ಹಳಗನ್ನಡ

-ಅನಿಲಕುಮಾರ್ ಎನ್.

ಕರ್ಣಪಾರ್ಯನ ‘ನೇಮಿನಾಥಪುರಾಣ’

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಜನಪ್ರಿಯವಾದ ನೇಮಿನಾಥ ತೀರ್ಥಂಕರನ ಕತೆಯನ್ನು ಆಧರಿಸಿ ರಚನೆಯಾದ ನೇಮಿನಾಥ ಪುರಾಣಗಳ ಉಲ್ಲೇಖ ಸಾಕಷ್ಟು ಇವೆ. ಅದರಲ್ಲಿ ಕರ್ಣಪಾರ್ಯನ ಈ ಕಾವ್ಯ ಐತಿಹಾಸಿಕವಾಗಿ ಮತ್ತು ಕಥನದ ದೃಷ್ಟಿಯಿಂದ ಬಹು ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ.

ಹಳಗನ್ನಡದ ಪ್ರಸಿದ್ಧ ಚಂಪೂ ಕವಿಗಳಲ್ಲಿ ಕರ್ಣಪಾರ್ಯನೂ ಒಬ್ಬ. ನಮಗೆ ಈ ಹೆಸರಿನ ಹಲವು ಕವಿಗಳಿದ್ದರೆಂದು ತಿಳಿದುಬರುತ್ತದೆ. ಕ್ರಿ.ಶ. 1040ಕ್ಕಿಂತಲೂ ಹಿಂದೆ, ಮಾಲತೀಮಾಧವವೆಂಬ ಕೃತಿಯನ್ನು ರಚಿಸಿದ್ದ, ಇನ್ನೊಬ್ಬ ಕರ್ಣಪಾರ್ಯನು ಇದ್ದನು. ಆತನನ್ನು ಒಂದನೆಯ ಕರ್ಣಪಾರ್ಯನೆಂದು ಭಾವಿಸಿದರೆ, ನೇಮಿನಾಥಪುರಾಣವನ್ನು ಬರೆದ ಈ ಕರ್ಣಪಾರ್ಯ ಕವಿಯನ್ನು ಎರಡನೆ ಕರ್ಣಪಾರ್ಯ ಎಂದು ಕರೆಯಬಹುದಾಗಿದೆ.

12ನೇ ಶತಮಾನದ ಪೂರ್ವಾರ್ಧದಲ್ಲಿ ಜೀವಿಸಿದ ಕವಿ ಕರ್ಣಪಾರ್ಯನು ‘ನೇಮಿನಾಥಪುರಾಣ’ ಮತ್ತು ‘ವೀರೇಶಚರಿತೆ’ ಎಂಬ ಎರಡು ಚಂಪೂ ಕಾವ್ಯಗಳನ್ನು ರಚಿಸಿರುವಂತೆ ತಿಳಿದುಬರುತ್ತದೆ. ಆದರೆ ಈಗ ನೇಮಿನಾಥಪುರಾಣ ಮಾತ್ರ ದೊರೆತಿದ್ದು, ಇನ್ನೊಂದು ಉಪಲಬ್ಧವಿಲ್ಲ. ಕನ್ನಡ ಭಾಷೆಯಲ್ಲಿ ನೇಮಿನಾಥ ತೀರ್ಥಂಕರನ ಜೀವನ ವೃತ್ತಾಂತವನ್ನು ಆಧರಿಸಿ ಒಟ್ಟು ಎಂಟು ಪುರಾಣಗಳು ರಚನೆಗೊಂಡಿವೆ. ಪ್ರಾಕೃತ ಭಾಷೆಯಲ್ಲಿದ್ದ ಈ ಪುರಾಣಕಥೆಯನ್ನು ಜೀನಸೇನಾಚಾರ್ಯನು ಸಂಸ್ಕೃತ ಭಾಷೆಯಲ್ಲಿ ಒಂದು ಮಹಾಕಾವ್ಯವಾಗಿ ರಚಿಸಿದ. ಆತನ ಮಹಾಕಾವ್ಯದ ಹೆಸರು ಹರಿವಂಶ ಪುರಾಣ. ಅದರ ಆಧಾರದಿಂದ ಒಂದನೇ ಗುಣವರ್ಮನು ಕನ್ನಡದಲ್ಲಿ ‘ಹರಿವಂಶ’ ಮತ್ತು ‘ಶೂದ್ರಕ’ವೆಂಬ ಕಾವ್ಯಗಳನ್ನು ರಚಿಸಿರುವುದಾಗಿ ತಿಳಿದುಬರುತ್ತದಾದರೂ ಆ ಕೃತಿಗಳು ಉಪಲಬ್ಧವಿಲ್ಲ.

