ಹಿಂದುತ್ವ ಅಸ್ಮಿತೆ ಮತ್ತು ಮಹಿಳೆ

-ಡಾ. ಜ್ಯೋತಿ

ಮಾರ್ಚ್ 08 ವಿಶ್ವ ಮಹಿಳಾ ದಿನ. ನಮ್ಮ ದೇಶದ ಮಟ್ಟಿಗೆ ಹೇಳುವುದಾದರೆ, ಈ ಸಂದರ್ಭದಲ್ಲಿ ಆಗಬೇಕಾದ ಮುಖ್ಯ ಚರ್ಚೆ- ಹೆಚ್ಚುತ್ತಿರುವ ಹಿಂದುತ್ವ ಪ್ರಾಬಲ್ಯ, ಮಹಿಳಾ ಸಬಲೀಕರಣಕ್ಕೆ ಪೂರಕವೇ ಅಥವಾ ಮಾರಕವೇ?

ಮಾರ್ಚ್ 08 ವಿಶ್ವ ಮಹಿಳಾ ದಿನ. ಆ ದಿನದಂದು ಸಾಮಾನ್ಯವಾಗಿ, ಪ್ರಪಂಚದಾದ್ಯಂತ ಸಂಘ ಸಂಸ್ಥೆಗಳು ಇತಿಹಾಸದ ಮಹಿಳಾ ಸಾಧಕಿಯರನ್ನು ನೆನಪಿಸಿಕೊಳ್ಳುತ್ತಾ, ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆ ಮುನ್ನೆಡೆಯಬೇಕಾದ ದಾರಿಯ ರೂಪುರೇಶೆಗಳನ್ನು ವಿಶ್ಲೇಸುತ್ತವೆ. ನಮ್ಮ ದೇಶದ ಮಟ್ಟಿಗೆ ಹೇಳುವುದಾದರೆ, ಈ ಸಂದರ್ಭದಲ್ಲಿ ಆಗಬೇಕಾದ ಮುಖ್ಯ ಚರ್ಚೆ-ಹೆಚ್ಚುತ್ತಿರುವ ಹಿಂದುತ್ವ ಪ್ರಾಬಲ್ಯ, ಮಹಿಳಾ ಸಬಲೀಕರಣಕ್ಕೆ ಪೂರಕವೇ ಅಥವಾ ಮಹಿಳೆಯರನ್ನು ಹಿಂದಕ್ಕೆ ತಳ್ಳುತ್ತಿದೆಯೇ?

ಪ್ರಾಸ್ತಾವಿಕವಾಗಿ ಹೇಳುವುದಾದರೆ, ಯಾವುದೇ ಧರ್ಮವಾಗಲಿ ಮಹಿಳೆಯರಿಗೆ, ಗಂಡಸಿನ ಸರಿಸಮಾನ ಸ್ಥಾನಮಾನ ನೀಡಿಲ್ಲ. ಅಲ್ಲೊಂದು, ಇಲ್ಲೊಂದು ಸಶಕ್ತ ಮಹಿಳೆಯರ ಹೆಸರು ಪ್ರಸ್ತಾಪನೆಯಾದರೂ ಕೂಡ, ಸಮಗ್ರ ಮಹಿಳಾ ಸಬಲೀಕರಣದತ್ತ ಮನಃಪೂರ್ವಕ ಪ್ರಯತ್ನಗಳಾಗಿಲ್ಲ. ಯಾಕೆಂದರೆ, ಧರ್ಮದ ಮುಖ್ಯ ತಿರುಳೇ ಮನುಷ್ಯ ಜೀವನದ ನಿಯಂತ್ರಣ. ಹೆಚ್ಚಾಗಿ, ಧರ್ಮಗ್ರಂಥಗಳ ಕರ್ತೃ ಗಂಡಸಾದ್ದರಿಂದ, ಈ ನಿಯಂತ್ರಣಗಳೆಲ್ಲಾ ಸಾಮಾನ್ಯವಾಗಿ ಮಹಿಳೆಯರ ಮೇಲೆ ಹೇರಲಾಗಿದೆ.

