ಹರಕಲು ಬನೀನು…

ಹೆಂಡತಿ ಮತ್ತು ಹರಕಲು ಬನಿಯನ್ ಎರಡರಲ್ಲಿ ಒಂದನ್ನು ಆರಿಸಿಕೊ ಎಂದರೆ ನಾನು ನಿಶ್ಚಯವಾಗಿಯೂ ಹರಕಲು ಬನಿಯನ್ ಆರಿಸಿಕೊಳ್ಳುವವನೇ. ಏಕೆಂದರೆ, ಅದು ಹೆಂಡತಿ ಬರುವುದಕ್ಕೂ ಮುಂಚಿನಿಂದಲೂ ನನ್ನ ಹೃದಯಕ್ಕೆ ಹತ್ತಿರವಾಗಿದೆ!

ನನಗೆ ಈ `ಈ ಮೇಲ್’ ಮತ್ತು `ಫೀ-ಮೇಲ್’ಗಳ ಬಗ್ಗೆ ತುಂಬ ಕಿರಿಕಿರಿ. ಕಿರಿಕಿರಿಯಾದರೂ ಕಾಳಜಿ ಮಾಡಲೇಬೇಕು ಅನ್ನುವಂಥ ಜರೂರಿನೊಂದಿಗೆ ಅವು ವಕ್ಕರಿಸುತ್ತವೆ. ಅಂಚೆಯವನು ತಂದುಕೊಡುವ ಮೈಲ್ ಇದೆಯಲ್ಲ, ಅದು ಹಾಗಲ್ಲ. ಸಾವಧಾನವಾಗಿ ಪರೀಶಿಲಿಸುವಂಥಾದ್ದು. ಬೇಡವಾದ್ದನ್ನು, ನಮ್ಮ ವರಕವಿ ಬೇಂದ್ರೆಯವರು ಬೇಡವಾದ ಅತಿಥಿಗಳನ್ನು `ಸಕ್ಕರಿ ಕೊಟ್ಟು ಕಳಿಸು’ ಅಂಬೋ ರೀತಿ ವಿಲೇವಾರಿ ಮಾಡಬಹುದಿತ್ತು. ನಾವೂ ನಮ್ಮ ಮನೆಗಳಲ್ಲಿ ಬೇಡವಾದ ಅತಿಥಿಗಳನ್ನು, ಸಮಾಜಿಕ ಬಾಂಧವ್ಯಕ್ಕೆ ಚ್ಯುತಿಬಾರದ ರೀತಿಯಲ್ಲಿ ಕಾಫಿ ಕೊಟ್ಟು ಸಾಗಹಾಕುವುದಿದೆ.

ನಾನೂ ಎಷ್ಟೋ ದಿನ ಈ `ಇ ಮೇಲ್’ಗಳನ್ನು ನೋಡದೆ (ಫಿಮೇಲ್ ಧ್ಯಾನದಿಂದಲ್ಲ) ಅಲಕ್ಷಿಸಿದ್ದಿದೆ. ಆದರೆ ನಮ್ಮ ಅಂಚೆಯ ಅಣ್ಣ ಖುದ್ದಾಗಿ ತಂದು ಕೊಡುವ ಮೇಲ್ ಯಾನೆ ಟಪಾಲುಗಳನ್ನು ಈ ರೀತಿ ಅಲಕ್ಷಿಸಲು ಬರುವುದಿಲ್ಲ. ಏಕೆಂದರೆ ಅವು ಮೂರ್ತವಾದುವು. ನಮ್ಮ ಗಮನವನ್ನು ನಿರೀಕ್ಷಿಸುತ್ತ ಟೇಬಲ್ ಮೇಲೋ ಟೀಪಾಯಿಯ ಮೇಲೋ ಹಲ್ಲುಕಿರಿಯುತ್ತ ಕುಳಿತಿರುತ್ತವೆ- `ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು’ ಎಂದು ಎನನ್ನೋ ನಿವೇದಿಸಿಕೊಳ್ಳುವ ತರದೂದಿನಲ್ಲಿ. ಅಥವಾ ಮುದ್ದಾಮ್ ಜರೂರಾಗಿ ರಾಷ್ಟ್ರವನ್ನು ಕಾಡುತ್ತಿರುವ ನರಾಧಮರ ಬಗ್ಗೆ ಏನನ್ನೋ ಹೇಳುವ ತವಕದಲ್ಲಿ ಅಥವಾ ಝಾಡಿಸಿ ಒದೆಯುತ್ತಿರುವ ಅಜ್ಞಾನಿ ಸೋಶಿಯಲ್ ಮೀಡಿಯಾಗಳಲ್ಲಿ, ಹತ್ತು ಹಲವು ಹಳವಂಡಗಳಲ್ಲಿ, ಅಲ್ಲಲ್ಲಿ ಮೆರೆದು ಆಖೈರಾಗಿ ಮುದ್ರಣದಲ್ಲಿ ಥಕಥೈ ಎಂದು ಪ್ರತ್ಯಕ್ಷವಾಗುವ ಹುಮ್ಮಸ್ಸಿನಲ್ಲಿ…

ಹೀಗೆ ಅಂಚೆಯ ಮೂಲಕ ಸಾಕ್ಷಾತ್ತಾಗಿ ವಕ್ಕರಿಸುವರರ ಬಗೆಗೆ ನಾನು ಹಲವೊಮ್ಮೆ ಉದಾಸೀನ ತಾಳಿದರೂ ನನ್ನ ಶ್ರೀಮತಿ ಹಾಗಲ್ಲ. ಖುದ್ದಾಗಿ ಮನೆಗೆ ಬರುವ ಅತಿಥಿಗಳನ್ನು ಸ್ವಾಗತಿಸುವಂತೆ ಅಂಚೆಯಲ್ಲಿ ಬರುವ ಕಾಗದಪತ್ರ, ಪುಸ್ತಕಗಳನ್ನು ಲಕೋಟೆಯಿಂದ ಬಂಧಮುಕ್ತಗೊಳಿಸದೆ ನನ್ನ ಮೇಜಿನ ಮೇಲಿಡುತ್ತಾಳೆ. `ಇದನ್ನು ನೋಡಿದಿರಾ, ಅದನ್ನು ನೋಡಿದಿರಾ?’ ಎಂದು ಅದನ್ನು ನನ್ನ ಗಮನಕ್ಕೆ ತರುತ್ತಾಳೆ -ನನ್ನ ಉದಾಸೀನ ಪ್ರವೃತ್ತಿಯನ್ನು ತಿವಿಯುತ್ತಲೇ. ಕೆಲವೊಮ್ಮೆ ಪುಸ್ತಕಗಳಾದರೆ, ತಾನು ಅದರ ಮೊದಲ ಓದುಗಳಾಗಿ ತನ್ನ ಅಭಿಪ್ರಾಯೋವ್ಯಾಖ್ಯಾನಗಳೊಂದಿಗೆ ನನ್ನ ಸಾಹಿತ್ಯ ಪ್ರಜ್ಞೆಗೆ, ಸಂವೇದನೆಗೆ ಸವಾಲಾಗುತ್ತಾಳೆ…