ನೇಮಿನಾಥ ಪುರಾಣಗಳ ಪರಂಪರೆಯಲ್ಲಿ ಈಗ ಅವುಗಳಲ್ಲಿ ಮೊದಲನೆಯದನ್ನು ರಚಿಸಿದ ಕವಿ ಕರ್ಣಪಾರ್ಯ. ಆದ್ದರಿಂದ ಈ ನೇಮಿನಾಥ ಪುರಾಣಕ್ಕೆ ವಿಶಿಷ್ಟವಾದ ಸ್ಥಾನ ಮತ್ತು ಐತಿಹಾಸಿಕ ಮಹತ್ವವಿದೆ. ಕರ್ಣಪಾರ್ಯನ ನಂತರದ ಕಾಲಘಟ್ಟದಲ್ಲಿ ಮಾರ್ಗ ಮತ್ತು ದೇಸಿ ಕಾವ್ಯಗಳಲ್ಲಿ ನೇಮಿನಾಥನ ಕಥೆ ಬೆಳೆದು ಬಂದಿದೆ. ವಸ್ತುಕವೆನಿಸಬಲ್ಲ ಕಾವ್ಯ ಪರಂಪರೆಯಲ್ಲಿ ಬಂಧುವರ್ಮನ ಹರಿವಂಶಾಭ್ಯುದಯ, ನೇಮಿಚಂದ್ರನ ಅರ್ಧನೇಮಿಪುರಾಣ, ಮಹಾಬಲಕವಿಯ ನೇಮಿನಾಥಪುರಾಣಗಳಿವೆ. ವರ್ಣಕವೆನಿಸುವ ಹಾಡುಗಬ್ಬದಲ್ಲಿ ಸಾಳ್ವಕವಿಯ ಸಾಳ್ವ ಭಾರತ (ನೇಮಿನಾಥ ಚರಿತ್ರೆ), ಮಂಗರಸನ ನೇಮಿಜಿನೇಶ ಸಂಗತಿ, ಇತ್ಯಾದಿ ಹೀಗೆ ಈ ವಸ್ತು ಕನ್ನಡದಲ್ಲಿ ಬೆಳೆದು ಬಂದಿರುವುದಕ್ಕೆ ಕರ್ಣಪಾರ್ಯನೂ ಪ್ರೇರಣಾ ಶಕ್ತಿಯಾಗಿದ್ದಾನೆ.

ಕವಿ ಕರ್ಣಪಾರ್ಯ (ಕಣ್ಣಪ್ಪ, ಕರ್ಣಪ್ಪ, ಕನ್ನಮಯ್ಯ, ಕಣ್ಣಪ್ಪಯ್ಯ, ಕಣ್ಣಮ ಎಂದು ಗುರುತಿಸಲ್ಪಟ್ಟಿದ್ದ) ಈತನ ಕಾಲ ಕ್ರಿ.ಶ.1140. ಈತನು ಈಗಿನ ಕೊಲ್ಲಾಪುರ ಪ್ರಾಂತದವನಾಗಿರಬೇಕೆAದು ಹಲವು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಕರ್ಣಪಾರ್ಯನು ಶಿಲಾಹಾರ ವಿಜಯಾದಿತ್ಯನ ಮಂತ್ರಿಯೂ ಮತ್ತು ಪರಮಜಿನಭಕ್ತನೂ ಆಗಿದ್ದಲಕ್ಷ್ಮೀಧರ (ಲಕ್ಷö್ಮ, ಲಕ್ಷ್ಮೀಧರ) ಎಂಬುವವನ ಆಶ್ರಯದಲ್ಲಿದ್ದವನು. ಲಕ್ಷ್ಮೀಧರ ಮತ್ತು ಅವನ ತಂದೆ ಶ್ರೀಭೂಷಣರ‍್ಯ ಮೊದಲಾದವರು ಕೃತಿ ರಚನೆಗೆ ಪ್ರೋತ್ಸಾಹಿಸಿದರು. ಕರ್ಣಪಾರ್ಯನ ಗುರು ಕಲ್ಯಾಣಕೀರ್ತಿ. ಇವನಿಗೆ ಭವ್ಯಜನವನ ಮಾರ್ತಾಂಡ, ಪರಮಜಿನ ಕ್ಷೀರವಾರಾಶಿ ಚಂದ್ರ, ಸಮ್ಯಕ್ತ÷್ವರತ್ನಾಕರ ಎಂಬ ಪ್ರಶಂಸನೋಕ್ತಿಗಳು ತುಂಬ ಮೆಚ್ಚಿಗೆೆಯಾಗಿರುವ ಬಿರುದುಗಳಾಗಿರುವಂತೆ ತೋರುವುವು.

