ಹರೆಯದ ವಿದ್ಯಾರ್ಥಿಗಳ ಮಾನಸಿಕ ಸಮಸ್ಯೆಗಳು

ಡಾ.ವಸುಂಧರಾ ಭೂಪತಿ

ಹರೆಯ ಬದುಕಿನ ವಸಂತ. ಹನ್ನೊಂದು ವರ್ಷದಿಂದ ಇಪ್ಪತ್ತೊಂದನೇ ವಯಸ್ಸಿನವರೆಗೆ ವಿಸ್ತರಿಸಿಕೊಳ್ಳುವ ಅವಧಿಯಲ್ಲಿ ಅಮಾಯಕ ಬಾಲಕ ಯುವಕನಾಗಿ ಮುಗ್ಧ ಬಾಲಕಿ ಯುವತಿಯಾಗಿ ಬದಲಾಗುತ್ತಾರೆ. ಅವಧಿಯು ಇತ್ಯಾತ್ಮಕ (ಪಾಸಿಟಿವ್) ಆಗಿದ್ದಲ್ಲಿ ಅವರು ನಮ್ಮ ದೇಶದ ಉತ್ತಮ ನಾಗರಿಕರಾಗಿ ಬೆಳೆಯುವರು. ಇದು ನೇತ್ಯಾತ್ಮಕವಾಗಿದ್ದಲ್ಲಿ (ನೆಗೆಟಿವ್) ಅವರು ನಮ್ಮ ಸಮಾಜಕ್ಕೆ ಹೊರೆಯಾಗುವರು.

ಹರೆಯದಲ್ಲಿ ಉತ್ಸಾಹದ ಬಗ್ಗೆಯಾಗಿರುತ್ತಾರೆ. ಹದಿಹರೆಯ ಹಾರ್ಮೋನುಗಳ ಮಾಯಾಲೋಕ. ಹಾರ್ಮೋನುಗಳ ಕಾರಣದಿಂದಾಗಿಯೇ ದೈಹಿಕ, ಮಾನಸಿಕ, ಭಾವನಾತ್ಮಕ ಬದಲಾವಣೆ ಮತ್ತು ಸಾಮಾಜಿಕ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಒಮ್ಮೆಲೆ ಘಟಿಸುವ ಬದಲಾವಣೆಗಳಿಗೆ ಅನೇಕರು ಹೊಂದಿಕೊಳ್ಳದಿರಬಹುದು. ಅವರಲ್ಲಿ ಅನೇಕ ಪ್ರಶ್ನೆಗಳು, ಗೊಂದಲಗಳು ಕಾಣಿಸಿಕೊಳ್ಳುತ್ತವೆ. ಅವರ ಎಲ್ಲ ಪ್ರಶ್ನೆಗಳಿಗೆ ಸಮಾಧಾನದಿಂದ ಮತ್ತು ತಾಳ್ಮೆಯಿಂದ ಉತ್ತರ ಕೊಡುವವರು ಕಡಿಮೆ. ಇದಕ್ಕೆ ಹಿರಿಯರು ಉತ್ತರ ಕೊಡದೇ ಹಿಯಾಳಿಸಿದಾಗ ಅವರು ಚಿಪ್ಪಿನೊಳಗೆ ಹೊಕ್ಕುವ ಆಮೆಯಂತೆ ಅಂತರ್ಮುಖಿಗಳಾಗುತ್ತಾರೆ. ಆದ್ದರಿಂದ ಹದಿಹರೆಯದವರ ಬಗ್ಗೆ ಹೆಚ್ಚಿನ ಆಸ್ಥೆಯನ್ನು ಮನೆಯಲ್ಲಿ ಮತ್ತು ಶಾಲಾಕಾಲೇಜುಗಳಲ್ಲಿ ಕೊಡಬೇಕಿದೆ. ಅವರಿಗೆ ಅಗತ್ಯ ಮಾರ್ಗದರ್ಶನ ನೀಡಬೇಕಿದೆ.

ಹತ್ತುಹನ್ನೊಂದನೇ ವಯಸ್ಸಿಗೆ ಬಂದಾಗ ಒಂದು ಗತಿಯಲ್ಲಿ ಬೆಳೆದ ದೇಹ, ಹರೆಯದ ಅವಧಿಯಲ್ಲಿ ಅಚ್ಚರಿ ಹುಟ್ಟುವಷ್ಟು ವೇಗವಾಗಿ ಬೆಳೆಯುತ್ತದೆ. ನೋಡಿದ, ಕೇಳಿದ, ಅನುಭವಿಸಿದ ವಸ್ತು ವಿಚಾರಗಳನ್ನ ಪೂರ್ಣವಾಗಿ ವಾಸ್ತವಿಕ ನೆಲೆಗಟ್ಟಿನ ಮೇಲೆ ಅರ್ಥಮಾಡಿಕೊಳ್ಳುವುದು; ಚಿಂತನ ಮನನ, ವಿಶ್ಲೇಷಣೆ, ಸಮಸ್ಯೆಗಳಿಗೆ ಪರಿಹಾರ, ಸಮಯಸಂದರ್ಭವಿಷಯಗಳಿಗೆ ಸೂಕ್ತ ತೀರ್ಮಾನಗಳನ್ನು ಕೈಗೊಳ್ಳುವುದು; ಭಾವನೆಗಳನ್ನು ನಿಯಂತ್ರಿಸುವುದು, ಏಕಾಗ್ರತೆಯಿಂದ ಹೊಸ ವಿಷಯಕೌಶಲ್ಯಗಳನ್ನ ಕಲಿಯುವುದು; ಕಲಿತದ್ದನ್ನ ನೆನಪಿನಲ್ಲಿಟ್ಟುಕೊಂಡು ಬಳಸುವುದು; ಸರಿತಪ್ಪುಗಳ, ನ್ಯಾಯಾನ್ಯಾಯಗಳ ವಿವೇಚನೆ, ತನ್ನ ವೈಯಕ್ತಿಕ ಛಾಪನ್ನು ಮೂಡಿಸುವುದು, ದೇಹದ ಪ್ರಾಥಮಿಕ ಕಾರ್ಯಗಳಾದ ಆಹಾರ ಸೇವನೆ, ನಿದ್ರೆ, ಮಲಮೂತ್ರ ವಿಸರ್ಜನೆ, ಲೈಂಗಿಕ ಚಟುವಟಿಕೆಗಳನ್ನು ನಿಯಂತ್ರಿಸುವುದು ಎಲ್ಲ ಮಾನಸಿಕ ಕ್ರಿಯೆಗಳ ಮೇಲೆ ಹರೆಯದವರು ತಮ್ಮ ಪ್ರಭುತ್ವ ಸ್ಥಾಪಿಸಬೇಕಾಗುತ್ತದೆ. ಇದರಲ್ಲಿ ಅವರಿಗೆ ಕೆಲವು ದ್ವಂದ್ವಗಳು ಎದುರಾಗುತ್ತವೆ.