ಮೊನ್ನೆ ನಾನು ಪ್ರೊ.ಎಲ್.ಎಸ್.ಎಸ್. ಅವರ ಇಂಗ್ಲಿಷ್ `ಮಹಾಭಾರತ’ದ ಕನ್ನಡ ಸೃಷ್ಟಿ ಕಾರ್ಯದಲ್ಲಿ ತೊಡಗಿಕೊಂಡು, `ಮಹಾಪ್ರಸ್ಥಾನ’ ಪರ್ವದಲ್ಲಿ ಯುಧಿಷ್ಠಿರನನ್ನು ದಾಟಿಸುತ್ತಿದ್ದಾಗ ಅವತ್ತು ಅಂಚೆಯಲ್ಲಿ ಬಂದ ಎರಡು ಪುಸ್ತಕಗಳು ನನ್ನನ್ನು ಪಥಚ್ಯತಿಗೊಳಿಸಿದವು. ಯುಧಿಷ್ಠಿರನನ್ನು ದೇವೇಂದ್ರನು ಈಗಾಗಲೇ ತನ್ನ ದೂತನೊಬ್ಬನ ಸುಪರ್ದಿಗೆ ಒಪ್ಪಿಸಿದ್ದರಿಂದ, ಅವರನ್ನು ಅವರ ಸಂವಾದಕ್ಕೆ ಬಿಟ್ಟು, ನಾನು ಅಂಚೆಯಲ್ಲಿ ಬಂದ ಪುಸ್ತಕವನ್ನು ಕೈಗೆತ್ತಿಕೊಂಡೆ. ಮೊದಲು ಕೈಗೆ ಸಿಕ್ಕಿದ್ದು ಇವತ್ತಿನ ಪ್ರೊಲಿಫಿಕ್ ಸಾಹಿತಿ ಕೆ.ಸತ್ಯನಾರಾಯಣರ `ಸ್ಕೂಲು ಬಿಡುವ ಸಮಯ’. ಕನ್ನಡದಲಿ ಇದುವರೆಗೆ ಈ ಪ್ರೊಲಿಫಿಕ್ ಸಾಹಿತಿ ಪಟ್ಟ ಸಿಕ್ಕಿರುವುದು ಕಾದಂಬರಿ ಸಾರ್ವಭೌಮ ಅ.ನ.ಕೃ. ಅವರೊಬ್ಬರಿಗೇ. ಪ್ರೊಲಿಫಿಕ್ ಆಗುವುದು ತಪ್ಪೇನೂ ಅಲ್ಲ, ಆದರೆ ಅದು `ಶನಿಸಂತಾನ’ವಾಗಬಾರದಷ್ಟೆ. ಕೆ.ಸತ್ಯನಾರಾಯಣ ಅವರ ತಹಲ್‍ವರೆಗಿನ ಪ್ರೊಲಿಫಿಕ್ ಬರವಣಿಗೆ ಆ ರೀತಿಯದಲ್ಲ ಎನ್ನುವ ಹೆಮ್ಮೆಯಿಂದಲೇ ಅವರ ಪುಸ್ತಕದ ಭಾಂಗಿಯನ್ನು ಬಿಡಿಸಿದೆ.

`ಸ್ಕೂಲು ಬಿಡುವ ಸಮಯ’ ಶೀರ್ಷಿಕೆ ನನ್ನಲ್ಲಿ ಎನೋ ಒಂದು ಬಗೆಯ ಮುಜುಗರ ಉಂಟುಮಾಡಿತು. ಈಚೀಚೆಗೆ ಈ ಸ್ಕೂಲು ಶುರುವಾಗುವುದು ಹಾಗೂ ಸ್ಕೂಲು ಬಿಡುವ ಸಮಯವೆಂದರೆ ನನಗೆ ಅಲರ್ಜಿ. ಇದು ಶುರುವಾದದ್ದು ಐದಾರು ವರ್ಷಗಳ ಹಿಂದೆ ನನ್ನ ಮನೆಯ ಎದುರು ಅತ್ಯಾಧುನಿಕ ಶಾಲೆಯೊಂದು ಶುರುವಾದಾಗ. ನನ್ನ ಸ್ಟಡಿ ಕಮ್ ಬೆಡ್ ರೂಮಿನ ಕಿಟಕಿಗೆ ಎದುರಾಗಿದೆ ಈ ಶಾಲೆಯ ಮಹಾದ್ವಾರ. ಬೆಳಿಗ್ಗೆ ಎಂಟಾಯಿತೆಂದರೆ ತಾಯಿಯರು, ತಂದೆಗಳು, ಆಟೋ ಚಾಲಕರು ಬಹಳ ಕಕ್ಕುಲಾತಿಯಿಂದ ತಮ್ಮ ಮುದ್ದು ಕಂದಮ್ಮಗಳನ್ನು ರೊಪ್ಪಕ್ಕೆ ನೂಕುವ ಕುರಿಗಳಂತೆ ಶಾಲೆಯ ಗೇಟಿನೊಳಕ್ಕೆ ತಳ್ಳುವುದು, ಮತ್ತೆ ಸಂಜೆ ಅದೇ ಗೇಟಿನಿಂದ ಅವರನ್ನು ಮೇಡಿನ್ ಇಂಡಿಯಾ ಸಿದ್ಧ ವಸ್ತುವಿನಂತೆ ಮನೆಗೆ ಕರೆದೊಯ್ಯಲು ಧಾವಂತ ಪಡುವುದು ಕಂಡುಕಂಡು ಭವ್ಯ ಭಾರತದ ಭವಿಷ್ಯದ ಜನಾಂಗದ ಬಗ್ಗೆ `ಅಯ್ಯೋ’ ಎನಿಸಲಾರಂಭಿಸಿದೆ.

ಸತ್ಯನಾರಾಯಣ ಅಪಹರಿಸಿದ್ದು ಹೇಗೆ ಎಂದು ಅತಿವೃಷ್ಟಿ ಪ್ರವಾಹದಲ್ಲಿ ಜೀವಮಾನದ ಸಂಪಾದನೆಯನ್ನೆಲ್ಲ ಕಳೆದುಕೊಂಡು ನಿರ್ಗತಿಕರಾದವರಂತೆ ಕಂಗಾಲಾದೆ. ಹರಕಲು ಬನಿಯನ್ ನನ್ನ ಪೇಟೆಂಟ್ ಎಂಬುದು ನನ್ನೊಬ್ಬನ ನಂಬಿಕೆಯಲ್ಲ.

