ಹಲವು ಅವಕಾಶ-ಸವಾಲುಗಳ ಜೊತೆಗೆ ಬೊಮ್ಮಾಯಿ ಅವರ ತಂತಿ ಮೇಲಿನ ನಡಿಗೆ

ಪದ್ಮರಾಜ ದಂಡಾವತಿ

ಬಸವರಾಜ ಬೊಮ್ಮಾಯಿ 2008ರಿಂದ ಬಿಜೆಪಿಯಲ್ಲಿ ಇದ್ದರೂ ಕಟ್ಟಾ ಹಿಂದುತ್ವವಾದಿ ಎಂದು ಹೆಸರಾದವರಲ್ಲ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಗದ್ದುಗೆಯಿಂದ ಕೆಳಗೆ ಇಳಿಸಿದ್ದರಿಂದ ಲಿಂಗಾಯತ ಸಮುದಾಯ ಬಿಜೆಪಿ ವಿರುದ್ಧ ಸೆಟಗೊಳ್ಳಬಾರದು ಎಂದು ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿದಂತೆ ಕಾಣುತ್ತದೆ. ಅಂದರೆ, ಅವರು `ಸಹಜ ಆಯ್ಕೆಯಾಗಿ ಹೊರಹೊಮ್ಮಿದವರು ಅಲ್ಲ.

ಕರ್ನಾಟಕ ರಾಜ್ಯ ಅಸ್ತಿತ್ವಕ್ಕೆ ಬಂದು ಇನ್ನೇನು 65 ವರ್ಷಗಳು ತುಂಬಲಿವೆ. ಆರೂವರೆ ದಶಕಗಳ ಅವಧಿಯಲ್ಲಿ ರಾಜ್ಯವು 30 ಮುಖ್ಯಮಂತ್ರಿಗಳನ್ನು ಕಂಡಿದೆ. ಅವಧಿಯಲ್ಲಿ ಐದು ವರ್ಷಗಳ ಕಾಲ ಆಡಳಿತ ಮಾಡಿದವರು ಕೇವಲ ಮೂವರು ಮುಖ್ಯಮಂತ್ರಿಗಳು ಮಾತ್ರ. ಅವರು: ಎಸ್.ನಿಜಲಿಂಗಪ್ಪ, ದೇವರಾಜ ಅರಸು ಮತ್ತು ಸಿದ್ದರಾಮಯ್ಯ. ಎಸ್.ಎಂ.ಕೃಷ್ಣ ಕೊಂಚ ಮುಂಚೆಯೇ ಚುನಾವಣೆಗೆ ಹೋದುದರಿಂದ ಅವರೂ ಪೂರ್ಣ ಐದು ವರ್ಷಗಳ ಅವಧಿಯ ಮುಖ್ಯಮಂತ್ರಿ ಆಗಿರಲಿಲ್ಲ.

ಆರು ದಶಕಗಳಿಗೆ ಮೀರಿದ ಒಂದು ರಾಜ್ಯದ ಆಯುಷ್ಯದಲ್ಲಿ ಮೂವತ್ತು ಜನ ಮುಖ್ಯಮಂತ್ರಿಗಳು ಆದುದು ಮತ್ತು ಕೇವಲ ಮೂವರು ಅಥವಾ ನಾಲ್ವರು ಮಾತ್ರ ಅವಧಿ ಪೂರ್ಣ ಮುಖ್ಯಮಂತ್ರಿಗಳಾಗಿ ಇದ್ದುದು ರಾಜ್ಯದ ಅಸ್ಥಿರ ರಾಜಕೀಯದ ಸಂಕೇತದಂತೆ ಇದೆ.

ಇದೀಗ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಅವರಿಗೆ ಕೇವಲ 20 ತಿಂಗಳ ಅಧಿಕಾರ ಮಾತ್ರ ಉಳಿದಿದೆ. ಅವರು ಮುಖ್ಯಮಂತ್ರಿಯಾದುದು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ, ಆಕಸ್ಮಿಕವಾಗಿ ಮುಖ್ಯಮಂತ್ರಿಯಾದವರ ಪರಂಪರೆಯ ಮುಂದುವರಿಕೆಯಂತೆ ಇದೆ. ಪಕ್ಷದ ಅಗ್ರ ನಾಯಕರಾದ ಬಿ.ಎಸ್.ಯಡಿಯೂರಪ್ಪ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ. ಮುಖ್ಯಮಂತ್ರಿಯೂ ಆಗುತ್ತಾರೆ; ಆದರೆ, ಅವಧಿ ಪೂರ್ಣಗೊಳಿಸಲು ಆಗುವುದಿಲ್ಲ. ಉಳಿದ ಅವಧಿಗೆ ಬೇರೆ ಯಾರಾದರೂ ಮುಖ್ಯಮಂತ್ರಿ ಆಗುತ್ತಾರೆ. ಹಾಗೆ ಈಗ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾರೆ.

