ಹಲವು ಅನುಮಾನಗಳನ್ನು ಬಿಟ್ಟುಹೋದ ಮುಖ್ಯ ನ್ಯಾಯಾಧೀಶ ಬೊಬ್ಡೆ

ಭಾರತದ ಮುಖ್ಯ ನ್ಯಾಯಾಧೀಶ ಎಸ್.ಎ.ಬೊಬ್ಡೆಯವರ ಅಧಿಕಾರವಧಿಯಲ್ಲಿ ಪ್ರಮುಖವಾಗಿ ಗುರುತಿಸಬಹುದಾದ ಅಂಶವೆಂದರೆ, ಅವರಿಗೆ ಜನಸಾಮಾನ್ಯರ ಜೀವನ ಮತ್ತು ಸ್ವಾತಂತ್ರ್ಯಕ್ಕೆ ಪರಿಣಾಮ ಬೀರುವ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲು ಇಷ್ಟವಿರಲಿಲ್ಲ!

-ರೇಖಾ ಶರ್ಮಾ

ಎಸ್.ಎ.ಬೊಬ್ಡೆಯವರು ತನ್ನ 17 ತಿಂಗಳ ಕಾರ್ಯಾವಧಿಯನ್ನು ಪೂರ್ಣಗೊಳಿಸಿ, ಏಪ್ರಿಲ್ 23 ರಂದು ಮುಖ್ಯ ನ್ಯಾಯಾಧೀಶ ಪದವಿಯಿಂದ ನಿರ್ಗಮಿಸಿದರು. ಅವರು, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರಿಂದ ಅಧಿಕಾರ ವಹಿಸಿಕೊಂಡಾಗ, ಜನಸಾಮಾನ್ಯರ ಮನಸ್ಸಿನಲ್ಲಿ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಕುಸಿದು ಹೋಗುತ್ತಿರುವ ಸುಪ್ರೀಂ ಕೋರ್ಟ್‍ನ ಚಿತ್ರಣವು ಬಹುತೇಕ ಅಧೋಗತಿ ತಲುಪಿತ್ತು.  ನಿರಾಶೆ ಹುಟ್ಟಿಸುವಂತೆ, ನ್ಯಾಯಮೂರ್ತಿ ಬೊಬ್ಡೆಯವರು ಈ ಪರಂಪರೆಯನ್ನು ಮುಂದುವರಿಸಿ, ಸುಪ್ರೀಂ ಕೋರ್ಟ್, ಸಮಾಧಿ ಸ್ಥಿತಿಯನ್ನು ತಲುಪಲು ಸಹಕಾರಿಯಾದರು.

ಹಿಂದಿನ ನ್ಯಾಯಾಧೀಶ ಗೊಗೊಯ್ ಅವರ ಅಧಿಕಾರಾವಧಿಯ ವೈಶಿಷ್ಟ್ಯಗಳೆಂದರೆ; ಅವರ ವಿರುದ್ಧದ ಲೈಂಗಿಕ ಕಿರುಕುಳದ ಆರೋಪಗಳು, ಜೊತೆಗೆ, ನಾಗರಿಕ ಹಕ್ಕುಗಳಿಗೆ ಅವರು ಕೊಟ್ಟ ಕನಿಷ್ಠ ಆದ್ಯತೆ; ತದ್ವಿರುದ್ಧವಾಗಿ, ವಿವಾದಾತ್ಮಕ 370 ನೇ ವಿಧಿಯನ್ನು ರದ್ದುಪಡಿಸಲು ತೋರಿಸಿದ ತರಾತುರಿ. ಇವುಗಳೊಂದಿಗೆ, ಅಯೋಧ್ಯೆ ವಿವಾದದ ತೀರ್ಪಿಗೆ ನೀಡಿದ ಪ್ರಥಮ ಆದ್ಯತೆ. ಇಂತಹ ನಿರಾಶಾದಾಯಕ ಹಿನ್ನೆಲೆಯಲ್ಲಿ, ನ್ಯಾಯಾಧೀಶ ಬೊಬ್ಡೆಯವರು, ನಾಗರಿಕರ ಮೂಲಭೂತ ಹಕ್ಕುಗಳ ಮತ್ತು ಸ್ವಾತಂತ್ರ್ಯದ ರಕ್ಷಕರಾಗಿ, ಸುಪ್ರೀಂ ಕೋರ್ಟ್‍ನ ಬಗ್ಗೆ ಜನರ ನಂಬಿಕೆಯನ್ನು ಪುನಃ ಸ್ಥಾಪಿಸುತ್ತಾರೆ ಎಂದು ಆಶಿಸಲಾಗಿತ್ತು.