ಸ್ಕೂಲು ಸಮಯದ ನನ್ನೀ ಅಲರ್ಜಿಯಿಂದ ಬಿಡಿಸಿಕೊಂಡು ಕೆ.ಸತ್ಯನಾರಾಯಣರು ಪ್ರೀತಿಯಿಂದ ಕಳುಹಿಸಿರುವ ಅವರ ಇತ್ತೀಚಿನ ಲಲಿತ ಪ್ರಬಂಧಗಳ ಸಂಕಲನವನ್ನು ಕೈಗೆತ್ತಿಕೊಂಡೆ, ಆದಷ್ಟೂ ಮುಕ್ತ ಮನಸ್ಸಿನಿಂದ. ಮುದ್ರಿತ ಪುಸ್ತಕ/ಹಸ್ತ ಪ್ರತಿಯನ್ನು ನಾಗಾಲೋಟದ ಮನಸ್ಸಿನಿಂದ ಕಣ್ಣುಹಾಯಿಸುವುದು, ಅದು ಮನಸ್ಸಿನಲ್ಲಿ ಕಾವುಕೂತರೆ ಸಾವಧಾನದಿಂದ ಪರಾಮರ್ಶಿಸುವುದು ನನ್ನ ಓದಿನ ಕ್ರಮ. ಇಂಥ ಓದಿನಲ್ಲಿ, ಸತ್ಯನಾರಾಯಣರ ಲಲಿತ ಪ್ರಬಂಧಗಳಲ್ಲಿ ಮೊದಲ ಓದಿಗೆ ನನ್ನ ರಕ್ತದೊತ್ತಡವನ್ನು ಹಿಮಗಿರಿಗೆ ಏರಿಸಿದ್ದು- `ಹರಕಲು ಬನಿಯನ್’. ಹರಕಲು ಬನಿಯನ್ ನನ್ನ ಪೇಟೆಂಟ್. ಇದನ್ನು ಸತ್ಯನಾರಾಯಣ ಅಪಹರಿಸಿದ್ದು ಹೇಗೆ ಎಂದು ಅತಿವೃಷ್ಟಿ ಪ್ರವಾಹದಲ್ಲಿ ಜೀವಮಾನದ ಸಂಪಾದನೆಯನ್ನೆಲ್ಲ ಕಳೆದುಕೊಂಡು ನಿರ್ಗತಿಕರಾದವರಂತೆ ಕಂಗಾಲಾದೆ. ಹರಕಲು ಬನಿಯನ್ ನನ್ನ ಪೇಟೆಂಟ್ ಎಂಬುದು ನನ್ನೊಬ್ಬನ ನಂಬಿಕೆಯಲ್ಲ. ನನ್ನ ಹೆಂಡತಿ ಮಕ್ಕಳೂ -ನನಗೂ ಹರಕಲು ಬನಿಯನ್ನಗೂ ಇರುವ ಬಿಡಿಸಲಾಗದ ಅಂಟಿನ ನಂಟು (ಬೆವರಂಟಿನ ನಂಟು) ಮನವರಿಕೆಯಾದನಂತರ- ಇದನ್ನು ದೃಢವಾಗಿ ನಂಬಿದ್ದಾರೆ.

ನಾನೂ ಸಹ ಸತ್ಯನಾರಾಯಣರಂತೆ, ಹರಕಲು ಬನಿಯನ್ ಹಾಕಿಕೊಳ್ಳುವುದನ್ನು ಹೀನಾಯವಾಗಿ ಕಾಣಬೇಕಿಲ್ಲ, ಅದರ ಬಗ್ಗೆ ಮುಜುಗರ ಪಡಬೇಕಿಲ್ಲ ಎಂದು ತಿಳಿದಿರುವವನೇ. ಹೆಂಡತಿ ಮತ್ತು ಹರಕಲು ಬನಿಯನ್ ಎರಡರಲ್ಲಿ ಒಂದನ್ನು ಆರಿಸಿಕೊ ಎಂದರೆ ನಾನು ನಿಶ್ಚಯವಾಗಿಯೂ ಹರಕಲು ಬನಿಯನ್ ಆರಿಸಿಕೊಳ್ಳುವವನೇ. ಏಕೆಂದರೆ, ಅದು ಹೆಂಡತಿ ಬರುವುದಕ್ಕೂ ಮುಂಚಿನಿಂದಲೂ ನನ್ನ ಹೃದಯಕ್ಕೆ ಹತ್ತಿರವಾಗಿದೆ. ಇದಕ್ಕೆ ಮುಂಚೆ ಹರಕಲು ಬನಿಯನ್ ಮೇಲೆ ನನ್ನ ಕಾಳಜಿ ಸತ್ಯನಾರಾಯಣರಿಗಿಂತಲು ನಾಲ್ಕು ಮಲ್ಲಿಗೆ ತೂಕ ಹೆಚ್ಚಿನದು ಎಂಬುದನ್ನು ನಾನು ಹೇಳಬೇಕು.

ನಾನು ಉಡುಪಿನ ವಿಷಯದಲ್ಲಿ ನನಗೆ ಬುದ್ಧಿ ತಿಳಿದ ದಿನಗಳಿಂದ ಒಂದು ನೀತಿಸಂಹಿತೆಯನ್ನು ಪಾಲಿಸಿಕೊಂಡು ಬಂದಿದ್ದೇನೆ. ಒಬ್ಬ ವ್ಯಕ್ತಿಗೆ ಅಗತ್ಯವಿರುವುದು ಮೈಮೇಲೊಂದು, ಗಳುವಿನ ಮೇಲೊಂದು ಎರಡೇ ವಸ್ತ್ರ. ಅದಕ್ಕಿಂತ ಹೆಚ್ಚಿನದು ಅಗತ್ಯವಿಲ್ಲ. ಈ ಮೈಮೇಲೊಂದು, ಗಳುವಿನ ಮೇಲೊಂದು ನನಗೆ ಜನ್ಮತಃ ಬಂದ ಭಾಗ್ಯ. ಒಂದೆರಡು ಕಾಸು ಸಂಪಾದಿಸುವ ಸ್ಥಿತಿಗೆ ಬಂದ ಮೇಲೂ ನನಗೆ ಹೆಚ್ಚಿನದು ಅಗತ್ಯವೆನ್ನಿಸಲಿಲ್ಲ. ಆದ್ದರಿಂದ ನಾನು ಹೊಸಬಟ್ಟೆ ಕೊಳ್ಳುವುದು ಈ `ಟೂ ಪೀಸ್’ಗಳು ಹರಿದ ಮೇಲೆಯೇ. ನನ್ನ ಅಮ್ಮನಿಗೆ ನನ್ನ ಈ ರೀತಿನೀತಿ ಸರಿಬೀಳುತ್ತಿರಲಿಲ್ಲ. ಹಬ್ಬದ ನೆಪದಲ್ಲಿ ಒಂದು ಜುಬ್ಬ ಹೊಲಿಸಿಕೊ, ಬನೀನು ತಗೊ ಹರಿದು ಹೋಗಿದೆ ಎಂದು ಹೇಳುವಷ್ಟು ದಿನವೂ ಹೇಳಿ ಸುಮ್ಮನಾಗಿದ್ದಳು.

