ಹಳ್ಳಿಗಳ ಮೌಲ್ಯ ಬದುಕಿನ ಪಾಠವಾಗಲಿ

ಯಾವ ಶಿಕ್ಷಣ ಕ್ರಮದಲ್ಲೂ ಸಿಗದ ಬದುಕಿನ ಪಾಠ ಮಕ್ಕಳಿಗೆ ಹಳ್ಳಿಯಲ್ಲಿ ಸಿಗುತ್ತದೆ. ಹಳ್ಳಿ, ಹಳ್ಳಿಯ ರೈತ ಮತ್ತು ಆತನ ಬದುಕು ಕಲಿಸಿಕೊಡುವ ಪಾಠವನ್ನು ಯಾವ ಪ್ರತಿಷ್ಠಿತ ವಿಶ್ವವಿದ್ಯಾಲಯವೂ ಕಲಿಸಲಾರದು.

–  ಪರಮೇಶ್ವರಯ್ಯ ಸೊಪ್ಪಿಮಠ

ಇರುವೆಗಳ ಗೂಡು, ಪ್ರಾಣಿ ಪಕ್ಷಿಗಳ ಬದುಕಿನ ಕೌತುಕ, ಮೊಳಕೆ ಒಡೆದ ಬೀಜ, ಆಗ ತಾನೆ ಚಿಗುರಿದ ಎರಡೆಲೆಗಳು, ಹಾರುವ ದುಂಬಿಗಳು, ಹಾಡುವ ಪಕ್ಷಿಗಳು, ಹರಿಯುವ ನದಿ, ತುಂಬಿದ ಕೆರೆ, ಬೆಳೆದು ನಿಂತ ಪೈರು, ಭೂದೇವಿಯ ಸೊಗಸು, ರೈತನ ಬಾಳು, ದನ ಕರುಗಳು ಮೇಯುವ ವಿಧಾನ ಇವೆಲ್ಲಾ ಯಾವ ಫ್ಯಾಂಟಿಸಿ ಪಾರ್ಕ್‍ನಲ್ಲೂ ಮಕ್ಕಳಿಗೆ ಸಿಗಲಾರವು.

ರೊಟ್ಟಿ, ಚಟ್ನಿ, ಈರುಳ್ಳಿ ಜೊತೆಗಿನ ಊಟ, ಕೆನೆ ಮೊಸರಿನ ಸವಿ,ಮುದ್ದೆಯ ತಾಕತ್ತಿನ ಮುಂದೆ ಪಿಜ್ಜಾ, ಬರ್ಗರ್ ಏನೂ ಅಲ್ಲ ಎಂಬುದು ಮಕ್ಕಳಿಗೆ ತಿಳಿಯಬೇಕಿದೆ. ಹಳ್ಳಿಗಳಲ್ಲಿನ ಒಗ್ಗಟ್ಟು, ಅಲ್ಲಿನ ಶಿಸ್ತುಬದ್ಧ ಜೀವನ, ಸಹಕಾರದ ಬಾಳ್ವೆ, ಸದಾ ಸಹಾಯಕ್ಕೆ ಧಾವಿಸುವ ಗುಣ, ಪ್ರಕೃತಿಯಿಂದ ಅವರು ಕಲಿಯುವ ಪಾಠ, ಹಬ್ಬ ಹರಿದಿನಗಳ ಸೊಗಸು, ಮುಗ್ಧತೆಯಲ್ಲಿಯೆ ಅವರು ಅನುಭವಿಸುವ ಖುಷಿ, ಸಂಪೂರ್ಣವಾಗಿ ಹಳ್ಳಿಯೊಂದು ಮನೆಯಂತೆ ನಡೆದುಕೊಳ್ಳುವ ರೀತಿಯನ್ನು ಇಂದು ಮಕ್ಕಳು ಕಲಿತುಕೊಳ್ಳುವುದು ದೂರದ ಮಾತಾಗಿ ಪಾಲಕರ ಅಸಡ್ಡೆಯಿಂದ
ನೋಡುವ ಸೌಭಾಗ್ಯವೂ ಇಲ್ಲದಾಗಿದೆ