ಸ್ವಾತಂತ್ರ್ಯ/ಅವಲಂಬನೆ: ಹರೆಯ ಆರಂಭವಾಗುತ್ತಿದ್ದಂತೆ ಬಾಲಕ/ಬಾಲಕಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಇಷ್ಟಪಡುತ್ತಾರೆ. ಇತರರ ಒತ್ತಡ, ಬುದ್ಧಿ ಮಾತಿನ ಹೇರಿಕೆಯಿಲ್ಲದೇ ತಾನೇ ಸ್ವಇಚ್ಛೆಯಿಂದ ತನ್ನದೇ ಆದ ರೀತಿಯಲ್ಲಿ ಕೆಲಸ ಚಟುವಟಿಕೆ ಮಾಡಲು ಮುಂದಾಗುತ್ತಾರೆ. ಆದರೆ ಮನೆಯವರು, ಶಿಕ್ಷಕರು ಅವರಿಗೆನೀನಿನ್ನು, ಚಿಕ್ಕವನು, ನಿನಗೇನೂ ಗೊತ್ತಾಗಲ್ಲ, ನಮ್ಮ ಮಾತು ಕೇಳು, ನಾವು ಹೇಳಿದಂತೆ ಕೇಳುಎಂದಾಗ ಅವರ ಮನಸ್ಸಿನಲ್ಲಿ ದ್ವಂದ್ವ ಆರಂಭವಾಗುತ್ತದೆ. ತನ್ನಿಷ್ಟದಂತೆ ಸ್ವತಂತ್ರವಾಗಿ ನಡೆಯುವುದೋ ದೊಡ್ಡವರು ಹೇಳಿದಂತೆ ಕೇಳುವುದೋ ಎಂದು ಜಿಜ್ಞಾಸೆ ಶುರುವಾಗುತ್ತದೆ. ಈಗಿನ ತಲೆಮಾರಿನ ಮಕ್ಕಳು ಸ್ವಾಯತ್ತತೆಗಾಗಿ ಹಂಬಲಿಸುತ್ತಾರೆ. ಆಗ ಸ್ವಾಭಾವಿಕವಾಗಿ ಮನೆಯಲ್ಲಿ, ಶಾಲಾಕಾಲೇಜುಗಳಲ್ಲಿ ಘರ್ಷಣೆ ಅನಿವಾರ್ಯವಾಗುತ್ತದೆ.

ಕಲ್ಪನೆ/ಸತ್ಯ: ಸತ್ಯ ಸದಾ ನಿಷ್ಠುರವಾಗಿದ್ದು ವಾಸ್ತವಿಕತೆ ಅಹಿತವಾಗಿರುತ್ತದೆ. ಆದರೆ ಕಲ್ಪನೆ ತುಂಬ ಸುಂದರ, ರೋಮಾಂಚನ ಉಂಟು ಮಾಡುವಂತಹುದ್ದಾಗಿರುತ್ತದೆ. ಮಕ್ಕಳಿದ್ದಾಗ ಸಹಜವಾಗಿ ಕಲ್ಪನೆಫ್ಯಾಂಟಿಸಿ ಇಷ್ಟವಾಗುತ್ತದೆ. ಪೋಷಕರು ಹೇಳುವ ಕಥೆಗಳಲ್ಲಿ ತೋರಿಸುವ ಚಿತ್ರಗಳಲ್ಲಿ ಫ್ಯಾಂಟಿಸಿಯನ್ನು ತುಂಬಿರುತ್ತೇವೆ. ಆದರೆ ಹರೆಯಕ್ಕೆ ಕಾಲಿಡುತ್ತಿದ್ದಂತೆಯೇ ತನ್ನ ಕಲ್ಪನೆಗಳು, ವಾಸ್ತವ ಪ್ರಪಂಚಕ್ಕೂ ಸಂಬಂಧವೇ ಇಲ್ಲ ಎಂಬುದು ಅರಿವಾಗುತ್ತದೆ. ಕಲ್ಪನಾಲೋಕದಿಂದ ಪಾತಾಳಕ್ಕೆ ಎತ್ತಿ ಎಸೆದಂತಾಗುತ್ತದೆ. ಆಗ ದ್ವಂದ್ವ, ನಿರಾಶೆ ಕಾಡುತ್ತವೆ. ಹರೆಯದವರು ಪ್ರಾಪಂಚಿಕ ವಾಸ್ತವಿಕತೆಗೆ ಒಗ್ಗಿಕೊಳ್ಳಲು ಹೋರಾಡಬೇಕಾಗುತ್ತದೆ. ಗೊಂದಲ, ಭಯ, ಸಿಟ್ಟು, ಅನಿವಾರ್ಯವಾಗುತ್ತದೆ.