2008ರಲ್ಲಿ 110 ಸೀಟುಗಳೊಂದಿಗೆ ವಿಧಾನಸಭೆಯಲ್ಲಿ ಅತಿದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿತು. ಆದರೆ, ಸ್ವತಂತ್ರವಾಗಿ ಅಧಿಕಾರ ರಚಿಸಲು ಮೂರು ಸೀಟುಗಳ ಕೊರತೆ ಬಿತ್ತು. ಅದೇ ಯಡಿಯೂರಪ್ಪ ನೇತೃತ್ವದಲ್ಲಿ 2018 ಚುನಾವಣೆಯಲ್ಲಿ 105 ಸೀಟುಗಳೊಂದಿಗೆ ಮತ್ತೊಮ್ಮೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ ಆಗಲೂ ಸ್ವತಂತ್ರವಾಗಿ ಅಧಿಕಾರ ರಚಿಸಲು ಸಮರ್ಥವಾಗಲಿಲ್ಲ. ಎರಡೂ ಸಾರಿ ಪ್ರಜಾಪ್ರಭುತ್ವದ ನೀತಿ ನಿಯಮಗಳಿಗೆ ವಿರುದ್ಧವಾದ ಅಡ್ಡದಾರಿಗಳಿಂದಲೇ ಯಡಿಯೂರಪ್ಪ ಮುಖ್ಯಮಂತ್ರಿಯಾದರು.

ಅದರ ಪರಿಣಾಮ ಎನ್ನುವ ಹಾಗೆ ಒಳಗಿನಿಂದಲೇ ಹುಟ್ಟಿಕೊಂಡ ಭಿನ್ನಮತ ಮತ್ತು ತೀವ್ರ ಸ್ವರೂಪದ ಭ್ರಷ್ಟಾಚಾರದ ಆರೋಪಗಳಿಂದಾಗಿ ಅವರು ಅಧಿಕಾರ ಕಳೆದುಕೊಂಡರು. ಆದಾಗ್ಯೂ ಲಿಂಗಾಯತ ಸಮುದಾಯ ಬಂಡೆಯ ಹಾಗೆ ಅವರ ಹಿಂದೆ ನಿಂತಿದೆ. ಯಡಿಯೂರಪ್ಪ ಇನ್ನೇನು ಅಧಿಕಾರ ಕಳೆದುಕೊಳ್ಳುತ್ತಾರೆ ಎನ್ನುವಾಗ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಯಡಿಯೂರಪ್ಪ ಅವರನ್ನು ಅವರ ಮನೆಯಲ್ಲಿಯೇ ಭೇಟಿ ಮಾಡಿ ಉಪಾಹಾರ ಸೇವಿಸಿ ತಮ್ಮ ಸಮುದಾಯ ಅವರ ಹಿಂದೆ ಇದೆ ಎಂದು ಬಹಿರಂಗವಾಗಿ ಹೇಳಿದ್ದು ಇದಕ್ಕೆ ನಿದರ್ಶನ.

ಬಸವರಾಜ ಬೊಮ್ಮಾಯಿ ಅವರು ಎಸ್.ಆರ್.ಬೊಮ್ಮಾಯಿ ಅವರ ಮಗ. ಎಸ್.ಆರ್.ಬೊಮ್ಮಾಯಿ ಅವರು ಎಂ.ಎನ್.ರಾಯ್ ಅನುಯಾಯಿ. ಎಂ.ಎನ್.ರಾಯ್ ಸುಪ್ರಸಿದ್ಧ ಎಡಪಂಥೀಯ ಚಿಂತಕ. ಹಿನ್ನೆಲೆ ಇರುವುದರಿಂದಲೋ ಏನೋ ಬಸವರಾಜ ಬೊಮ್ಮಾಯಿ 2008 ರಿಂದ ಬಿಜೆಪಿಯಲ್ಲಿ ಇದ್ದರೂ ಕಟ್ಟಾ ಹಿಂದುತ್ವವಾದಿ ಎಂದು ಹೆಸರಾದವರಲ್ಲ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಗದ್ದುಗೆಯಿಂದ ಕೆಳಗೆ ಇಳಿಸಿದ್ದರಿಂದ ಲಿಂಗಾಯತ ಸಮುದಾಯ ಬಿಜೆಪಿ ವಿರುದ್ಧ ಸೆಟಗೊಳ್ಳಬಾರದು ಎಂದು ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿದಂತೆ ಕಾಣುತ್ತದೆ. ಅಂದರೆ, ಸಂದರ್ಭಕ್ಕೆ ಹೊಂದುವಂತೆ ಬಸವರಾಜರು ಆಯ್ಕೆಯಾಗಿದ್ದಾರೆಯೇ ಹೊರತು ಅವರು ಮುಖ್ಯಮಂತ್ರಿ ಹುದ್ದೆಗೆ `ಸಹಜ ಆಯ್ಕೆಯಾಗಿ ಹೊರಹೊಮ್ಮಿದವರು ಅಲ್ಲ.

