ಹಮಾಸ್ – ಇಸ್ರೇಲ್ ಕದನ

ಕಳೆದ 70 ವರ್ಷಗಳಿಂದ ನಡೆಯುತ್ತಿರುವ ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಡುವಿನ ಕದನ 2021 ರಲ್ಲಿ ಮತ್ತೊಮ್ಮೆ ಉಲ್ಬಣಗೊಂಡಿದೆ. ಇಸ್ರೇಲ್ ದಕ್ಷಿಣದ ಸಮುದ್ರ ತಟದಲ್ಲಿರುವ ಗಾಜಾಪಟ್ಟಿಯ ‘ಹಮಾಸ್’ ಬಂಡುಕೋರ ಸಂಸ್ಥೆ ಇಸ್ರೇಲಿನ ನಗರಗಳ ಮೇಲೆ 4200ಕ್ಕೂ ಹೆಚ್ಚು ರಾಕೆಟ್‍ಗಳನ್ನು ಸಿಡಿಸಿದೆ. ಹನ್ನೊಂದು ದಿನ ನಡೆದ ಈ ಕಲಹದಲ್ಲಿ ಇಸ್ರೇಲ್ ಕೂಡಾ ಹಮಾಸ್‍ನ ‘ಭಯೋತ್ಪಾದಕ ನೆಲೆ’ಗಳ ಮೇಲೆ ಸರ್ಜಿಕಲ್ ಕ್ಷಿಪಣಿ ದಾಳಿ ನಡೆಸಿದೆ. ಒಟ್ಟು 250ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಈ ಕದನದಲ್ಲಿ ಸತ್ತ ಬಹುತೇಕರು ನಿರ್ದೋಷಿ ಪ್ಯಾಲೆಸ್ಟೀನ್ ನಾಗರಿಕರಾಗಿದ್ದಾರೆ.

ಗಾಜಾ ಪಟ್ಟಿ ಮತ್ತು ಗೋಲನ್ ಎತ್ತರ ಪ್ರದೇಶದ ಪ್ಯಾಲೆಸ್ಟೀನ್ ಸರ್ಕಾರದ ಅಧ್ಯಕ್ಷ ಮಹಮೂದ್ ಅಬ್ಬಾಸ್ ಗಾಜಾ ಪಟ್ಟಿಯಲ್ಲಿ ಬಹುತೇಕ ತಮ್ಮ ಜನಬೆಂಬಲ ಮತ್ತು ಹಿಡಿತ ಕಳೆದುಕೊಂಡಿದ್ದಾರೆ. ಸಾಮಾನ್ಯ ಪ್ಯಾಲೆಸ್ಟೀನರೂ ಕೂಡಾ ಬೇರೆ ದಾರಿಯಿಲ್ಲದೆ ಭಯೋತ್ಪಾದಕ ಹಮಾಸ್ ಸಂಸ್ಥೆಗೇ ಬೆಂಬಲ ನೀಡಬೇಕಾಗಿದೆ. ಈ ಬೆಂಬಲದಿಂದ ಬೆಳೆದ ಹಮಾಸ್ ಸ್ಥಳೀಯವಾಗಿ ಸಹಸ್ರಾರು ಸಂಖ್ಯೆಯಲ್ಲಿ ರಾಕೆಟ್‍ಗಳನ್ನು ತಯಾರಿಸಿ ಇಸ್ರೇಲಿನ ಪಟ್ಟಣಗಳ ಜನವಸತಿಯ ಮೇಲೆ ಸಿಡಿಸಿತ್ತು. ಕೆಲವು ರಾಕೆಟ್‍ಗಳು ರಾಜಧಾನಿ ಟೆಲ್ ಅವೀವ್ ಮೇಲೆ ಕೂಡಾ ಬಿದ್ದಿದ್ದವು. ಈ ದಾಳಿಯಲ್ಲಿ ಭಾರತೀಯ ನರ್ಸ್ ಒಬ್ಬಳು ಮೃತಪಟ್ಟರೂ ಇಸ್ರೇಲಿನ ಸಾವಿನ ಸಂಖ್ಯೆ ಅತ್ಯಂತ ಕಡಿಮೆಯೇ ಆಗಿತ್ತು.

