ಹಾಳೂರಿಗೆ ಉಳಿದವನೇ ಗೌಡ

-ಎಚ್.ಎಸ್.ದೊರೆಸ್ವಾಮಿ, ಹಿರಿಯ ಸ್ವಾತಂತ್ರö್ಯ ಹೋರಾಟಗಾರರು.

ಕಾಂಗ್ರೆಸ್ ಮುಕ್ತ ಭಾರತ ಅನಿವಾರ್ಯವೇ ಎಂಬುದು ಜ್ವಲಂತ ಪ್ರಶ್ನೆ. ಕುಟುಂಬ ರಾಜಕೀಯ ಈಗ ನೆಹರೂ ಮನೆತನಕ್ಕೆ ಮಾತ್ರ ಅನ್ವಯವಾಗುವುದಲ್ಲ. ದೇವೇಗೌಡರು, ಕರುಣಾನಿಧಿ, ಯಡಿಯೂರಪ್ಪನವರು, ಇವರೆಲ್ಲ ಇದೇ ಜಾಯಮಾನದವರವು. ತೆಲಂಗಾಣ, ಆಂಧ್ರಪ್ರದೇಶ, ಬಿಹಾರ, ಮಹಾರಾಷ್ಟ್ರಗಳಲ್ಲೂ ಈ ವ್ಯಾಧಿ ಇದ್ದದ್ದೇ. ಕುಟುಂಬ ರಾಜಕೀಯ ಕಾನೂನುರೀತ್ಯಾ ರದ್ದಾಗುವವರೆಗೂ ಈ ಪಿಡುಗಿನಿಂದ ನಮಗೆ ಮುಕ್ತಿಯಿಲ್ಲ.

ನಾನು ರಾಹುಲ್ ಗಾಂಧಿಯವರಿಗೆ ಈಚೆಗೆ ಒಂದು ಪತ್ರ ಬರೆದಿದ್ದೆ. “ನೀವು ಕಾಂಗ್ರೆಸ್ಸಿನ ಅಧ್ಯಕ್ಷರಾಗಿ, ಜವಾಹರಲಾಲ್‌ರ ಹಾಗೆ ಭಾರತದಾದ್ಯಂತ ಪ್ರವಾಸ ಮಾಡಿ ಕಾಂಗ್ರೆಸ್ಸನ್ನು ಸಶಕ್ತ ಸಂಸ್ಥೆಯನ್ನಾಗಿ ಸಂಘಟಿಸಿ. ಮೋದಿಯವರ ಸರ್ಕಾರದ ವಿರುದ್ಧ ಜೈಲ್ ಭರೋ ಕಾರ್ಯಕ್ರಮ ಹಾಕಿಕೊಳ್ಳಿ. ನೀವು ನಿಮ್ಮ ಇತರ ನಾಯಕರು ದೆಹಲಿಯಲ್ಲಿ ಕೂತು ಏನು ಮಾಡುತ್ತೀರಿ? ನಿಮಗೆ ಮನಸ್ಸಿದ್ದರೆ ಕಾಂಗ್ರೆಸ್ ಸಂಸ್ಥೆಯ ಚುಕ್ಕಾಣಿ ಹಿಡಿಯಿರಿ. ಇಲ್ಲವಾದರೆ ನಿಮ್ಮ ಕುಟುಂಬದವರಲ್ಲದ ಬೇರೆಯ ಅರ್ಹರಿಗೆ ಅಧ್ಯಕ್ಷ ಗಾದಿಯನ್ನು ಕೂಡಲೇ ಬಿಟ್ಟು ಕೊಡಿ. ನೀವು ಈ ಕೂಡಲೇ ಕಾರ್ಯತತ್ಪರರಾಗದಿದ್ದರೆ ಮೋದಿಯವರಿಗೆ ಅಧಿಕಾರವನ್ನು ಖಾಯಂ ಆಗಿ ಚಿನ್ನದ ತಟ್ಟೆಯಲ್ಲಿ ಕೊಟ್ಟು ಬಿಡುವಿರಿ’’ ಎಂದು.