ಹಿಂದೆ 2008 ರಿಂದ 2013 ನಡುವಿನ ಅವಧಿಯಲ್ಲಿಯೂ ಯಡಿಯೂರಪ್ಪ ಅವರು ಅಧಿಕಾರದಿಂದ ಕೆಳಗೆ ಇಳಿಯಬೇಕಾಗಿ ಬಂದಾಗ ಮೊದಲು ಡಿ.ವಿ.ಸದಾನಂದಗೌಡರು ನಂತರ ಜಗದೀಶ್ ಶೆಟ್ಟರ್ ಹೀಗೆಯೇ `ಸಂದರ್ಭಕ್ಕೆ ತಕ್ಕಂತೆಮುಖ್ಯಮಂತ್ರಿಯಾದವರು. ಇದು, ಬಿಜೆಪಿಯಲ್ಲಿನ ರಾಜ್ಯ ಮಟ್ಟದ ಮತ್ತು ಪಕ್ಷವನ್ನು ಅಧಿಕಾರಕ್ಕೆ ತರುವಂಥ ಸಮೂಹ ಬೆಂಬಲ ಇರುವ ನಾಯಕರ ಕೊರತೆಯನ್ನು ತೋರಿಸುತ್ತದೆ. ಯಡಿಯೂರಪ್ಪ ಅವರಂಥ ನಾಲ್ಕು ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿ ಇರುವ, ತಳಮಟ್ಟದಿಂದ ಬೆಳೆದ ಹಾಗೂ ಪಕ್ಷವನ್ನು ಕಟ್ಟಿದ ನಾಯಕನಿಗೆ ಕೂಡ ಸ್ವತಂತ್ರವಾಗಿ ಪಕ್ಷವನ್ನು ಅಧಿಕಾರಕ್ಕೆ ತರಲು ಆಗಲಿಲ್ಲ. ಕೊರತೆ ತುಂಬಿಕೊಳ್ಳಲು ಇತರ ಪಕ್ಷಗಳ ಶಾಸಕರಿಗೆ ಅಧಿಕಾರದ, ಹಣದ ಆಮಿಷವೊಡ್ಡಿ, ರಾಜೀನಾಮೆ ಕೊಡಿಸಿ, ಪಕ್ಷಕ್ಕೆ ಸೇರಿಸಿಕೊಂಡು ಮತ್ತೆ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿ ಸಚಿವರನ್ನಾಗಿ ಮಾಡಿ ಯಡಿಯೂರಪ್ಪ ಮುಖ್ಯಮಂತ್ರಿ ಗದ್ದುಗೆಯಲ್ಲಿ ಕುಳಿತುಕೊಂಡರೂ ಅದು ಅಲ್ಪಕಾಲದ ಅಧಿಕಾರವೇ ಆಗಿತ್ತು ಎಂಬುದು ಇಂಥ ರಾಜಕಾರಣದ ಬಿಕ್ಕಟ್ಟುಗಳ ನಿದರ್ಶನದಂತೆ ಇದೆ.

ಬಸವರಾಜ ಬೊಮ್ಮಾಯಿ ಎದುರು ಇರುವ ಬಹುದೊಡ್ಡ ರಾಜಕೀಯ ಸವಾಲು ಎಂದರೆ ಇದೇ ಆಗಿದೆ. ಯಡಿಯೂರಪ್ಪ ಅವರಿಗೇ ಸಾಧ್ಯವಾಗದ ಸಾಧನೆಯನ್ನು ಅವರು ಮಾಡಿ ತೋರಿಸಬೇಕಾಗಿದೆ. ಅವರು 2023 ರಲ್ಲಿ ಪಕ್ಷವನ್ನು ಮತ್ತೆ ಸ್ವತಂತ್ರವಾಗಿ ಅಧಿಕಾರಕ್ಕೆ ತರಬೇಕಾಗಿದೆ. ತರಲಿ ಎಂಬುದು ಹೈಕಮಾಂಡ್ ಅಪೇಕ್ಷೆ. ಸವಾಲಿಗೆ, ಅಪೇಕ್ಷೆಗೆ ಮತ್ತು ಜವಾಬ್ದಾರಿಗೆ ತಕ್ಕಂತೆ ಅವರು ತಮ್ಮ ಅಡಳಿತ ಶೈಲಿಯನ್ನು ರೂಪಿಸಿಕೊಳ್ಳಬೇಕಾಗಿದೆ.