ಹಾಗಾಗಿ, ಧರ್ಮದ ಶಿಷ್ಟಾಚಾರಗಳಿಂದ ಮಹಿಳೆಯರನ್ನು ಸ್ವಲ್ಪಮಟ್ಟಿಗೆ ಬಿಡುಗಡೆ ಗೊಳಿಸಿದ್ದು ವಿಜ್ಞಾನ ಪ್ರಪಂಚ. ಇದರೊಂದಿಗೆ, ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳು ಮಹಿಳೆಗೆ ತೆರೆದುಕೊಂಡಂತೆ, ಮನೆಯ ನಾಲ್ಕು ಗೋಡೆಗಳ ಹೊರಗೊಂದು ಬದುಕಿದೆಯೆನ್ನುವ ಅರಿವು ಮೂಡಿ, ಅವಳಲ್ಲಿ ಸ್ವತಂತ್ರ ಚಿಂತನೆ ಮತ್ತು ಸ್ವಅರಿವು ಜಾಗ್ರತಗೊಂಡಿದ್ದು. ಮಹಿಳೆಯ ಈ ಪಯಣ, ಬಹಳ ಸಂಕೀರ್ಣವಾದ ಬಲುದೂರ ಕ್ರಮಿಸಬೇಕಾದ ಹಾದಿ. ಅಂದರೆ, ಅವಳಿನ್ನೂ ಸಂಪೂರ್ಣ ಸಬಲೀಕರಣಗೊಂಡಿಲ್ಲ. ಹಿಂದೆ, ಮನೆಯ ನಾಲ್ಕುಗೋಡೆಗಳ ನಡುವೆ ಸದ್ದಿಲ್ಲದೇ ನಡೆಯುತ್ತಿದ್ದ ದೌರ್ಜನ್ಯ, ಪ್ರಸಕ್ತ ಸುದ್ದಿಮಾಹಿತಿ ಪ್ರಪಂಚದಲ್ಲಿ ಹೊರಗೆ ದೊಡ್ಡ ಸುದ್ದಿಯಾಗುತ್ತಿದೆ ಅಷ್ಟೇ. ಹೀಗೆ, ಮಹಿಳೆ ಸ್ವಅರಿವಿನ ಹಾದಿಯಲ್ಲಿ ನಡೆಯುತ್ತಿರುವ ಪ್ರಸಕ್ತ ಕಾಲಘಟ್ಟದಲ್ಲಿ, ಪ್ರಪಂಚದಾದ್ಯಂತ ಸಾಂಪ್ರದಾಯಕ ಮನಃಸ್ಥಿತಿಯ ಬಲಪಂಥಿಯ ಪಕ್ಷಗಳು ಅಧಿಕಾರ ಚುಕ್ಕಾಣಿ ಹಿಡಿಯುತ್ತಿರುವುದು, ಮಹಿಳಾ ಸಬಲೀಕರಣದ ದೃಷ್ಟಿಯಿಂದ ಕಳವಳಕಾರಿ ಅಂಶ. 

ಈ ಹಿನ್ನೆಲೆಯಲ್ಲಿ, ಭಾರತದ ಪ್ರಸಕ್ತ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಹೆಚ್ಚುತ್ತಿರುವ ಹಿಂದುತ್ವದ ಪ್ರಾಬಲ್ಯ ಮಹಿಳೆಯರ ಸಬಲೀಕರಣದ ದೃಷ್ಟಿಯಿಂದ ಒಂದು ದೊಡ್ಡ ಹಿನ್ನೆಡೆಯೆಂದೇ ಹೇಳಬಹುದು. 

