೆಯೇ?

ರಾಮ ಜನ್ಮಭೂಮಿಯ ವಿವಾದ ಮುಗಿಯಿತು ಎನ್ನುತ್ತಿರುವಾಗಲೇ ಹನುಮ ಜನ್ಮಭೂಮಿಯ ತಗಾದೆ ಶುರುವಾಗಿದ್ದು ಆಕಸ್ಮಿಕವಿದ್ದಿರಲಾರದು. ತಿರುಪತಿ ಹಾಗೂ ಆನೆಗೊಂದಿಯ ಹಿತಾಸಕ್ತ ಭಕ್ತರು ‘ಪಿತ್ರಾರ್ಜಿತ ಆಸ್ತಿಗೆಂಬಂತೆ ಸಮರ ಘೋಷಣೆ ಮಾಡಿಕೊಂಡಿದ್ದಾರೆ! ಜನಸಾಮಾನ್ಯರನ್ನು ಮುಂದಿಟ್ಟುಕೊಂಡು ತಮ್ಮ ಪ್ರಾಬಲ್ಯವರ್ಧನೆಯ ಬಿಜಿನೆಸ್‍ಗೆ ಹಾತೊರೆವ ಹಿತಾಸಕ್ತಿಗಳು ಸದಾ ಹೊಸ ಹೊಸ ಸ್ಥಳ, ಸಂಗತಿಗಳನ್ನು ಹುಡುಕುತ್ತಿರುತ್ತವೆ. ಅಂತಹವಕ್ಕೆ ಸರಕಾರಗಳೂ ಬೆಂಬಲವಾಗಿ ನಿಂತರೆ ಪರಿಣಾಮ ಏನಾಗಬಹುದು ಎಂಬುದಕ್ಕೆ ಈಗ ಹನುಮ ಜನ್ಮಭೂಮಿ ಮತ್ತೊಂದು ಪಾಠವಾದೀತು.

-ಡಾ.ಟಿ.ಗೋವಿಂದರಾಜು

ಸರಕಾರ ಮನಸ್ಸು ಮಾಡಿದರೆ ಏನು ಬೇಕಾದರೂ ಆಗುತ್ತದೆ ಎಂಬುದಕ್ಕೆ ಅಯೋಧ್ಯಾ ರಾಮನ ಜನ್ಮ ಸ್ಥಾನದ ತೀರ್ಮಾನವು ಸರಿಯೋ ತಪ್ಪೋ ಎಂಬುದಕ್ಕೂ ಅವಕಾಶವಿಲ್ಲದಂತೆ ಮುಕ್ತಾಯವಾದದ್ದೇ ಉತ್ತಮ ನಿದರ್ಶನ. ಚಿಟಿಕೆ ಹೊಡಯುವುದರಲ್ಲೇ ಊಹೆಗೂ ಮೀರಿದ ಮೂರೂವರೆ ಸಾವಿರ ಕೋಟಿ ಬಂಡವಾಳವೂ ಹರಿದು ಬಂದು ‘ಹಿಂದೆ ಇಲ್ಲ, ಮುಂದೆ ಇರಲ್ಲ’ ಎಂಬಂತಹ, ‘ಆಕಾಶದಷ್ಟು ಎತ್ತರ, ಭೂಮಿಯಷ್ಟು ಅಗಲ’ದ ಮಹಾ ಮಂದಿರ ನಿರ್ಮಾಣವೂ ‘ನಾಳೆ ಆಗು ಎಂದರೆ ಇಂದೇ, ಈಗಲೇ ಆಗುವಂತೆ’ ಸಾಗುತ್ತಿದೆ.