ಇದಕ್ಕೆ ಕಾರಣ ಇಸ್ರೇಲ್ ಹೊಸದಾಗಿ ಅಭಿವೃದ್ಧಿ ಪಡಿಸಿರುವ ‘ಉಕ್ಕಿನ ಕವಚ’ (ಐರನ್ ಡೋಮ್). ಗಾಜಾ ಪಟ್ಟಿಯಿಂದ ಸಿಡಿಸಿದ ರಾಕೆಟ್‍ಗಳು ಇಸ್ರೇಲಿನ ನಗರಗಳನ್ನು ತಲುಪುವ ಮುಂಚೆಯೇ ಇಸ್ರೇಲ್ ತನ್ನ ಕ್ಷಿಪಣಿಗಳನ್ನು ಕಳುಹಿಸಿ ಮಾರ್ಗಮಧ್ಯದಲ್ಲಿಯೇ ಈ ರಾಕೆಟ್‍ಗಳನ್ನು ಸಿಡಿಸುವ ತಂತ್ರಜ್ಞಾನವನ್ನು ಪ್ರಯೋಗ ಮಾಡಿದೆ. ಇದರಿಂದ ಬಹುತೇಕ ರಾಕೆಟ್‍ಗಳು ಗುರಿ ತಲುಪಲಾದರೂ ಕೆಲವಾರು ರಾಕೆಟ್‍ಗಳು ಇಸ್ರೇಲಿಗರ ನಿದ್ದೆ ಕೆಡಿಸಿದ್ದವು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ತನ್ನ ಆಧುನಿಕ ಕ್ಷಿಪಣಿಗಳನ್ನು ಬಳಸಿ ಗಾಜಾ ಪಟ್ಟಿಯಲ್ಲಿನ ಹಲವಾರು ಭಯೋತ್ಪಾದಕ ಅಡಗು ತಾಣಗಳನ್ನು ಸಿಡಿಸಿತ್ತು. ಹಮಾಸ್‍ನ ಸಾವು ನೋವುಗಳ ಅಧಿಕೃತ ಮಾಹಿತಿ ದೊರೆಯದಿದ್ದರೂ ಈ ಸಂಸ್ಥೆಗೆ ತೀವ್ರ ಹಿನ್ನೆಡೆಯಾಗಿರುವುದು ಸಾರ್ವಜನಿಕವಾಗಿತ್ತು.

ತಾನು ಎಷ್ಟೇ ಹಾನಿಗೆ ಒಳಗಾಗಿದ್ದರೂ ಈ 11 ದಿನಗಳ ಯುದ್ಧದಿಂದ ಹಮಾಸ್ ಸಂಸ್ಥೆಯೇ ಪ್ಯಾಲೆಸ್ಟೀನರ ಅಧಿಕೃತ ಸಂಸ್ಥೆಯಾಗಿ ಹೊರಹೊಮ್ಮಿದೆ. ಕದನ ವಿರಾಮಕ್ಕಾಗಿ ಅಮೆರಿಕ ಈಜಿಪ್ಟ್ ಸೇರಿದಂತೆ ಎಲ್ಲಾ ದೇಶಗಳೂ ಹಮಾಸ್‍ನೊಡನೆ ವ್ಯವಹರಿಸಿದ್ದು ಅಬ್ಬಾಸ್‍ರವರ ಆಡಳಿತ ಮತ್ತು ನ್ಯಾಯಸಮ್ಮತ ಅರ್ಹತೆ ನೆಲಕಚ್ಚಿದ್ದು ಸ್ಪಷ್ಟವಾಗಿ ಕಂಡಿತ್ತು. ಹನ್ನೊಂದು ದಿನಗಳ ಕಲಹದ ನಂತರ ಯುದ್ಧವಿರಾಮ ಕಂಡ ಈ 2021 ರ ಕದನ ಇಸ್ರೇಲ್‍ನಲ್ಲಿಯೂ ಕೂಡಾ ಬೆಂಜಮಿನ್ ನೆತನ್ಯಾಹುರವರ ಅಲ್ಪಮತದ ಸರ್ಕಾರವನ್ನು ಬಲಗೊಳಿಸಿದೆ. ಏಪ್ರಿಲ್ 2021 ರಲ್ಲಿ ನಡೆದ ಚುನಾವಣೆಯಲ್ಲಿ ಬಹುಮತ ಕಳೆದುಕೊಂಡರೂ ನೆತನ್ಯಾಹುರವರ ಅಲ್ಪಮತದ ಸರ್ಕಾರ ಮುಂದುವರೆಯಬೇಕಾಗಿದೆ. ಬೇರಾವುದೇ ಪಕ್ಷ ಬಹುಮತ ಸಾಧಿಸಲಾಗದ ಪರಿಸ್ಥಿತಿಯಲ್ಲಿ ಈ ಸೀಮಿತ ಕದನ ನೆತನ್ಯಾಹುರವರಿಗೇ ಬಹುಮತದ ಬೆಂಬಲ ಸಿಗುವಂತೆ ಮಾಡಿದರೆ ಆಶ್ಚರ್ಯ ಪಡಬೇಕಾಗಿಲ್ಲ.