ಬೊಮ್ಮಾಯಿ ಅವರು ಯಡಿಯೂರಪ್ಪ ನಂತರದ ನಾಯಕರು ಎಂದು ಹೆಸರು ಮಾಡಿದವರೇನೂ ಆಗಿರಲಿಲ್ಲ. ಯಡಿಯೂರಪ್ಪ ನಂತರದ ನಾಯಕರ ಸಾಲಿನಲ್ಲಿ ಕೆ.ಎಸ್.ಈಶ್ವರಪ್ಪ, ಜಗದೀಶ ಶೆಟ್ಟರ್, ಡಿ.ವಿ.ಸದಾನಂದಗೌಡ, ಗೋವಿಂದ ಕಾರಜೋಳ ಮುಂತಾದವರು ಇದ್ದರು. ಇವರು ಪಕ್ಷದ ಅಧ್ಯಕ್ಷರಾಗಿ ಅಥವಾ ಉಪಮುಖ್ಯಮಂತ್ರಿಗಳಾಗಿ ಅಥವಾ ಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದವರಾಗಿದ್ದರು. ಅಷ್ಟು ಹಿಂದೆ ಹೋಗುವುದು ಬೇಡ. ಯಡಿಯೂರಪ್ಪ ಅವರು 2019ರಲ್ಲಿ ಮುಖ್ಯಮಂತ್ರಿಯಾದಾಗ ಅವರ ಜೊತೆಗೆ ಉಪಮುಖ್ಯಮಂತ್ರಿಯಾದ ಮೂವರಲ್ಲಿಯೂ ಬೊಮ್ಮಾಯಿ ಒಬ್ಬರಾಗಿರಲಿಲ್ಲ. ಆಗ ಉಪಮುಖ್ಯಮಂತ್ರಿಯಾಗಿದ್ದ ಲಕ್ಷ್ಮಣ ಸವದಿಯವರನ್ನು ಯಡಿಯೂರಪ್ಪ ಅವರಿಗೆ ಪ್ರತಿನಾಯಕನಾಗಿ ಬೆಳೆಸಲು ಪಕ್ಷ ಬಯಸಿತ್ತು. ಅವರು ಅದನ್ನು ಈಡೇರಿಸುವ ರೀತಿಯಲ್ಲಿ ಬೆಳೆಯಲಿಲ್ಲ. ಹೀಗಾಗಿ ಅವರು ಬೊಮ್ಮಾಯಿ ಸಂಪುಟದಲ್ಲಿ ಮಂತ್ರಿಯೂ ಆಗಲಿಲ್ಲ! ಯಾವುದೇ ಒಂದು ಪಕ್ಷ ಹೇಗೆ ಒಬ್ಬರನ್ನು ಬಳಸುತ್ತದೆ, ಬೆಳೆಸುತ್ತದೆ ಮತ್ತು ಬಿಸಾಕುತ್ತದೆ ಎಂಬುದಕ್ಕೆ ಇದು ಒಂದು ನಿದರ್ಶನ. ಯಡಿಯೂರಪ್ಪ ಅವರೂ ಅಷ್ಟೇ. ಅವರನ್ನು ಪಕ್ಷವು ಬಳಸಿಕೊಂಡು ಕೈ ಬಿಟ್ಟಿದೆ.

ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದು ದಿಢೀರ್ ನಿರ್ಣಯವೇನೂ ಅಲ್ಲ. ಅವರು ಯಡಿಯೂರಪ್ಪ ಅವರಿಗೆ ಹತ್ತಿರದವರಾಗಿದ್ದರು. ಅವರನ್ನು ಮುಖ್ಯಮಂತ್ರಿ ಮಾಡಿದರೆ ಬಿಜೆಪಿಯಲ್ಲಿನ ಇತರ ಆಕಾಂಕ್ಷಿಗಳು ಅವರ ವಿರುದ್ಧ ಬಂಡೇಳುವುದಿಲ್ಲ ಎಂದು ಹೈಕಮಾಂಡ್ಗೆ ತಿಳಿದಿತ್ತು. ಇದೇ ಮಾತನ್ನು ಮುರುಗೇಶ್ ನಿರಾಣಿ ವಿಚಾರದಲ್ಲಿ ಹೇಳುವ ಹಾಗೆ ಇರಲಿಲ್ಲ. ಅವರಿಗೆ ಅವರ ಜಿಲ್ಲೆಯಲ್ಲಿಯೇ ತೀವ್ರ ವಿರೋಧ ಇತ್ತು. ಬೆಂಗಳೂರುನವದೆಹಲಿ ನಡುವೆ ಅರವಿಂದ ಬೆಲ್ಲದ್ ಓಡಾಡಿದರಾದರೂ ಅವರನ್ನು ಮುಖ್ಯಮಂತ್ರಿ ಮಾಡಲು ಯಡಿಯೂರಪ್ಪ ಬಿಡುತ್ತಿರಲಿಲ್ಲ. ಅಷ್ಟೇ ಏಕೆ, ಶೆಟ್ಟರ್ ಅವರೂ ಬಿಡುತ್ತಿರಲಿಲ್ಲ. ಅಂದರೆ, ಬಿಜೆಪಿ ಹೈಕಮಾಂಡಿಗೆ ಸುಗಮವಾಗಿ ಅಧಿಕಾರ ಹಸ್ತಾಂತರ ಆಗಬೇಕಿತ್ತು. ಈಗ ಅದು ಆಗಿದೆ.

ಬೊಮ್ಮಾಯಿಯವರು ಒಳ್ಳೆಯ ಶೈಕ್ಷಣಿಕ ಹಿನ್ನೆಲೆ ಇರುವ ವ್ಯಕ್ತಿ. ಚೆನ್ನಾಗಿ ಇಂಗ್ಲಿಷ್ ಮಾತನಾಡುತ್ತಾರೆ. ಅವರು ಇನ್ನೂ ಹದಿನೈದು ವರ್ಷ ಕಾಲ ರಾಜಕಾರಣ ಮಾಡಬಹುದು. ಮಧ್ಯಮ ವರ್ಗ ಅಥವಾ ಸಾಮಾನ್ಯ ವರ್ಗದ ಜನರಿಗೆ ಪ್ರಿಯವಾಗಬಹುದಾದ ವ್ಯಕ್ತಿ. ಅದಕ್ಕೆ ತಕ್ಕ ಹಾಗೆಯೇ ಅವರೂ ಈಗ ನಡೆದುಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರದ ಹಿಂದಿನ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಜೊತೆ ಇವರನ್ನು ಹೋಲಿಸಬಹುದು. ಫಡಣವೀಸ್ ಮತ್ತು ಬೊಮ್ಮಾಯಿ ಬಿಜೆಪಿ ಬಯಸುವ ಮಗದೊಂದು ರಾಜಕೀಯದ ಮುಖಗಳು. ಇವರು ಇಬ್ಬರೂ `ಹಾರ್ಡ್ಕೋರ್ಅಲ್ಲ. ಆದರೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ `ಹಾರ್ಡ್ಕೋರ್ಮುಖ. ಅವರದು ಬಿಜೆಪಿ ಬಯಸುವ ಇನ್ನೊಂದು ಬಗೆಯ ರಾಜಕಾರಣದ ಶೈಲಿ.