ಮೋದಿಯವರಿಗೆ ಒಂದಲ್ಲ, ಎರಡು ಸಾರಿ ಪ್ರಧಾನಿಯಾಗುವ ಅವಕಾಶ ದೊರಕಿತು. ಅದಕ್ಕೆ ಕಾರಣ ಕಾಂಗ್ರೆಸ್ ಸಂಸ್ಥೆಯಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಆದ ಹಗರಣಗಳು, ಪ್ರಧಾನಿಯಾಗಿ ಅವರು ತಮ್ಮ ಸಂಪುಟದ ಮಂತ್ರಿಗಳಾಗಿದ್ದ ರಾಜಾ ಮತ್ತು ಮಾರನ್ ಇವರುಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದರೂ ಇವರಿಂದ ಹಗರಣಗಳು ನಡೆದುಹೋದರೂ ತೆಪ್ಪಗೆ ಕೂತರು. ಅವರನ್ನು ಕೂಡಲೇ ಸಂಪುಟದಿOದ ಹೊರದಬ್ಬುವ ಕೆಲಸ ಮಾಡಬೇಕಾಗಿತ್ತು. ಜನ ಇದಕ್ಕೆ ರೋಸಿ ಹೋಗಿ ಮೋದಿಗೆ (ಬಿಜೆಪಿಗೆ) ಮತ ಹಾಕಿ ಕಾಂಗ್ರೆಸ್ಸನ್ನು ಸೋಲಿಸಿದರು. ಬಿಜೆಪಿಯವರ ಅಥವಾ ಮೋದಿ-ಶಾಗಳ ಜನಪ್ರಿಯತೆಗಾಗಿ ಹಾಕಿದ ಓಟಲ್ಲ ಅದು. ಕಾಂಗ್ರೆಸ್ ಮೇಲಿನ ಬೇಸರಕ್ಕಾಗಿ ಹಾಕಿದ ಓಟು.

ಮೋದಿಯವರು ಅಧಿಕಾರಕ್ಕೆ ಬಂದ ಕೂಡಲೇ ಕೈಗೊಂಡ ತೀರ್ಮಾನ, ಕಾಂಗ್ರೆಸ್ಸನ್ನು ಹೇಳ ಹೆಸರಿಲ್ಲದಂತೆ ಮಾಡುವುದು. ರಾಹುಲ್ ಗಾಂಧಿ ಇದನ್ನು ಒಂದು ಸವಾಲಾಗಿ ಸ್ವೀಕರಿಸಬೇಕಾಗಿತ್ತು. ಅವರು ನಿಷ್ಕ್ರಿಯರಾದರು. ಪ್ರಾಂತಗಳಲ್ಲಿರುವ ಕಾಂಗ್ರೆಸ್ ನಾಯಕರು ಚುನಾವಣೆ ಬಂದಾಗ ಮಾತ್ರ ಚುರುಕಾಗಿ ಕೆಲಸ ಮಾಡುವವರೇ ಹೊರತು ಸಂಸ್ಥೆ ಕಟ್ಟಲು ಸಹಾಯ ನೀಡಲು ತಯಾರೇ ಇಲ್ಲ.

ನಾವು ಈಗ ಮೋದಿಯವರ ಚುನಾಯಿತ ಸರ್ವಾಧಿಕಾರಿ ಸರ್ಕಾರದ ಅಧೀನದಲ್ಲಿ ಇದ್ದೇವೆ. ಇದರಿಂದ ಪಾರಾಗುವುದು ನಮ್ಮ ಆದ್ಯತೆಯ ಆಯ್ಕೆಯಾಗಬೇಕು. ಪ್ರಾಂತೀಯ ಪಕ್ಷಗಳಿಗೆ ವ್ಯಾಪಕತೆ ಇಲ್ಲ. ಅವು ಕೂಪ ಮಂಡೂಕಗಳಾಗಿವೆ. ಆಮ್ ಆದ್ಮಿ ಪಕ್ಷ ದೆಹಲಿ, ಪಂಜಾಬಿಗೆ ಸೀಮಿತವಾಯಿತು. ಉಳಿದೆಡೆ ಅವರಿಗೆ ಬೇರೂರಲು ಆಗಿಲ್ಲ. ಕಮ್ಯುನಿಸ್ಟ್ ಪಕ್ಷ ಕೇರಳಕ್ಕೆ ಸೀಮಿತ. ಬಿಹಾರದಲ್ಲಿ ವಿಂಡ್ ಫಾಲ್ ಆಗಿ ಕಮ್ಯುನಿಸ್ಟ್ ಪಕ್ಷಕ್ಕೆ ದೊರೆತಿರುವುದು 8 ಸ್ಥಾನಗಳು ಮಾತ್ರ.

