ಹಲವು ವಿಶೇಷಗಳನ್ನು ಹೊತ್ತುಬಂದ 2020ರ ನೊಬೆಲ್ ಪುರಸ್ಕಾರಗಳು

-ಡಾ.ಟಿ.ಎಸ್.ಚನ್ನೇಶ್

ಆಲ್ಫ್ರೆಡ್ ನೊಬೆಲ್ ಮರಣ ಹೊಂದಿದ ತಿಂಗಳಾದ ಡಿಸೆಂಬರ್‍ನಲ್ಲಿ ಮಾತ್ರವೇ ಸಾಮಾನ್ಯವಾಗಿ ಪ್ರಶಸ್ತಿಯನ್ನು ಕೊಡಲಾಗುವುದು. ಆತ ಜನಿಸಿದ ಅಕ್ಟೋಬರ್ ತಿಂಗಳಲ್ಲಿ ಪ್ರಶಸ್ತಿಗಳು ಪ್ರಕಟಣೆಯಾಗುತ್ತವೆ. ಅಂತಯೇ ಈ ವರ್ಷದ ಬಹುಮಾನಗಳನ್ನು ಅಕ್ಟೋಬರ್ 5ರಿಂದ 12ನೆಯ ದಿನಾಂಕಗಳ ನಡುವೆ ಪ್ರಕಟಿಸಲಾಗಿದೆ.

ಅಕ್ಟೋಬರ್ ತಿಂಗಳು ಜಾಗತಿಕವಾಗಿ ಅನೇಕರ ಕಣ್ಣು-ಕಿವಿಗಳು ಸ್ವೀಡನ್ನಿನ ಸ್ಟಾಕ್‍ಹೋಂ ಕಡೆಗೆ ಇರುತ್ತವೆ. ನೊಬೆಲ್ ಸಮಿತಿಯೇ ಇಡೀ ಜಗತ್ತಿನ ಜನಸಮುದಾಯವನ್ನು ವಿಭಜಿಸಿರುವಂತೆ -ನೊಬೆಲ್ ಗಳಿಸಿದವರು ಮತ್ತು ನೊಬೆಲ್ ಗಳಿಸಬೇಕಿರುವವರು- ಎರಡೂ ಪಂಗಡದವರಿಗೂ ಆಸಕ್ತಿಯು ಸಹಜ. ಈ ವರ್ಷದ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಆರಂಭದ ದಿನಗಳಲ್ಲಿ ಅನುಮಾನಗಳಿದ್ದರೂ, ಹೇಗೂ ಆಗಸ್ಟ್-ಸೆಪ್ಟೆಂಬರ್ ವೇಳೆಗೇ ಆಯ್ಕೆಗಳು ಅಂತಿಮವಾಗುವುದರಿಂದ ಕಡೆಗೂ ಪ್ರಶಸ್ತಿಗಳ ಪ್ರಕಟಣೆಯಾಗಿದೆ. ಆದರೆ ಡಿಸೆಂಬರ್ ತಿಂಗಳಲ್ಲಿ ನಡೆಯಬೇಕಿದ್ದ ಪ್ರಶಸ್ತಿ ಪ್ರದಾನ ಸಮರಂಭವನ್ನು ಮಾತ್ರ ಮುಂದೂಡಲಾಗಿದೆ. ಹೆಚ್ಚೂ-ಕಡಿಮೆ ಮುಂದಿನ ಸಮಾರಂಭದ ಜೊತೆಗೆ ನಡೆಸಲಾಗುತ್ತದೆ.

ನೊಬೆಲ್-2020ರ ವಿಶೇಷತೆ ಎಂದರೆ ನಾಲ್ಕು ಜನ ಮಹಿಳೆಯರನ್ನು ಒಳಗೊಂಡಂತೆ ವಿಜೇತರಲ್ಲಿ ಒಟ್ಟು 11 ಜನರು ಹಾಗೂ ಒಂದು ಸಂಸ್ಥೆ. ವಿಜ್ಞಾನದ ಒಟ್ಟು 8 ಜನರಲ್ಲಿ ಮೂವರು ಮಹಿಳೆಯರು. ಅರ್ಥವಿಜ್ಞಾನದ ಇಬ್ಬರು ಗುರು-ಶಿಷ್ಯರು. ಅವರಲ್ಲಿ ಗುರುವಿಗೆ ಈಗಾಗಲೆ ಇಬ್ಬರು ನೊಬೆಲ್ ಪಡೆದ ಶಿಷ್ಯರಿದ್ದಾರೆ. ಈಗ ಮೂರನೆಯವರ ಜೊತೆ ಗುರುವೂ ಪಡೆದಿದ್ದಾರೆ. ರಸಾಯನ ವಿಜ್ಞಾನದ ವಿಜೇತರು ಇಬ್ಬರೂ ಮಹಿಳೆಯರೇ! ಭೌತವಿಜ್ಞಾನದಲ್ಲಂತೂ ಮಹಿಳೆಯರ ಪಾಲು ತುಂಬಾ ಕಡಿಮೆ ಎನ್ನುವದರಲ್ಲಿ ಈ ಬಾರಿ ನಾಲ್ಕನೆಯ ಮಹಿಳೆಯಾಗಿ ಪ್ರಶಸ್ತಿ ಪಡೆದಿದ್ದಾರೆ. ಸಾಹಿತ್ಯದ ಪುರಸ್ಕಾರದಲ್ಲಿ ಕವಿಯೊಬ್ಬರೂ ಮಹಿಳೆಯೇ. ಹೆಚ್ಚು ಜನರು ಅಮೆರಿಕ ದೇಶದವರೇ, 7 ವಿಜ್ಞಾನಿಗಳು. ಯೂರೋಪಿನ ಪಾಲು ನಾಲ್ಕು ಮಾತ್ರ. ಪೌರ್ಯಾತ್ಯ ದೇಶಗಳಿಗೆ ಪ್ರಾತಿನಿಧ್ಯವಿಲ್ಲ.