ಬೊಮ್ಮಾಯಿ ಅವರ ಸರಳತೆ, ಜನರಿಗೆ ಹತ್ತಿರವಾಗಿ ಇರಲು ಪ್ರಯತ್ನಿಸುವುದು, ಒಂದಿಷ್ಟು ಜನಪ್ರಿಯ ಯೋಜನೆಗಳನ್ನು ಪ್ರಕಟಿಸುವುದು ಇಷ್ಟರಿಂದಲೇ ಅವರು ಮುಂದಿನ ವಿಧಾನಸಭೆಯ ಚುನಾವಣೆಯಲ್ಲಿ ಗೆಲ್ಲಲು ಆಗದು. ಅವರಿಗೆ ಅವಧಿ ಕಡಿಮೆ ಇದೆ. 20 ತಿಂಗಳು ಹೇಗೆ ಕಳೆದು ಹೋಗುತ್ತವೆ ಎಂದು ಹೇಳಲು ಆಗದು. ಹಾಗೆ ನೋಡಿದರೆ ಅವರಿಗೆ ತಮ್ಮನ್ನು ತಾವು ಸಾಬೀತು ಮಾಡಲು ಉಳಿದಿರುವುದು ಕೇವಲ ಒಂದು ವರ್ಷ ಮಾತ್ರ. ನಂತರ ಚುನಾವಣೆಯ ತಯಾರಿಗೆ ತೊಡಗಬೇಕಾಗುತ್ತದೆ. ಹಾಗಾಗಿ ಅವರೇ ಹೇಳುವ ಹಾಗೆ ಅವರು, “ಅವಸರದಲ್ಲಿ ಇರುವ ಮನುಷ್ಯ.” ಕಡಿಮೆ ಅವಧಿಯಲ್ಲಿ ಹೆಚ್ಚಿನದನ್ನು ಸಾಧಿಸುವ ಜವಾಬ್ದಾರಿ ಅವರ ಮೇಲೆ ಇದೆ.

ಬಿಜೆಪಿಯು ಪ್ರಧಾನವಾಗಿ ಉತ್ತರ ಕರ್ನಾಟಕದ ಪಕ್ಷ. ಅಲ್ಲಿ ಲಿಂಗಾಯತರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಮತ ಬ್ಯಾಂಕ್ ಅನ್ನು ಕಳೆದುಕೊಳ್ಳಬಾರದು ಎಂದು ಅದೇ ಭಾಗದವರಾದ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿರುವುದರಲ್ಲಿ ಅರ್ಥ ಇದೆ. ಆದರೆ, ದಕ್ಷಿಣ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಬಿಜೆಪಿಗೆ ಖಾತೆ ತೆರೆಯುವುದಕ್ಕೇ ಕಷ್ಟವಾಗುತ್ತಿದೆ. ಹೀಗಾಗಿ ಚುನಾವಣೆ ತಜ್ಞರ ಮಾತಿನಲ್ಲಿ ಹೇಳಬಹುದಾದರೆ ಅದು `ಸೆಂಚುರಿ ಸಿಂಡ್ರೋಮ್ನಿಂದ ನರಳುತ್ತಿದೆ. ಸರ್ಕಾರ ರಚಿಸಲು ಅಗತ್ಯವಾದ 113 ಜಾದೂ ನಂಬರ್ ಅನ್ನು ತಲುಪಲು ಅದಕ್ಕೆ ಆಗುತ್ತಿಲ್ಲ. ಅದಕ್ಕಾಗಿಯೇ ತಮ್ಮ ಬಲದ ಮೇಲೆಯೇ ಗೆಲ್ಲಬಹುದಾದ 17 ಜನ ಅನ್ಯ ಪಕ್ಷದ ಶಾಸಕರನ್ನು ಬಿಜೆಪಿಯು ಪಕ್ಷಕ್ಕೆ ಕರೆದುಕೊಂಡು ಬಂದಿದೆ. ಅವರು ಕಾಂಗ್ರೆಸ್ನಿಂದ ನಿಂತರೂ ಗೆಲ್ಲುತ್ತಾರೆ. ಬಿಜೆಪಿಯಿಂದ ನಿಂತರೂ ಗೆಲ್ಲುತ್ತಾರೆ. ಜೆ.ಡಿ (ಎಸ್) ನಿಂದ ನಿಂತರೂ ಗೆಲ್ಲುತ್ತಾರೆ. ಹೀಗೆ ಬಂದವರಲ್ಲಿ ಒಬ್ಬಿಬ್ಬರು ಗೆಲ್ಲಲಿಲ್ಲ ಎಂಬುದು ಬೇರೆ ಮಾತು.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿಯೂ ಇವರೆಲ್ಲ ಪಕ್ಷದಲ್ಲಿಯೇ ಉಳಿದರೆ ಅವರು ಬಿಜೆಪಿಗೆ `ಆಸ್ತಿಯಾಗಿರುತ್ತಾರೆ. ಆದರೆ, ಆಡಳಿತ ಪಕ್ಷ ಯಾವಾಗಲೂ ನಾನಾ ಕಾರಣಗಳಿಂದ ಮತದಾರರ ಪ್ರತಿರೋಧವನ್ನು ಎದುರಿಸುತ್ತ ಇರುತ್ತದೆ. ಕರ್ನಾಟಕದಲ್ಲಿ ಇದು 1985 ರಿಂದ ನಿರಂತರವಾಗಿ ಕಂಡು ಬರುತ್ತಿದೆ. ಒಂದು ಅವಧಿಗೆ ಆಡಳಿತ ಮಾಡಿದ ಒಂದು ಪಕ್ಷವನ್ನು ಜನರು ಮತ್ತೆ ಚುನಾಯಿಸಿಲ್ಲ. ಎಸ್.ಎಂ.ಕೃಷ್ಣ ಹಾಗೂ ಸಿದ್ದರಾಮಯ್ಯ ಅವರಂಥ `ಒಳ್ಳೆಯ ಆಡಳಿತ ನೀಡಿದವರುಎಂದು ಹೆಸರು ಮಾಡಿದವರಿಗೂ ತಮ್ಮ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ಆಗಲಿಲ್ಲ. ಅರ್ಥದಲ್ಲಿ ಬೊಮ್ಮಾಯಿ ಅವರ ಪರವಾಗಿ ಇತಿಹಾಸ ಇಲ್ಲ.