ಹಾಳೂರಿಗೆ ಉಳಿದವನೇ ಗೌಡ ಎನ್ನುವ ಹಾಗೆ ಕಾಂಗ್ರೆಸ್ ಒಂದೇ ಸದ್ಯದಲ್ಲಿ ಅಖಿಲ ಭಾರತ ಸಂಸ್ಥೆ. ಅದು ದುರದೃಷ್ಟವಶಾತ್ ಗಾಢ ನಿದ್ದೆಯಲ್ಲಿದೆ. ಅದಕ್ಕೆ ಕೂಡಲೇ ಜೀವ ತುಂಬಿದರೆ ಮಾತ್ರ ದೇಶ ಚುನಾಯಿತ ಸರ್ವಾಧಿಕಾರದಿಂದ ಮುಕ್ತವಾಗಬಹುದು. ದೇವರೇ ಕಾಂಗ್ರೆಸ್ ನಾಯಕರಿಗೆ ಸದ್ಬುದ್ಧಿ ಕೊಡಬೇಕು.

ಜನ ಪ್ರಜಾಪ್ರಭುತ್ವವನ್ನು ಉಳಿಸಲು ಮುಂದಾಗುವರೇ ಎಂದರೆ ಅವರು ಉನ್ಮಾತಾವಸ್ಥೆಯಲ್ಲಿದ್ದಾರೆ. ನಮ್ಮದು ಕುಂಭಕರ್ಣ ಪ್ರಜಾಪ್ರಭುತ್ವವಾಗಿತ್ತು. ಅಣ್ಣಾ ಹಜಾರೆ ಬಂದು ಈ ಭಾರತೀಯ ಕುಂಭಕರ್ಣರನ್ನು ಎಬ್ಬಿಸಿದ್ದರು. ಅವರು ಮಲಗಿಯೇ ಇದ್ದಿದ್ದರೆ ಚೆನ್ನಾಗಿತ್ತೇನೋ. ನಿದ್ದೆಯಿಂದ ಎದ್ದವರನ್ನು ಮೋದಿಯವರು ಉನ್ಮಾದ ಸ್ಥಿತಿಗೆ ಕೊಂಡೊಯ್ಯಲು ಸಕಲ ಪ್ರಯತ್ನವನ್ನು ಮಾಡುತ್ತಿದ್ದಾರೆ. ಈ ನಮ್ಮ ಈ ಮತದಾರರನ್ನು ಉನ್ಮಾದ ಸ್ಥಿತಿಯಿಂದ ಪಾರುಮಾಡದಿದ್ದರೆ ಜನ ಮುಂದೆ ಚುನಾಯಿತ ಸರ್ವಾಧಿಕಾರಿಗಳ ತುಳಿತಕ್ಕೆ ಸಿಕ್ಕಬೇಕಾದ ಅನಿವಾರ್ಯತೆ ಉಂಟಾದೀತು.

ಕಾಂಗ್ರೆಸ್ ಇಂದು ಎಲ್ಲ ವಿರೋಧ ಪಕ್ಷಗಳನ್ನು ಒಂದುಗೂಡಿಸುವ ವರ್ಚಸ್ಸು ಹೊಂದಿಲ್ಲ. ಒಂದು ಕಾಲದಲ್ಲಿ ಸಾರ್ವಭೌಮ ಪಕ್ಷವಾಗಿದ್ದ ಕಾಂಗ್ರೆಸ್ಸು ತನ್ನ ಆ ಸ್ಥಾನ ಕಳೆದುಕೊಂಡಿದೆ. ಇನ್ನೂ ಕೆಲವು ವರ್ಷಗಳ ಕಾಲಾವಕಾಶವಿದೆ. ಅಷ್ಟರಲ್ಲಿ ಅದು ತನ್ನ ವರ್ಚಸ್ಸನ್ನು ಬೆಳೆಸಿಕೊಳ್ಳದಿದ್ದರೆ ಈ ದೇಶ ಕಾಂಗ್ರೆಸ್‌ಮುಕ್ತ ರಾಜ್ಯವಾಗುವುದರಲ್ಲಿ ಸಂದೇಹವಿಲ್ಲ.

Leave a Reply

Your email address will not be published.