  1. ವೈದ್ಯವಿಜ್ಞಾನ ಪುರಸ್ಕಾರ

ಮೊಟ್ಟ ಮೊದಲು ಪ್ರಕಟವಾಗುವ ವೈದ್ಯಕೀಯ ಅಥವಾ ಶರೀರಕ್ರಿಯಾ ವಿಜ್ಞಾನದ ಬಹುಮಾನವು ದಿನಾಂಕ ಐದರಂದು ಪ್ರಕಟವಾಯಿತು. ಈ ವರ್ಷದ ವೈದ್ಯಕೀಯ ಪ್ರಶಸ್ತಿಯನ್ನು ಪ್ರೊ. ಹಾರ್ವಿ ಜೆ. ಆಲ್ಟರ್, ಪ್ರೊ. ಮೈಕೆಲ್ ಹ್ಯುಟನ್ ಮತ್ತು ಚಾಲ್ರ್ಸ್ ಎಂ. ರೈಸ್ ಹೆಪಟೈಟಸ್-ಸಿ ವೈರಸ್ ಕುರಿತ ಸಂಶೋಧನೆಗಾಗಿ ಹಂಚಿಕೊಂಡಿದ್ದಾರೆ.

ವರ್ಷವಿಡೀ ಕರೋನ ವೈರಸ್ಸಿನಿಂದ ಹೈರಾಣಾಗಿರುವ ಹೊತ್ತಿನಲ್ಲಿ ಅಂತಹ ವೈಜ್ಞಾನಿಕ ಶೋಧಗಳು ಪ್ರಮುಖ ಎಂಬುದು ಸಾಬೀತಾಗಿದೆ. ವೈರಸ್ಸುಗಳು ಇಂದಲ್ಲಾ, ಹಿಂದಿನಿಂದಲೂ ಜೀವ ಸಂಕುಲವನ್ನು, ವಿಶೇಷವಾಗಿ ಮಾನವ ಸಂಕುಲವನ್ನು ತೀವ್ರವಾಗಿ ಕಾಡುವಲ್ಲಿ ಹೆಸರಾಗಿವೆ. ಸಣ್ಣಗೆ ಕೆಮ್ಮು-ನೆಗಡಿಯಿಂದ ಆರಂಭಿಸಿ, ಉರಿಯೂತವನ್ನು ತಂದು, ಆ ಮೂಲಕ ಕ್ಯಾನ್ಸರನ್ನೂ ತರುವಲ್ಲಿ ಕಾರಣವಾಗಿವೆ. ಈಗಂತೂ ಜಗತ್ತನ್ನೇ ಆವರಿಸಿ ಸಾಂಕ್ರಾಮಿಕ ಪಿಡುಗನ್ನು ತಂದೊಡ್ಡಿವೆ. ಹಾಗಾಗಿ ವೈರಾಲಜಿಗೆ ವಿಜ್ಞಾನದ ಹೆಮ್ಮೆಯ ಬಹುಮಾನ ಈ ವರ್ಷವೇ ಬಂದುದು ಅಚ್ಚರಿಯಲ್ಲ.

ಹೆಪಟೈಟಿಸ್ ಎ ಮತ್ತು ಬಿ-ಯಿಂದ ಮುಂದುವರೆದು ರೋಗವನ್ನು ಮತ್ತಷ್ಟು ಅರ್ಥಪೂರ್ಣವಾಗಿ ವಿವರಿಸಿ, ಅದನ್ನು ಪತ್ತೆ ಹಚ್ಚುವ, ಪ್ರತ್ಯೇಕಿಸಿ ಅವಲೋಕಿಸುವ ಹಾಗೂ ಗುರಿಹೊಂದಿದ ಚಿಕಿತ್ಸೆಯನ್ನೂ ಸಾಧ್ಯಮಾಡಿದ ಅನುಶೋಧಕ್ಕಾಗಿ ಈ ಮೂವರೂ ಶ್ರೇಷ್ಠ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ವೈರಸ್ಸುಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಹಾಗೂ ಅವುಗಳಿಂದಾಗುವ ಪಿಡುಗನ್ನು ನಿರ್ವಹಿಸುವಲ್ಲಿ ಮೂವರ ಸಂಶೋಧನಾ ವಿವರಗಳು ವಿಜ್ಞಾನದಲ್ಲಿ ಮೈಲುಗಲ್ಲುಗಳಾಗಿವೆ. ಇದರಿಂದಾಗಿ ಪ್ರತಿವರ್ಷ ನಾಲ್ಕು ಲಕ್ಷ ಜನರ ಜೀವವನ್ನು ಉಳಿಸುವಲ್ಲಿ ನೆರವಾಗಿವೆ.