ಇತಿಹಾಸ ಮರುಕಳಿಸಬಾರದು, ಹೊಸ ಇತಿಹಾಸ ನಿರ್ಮಾಣ ಆಗಬೇಕು ಎನ್ನುವುದಾದರೆ ಅವರು ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಆದ ತಪ್ಪುಗಳು ಜನರ ಮನಸ್ಸಿನಿಂದ ಮರೆತು ಹೋಗುವಂಥ ಆಡಳಿತವನ್ನು ಕೊಡಬೇಕು. ಜನಪರವಾದ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು, ಯೋಜನೆಗಳನ್ನು ಹಮ್ಮಿಕೊಳ್ಳಬೇಕು. ಅವರ ಎದುರು ಇರುವುದು ಎರಡು ಪ್ರಬಲ ರಾಜಕೀಯ ಪಕ್ಷಗಳು. ಒಂದನೆಯದು ಕಾಂಗ್ರೆಸ್ ಪಕ್ಷ. ಅದು ಆಕ್ರಮಣಕಾರಿಯಾಗಿದೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಇಬ್ಬರಿಗೂ ಬಿಜೆಪಿಯನ್ನು ಎದುರಿಸಲು ಸೈದ್ಧಾಂತಿಕ ಕಾರಣಗಳು ಇರುವ ಹಾಗೆ ವೈಯಕ್ತಿಕ ಕಾರಣಗಳೂ ಇವೆ. ಅವರ ಆಕ್ರಮಣಶೀಲತೆಗೆ ಸಾಟಿಯಾಗುವ ಹಾಗೆ ಬೊಮ್ಮಾಯಿ ತಮ್ಮ ಹತ್ಯಾರಗಳನ್ನು ಸಿದ್ಧ ಮಾಡಿಕೊಳ್ಳಬೇಕು. ಬೊಮ್ಮಾಯಿ ಅವರ ನೆನಪಿನಲ್ಲಿ ಇರಬೇಕಾದ ಇನ್ನೊಂದು ಮಹತ್ವದ ಸಂಗತಿ ಎಂದರೆ, 1999 ರಿಂದ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಪಡೆದಿರುವ ಕನಿಷ್ಠ ಮತ ಪ್ರಮಾಣ ಇದೇ ಅವಧಿಯಲ್ಲಿ ಬಿಜೆಪಿ ಪಡೆದಿರುವ ಗರಿಷ್ಠ ಮತಗಳಿಗಿಂತ ಹೆಚ್ಚು ಇದೆ. ಅಂದರೆ, ಕರ್ನಾಟಕ ಮೂಲಭೂತವಾಗಿ ಕಾಂಗ್ರೆಸ್ ಪರ ಇರುವ ರಾಜ್ಯ.