ಪ್ರಕೃತಿಯೊಂದಿಗೆ ಹೊಂದಿಕೊಂಡು ಅದನ್ನು ದೇವರೆಂದು ಪೂಜಿಸುವ ರೀತಿ, ಹಳ್ಳಿಯ ಜನರ ಪ್ರಕೃತಿಪರ ಕಾಳಜಿ, ಸೌಜನ್ಯ,ನಿಷ್ಠೆಯನ್ನು ಪ್ರತಿ ಮಕ್ಕಳೂ ಕಣ್ಣಾರೆ ನೋಡಬೇಕು. ನಮ್ಮ ಬದುಕಿಗೆ ಅನ್ನ ನೀಡಿ ಸಾಕುತ್ತಿರುವ ಈ ಹೊಲಗದ್ದೆಗಳು ಮತ್ತು ಅದರೊಳಗೆ ಒಂದಾಗಿ ದುಡಿಯುತ್ತಿರುವ ನೇಗಿಲಯೋಗಿಯ ಮುಂದೆ ಇನ್ನೋರ್ವ ಯೋಗಿ ಇಲ್ಲ ಎಂಬ ಸತ್ಯವನ್ನು ಮಗು ಅರಿಯಬೇಕು. ಮಕ್ಕಳಿಗೆ ಹಳ್ಳಿಗಳಲ್ಲಿನ ರೈತನ ಕಷ್ಟದ ಬದುಕನ್ನು ಪರಿಚಯಿಸಬೇಕು. ಮಳೆ ಬರದಿದ್ದರೆ, ಬೆಳೆ ನಾಶವಾದರೆ ತಮ್ಮ ಕತೆ ಮುಗಿಯಿತೆಂದು ಅವರೂ ಭಾವಿಸದೆ, ಮುಂದಿನ ಸುಂದರ ದಿನಗಳಿಗೆ ಕಾಯುವ ಮನೋಭಾವ ಮಕ್ಕಳಿಗೆ ಪರಿಚಯವಾಗಬೇಕು. ಇಂದು ಮಳೆಯ ಅಭಾವದಿಂದ ಬರಿದಾದ ಕೆರೆ, ಒಣಗಿದ ಬೆಳೆ, ನೀರಿನ ಕೊರತೆಯಿಂದ ಪರಿತಪಿಸುವ ಪಶು ಪಕ್ಷಿಗಳನ್ನು ನೋಡಿದ ಮಗು ಮುಂದೆ ಜಲ ಸಂರಕ್ಷಣೆಗೆ ಮಾಡೆಲ್ ಆಗುವುದರಲ್ಲಿ ಅನುಮಾನವಿಲ್ಲ.

ಕಂಪ್ಯೂಟರ್ ಕುಟ್ಟುವುದು ಇಲ್ಲವೇ ಸ್ಟೆಥಸ್ಕೋಪ್ ಹಿಡಿಯುವುದೇ ಜೀವನದ ಮಹಾನ್ ಗುರಿಯೆಂದುಕೊಂಡ ಮಗುವು ರೈತನನ್ನು, ಹಳ್ಳಿಯ ಬದುಕನ್ನು ನೋಡಿ ಇನ್ನೊಬ್ಬರಿಗಾಗಿ ಬದುಕುವುದೇ ನಿಜವಾದ ಬದುಕು ಎಂದು ಅರಿತುಕೊಳ್ಳಬೇಕಿದೆ. ದುಡ್ಡು ಮಾಡುವುದೇ ಜೀವನದ ಗುರಿ ಎಂದುಕೊಳ್ಳುತ್ತಾ, ತಮ್ಮ ವ್ಯಕ್ತಿತ್ವವನ್ನೇ ವ್ಯವಹಾರದ ಸರಕನ್ನಾಗಿಸಿಕೊಳ್ಳುವಂತೆ ಮಕ್ಕಳಿಗೆ ಪ್ರೇರಣೆ ನೀಡಲಾಗುತ್ತಿದೆ. ಆದರೆ ಯಾವ ಶಿಕ್ಷಣ ಕ್ರಮದಲ್ಲೂ ಸಿಗದ ಬದುಕಿನ ಪಾಠ ಮಕ್ಕಳಿಗೆ
ಹಳ್ಳಿಯಲ್ಲಿ ಸಿಗುತ್ತದೆ. ಹಳ್ಳಿ ಮತ್ತು ಹಳ್ಳಿಯೊಂದಿಗೆ ಬದುಕುವ ರೈತ ಮತ್ತು ಆತನ ಬದುಕು ಕಲಿಸಿಕೊಡುವ ಪಾಠವನ್ನು ಯಾವ ಪ್ರತಿಷ್ಠಿತ ವಿಶ್ವವಿದ್ಯಾಲಯವೂ ಕಲಿಸಿ ಕೊಡಲಾರದು ಎಂಬುದನ್ನು ಪೋಷಕರು ಮೊದಲು ಅರಿಯಬೇಕು.