ಪ್ರೊ.ಹಾರ್ವಿ ಆಲ್ಟರ್ 1935ರಲ್ಲಿ ನ್ಯೂಯಾರ್ಕ್‍ನಲ್ಲಿ ಜನಿಸಿದರು. ರೊಚೆಸ್ಟರ್ ವಿಶ್ವವಿದ್ಯಾಲಯದ ವೈದ್ಯಕೀಯ ಸಂಸ್ಥೆಯಿಂದ ವೈದ್ಯಕೀಯ ಪದವಿ ಪಡೆದು ಮುಂದೆ ಇಂಟರ್‍ನಲ್ ಮೆಡಿಸನ್‍ಅಲ್ಲಿ ವಿಶೇಷ ತರಬೇತಿಯನ್ನು ಪಡೆದರು. ನಂತರ 1961ರಲ್ಲಿ ನ್ಯಾಷನಲ್ ಇನ್ಸ್ಸ್‍ಟಿಟ್ಯೂಟ್ ಆಫ್‍ಹೆಲ್ತ್ತ್ (ಎನ್.ಐ.ಎಚ್.) ನಲ್ಲಿ ಕ್ಲಿನಿಕಲ್ ಅಸೋಸಿಯೇಟ್ ಆಗಿ ಸೇರಿದವರು. ಅಲ್ಲಿಯೇ ರಕ್ತವನ್ನು ನೀಡುವ ವೈದ್ಯಕೀಯ ಸೇವೆಯ ವಿಭಾಗದಲ್ಲಿ ಪ್ರಸ್ತುತ ಹಿರಿಯ ಸಂಶೋಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರೊ.ಮೈಕೆಲ್ ಹೌಟನ್ ಬ್ರಿಟನ್ನಿನಲ್ಲಿ ಜನಿಸಿದವರು. ಲಂಡನ್ನಿನ ಕಿಂಗ್ಸ್ಸ್ ಕಾಲೇಜಿನಲ್ಲಿ ಪಿ.ಎಚ್.ಡಿ. ಗಳಿಸಿ ಅಲ್ಲಿಯೇ ಸಂಶೋಧಕರಾಗಿದ್ದರು. ಮುಂದೆ ಅಮೆರಿಕದ ‘ಚಿರಾನ್’ ಎಂಬ ಔಷಧ ಉದ್ಯಮದ ಪ್ರಯೋಗಾಲಯಕ್ಕೆ ಸೇರಿ ಸಂಶೋಧನೆಯನ್ನು ಮುಂದುವರೆಸಿದರು. ಹತ್ತು ವರ್ಷಗಳಿಂದ ಕೆನಡಾದ ಅಲ್ಬರ್ಟಾ ವಿಶ್ವವಿದ್ಯಾಲಯಕ್ಕೆ ಸೇರಿ ವೈರಸ್ಸುಗಳ ಸಂಶೋಧನೆಯನ್ನು ಮುಂದುವರೆಸಿದ್ದಾರೆ.

ಪ್ರೊ.ಚಾಲ್ರ್ಸ್ ರೈಸ್ ಅಮೆರಿಕದಲ್ಲಿ 1952ರಲ್ಲಿ ಜನಿಸಿದರು. ಅವರು ತಮ್ಮ ಪಿ.ಎಚ್.ಡಿ. ಪದವಿಯನ್ನು ಕ್ಯಾಲಿಫೋರ್ನಿಯಾ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಗಳಿಸಿದರು. ಅಲ್ಲಿಯೆ ಪೋಸ್ಟ್ ಡಾಕ್ಟೊರೆಲ್ ಸಂಶೋಧನೆಯನ್ನೂ ನಡೆಸಿ ಮುಂದೆ ವಾಶಿಂಗ್‍ಟನ್ ವಿಶ್ವವಿದ್ಯಾಲಯದ ವೈದ್ಯಕೀಯ ಸಂಸ್ಥೆಯನ್ನು ಸೇರಿದರು. ಅಲ್ಲಿಯೇ ಪ್ರೊಫೆಸರ್ ಆಗಿದ್ದ ರೈಸ್ ಮುಂದೆ 2001ರಲ್ಲಿ ರಾಕೆಫೆಲ್ಲರ್ ವಿಶ್ವವಿದ್ಯಾಲಯವನ್ನು ಸೇರಿ ಅಲ್ಲಿ ಹೆಪಟೈಟಿಸ್ ಅಧ್ಯಯನ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.

  1. ಭೌತವಿಜ್ಞಾನದ ಪುರಸ್ಕಾರ

ನಮ್ಮ ನಿಮ್ಮೆಲ್ಲರ ಕಣ್ಣಿಗೆ ಕಾಣುವುದೇ ಜಗತ್ತು ಎಂಬುದೇನೋ ಸಾಮಾನ್ಯ ಅನಿಸಿಕೆ. ಆದರೆ ಇಡೀ ವಿಶ್ವದಲ್ಲಿ ಕಾಣದ ಹಾಗೂ ಊಹೆಗೂ ಮೀರಿದ ಬಲು ದೊಡ್ಡ ಜಗತ್ತು ಕತ್ತಲಿನೊಳಗಾವರಿಸಿದೆ. ಅಷ್ಟು ಮಾತ್ರ ಅಲ್ಲ, ಆ ಕತ್ತಲು-ಬೆಳಕಿನಲ್ಲಿ ಕಾಣುವ ಎಲ್ಲಾ ವಸ್ತುಗಳ ಚಲನೆಯ ಹಾಗೂ ಇರುವಿಕೆಯ ಮೇಲೆ ಇನ್ನೂ ಅರಿಯಬೇಕಿರುವ ತಿಳಿವನ್ನೂ ತನ್ನ ಮಡಿಲಲ್ಲಿಟ್ಟುಕೊಂಡಿದೆ. ಆ ಗಾಢ ಕತ್ತಲಿನ ಬೆಳಕನ್ನು ಹುಡುಕುವ ಪ್ರಕ್ರಿಯೆ ಭೌತವಿಜ್ಞಾನದ ಬಹು ದೊಡ್ಡ ಗುರಿ. ಅದಕ್ಕಾಗಿ ನಿರಂತರವಾದ ಶತಮಾನಗಳ ಸಾಹಸವನ್ನು ಹಲವು ವಿಜ್ಞಾನಿಗಳು ಮಾಡುತ್ತಲೇ ಇದ್ದಾರೆ. ಅಂತಹ ಜಗತ್ತಿನ ತಿಳಿವನ್ನು ಗಣೀತೀಯ ನಿದರ್ಶನಗಳಿಂದ ಸಾಬೀತು ಮಾಡಿದ ಕಪ್ಪುಕುಳಿಗಳ ಕುರಿತ ಶೋಧ ಹಾಗೂ ಅವುಗಳಿರುವುದು ನಿಜವೇ, ನಮ್ಮ ಗೆಲಾಕ್ಸಿಯ ಕೇಂದ್ರದಲ್ಲೊಂದು ಇದೆ ಎಂಬ ಬಹುದೊಡ್ಡ ಗುಟ್ಟನ್ನು ದಶಕಗಳ ಪಟ್ಟುಬಿಡದೆ ಹುಡುಕಿ ಅನಾವರಣಗೊಳಿಸಿದ ಶೋಧಕ್ಕೆ ಈ ಬಾರಿಯ ಭೌತವಿಜ್ಞಾನದ ನೊಬೆಲ್ ಬಹುಮಾನ.