ಆದರ್ಶ ಮತ್ತು ಅವಕಾಶವಾದ: ಮಕ್ಕಳಿಗೆ ರೀತಿ ನೀತಿ ಕಲಿಸುವಾಗ, ನ್ಯಾಯಧರ್ಮಗಳ ಬಗ್ಗೆ ಹೇಳುವಾಗ ಕಾನೂನು, ಒಳ್ಳೆಯ, ಕೆಟ್ಟನಡೆ, ನುಡಿಗಳ ಬಗ್ಗೆ ತಿಳಿಸುವಾಗ ಪರಿಪೂರ್ಣ ಆದರ್ಶವನ್ನೇ ಬೋಧಿಸುತ್ತೇವೆ. ಆದರೆ ನ್ಯಾಯಧರ್ಮ ಆಚರಿಸುವಾಗ ಹಿರಿಯರೇ ಅದನ್ನು ಮರೆತಿರುತ್ತಾರೆ. ಹರೆಯದ ಯುವಕ ಯುವತಿಯರು ಸುತ್ತಮುತ್ತ ನೋಡಿದಾಗ ಪ್ರಸಕ್ತ ನಾಯಕ/ನಾಯಕಿಯರನ್ನ ಕಂಡಾಗ ಸಿನಿಕರಾಗುತ್ತಾರೆ. ಆಗ ಆದರ್ಶಕ್ಕೂಅವಕಾಶವಾದಿತನಕ್ಕೂ ಘರ್ಷಣೆ ನಡೆಯುತ್ತದೆ. ಹರೆಯದವರ ಮನಸ್ಸಿನಲ್ಲಿ ಘರ್ಷಣೆಗೊಂದಲ ಹೆಚ್ಚು. ಪ್ರಾಮಾಣಿಕರಾಗಿರುವುದು ಮೂರ್ಖತನ, ಸತ್ಯನ್ಯಾಯ, ಧರ್ಮ ಇವೆಲ್ಲ ಹೇಳುವುದಕ್ಕೆ ಕೇಳುವುದಕ್ಕೆ ಸರಿ, ಪಾಲಿಸಲು ಅಲ್ಲ. ಜಾಣತನದಿಂದ ಮೋಸ ವಂಚನೆ ಮಾಡಿ ಅಡ್ಡದಾರಿ ಹಿಡಿಯಬೇಕು ಬೇಡಗಳನ್ನು ಪೂರೈಸಿಕೊಳ್ಳುವುದೇ ಬುದ್ಧಿವಂತಿಕೆ ಎಂದು ತಿಳಿಯುತ್ತಾರೆ.

ತನ್ನತನ ಯಾವುದು?: ಬಾಲ್ಯದಲ್ಲಿ ಮಕ್ಕಳು, ಅಪ್ಪ, ಅಮ್ಮ, ಸುತ್ತಲಿನ ಹಿರಿಯರನ್ನು ನೋಡಿ ಅನುಸರಿಸುತ್ತಾರೆ. ಆಗತನ್ನತನಇರುವುದಿಲ್ಲ. ಆದರೆ ಹರೆಯಕ್ಕೆ ಬಂದ ಮೇಲೆ ತಾನು ಯಾರು? ತನ್ನ ಅಸ್ತಿತ್ವಕ್ಕೆ ಏನು ಬೆಲೆ, ತಾನು ಏನಾಗಬೇಕು ಯಾರಂತೆ ಆಗಬೇಕು ತನ್ನ ಸ್ಥಾನಮಾನ ಏನು ಎಂಬಾ ಚಿಂತೆಮೂಡುತ್ತದೆ. ಆಗ ಕೇವಲ ಅಪ್ಪನ ಮಗನಾಗಿ, ಅಮ್ಮನ ಮಗಳಾಗಿ ಇರಲು ಇಷ್ಟಪಡುವುದಿಲ್ಲ. ತನ್ನತನವನ್ನು ಸ್ಥಾಪಿಸಲು ಹೆಣಗಾಡುತ್ತಾರೆ. ಬಹುತೇಕ ಹರೆಯದವರು ವಿಪರೀತ ಕೀಳರಿಮೆಗೆ ತುತ್ತಾಗುತ್ತಾರೆ. ತಾನು ಕಪ್ಪಗಿದ್ದೇನೆ, ಕುಳ್ಳಗಿದ್ದೇನೆ. ತನ್ನ ಮೂಗು ಚೆನ್ನಾಗಿಲ್ಲ, ಕಣ್ಣುಗಳು ಅಂದವಾಗಿಲ್ಲ ಅಂತಲೋ ತಾನು ಬುದ್ಧಿವಂತನಲ್ಲ, ಇಂಗ್ಲಿಷ್ ಚೆನ್ನಾಗಿ ಬರುವುದಿಲ್ಲ, ತನ್ನನಡೆನುಡಿಗಳಿಂದ ಇತರರನ್ನೇ ಮೆಚ್ಚಿಸಲು ಆಕರ್ಷಿಸಲು ಆಗುತ್ತಿಲ್ಲ ಎಂದು ಕೊರಗುತ್ತಾರೆ. ತನ್ನ ಇತಿಮಿತಿಯಲ್ಲಿ ತಾನು ಏನಾಗಲು ಸಾಧ್ಯ ಎಂದು ತಿಳಿಯದೇ ಗೊಂದಲಕ್ಕೀಡಾಗುತ್ತಾರೆ. ಇದನ್ನೇ ಮನಶಾಸ್ತ್ರದಲ್ಲಿ ಎರಿಕ್ ಎರಿಕ್ಸನ್ಐಡಿಂಟಿಟಿ ಕ್ರೈಸಿಸ್ಎಂದು ಕರೆದಿದ್ದಾರೆ.