ಎರಡನೆಯದು, ಜೆ.ಡಿ (ಎಸ್). ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಬೆಳವಣಿಗೆಗೆ ಅಡ್ಡಿಯಾಗಿರುವ ಪಕ್ಷವಿದು. ಕಾಂಗ್ರೆಸ್ಗೆ ವಿರುದ್ಧವಾಗಿರುವ ಮತದಾರರು ಇಲ್ಲಿ ಬಿಜೆಪಿಯನ್ನು ಅಪ್ಪಿಕೊಳ್ಳುತ್ತಿಲ್ಲ. ಅವರು ಜೆ.ಡಿ (ಎಸ್) ಗೆ ಮತ ಹಾಕುತ್ತಿದ್ದಾರೆÉ. ದಕ್ಷಿಣದಲ್ಲಿನ ತನ್ನ ಪ್ರಾಬಲ್ಯವೂ ಸೇರಿಕೊಂಡು ಜೆ.ಡಿ (ಎಸ್) ಒಟ್ಟಾರೆ ರಾಜ್ಯದಲ್ಲಿ ಹೆಚ್ಚೂ ಕಡಿಮೆ 40 ಸೀಟುಗಳನ್ನು ಸ್ವತಂತ್ರವಾಗಿ ಗೆಲ್ಲಬಹುದಾಗಿದೆ. ಆದರೆ, ಇನ್ನು ಸರಿಸುಮಾರು 21 ಸೀಟುಗಳಲ್ಲಿ ಅದು ಯಾರನ್ನು ಗೆಲ್ಲಿಸಬೇಕು, ಯಾರನ್ನು ಸೋಲಿಸಬೇಕು ಎಂದು ನಿರ್ಣಯಿಸುವಂಥ `ಸಾಮಥ್ರ್ಯವನ್ನು ಹೊಂದಿದೆ. (ನನಗೆ ಮಾಹಿತಿ ಕೊಟ್ಟವರು ಒಬ್ಬ ಪ್ರಸಿದ್ಧ ಚುನಾವಣೆ ತಜ್ಞರು.) ಇದು ಅತ್ಯಂತ ಅಪಾಯಕಾರಿ ಸಾಮಥ್ರ್ಯ! ಇದು ಕೂಡ ಬೊಮ್ಮಾಯಿ ಅವರ ನೆನಪಿನಲ್ಲಿ ಇರಬೇಕಾದ ಸಂಗತಿ.

ಮುಖ್ಯಮಂತ್ರಿಯಾದ ಕೂಡಲೇ ಬೊಮ್ಮಾಯಿಯವರು ಹೋಗಿ ದೇವೇಗೌಡರನ್ನು ಭೇಟಿ ಮಾಡಿದ್ದಕ್ಕೆ ಅವರು ತಮ್ಮ ತಂದೆಯ ಸಮಕಾಲೀನರು ಎಂಬ ಒಂದೇ ಕಾರಣವಿಲ್ಲ. `ಯಡಿಯೂರಪ್ಪ ಅವರಿಂದ ತೊಂದರೆಯಾದರೆ ನೆರವಿಗೆ ಬರಲಿಎಂಬ ಕಾರಣವೂ ಇದೆ. ಬೊಮ್ಮಾಯಿ ಅವರು ಕೇಳುವುದಕ್ಕಿಂತ ಮುಂಚೆಯೇ ಗೌಡರು `ಭರವಸೆಯ ಮಾತುಗಳನ್ನುಆಡಿದ್ದಾರೆ. ಇದಕ್ಕೆ ಇತಿಹಾಸದಲ್ಲಿ ಒಂದು ಕಾರಣವೂ ಇದೆ: 1989ರಲ್ಲಿ ಎಸ್.ಆರ್.ಬೊಮ್ಮಾಯಿ ಅವರ ಸರ್ಕಾರವನ್ನು ಬೀಳಿಸಿದ `ಕಳಂಕದೇವೇಗೌಡರಿಗೆ ಅಂಟಿಕೊಂಡಿದೆ. `ಕಳಂಕವನ್ನು ಗೌಡರಿಗೆ ಕಳೆದುಕೊಳ್ಳಬೇಕಾಗಿದೆ ಮತ್ತು ತಾವು ಲಿಂಗಾಯತ ನಾಯಕರ ವಿರೋಧಿಯಲ್ಲ ಎಂದೂ ಅವರಿಗೆ ತೋರಿಸಬೇಕಾಗಿದೆ! ಹೀಗಾಗಿ ಕಾಂಗ್ರೆಸ್ ನಾಯಕರು ಹೇಳುವಂತೆ ಅಥವಾ ಬಯಸುವಂತೆ ಈಗಿನ ಬೊಮ್ಮಾಯಿ ಸರ್ಕಾರ ಅವಧಿಗಿಂತ ಮುಂಚೆ ಬೀಳುವ ಸಂಭವ ಬಹಳ ಕಡಿಮೆ.

ಬಸವರಾಜ ಬೊಮ್ಮಾಯಿ ಅವರಿಗೆ ಇರುವ ಒಂದು ಅನುಕೂಲ ಎಂದರೆ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಅವರು ಬಿಜೆಪಿಗೆ ಅಡ್ಡಿಯಾಗುವ ಸಾಧ್ಯತೆ ಇಲ್ಲ. ಏಕೆಂದರೆ ಬಿಜೆಪಿ ಬಿಟ್ಟರೆ ಏನಾಗಬಹುದು ಎಂಬುದನ್ನು ಅವರು ಈಗಾಗಲೇ ಅನುಭವಿಸಿದ್ದಾರೆ. ಅವರು 2012 ರಲ್ಲಿ ಕೆ.ಜೆ.ಪಿ ಕಟ್ಟಿ ಕೇವಲ ಎಂಟು ಸೀಟುಗಳಲ್ಲಿ ಮಾತ್ರ ಗೆದ್ದರು. ಈಗ ಅವರಿಗೆ ತಮ್ಮ ರಾಜಕೀಯ ಭವಿಷ್ಯ ಮುಗಿದಿದೆ ಎಂದು ಮನವರಿಕೆಯಾಗಿದೆ. ಅವರು, ಅಧಿಕಾರ ಬಿಟ್ಟುಕೊಡುವಾಗ ಕಣ್ಣೀರು ಹಾಕಿದ್ದು ತಮ್ಮ ಬಗೆಗೆ ಸಹಾನುಭೂತಿ ಸೃಷ್ಟಿಸಿಕೊಳ್ಳಲು ಮಾಡಿದ ತಂತ್ರದಂತೆ ಇದೆ.