ನೇಪಾಳ ಸಂಸತ್ತಿನ ವಿಸರ್ಜನೆ

ನೇಪಾಳದ ಅಧ್ಯಕ್ಷೆ ಬಿದಿಯಾ ದೇವಿ ಭಂಡಾರಿಯವರು ಮತ್ತೊಮ್ಮೆ ನೇಪಾಳದ ಸಂಸತ್ತಿನ ವಿಸರ್ಜನೆಗೆ ಮತ್ತು ಮರುಚುನಾವಣೆಗೆ ಆದೇಶ ನೀಡಿದ್ದಾರೆ. ನೇಪಾಳ ಕಮ್ಯುನಿಸ್ಟ್ ಪಕ್ಷ ಇಬ್ಭಾಗವಾಗಿ ಪ್ರಧಾನಿ ಕೆ.ಪಿ.ಶರ್ಮ ಓಲಿಯವರ ಸರ್ಕಾರ ಅಲ್ಪಮತಕ್ಕೆ ಇಳಿದ ನಂತರದಲ್ಲಿ ಭಂಡಾರಿಯವರು ಸಂಸತ್ತು ವಿಸರ್ಜಿಸಿದ ನಿರ್ಣಯ ಕೈಗೊಂಡಿದಾರೆ. ಸಂಸತ್ತಿನ ಚುನಾವಣೆ ಇದೇ ನವೆಂಬರ್ 12 ಮತ್ತು 19 ರಂದು ನಡೆಯುವುದು ಎಂದೂ ಘೋಷಿಸಿದ್ದಾರೆ.

ಪುಷ್ಪಕುಮಾರ್ ದಹಲ್ ‘ಪ್ರಚಂಡ’ ಮತ್ತಿತರರು ಓಲಿ ಸರ್ಕಾರಕ್ಕೆ ತಮ್ಮ ಬೆಂಬಲ ಹಿಂದೆಗೆದುಕೊಂಡಿದ್ದರು. ಈ ಕಾರಣದಿಂದ ಕಳೆದ ಡಿಸೆಂಬರ್‍ನಲ್ಲಿಯೇ ಅಧ್ಯಕ್ಷೆ ಭಂಡಾರಿಯವರು ನೇಪಾಳ ಸಂಸತ್ತನ್ನು ವಿಸರ್ಜಿಸಿದ್ದರು. ಆದರೆ ಈ ಕ್ರಮವನ್ನು ನೇಪಾಳದ ವಿರೋಧಿ ಪಕ್ಷಗಳು ನೇಪಾಳದ ಸುಪ್ರೀಮ್ ಕೋರ್ಟಿನಲ್ಲಿ ಪ್ರಶ್ನಿಸಿದ್ದವು. ಭಂಡಾರಿಯವರ ನಿರ್ಣಯವನ್ನು 2021 ರ ಫೆಬ್ರವರಿಯಲ್ಲಿ ಕೋರ್ಟ್ ಅನೂರ್ಜಿತಗೊಳಿಸಿತ್ತು. ನಂತರ ಭಾಡಾರಿಯವರು ನೇಪಾಳ ಕಾಂಗ್ರೆಸ್ ಪಕ್ಷಕ್ಕೆ ಸರ್ಕಾರ ರಚನೆ ಮಾಡಲು ಆಹ್ವಾನ ನೀಡಿದ್ದರು. ಪಕ್ಷದ ಮುಖ್ಯಸ್ಥ ಶೇರ್ ಬಹಾದೂರ್ ದೇವ್ಬಾರವರು ಬಹುಮತ ರಚನೆಗೆ ವಿಫಲ ಪ್ರಯತ್ನ ಕೈಗೊಂಡಿದ್ದರು. ನಂತರ ಯಾವುದಾದರೂ ಒಕ್ಕೂಟ ರಚಿಸಿ ಬಹುಮತ ಸಾಬೀತು ಮಾಡಲು ಭಂಡಾರಿ ಆಹ್ವಾನ ನೀಡಿದ್ದರು. ಆಗ ಮತ್ತೊಮ್ಮೆ ಓಲಿಯವರು ಬಹುಮತದ ದಾವೆ ಹೂಡಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಕೆಲವೇ ದಿನಗಳಲ್ಲಿ ಮತ್ತೊಮ್ಮೆ ಸಂಸತ್ತಿನ ವಿಸರ್ಜನೆಗೆ ಶಿಫಾರಸು ಮಾಡಿ ಈಗ ಚುನಾವಣೆಗೆ ಈ ಹಿಮಾಲಯದ ದೇಶ ಸಜ್ಜಾಗುವಂತೆ ಮಡಿದ್ದಾರೆ.