ಕರ್ಣಪಾರ್ಯನಿಂದ ರಚನೆಗೊಂಡಿರುವ ‘ನೇಮಿನಾಥ ಪುರಾಣ’ ಒಂದು ಚಂಪೂ ಪ್ರಬಂಧ. ಇದರಲ್ಲಿ ಒಟ್ಟು 14 ಆಶ್ವಾಸಗಳಿವೆ. ಇವುಗಳಲ್ಲಿ 12ನೆಯ ಜನಾರ್ದನ ದಿಗ್ವಿಜಯ ವರ್ಣನವೆಂಬ ಆಶ್ವಾಸವು ಬಹು ದೊಡ್ಡದು (ಪದ್ಯ ಸಂಖ್ಯೆ 288). 13ನೆಯ ಕೇವಲಜ್ಞಾನೋತ್ಸವವರ್ಣನಂ ವೆಂಬ ಆಶ್ವಾಸವು ನೇಮಿನಾಥನ ಚರಿತೆಯ ನಿರೂಪಣೆಗೆ ಮೀಸಲಾಗಿದೆ. ಅವನ ವಿವಾಹ ಸಿದ್ಧತೆ, ಅದು ನಿಂತು ಅವನು ದೀಕ್ಷೆಪಡೆದು ತಪಸ್ಸು ಆಚರಿಸಿ ಕೈವಲ್ಯಜ್ಞಾನ ಪಡೆದದ್ದು-ಮುಂತಾದ ವಿಷಯಗಳಿರುವ ಬಹುಚಿಕ್ಕದಾದ (ಪದ್ಯ ಸಂಖ್ಯೆ 103) ಆಶ್ವಾಸವಾಗಿದೆ. ಕಾವ್ಯದ ಒಟ್ಟು ಪದ್ಯಗಳ ಸಂಖ್ಯೆ 2243. ಈ ಪದ್ಯಗಳ ನಡುನಡುವೆ ಸಣ್ಣ-ದೊಡ್ಡ ಪ್ರಮಾಣದ ಗದ್ಯ (ವಚನ) ಭಾಗಗಳು ಬರುವುದನ್ನು ಕಾಣಬಹುದಾಗಿದೆ. ಇಷ್ಟು ದೀರ್ಘವಾದ ಜೈನಪುರಾಣ ಹಳಗನ್ನಡದಲ್ಲಿ ಬೇರೊಂದು ರಚನೆಯಾಗಿರುವಂತೆ ಕಾಣುವುದಿಲ್ಲ.

ನೇಮಿನಾಥಪುರಾಣದ ಕಥಾವಸ್ತು 22ನೇ ಜೈನತೀರ್ಥಂಕರನಾದ ನೇಮಿನಾಥನ ಭವಾವಳಿಗಳು, ವರ್ತಮಾನದ ಭವಕ್ಕೆ ಹಾಗೂ ಪಂಚಕಲ್ಯಾಣಗಳ ವರ್ಣನೆಗಳಿಗೆ ಸಂಬAಧಿಸಿದ್ದಾಗಿದೆ. ಈ ಪುರಾಣದ ಒಂದು ವಿಶೇಷವೆಂದರೆ, ತೀರ್ಥಂಕರನ ಕತೆಯೊಂದಿಗೆ ಆತನ ಸೋದರ ಪುತ್ರರಾದ ಕೃಷ್ಣ,

ಬಲರಾಮರ ಭಾಗವತ ಕಥೆಯೂ ಹಾಗೂ ಕೌರವ-ಪಾಂಡವರ ಮಹಾಭಾರತದ ಕಥೆಯೂ ಜೊತೆ ಜೊತೆಗೆ ನಿರೂಪಣೆಗೊಂಡಿದೆ. ಭಾರತ-ಭಾಗವತ-ತೀರ್ಥಂಕರ ಚರಿತೆಗಳೆಂಬ ಮೂರು ಮೂಲಕಥೆಗಳ ತ್ರಿವೇಣಿ ಸಂಗಮವಾದರೂ, ನೇಮಿನಾಪುರಾಣವು ಮಹಾಭಾರತ, ಭಾಗವತಗಳ ಕತೆಗಳಿಗಿಂತ ಹಲವಾರು ಅಂಶಗಳಲ್ಲಿ ಭಿನ್ನವಾಗಿದೆ. ಆ ಮೂಲಕ ಜೈನ ಭಾರತಗಳ ಸ್ವರೂಪವು ಈ ಕಾವ್ಯದಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ.