ನಾನು ನನ್ನ ಬಟ್ಟೆಗಳ ಜಾಗ, ನನ್ನ ದೇಹ ಮತ್ತು ಗಳು ಎಂದು ಹೇಳಿದಾಗ ಅವಳು ನಂಬಲೇ ಇಲ್ಲ. ಕನಿಷ್ಠ ಆರು ಜೊತೆಯಾದರೂ ಉಡುಪುಗಳು ಇರಬೇಕು, ಬೇಸಿಗೆ, ಚಳಿಗಾಲ, ಋತುಮಾನದ ಅಗತ್ಯಗಳು-ಶೋಕಿಗಳು, ಆರೋಗ್ಯ, ನೈರ್ಮಲ್ಯ, ಬೆವರು ವಾಸನೆ ಹೀಗೆ ಹಲವಾರು ರೀತಿರಿವಾಜುಗಳನ್ನು ತಿಳಿಸಿ, ನಾನು ತತ್‍ಕ್ಷಣ ಉಡುಪಿನ ವಿಷಯದಲ್ಲಿ ಸುಧಾರಿಸತಕ್ಕದ್ದೆಂದು ತೀರ್ಪಿತ್ತಳು. ನಾನು ಜಗ್ಗಲಿಲ್ಲ. ದುಸುಮುಸು ಮಾಡಿದಳು.

ನನ್ನ ಈ ಉಡುಪು ಸಂಹಿತೆ ತಪ್ಪಿರಬಹುದೆ ಎಂದು ಒಮ್ಮೆ ಅನ್ನಿಸಿದ್ದೂ ಉಂಟು. ಅದು ನನ್ನ ಆಪ್ತ ಗೆಳೆಯನ ವಾರ್ಡರೋಬ್ ನೋಡಿದಾಗ. ಇನ್ನೂ ಮದುವೆಯಾಗದ, ಅದೇ ತಾನೇ ಎಂ.ಎ. ಮುಗಿಸಿ ಬಂದಿದ್ದ ಸದಾಶಿವ ಪ್ರಜಾವಾಣಿಯಲ್ಲಿ ತುಂಬ ಚೆನ್ನಾಗಿ ಡ್ರೆಸ್ ಮಾಡುವ ಯುವಕ ಎಂದು ಸಹೋದ್ಯೋಗಿಗಳ ಕಣ್‍ಸೆಳೆದಿದ್ದ (ಶೋಕಿಲಾಲ ಎಂದಲ್ಲ). ಸದಾಶಿವನ ವಾರ್ಡ್ ರೋಬ್ ನೋಡಿದ ಮೇಲೆ ಉಡುಪಿನ ಮೇಲಿನ ಅವನ ಪ್ರೀತಿ ನನಗರ್ಥವಾಯಿತು. ಆ ದಿನಗಳಲ್ಲಿ ನಾನು ನನ್ನ `ಮೈಮೇಲೊಂದು-ಗಳುವಿನ ಮೇಲೊಂದು’ ನೀತಿಯನ್ನು ಸಮರ್ಥಿಸಿಕೊಂಡಾಗ, ‘ರಂಗನಾಥ ರಾವ್, ಎಷ್ಟೋ ವೇಳೆ ನಮ್ಮ ಸಮಸ್ಯೆಗಳ ಮೂಲ ನಮ್ಮ ಖಾಲಿ ಜೇಬೇ ಆಗಿರುತ್ತದೆ’ ಎಂದು ಪ್ರತಿಕ್ರಿಯಿಸಿ, ನನ್ನದು ಅಭಾವ ವೈರಾಗ್ಯವೆಂದು ಛೇಡಿಸಿದ್ದೂ ಉಂಟು.

ಈ ನನ್ನ ವಸ್ತ್ರಸಂಹಿತೆ ಬಗ್ಗೆ ಹೆಚ್ಚು ತಕರಾರುಗಳು ತಲೆದೋರಿದ್ದು ಮದುವೆಯ ನಂತರ. ಹೆಂಡತಿ, ಮಕ್ಕಳು ಇದಕ್ಕೆ ತೀವ್ರ ವಿರೋಧಿಗಳಾಗಿದ್ದರು. ನನ್ನ ವಾರ್ಡ್‍ರೋಬಿನಲ್ಲಿ ಉಡುಪುಗಳ ಜಾಗವನ್ನು ಪುಸ್ತಕಗಳೇ ಆಕ್ರಮಿಸಿದ್ದು ಕಂಡು ಮೊದಲು ಅವಾಕ್ಕಾದವಳು ಹೆಂಡತಿ. ಈ ಪುಸ್ತಕಗಳಿಗೆ ಪ್ರತ್ಯೇಕ ಕಪಾಟು ಮಾಡಿಸಿದರೆ ಚೆನ್ನ ಎಂದು ಒಂದು ದಿನ ರಾಗ ಎಳೆದಳು. ಈಗೇನಾಗಿದೆ? ಎಂದೆ. ಯಾವುದು ಎಲ್ಲ್ಲರಬೇಕೋ ಅಲ್ಲಿದ್ದರೆ ಚೆನ್ನ, ವಾರ್ಡ್‍ರೋಬಿನಲ್ಲಿ ಪುಸ್ತಕಗಳಿದ್ದರೆ ನಿಮ್ಮ ಬಟ್ಟೆಗಳಿಗೆ ಜಾಗವೆಲ್ಲಿ ಎಂದಳು. ನಾನು ನನ್ನ ಬಟ್ಟೆಗಳ ಜಾಗ, ನನ್ನ ದೇಹ ಮತ್ತು ಗಳು ಎಂದು ಹೇಳಿದಾಗ ಅವಳು ನಂಬಲೇ ಇಲ್ಲ. ಕನಿಷ್ಠ ಆರು ಜೊತೆಯಾದರೂ ಉಡುಪುಗಳು ಇರಬೇಕು, ಬೇಸಿಗೆ, ಚಳಿಗಾಲ, ಋತುಮಾನದ ಅಗತ್ಯಗಳು-ಶೋಕಿಗಳು, ಆರೋಗ್ಯ, ನೈರ್ಮಲ್ಯ, ಬೆವರು ವಾಸನೆ ಹೀಗೆ ಹಲವಾರು ರೀತಿರಿವಾಜುಗಳನ್ನು ತಿಳಿಸಿ, ನಾನು ತತ್‍ಕ್ಷಣ ಉಡುಪಿನ ವಿಷಯದಲ್ಲಿ ಸುಧಾರಿಸತಕ್ಕದ್ದೆಂದು ತೀರ್ಪಿತ್ತಳು. ನಾನು ಜಗ್ಗಲಿಲ್ಲ. ದುಸುಮುಸು ಮಾಡಿದಳು.

ಸಚಿವ ಮಹಾಶಯರು ನಿರ್ಗಮಿಸಿದ ನಂತರ ಮನೆಯೊಳಗೊಂದು ಪುಟ್ಟ ಚಂಡಮಾರುತ ಸುಳಿದು ಹೋಯಿತು. ಬಂದವರೆದುರು ಮನೆ ಯಜಮಾನರೆ ಹೀಗೆ ಮಾನ-ಮರ್ಯಾದೆ ಕಳೆದರೆ, ಇನ್ನು ಮಕ್ಕಳನ್ನ ಕೇಳೋರ್ಯಾರು? ಎಂದು ಹೆಂಡತಿ ಅಟಕಾಯಿಸಿಕೊಂಡಳು. ‘ಏನು? ಏನಾಯಿತು?’ ಎಂದೆ.