ಈ ವರ್ಷದ ಭೌತವಿಜ್ಞಾನದ ಪ್ರಶಸ್ತಿಯನ್ನು ಮೂವರು ವಿಜ್ಞಾನಿಗಳು ಹಂಚಿಕೊಂಡಿದ್ದಾರೆ. ಭೌತವಿಜ್ಞಾನದ ಅನುಶೋಧಕ್ಕಾಗಿ ಇವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರೊ.ರೋಜರ್ ಪೆನ್‍ರೋಜ್ ಅವರು ಕಪ್ಪುಕುಳಿ (ಬ್ಲಾಕ್‍ಹೋಲ್) ಇರುವಿಕೆಯ ಗಣೀತೀಯ ವಿವರಗಳಿಗೆ ಅರ್ಧ ಪ್ರಶಸ್ತಿಯ ಹಣ ಹಾಗೂ ಉಳಿದ ಅರ್ಧ ಮೊತ್ತವನ್ನು ಪ್ರೊ.ರೈನ್‍ಹಾರ್ಡ್ ಗೆಂಜಲ್ ಮತ್ತು ಪ್ರೊ.ಆಂಡ್ರಿಯಾ ಗೆಜ್ ಅವರ ಗೆಲಾಕ್ಸಿಯಲ್ಲಿ ಸೂಪರ್ ಮಾಸಿವ್ ವಸ್ತುವಿನ ಸಂಶೋಧನೆಗಾಗಿ ನೀಡಲಾಗಿದೆ. ಪ್ರೊ.ರೋಜರ್ ಪೆನ್‍ರೋಜ್ ಅವರು ಮೂಲತಃ ಗಣೀತೀಯ ಭೌತವಿಜ್ಞಾನಿ. ಬ್ರಿಟನ್ನಿನ ಕೆಂಬ್ರಿಜ್ ಅವರ ಕಾರ್ಯ ಕ್ಷೇತ್ರ. ಸ್ಟೀಫನ್‍ಹಾಕಿಂಗ್‍ರ ಗೆಳೆಯ/ಸಹಉದ್ಯೋಗಿ. ಪ್ರೊ.ರೈನ್‍ಹಾರ್ಡ್ ಗೆಂಜಲ್ ಮೂಲತಃ ಜರ್ಮನಿಯವರು. ಅಲ್ಲಿನ ಮ್ಯಾಕ್ಸ್ ಪ್ಲಾಂಕ್ ಸಂಸ್ಥೆ ಹಾಗೂ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಅವರ ಕಾರ್ಯಕ್ಷೇತ್ರ. ಪ್ರೊ.ಆಂಡ್ರಿಯಾ ಗೆಜ್ ಅವರು ಖಗೋಳ ಭೌತವಿಜ್ಞಾನಿ. ಸದ್ಯ ಲಾಸ್ ಎಂಜಲೀಸ್‍ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಖಭೌತ-ವಿಜ್ಞಾನ ಪ್ರಾಧ್ಯಾಪಕರಾಗಿದ್ದಾರೆ.

  1. ರಸಾಯನ ವಿಜ್ಞಾನ ಪ್ರಶಸ್ತಿ

ಇಬ್ಬರು ಹೆಣ್ಣುಮಕ್ಕಳು ಒಂದು ಕಡೆ ಸೇರಿದ್ದಾರೆಂದರೆ, ಬರೀ ಮಾತು ಇಲ್ಲವೇ ಜಗಳ! ಎರಡೇ ತಾನೇ? ಎನ್ನುವ ಮಾನವಕುಲದ ಇತಿಹಾಸದ ಉದ್ದಕ್ಕೂ ಆಡುತ್ತಿದ್ದ ಮಾತಿಗೆ ಇನ್ನು ಮುಂದೆ ಕತ್ತರಿ. ಹೌದು, ನಿಜಕ್ಕೂ (ಜೆನೆಟಿಕ್) ಕತ್ತರಿಯನ್ನೇ ಅನ್ವೇಷಿಸಿ ವಿಜ್ಞಾನದ ಇತಿಹಾಸದಲ್ಲಿ ಹೊಸ ಮೈಲಿಗಲ್ಲನ್ನೇ ನಿರ್ಮಿಸಿ -ಇಬ್ಬರು ಹೆಣ್ಣುಮಕ್ಕಳು, ವಿಜ್ಞಾನದ ಶಿಖರ ಪ್ರಾಯವಾದ ನೊಬೆಲ್ ಬಹುಮಾನವನ್ನು ಜೊತೆಯಾಗಿ ಪಡೆದಿದ್ದಾರೆ.