ಇಂತಹ ಮಂದಿರಗಳಿಗಿಂತ, ಆ ಹಣದಲ್ಲಿ ಆಸ್ಪತ್ರೆಗಳು ಆಗಿದ್ದರೆ ಈಗಾ ಕೊರೊನಾ ಪಿಡುಗಿನಿಂದ ಸಾವಿರಾರು ಜನ ರಾಮಪಾದ ಸೇರುವುದಾದರೂ ತಪ್ಪುತ್ತಿತ್ತು; ದೇಶಾದ್ಯಂತ ನೂರಾರು ಕಾಲೇಜುಗಳಾಗಿದ್ದರೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಚಂದ್ರಾರ್ಕವಾಗಿ ಅರಿವು-ಬದುಕುಗಳ ಮಾರ್ಗವಾದರೂ ಆಗುತ್ತಿತ್ತಲ್ಲಾ ಎಂದು ಕೆಲವರು ದನಿ ಎತ್ತಿರುವುದು ಅಧಿಕಾರಸ್ಥರಿಗೆ ಕೈಲಾಗದವರ ಗೊಣಗಾಟವೆನಿಸಿ ತಿರಸ್ಕøತವಾಗಿದೆ. ಸಾಮಾಜಿಕ ಅರಿವಿನ ಎಲ್ಲಾ ಸೂಕ್ಷ್ಮಗಳಿಗೆ ಕುರುಡು, ಕಿವುಡಾದ ಜೈಕಾರದ ಭಕ್ತರಂತೂ, ‘ಪಟೇಲ್ ಪ್ರತಿಮೆ ಮಾಡಿಸಿದ್ದು ಅಲಂಕಾರಕ್ಕಲ್ಲ, ಅದರಿಂದಲೂ ಸರಕಾರಕ್ಕೆ ಆದಾಯವಿದೆ ಎಂಬ ಸಮರ್ಥನೆಗಿಳಿದಿದ್ದಾರೆ. ಅಂದರೆ, ವೈಭವಯುತ ಮಂದಿರಗಳೂ ಆತ್ಮನಿರ್ಭರ ಕಾಲದ ನವೋದ್ಯಮವಾಗುತ್ತಿವೆ ಎಂದಾಯಿತು!

ರಾಮಜನ್ಮಭೂಮಿಯ ವಿವಾದ ಮುಗಿಯಿತು ಎನ್ನುತ್ತಿರುವಾಗಲೇ ಹನುಮ ಜನ್ಮಭೂಮಿಯ ತಗಾದೆ ಶುರುವಾಗಿದ್ದು ಆಕಸ್ಮಿಕವಿದ್ದಿರಲಾರದು. ತಿರುಪತಿ ಹಾಗೂ ಆನೆಗೊಂದಿಯ ಹಿತಾಸಕ್ತ ಭಕ್ತರು ‘ಪಿತ್ರಾರ್ಜಿತ ಆಸ್ತಿ’ಗೆಂಬಂತೆ ಸಮರ ಘೋಷಣೆ ಮಾಡಿಕೊಂಡಿದ್ದಾರೆ. ‘ಸುಗ್ರೀವನೊಂದಿಗೆ ಹನುಮನಿದ್ದದ್ದು, ರಾಮನನ್ನು ಕಂಡಿದ್ದು ಹಂಪಿ-ಆನೆಗೊಂದಿಯ ಕಿಷ್ಕಿಂಧೆಯಲ್ಲೇ ಆದರೂ, ಅವನು ಹುಟ್ಟಿದ್ದು ತಿರುಪತಿ ಬೆಟ್ಟಕ್ಕೆ ಐದು ಕಿಮೀ ದೂರದ ಅಂಜನಾದ್ರಿಯಲ್ಲೇ; ಆಮೇಲೆ ಅವನು ಕರ್ನಾಟಕದ ಕಿಷ್ಕಿಂಧೆಗೆ ಹೋದ’ ಎಂಬಂತೆ ತಿರುಪತಿ ತಿರುಮಲ ದೇವಸ್ಥಾನ ಮಂಡಲಿಯವರು (ಟಿಟಿಡಿ) ಪವಿತ್ರವಾದ ರಾಮನವಮಿಯಂದೇ ವಾದಿಸಿದ್ದಾರೆ. ಅದಕ್ಕೆ ಬೇಕಾದ ಅನೇಕ ಪವಿತ್ರ ಪುರಾಣಗಳು, ಪುರಾತನ ದಾಖಲೆಗಳು, ನಂಬಿಕೆಗಳು ತಮ್ಮಲ್ಲಿವೆ ಎಂದೂ ಹೇಳಿದ್ದಾರೆ.