ಮನುಷ್ಯ ಮೂಲತಃ ವಾಸನಾ ಜೀವಿ. `ನಿನ್ನ ವಾಸನೆಯನ್ನು ನಾನು ಒಪ್ಪಿಕೊಂಡಿರುವಂತೆ’ ನನ್ನ ಬೆವರಿನ ಸುಗಂಧವನ್ನು ಆಹ್ಲಾದಿಸುವುದು ಪತಿವ್ರತಾಶಿರೋಮಣಿಯಾದ ನಿನ್ನ ಕರ್ತವ್ಯವೆಂದು ಇತ್ಯಾದಿಯಾಗಿ ಭಾಷಣ ಬಿಗಿದ ಮೇಲೆ ಅವಳು ಮೌನಿಯಾದಳು. ಇದರಿಂದ ನನಗೊಂದು ಲಾಭವೂ ಆಯಿತೆನ್ನಿ. ನಮ್ಮ ಕೆಲಸ ನಾವು ಮಾಡಿಕೊಳ್ಳಬೇಕೆಂದು ನನ್ನ ಮಾಂಶಿಯವರು ನಾನು ಅವರ ಮನೆಯಲ್ಲಿ ಓದುತ್ತಿದ್ದಾಗ ಕಲಿಸಿದ್ದರು. ಹೀಗಾಗಿ ನನ್ನ `ಟೂ ಪೀಸ್’ಗಳನ್ನು ಎರಡುಮೂರು ದಿನಕ್ಕೊಮ್ಮೆ ನಾನೇ ಒಗೆದುಕೊಳ್ಳುತ್ತಿದ್ದೆ. ಆದರೆ ಮದುವೆಯ ನಂತರ, ‘ಇನ್ನು ಮುಂದೆ ನಿಮ್ಮ ಬಟ್ಟ ನೀವು ಒಗೆದುಕೊಳ್ಳೋದು ಬೇಡ, ನಿತ್ಯ ಬಟ್ಟೆ ಬದಲಾಯಿಸಿ, ನಾನು ಒಗೆದು ಹಾಕುತ್ತೇನೆ’ ಎಂದಳು. ಇದಕ್ಕೆ ಬೆವರು ಕಾರಣವಿರಬೇಕೆಂದು ನನ್ನ ಗುಮಾನಿ. ನನ್ನ ಕೆಲಸ ಕೊಂಚ ಕಡಿಮೆಯಾಯಿತು. ನಾನು ಸಾವಿರ ರೂಪಾಯಿ ಸಂಬಳದ ಸರದಾರನಲ್ಲವೆಂಬುದು ಅವಳ ಈ ನಿರ್ಧಾರಕ್ಕೆ ಕಾರಣವಿದ್ದೀತೆ ಎಂದು ನನಗೆ ಅನ್ನಿಸಿದ್ದೂ ಉಂಟು.

ಈ ನನ್ನ ವಸ್ತ್ರ ಸಂಹಿತೆ ಬಗ್ಗೆ ಒಂದು ರೀತಿಯಲ್ಲಿ ಶಾಂತಿ ಉಂಟಾಗಿ ಎಲ್ಲವೂ ಸುರಳೀತವಾಗಿ ನಡೆದಿತ್ತು. ಹೀಗಿರುವಾಗ ಒಂದು ದಿನ ಮುಂಜಾನೆ ನನಗೆ ಪರಿಚಿತರಾಗಿದ್ದ ಸಚಿವರೊಬ್ಬರು ಪೂರ್ವ ಸೂಚನೆಯಂತೆ ನನ್ನ ಮನೆಗೆ ಬಂದರು. ನಾನು ಎಂದಿನಂತೆ ನನ್ನ ಹರಕಲು ಬನಿಯನ್ ಲುಂಗಿಯಲ್ಲಿ ಸಚಿವರನ್ನು ಸ್ವಾಗತಿಸಿದೆ. ನಾವು ರಾಜಕೀಯ, ಪತ್ರಿಕೆಗಳು, ಲೋಹಿಯಾ, ಅನಂತಮೂರ್ತಿ ಹೀಗೆ ಹಲವಾರು ವಿಷಯಗಳನ್ನು ಚರ್ಚಿಸುತ್ತಿದ್ದಾಗ ಹೆಂಡತಿ ಯಾವುದೋ ಮಾಯದಲ್ಲಿ ಕಾಫಿ ಸಮಾರಾಧನೆ ಮಾಡಿ ಜಾರಿಕೊಂಡಿದ್ದಳು. ಸಚಿವ ಮಹಾಶಯರು ನಿರ್ಗಮಿಸಿದ ನಂತರ ಮನೆಯೊಳಗೊಂದು ಪುಟ್ಟ ಚಂಡಮಾರುತ ಸುಳಿದು ಹೋಯಿತು. ಬಂದವರೆದುರು ಮನೆ ಯಜಮಾನರೆ ಹೀಗೆ ಮಾನ-ಮರ್ಯಾದೆ ಕಳೆದರೆ, ಇನ್ನು ಮಕ್ಕಳನ್ನ ಕೇಳೋರ್ಯಾರು? ಎಂದು ಹೆಂಡತಿ ಅಟಕಾಯಿಸಿಕೊಂಡಳು. ‘ಏನು? ಏನಾಯಿತು?’ ಎಂದೆ. ಮಂತ್ರಿಗಳ ಎದುರು ಈ ಹರಕಲು ಬನೀನು ಹಾಕ್ಕೋಡು ನಮ್ಮ ಬಡತನದ ಪ್ರದರ್ಶನ ಮಾಡೋ ಅಗತ್ಯ ಇತ್ತೇ? ಇದರಿಂದ ನಿಮಗೇನಾಯಿತು? ಮಂತ್ರಿಗಳ ಸಹಾನುಭೂತಿ ಗಿಟ್ಟಿಸಲಿಕ್ಕ ಅಥವಾ ನಾನೂ ಒಬ್ಬ ಮರಿಗಾಂಧಿ ಅಂತ ಪೋಸ್ ಕೊಡ್ಲಿಕ್ಕೋ…

ಮಗಳಂತೂ ಒಂದು ದಿನ, ‘ನಿನ್ನ ಬನೀನು ಜರಡಿ ಆಗಿದೆ. ಇವತ್ತು ಬರುವಾಗ ಹೊಸ ಬನೀನು ತರಲೇಬೇಕು’ ಎಂದಳು. ತಾಯಿಯಂತೆ ಮಗಳು. ಸಂಜೆ ಬನೀನು ತರಲಿಲ್ಲವೆಂದು ಸಿಟ್ಟುಮಾಡಿಕೊಂಡಳು. ನಾನು ಜವಾಬ್ದಾರಿಯುತ ತಂದೆಯಾಗಿ ನನ್ನ ನೀತಿ ನಿಲುವುಗಳನ್ನು, ಅದರ ಹಿಂದಿನ ನೈತಿಕತೆಯನ್ನೂ ತಿಳಿಸಿದೆ.