ಸುಂದರವಾದ ಬದುಕಿನಲ್ಲಿ ಹೆಣ್ಣನ್ನು ಗುರುತಿಸುವ ಸಂಸ್ಕೃತಿ ಹೊಸತೇನಲ್ಲ! ಆದರೆ ಬದುಕಿಗೊಂದು ಹೊಸ ಸೌಂದರ್ಯವನ್ನೇ ತಂದುಕೊಡಲು ಹೆಣ್ಣುಮಕ್ಕಳನ್ನು ಗುರುತಿಸುವುದು ಖಂಡಿತಾ ಹೊಸತು. ಬದುಕಿನ ಸಂಕೇತವನ್ನೇ ಬದಲಿಸಿ ಹೊಸ ಮೌಲ್ಯ ತಂದುಕೊಟ್ಟ ಅನ್ವೇಷಣೆಯಿಂದ ರಸಾಯನವಿಜ್ಞಾನ ನೊಬೆಲ್ ಬಹುಮಾನವನ್ನು ಮಡಿಲಿಗಿಳಿಸಿಕೊಂಡ ಇಬ್ಬರು ಹೆಣ್ಣುಮಕ್ಕಳಿವರು. ಒಬ್ಬರನ್ನೊಬ್ಬರು ಹುಡುಕಿಕೊಂಡು ಭೇಟಿಯಾಗಿ ಮುಂದೆ ದಶಕದ ಕಾಲ ಹೊತ್ತು-ಗೊತ್ತಿಲ್ಲದಂತೆ ಮಾತು-ಕತೆಯಾಡಿ ಜಗತ್ತಿನ ಜೀವರಾಶಿಯ ಜೀವನವನ್ನು ತಿದ್ದಬಲ್ಲ ತಂತ್ರವನ್ನು ಅನ್ವೇಷಿಸಿದ್ದಾರೆ.

ಇಬ್ಬರು ಸೇರಿ ಇಡೀ ಜೀವರಾಶಿಯ ಬದುಕನ್ನೇ ತಿದ್ದುವುದೆಂದರೇನು? ಎಂದು ಹುಬ್ಬೇರಿಸುವ ಅವಶ್ಯಕತೆಯಿಲ್ಲ. ಅದನ್ನೇ ಬಿಡಿಸಿ ಹೇಳಿದರೆ ಹೀಗನ್ನಬಹುದು. “ಅಯ್ಯೋ ಈ ಕಾಯಿಲೆಗೆ ಏನೂ ಮಾಡೊಕ್ಕಾಗೊಲ್ಲ, ಇದೆಲ್ಲಾ ಜೆನೆಟಿಕ್ಕೂ! ಇಂತಹದ್ದಕ್ಕೆ ಔಷಧಿಯೇ ಇಲ್ಲ. ಇದ್ದೊಷ್ಟು ದಿನ ಸುಖವಾಗಿ ನೋಡಿಕೊಳ್ಳಿ, ಆಮೇಲೆ ಹಣೆಬರಹವಿದ್ದಂಗೆ ಆಗುತ್ತೆ”, ಎನ್ನುವ ಮಾತಿಗೆ ಬದಲಾಗಿ, “ಇಲ್ಲ, ಇದೂ ಸಾಧ್ಯ! ಇದನ್ನೂ ಜೀನುಗಳಲ್ಲೇ ತಿದ್ದಿಯೂ ಸರಿಪಡಿಸಬಹುದು” ಎಂದು ಭಿನ್ನವಾಗಿ ಮಾತಾಡಲೂ ಆಗುವಂತಹ ಅನ್ವೇಷಣೆ. ಕಣ್ಣಿಗೆ ಕಾಣುವ ಈ ದಡೂತಿ ದೇಹವನ್ನು ಕಣ್ಣಿಗೆ ಕಾಣದ ಅತೀ ಸಂಕೀರ್ಣವೂ, ಸೂಕ್ಷ್ಮವೂ ಆದ ಪುಟ್ಟ ಪುಟ್ಟ ಕೋಶಗಳ ಒಳಗೆ ಇನ್ನೂ ಚಿಕ್ಕದಾದ ವಸ್ತುಗಳ ಮತ್ತಷ್ಟು ಸಂಕೀರ್ಣವಾದ ರಾಚನಿಕ ವಿನ್ಯಾಸದಲ್ಲೇ ತಿದ್ದಿ, ಸರಿಪಡಿಸಬಹುದಾದ ಅನ್ವೇಷಣೆ. ಸಿಂಪಲ್ಲಾಗಿ, ಜೀವಿಕೋಶದ ಒಳಗಿನ ಡಿ.ಎನ್.ಎ.ಯನ್ನೇ ಅವುಗಳ ಸಂಕೇತಗಳನ್ನು ಬದಲಿಸಿ, ಆ ಮೂಲಕ ಜೀವಿ ವರ್ತನೆಯನ್ನೇ ತಿದ್ದುವುದು ಎನ್ನಬಹುದು.