ಮಗುವಿನ ಕೈ ಮಣ್ಣುಮುಟ್ಟುವುದು ಹೋಗಲಿ ಕಾಲನ್ನೂ ಮಣ್ಣಿನ ಜೊತೆ ಪಾಲಕರು ಬೆರೆಸುತ್ತಿಲ್ಲ. ಮನೆಯಲ್ಲಿಯೇ ಚಪ್ಪಲಿಗಳನ್ನು ಹಾಕಿಕೊಳ್ಳುತ್ತಾ, ಮಣ್ಣನು ಮುಟ್ಟಿದರೆ ಕೈ ತೊಳೆಸಲು ಅವರು ಪಡುವ ಪರಿಪಾಟಲು ಹೇಳತೀರದು. ಮಣ್ಣು ಮಗುವಿನ ಶತ್ರು ಎಂಬ ಭಾವನೆ ಬಿತ್ತಲಾಗುತ್ತಿದೆ. ನಿಧಾನವಾಗಿ ಈ ನಗರ ಸಂಸ್ಕೃತಿ ಹಳ್ಳಿಗೂ ಪ್ರವೇಶ ಪಡೆಯುತ್ತಿದೆ. ಕೃಷಿಯಿಂದ ಕೈ ಕಾಲು ಗಲೀಜು ಆಗುತ್ತವೆ. ನಮ್ಮ ಕಾಲಕ್ಕೆ ಇದು ಸಾಕು. ನೀನು ಬರೀ ಓದುವುದನ್ನು ಮಾಡಿ ದೊಡ್ಡ ಆಫಿಸರ್ ಆಗು ಎಂದು ಹೊಲದಿಂದ ದೂರಮಾಡುತ್ತಾ ಬೇಸಾಯವಂತೂ ಬೇಡವೇ ಬೇಡ ಎನ್ನುವವರು ನಮ್ಮ ನಡುವೆ ಹೆಚ್ಚಾಗುತ್ತಿದ್ದಾರೆ.

ಅದರ ಬದಲಾಗಿ ಮಗುವಿಗೆ ಮಣ್ಣಿನಲ್ಲಿ ಆಡುವುದಕ್ಕೆ ಬಿಡಬೇಕು. ಆ ಮಣ್ಣಿನ ಸೊಬಗಿನ ಸವಿಗಂಪನ್ನು ಮಗು ಅನುಭವಿಸಲಿ. ಮಣ್ಣಿನಜೊತೆ ಅಡುವ ಮಕ್ಕಳೊಂದಿಗೆ ಬೆರೆಯುವುದಕ್ಕೆ ಅವಕಾಶ ಮಾಡಿಕೊಡಿ. ಆ ಮಕ್ಕಳ ಬದುಕಿನೊಂದಿಗೆ ಮಗು ತನ್ನ ಬದುಕನ್ನು ಹೋಲಿಸಿಕೊಳ್ಳಲಿ. ಬಿಸಿಲಿನಲ್ಲಿ ಬೆವರಿದಲ್ಲಿ ಬೆವರಹನಿಗಳ ಪರಿಚಯವಾಗುತ್ತದೆ. ಆಟವೆಂದರೆ ಕೇವಲ ಕ್ರಿಕೆಟ್ ಅಥವಾ ವಿಡಿಯೋ ಗೇಮ್ಸ್ ಅಂದುಕೊಂಡಿರುವ ಮಗುವು ಹಳ್ಳಿಯ ಆಟಗಳಾದ ಗೋಲಿ, ಬುಗರಿ, ಚಿನ್ನಿದಾಂಡು, ಮರಕೋತಿ, ಚೌಕಬಾರ ಆಟಗಳ ಸಂತಸವನ್ನು, ಅವುಗಳ ಹಿಂದಿರುವ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂಬುದನ್ನು ನಮ್ಮ ಪಾಲಕರು ತಿಳಿಯಬೇಕು.

ಪಾಲಕರು ತಮ್ಮ ಕೆಲಸಕ್ಕೆ ಒಂದಷ್ಟು ದಿನ ರಜೆ ಹಾಕಿ ಮಕ್ಕಳೊಂದಿಗೆ ಹಳ್ಳಿಗೆ ಹೋಗುವುದು ಒಳ್ಳೆಯದು. ಮಕ್ಕಳು ಅಜ್ಜಅಜ್ಜಿಯರ ತೊಡೆಯ ಮೇಲೆ ತಮ್ಮ ರಜೆ ಕಳೆಯಲಿ. ಅವರ ಅಪ್ಪುಗೆ, ಸ್ಪರ್ಶದ ಅನುಭೂತಿಯನ್ನು ಯಾವ ಬೇಸಿಗೆ ಶಿಬಿರವೂ ಕೊಡುವುದಿಲ್ಲ. ಅವರು ಹೇಳುವ ಕಥೆಗಳ ಮುಂದೆ ಯಾವ ಕಾರ್ಟೂನ್ ಸಿನಿಮಾಗಳು ನಿಲ್ಲಲಾರವು. ಅವರ ಆ ನಿಷ್ಕಳಂಕ ಪ್ರೀತಿ ಮಗುವಿಗೆ ಬದುಕಿನುದ್ದಕ್ಕೂ ಜೊತೆಯಾಗಿರುತ್ತದೆ. ಈ ನಿಟ್ಟಿನತ್ತ ಪಾಲಕರು ಗಮನ ಹರಿಸಲಿ ಎಂದು
ಒಬ್ಬ ಶಿಕ್ಷಕನಾಗಿ ಆಶಿಸುವೆ.

*ಲೇಖಕರು ಶಿಕ್ಷಕರು ಹಾಗೂ ಹವ್ಯಾಸಿ ಬರಹಗಾರರು; ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮದಲ್ಲಿ ಎಂ.ಎ. ಮಾಡಿದ್ದಾರೆ.

Leave a Reply

Your email address will not be published.