ಜನಸಂಖ್ಯೆಯ ಶೇ 15ರಷ್ಟು ಜನ ಮಾತ್ರ ಸಾಧಾರಣ ಮಟ್ಟಕ್ಕಿಂತ ಹೆಚ್ಚಿನ ಬುದ್ಧಿವಂತರು (ಇವರಲ್ಲಿ ಐಕ್ಯೂ (110ಕ್ಕೂ) ಮೇಲ್ಪಟ್ಟಿರುತ್ತದೆ. ಶೇ 68ರಷ್ಟು ಮಂದಿಗೆ ಸಾಧಾರಣ ಐಕ್ಯೂ (84 ರಿಂದ 110), ಶೇ 17ರಷ್ಟು ಮಂದಿಗೆ ಕಡಿಮೆ ಐಕ್ಯೂ (84 ಕ್ಕೂ ಕಡಿಮೆ) ಹೀಗಾಗಿ ಶೇ 85 ರಷ್ಟು ಮಂದಿಗೆ ಕೀಳರಿಮೆ ಸ್ವಾಭಾವಿಕವಾಗಿ ಇರುತ್ತದೆ. ಹರೆಯದ ಅವಧಿಯಲ್ಲಿ ಅತಿಮುಖ್ಯ ಪರೀಕ್ಷೆಗಳನ್ನು (ಎಸ್.ಎಸ್.ಎಲ್.ಸಿ, ಪಿಯುಸಿ, ಡಿಗ್ರಿ) ಎದುರಿಸಬೇಕಾದಾಗ, ಇಂದಿನ ವಿಪರೀತ ಸ್ವರ್ಧಾತ್ಮಕ ಜಗತ್ತಿನಲ್ಲಿ ಫಸ್ಟಕ್ಲಾಸ್, ರ್ಯಾಂಕ್ಗಳಿಗಾಗಿ ಎಲ್ಲರಿಂದ ಒತ್ತಡಕ್ಕೆ ಒಳಗಾಗಬೇಕಾದಾಗ ಹರೆಯದವರಿಗೆ ಆತಂಕ, ಭಯ ನಂತರ ಸೋಲು, ನಿರಾಶೆ ಕಾದಿರುತ್ತದೆ.

ಸಾಮಾಜಿಕ ಬೆಳವಣಿಗೆ: ಮನೆಯವರೊಂದಿಗೆ, ನೆಂಟರು, ನೆರೆಹೊರೆಯವರು, ಗೆಳೆಯ/ಗೆಳತಿಯರು, ಶಿಕ್ಷಕರು, ಸಮಾಜದ ಇತರರೊಡನೆ ಹೊಂದಿಕೊಂಡು ಬಾಳುವ ಕೌಶಲ್ಯವನ್ನ ಹರೆಯದವರು ಕಲಿಯಬೇಕಾಗುತ್ತದೆ. ಸಮಾಜದಲ್ಲಿ ವ್ಯಕ್ತಿ ವಹಿಸಬೇಕಾದ, ನಿರ್ವಹಿಸಬೇಕಾದ ವಿವಿಧ ಪಾತ್ರಗಳ ಜವಾಬ್ದಾರಿಹಕ್ಕುಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಮಗನಾಗಿ, ಮಗಳಾಗಿ, ಸೋದರ/ಸೋದರಿಯಾಗಿ, ಸ್ನೇಹಿತ/ಸ್ನೇಹಿತೆಯಾಗಿ ವಿದ್ಯಾರ್ಥಿಯಾಗಿ, ನಾಗರಿಕನಾಗಿ ಏನು ಮಾಡಬೇಕು ಏನು ಮಾಡಬಾರದು, ಸಂಬಂಧಗಳನ್ನು ಉಳಿಸಿಕೊಳ್ಳುವುದು ಬೆಳೆಸಿಕೊಳ್ಳುವುದು ಹೇಗೆ, ವಿವಿಧ ಸನ್ನಿವೇಶಗಳಲ್ಲಿ ವಿವಿಧ ವ್ಯಕ್ತಿತ್ವದ ವ್ಯಕ್ತಿಗಳೊಡನೆ ಹೇಗೆ ವ್ಯವಹರಿಸಬೇಕು? ಸ್ವಾರ್ಥಕ್ಕೆ ಎಷ್ಟು ಪ್ರಾಮುಖ್ಯಪರಹಿತಕ್ಕೆ ಎಷ್ಟು ಪ್ರಾಮುಖ್ಯ ನೀಡಬೇಕು? ಸಂಬಂಧಗಳಲ್ಲಿ ಗೆದ್ದು ಸೋಲುವುದು ಅಥವಾ ಸೋತು ಗೆಲ್ಲುವುದು ಹೇಗೆ? ಎಷ್ಟು ಕೊಡಬೇಕು ಎಷ್ಟು ತೆಗೆದುಕೊಳ್ಳಬೇಕು? ಸಾಮಾಜಿಕ ನೀತಿನಿಯಮಗಳು, ಸಮಾರಂಭಗಳಲ್ಲಿ ಹೇಗೆ ವರ್ತಿಸಬೇಕು ಕಪಟಿವಂಚಕರನ್ನು ಹೇಗೆ ನಿಭಾಯಿಸಬೇಕು? ಒಟ್ಟಿಗೆ ಕೆಲಸ ಮಾಡುವಾಗ ಹೇಗೆ ನಿರ್ವಹಿಸಬೇಕು, ವೈಯಕ್ತಿಕ ಮೌಲ್ಯಗಳು, ಸಾಮಾಜಿಕ ಮೌಲ್ಯಗಳ ನಡುವೆ ಘರ್ಷಣೆ ತಪ್ಪಿಸುವುದು ಹೇಗೆ, ವ್ಯಕ್ತಿಯ ಸಾಮಾಜಿಕ ಜವಾಬ್ದಾರಿಗಳ್ಯಾವವು? ಇವೆಲ್ಲ ಹರೆಯದವರು ಅರ್ಥಮಾಡಿಕೊಂಡು ಮೈಗೂಡಿಸಿಕೊಳ್ಳಬೇಕಾದ ಅಂಶಗಳು.

ಮಾನಸಿಕ ಸಮಸ್ಯೆಗಳು: ನಮ್ಮ ದೇಶದ ವಿವಿಧ ಭಾಗಗಳಲ್ಲಿ ನಡೆದಿರುವ ಅಧ್ಯಯನಗಳ ಪ್ರಕಾರ ಶೇ. 20 ರಷ್ಟು ಹರೆಯದವರು ಒಂದಲ್ಲ ಒಂದು ಬಗೆಯ ಮಾನಸಿಕ ಸಮಸ್ಯೆ, ಅಸ್ವಸ್ಥತೆಗಳಿಂದ ಬಳಲುತ್ತಾರೆ. ಇದಕ್ಕೆ ಕಾರಣಗಳು ಹಲವಾರು. ಆನುವಂಶಿಕ ದೌರ್ಬಲ್ಯಗಳು, ಹೆರಿಗೆಯಾಗುವಾಗ ಅಥವಾ ಅನಂತರ ಮಿದುಳಿಗೆ ಬೀಳುವ ಪೆಟ್ಟು, ಹಾನಿ, ತಂದೆ ತಾಯಿಯರ ಧೋರಣೆ, ಅವರ ಪಾಲನೆ ಪೋಷಣೆ ವಿಧಾನ, ಕೌಟುಂಬಿಕ ಪರಿಸರ, ಶಾಲೆಕಾಲೇಜಿನ ವಾತಾವರಣ, ಶಿಕ್ಷಕರ, ಶಿಕ್ಷಣದ ಗುಣಮಟ್ಟ, ಕಾಯಿಲೆಗಳು, ಸಮಾಜಸಂಸ್ಕøತಿ ಇತ್ಯಾದಿ ಅವರ ಸಮಸ್ಯೆಗಳನ್ನ ಬಿಂಬಿಸುತ್ತವೆ.