ಮೊದಲನೆಯದಾಗಿ, ಎಲ್ಲಾ ಧರ್ಮಗಳಂತೆ ಹಿಂದುತ್ವ ಕೂಡ ಪಿತೃಪ್ರಧಾನ ವ್ಯವಸ್ಥೆಯನ್ನು ಪ್ರತಿಪಾದಿಸುತ್ತದೆ. ಇದರಿಂದಾಗಿ, ಸ್ವಲ್ಪ ಸುಧಾರಣೆ ಕಂಡಿರುವ ಮಹಿಳಾ ಅಭಿವ್ಯಕ್ತಿ, ಸ್ವಾತಂತ್ರ್ಯ ಮತ್ತು ಹಕ್ಕುಗಳ ಸ್ಥಾನದಲ್ಲಿ, ಸಂಸ್ಕøತಿ ಮತ್ತು ಸಂಪ್ರದಾಯಗಳ ಉಳಿಸಿಬೆಳೆಸುವ ಜವಾಬ್ದಾರಿಯನ್ನು ಮಹಿಳೆಯರ ಮೇಲೆ ಹೇರುವಿಕೆ ಹೆಚ್ಚಾಗುತ್ತಿದೆ. ಅಂತೆಯೇ, ಸಾಂಪ್ರದಾಯಕ ಶಕ್ತಿಗಳು ಮಹಿಳೆಯರ ಮೇಲಾಗುವ ಎಲ್ಲಾ ದೌರ್ಜನ್ಯಗಳಿಗೆ ಅವಳ ಶಿಕ್ಷಣಮಟ್ಟ, ಉದ್ಯೋಗ, ಜೀವನ ಶೈಲಿ, ಉಡುಗೆತೊಡುಗೆ, ಅರಿವು, ಸ್ವತಂತ್ರ ಚಿಂತನೆ ಅಥವಾ ಅಧುನಿಕತೆಯೆಂದು ದೂಷಿಸಿ, ಅವಳ ಶತಮಾನಗಳ ಹೋರಾಟದ ಫಲವಾಗಿ ಗಳಿಸಿದ, ಅಲ್ಪಸ್ವಲ್ಪ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ.

ಒಂದು ಕಡೆಯಲ್ಲಿ ‘ಬೇಟಿ ಬಚಾವೋ ಬೇಟಿ ಪಡಾವೋ’ಎನ್ನುವ ಹಿಂದುತ್ವ ಸರಕಾರ, ದಿನನಿತ್ಯ ಮಹಿಳೆಯರ ಮೇಲಾಗುವ ದೌರ್ಜನ್ಯಗಳಿಗೆ ಯಾವುದೇ ಮನಃಪೂರ್ವಕ ಪ್ರತಿಭಟನೆ ಅಥವಾ ಮಹಿಳೆಯರಿಗೆ ಆಶ್ವಾಸನೆ ತುಂಬುವ ಕಾರ್ಯಯೋಜನೆ ನಿರೂಪಿಸಿಲ್ಲ. ಕೆಲವು ಪ್ರದೇಶಗಳಲ್ಲಿ ಇಂದಿಗೂ ಮಹಿಳೆಯರಿಗೆ, ಸ್ವಂತ ಮೊಬೈಲ್ ಹೊಂದುವುದಾಗಲಿ, ಇಷ್ಟಪಟ್ಟ ಉಡುಪು ಧರಿಸುವುದಾಗಲಿ, ಆರ್ಥಿಕ ಸಬಲೀಕರಣ ಹೊಂದುವುದಾಗಲಿ ಸಾಧ್ಯವಾಗುತ್ತಿಲ್ಲ. ಅಲ್ಲದೆ, ದೇಶದ ಯಾವುದೇ ಮೂಲೆಯಲ್ಲಿ ಧಾರ್ಮಿಕ ಗಲಭೆಗಳಾದರೂ, ಮೊದಲು ನಡೆಯುವುದು ಮಹಿಳೆಯರ ಮೇಲೆ ದೈಹಿಕ ದೌರ್ಜನ್ಯ.