ಕರ್ಣಪಾರ್ಯನು ನೇಮಿನಾಥಪುರಾಣದಲ್ಲಿ ನೇಮಿನಾಥನ ಚರಿತೆ ಮತ್ತು ಕೃಷ್ಣ, ಕೌರವ-ಪಾಂಡವರ ಕಥಾವಸ್ತುವಿನ ಜೊತೆಗೆ ಮಾನವನ ಸಾಮಾನ್ಯವಾದ ಅನೇಕ ಸಂಗತಿಗಳಿಗೆ ಹಾಗೂ ವರ್ತನೆಗಳಿಗೆ ಅವಕಾಶವಿರುವ, ಕೆಳವರ್ಗದ ಸಾಮಾಜಿಕರ ಆಸೆ-ಆಕಾಂಕ್ಷೆಗಳನ್ನು, ನಡೆ-ನುಡಿಗಳನ್ನು ದೌರ್ಬಲ್ಯ ಮತ್ತು ಮಾನವೀಯ ಮೌಲ್ಯಗಳನ್ನು ಅಭಿವ್ಯಕ್ತಿಗೊಳಿಸುವ ಅನೇಕ ಸನ್ನಿವೇಶಗಳಿವೆ, ಪಾತ್ರಗಳಿವೆ. ಇವನ್ನು ಕರ್ಣಪಾರ್ಯನು ತನ್ನ ಕೃತಿಯ ಮೂಲಕ ಚೆನ್ನಾಗಿ ಉಪಯೋಗಿಸಿಕೊಂಡಿದ್ದಾನೆ.

ಕರ್ಣಪಾರ್ಯನ ಕಾವ್ಯದ ಮೊದಲೆರಡು ಆಶ್ವಾಸಗಳಲ್ಲಿ ನೇಮಿನಾಥನ ಭವಾವಳಿಗಳಾದ ವಿಂಧ್ಯಕ-ವಾಗುರೆಯರ ವೃತ್ತಾಂತವೂ ಹರಿವಂಶದ ಜರಾಸಂಧ ಹಾಗೂ ಸಮುದ್ರವಿಜಯಾದಿಗಳ ಜನ್ಮ ವೃತ್ತಾಂತವೂ ವರ್ಣಿತವಾಗಿದೆ. ಮೂರನೆಯ ಆಶ್ವಾಸದಲ್ಲಿ ಬರುವ ಕಥಾ ಭಾಗವೆಂದರೆ ಕೌರವ ಪಾಂಡವರ ಜನ್ಮ ವೃತ್ತಾಂತಗಳು, ವಸುದೇವನ ದೇಶಾಂತರ ವಿಚಾರ, ಅವನು ಕೈ ಹಿಡಿದ ಕನ್ಯೆಯರ ವಿವರಗಳೊಂದಿಗೆ ವಸಂತತಿಲಕೆಯೆOಬ ವೇಶ್ಯೆ, ಚಾರುದತ್ತ-ರುದ್ರದತ್ತರೆಂಬ ವೈಶ್ಯರ ಸಂಬOಧವಾದ ವೃತ್ತಾಂತ ಮುಂತಾದವುಗಳು.

ನಾಲ್ಕನೆಯ ಆಶ್ವಾಸದಲ್ಲಿ ಗಂಧರ್ವದತ್ತೆಯ ಸ್ವಯಂವರ ಹಾಗೂ ವಾರುದತ್ತನ ಉದಾತ್ತಗುಣಗಳ ನಿರೂಪಣೆ ಕಂಸಜನನ ವೃತ್ತಾಂತದಲ್ಲಿ ಬರುವ ಜಾಲಗಾರ-ಮದ್ಯವಳಿತಿಯರ ಸಂಬAಧದ ಘಟನಾವಳಿಗಳು ನಿರೂಪಣೆಗೊಂಡಿವೆ. ಐದನೆಯ ಆಶ್ವಾಸದಲ್ಲಿ ಗಂಧರ್ವದತ್ತೆ- ವಸುದೇವರ ಮದುವೆ, ಸಮುದ್ರವಿಜಯ-ವಸುದೇವರ ಪುನರಾಗಮ, ಕಂಸನು ವಸುದೇವನಲ್ಲಿ ಧನುರ್ವಿದ್ಯೆಯನ್ನು ಕಲಿತದ್ದು, ಕಂಸ-ಜೀವOಜಸೆಯರ ವಿವಾಹ, ಕಂಸನು ತಂದೆಯ ಮೇಲಿನ ದ್ವೇಷದಿಂದ ಅವನನ್ನು ಬಂಧಿಸಿದ ವಿಚಾರ, ದೇವಕಿ ವಸುದೇವರ ಮಕ್ಕಳ ಪೂರ್ವಭವದಲ್ಲಿಯ ವಜ್ರಮುಷ್ಟಿ-ಮಂಗಿಯರ ವೃತ್ತಾಂತ ಇವುಗಳಿವೆ.