ಬೊಬ್ಡೆಯವರು ನ್ಯಾಯಾಧೀಶರಾಗಿ ಯಾವುದೇ ದೊಡ್ಡ ವಿವಾದಗಳಿಗೆ ಸಿಲುಕಿಕೊಳ್ಳಲಿಲ್ಲವಾದರೂ, ಅವರ ಕಾರ್ಯವೈಖರಿಯೇ ನ್ಯಾಯಾಲಯದಲ್ಲಿ ಹಲವಾರು ವಿವಾದಗಳನ್ನು ಹುಟ್ಟುಹಾಕಿತು. ಉದಾಹರಣೆಗೆ, ಕಳೆದ ವರ್ಷದ ಲಾಕ್‍ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ವೇತನ ಪಾವತಿಸುವಂತೆ ಸರ್ಕಾರಕ್ಕೆ ನಿರ್ದೇಶನ ಕೋರಿ ಸುಪ್ರೀಂ ಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ವಲಸೆ ಕಾರ್ಮಿಕರು ತಮ್ಮ ಮನೆಗಳಿಗೆ ಹಿಂತಿರುಗಲು ಕಾಲ್ನಡಿಗೆಯಲ್ಲಿಯೇ ನೂರಾರು ಕಿಲೋಮೀಟರ್ ಪ್ರಯಾಣಿಸಬೇಕಾಗಿತ್ತು. ದುರದೃಷ್ಟವಶಾತ್, ನ್ಯಾಯಾಧೀಶ ಬೊಬ್ಡೆ ಅಧ್ಯಕ್ಷತೆಯ ಸುಪ್ರೀಂ ಕೋರ್ಟಿನ ನ್ಯಾಯಪೀಠವು, ಸರಕಾರಕ್ಕೆ ಸೂಕ್ತ ನಿರ್ದೇಶನಗಳನ್ನು ನೀಡದೇ ಜನಸಾಮಾನ್ಯರ ನೋವನ್ನು ಕಡಿಮೆಗೊಳಿಸಲು ವಿಫಲವಾಯಿತು.

ಜೊತೆಗೆ, ಲಕ್ಷಾಂತರ ವಲಸೆ ಕಾರ್ಮಿಕರಿಗೆ ಸಹಾಯ ನೀಡುವ ಕುರಿತಾದ ಸರ್ಕಾರದ ಕ್ಷಮತೆಯನ್ನು ಪ್ರಶ್ನಿಸುವುದಿಲ್ಲವೆಂದು ಅಭಿಪ್ರಾಯ ಪಟ್ಟಿತು. ಇದಕ್ಕೆ ಪೂರಕವಾಗಿ ಮುಖ್ಯ ನ್ಯಾಯಧೀಶರು ನೀಡಿದ ಹೇಳಿಕೆ ಇನ್ನೂ ಆಘಾತಕಾರಿಯಾಗಿತ್ತು- “ಸಧ್ಯ ಅವರಿಗೆ ಊಟ ದೊರೆಯುತ್ತಿರುವುದರಿಂದ ಹಣದ ಅಗತ್ಯವೇನಿದೆ?”  ಇಂತಹ ಹೇಳಿಕೆ, ನ್ಯಾಯಾಧೀಶರ ಸಹಾನುಭೂತಿಯ ಕೊರತೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ಸಂವಿಧಾನದ 21ನೇ ಪರಿಚ್ಛೇದದ ಆಶಯಕ್ಕೆ ವಿರುದ್ಧವಾಗಿದೆ. ಈ ಕುರಿತು, ಸುಪ್ರೀಂ ಕೋರ್ಟಿನ ವ್ಯಾಖ್ಯಾನ ಮೂಲತಃ ಹೀಗಿದೆ- ‘ಜೀವಿಸುವ ಹಕ್ಕು’ ಅಂದರೆ ಪ್ರಾಣಿಗಳ ತರಹ ಬದುಕುವುದಲ್ಲ. ಅಂದರೆ, ಆಹಾರ ಮತ್ತು ಆಶ್ರಯದ ಪೂರೈಕೆಯೊಂದಿಗೆ, ಘನತೆಯೊಂದಿಗೆ ಬದುಕುವ ಹಕ್ಕು ಕೂಡ ಸೇರಿದೆ. ತದನಂತರ ಸುಪ್ರೀಂ ಕೋರ್ಟ್‍ನ ಇನ್ನೊಂದು ನ್ಯಾಯಪೀಠವು ಸರಕಾರಕ್ಕೆ ಕೆಲವು ನಿರ್ದೇಶನಗಳನ್ನು ನೀಡಿತು. ಅದೂ ಕೂಡ, ವಲಸೆ ಕಾರ್ಮಿಕರ ಅಮಾನವೀಯ ಪರಿಸ್ಥಿತಿಯ ಕುರಿತು ಕೆಲವು ಹಿರಿಯ ವಕೀಲರ ಸಮೂಹ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದ ಮೇಲೆ. 