ಪ್ರೊ.ಎಮಾನ್ಯುಲ್ಲಾ ಶೆಪಂತೆರ್ ಮತ್ತು ಪ್ರೊ.ಜೆನಿಫರ್ ಡೌಡ್ನಾ ಅವರೇ ಈ ವರ್ಷದ ರಾಸಾಯನಿಕ ವಿಜ್ಞಾನದ ಪ್ರಶಸ್ತಿಯನ್ನು ಪಡೆದ ಇಬ್ಬರು ಮಹಿಳಾ ವಿಜ್ಞಾನಿಗಳು. ಪ್ರೊ.ಎಮಾನ್ಯುಲ್ಲಾ ಶೆಪಂತೆರ್ ಅವರು ಮೂಲತಃ ಫ್ರಾನ್ಸ್ ದೇಶದ ಮಹಿಳಾ ವಿಜ್ಞಾನಿ. ಜರ್ಮನಿಯ ಮ್ಯಾಕ್ಸ್ ಪ್ಲಾಂಕ್ ಸಂಸ್ಥೆಯು ಅವರ ಸದ್ಯದ ಕಾರ್ಯ ಕ್ಷೇತ್ರ. ಪ್ರೊ ಜೆನಿಫರ್ ಡೌಡ್ನಾ ಅವರು ಜೀವಿರಸಾಯನಿಕ ವಿಜ್ಞಾನಿ; ಸದ್ಯ ಬರ್ಕಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.

  1. ಸಾಹಿತ್ಯ ಪುರಸ್ಕಾರ

ಬರಹ ಎಂಬುದು ತನ್ನನ್ನು ತಾನೇ ಅರ್ಥೈಸಿಕೊಳ್ಳಲು, ಅನುಭವಿಸಿಕೊಳ್ಳ ಲು ಹುಡುಕಿಕೊಂಡ ಜೀವಂತ ಮಾರ್ಗ. ಬದುಕೆಂಬುದು ಕೇವಲ ಸೌಂದರ್ಯೋಪಾಸನೆಯಲ್ಲ. ದಿನವೂ ದಾಟುವ ಕಷ್ಟ-ಸುಖಗಳ ಹಾದಿಯನ್ನು ಜತನದಿಂದ ಉತ್ತಮಿಸಿಕೊಳ್ಳಲು ಕಲಿಯುವ ವಿಶ್ವಾಸ, ಎಂಬ ನಂಬಿಕೆ ಅಮೆರಿಕದ ಕವಿ ಲೂಯಿಸ್ ಗ್ಲಿಕ್‍ಗೆ. ಕೇವಲ ಸೌಂದರ್ಯದ ದನಿಯಾಗದೇ ನಿತ್ಯ ಕಾಡುವ ಎಲ್ಲಾ ಕಷ್ಟಗಳಲ್ಲೂ ಅಸ್ತಿತ್ವವನ್ನು ಕಾಪಾಡುವ ದನಿಯನ್ನು ಬೆಳೆಸಿದವರು. ಕಾವ್ಯದ ಅಥವಾ ಯಾವುದೇ ಬರಹದ ಮೂಲ ಪಠ್ಯದ ಮೊದಲ ಸಾಲು ಅಥವಾ ಸದ್ದು ಬರಹಗಾರರಿಗೇ ಕಿವಿಯಲ್ಲಿ ಅನುರಣಿಸಬೇಕು. ಆಗ ಅದು ಬೆಳೆದು ಪೂರ್ಣ ಪಾಠವಾಗಲು ಸಾಧ್ಯ. ಹಾಗಾಗಲು ಕಷ್ಟ-ಸುಖಗಳು ಕೇವಲ ಕಂಡ ಭ್ರಮೆಯಾಗದೆ ಅನುಭವದ ಪ್ರತಿಫಲನವಾಗಬೇಕು ಎಂಬ ದೃಢ ವಿಶ್ವಾಸದ ಕವಿಗೆ ಸಾಹಿತ್ಯದ ನೊಬೆಲ್.

ಗ್ಲಿಕ್ ಕಾಲೇಜು ಕಟ್ಟೆಯನ್ನು ಹತ್ತಿದರೂ, ಪದವಿಯನ್ನು ಪಡೆದವರಲ್ಲ. ಅವರು 1968ರಲ್ಲಿ ‘ಫಸ್ಟ್‍ಬಾರ್ನ್’  ಕಾವ್ಯ ಸಂಕಲವನ್ನು ಪ್ರಕಟಿಸುವುದರ ಮೂಲಕ ಕವಿಯಾಗಿ ಪಾದಾರ್ಪಣೆ ಮಾಡಿದರು. ಹಾಗೆಯೇ ಅತಿ ಶೀಘ್ರದಲ್ಲೇ ಅಮೆರಿಕಾದ ಸಮಕಾಲೀನ ಸಾಹಿತ್ಯದಲ್ಲಿ ಪ್ರಮುಖ ಕವಿಗಳಲ್ಲಿ ಒಬ್ಬರಾಗಿ ಮೆಚ್ಚುಗೆ ಪಡೆದರು. ಸುಮಾರು 14 ಕವಿತಾ ಸಂಕಲನಗಳನ್ನು ಎರಡು ಪ್ರಮುಖ ಗದ್ಯ ಸಂಕಲನಗಳನ್ನೂ ಪ್ರಕಟಿಸಿದ್ದಾರೆ. ಅವರು ಈಗಾಗಲೇ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ, ಅವುಗಳಲ್ಲಿ ಪುಲಿಟ್ಜೆರ್ ಪ್ರಶಸ್ತಿ (1993) ಮತ್ತು ರಾಷ್ಟ್ರೀಯ ಪುಸ್ತಕ ಪ್ರಶಸ್ತಿ (2014) ಪ್ರಮುಖವಾದವು. ಕೆಲವು ವಿಶ್ವವಿದ್ಯಾಲಯಗಳ ಗೌರವ ಡಾಕ್ಟೊರೇಟ್ ಕೂಡ ಅವರ ಮುಡಿಗೇರಿವೆ.