ಆರನೆಯ ಆಶ್ವಾಸದಲ್ಲಿ ವಸುದೇವ-ದೇವಕಿಯರ ವಿವಾಹ, ಕೃಷ್ಣಜನನ, ಕಂಸವಧೆ ಈ ಪ್ರಮುಖ ಘಟಾನಾವಳಿಗಳು ಹಾಗೂ ಕೃಷ್ಣಪುತ್ರನಾದ ಪ್ರದ್ಯುಮ್ನನ ಮಹಿಮಾತಿಶಯವನ್ನು ಸಾರುವ ಪ್ರಕರಣಗಳಲ್ಲಿ ಬರುವ ಮಲತಾಯಿ ಕಾಂಚನಮಾಲೆಯ ಸಹಜವಲ್ಲದ ಪ್ರೇಮಪ್ರಸಂಗ, ದುರ್ಯೋಧನನ ಮಗಳು ಉದಧಿಯ ಮದುವೆಯ ವಿಷಯದಲ್ಲಿ ವೃದ್ಧನಾವಿದನಾಗಿ ಪ್ರದ್ಯುಮ್ನನು ಮಾಡಿದ ಗೊಡ್ಡಾಟ, ವಿಕಟಾಂಗದ ಮುನಿಯರೂಪದಲ್ಲಿ ಸತ್ಯಭಾಮೆಯ ಮನೆಗೆ ಬಂದು ಆಕೆಯನ್ನು ಕಾಡಿದ್ದು ಮುಂತಾದ ವಿಲಕ್ಷಣ ಸರಸ ವಿದ್ಯಮಾನ ವಿಷಯಗಳ ನಿರೂಪಣೆಯಿದೆ.

ಏಳನೆಯ ಆಶ್ವಾಸದಲ್ಲಿ ಜರಾಸಂಧನು ತನ್ನ ಅಳಿಯನನ್ನು ಕೊಂದ ಕೃಷ್ಣನ ಮೇಲೆ ಸಾಧಿಸಿದ ಹಗೆತನ, ಶ್ರೀಕೃಷ್ಣನು ಸಮುದ್ರ ಮಧ್ಯದಲ್ಲಿ ದ್ವಾರಕೆಯನ್ನು ನಿರ್ಮಿಸಿ ಅಲ್ಲಿ ನೆಲೆಸಿದುದು, ಕೃಷ್ಣ-ಸತ್ಯಭಾಮೆಯರ ಪರಿಣಯ, ರುಕ್ಮಿಣಿಯೊಡನೆ ವಿವಾಹವಾದದ್ದು, ಪ್ರದ್ಯುಮ್ನನ ಚರಿತೆ ಇವು ಈ ಆಶ್ವಾಸದ ಕಥಾವಸ್ತು.

ಎಂಟನೆಯ ಆಶ್ವಾಸದಲ್ಲಿ ಪ್ರದ್ಯುಮ್ನ-ಉದಧಿಯರ ವಿವಾಹ, ಪ್ರದ್ಯುಮ್ನನು ರುಕ್ಮಿಣಿಯ ಅಣ್ಣನ ಮಗಳಾದ ವಿದರ್ಭೆಯನ್ನು ಅಪಹರಿಸಿದುದು ಇದರೊಂದಿಗೆ ಪಾಂಡವರನ್ನು ಕಂಡುಹಿಡಿಯಲು ವಿರಾಟನಗರಕ್ಕೆ ಹೋದ ಕೌರವರು ವಿರಾಟನ ಗೋಗ್ರಹಣದ ವಿಷಯಗಳ ನಿರೂಪಣೆಯಿದೆ. ಇದೇ ಆಶ್ವಾಸದಲ್ಲಿ ನೇಮಿನಾಥನ ಗರ್ಭಾವತರಣ, ಜನನ, ನಾಮಕರಣ ವಿಷಯಗಳಿವೆ.