ಏಕೆಂದರೆ, ಅವರ ಮುಂದೆ ಇರುವುದು `ಪ್ರೀತಿಯ ಮಗಬಿ.ವೈ.ವಿಜಯೇಂದ್ರನ ಭವಿಷ್ಯ. ಇಂದಲ್ಲ ನಾಳೆ ಅಥವಾ ಮುಂದಿನ ಚುನಾವಣೆ ನಂತರವಾದರೂ ಮಗನ ಭವಿಷ್ಯ ರೂಪುಗೊಂಡೀತು ಎಂದು ಅವರು ಆಶಿಸುತ್ತಾರೆ. ಬಿಜೆಪಿ ಹೈಕಮಾಂಡ್ ಅನ್ನು ಎದುರು ಹಾಕಿಕೊಂಡರೆ ತಾವು ಹೆಚ್ಚಿನದೇನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ತಿಳಿಯದಷ್ಟು ಅವರೇನು ದಡ್ಡರಲ್ಲ. ಅದಕ್ಕೆ ಅನುಗುಣವಾಗಿ ವಿಜಯೇಂದ್ರ ಅವರಿಗೆ ಏನಾದರೂ ಮಾಡುತ್ತೇವೆ ಎಂಬ ಭರವಸೆಯನ್ನೂ ಹೈಕಮಾಂಡ್ ಕೊಟ್ಟಿರಬಹುದು. 2023 ವಿಧಾನಸಭೆ ಚುನಾವಣೆಯಲ್ಲಿ ಮತ್ತು ಅದಕ್ಕಿಂತ ಹೆಚ್ಚಿಗೆ 2024 ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಬಿಜೆಪಿಗೆ ಯಡಿಯೂರಪ್ಪ ಒಂದು ಆಸ್ತಿ ಎಂದು ತಿಳಿಯದಷ್ಟು ಹೈಕಮಾಂಡ್ ನಾಯಕರೂ ದಡ್ಡರಲ್ಲ. ಇದು ಇಬ್ಬರಿಗೂ `ವಿನ್`ವಿನ್ಎನಿಸುವಂಥ ಸನ್ನಿವೇಶ. ಇದು ಬೊಮ್ಮಾಯಿ ಅವರ ತಲೆನೋವನ್ನು ತಕ್ಕಮಟ್ಟಿಗೆ ಕಡಿಮೆ ಮಾಡುವಂಥ ಸನ್ನಿವೇಶವೂ ಹೌದು.

ಬೊಮ್ಮಾಯಿ ಅವರ ನಾಯಕತ್ವದಲ್ಲಿಯೇ ಮುಂದಿನ ವಿಧಾನಸಭೆ ಚುನಾವಣೆಯನ್ನು ಎದುರಿಸುತ್ತೇವೆ ಎಂದು ಬಿಜೆಪಿ ನಾಯಕರು ಈಗಾಗಲೇ ಹೇಳಿರುವುದರಿಂದ ಮುಂದಿನ ಇಪ್ಪತ್ತು ತಿಂಗಳನ್ನು ಅವರು ತಂತಿಯ ಮೇಲಿನ ನಡಿಗೆಯ ಹಾಗೆಯೇ ನಿಭಾಯಿಸಬೇಕಾಗುತ್ತದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಬಸವರಾಜ ಬೊಮ್ಮಾಯಿ ಅವರನ್ನು ಹಿಡಿಯುವವರು ಯಾರೂ ಇರುವುದಿಲ್ಲ. ಏಕೆಂದರೆ ಅವರು ಇತಿಹಾಸವನ್ನೇ ನಿರ್ಮಿಸಿರುತ್ತಾರೆ!

*ಲೇಖಕರು ಪ್ರಜಾವಾಣಿಯ ನಿವೃತ್ತ ಕಾರ್ಯ ನಿರ್ವಾಹಕ ಸಂಪಾದಕರು ಮತ್ತು ಅಂಕಣಕಾರರು. ಇಂಗ್ಲಿಷ್ ಪ್ರಸಿದ್ಧ ಲೇಖಕ ಡಾ.ದೇವದತ್ತ ಪಟ್ಟನಾಯಕರ `ಸೀತಾ ರಾಮಾಯಣಸಚಿತ್ರ ಮರುಕಥನಕೃತಿಯನ್ನು ಕನ್ನಡಕ್ಕೆ ತಂದಿದ್ದಾರೆ.

Leave a Reply

Your email address will not be published.