ಈ ಸುದ್ದಿ ಕೇಳಿ ಸಿಡಿದೆದ್ದ ಆನೆಗೊಂದಿ-ಕಿಷ್ಕಿಂಧೆಯ ವಾರಸುದಾರರು, ‘ಟಿಟಿಡಿಯವರ ಪುರಾಣಗಳೆಲ್ಲಾ ಸುಳ್ಳು, ನಮ್ಮ ಪುರಾಣ, ನಂಬಿಕೆ, ಜನಪದ ಕತೆಗಳ ಪ್ರಕಾರ ಹನುಮ ಹುಟ್ಟಿದ್ದು  ಕಿಷ್ಕಿಂಧೆಯಲ್ಲೇ ಎಂಬುದು ಶತಸಿದ್ಧ; ಎರಡು ಸಾವಿರ ಸಂತರನ್ನು ಸೇರಿಸಿ ನಮ್ಮ ವಾದ ಗೆಲ್ಲುತ್ತೇವೆ, ಬೇಕಾದವರು ಅಲ್ಲಿ ಬಂದು ವಾದಿಸಿ ಗೆಲ್ಲಿ’ ಎಂಬಂಥ ಪಂಥಾಹ್ವಾನ ನೀಡಿದ್ದಾರೆ.

ಈಗ ತುರುಸಿನ ಸ್ಪರ್ಧೆ ಇರುವುದು ಟಿಟಿಡಿ ಮತ್ತು ಕಿಷ್ಕಿಂಧೆಯ ಹಿತಾಸಕ್ತರ ಮಧ್ಯೆ. ವಿಶೇಷವೆಂದರೆ, ಟಿಟಿಡಿಯವರಿಗಿಂತಲೂ ಮೊದಲು ಹಕ್ಕು ಮಂಡನೆ ಮಾಡಿಕೊಂಡವರು ಗೋಕರ್ಣದ ಮಠಾಧೀಶರು. ಅವರ ಪ್ರಕಾರ ಹನುಮ ಕಡಲ ತೀರದ ಕುವರ; ಅವ ಹುಟ್ಟಿದ್ದೇ ಗೋಕರ್ಣದಲ್ಲಿ. ‘ಯಾರು ಏನೇ ಹೇಳಲಿ, ತಾವು ಮಾತ್ರ ಅಲ್ಲಿ ಹನುಮ ಜನ್ಮಭೂಮಿ ಅಭಿವೃದ್ಧಿಗೆ ಶಂಕುಸ್ಥಾಪನೆ ಮಾಡಿದ್ದಾಗಿದೆ; ಅದು ನಿಲ್ಲುವುದಿಲ್ಲ’. ಕೊಪ್ಪಳದ ಕಿಷ್ಕಿಂಧೆ ಹಿತರಕ್ಷಕರಿಗೆ ಗೋಕರ್ಣದವರ ಹೇಳಿಕೆ ಬಗ್ಗೆ ಪ್ರತಿರೋಧವಿದೆಯೋ ಅಥವಾ ಅವರೂ ‘ನಮ್ಮವ’ರೇ ಹೇಳಿಕೊಳ್ಳಲಿ- ಎಂಬ ಸಹೃದಯತೆಯೋ ಗೊತ್ತಿಲ್ಲ. ಅವರ ತಕರಾರು ಇರುವುದು ಮಾತ್ರ ತಿರುಪತಿಯವರ ಬಗ್ಗೆ. ಕಾರಣ..?