) ಕೋಪ, ಆಕ್ರಮಣಕಾರಿ ವರ್ತನೆತಂದೆತಾಯಿಯರುಹರೆಯದ ಮಕ್ಕಳನ್ನ ಮಾತಾಡಿಸಲು ನಮಗೆ ಭಯ, ಮಾತಾಡಿಸಿದರೆ ಸಿಡುಕುತ್ತಾರೆ, ವಾದಿಸುತ್ತಾರೆ, ರೇಗಾಡುತ್ತಾರೆಎಂದು ದೂರುತ್ತಾರೆ. ಬಿಸಿರಕ್ತ, ಸಹನೆ ಕಡಿಮೆ. ಅತೃಪ್ತಿ, ನಿರಾಶೆಅನ್ಯಾಯಗಳು ಕೋಪದ ಮೂಲ. ತಮ್ಮ ಆಸೆ ತೀರಿಸಿಕೊಳ್ಳಲು ಮನೆಯವರು ಗಮನ ಕೊಡುವುದಿಲ್ಲ ಎಂತಲೋ, ತನ್ನಬಗ್ಗೆ ಪಕ್ಷಪಾತ ಮಾಡುತ್ತಾರೆ ಎಂತಲೋ, ಸದಾ ಟೀಕಿಸುವುದು, ಬುದ್ಧಿ ಹೇಳುವುದು, ಒಂದು ಶ್ಲಾಘನೀಯ ಮಾತಿಲ್ಲ ಎಂತಲೋ, ಬೇಡದ ಕೋರ್ಸಿಗೆ ಸೇರಿಕೊಳ್ಳಬೇಕಾಗುತ್ತಲ್ಲ ಎಂತಲೋ, ಸಹಪಾಠಿಗಳ ಕಿರಿಕಿರಿಯಿಂದ ಮುಂದಿನ ಭವಿಷ್ಯ ಕರಾಳವಾಗಿದೆ ಎಂತಲೋ ಹರೆಯದ ಹುಡುಗ/ಹುಡುಗಿಯರು ಸಿಡುಕರಾಗುತ್ತಾರೆ. ಸ್ವಲ್ಪ ಅನ್ಯಾಯವಾದಾಗಲೀ ಸಿಡಿದೇಳುತ್ತಾರೆ. ಅವರೊಡನೆ ಕುಳಿತು ಮಾತನಾಡಿ ಅವರ ಅತೃಪ್ತಿ ನಿರಾಶೆಗಳನ್ನ ವಿಚಾರಿಸಬೇಕು. ಆಪ್ತ ಸಲಹೆ ಸಮಾಧಾನಗಳಿಂದ ಅವರನ್ನ ಬದಲಿಸಬಹುದು.

) ನಿರಾಶೆಖಿನ್ನತೆಯಾವುದೇ ಕಷ್ಟ, ನಷ್ಟ, ನೋವು, ಅವಮಾನ, ಸೋಲು, ಹರೆಯದವರ ಮನಸ್ಸನ್ನು ಅಲ್ಲೋಲ ಕಲ್ಲೋಲ ಮಾಡುತ್ತದೆ. ಅಗತ್ಯಗಳ ಪೂರೈಕೆಯಾಗದಿದ್ದಾಗ, ಸ್ಪರ್ಧೆಯಲ್ಲಿ ಹಿಂದುಳಿದಾಗ, ಪ್ರೀತಿವಿಶ್ವಾಸದಿಂದ ವಂಚಿತರಾದಾಗ ಅವರು ತೀವ್ರ ನಿರಾಶೆಗೆ ಒಳಾಗುತ್ತಾರೆ. ಶೇ. 10ರಷ್ಟು ಹರೆಯದವರು ಖಿನ್ನತೆಯಿಂದ ಬಳಲುತ್ತಾರೆ. ಅದರ ಪ್ರಮುಖ ಲಕ್ಷಣಗಳೆಂದರೆಮಂಕಾಗಿರುವುದು, ನಿರಾಸಕ್ತಿ, ನಿರುತ್ಸಾಹ, ಸಿಡುಕುತನ, ನಿರಾಶಾಭಾವನೆಗಳು, ಅಸಹಾಯಕತನ, ಕೀಳರಿಮೆ, ಆತ್ಮವಿಶ್ವಾಸದ ಕೊರತೆ, ಆತಂಕ, ಚಡಪಡಿಕೆ, ನಿದ್ರಾಹೀನತೆ, ಊಟತಿಂಡಿ, ಅಲಂಕಾರ, ಸ್ವಚ್ಛತೆ ಬಗ್ಗೆ ನಿರ್ಲಕ್ಷ್ಯ, ತಪ್ಪಿತಸ್ಥ ಭಾವನೆ, ಏಕಾಗ್ರತೆ ಕೊರತೆ, ಜ್ಞಾಪಕಶಕ್ತಿ ಕುಗ್ಗುವುದು, ಹೊಸ ಕಲಿಕೆ ಸಾಧ್ಯವಾಗದಿರುವುದು, ಶಾಲಾಕಾಲೇಜುಅಧ್ಯಯನಗಳೆಡೆಗೆ ನಿರ್ಲಕ್ಷ್ಯ, ತಲೆನೋವುಮೈಕೈನೋವು, ಸುಸ್ತು, ಆಯಾಸ ಸಾಯುವ ಯೋಚನೆ, ಆತ್ಮಹತ್ಯೆ ಪ್ರಯತ್ನ, ಪ್ರಪಂಚದಾದ್ಯಂತ ಯಾವುದೇ ವಯಸ್ಸಿನವರಿಗೆ ಹೋಲಿಸಿದರೆ ಹರೆಯದವರಲ್ಲಿ ಆತ್ಮಹತ್ಯೆಯ ಪ್ರಯತ್ನ ಹೆಚ್ಚು. ಕೆಲವು ಬಾರಿ ಕ್ಷುಲ್ಲಕ ಕಾರಣದಿಂದ ಆತ್ಮಹತ್ಯೆಯ ಪ್ರಯತ್ನ ಮಾಡುತ್ತಾರೆ.

