ಹಸಿ ಮಣ್ಣ ಧ್ಯಾನ

ಬಿದ್ದಿದ್ದಾರೆ ಪೈಪೋಟಿಗೆ ಎಲ್ಲರೂ

ದುರ್ಬೀನು ಧರಿಸಿ ಹಸಿ ಮಣ್ಣ ಅರಸಿ

ಗುದ್ದಲಿ ಪೂಜೆ ನಡೆಸಿ ಲೇಪಿಸುತ್ತಿದ್ದಾರೆ ಡಾಂಬರು

ಫೌಂಡೇಶನ್ ಕ್ರೀಂ ಹಚ್ಚುವಂತೆ.

 

ಸಂಕಟ ಸುಲಭಕ್ಕೆ ದಕ್ಕುವ ಸಂಗತಿಯಲ್ಲವೀಗ

ಹಾರ ಬಯಸುವ ದೂಳ ಕಣಕಣದ ಚಡಪಡಿಕೆಗೆ

ಎಷ್ಟು ಚೆಂದ ಮಿರುಗು ಬಣ್ಣದ ಲೇಪ?

 

ಏದುಸಿರು ಬಿಡುವಾಗ ಬಿರುಬಿಸಿಲಿನಲ್ಲಿ

ರೂಪಾಂತರಗೊಂಡ ಪ್ರಾಣವಾಯು

ಹೇಳಿಕೊಡಲಾಗುತ್ತಿದೆ ಇಲ್ಲಿ ಎಳೆಯರಿಗೆ

ಚಿತ್ರಕ್ಕೆ ಬಣ್ಣ ತುಂಬುವ ಪಾಠ

ಫ್ಯಾನಿನಡಿಯಲ್ಲಿ ಕುಳ್ಳಿರಿಸಿ.

 

ತಲೆಯೆತ್ತಿದೆ ವಿಶಾಲ ಸಭಾಂಗಣ

ತೇವದ ಕುರುಹೇ ಸಿಗದಂತೆ

ಕೆರೆಯ ಸಮಾಧಿಯ ಮೇಲೆ.

ನಡೆಸುತ್ತಿದ್ದಾರೆ ಹಿರಿಯರು ಶುಷ್ಕ

ಸಮಾಲೋಚನೆ ಒಳಗೆ.

 

ಮೋಡ ಬಿತ್ತನೆ, ನದಿ ತಿರುವು

ಗಹನ ಚರ್ಚೆಯ ಕಾವು

ಎಸಿಯೊಳಗೂ ಸುರಿವ ಬೆವರು

ಸೈ ಎನ್ನಲಾಗದ ತೀರ್ಮಾನಕ್ಕೆ

ಮುಂದೂಡಲಾಗಿದೆ ಸಭೆ ನಾಳೆಗೂ.

 

ಎಲ್ಲಿಂದಲೋ ತೂರಿ ಬಂದ ಹಿಡಿ ಬೀಜವೀಗ

ಕಾದ ಟಾರು ರಸ್ತೆಯ ಮೇಲೆ ಬಿದ್ದು

ಪಟಪಟನೇ ಸಿಡಿದೇಳುತ್ತಿವೆ

ತಾಳ್ಮೆಗೆಟ್ಟು.

 

ಸಾವಿಗೆ ಸೆಡ್ಡು ಹೊಡೆದ ದೈತ್ಯ ಮಹಲುಗಳು

ದಿಟ್ಟಿಸುವಾಗ ಬಿಡುಗಣ್ಣಿನಿಂದ

ನಾನಿಲ್ಲಿ ಧ್ಯಾನಿಸುತ್ತಿರುವೆ

ತೊಂಡೆ, ಬೆಂಡೆ, ಬಸಳೆ..

ಬೇರು ಸೋಕುವ ಹಸಿಮಣ್ಣ.

 

ಫೋನಾಯಿಸಿದ್ದಾಳೆ

ಅಪಾರ್ಟ್ಮೆಂಟಿನ ಗೆಳತಿಯೊಬ್ಬಳು

ತುರ್ತಾಗಿ ತನ್ನ ಕುಂಡದ ತುಳಸೀ ಗಿಡಕ್ಕೆ

ಒಂದಿಷ್ಟು ಹಸಿ ಮಣ್ಣು.

 

ನಾನೀಗ ಉಮೇದಿಗೆ ಬಿದ್ದಿದ್ದೇನೆ

ಹಸಿ ಮಣ್ಣು ಹಂಚುವುದಕ್ಕಾಗಿ.

ಇಲ್ಲಿಯ ಮಣ್ಣು, ಅಲ್ಲಿಯ ಸಸಿ

ಬೇರಿಳಿಸಿ ಬಿಟ್ಟ ಉಸಿರು..

 

ಪವಡಿಸಲಿ ಜಗದ ಜಗಲಿಯಲ್ಲಿ

ಪ್ರಭುವೇ..

Leave a Reply

Your email address will not be published.