ಇನ್ನು, ಕಳೆದ ವರ್ಷದ ಅಕ್ಟೋಬರ್ 5 ರಂದು ಕೇರಳದ ಪತ್ರಕರ್ತ ಸಿದ್ದೀಕ್ ಕಪ್ಪನ್, ಉತ್ತರ ಪ್ರದೇಶದ ಹಥ್ರಾಸ್ ನಲ್ಲಿ 19 ವರ್ಷದ ದಲಿತ ಹುಡುಗಿಯ ಸಾಮೂಹಿಕ ಅತ್ಯಾಚಾರವನ್ನು ವರದಿ ಮಾಡುತ್ತಿದ್ದಾಗ ಪೊಲೀಸರಿಂದ ಬಂಧಿಸಲ್ಪಟ್ಟಾಗ, ಈ ಕುರಿತು ಮುಖ್ಯ ನ್ಯಾಯಾಧೀಶರು ನೀಡಿದ ಹೇಳಿಕೆ ನಿರ್ಲಕ್ಷ್ಯದಾಯಕವಾಗಿತ್ತು. ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್, ಕಪ್ಪನ್ ಬಂಧನವನ್ನು ಪ್ರಶ್ನಿಸಿ ಸಂವಿಧಾನದ 32ನೇ ಪರಿಚ್ಛೇದದ ಅಡಿಯಲ್ಲಿ ಘಟನೆಯ ಮಾರನೇ ದಿನ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣ ಅಕ್ಟೋಬರ್ 12 ರಂದು ವಿಚಾರಣೆಗೆ ಬರಬೇಕಿತ್ತು. ಇದು ನಾಗರಿಕ ಸ್ವಾತಂತ್ರ್ಯದ ಪ್ರಶ್ನೆಯಾಗಿದ್ದರೂ ಸಹ, ವಿಚಾರಣೆಯನ್ನು ನಾಲ್ಕು ವಾರಗಳವರೆಗೆ ಕೋರ್ಟ್ ಮುಂದೂಡಿತು. ನಂತರ, ವಿಚಾರಣೆಯ ಸಮಯದಲ್ಲಿ, `ಸುಪ್ರೀಂ ಕೋರ್ಟ್ ಇನ್ನುಮುಂದೆ, 32ನೇ ಪರಿಚ್ಛೇದದ ವ್ಯಾಪ್ತಿಯಲ್ಲಿ ಅರ್ಜಿ ಹಾಕುವುದನ್ನು ಪ್ರೋತ್ಸಾಹಿಸದಿರಲು ಪ್ರಯತ್ನಿಸುತ್ತಿದೆ’ ಎಂದು ಮುಖ್ಯ ನ್ಯಾಯಾಧೀಶರು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಆದರೆ, ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರದಲ್ಲಿ, ನ್ಯಾಯಾಧೀಶರ ಈ ಮೇಲಿನ ಹೇಳಿಕೆಗೆ ತದ್ವಿರುದ್ಧವಾಗಿ ಸುಪ್ರೀಂಕೋರ್ಟ್‍ನ ಮತ್ತೊಂದು ನ್ಯಾಯಪೀಠ ನಡೆದುಕೊಂಡಿತು. ಅದು ಕೂಡ ಪರಿಚ್ಛೇದ 32ರ ವ್ಯಾಪ್ತಿಯಲ್ಲಿತ್ತು. ಗೋಸ್ವಾಮಿಯವರ ಅರ್ಜಿಯನ್ನು ಆಕ್ಷೇಪಣೆಯ ನಡುವೆಯೂ, ಅವರು ಸಲ್ಲಿಸಿದ ಒಂದು ದಿನದೊಳಗೆ ವಿಚಾರಣೆಗೆ ದಿನ ನಿಗದಿಮಾಡಿ, ನ್ಯಾಯಾಲಯವು ಅವರಿಗೆ ಮಧ್ಯಂತರ ಜಾಮೀನು ನೀಡಿತು.  ಮಾತ್ರವಲ್ಲ, ಈ ಕುರಿತ ಬಾಂಬೆ ಹೈಕೋರ್ಟ್‍ನ ತೀರ್ಪನ್ನು ತರಾಟೆಗೆ ತೆಗೆದುಕೊಂಡಿತು ಮತ್ತು “ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾದಾಗ ಮಧ್ಯಪ್ರವೇಶಿಸಬೇಕಾದ ಸಾಂವಿಧಾನಿಕ ಕರ್ತವ್ಯ ನ್ಯಾಯಾಲಯಗಳಿಗಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿತು.