ಇಲ್ಲೊಂದು ವಿಶೇಷವಾಗಿ ಗಮನಿಸಬೇಕಾದ ಅಂಶವೆಂದರೆ, ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯಕ್ಕಾಗಿ ಅವಿರತ ಹೋರಾಟ ಮಾಡಿದವರಿಗೆ ಕಾಡುವ ಪ್ರಶ್ನೆ, 33% ಮಹಿಳಾ ಮೀಸಲಾತಿ ಕೇಳಿರುವುದು ಸಾಧ್ವಿ ಪ್ರಾಗ್ಯರಂತಹ ಖಾವಿಧಾರಿಗಳನ್ನು ಮಹಿಳಾ ಪ್ರತಿನಿಧಿಗಳನ್ನಾಗಿಸಲೇ? ಅಂತಹ ಸಾಂಪ್ರದಾಯಕ ಮನಸ್ಥಿತಿಯವರು,

ಸ್ವತಂತ್ರ ಮನೋಭಾವದ ಆಧುನಿಕ ಮಹಿಳೆಯನ್ನು ಹೇಗೆ ಪ್ರತಿನಿಧಿಸುತ್ತಾರೆ? ಈ ನಿಟ್ಟಿನಲ್ಲಿ, ಪ್ರಸಕ್ತ ವ್ಯವಸ್ಥೆಯಲ್ಲಿ `ಮಹಿಳಾಪರ’ ಮಹಿಳಾ ಪ್ರತಿನಿಧಿಗಳನ್ನು ಪಡೆಯುವ ಸಾಧ್ಯತೆ ಕ್ಷೀಣಿಸುತ್ತಿದೆ.

ಇನ್ನು `ಲವ್ ಜಿಹಾದ್’ ನೆಪದಲ್ಲಿ ಹಿಂದೂ ಹೆಣ್ಣು ಮಕ್ಕಳನ್ನು ಅನ್ಯ ಕೋಮಿನ ಹುಡುಗರ ಪ್ರೀತಿಯಿಂದ ಬಚಾವ್ ಮಾಡಲು ಧರ್ಮ ರಕ್ಷಕರು ಮಾಡುತ್ತಿರುವ ಸರ್ಪಕಾವಲು, ಮಹಿಳೆಯರ ಸ್ವಾತಂತ್ರ್ಯ ಮತ್ತು ಹಕ್ಕನ್ನು ಕಿತ್ತುಕೊಂಡು ಇನ್ನಷ್ಟೂ ಉಸಿರುಗಟ್ಟಿಸುತ್ತಿದೆ. ಈ ಪ್ರಕ್ರಿಯೆ, ಅವಳ ಬದುಕನ್ನು ನಿರ್ಧರಿಸುವ ಹಕ್ಕನ್ನು ಸಾಂಪ್ರದಾಯಕ ಮನಸ್ಥಿತಿಗಳ ಉಸ್ತುವಾರಿಗೆ ಕೊಟ್ಟಂತಿದೆ. ಒಟ್ಟಿನಲ್ಲಿ, ಧರ್ಮ ಪ್ರಾಬಲ್ಯಗೊಂಡಷ್ಟೂ ಮಹಿಳೆಯರ ದನಿಗೆ ಜಾಗವಿರುವದಿಲ್ಲ. ಯಾಕೆಂದರೆ, ಸಬಲೀಕರಣಗೊಂಡ ಮಹಿಳೆ ಧಾರ್ಮಿಕ ಕಟ್ಟುಪಾಡುಗಳಿಗೆ ಕಂಟಕ.

ಆದ್ದರಿಂದಲೇ, ಮನುಸ್ಮøತಿಯ ಹರಿಕಾರರ ಮೊದಲ ಗುರಿ ಮೇಲ್ಜಾತಿಯ ಹೆಣ್ಣುಮಕ್ಕಳು. ಹೆಚ್ಚಾಗಿ ವಿದ್ಯಾವಂತರಾದ ಇವರನ್ನು ಭಾರತೀಯ ಸಂಸ್ಕøತಿಯ ಮಾದರಿ ಹೆಣ್ಣುಮಕ್ಕಳಾಗಿ ಬಿಂಬಿಸಿ, ಉಳಿದ ಅನಕ್ಷರಸ್ಥ ಹೆಣ್ಣುಮಕ್ಕಳು ಅವರನ್ನು ಅನುಸರಿಸುವಂತೆ ಮಾಡಿದರೆ, ಎಲ್ಲ ಹೆಣ್ಣುಮಕ್ಕಳನ್ನು ಹತೋಟಿಯಲ್ಲಿಡಲು ಸುಲಭವಾಗುತ್ತದೆ. ಸದ್ದಿಲ್ಲದೇ, ಈ ಕಾರ್ಯಕ್ರಮಗಳನ್ನು ಹಿಂದುತ್ವವಾದಿಗಳು ಮಾಡುತ್ತಿದ್ದಾರೆ.  