ರಾಮ, ಹನುಮ ಅಥವಾ ಮತ್ತಾವುದೇ ಪುರಾಣಕಾಲದ ದೈವಸ್ಥಾನಗಳ ವಿಚಾರ ಕೇವಲ ನಂಬಿಕೆಯದೋ, ಭಾವನಾತ್ಮಕವಾದ್ದೋ, ಅಥವಾ ರಾಜಕೀಯ, ಆರ್ಥಿಕ ಪ್ರಾಬಲ್ಯದ ಒಳ ಹಿತಾಸಕ್ತಿಯದ್ದೋ? ಇದು ಅವರವರೇ ಗ್ರಹಿಸಬೇಕಾದ್ದು. ನಮ್ಮಂತಹವರು ಬಾಯಿಬಿಟ್ಟು ಹೇಳಿ ದಕ್ಕಿಸಿಕೊಳ್ಳುವುದೂ ಕಷ್ಟವೆಂಬ ಪರಿಸ್ಥಿತಿ ಇದೆ. ಸ್ವಾರಸ್ಯವೆಂದರೆ, ಅವರವರ ಸಮರ್ಥನೆಯಲ್ಲೇ ಅವರವರ ಹಿತಾಸಕ್ತಿಯ ‘ಮರ್ಮ’ ಏನೆಂಬುದೂ ಬಯಲಾಗಿಬಿಟ್ಟಿದೆ! ತಿರುಪತಿಯನ್ನು ಹನುಮ ಜನ್ಮಭೂಮಿ ಎಂದು ಘೋಷಿಸುವ ಮೂಲಕ ಸರಕಾರ, ಉದ್ದಿಮೆದಾರರು ಹಾಗೂ ಭಕ್ತರಿಂದ ಅಪಾರ ಬಂಡವಾಳ ಮಾಡಿಕೊಳ್ಳುವುದು ಟಿಟಿಡಿಯ ಉದ್ದೇಶ ಎಂದು ಕೆಲವರು ಹೇಳಿದ್ದಾರೆ. ಸಂಘಟನೆಯೊಂದರ ಮುಖಂಡನಂತೂ ಇದರಲ್ಲಿ ಕ್ರೈಸ್ತರ ಕೈವಾಡವನ್ನೂ ಕಂಡಿದ್ದಾರೆ.

ಪ್ರತಿಯಾಗಿ, ‘ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಿಷ್ಕಿಂಧೆ ದೇವಾಲಯ ಅಭಿವೃದ್ಧಿಗೆಂದು ಈಗಾಗಲೇ ನೂರಾರು ಕೋಟಿ  ಅನುದಾನ ಮಂಜೂರು ಮಾಡಿವೆ; ಆ ಹಣ ವ್ಯರ್ಥವಾಗಲು ಬಿಡಲಾರೆವು’ ಎಂದು ಇಲ್ಲಿನ ಜನಪ್ರತಿನಿಧಿಗಳು ಹೇಳಿದ್ದಾರೆ. ಧಾರ್ಮಿಕ ಸಂಘಟಕರಂತೂ, ‘ಬಾಬಾಬುಡನ್ ಗಿರಿಯ ಬಳಿಕ ಈಗ ಕಿಷ್ಕಿಂಧೆಗೂ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಮಾಲಾಧಾರಿಗಳು ಬರುವಂತೆ ಮಾಡಿದ್ದೇವೆ; ಆ ಮೂಲಕ ಧರ್ಮ ಸಂಘಟನೆ ಮಾಡುತ್ತೇವೆ’ ಎಂದು ಹೇಳಿಕೊಂಡಿದ್ದಾರೆ. ಅಂತಿಮವಾಗಿ ಈ ಸಂಘಟನೆಗಳ ರಾಜಕೀಯ ಬಲ ಯಾರ ಕಡೆಗೆ, ಚುನಾವಣೆಯಲ್ಲಿ ‘ಮತ’ಗಳೆಲ್ಲಾ ಓಟುಗಳಾಗಿ ಹೇಗೆ ಪರಿವರ್ತನೆಯಾಗುತ್ತವೆ ಎಂಬುದೆಲ್ಲಾ ಅರ್ಥವಾಗುವುದು ಕಷ್ಟವೇನಲ್ಲ.