ಈ ವೈರುಧ್ಯವನ್ನು ಮುಖ್ಯ ನ್ಯಾಯಾಧೀಶರ ನ್ಯಾಯಪೀಠದ ಗಮನಕ್ಕೆ ತಂದಾಗ, ಅವರು “ಪ್ರತಿಯೊಂದು ಪ್ರಕರಣವು ವಿಭಿನ್ನವಾಗಿರುತ್ತದೆ” ಎಂದು ಹೇಳಿಕೆ ನೀಡಿದ್ದರು.  ಬಹುಶಃ, ಅವರ ಅಭಿಪ್ರಾಯ ಸರಿಯಿರಬಹುದು. ಯಾಕೆಂದರೆ, ಸಿದ್ದೀಕ್ ಕಪ್ಪನ್, ಅರ್ನಾಬ್ ಗೋಸ್ವಾಮಿಯಲ್ಲ. ಮುಂದುವರಿದಂತೆ, ನವೆಂಬರ್ 6 ರಂದು ಮುಖ್ಯ ನ್ಯಾಯಾಧೀಶ ಬೊಬ್ಡೆಯವರು, ಅರ್ನಾಬ್ ಗೋಸ್ವಾಮಿಯವರ ವಿಚಾರವಾಗಿ ಮಹಾರಾಷ್ಟ್ರ ವಿಧಾನಸಭೆಯ ಸಹಾಯಕ ಕಾರ್ಯದರ್ಶಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೆ ಮಾಡುವಾಗ ಹೀಗೆ ಹೇಳಿದ್ದರು: “ದೇಶದ ಯಾವುದೇ ಪ್ರಾಧಿಕಾರವು, ನಾಗರಿಕರು ನ್ಯಾಯಾಲಯದ ಮೊರೆಹೋಗುವುದನ್ನು ದಂಡಿಸಲು ಸಾಧ್ಯವಿಲ್ಲ. ಪರಿಚ್ಛೇದ 32 ಇರುವುದೇ ಅದಕ್ಕೆ”

ಮುಖ್ಯ ನ್ಯಾಯಾಧೀಶರ ಈ ಮೇಲೆ ಹೇಳಿಕೆಗಳನ್ನು ಅನೌಪಚಾರಿಕ ಅಭಿಪ್ರಾಯಗಳೆಂದು ತಪ್ಪಾಗಿ ಗ್ರಹಿಸಲಿಕ್ಕಾಗದು. ಅವು ಪ್ರಸಕ್ತ ನ್ಯಾಯಾಂಗ ವ್ಯವಸ್ಥೆಯ ಅಸ್ವಸ್ಥತೆಯ ಲಕ್ಷಣಗಳಾಗಿವೆ. ಯಾಕೆಂದರೆ, ಬಿ.ಆರ್.ಅಂಬೇಡ್ಕರ್ “ಸಂವಿಧಾನದ ಹೃದಯ ಮತ್ತು ಆತ್ಮ” ವೆಂದು ಪರಿಗಣಿಸಿದ್ದ 32ನೇ ಪರಿಚ್ಛೇದÀ, ನಾಗರಿಕರ ಮೂಲಭೂತ ಹಕ್ಕುಗಳ ಮಂಡನೆಗೆ ಒಂದು ಮುಖ್ಯದ್ವಾರವಾಗಿದೆ. ಆದರೆ, ಈ ದ್ವಾರವಿಂದು ವಿಶೇಷ ಸವಲತ್ತು ಪಡೆದ ಕೆಲವರಿಗೆ ಮಾತ್ರ ತೆರೆದುಕೊಂಡು, ಜನಸಾಮಾನ್ಯರಿಗೆ ಮುಚ್ಚಿಕೊಂಡರೆ ಹೇಗೆ? ಜೊತೆಗೆ, ಜನಸಾಮಾನ್ಯರ ಜೀವನ ಮತ್ತು ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುವ ಪ್ರಕರಣಗಳ ವಿಚಾರಣೆಯಿಂದ ಸುಪ್ರೀಂ ಕೋರ್ಟ್ ಇಂದು ದೂರ ಸರಿಯುತ್ತಿದೆಯೆಂಬ ಸಾಮಾನ್ಯ ಗ್ರಹಿಕೆ ನಿರಾಧಾರವಲ್ಲ.