ಆಘಾತಕಾರಿ ಬೆಳವಣಿಗೆಯಂತೆ, ಹಿಂದುತ್ವ ಪ್ರಚಾರಕ ಸಂಸ್ಥೆಗಳು ತಮ್ಮ ಚಟುವಟಿಕೆಗಳಿಗೆ ವಿದ್ಯಾವಂತ ಮಹಿಳೆಯರನ್ನು ಕಾರ್ಯಕರ್ತರಂತೆ ಬಳಸಿಕೊಳ್ಳುವುದನ್ನು ಹೆಚ್ಚು ಮಾಡುತ್ತಿವೆ. ತನ್ನ ಮೂಲ ಆಶಯದಂತೆ ‘ಆದರ್ಶ ಹಿಂದೂ ಮಹಿಳೆ’ ಹೇಗಿರಬೇಕೆಂಬ ಚಿತ್ರಣ ಮೂಡಿಸಿ, ಈ ಮಹಿಳೆಯರಿಗೆ ತರಬೇತಿಕೊಟ್ಟು, ಪ್ರಚಾರಕ್ಕೆ ಉಪಯೋಗಿಸಿಕೊಳ್ಳಲಾಗುತ್ತಿದೆ. ಈ ರೀತಿ, ತರಬೇತಿ ಪಡೆದ ಮಹಿಳಾ ಗುಂಪನ್ನು, ಸ್ವತಂತ್ರ ಚಿಂತನೆಯ ಮಹಿಳೆಯರಿಗೆ ಸವಾಲು ಹಾಕಲು ಮತ್ತು ಸಾರ್ವಜನಿಕವಾಗಿ ಅವಮಾನಿಸಲು ಬಳಸಿಕೊಳ್ಳಲಾಗುತ್ತಿದೆ.

ಉದಾಹರಣೆಗೆ, ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕಾಗಿ ಹೋರಾಡಿದ ಮಹಿಳೆಯರ ವಿರುದ್ಧ ಪ್ರತಿಭಟಿಸಲು, ಹಿಂದುತ್ವ ಚಿಂತನೆಯ ಮಹಿಳೆಯರನ್ನು ಮುಂದಕ್ಕೆ ಬಿಡಲಾಯಿತು.

ಅವರು, ಧರ್ಮ ಗ್ರಂಥಗಳನ್ನು ಉದಾಹರಿಸಿ, ಮಹಿಳೆಯರ ಪ್ರವೇಶ ಯಾಕೆ ನಿಷೇಧಿಸಲಾಗಿದೆಯೆಂದು ಸಾರ್ವಜನಿಕರಿಗೆ ತಿಳಿಯಹೇಳಿದರು. ಈ ರೀತಿ, ಮಹಿಳೆಯರ ಹಕ್ಕು ಜಾಗೃತಿಗೆ ವಿರೋಧವಾಗಿ ಸಾಂಪ್ರದಾಯಕ ಮನಸ್ಥಿತಿಯ ಮಹಿಳೆಯರನ್ನೇ ಛೂ ಬಿಡಲಾಗುತ್ತಿದೆ.