ಕತೆ, ಪುರಾಣಗಳು ತಾನಾಗಿ ಹುಟ್ಟಿಕೊಳ್ಳುವುದಿಲ್ಲ, ಹುಟ್ಟಿಸಲಾಗುತ್ತದೆ. ಜನ ಸಾಮಾನ್ಯರ ನಂಬಿಕೆಗಳೂ ಅವರ ಸ್ವಂತದವಲ್ಲ, ಯಾರೋ ಹಿತಾಸಕ್ತರು ಹುಟ್ಟುಹಾಕಿದ್ದು. ಜನಸಾಮಾನ್ಯರನ್ನು ವಿಚಾರವಂತರು ತಿದ್ದುವುದಕ್ಕೂ ಆಗುವುದಿಲ್ಲ, ಪ್ರಶ್ನಿಸಿದರೂ ಉಪಯೋಗವಿಲ್ಲ. ಜನಸಾಮಾನ್ಯರನ್ನು ಮುಂದಿಟ್ಟುಕೊಂಡು ತಮ್ಮ ಪ್ರಾಬಲ್ಯವರ್ಧನೆಯ ಬಿಜಿನೆಸ್‍ಗೆ ಹಾತೊರೆವ ಹಿತಾಸಕ್ತಿಗಳು ಸದಾ ಹೊಸ ಹೊಸ ಸ್ಥಳ, ಸಂಗತಿಗಳನ್ನು ಹುಡುಕುತ್ತಿರುತ್ತವೆ. ಅಂತಹವಕ್ಕೆ ಸರಕಾರಗಳೂ ಬೆಂಬಲವಾಗಿ ನಿಂತರೆ ಪರಿಣಾಮ ಏನೆಲ್ಲಾ ವೈಪರೀತ್ಯಗಳಾಗಬಹುದು ಎಂಬುದಕ್ಕೆ ಈಗ ಹನುಮ ಜನ್ಮಭೂಮಿ ಮತ್ತೊಂದು ಪಾಠವಾದೀತು.

ಯಾವುದೇ ದೇಶ, ಸಮುದಾಯದಲ್ಲಿ ಒಂದಾದರೂ ಪುರಾಣ ಇದ್ದೇ ಇರುತ್ತದೆ. ಅನೇಕ ಜಾತಿ, ಪಂಥಗಳಿಂದ ಕೂಡಿದ ನಮ್ಮಲ್ಲಿ ಹಲವು ಪುರಾಣಗಳಿರುವುದು ಅಚ್ಚರಿ ಏನಲ್ಲ. ಹನುಮನ ಕತೆ ತಿಳಿಯಲು ಮೂಲ ವಾಲ್ಮೀಕಿ ರಾಮಯಣವೇ ಅಧಿಕೃತ ಎನ್ನುವುದಾದರೆ ಉಳಿಕೆ ಸಾವಿರಾರು ರಾಮಾಯಣ, ಹನುಮಾಯಣಗಳ ಕತೆ ಏನಾಗಬೇಕು? ತರ್ಕಕ್ಕಾಗಿ ತರ್ಕ ಎನ್ನುವುದಾದರೆ, ವಾಲ್ಮೀಕಿಯು ಮಹಾಕಾವ್ಯ ಬರೆವ ಮುನ್ನವೇ ಜನಪದರಲ್ಲಿ ಥರಾವರಿ ರಾಮ, ಸೀತೆ, ಹನುಮರ ಕತೆಗಳೂ ಪ್ರಚಲಿತದಲ್ಲಿರಬಹುದಲ್ಲವೇ? ರಾಮನೊಂದಿಗೇ ತಾನೂ ವನವಾಸ ಹೋಗದ ವಾಲ್ಮೀಕಿಯು ಬಳಿಕ ಸೀತೆ, ಹನುಮಂತಾದಿಗಳಿಂದ ಕೇಳಿದ ಅನುಭವ ಕಥನಗಳನ್ನೇ ಆಧರಿಸಿ ಕಾವ್ಯರೂಪ ಕೊಟ್ಟ ಎಂದರೆ ತಪ್ಪೇನಾದೀತು?