ಒಂಬತ್ತನೇ ಆಶ್ವಾಸವು ನೇಮಿನಾಥನ ಬಾಲ್ಯವರ್ಣನೆ, ಕೌರವ ಪಾಂಡವರ ದ್ವೇಷ, ಇಂದ್ರಪ್ರಸ್ಥದಲ್ಲಿ ಪಾಂಡವರ ರಾಜ್ಯಭಾರ ಈ ವಿಷಯಗಳನ್ನೊಳಗೊಂಡಿದೆ. ಹತ್ತನೇಯ ಆಶ್ವಾಸದಲ್ಲಿ ದ್ವಾರವತಿ ಯಾದವಕುಟುಂಬನಾಶ, ಬಲದೇವ-ವಸುದೇವರ ತಬ್ಬಲಿತನ, ಕೃಷ್ಣನ ಮೃತ್ಯು ಮತ್ತು ಬಲರಾಮನ ಮನೋವೈಕಲ್ಯ, ಪಾಂಡವರ ಅಜ್ಞಾತವಾಸ, ಕುಂತಿ-ಕರ್ಣರ ಸಮಾಗಮ ಇವುಗಳನ್ನು ವರ್ಣಿಸಲಾಗಿದೆ.

ಹನ್ನೊಂದು ಮತ್ತು ಹನ್ನೆರಡನೆಯ ಆಶ್ವಾಸದಲ್ಲಿ ಯಾದವರು ಇನ್ನೂ ಬದುಕಿರುವ ವಿಷಯವು ಜರಾಸಂಧನಿಗೆ ತಿಳಿದದ್ದು, ಕುರುಕ್ಷೇತ್ರ ಯುದ್ಧ ವರ್ಣನೆಗಳಿವೆ. ಹದಿಮೂರು ಮತ್ತು ಹದಿನಾಲ್ಕನೆಯ ಆಶ್ವಾಸಗಳಲ್ಲಿ ನೇಮಿನಾಥನ ಚರಿತೆಯೇ ಹೆಚ್ಚು ನಿರೂಪಣೆಗೊಂಡಿದೆ. ನೇಮಿನಾಥನ ವಿವಾಹ ಸಿದ್ಧತೆ, ಅದು ನಿಂತು ಅವನು ದೀಕ್ಷೆಪಡೆದು ತಪಸ್ಸುಮಾಡಿ ಕೈವಲ್ಯಜ್ಞಾನ ಪಡೆದದ್ದು, ನೇಮಿನಾಥನ ನಿರ್ವಾಣ ಇವುಗಳ ಜೊತೆಗೆ ಪಾಂಡವರ ಭವಾವಳಿ ಮತ್ತು ಅವರು ದೀಕ್ಷೆವಹಿಸಿದ ವಿಚಾರ, ಅವರಿಗೆ ಕೈವಲ್ಯಪ್ರಾಪ್ತಿಯಾದದ್ದು ಈ ಆಶ್ವಾಸಗಳಲ್ಲಿ ನಿರೂಪಿತವಾದ ವಿಷಯ ವಸ್ತು.

ನೇಮಿನಾಥಪುರಾಣವು ಗಾತ್ರದಲ್ಲಿ ದೊಡ್ಡದಾಗಿದ್ದು, ಕವಿಯು ಕಥಾವಸ್ತುವಿನ ವರ್ಣನೆಯಲ್ಲಿ ನೇಮಿನಾಥನ ಚರಿತೆ, ಯಾದವರ, ಪಾಂಡವರು-ಕೌರವರ ಯಾವ ವಿಚಾರಗಳನ್ನು ಕೈಬಿಡಲಾರದವನಾದುದ್ದರಿಂದ ದೀರ್ಘವರ್ಣನೆಗಳ ಗೋಜಿಗೆ ಹೋಗುವುದಿಲ್ಲ. ಹೀಗಾಗಿ ಕತೆಯ ನಿರೂಪಣೆ ವೇಗ ಪಡೆದುಕೊಂಡಿದೆ. ವೇಗದ ಕಾರಣಕ್ಕೆ ವರ್ಣನೆಗೆ ಅವಕಾಶ ಕಡಿಮೆಯಾಗಿದೆ. ಕತೆಗೆ ವೇಗವಿದೆಯೆಂದು ಪಂಪ, ರನ್ನರಾದಿಯಾಗಿ ನಾಗಚಂದ್ರರ ಕೃತಿಗಳಂತೆ ಅದಕ್ಕೆ ರುಚಿಯಿಲ್ಲ, ಕಲೆಯ ಕುಸುರಿಲ್ಲ ಎಂದು ಹೇಳಲಾಗದು.