ವಿಶೇಷವೆಂದರೆ, ಹಿಂದುತ್ವದ ಪ್ರಚಾರಕರು ಸಂಪ್ರದಾಯಸ್ಥ ಮನಸ್ಥಿತಿಯ ಮಹಿಳೆಯರಲ್ಲಿ, ತಮ್ಮ ಧರ್ಮ ಮಹಿಳೆಯರನ್ನು ದೇವತೆಯ ಸ್ಥಾನದಲ್ಲಿಟ್ಟಿದೆ ಎಂದು ಬಲವಾಗಿ ನಂಬಿಸಿಬಿಡುತ್ತದೆ. ಆದರೆ, ಧಾರ್ಮಿಕ ನಂಬಿಕೆಗಳ ಹೆಸರಲ್ಲಿ ನಡೆಯುವ ದೇವದಾಸಿ ಪದ್ಧತಿ, ವಿಧವೆಯರ ನಿತ್ಯ ನರಕದ ಬಾಳು, ಮರ್ಯಾದೆಗೇಡು ಹತ್ಯೆ, ಮುಟ್ಟು-ಮೈಲಿಗೆ, ಪುತ್ರ ವ್ಯಾಮೋಹ ಇತ್ಯಾದಿಗಳ ಬಗ್ಗೆ ಮೌನ ವಹಿಸುತ್ತದೆ. ಮಹಿಳೆಯ ಶಕ್ತಿ ಅವಳ ಸಹನೆಯಲ್ಲಿದೆಯೆಂದು ಬಿಂಬಿಸಲಾಗುತ್ತದೆ. ಪುರಾಣ ಮತ್ತು ಇತಿಹಾಸದಲ್ಲಿ ಮಹಿಳೆಯರು ಅನುಭವಿಸಿದ ನೋವು, ನಿಟ್ಟುಸಿರನ್ನು ತ್ಯಾಗವೆಂದು ಬಣ್ಣಿಸಿ, ಅವರಿಗೆ ಮಹಾಸತಿಯೆಂದು ಹೊಗಳಲಾಗುತ್ತದೆ. ದುರಾದೃಷ್ಟವೆಂದರೆ, ಮಹಿಳೆಯರೇ ಹೆಚ್ಚಾಗಿ ನೋಡುವ ಧಾರಾವಾಹಿಗಳಲ್ಲಿಯೂ ಇಂತಹ ತ್ಯಾಗ ಮತ್ತು ಸಹನಾಮೂರ್ತಿ ಮಹಿಳೆಯರನ್ನು ವೈಭವೀಕರಿಸಲಾಗುತ್ತಿದೆ. ಇವುಗಳಿಗೆ ಪೂರಕವೆಂಬಂತೆ, ಇತ್ತೀಚಿಗೆ ಮಹಿಳೆಯರು ಸಾಮೂಹಿಕವಾಗಿ ಮಾಡಬಹುದಾದ ವಿನೂತನ ಪೂಜೆ ಪುನಸ್ಕಾರಗಳ ಪ್ರಚಾರ, ಮಾಧ್ಯಮ ಜಗತ್ತನ್ನು ಪ್ರವೇಶಿಸಿದೆ.

ಕೊನೆಯದಾಗಿ, ಧರ್ಮ ಪ್ರಚಾರಕರು ಬಿಂಬಿಸುತ್ತಿರುವ ಆದರ್ಶ ಹೆಣ್ಣಿನ ಪ್ರತಿಮೆ, ಅವಳನ್ನು ಪುನಃ ಸಂಪ್ರದಾಯಗಳ ಕಟ್ಟುಪಾಡು ಗಳತ್ತ ಸೆಳೆದು, ಅವಳರಿವಿಲ್ಲದೆ ಬಂಧಿಸುತ್ತಿದೆಯೇ ಹೊರತು,

ಅವಳ ನಿಜ ಅಂತಃಸತ್ವವನ್ನು ಪ್ರಕಟಪಡಿಸಲು ಸಹಾಯಮಾಡುತ್ತಿಲ್ಲ. ಒಟ್ಟಿನಲ್ಲಿ, ಪ್ರಭುತ್ವದಲ್ಲಿ ಧರ್ಮ ತನ್ನ ನೆಲೆ ಭದ್ರಪಡಿಸಿದಷ್ಟು, ಮಹಿಳಾ ಸಬಲೀಕರಣ ದುರ್ಬಲಗೊಳ್ಳುತ್ತದೆ.

Leave a Reply

Your email address will not be published.