ರಮಣೀಯತೆಗಾಗಿ, ಕಥಾ ಪೂರಣಕ್ಕಾಗಿ ಅನೇಕ ಕಲ್ಪನೆಗಳೂ ಸೇರಿರುವುದು ಅಸಂಭವವೇನಲ್ಲವಲ್ಲ. ಧಾರ್ಮಿಕ ಪಂಥಗಳ ಮೇಲಾಟದ ಹೊತ್ತಿನಲ್ಲಿ, ಭಕ್ತಿಪಂಥಗಳ ಪ್ರಚಾರದ ಮಾಧ್ಯಮವಾಗಿ ಏನೆಲ್ಲಾ ಹೊಸ ಬಗೆಯ ಹಾಡು, ಕಲೆಗಳು ಹುಟ್ಟಿಕೊಂಡಿವೆ ಎಂಬುದನ್ನು ಗಮನಿಸಿದ್ದೇವೆ. ಅನೇಕ ಬಗೆಯ ರಾಮಾಯಣಗಳೂ ಆಯಾ ಕಾಲದವರ ಆಶಯ-ಹಿತಾಸಕ್ತಿಗನುಗುಣವಾಗಿಯೇ ಹುಟ್ಟಿವೆ ಹೊರತು ಮುಂದೆ ಎಂದೋ ಬರುವವರಿಗೆ ಐತಿಹಾಸಿಕ ಸತ್ಯಗಳನ್ನು ಒದಗಿಸಬೇಕೆಂಬ ಸಾಮಾಜಿಕ ಕಾಳಜಿಯಿಂದ ಅಲ್ಲ; ಬದಲಿಗೆ, ತಾನು ಹೇಳಿದ್ದನ್ನೇ ಜನ ನಂಬಿ ಅನುಸರಿಸಲಿ ಎಂದು.

ಹೀಗಾಗಿ ಪುರಾಣ, ಪುಣ್ಯಕತೆಗಳನ್ನು ಐತಿಹಾಸಿಕ ಸತ್ಯವೆಂಬಂತೆ ಓದಿಕೊಳ್ಳುವುದೇ ಮೊದಲ ತಪ್ಪು. ಇದು ಎರಡೂ ಕಡೆಯ ‘ತಜ್ಞ’ರಿಗೆ ಗೊತ್ತಿಲ್ಲವೇ? ಆದರೂ ಏಕೆ ಈಗ ಕಗ್ಗಂಟು ಮಾಡಿದ್ದಾರೆ? ಅದರಲ್ಲಿನ ಅವರ ಹಿತಾಸಕ್ತಿಗಳೇನು? ಪುರಾಣದ ಹನುಮನ ಜನ್ಮಸ್ಥಳವನ್ನು ‘ನವೋದ್ಯಮ’ವಾಗಿ ಬಳಸಿಕೊಳ್ಳಲು ಸಾಧ್ಯವೇ?  ಇಂಥಾ ಐಡಿಯಾ ಕೆಲವರಿಗೆ ಮಾತ್ರ ದೈವಪ್ರೇರಣೆಯಾಗಿ ಬರುತ್ತವೆ ಎಂಬುದನ್ನು ಕತೆಗಾರ ಮಾಸ್ತಿಯವರು ತಮ್ಮ ‘ಕಲ್ಮಾಡಿಯ ಕೋಣ’ ಕತೆಯಲ್ಲಿ ಕಂಡರಿಸಿದ್ದಾರೆ.