  1. ನೊಬೆಲ್ ಶಾಂತಿ ಪಾರಿತೋಷಕ

ವಿಶ್ವ ಆಹಾರ ಕಾರ್ಯಕ್ರಮ (Woಡಿಟಜ ಈooಜ Pಡಿogಡಿಚಿmme) 1963ರಲ್ಲಿ ಆರಂಭವಾದ ವಿಶ್ವದ ಆಹಾರ ಕುರಿತ ಕಾರ್ಯಕ್ರಮಗಳನ್ನು ಕೈಗೊಳ್ಳುವ ವಿಶ್ವಸಂಸ್ಥೆಯ ಅಂಗ ಸಂಸ್ಥೆ. ಇದು ವಿಶ್ವದ ಅತಿದೊಡ್ಡ ಮಾನವೀಯ ಸಂಘಟನೆಯಾಗಿದ್ದು ಹಸಿವನ್ನು ನೀಗಿಸುವ ಯೋಜನೆಗಳ ಮೂಲಕ ಆಹಾರ ಸುರಕ್ಷತೆಯನ್ನು ಉತ್ತೇಜಿಸುತ್ತದೆ. ಪ್ರತಿ ವರ್ಷ ಸುಮಾರು 88 ದೇಶಗಳಲ್ಲಿ ಸುಮಾರು 91.4 ದಶಲಕ್ಷ ಜನರ ಹಸಿವನ್ನು ನಿವಾರಿಸುವ ಕಾರ್ಯಯೋಜನೆಗಳನ್ನು ನಡೆಸುತ್ತಿದೆ. ಇದು ಇಟಲಿಯ ರೋಮ್ ನಗರದಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದ್ದು, ವಿಶ್ವದಾದ್ಯಂತ 80ಕ್ಕೂ ಹೆಚ್ಚು ದೇಶದ ಕಚೇರಿಗಳಿಂದ, ಅಲ್ಲಿನ ನಿವಾಸಿಗಳ ಕುಟುಂಬಗಳಿಗೆ ಸಾಕಷ್ಟು ಆಹಾರವನ್ನು ಉತ್ಪಾದಿಸಲು ಅಥವಾ ಪಡೆಯಲು ಸಾಧ್ಯವಾಗದ ಜನರಿಗೆ ಸಹಾಯ ಮಾಡಲು ಕೆಲಸ ಮಾಡುತ್ತದೆ.

ಹಸಿವನ್ನು ಎದುರಿಸುವ ಪ್ರಯತ್ನಗಳಿಗಾಗಿ, ಸಂಘರ್ಷ ಪೀಡಿತ ಪ್ರದೇಶ ಗಳಲ್ಲಿ ಶಾಂತಿಗಾಗಿ ಉತ್ತಮ ಪರಿಸ್ಥಿತಿಗಳನ್ನು ಒದಗಿಸಲು ಮತ್ತು ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸಿದ್ದಕ್ಕಾಗಿ ವಿಶ್ವ ಆಹಾರ ಕಾರ್ಯಕ್ರಮಕ್ಕೆ ಶಾಂತಿ ನೊಬೆಲ್ ಪ್ರಶಸ್ತಿಯನ್ನು ನೀಡಿದೆ. ಇದರಿಂದ ಪ್ರಸ್ತುತ ಜಗತ್ತು ಅನುಭವಿಸುತ್ತಿರುವ ಸಾಂಕ್ರಾಮಿಕತೆಯ ಭಯವನ್ನೂ ಜನಸಮುದಾಯವು ಸ್ವಯಂ ಪ್ರೇರಣೆಯಿಂದ ಆಹಾರದ ಬಳಕೆ ಮತ್ತು ತಿಳಿವಿನಲ್ಲಿ ನಿವಾರಿಸಿಕೊಳ್ಳಬಹುದಾದ ಸುಳಿವನ್ನು ಪರಿಭಾವಿಸಬಹುದಾಗಿದೆ. ಅದಕ್ಕೆಂದೇ ತಮ್ಮ ಆಯ್ಕೆಯನ್ನು ವಿಮರ್ಶಿಸಿಕೊಳ್ಳುವಾಗ ಸಮಿತಿಯು ಆಹಾರವು ಲಸಿಕೆಗಿಂತಲೂ ದೃಢವಾದುದೆಂಬ ವಿಶ್ವಾಸವನ್ನು ವ್ಯಕ್ತ ಪಡಿಸಿದೆ.