) ಕೀಳರಿಮೆಯ ಭಾವನೆ– ‘ನಾನು ದಡ್ಡ, ‘ನಾನು ಹಳ್ಳಿಹುಡುಗ ನಾನು ಕಪ್ಪಗಿದ್ದೇನೆ’ ‘ನಾವು ಬಡವರುಮುಂತಾದ ಕೀಳರಿಮೆ ಭಾವನೆಗಳಿಂದ ಸಾಕಷ್ಟು ಹರೆಯದವರು ಬಳಲುತ್ತಾರೆ. ಆಲ್ಫ್ರಡ್ ಆಡ್ಲರ್ ಎಂಬ ಮನಶ್ಯಾಸ್ತ್ರಜ್ಞನ ಪ್ರಕಾರ ಕೀಳರಿಮೆ ಪ್ರತಿಯೊಬ್ಬರಲ್ಲೂ ಹುಟ್ಟಿನಿಂದ ಬರುವ ಗುಣ. ಬೆಳೆಯುತ್ತಿದ್ದಂತೆ ಕೀಳರಿಮೆ ಹೋಗಲಾಡಿಸಿಕೊಂಡು ಮೇಲರಿಮೆ ಹೊಂದಲು ಎಲ್ಲರೂ ಪ್ರಯತ್ನಿಸುತ್ತಾರೆ. ಹರೆಯದ ಅವಧಿಯಲ್ಲಿ ಕೀಳರಿಮೆ ಸ್ವಲ್ಪ ಹೆಚ್ಚಾಗುತ್ತದೆ. ಸ್ವರ್ಧಾತ್ಮಕ ಜಗತ್ತಿನಲ್ಲಿ ಹರೆಯದ ವ್ಯಕ್ತಿ ತಾನು ಹಿಂದೆ ಬೀಳಬಹುದು ಎಂದು ಭಯಪಡುತ್ತಾನೆ.

ಕೀಳರಿಮೆ ಹೋಗಲಾಡಿಸಲು ಇರುವ ಪರಿಣಾಮಕಾರಿ ವಿಧಾನವೆಂದರೆ ಯುವಕ/ಯುವತಿಯ ಒಳ್ಳೆಯ ಅಂಶಗಳನ್ನು ಸಾಧನೆಗಳನ್ನು ಗುರುತಿಸಿ ಪೋಷಕರು, ಶಿಕ್ಷಕರು ಶ್ಲಾಘಿಸುವುದು. ಬೇರೆಯವರೊಂದಿಗೆ ಹೋಲಿಸಬಾರದು. ನಿನ್ನೆಗಿಂತ ಇಂದು, ಇಂದಿಗಿಂತ ನಾಳೆ ನೀನು ಉತ್ತಮನು ಎಂದು ಪ್ರೋತ್ಸಾಹಿಸಬೇಕು.

) ಕಲಿಕೆಯಲ್ಲಿ ತೊಂದರೆಗಳುಕಲಿಯುವುದರಲ್ಲಿ ತೊಂದರೆಗಳು, ಏಕಾಗ್ರತೆ ಇಲ್ಲ, ನೆನಪಿನ ಶಕ್ತಿ ಕಡಿಮೆ, ಕಷ್ಟಪಟ್ಟು ಓದಿದರೂ ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯಲಾಗಲಿಲ್ಲ, ಓದಲು ಕುಳಿತರೆ ನಿದ್ರೆ ಬರುತ್ತದೆ ಎಂದು ಹರೆಯದ ವಿದ್ಯಾರ್ಥಿಗಳು ದೂರುತ್ತಾರೆ. ಬುದ್ಧಿಶಕ್ತಿ, ನೆನಪಿನ ಶಕ್ತಿ ಹೆಚ್ಚಿಸುವ ಟಾನಿಕ್ಗಳಾಗಿ ವೈದ್ಯರ ಎಡತಾಕುತ್ತಾರೆ. ಉತ್ತಮ ಅಧ್ಯಯನ ವಿಧಾನ ಅಳವಡಿಸಿಕೊಂಡರೆ ಕಲಿಕೆ ಸುಲಭವಾಗುತ್ತದೆ.

) ಅಭಿವ್ಯಕ್ತಿಯ ಸಮಸ್ಯೆಹರೆಯದವರಿಗೆ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹೇಳಿಕೊಳ್ಳಲು ಸಂಕೋಚವಿರಬಹುದು ಅಥವಾ ಹೇಳಿಕೊಳ್ಳಲು ಇತರರಿಗೆ ಅದನ್ನು ಮನವರಿಕೆ ಮಾಡಿಕೊಡಲು ಭಾಷೆ, ಸಾಮಥ್ರ್ಯ ಸಾಲದಿರಬಹುದು. ಅಂತರ್ಮುಖಿ ವ್ಯಕ್ತಿತ್ವದ ಹುಡುಗಹುಡುಗಿಯರು ತಮ್ಮ ಭಾವನೆಗಳನ್ನು ತಮ್ಮ ಮನಸ್ಸಿನೊಳಗೆ ಅದುಮಿಡಲು ಇಷ್ಟಪಡುತ್ತಾರೆ. ನೇರ ಮತ್ತು ಸಮರ್ಥ ಸಂಪರ್ಕವಿಲ್ಲದಿದ್ದರೆ ಹರೆಯದವರು ಮತ್ತು ಇತರರ ನಡುವಿನ ಅಂತರ ಹೆಚ್ಚುತ್ತದೆ. ಇತರರು ಇವರ ಬಗ್ಗೆ ತಪ್ಪಾಗಿಯೂ ತಿಳಿಯಬಹುದು. ಅದುಮಿಟ್ಟ ಭಾವನೆಗಳು ಕಾಲಕ್ರಮೇಣ ಮನಃಶಾಂತಿಯನ್ನು ಕದಡುತ್ತವೆ. ಮನೋದೈಹಿಕ ರೋಗಗಳಿಗೆ ಎಡೆಮಾಡಿಕೊಡುತ್ತದೆ. ಮುಕ್ತ ಮಾತುಕತೆ, ಭಾವನೆಗಳನ್ನು ಪ್ರಕಟಿಸಲು ಅವಕಾಶ ಕಲ್ಪಿಸಿಕೊಡಬೇಕು.