ಹನುಮ, ವಾಯು ಪುತ್ರ, ಶಿವಾಂಶ ಸಂಭೂತ, ಮಹಾ ವಿದ್ವಾಂಸ, ಸಕಲಶಾಸ್ತ್ರ ಕೋವಿದ, ಚಿರಂಜೀವಿ.. ಏನೆಲ್ಲಾ ಹೊಗಳಿಕೆಗಳಿದ್ದರೂ ಕೊನೆಗವನ ಸ್ಥಾನ ರಾಮಭಂಟನಾಗಿ, ಸದಾ ವಿನಮ್ರನಾಗಿ ಪದತಲದಲ್ಲಿ ನಿಂತ ರೂಪದವನಾಗಿ ಮಾತ್ರ. ‘ಹನುಮನಿಲ್ಲದೆ ಸಮುದ್ರಕ್ಕೆ ಸೇತುವೆಯೂ ಇಲ್ಲ, ರಾಮನಿಗೆ ಸೀತೆಯೂ ಇಲ್ಲ, ರಾಮಾಯಣವೂ ಇಲ್ಲ..’ ಎಂಬ ಪ್ರಸಿದ್ಧ ಕೀರ್ತನೆಯೇ ಇದ್ದರೂ ಚಿತ್ರ, ಶಿಲ್ಪಗಳಲ್ಲಿ ರಾಮ, ಸೀತೆ, ಲಕ್ಷ್ಮಣರಿಗೆ ಸಮಾನವಾಗಿ ಹನುಮಂತನನ್ನೂ ಚಿತ್ರಿಸಿದ್ದು ಎಲ್ಲೂ ಇಲ್ಲ. ಅಂದರೆ, ಅವನನ್ನು ಸ್ವತಂತ್ರವಾಗಿ, ಆ ಪರಿಯಾಗಿ ಕಲ್ಪಿಸಿಕೊಳ್ಳಲು ಸಾಧ್ಯವೇ ಆಗಿಲ್ಲವೆಂದರೆ, ವ್ಯವಸ್ಥೆ ಬೀರಿರುವ ಮನಸ್ಥಿತಿ ಎಂತಹದ್ದೆಂಬುದು ಗೊತ್ತಾಗುತ್ತದೆ.

ಈಚೆಗೆ ಯಾರೋ ಒಬ್ಬಿಬ್ಬರು ಸಾಂಪ್ರದಾಯಿಕವಾದ ‘ಭಕ್ತ’ ಹನುಮನಿಗೆ ಬದಲು ‘ಅತ್ಯುಗ್ರ’ ಕಪಿವೀರನಂತೆ ಚಿತ್ರಿಸಿ ‘ಉಗ್ರ ಭಕ್ತ’ರ ಆದರ್ಶವಾಗಿರಿಸಿದ್ದಾರೆ. ರಾಜಕೀಯ ಪಕ್ಷವೊಂದು ತಾನು ಅಧಿಕಾರದಲ್ಲಿರುವ ಕ್ಷೇತ್ರಗಳಲ್ಲೆಲ್ಲಾ ಮುಗಿಲೆತ್ತರದ ವಿರಾಟ್ ಹನುಮನ ಸಿಮೆಂಟ್ ಶಿಲ್ಪಗಳನ್ನು ಮಾಡಿ ನಿಲ್ಲಿಸಿದ್ದಾರೆ. ಅದನ್ನು ಕಂಡಾಗೆಲ್ಲಾ ವೋಟುದಾರಿಗೆ ತಮ್ಮ ಪಕ್ಷವೇ ನೆನಪಾಗುತ್ತಿರಲಿ, ಕಣ್ಣು ಮುಚ್ಚಿಕೊಂಡು ವೋಟು ತಮಗೇ ಒತ್ತಲಿ ಎಂಬ ಮಹೋದ್ದೇಶ ಆ ಕ್ಷೇತ್ರಪಾಲಕ ಶಾಸಕರದು! ಜನರದೇ ದುಡ್ಡಿನ ಹನುಮನ ಮೂಲಕ ಅಧಿಕಾರ ಗಳಿಕೆ ಬಿಜಿನೆಸ್ ಹೇಗೆ ಮಾಡಬಹುದೆಂಬುಕ್ಕೆ ಇದೊಂದು ನಿದರ್ಶನ!