ಕವಿ ಕಾವ್ಯದ ಕೆಲವುಕಡೆ ಸುಂದರವಾದ ಪದ್ಯಗಳನ್ನು ರಚಿಸಿದ್ದಾನೆ. ಇಂತಹ ಕಡೆಗಳಲ್ಲಿ ಕವಿಯ ಕಾವ್ಯಶಕ್ತಿ ಪ್ರಕಟಗೊಂಡಿದೆ. ಅಂತಹ ಕೆಲವು ಪದ್ಯಗಳನ್ನು ಇಲ್ಲಿ ಗಮನಿಸಬಹುದಾಗಿದೆ. ನೇಮಿನಾಥನ ದೇಹಕಾಂತಿಯನ್ನು ಕವಿ ಒಂದು ಪದ್ಯದಲ್ಲಿ ಹೀಗೆ ವರ್ಣಿಸಿದ್ದಾನೆ:

‘ಚರಮತನು ದೀಪ್ತಿಯುಂ ಭಾ|

ಸುರ ಭೂಷಣಗಳ ಮರೀಚಿಚಯಮುಂ ಸೆಣಸಲ್|

ಕರಮೆಸೆದಿರ್ದಂ ಭುವನೇ|

ಶ್ವರನ್ ಅತುಳೋದಾರನಪ್ಪ ನೇಮಿಕುಮಾರಂ||

ಅಂದರೆ, ನೇಮಿನಾಥನ ಚರಮ ದೇಹಕಾಂತಿಯೂ ಸುಂದರವಾದ ಹಲವಾರು ಆಭರಣಗಳ ಪ್ರಭೆಯೂ ಒಂದನೊOದು ಸ್ಪರ್ಧಿಸುತ್ತಿರುವ ಹಾಗೆ ಅಸಾಮನ್ಯನೂ, ಜಗತ್ಪçಸಿದನ್ನು ಆದ ನೇಮಿನಾಥನು ಕಂಗೊಳಿಸುತ್ತಿದ್ದನು ಎಂದು ವರ್ಣಿಸಲಾಗಿದೆ. ವಸುದೇವನು ಮದುವೆಯಾದ ವಿಜಯ ವಿಜಯಸೇನರೆಂಬ ಇಬ್ಬರು ಕನ್ಯೆಯರ ಸೌಂದರ್ಯವನ್ನು ವರ್ಣಿಸುವಾಗ ಕವಿಯ ಒಂದು ಪದ್ಯ ಹೀಗಿದೆ:

ಸುರಕನ್ನೆಯರ್ ಈ ಕನ್ಯೆಯ|

ರುರು ಸೌಂದರ್ಯಕ್ಕೆ ಸೋಲ್ತು ಬಿಟ್ಟರ್ ಧರೆಯಂ|

ವರ ನಾಗಕನ್ನೆಯರ್ ಭೀ|

ಕರಿಯರ್ ಕಿಲ್ಪಿಟ್ಟು ಪೋಗಿ ಪೊಕ್ಕರ್ ನೆಲನಂ||

ವಿಜಯ ವಿಜಯಸೇನರೆಂಬ ಕನ್ಯೆಯರ ಅಗಾಧ ಸೌಂದರ್ಯಕ್ಕೆ ಸೋತು ನಾಚಿದ ದೇವಕನ್ಯಯರು ಭೂಮಿಯನ್ನು ಬಿಟ್ಟು ದೇವಲೋಕಕ್ಕೆ ಹೋದರು; ಇವರ ಲಲಿತ ಸೌಂದರ್ಯದ ಮುಂದೆ ಭಯಂಕರರOತೆ ಕಂಡ ನಾಗಕನ್ನಿಕೆಯರು ನೆಲದೊಳಗೆ ಹೋಗಿ ಅಡಗಿಕೊಂಡರು ಎಂಬ ವರ್ಣನೆಗಳಿವೆ. ಹಳಗನ್ನಡ ಕಾವ್ಯಗಳ ಅಷ್ಟಾದಶ ವರ್ಣನೆಯಲ್ಲಿ ಸಮುದ್ರ ವರ್ಣನೆಯೂ ಒಂದು. ಅದನ್ನು ತನ್ನ ಕಾವ್ಯದಲ್ಲಿ ಕವಿ ಹೀಗೆ ಹೇಳಿದ್ದಾನೆ:

ಜಳಮತೇಭ ಪ್ರತಾನ ಪ್ರಬಳತರಕರಾಸ್ಫಾಲನೋದ್ಬೂತ ವೀಚೀ

ಕುಳದಿಂ, ಪ್ರಕ್ಷೆÆÃಭೀತೋದ್ಯನ್ಮಕರನಿಕರ ಹಸ್ತಪ್ರಹಾರಪ್ರಭೂತೋ

ಚ್ಚಳಿತಾಂಭೋಬಿOದುಸOದೋಹದಿO, ಅಮಿತತಿಮಿಸ್ತೋಮದಿಂ, ಭೀಮನಕ್ರಾ

ವಳಿಯಿಂದಾಕೀರ್ಣಮಾದO ಸೋಗಯಿಪ ಲವಣಾಂಭೋಧಿ ಪೆಂಪಿAದಗಾಧO

ಎಂದರೆ, ನೀರಾನೆಗಳು ಸೊಂಡಿಲುಗಳಿOದ ಬಲವಾಗಿ ಹೊಡೆಯುತ್ತಿರುವುದರಿಂದ ಮೇಲೆದ್ದ ಅಲೆಗಳ ಸಮೂಹದಿಂದಲೂ, ಕೋಪದಿಂದ ಮೇಲೆದ್ದ ಮೊಸಳೆಗಳು ತಮ್ಮ ಕೈಗಳಿಂದ ನೀರನ್ನು ಬಡಿದ ಕಾರಣದಿಂದಲೂ ಮೇಲೆ ಹಾರಿದ ನೀರಿನ ಹನಿಗಳಿಂದಲೂ, ನಾನಾ ಬಗೆಯ ಮೀನುಗಳ ಸಮೂಹದಿಂದಲೂ, ಭಯಂಕರವಾದ ಮೊಸಳೆಗಳಿಂದಲೂ ಕೂಡಿದರೀತಿಯಲ್ಲಿ ಲವಣ (ಉಪ್ಪು) ಸಮುದ್ರವು ಶೋಭಿಸುತ್ತಿದ್ದಿತ್ತು. ಇಂತಹ ವರ್ಣನೆಯ ಕಡೆಗಳಲೆಲ್ಲ ಕರ್ಣಪಾರ್ಯನು ಸಹಜ ಸುಂದರ ಶೈಲಿಯಲ್ಲಿ ಉತ್ತಮ ಮಟ್ಟದ ನಾಟಕೀಯತೆಯ ಗುಣಗಳಿಂದ ಕಾವ್ಯ ನಿರೂಪಣೆ ಮಾಡಿರುವುದು ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ.

ಒಟ್ಟಾರೇ, ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಜನಪ್ರಿಯವಾದ ನೇಮಿನಾಥ ತೀರ್ಥಂಕರನ ಕತೆಯನ್ನು ಆಧರಿಸಿ ರಚನೆಯಾದ ನೇಮಿನಾಥ ಪುರಾಣಗಳ ಉಲ್ಲೇಖ ಸಾಕಷ್ಟು ಇವೆ. ಅದರಲ್ಲಿ ಕರ್ಣಪಾರ್ಯನ ‘ನೇಮಿನಾಥ ಪುರಾಣಂ’ ಎಂಬುದು ಐತಿಹಾಸಿಕವಾಗಿ ಮತ್ತು ಕಥನದ ದೃಷ್ಟಿಯಿಂದ ಬಹು ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ಈ ಎಲ್ಲ ಕಾರಣಗಳಿಂದ ಕರ್ಣಪಾರ್ಯನ ನೇಮಿನಾಥ ಪುರಾಣಂ ಕನ್ನಡ ಕಾವ್ಯ ಪರಂಪರೆಯಲ್ಲಿ ಬಹು ಮಹತ್ವದಾಗಿದೆ.

*ಲೇಖಕರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಭಾಷಾಧ್ಯಯನ ವಿಭಾಗದಲ್ಲಿ ಸಂಶೋಧನಾರ್ಥಿ. ಕವಿತೆಗಳ ರಚನೆ ಮತ್ತು ಹಳಗನ್ನಡ ಕಾವ್ಯ, ಕಥೆ-ಕಾದಂಬರಿಗಳ ಓದು ಹವ್ಯಾಸ.

Leave a Reply

Your email address will not be published.