) ಧೂಮಪಾನ, ಮದ್ಯಪಾನ ಮತ್ತು ಮಾದಕವಸ್ತು ಸೇವನೆಇವೆಲ್ಲ ಆರಂಭವಾಗುವುದು ಹೆಚ್ಚಿನವರಲ್ಲಿ ಹದಿವಯಸ್ಸಿನಲ್ಲೇ. ಕುತೂಹಲ, ಜೊತೆಯವರ ಮಾದರಿ ಮತ್ತು ಒತ್ತಾಯ, ಬೇಸರ, ಏಕಾಗ್ರತೆ, ಭಯ, ದುಃಖಗಳು ವಸ್ತುಗಳನ್ನು ಉಪಯೋಗಿಸಲು ಪ್ರೇರೇಪಿಸುತ್ತವೆ. ‘ಸಿಗರೇಟು ಸೇದುವುದು ಪುರುಷ ಲಕ್ಷಣಅಂಥವನನ್ನು ಹುಡುಗಿಯರು ಮೆಚ್ಚುತ್ತಾರೆ. ‘ಬಿಯರ್ ಸೇವನೆಯಿಂದ ದೇಹದಾಢ್ರ್ಯ ಉತ್ತಮಗೊಳ್ಳುತ್ತದೆ, ಸ್ಥಾನಮಾನ ಹೆಚ್ಚುತ್ತವೆಎಂಬ ಜಾಹೀರಾತುಗಳು, ಸಿನಿಮಾ ನಟರು, ಕ್ರೀಡಾಪಟುಗಳ ಮಾದರಿಗಳು ಹರೆಯದವರನ್ನು ಮರಳುಗೊಳಿಸುತ್ತದೆ. ಮಾನಸಿಕ ಅವಲಂಬನೆ, ತಾಳಿಕೆ, ದೈಹಿಕ ಅವಲಂಬನೆಯಿಂದ ಪದೇ ಪದೇ ವಸ್ತುಗಳ ದುರ್ಬಳಿಕೆ ಶುರುವಾಗಿ ನಂತರ ಚಟ ಶುರುವಾಗುತ್ತದೆ.

) ಇಚ್ಛಿತ್ತವಿಕಲತೆ (ಸ್ಕಿಜೋಫ್ರಿನಿಯಾ)- ಮನಸ್ಸಿಗೆ ಬರುವ ತೀವ್ರತರ ಮಾನಸಿಕ ಕಾಯಿಲೆಯಾದ ಸ್ಕಿಜೋಫ್ರೀನಿಯಾ ಹರೆಯದವರಲ್ಲಿ ಪ್ರಾರಂಭವಾಗಬಹುದು. ಕಾಯಿಲೆಯಲ್ಲಿ ವ್ಯಕ್ತಿಯ ಆಲೋಚನೆ ಭಾವನೆಗಳು ಅಸ್ತವ್ಯಸ್ತಗೊಳ್ಳುತ್ತದೆ. ವ್ಯಕ್ತಿ ತನ್ನ ಬೇಕು ಬೇಡಗಳು, ಸ್ವಚ್ಛತೆ, ರಕ್ಷಣೆಯನ್ನು ನಿರ್ಲಕ್ಷಿಸುತ್ತಾನೆ. ಆತನ ನಡೆನುಡಿಗಳು ಅಸಂಬದ್ಧವಾಗುತ್ತವೆ. ಆತ ಭ್ರಮಾಧೀನನಾಗುತ್ತಾನೆ. ಯಾರೋ ತನಗೆ ಹಾನಿ ಮಾಡುತ್ತಾರೆ. ತನ್ನನ್ನು ಯಾರೋ ನಿಯಂತ್ರಣ ಮಾಡುತ್ತಾರೆ. ಯಾರೋ ಪುರುಷ/ಮಹಿಳೆ ಧ್ವನಿಗಳು ಕೇಳುತ್ತವೆÉ, ಅವು ತನ್ನ ಬಗ್ಗೆ ಆಡಿಕೊಳ್ಳುತ್ತವೆ ಎನ್ನಬಹುದು. ಗೊತ್ತುಗುರಿ ಇಲ್ಲದೇ ಅಲೆಯಬಹುದು. ಸರಿಯಾದ ಸಮಯದಲ್ಲಿ ರೋಗಪತ್ತೆಯಾಗಿ ಚಿಕಿತ್ಸೆ ದೊರೆಯದಿದ್ದರೆ ಕಾಯಿಲೆ ವರ್ಷಗಳ ಕಾಲ ಕಾಡುತ್ತದೆ.

) ತೀವ್ರ ಮಾನಸಿಕ ಒತ್ತಡ (ಸ್ಟ್ರೆಸ್)- ವಿಪರೀತ ಮಾನಸಿಕ ಒತ್ತಡಕ್ಕೆ ಒಳಗಾದ ವ್ಯಕ್ತಿ ದೈಹಿಕ ರೋಗ ಲಕ್ಷಣಗಳಿಂದ (ದೇಹದಲ್ಲಿ ಯಾವುದೇ ಕಾಯಿಲೆ ಇರುವುದಿಲ್ಲ) ಅಥವಾ ವಿಸ್ಮøತಿಯಿಂದ ಅಥವಾ ಮೈಮೇಲೆ ದೇವರು, ದೆವ್ವ ಬಂದಂತೆ ಆಡುವುದರ ಮೂಲಕ ಇತರರ ಗಮನವನ್ನು ಸೆಳೆಯಬಹುದು.