ನನಗೆ ಕಕ್ಕಾಬಿಕ್ಕಿಯಾಗಿ ಹೋಯಿತು. ಎರಡು ಕಾರಣಕ್ಕೆ. ಒಂದು ನನ್ನ ಹೆಂಡತಿಯ ದುರ್ಗೀ ಅವತಾರವನ್ನು ಮೊದಲಬಾರಿಗೆ ಕಂಡಿದ್ದೆ. ಎರಡನೆಯದು ನನ್ನ ಮನೆಯಲ್ಲಿ ನಿಜಕ್ಕೂ ವಾಕ್ ಸ್ವಾತಂತ್ರ್ಯವಿದೆ ಎಂಬುದು ಮೊದಲಬಾರಿ ಸಾಬೀತಾಗಿತ್ತು. `ಇನ್ನು ಮುಂದೆ ಹೀಗಾಗಕೂಡದೆಂದೂ, ಸಂಜೆ ಬರುವಾಗ ಕನಿಷ್ಠಪಕ್ಷ ನಾಲ್ಕು ಬನಿಯನ್ಗಳನ್ನಾದರೂ ತರತಕ್ಕದ್ದೆಂದು ತಾಕೀತು ಮಾಡಿದಳು. ನಾನು ನನ್ನ `ಟೂ ಪೀಸ್ ಈಸ್ ಎನಫ್’ ನಿರ್ಧಾರದಿಂದ ವಿಚಲಿತನಾಗಲಿಲ್ಲ. ಆ ಮೇಲೆ ನಾಯಿಬಾಲ ಡೊಂಕು ಎಂದು ಆಗಾಗ ಗೊಣಗಿಕೊಳ್ಳುತ್ತಿದ್ದಳು. ದೊಡ್ಡವರಾದ ಮಕ್ಕಳೂ ನನ್ನ ವಸ್ತ್ರ ಸಂಹಿತೆ ಬಗ್ಗೆ ತಕರಾರು ತೆಗೆದರು. ಮಗಳಂತೂ ಒಂದು ದಿನ, ‘ನಿನ್ನ ಬನೀನು ಜರಡಿ ಆಗಿದೆ. ಇವತ್ತು ಬರುವಾಗ ಹೊಸ ಬನೀನು ತರಲೇಬೇಕು’ ಎಂದಳು. ತಾಯಿಯಂತೆ ಮಗಳು. ಸಂಜೆ ಬನೀನು ತರಲಿಲ್ಲವೆಂದು ಸಿಟ್ಟುಮಾಡಿಕೊಂಡಳು. ನಾನು ಜವಾಬ್ದಾರಿಯುತ ತಂದೆಯಾಗಿ ನನ್ನ ನೀತಿ ನಿಲುವುಗಳನ್ನು, ಅದರ ಹಿಂದಿನ ನೈತಿಕತೆಯನ್ನೂ ತಿಳಿಸಿದೆ.

‘ಹಾಗಿದ್ರೆ ನೀನು ಚೇಂಜ್ ಮಾಡೋದು ಯಾವಾಗ?’

‘ನೊಡಮ್ಮ ನನ್ನ ಬನೀನು ಜರಡಿಯಂತಾಗಿದೆ ಎಂದೆ. ಜರಡೀಗೆ ಎಷ್ಟು ಕಣ್ಣು ಹೇಳು’
‘ಗೊತ್ತಿಲ್ಲ’

‘ಜರಡೀಗೆ ಮೈಯ್ಯೆಲ್ಲ ಕಣ್ಣು, ಅಲ್ವೇ? ಮೈಯ್ಯೆಲ್ಲ ಕಣ್ಣಾಗಿರೋ ಬನೀನನ್ನು ಯಾರಾದರೂ ಚೇಂಜ್ ಮಾಡ್ತಾರೆಯೆ?’

ಮುಂದೆ ಮಕ್ಕಳು ನನ್ನ ಹರಕು ಬನೀನ ಸುದ್ದಿಗೆ ಬರಲಿಲ್ಲ.

ಹರುಕು ಬನೀನಿಗೂ ನಮ್ಮ ಹೃದಯಕ್ಕೂ ಎಷ್ಟು ಹತ್ತಿರದ ಆಪ್ತ ನಂಟಿದೆ ಎಂದು ನಾನು ಹೇಳದರೆ ಯಾರೂ ನಂಬುವುದಿಲ್ಲ. ಅದಕ್ಕೂ ನಮ್ಮ ಹೃದಯದ ರಕ್ತಪರಿಚನೆಗೂ, ಹೃದಯದ `ಲುಬ್ ಡುಬ್’ಗಳಿಗೂ ಕಿವಿಯಾರೆ ಕೇಳುವ ನಂಟಿದೆ. ಈ ನಂಟಿನಿಂದಾಗಿ ಹೃದಯದ ಪ್ರೇಮದ ಪಿಸುಮಾತು, ಹಗೆತನದ ಕೂರಂಬುನುಡಿಗಳು ಇವೆಲ್ಲವೂ ಇತರರಿಗೆ ಗೊತ್ತಾಗುವ ಮೊದಲು ಬನೀನಿಗೆ ಗೊತ್ತಾಗಿರುತ್ತೆ. ಅದನ್ನು ಚೇಂಜ್ ಮಾಡಿ ಅಂತರಂಗದ ಗುಟ್ಟನ್ನು ರಟ್ಟುಮಾಡಲಿಕ್ಕ ಆಗುತ್ಯೆ? ಅಂದರೆ ಯಾರೂ ಇದನ್ನೆಲ್ಲ ಕೇಳಿಸಿಕೊಳ್ಳಲು ತಯಾರಿಲ್ಲ. `ಕ್ಯಾಚರ್ ಇನ್ ದಿ ರೈ’ ಎನ್ನವುದು ಇಂಗ್ಲಿಷಿನ ಒಂದು ಸುಪ್ರಸಿದ್ಧ ಕಾದಂಬರಿ. ಈ ಕಾದಂಬರಿಯ ಒಂದು ಪಾತ್ರ ಹೇಳುತ್ತೆ: ‘ಎಲ್ಲರ ಒಳ ಉಡುಪುಗಳೂ ಗಬ್ಬು ನಾರುತ್ತವೆ’. ಇದನ್ನು ಓದಿ ಸಿಂಗರ್‍ನ ಈ ಮಾತುಗಳಿಂದ ಪುಳಕಗೊಂಡೆ. ಅಂತರಂಗದ ಹೈರಾಣಗಳಿಗೆ ಈ ಬನಿಯನ್‍ಗಳೇ ಅಭಿವ್ಯಕ್ತಿ ಮಾಧ್ಯಮವಿರಬಹುದು ಸಿಂಗರನ ದೃಷ್ಟಿಯಲ್ಲಿ.