  1. ಅರ್ಥವಿಜ್ಞಾನದ ಪುರಸ್ಕಾರ

ಪುರಸ್ಕೃತರಾದ ಇಬ್ಬರೂ ಗುರು-ಶಿಷ್ಯರು ಅಮೆರಿಕದ ಸ್ಟ್ಯಾನ್‍ಫೊರ್ಡ್ ವಿಶ್ವ ವಿದ್ಯಾಲಯದಲ್ಲಿದ್ದಾರೆ. ಪ್ರೊ.ಪಾಲ್ ಮಿಲ್‍ಗ್ರಮ್ ಅವರು ಪಿಎಚ್.ಡಿಯನ್ನು ಪಡೆದದ್ದೇ ಪ್ರೊ.ರಾಬರ್ಟ್ ವಿಲ್ಸನ್ ಅವರ ಮಾರ್ಗದರ್ಶನದಲ್ಲಿ! ಪ್ರೊಫೆಸರ್ ರಾಬರ್ಟ್ ವಿಲ್ಸನ್ ಅವರ ಇಬ್ಬರು ವಿದ್ಯಾರ್ಥಿಗಳಿಗೆ ಈಗಾಗಲೆ ನೊಬೆಲ್ ಪ್ರಶಸ್ತಿ ಬಂದಿದೆ. ಇಬ್ಬರು ಶಿಷ್ಯರನ್ನು ನೊಬೆಲಾಗಿಸಿದ ನಂತರ ಮತ್ತೊಬ್ಬರನ್ನೂ ಶ್ರೇಷ್ಠರಾಗಿಸಿ ಅವರ ಜೊತೆಗೆ ನೊಬೆಲ್ ಪಡೆದ ವಿಶೇಷತೆ ರಾಬರ್ಟ್ ಅವರದ್ದು. ಗುರು ಒಬ್ಬ ತನ್ನ ಮೂವರು ಶಿಷ್ಯರಿಗೆ ನೊಬೆಲ್ ಪಡೆಯುವಷ್ಟು ಮಾರ್ಗದರ್ಶನ ಮಾಡಿ ಕಡೆಗೆ ಶಿಷ್ಯನ ಜೊತೆಗೆ ತಾವೂ ಪಡೆದಿದ್ದಾರೆ.

ಆಧುನಿಕ ಅರ್ಥವಿಜ್ಞಾನದ ಬೆಳವಣಿಗೆಗಳು ಶಾಸ್ತ್ರೀಯ ಅರ್ಥವಿಜ್ಞಾನದ ವಿದ್ಯಾರ್ಥಿಗಳಿಗೂ ಹೊಸತು ಅನ್ನಿಸುತ್ತವೆ. ಅಷ್ಟರಮಟ್ಟಿಗೆ ಅವುಗಳಲ್ಲಿ ಗಣಿತ ಹಾಗೂ ಕಂಪ್ಯೂಟರ್ ವಿಜ್ಞಾನಗಳು ಬೆಸೆದುಕೊಂಡಿವೆ. ಇಂದಿನ ದೈನಂದಿನ ಜೀವನದ ಬಹುಪಾಲು ನಿರ್ಧಾರಗಳು ಅವುಗಳು ನಿರ್ವಹಣೆಗೊಳ್ಳುತ್ತಿರುವ ವಿವಿಧ ಜ್ಞಾನಶಿಸ್ತುಗಳಿಂದ ವಿಕಾಸಗೊಂಡರೂ ಅವು ಅಂತಿಮವಾಗಿ ವ್ಯವಹಾರವನ್ನು ಜೊತೆಗೆ ಬೆಸುಗೆಗೊಂಡು ಅರ್ಥವಿಜ್ಞಾನದ ಸಂಕೇತಗಳಲ್ಲೇ ವಿಶ್ಲೇಷಣೆಗೊಳ್ಳುತ್ತವೆ. ಎಲ್ಲವೂ ಆರ್ಥಿಕ ಚೌಕಟ್ಟಿನ ನಿರ್ಧಾರಗಳಲ್ಲೇ ಅಂತಿಮವಾಗುತ್ತಾ ವ್ಯವಹಾರಗಳು ಸಂಕೀರ್ಣವಾಗುತ್ತಾ ಹೋಗುತ್ತಿವೆ. ಎಲ್ಲವೂ ವ್ಯವಹಾರಗಳೇ ಆಗಿ ಜೀವನವೇ ಸಂಕೀರ್ಣವಾಗುತ್ತಿದೆ.

ಎಲ್ಲವೂ ಖರೀದಿದಾರರು ಮತ್ತು ಮಾರಾಟಗಾರರ ನಡುವೆ ಹರಾಜು ಗಳಾಗಿ ಬಹುದೊಡ್ಡ ಮೌಲ್ಯಗಳನ್ನು ಒಳಗೊಂಡು ವ್ಯವಹಾರದಲ್ಲಿರುತ್ತವೆ. ಪಾಲ್ ಮಿಲ್‍ಗ್ರಮ್ ಮತ್ತು ರಾಬರ್ಟ್ ವಿಲ್ಸನ್ ಹರಾಜು ಸಿದ್ಧಾಂತವನ್ನು ಸುಧಾರಿಸಿದ್ದಾರೆ ಮತ್ತು ಹೊಸ ಹರಾಜು ಸ್ವರೂಪಗಳನ್ನು ಕಂಡುಹಿಡಿದಿದ್ದಾರೆ. ಆ ಸುಧಾರಣೆಗಾಗಿ ಈ ವರ್ಷದ ಅರ್ಥವಿಜ್ಞಾನದ ನೊಬೆಲ್‍ಪ್ರಶಸ್ತಿಯನ್ನು ಪಡೆದಿದ್ದಾರೆ.

*ಲೇಖಕರು ಶಿವಮೊಗ್ಗ ಸಮೀಪದ ನ್ಯಾಮತಿಯವರು; ವಿಜ್ಞಾನ ಲೇಖಕರು. ವಿಜ್ಞಾನದ ಸಂವಹನ ಮತ್ತು ಸಾಮಾಜೀಕರಣದ ಸಂಶೋಧನೆ ಹಾಗೂ ಅಧ್ಯಯನದಲ್ಲಿ ನಿರತರು. ಬೆಂಗಳೂರಿನ ಸೆಂಟರ್ ಫಾರ್ ಪಬ್ಲಿಕ್ ಅಂಡರ್‍ಸ್ಟ್ಯಾಂಡಿಂಗ್ ಆಫ್ ಸೈನ್ಸ್ ನಿರ್ದೇಶಕರು.

 

Leave a Reply

Your email address will not be published.