ಈ ಮಧ್ಯೆ ಭಾರತದಂತೆ ನೇಪಾಳದಲ್ಲಿಯೂ ಕೂಡ ಕೋವಿಡ್ ರಾರಾಜಿಸುತ್ತಿದೆ. ದಿನೇದಿನೇ ಹೆಚ್ಚುತ್ತಿರುವ ಕೋವಿಡ್ ಶಮನಗೊಳಿಸಲು ನೇಪಾಳದ ಬಳಿ ಯಾವುದೇ ಲಸಿಕೆಗಳೂ ಇಲ್ಲ. ಹಾಗಾಗಿ ಮುಂದಿನ ತಿಂಗಳುಗಳಲ್ಲಿ ಕೋವಿಡ್ ಪರಿಣಾಮ ನೇಪಾಳದಲ್ಲಿ ಹೇಗಾಗುವುದೋ ಎಂಬುದನ್ನು ಕೂಡಾ ಹೇಳಲಾಗದ ಪರಿಸ್ಥಿತಿಯಿದೆ. ಇಂತಹಾ ವಿಷಮ ಪರಿಸ್ಥಿತಿಯಲ್ಲಿಯೇ ನೇಪಾಳದ ಪಕ್ಷಗಳು ಚುನಾವಣೆಗೆ ಸಜ್ಜಾಗಬೇಕಾದ ಅನಿವಾರ್ಯತೆ ಎದುರಿಸುತ್ತಿವೆ.

ಕೋವಿಡ್ ಮೂಲದ ಕುರಿತು ಮತ್ತೆ ಗರಿಗೆದರಿದ ತನಿಖೆ

ಚೀನಾದ ವುಹಾನ್ ನಗರದಲ್ಲಿ 2019 ರ ಡಿಸೆಂಬರ್‍ನಲ್ಲಿ ಮೊದಲು ಕಾಣಿಸಿಕೊಂಡ ಕೋವಿಡ್ ವೈರಸ್ ಉತ್ಪತ್ತಿ ಹೇಗಾಯಿತೆಂಬ ಚರ್ಚೆ ಮತ್ತೊಮ್ಮೆ ಶುರುವಾಗಿದೆ. 2020 ರ ಫೆಬ್ರವರಿ-ಮಾರ್ಚ್‍ನಲ್ಲಿ ಮೊದಲು ಪ್ರಾರಂಭವಾಗಿದ್ದ ಈ ಚರ್ಚೆಯನ್ನು ‘ವಿಶ್ವ ಆರೋಗ್ಯ ಸಂಸ್ಥೆ’ ಯಾವುದೇ ಪುರಾವೆಯ ಅಲಭ್ಯತೆಯ ಕಾರಣ ನೀಡಿ ಸ್ಥಗಿತಗೊಳಿಸಿತ್ತು. ನಂತರ ಹಲವರು ಹಲವು ಆರೋಪಗಳನ್ನು ಮಾಡಿದರೂ ಯಾವುದೇ ನಿರ್ದಿಷ್ಟ ಸಾಕ್ಷಿಯ ಕೊರತೆಯಿಂದಾಗಿ ಈ ಚರ್ಚೆ ಅರ್ಧಕ್ಕೆ ನಿಂತಿತ್ತು.