ಈ ಒಳಜೇಬುಗಳ ಜೊತೆ ಜರಡಿಯಂಥ ಕಣ್ಣುಗಳಿದ್ದರೆ ಇನ್ನೂ ಅನುಕೂಲ. ಬನಿಯನ್ ಈ ಒಳಗಣ್ಣುಗಳ ಮೂಲಕ ಯಾವುದನ್ನಾದರೂ ಅಂತರಂಗದ ಒಳಕ್ಕೆ-ಹೊರಕ್ಕೆ ರವಾನಿಸುವ ಮಾಧ್ಯಮವಾಗಿಯೂ ಅನುಕೂಲಕಾರಿ.

ಬನಿಯನ್‍ಗಳಲ್ಲಿ ನನಗೆ ಇಷ್ಟವಾಗುವುದು ಖಾದಿ ಬನಿಯನ್ನುಗಳು. ಅವು ಕೈಮಗ್ಗದ ನೇಯ್ಗೆ ಬನಿಯನ್‍ಗಳಾಗಿದ್ದು ಅವಕ್ಕೆ ಎರಡು ಜೇಬುಗಳಿರುತ್ತವೆ. ನಮ್ಮ ಗುಟ್ಟುಗಳನ್ನು ಬಚ್ಚಿಟ್ಟುಕೊಳ್ಳಲು ಈ ಜೇಬುಗಳು ಬಹಳಷ್ಟು ಸಹಕಾರಿ ಎಂದೇ ನನ್ನ ಭಾವನೆ. ಈ ಒಳಜೇಬುಗಳ ಜೊತೆ ಜರಡಿಯಂಥ ಕಣ್ಣುಗಳಿದ್ದರೆ ಇನ್ನೂ ಅನುಕೂಲ. ಬನಿಯನ್ ಈ ಒಳಗಣ್ಣುಗಳ ಮೂಲಕ ಯಾವುದನ್ನಾದರೂ ಅಂತರಂಗದ ಒಳಕ್ಕೆ-ಹೊರಕ್ಕೆ ರವಾನಿಸುವ ಮಾಧ್ಯಮವಾಗಿಯೂ ಅನುಕೂಲಕಾರಿ.

ನೈನಂ ಛಿನ್ದನ್ತಿ ಶಸ್ತ್ರಾಣಿ ನೈನಂ ದಹತಿ ಪಾವಕ:/ನ ಚೈನಂ ಕ್ಲೇದಾಯನ್ತ್ಯಾಪೋ ನ ಶೋಷಯತಿ ಮಾರುತ://

ಎನ್ನುತ್ತದೆ ಭಗವದ್ಗೀತೆ. ಆತ್ಮನನ್ನು ಶಸ್ತ್ರಾಸ್ತ್ರದಿಂದ ತುಂಡರಿಸುವುದು ಸಾಧ್ಯವಿಲ್ಲ ಅಥವಾ ಅಗ್ನಿಯಿಂದ ಸುಡುವುದು ಸಾಧ್ಯವಿಲ್ಲ ಅಥವಾ ನೀರಿನಿಂದ, ಗಾಳಿಯಿಂದ ನಾಶಗೊಳಿಸಲಾಗದು. ಮೂಲ ಪರಮಾತ್ಮನಿಂದ ಆತ್ಮನನ್ನು ಬೇರ್ಪಡಿಸುವುದು, ಶಸ್ತ್ರಾಸ್ತ್ರ, ಅಗ್ನಿ, ನೀರು, ಗಾಳಿ ಯಾವುದರಿಂದಲೂ ಸಾಧ್ಯವಿಲ್ಲವೆಂದು ಇದರ ತಾತ್ಪರ್ಯ. ಹೀಗೆಯೇ ಬನೀನು ಮತ್ತು ನಮ್ಮ ಅಂತರಂಗದ ನಡುವಣ ಸಂಬಂಧವನ್ನು ಯಾವ ಛೇದನಕಾರಿ-ಛಿದ್ರಕಾರಿ ಸಾಧನಸಲರಣೆಗಳಿಂದಲೂ ಬೇರ್ಪಡಿಸಲಾಗದೆಂದು ನನ್ನ ದೃಢ ನಂಬಿಕೆ.

ನಮ್ಮ ಮನೆಯಾಕೆ ನನ್ನ ಬನಿಯನ್ನುಗಳ ಮೇಲೆ ಈ ಅಸ್ತ್ರಗಳನ್ನು ಪ್ರಯೋಗಿಸಿದರೂ ನನ್ನ ಬನೀನು ಸುಭದ್ರವಾಗೇ ಇರುತ್ತದೆ, ಅದು ನೆಲ ಒರೆಸುವ, ಕಸಕುವ ಬಟ್ಟೆಯಾಗುವುದಿಲ್ಲ, ಮೂರಾಬಟ್ಟೆಯಾಗುವುದಿಲ್ಲ ಎಂದು ನಿನ್ನೆಮೊನ್ನೆಯವರೆಗೆ ಅಂದುಕೋಡಿದ್ದೆ. ನಿನ್ನೆ ನನಗೊಂದು ಕನಸು ಬಿತ್ತು. ಸಿ.ಬಿ.ಐ. ನವರೋ ಜಾರಿನಿರ್ದೇಶನಾಲಯದವರೋ ನನ್ನ ಮನೆಯ ಮೇಲೆ ದಾಳಿ ನಡೆಸಿ ನಾನು ಪತ್ನಿಯ ಪತ್ತೇದಾರಿ ಕಣ್ಣುಗಳಿಗೆ ಕಾಣದಂತೆ ಅಡಗಿಸಿಟ್ಟಿದ್ದ ಹರಕಲು ಬನಿಯನ್‍ಗಳನ್ನು ಕೊಂಡೊಯ್ದಿದ್ದಾರೆ. ಇದು ಕನಸೋ ಎಚ್ಚರದ ವಾಸ್ತವವೋ ಎಂದುಕೋಳ್ಳುತ್ತಾ ಬೆಳಿಗ್ಗೆ ಐದು ಗಂಟೆಗೆ ಎದ್ದು ನನ್ನ ಲಾಕರ್ ಪರೀಕ್ಷಿಸಿದಾಗ ಒಂದೂ ಇಲ್ಲ. ಈಗ ನನಗೆ ಖಾತ್ರಿಯಾಯಿತು, ನನ್ನ ಪತ್ನಿಯದೇ ಒಳಸಂಚಿರಬೇಕು ಎಂದುಕೊಂಡು ಅವಳಿಗೆ ಸರಿಯಾಗಿ ಬುದ್ಧಿ ಕಲಿಸಬೇಕೆಂದು ಸಂಕಲ್ಪಿಸುತ್ತಿರುವಾಗಲೇ, ಪತ್ನಿಯೇ ಸಾಕ್ಷಾತ್ ಹಾಜರಾಗಿ, `ರೀ ನೋಡಿ `ಮೀ ಟೂ’ನಲ್ಲಿ ಇನ್ನಷ್ಟು ಜರ್ನಲಿಸ್ಟರು ಬತ್ತಲಾಗಿದ್ದಾರೆ. ನಿಮ್ಮ ಅಂತರಂಗದ ಖಾಸಾ ಕಣ್ಣುಗಳಾದ ಬನೀನುಗಳೊಂದೂ ಕಾಣಿಸುತ್ತಿಲ್ಲ. ನಿಮ್ಮದೇನೂ ಭಾನಗಡಿ ಇಲ್ಲತಾನೆ ಎಂದಾಗ ‘ಶ್ರೀ ಹರಿ-ಶ್ರೀ ಹರೀ ನೀನೇ ಕಾಯಬೇಕು’ ಎನ್ನುವಂತಾಯಿತು…