) ದ್ವಂದ್ವಗಳು, ಗೊಂದಲಗಳುಅನೇಕ ವಿಷಯಗಳ ಬಗ್ಗೆ, ರೀತಿ ನೀತಿಗಳ ಬಗ್ಗೆ, ತನ್ನ ಪಾತ್ರದ ಬಗ್ಗೆ ಹರೆಯದವರನ್ನು ದ್ವಂದ್ವಗಳು, ಗೊಂದಲಗಳು ಕಾಡುತ್ತವೆ.

) ನೈತಿಕ ವಿಷಯಗಳುಸಾಮಾಜಿಕ, ಧಾರ್ಮಿಕ ಕಟ್ಟುಕಟ್ಟಳೆಗಳು, ಸಂಪ್ರದಾಯ, ಆಧುನಿಕತೆ, ದ್ವಂದ್ವಗಳು ಹರೆಯದವರ ಮನಸ್ಸನ್ನು ಕಲಕುತ್ತವೆ. ಯಾವುದನ್ನು ಅನುಸರಿಸಬೇಕು ಯಾವುದನ್ನು ಅನುಸರಿಸಬಾರದು ಎಂಬುದನ್ನು ತಿಳಿಯದೆ ಅವರು ವಿಚಿತ್ರವಾಗಿ ವರ್ತಿಸಬಹುದು.

) ನಕರಾತ್ಮಕ ಧೋರಣೆಗಳುಕಷ್ಟನಷ್ಟ, ಸೋಲು ಒತ್ತಡಗಳಿಗೆ ಒಳಗಾದ ಹರೆಯದವರು ನಕಾರಾತ್ಮಕ ನಿಲುವನ್ನು ಬೆಳೆಸಿಕೊಳ್ಳಬಹುದು. ಎಲ್ಲರಲ್ಲಿ ಎಲ್ಲದರಲ್ಲಿ ಅವರಿಗೆ ಕೊರತೆ ನ್ಯೂನತೆಗಳೇ ಕಾಣಬಹುದು. ನಿರಾಶಾವಾದ ಅವರನ್ನು ಆವರಿಸಬಹುದು. ಹೋರಾಡುವುದರಿಂದ ಪ್ರಯೋಜನವಿಲ್ಲ. ಎನಿಸಬಹುದು. ಪ್ರಾಮಾಣಿಕ ಪ್ರಯತ್ನಗಳಿಗೆ ಫಲ ಸಿಗುವುದಿಲ್ಲ ಎಂದುಕೊಂಡು ನಿಷ್ಕ್ರಿಯರಾಗಬಹುದು. ನಕಾರಾತ್ಮಕ, ನಿರಾಶಾ ಧೋರಣೆಗಳನ್ನು ಸಕಾರಾತ್ಮಕ ಆಶಾವಾದದೊಂದಿಗೆ ಬದಲಿಸಬೇಕು.

) ಗುರಿಉದ್ದೇಶಗಳು (ಖಿಚಿಡಿ)- ತಾವು ಏನಾಗಬೇಕು? ಯಾವ ಉದ್ಯೋಗವನ್ನು ಹಿಡಿಯಬೇಕು? ಏನು ಮತ್ತು ಎಷ್ಟನ್ನು ಯಾವಾಗ ಸಾಧಿಸಬೇಕು? ತಮ್ಮ ಗುರಿ ಹಣ ಸಂಪಾದನೆಯೇ, ಸ್ಥಾನಮಾನಗಳೇ ಕೀರ್ತಿಯೇ, ಪರೋಪಕಾರವೇ ಎಂದು ಹರೆಯದವರು ಪರಿತಪಿಸುತ್ತಾರೆ. ತಂದೆತಾಯಿಗಳು ಇತರರು ಹೇಳುವ ಗುರಿಗಳನ್ನಿಟ್ಟುಕೊಳ್ಳಬೇಕೇ ಅಥವಾ ತಮ್ಮದೇ ಆದ ಗುರಿ ಉದ್ದೇಶಗಳನ್ನಿಟ್ಟುಕೊಳ್ಳಬೇಕೇ, ಇವಕ್ಕೆ ಕಾಲಮಿತಿ ಏನು, ಅವನ್ನು ಮುಟ್ಟಲು ತಮ್ಮಲ್ಲಿ ಶಕ್ತಿ ಸಾಮಥ್ರ್ಯಗಳಿವೆಯೇ ಇತ್ಯಾದಿ ವಿಚಾರಗಳು ಹರೆಯದವರನ್ನು ಕಾಡುತ್ತವೆ.

) ಲೈಂಗಿಕ ಸಮಸ್ಯೆಲೈಂಗಿಕ ಬೆಳವಣಿಗೆ, ಲೈಂಗಿಕ ಅಭಿವ್ಯಕ್ತಿಯ ಸಮಸ್ಯೆಗಳು ಹರೆಯದವರನ್ನು ಲೈಂಗಿಕ ಆಸೆಗಳು ಕಾಡುತ್ತವೆ. ಪರಿಸ್ಥಿತಿಯ ಒತ್ತಡಕ್ಕೆ ಸಿಕ್ಕಿ ಕೆಲವರು ಲೈಂಗಿಕ ಕ್ರಿಯೆಯಲ್ಲಿ ತೊಡಗಬಹುದು. ಭಯ, ತಪ್ಪಿತಸ್ಥ ಭಾವನೆಗಳಿಂದ ಇವರು ಬಳಲತೊಡಗುತ್ತಾರೆ. ಇಂತಹವರಿಗೆ ವೈದ್ಯ ಸಲಹೆಮಾರ್ಗದರ್ಶನ ಬೇಕು.

*ಲೇಖಕಿ ಪ್ರಖ್ಯಾತ ಆಯುರ್ವೇದ ವೈದ್ಯರು, ವೈದ್ಯಸಾಹಿತಿ, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರು.

Leave a Reply

Your email address will not be published.