ಮಾಹಿತಿ ಹಕ್ಕಿನ ಮೂಲಕ ಸಂಗ್ರಹಿಸಿದ ಮಾಹಿತಿಯ ಪ್ರಕಾರ, 2020ರ ಡಿಸೆಂಬರ್ 18 ರವರೆಗೆ ಜಾಮೀನಿಗೆ ಸಂಬಂಧಿಸಿದ 1,072 ಪ್ರಕರಣಗಳು ಮತ್ತು ಈ ವರ್ಷದ ಫೆಬ್ರವರಿ 14 ರವರೆಗೆ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ 58 ಅರ್ಜಿಗಳು ಬಾಕಿಯಿದ್ದು, ವಿಚಾರಣೆಯ ನಿರೀಕ್ಷೆಯಲ್ಲಿವೆ.

ಜೊತೆಗೆ, ಸಂವಿಧಾನದ 370 ನೇ ವಿಧಿಗೆ ಸಂಬಂಧಿಸಿದ ಎಲ್ಲಾ ಪ್ರತಿರೋಧಗಳನ್ನು ಕೈಬಿಡಲಾಗಿದೆ. ರಾಷ್ಟ್ರವ್ಯಾಪಿ ಪ್ರತಿರೋಧಕ್ಕೆ ಕಾರಣವಾದ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಅದನ್ನು ಪ್ರಶ್ನಿಸಿದ 140 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಇನ್ನು, ಚುನಾವಣೆಗೆ ಧನಸಹಾಯ ನೀಡುವ ವಿಷಯದಲ್ಲಿ ಆಡಳಿತ ಪಕ್ಷಕ್ಕೆ ಲಾಭವೆಂದು ಪರಿಗಣಿಸಲ್ಪಟ್ಟ 2018 ರ ಚುನಾವಣಾ ಬಾಂಡ್ ಯೋಜನೆಯ ವಿಚಾರಣೆ ಇನ್ನೂ ಚುರುಕುಗೊಂಡಿಲ್ಲ. ಇದರ ನಡುವೆ, ಹಲವಾರು ಚುನಾವಣೆಗಳು ನಡೆದಿವೆ. ಈ ಎಲ್ಲದರ ಮಧ್ಯೆ, ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರ ಟ್ವೀಟ್ ಸುಪ್ರೀಂ ಕೋರ್ಟನ್ನು ಅಸಮಾಧಾನಗೊಳಿಸಿತು ಹಾಗೂ ಅವರ ವಿರುದ್ಧ ನ್ಯಾಯಾಂಗ ನಿಂದನೆ ವಿಚಾರಣೆಯನ್ನು ಪ್ರಾರಂಭಿಸಿತು. ಆದರೆ, ಮೂವರು ನ್ಯಾಯಾಧೀಶರ ಪೀಠ ಮಾತ್ರ ಅದನ್ನು ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿಲ್ಲ. ಅಂತೆಯೇ, ಮೇಲೆ ಪ್ರಸ್ತಾಪಿಸಿದ ಎಲ್ಲಾ ಪ್ರಕರಣಗಳನ್ನು ವಿಚಾರಿಸಲು ಯಾವುದೇ ಪೀಠವನ್ನು ಇನ್ನೂ ರಚಿಸಲಾಗಿಲ್ಲ.

ಅಂದರೆ, ಸಮಯ ಕಳೆದಂತೆ ಈ ಪ್ರಕರಣಗಳು ಅಪ್ರಸ್ತುತವಾಗಲೆಂದು ಸುಪ್ರೀಂ ಕೋರ್ಟ್ ಕಾಯುತ್ತಿದೆಯೇ? ಇವುಗಳ ಮಧ್ಯೆ, ಮುಖ್ಯ ನ್ಯಾಯಾಧೀಶ ಬೊಬ್ಡೆಯವರು ಕಾಲದ ಮರಳಿನ ಮೇಲೆ ಯಾವುದೇ ಹೆಜ್ಜೆಗುರುತುಗಳನ್ನು ಮೂಡಿಸದೆ ತಮ್ಮ ಹುದ್ದೆಯಿಂದ ನಿರ್ಗಮಿಸಿದ್ದಾರೆ.

*ಲೇಖಕರು ದೆಹಲಿ ಹೈಕೋರ್ಟ್‍ಮಾಜಿ ನ್ಯಾಯಾಧೀಶರು.

ಕೃಪೆ: ದಿ ಇಂಡಿಯನ್ ಎಕ್ಸ್ ಪ್ರೆಸ್        ಅನು: ಡಾ.ಜ್ಯೋತಿ

Leave a Reply

Your email address will not be published.