ಹರಕಲು ಬನಿಯನ್ ಮೇಲೆ ಜಗತ್ತಿನಾದ್ಯಂತ ನನ್ನೊಬ್ಬನದೇ ಹಕ್ಕು ಎಂದುಕೊಂಡಿರುವಾಗ ಸತ್ಯನಾರಾಯಣ ತಮ್ಮ ಹಕ್ಕೊತ್ತಾಯಕ್ಕೆ ಪ್ರಯತ್ನಿಸುತ್ತಿರುವದ ಕಂಡು ನಾನು ನನ್ನ ಆತ್ಮವನ್ನೇ ಹೀಗೆ ತೆರೆದಿಡಬೇಕಾಯಿತು.

ಈ ಹರಿದ ಬನಿಯನ್‍ಗಳನ್ನು ಹೀಗೆ ಅಂತರಂಗದೊಂದಿಗೆ ಅಥವಾ ಆತ್ಮನೊಂದಿಗೆ ಸಮೀಕರಿಸಿ ಮುಚ್ಚಟೆ ಮಾಡುವವರಿರುವಂತೆಯೇ, `ಬತ್ತಲಾಗದೆ ಬಯಲು ಸಿಕ್ಕದಿಲಿ, ತೆಗೆದುಕೊ ನೀ ಕೊಟ್ಟ ವಸ್ತ್ರ ವಿಲಾಸ’ ಎನ್ನುವವರೂ ನಮ್ಮಲ್ಲಿದ್ದಾರೆ. ಅವರಲ್ಲಿ ಹೆಚ್ಚು ಮಂದಿ ನಮ್ಮ ಗ್ರಾಮೀಣ ಪ್ರದೇಶಗಳ ಕೃಷಿಕರು. ಇನ್ನು ಕಬೀರನಂಥ ಅವಧೂತರು, ಆತ್ಮಕ್ಕೆ ದೇಹವೇ ಉತ್ತರೀಯವೆಂದು ಸೊಂಟದ ಮೇಲ್ಭಾಗದಲ್ಲಿ ಏನನ್ನೂ ಧರಿಸದೆ ಅರೆಬೆತ್ತಲೆ ಫಕೀರರಾಗಿ ಮುಕ್ತಿಮಾರ್ಗ ಕಂಡುಕೊಂಡ ನಿದರ್ಶನಗಳು ಇವೆ.

ಗಾಂಧಿಯವರೂ ಕಬೀರನ ಮಾರ್ಗದಲ್ಲೇ ನಡೆದವರು. ಆದರೆ ಅವರ ಷರಟು-ಬನಿಯನ್‍ಗಳ ತ್ಯಾಗಕ್ಕೆ ನಮ್ಮ ಗೇಣುಹೊಟ್ಟೆಗೂ ಮಾರು ಬಟ್ಟೆಗೂ ಗತಿಯಿಲ್ಲದ ಕೋಟ್ಯಂತರ ಅನ್ನದಾತ ರೈತರೇ ಆದರ್ಶವಾದವರು. ಕನ್ನಡದ ಖ್ಯಾತ ಲೇಖಕ ಪೂಚಂತೇಯವರೂ ಬನಿಯನ್ ವಿರೋಧಿಗಳಾಗಿದ್ದರೆಂದು ನಾನು ಅವರ ಸಮೀಪವರ್ತಿಗಳಿಂದ ತಿಳಿದಿದ್ದೇನೆ. ಬನೀನು ಹಾಕಿಕೊಂಡರೆ ಒಳಗಿನಿಂದ ಯಾರೋ ಕಚಗುಳಿ ಇಟ್ಟಂತಾಗುತ್ತದೆ ಎಂದು ಪೂಚಂತೇ ಬನಿಯನ್ ಧರಿಸುತ್ತಿರಲಿಲ್ಲವೆಂಬ ಮಾಹಿತಿ ಪತ್ರಕರ್ತನಾದ ನನಗೆ ತಿಳಿದಿತ್ತಾದರೂ ಅದನ್ನು ಅವರ ಬಾಯಿಂದಲೇ ದೃಢಪಡಿಸಿಕೊಳ್ಳುವ ಅವಕಾಶ ಸಿಗಲಿಲ್ಲ.

ಇದೆಲ್ಲ ಏನೇ ಇದ್ದರೂ ವ್ಯಾವಹಾರಿಕವಾಗಿಯೂ ಆಧ್ಯಾತ್ಮಿಕವಾಗಿಯೂ ನನಗೆ ಆತ್ಮರಕ್ಷಾಕವಚವಾಗಿರುವ ಈ ಬನಿಯನ್ ಮತ್ತು ನನ್ನ ನಡುವಣ ಸಂಬಂಧವನ್ನು, `ನೈನಂಛಂದನ್ದಂತಿ’ಯಿಂದ ಹಿಡಿದು ಯಾರಿಂದಲೂ ಸಾಧ್ಯವಿಲ್ಲ. ಹರಕಲು ಬನಿಯನ್ ಮೇಲೆ ಜಗತ್ತಿನಾದ್ಯಂತ ನನ್ನೊಬ್ಬನದೇ ಹಕ್ಕು ಎಂದುಕೊಂಡಿರುವಾಗ ಸತ್ಯನಾರಾಯಣ ತಮ್ಮ ಹಕ್ಕೊತ್ತಾಯಕ್ಕೆ ಪ್ರಯತ್ನಿಸುತ್ತಿರುವದ ಕಂಡು ನಾನು ನನ್ನ ಆತ್ಮವನ್ನೇ ಹೀಗೆ ತೆರೆದಿಡಬೇಕಾಯಿತು.

ನನಗೆ ಈಗೀಗ ಅನ್ನಿಸುತ್ತಿದೆ ವಿಮರ್ಶೆ ಹೀಗೂ ಇರಬಹುದೆಂದು. ವಿಮರ್ಶೆಯೆಂದರೆ ಮೂಲ ಕೃತಿಯ ಪುನರ್ ಸೃಷ್ಟಿ ಎನ್ನುವ ಒಂದು ಸೂತ್ರವೂ ಇದೆಯಲ್ಲ.

*’ತಾಯಿನಾಡು’ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಲೇಖಕರ ವೃತ್ತಿ ಜೀವನದ ಆರಂಭ. ‘ಪ್ರಜಾವಾಣಿ’ ಬಳಗದಲ್ಲಿ 34 ವರ್ಷಗಳ ಸೇವೆ ನಂತರ ನಿವೃತ್ತರಾಗಿ ಬೋಧನೆ, ಅಂಕಣ ಬರಹದಲ್ಲಿ ನಿರತರು.

Leave a Reply

Your email address will not be published.