ಈ ಚರ್ಚೆಯಲ್ಲಿ ಎರಡು ಸಾಧ್ಯತೆಗಳನ್ನು ನಿರ್ದಿಷ್ಟವಾಗಿ ಗುರುತಿಸಲಾಗಿದೆ. ಬಾವಲಿ ಮತ್ತು ಪ್ಯಂಗೊಲಿನ್‍ಗಳ ಮುಖಾಂತರ ಈ ವೈರಸ್ ರೂಪಾಂತರಗೊಂಡು ಮಾನವನಲ್ಲಿಗೆ ಸಾಂಕ್ರಾಮಿಕವಾಗಿ ಬಂದಿರಬಹುದೆಂಬುದು ಮೊದಲ ಸಾಧ್ಯತೆಯಾಗಿದೆ. ಆದರೆ ಇದಕ್ಕೆ ಯಾವುದೇ ಸ್ಪಷ್ಟ ಪುರಾವೆ ಸಿಗುವ ಸಾಧ್ಯತೆಯಿಲ್ಲ. ಇದಕ್ಕೆ ಪ್ರತಿಯಾಗಿ ವುಹಾನ್ ಪಟ್ಟಣದ ವೈರಾಲಜಿ ಸಂಸ್ಥೆಯಲ್ಲಿ ನಡೆದಿರಬಹುದಾದ ಯಾವುದೇ ಅವಘಡ-ಅಚಾತುರ್ಯದಿಂದ ಈ ವೈರಸ್ ಲ್ಯಾಬೊರೇಟರಿಯಿಂದ ಹೊರಗೆ ಪ್ರಸರಣ ಆಗಿರಬಹುದೆಂಬುದು ಎರಡನೆಯ ಸಾಧ್ಯತೆ. ಆದರೆ ಈ ಸಾಧ್ಯತೆಯನ್ನು ಪರಿಶೀಲಿಸಲು ಚೀನಾದ ಸರ್ಕಾರ ಯಾವುದೇ ಸಹಕಾರ ನೀಡುವ ಸಾಧ್ಯತೆಯಿಲ್ಲ. ಇದೀಗ ಅಮೆರಿಕದ ನೀತಿ ನಿರೂಪಕರು ಮತ್ತು ಆಡಳಿತಗಾರರು ಈ ಚರ್ಚೆಗೆ ಮರುಜೀವ ನೀಡಿದ್ದಾರೆ. ಅಮೆರಿಕಾದ ಸಿಡಿಸಿ ನಿರ್ದೇಶಕ ಅಂಥೋನಿ ಫೌಚಿಯವರು ಕೋವಿಡ್ ವೈರಸ್ ವುಹಾನಿನ ವೈರಾಲಜಿ ಸಂಸ್ಥೆಯಿಂದಲೇ ಬಂದಿರಬಹುದಾದ ಸಾಧ್ಯತೆಯನ್ನು ಇತ್ತೀಚೆಗೆ ಎತ್ತಿ ಹೇಳಿದ್ದರು. ಈಗ ಅಧ್ಯಕ್ಷ ಜೋ ಬೈಡೆನ್‍ರವರು ಅಮೆರಿಕಾದ ಎಫ್‍ಬಿಐ-ಸಿಐಎ ಸಂಸ್ಥೆಗಳಿಗೆ ಈ ವಿಷಯದ ತನಿಖೆ ನಡೆಸಲು ನಿರ್ದೇಶನ ನೀಡಿದ್ದಾರೆ. ಈ ತನಿಖೆಗೆ ಚೀನಾ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಬೇಕೆಂದೂ ಕೋರಿಕೆ ಮಂಡಿಸಿದ್ದಾರೆ. ಇದರಿಂದ ಮತ್ತೊಮ್ಮೆ ಈ ಚರ್ಚೆಗೆ ಜೀವ ತುಂಬಿಬಂದು ವಿಶ್ವದಾದ್ಯಂತ ಕುತೂಹಲ ಕೆರಳಿಸಿದೆ.