ಇಂಥಾ ‘ಸೇವಕ ಶ್ರೇಷ್ಠ’ ಹನುಮನ ಆರಾಧನೆಗೆ ಒತ್ತು ಕೊಟ್ಟು ಬೆಳಸುವ ಮೂಲಕ  ಉತ್ತರದವರು ದಕ್ಷಿಣದ ಕನ್ನಡಿಗರ ಮೇಲೆ ಹಿಡಿತ ಸಾಧಿಸುತ್ತಿದ್ದಾರೋ ಅಥವಾ ದ್ರಾವಿಡರ ಮೇಲಿನ ಆರ್ಯರ ಆಧಿಪತ್ಯವನ್ನು ಸದಾ ನೆನಪಿಸುತ್ತಿದ್ದಾರೋ ಯಾರು ಹೇಳುವವರು? ರಾಮಾನುಜಾಚಾರ್ಯರ ಪ್ರೇರಣೆಯಿಂದ, ಅವರ ಪಂಥದ ದಾಸರಿಂದ ನಾಡಿನ ಊರೂರಲ್ಲಿ ಮಾರುತಿ ಮಂದಿರಗಳಾದವು. ಬೆಂಗಳೂರಿಂದ ತಿರುಪತಿಗೆ ‘ದಾರಿ ಯಾವುದಯ್ಯಾ?’ ಎಂದು ಯಾರನ್ನೂ ಕೇಳಬೇಕಿಲ್ಲ, ಮಾರ್ಗದುದ್ದಕ್ಕೆ ಇರುವ ಹನುಮ ಗುಡಿಗಳೇ ತಿರುಮಲನ ಪಾದಕ್ಕೆ ಕೊಂಡೊಯ್ಯುತ್ತವೆ. ಸಾಂಪ್ರದಾಯಿಕವಾಗಿ ಈ ಗುಡಿಗಳಿಗೆ ಕನ್ನಡಿಗ ವೈಷ್ಣವರು ಅಥವಾ ಸಾತಾನಿಗಳೇ ಅರ್ಚಕರು. ಈಚೆಗೆ ಹಂಪೆ-ಕಿಷ್ಕಿಂಧೆಯಂತಹ ಆಯಕಟ್ಟಿನ ಕೆಲವು ಹನುಮರನ್ನು ಯಾರೋ ಉತ್ತರದಿಂದ ಬಂದ ‘ಬಾಬಾ’ಗಳು ವಶ ಮಾಡಿಕೊಂಡು, ತಾವೇ ಆ ಕ್ಷೇತ್ರಾಧಿಪರಾಗಿದ್ದಾರೆ. ಅವರಿಗೆ ಗೊತ್ತು, ಇಂಥಾ ಸ್ಥಳಗಳ ಭವಿಷ್ಯ- ವೈಭವ!

ಇದೆಲ್ಲಾ ನಮ್ಮ ಧರ್ಮೋದ್ಧಾರದ ಕೆಲಸವೆಂದು ಭ್ರಮಿಸುವ ಜನಸಾಮಾನ್ಯರು ಇಂಥಾ ಹೊತ್ತಿನಲ್ಲಿ ಏನು ಮಾಡಬೇಕು? ಧರ್ಮೋದ್ಧಾರಕರೆಂದು ನಾವು ನಂಬುವವರ ಈ ಒಳ ಸೂಕ್ಷ್ಮಗಳನ್ನು ಅರಿಯಬೇಕು.  ಯಾರೋ ಕರೆದರೆಂದು ಬೆಟ್ಟಕ್ಕೆ ಕಲ್ಲು ಹೊರಲು ಭಾರೀ ಉಮೇದಿನಿಂದ ಹೊರಡುವ ದಿನನಿತ್ಯದ ಕಾಯಕಜೀವಿಗಳು ಇದರ ಇಂಗಿತವನ್ನು ಅರ್ಥ ಮಾಡಿಕೊಂಡಷ್ಟೂ ಅವರ ಭವಿಷ್ಯ ಬೆಳಕಾಗುತ್ತದೆ; ಬದುಕು ಭದ್ರವಾಗುತ್ತದೆ.

Leave a Reply

Your email address will not be published.