ಅಮೆರಿಕದ ಈ ತನಿಖೆಗೆ ಚೀನಾದ ಸಹಕಾರ ಯಾವುದೇ ರೀತಿಯಲ್ಲೂ ಸಿಗುವ ಸಾಧ್ಯತೆಯಿಲ್ಲ. ಆದರೆ ಈ ತನಿಖೆÀ ಚೀನಾದ ಕಮ್ಯುನಿಸ್ಟ್ ಸರ್ಕಾರವನ್ನು ಅಡಕತ್ತರಿಗೆ ಸಿಲುಕಿಸುವ ಅವಕಾಶವಿದೆ. ಮೇಲಾಗಿ ಈ ವಿಷಯದಲ್ಲಿ ಯಾವುದೇ ಸಬೂತು ದೊರೆತು ಚೀನಾದ ಪಾಲು ಬಯಲಾದರೆ ಚೀನಾ ಸರ್ಕಾರವು ಹಲವು ದೇಶಗಳ ನ್ಯಾಯಾಲಯಗಳಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ಎದುರಿಸಬೇಕಾಗುತ್ತದೆ. ಈ ಸಿವಿಲ್ ದಾವೆಯೇನಾದರೂ ಅಮೆರಿಕದ ‘ಜ್ಯೂರಿ’ ಪದ್ದತಿಯಲ್ಲಿ ಸಾಬೀತಾದರೆ ಚೀನಾದ ಮೇಲೆ ಟ್ರಿಲಿಯನ್ ಡಾಲರ್‍ಗಳ ದಂಡ ವಿಧಿಸುವ ಸನ್ನಿವೇಶ ಎದುರಾಗಬಹುದು.

ಫ್ರಾನ್ಸ್‍ನಲ್ಲಿ ಕಾವೇರಿದ ಇಸ್ಲಾಮೋಫೋಬಿಯ

ಇಸ್ಲಾಮ್ ಧರ್ಮದ ಬಗ್ಗೆ ಹೆದರಿಕೆ ಮತ್ತು ಅವಹೇಳನಕಾರಿ ವಾತಾವರಣ 2001 ರಿಂದ ಅಮೆರಿಕಾದಲ್ಲಿ ದಟ್ಟವಾಗಿದೆ. ಆದರೆ ಇದು ಅಮೆರಿಕದಲ್ಲಿ ಚುನಾವಣೆಯ ವಿಷಯವಸ್ತುವಾಗಿಲ್ಲ. ಇದಕ್ಕೆ ಅಮೆರಿಕದಲ್ಲಿ ಇರುವ ಅತ್ಯಲ್ಪ ಸಂಖ್ಯೆಯ ಇಸ್ಲಾಮ್ ಧರ್ಮೀಯರ ಸಂಖ್ಯೆಯೇ ಕಾರಣ ಇರಬಹುದು. ಆದರೆ ಈಗ ಯೂರೋಪಿನ ದೇಶಗಳಲ್ಲಿ ಹೊಸ ರೀತಿಯ ಇಸ್ಲಾಮ್ ಬಗೆಗಿನ ಹೆದರಿಕೆಯ ವಾತಾವರಣ ಶುರುವಾಗಿದೆ. ಇದಕ್ಕೆ ಇಸ್ಲಾಮ್ ಧರ್ಮದ ಕೆಲವು ಕಿಡಿಗೇಡಿಗಳು ಕಾರಣವಾಗಿದ್ದರೂ ಯೂರೋಪಿನಲ್ಲಿ ತಲೆಯೆತ್ತಿರುವ ಬಲಪಂಥೀಯ ವಾದವೇ ಹೆಚ್ಚು ಕಾರಣವೆಂದು ಹೇಳಲಾಗುತ್ತಿದೆ.

ಇದೀಗ ಫ್ರಾನ್ಸ್‍ನಲ್ಲಿ ಈ ಪರಿಸ್ಥಿತಿ ನಿಧಾನವಾಗಿಯಾದರೂ ಉಲ್ಬಣಗೊಳ್ಳುತ್ತಿದೆ. ಫ್ರಾನ್ಸ್‍ನಲ್ಲಿ ಶೇಕಡಾ 9 ರಷ್ಟು ಅಂದರೆ 50 ಲಕ್ಷದಷ್ಟು ಇಸ್ಲಾಮ್ ಧರ್ಮೀಯರಿದ್ದಾರೆ. ಇವರಲ್ಲಿ ಬಹುತೇಕರು ಅಲ್ಜೀರಿಯಾ, ಮೊರಕ್ಕೊ ಮತ್ತಿತರ ಉತ್ತರ ಆಫ್ರಿಕಾದ ಫ್ರೆಂಚ್ ವಸಾಹತುಗಳಿಂದ ಬಂದು ನೆಲೆಸಿದವರೇ ಆಗಿದ್ದಾರೆ. ಬಹುತೇಕ ಈ ಮುಸ್ಲಿಮರು ಫ್ರೆಂಚ್ ಭಾಷೆ ಮತ್ತು ಸಂಸ್ಕøತಿಯೊಂದಿಗೆ ವಿಲೀನ ಹೊಂದಿದ್ದಾರೆ. ಅದರೂ ಆಗಾಗ್ಗೆ ಕೆಲವು ಮತೀಯ ವಿಕೃತಿಯ ಘಟನೆಗಳು ನಡೆಯುತ್ತಿರುತ್ತವೆ. ಇವುಗಳನ್ನು ಒಟ್ಟಾರೆ ಫ್ರೆಂಚ್ ಮುಸ್ಲಿಮ್ ಸಮುದಾಯದ ಸಹಿಷ್ಣುತೆಯ ಚೌಕಟ್ಟಿನಲ್ಲಿಯೇ ನೋಡಬೇಕಿತ್ತು.

ಆದರೆ 2022 ರಲ್ಲಿ ಫ್ರೆಂಚ್ ಅಧ್ಯಕ್ಷ ಪದವಿಗೆ ಚುನಾವಣೆಯಿದೆ. ಅಧ್ಯಕ್ಷ ಮ್ಯಾಕ್ರಾನ್ ಅವರ ವಿರುದ್ಧ ಬಲಪಂಥೀಯ ಮರೀನ್ ಲ ಪೆನ್ ಬಲವಾದ ಪ್ರತಿರೋಧ ಒಡ್ಡುವುದು ಬಹುತೇಕ ಖಚಿತವಾಗಿದೆ. ಈ ಬಲಪಂಥೀಯರು ಫ್ರಾನ್ಸ್‍ನ ಮುಸ್ಲಿಮ್ ಸಮುದಾಯವನ್ನು ಕಟ್ಟುಪಾಡಿಗೆ ಒಳಪಡಿಸಬಯಸುವುದು ಕೂಡಾ ಖಚಿತವಾಗಿದೆ.

ಇಂತಹಾ ಸನ್ನಿವೇಶದಲ್ಲಿ ಅಧ್ಯಕ್ಷ ಮ್ಯಾಕ್ರಾನ್ ಕೂಡಾ ಮುಸ್ಲಿಂ ಧರ್ಮೀಯರ ಶಿಕ್ಷಣ, ವೇಷಭೂಷಣ ಮತ್ತು ಪ್ರಾರ್ಥನೆಗಳ ಬಗ್ಗೆ ಕಟ್ಟುಪಾಡುಗಳನ್ನು ಹಾಕಲು ಹೊರಟಿದ್ದಾರೆ. ಇವು ಫ್ರಾನ್ಸ್‍ನಲ್ಲಿ ಮುಸ್ಲಿಮರನ್ನು ಕೆಣಕುವುದಲ್ಲದೆ ಬೇರೆ ಮುಸ್ಲಿಮ್ ದೇಶಗಳನ್ನೂ ಕೆಣಕುವಂತೆ ಕಾಣಿಸುತ್ತಿದೆ. ಈ ಕ್ಲಿಷ್ಟ ಸನ್ನಿವೇಶ ಮುಂದಿನ ಚುನಾವಣೆಯವರೆಗೆ ಮುಂದುವರೆಯುವುದಲ್ಲದೆ ನಂತರ ಬಲಪಂಥೀಯ ಸರ್ಕಾರವೊಂದು ಅಧಿಕಾರಕ್ಕೆ ಬಂದರೆ ಫ್ರಾನ್ಸ್‍ನಲ್ಲಿ ಖಾಯಂ ‘ಇಸ್ಲಾಮೋಫೋಬಿಯ’ದ ವಾತಾವರಣ ಸೃಷ್ಟಿಯಾಗುವ ಸಾಧ್ಯತೆಯಿದೆ.

Leave a Reply

Your email address will not be published.