ಹಿತ್ತಲ ನೆನಪುಗಳು…!

ಹೆಚ್ಚಿನ ಬೇಕುಗಳಿಲ್ಲದ, ಬೇಡದ್ದರ ಬಗೆಗೂ ಕುತೂಹಲಿಯಾಗಿ ಕಣ್ಣರಳಿಸಿ ನಿಲ್ಲುವ ಆ ವಯಸ್ಸು ಆ ಮನಸ್ಸು ಇಂದು ಎಲ್ಲೋ ಮರೆಯಾಯಿತಲ್ಲಾ… ಏಕೆ, ಹೇಗೆ ಎಂಬ ಮರುಕ ಮನೆಮಾಡುತ್ತದೆ.

ಇದು ಏನು? ಇದು ಹೇಗೆ? ಯಾಕೆ ಹಾಗೆ? ಇದು ಇಲ್ಲೇ ಯಾಕೆ ಇದೆ? ಇವರು ಯಾರು? ಏನು ಸಂಬಂಧ? ಇತ್ಯಾದಿ ಪ್ರಶ್ನೆಗಳನ್ನು ಕೇಳುವುದು, ಮಕ್ಕಳ ಕುತೂಹಲದ ಅಭಿವ್ಯಕ್ತಿಯ ಒಂದು ಭಾಗ. ಅಂತೆಯೇ ದೊಡ್ಡವರನ್ನು ಅನುಕರಿಸುವುದು ಅವರ ಕಲಿಕೆಯ ಒಂದು ಭಾಗ. ಅಂತಹ ಅನುಕರಣೆ ಸಾಧ್ಯವಾದಷ್ಟು ಅವರ ಆಟ-ಪಾಠದಲ್ಲಿ ಬೆರೆತುಹೋಗಿರುತ್ತದೆ. ತಾವು ಕಂಡ ಕಾಣುತ್ತಿರುವ ಬದುಕಿನ ಸಂಗತಿಗಳನ್ನು ಮಕ್ಕಳು ತಮ್ಮೊಳಗೆ ತೆಗೆದುಕೊಂಡು ಅದನ್ನು ತಾವೂ ಮಾಡಿಯೇ ತೀರಬೇಕೆಂದು ಹಂಬಲಿಸುವುದು ಸಹಜ. ಆದರೆ ಇಂತಹ ಬಾಲ್ಯದ ನೆನಪುಗಳು ಸವಿದಷ್ಟೂ ಸವೆಯದ ಸಿಹಿದಿಬ್ಬಗಳು. ಹಾಗಾಗೆ ಅವು ಪದೇಪದೆ ಕಾಡುತ್ತವೆ.

ಇಂದಿನ ಮಕ್ಕಳ ಬಾಲ್ಯ ಮನೆ, ಶಾಲೆ, ಟ್ಯೂಷನ್‍ಗಳ ಸಿಮೆಂಟು ಇಟ್ಟಿಗೆಯ ಗೂಡಿನೊಳಗೆ ಕಂಪ್ಯೂಟರ್ ಇಲ್ಲವೇ ಮೊಬೈಲ್ ತೆರೆಯ ಜಾಡಿನೊಳಗೆ ಮುಗಿವುದನ್ನು ನೋಡಿದಾಗ ಮರುಕವುಂಟಾಗುತ್ತದೆ. ಇದರ ಬಗ್ಗೆ ದುಃಖ ಮಕ್ಕಳಿಗೆ ಇಲ್ಲದೆಯೂ ಇರಬಹುದು. ಅವರಿಗೆ ಅರಿವಿರದ ಪ್ರಪಂಚದ ಬಗ್ಗೆ ಅವರಲ್ಲಿ ಹೇಗೆತಾನೆ ಹಂಬಲ ಉಂಟಾದೀತು. ಇದು ಆಧುನಿಕತೆಯ ಕಾಲಬೇರೆ! ಎಲ್ಲವೂ ಬೇರಿನಿಂದ ದೂರಾಗಿ ಬೇರಾಗಲೇಬೇಕೆಂಬ ಸಮರ್ಥನೆಯ ಸೂತ್ರ ಎಲ್ಲವನ್ನೂ ಗಾಳಿಗೆ ಹಾರಿಸಲು ಸಿದ್ಧವಿದೆಯಾದರೂ ಅದನ್ನು ಮೇಲಕ್ಕೆ ಹಾರಿಸಿರುವ ದಾರದ ಮೂಲ ಎಳೆಯೊಂದು ಆಗಾಗ ಹಿಡಿದು ಜಗ್ಗುತ್ತಲಿರುತ್ತದೆ. ಕಣ್ಣಿಗೆ ಕಾಣಿಸದಂತೆ ತನ್ನತ್ತ ಸುತ್ತಿಕೊಳ್ಳುತ್ತಲೇ ಸಾಗುತ್ತಿದೆ. ಅದನ್ನು ಕತ್ತರಿಸುವುದು ಅಷ್ಟು ಸುಲಭದ ಮಾತಲ್ಲ ಎಂಬುದು ಸಾರ್ವಕಾಲಿಕ ಸತ್ಯ.

ಈ ಮರ ನನ್ನದು, ಅದು ನಿನ್ನದು, ಇಲ್ಲಿ ನಿನ್ನ ಮನೆ ಅಲ್ಲಿ ನನ್ನ ಮನೆ ನಿನ್ನ ನೋಡೋಕೆ ನಾನು ಬರ್ತೀನಿ.., ನೀನು ಬಾ., ಎಂದು ಸಣ್ಣಸಣ್ಣ ಕಲ್ಲು ಜೋಡಿಸಿಟ್ಟ ಗೆರೆಯೇ ಮನೆಯಾಗಿ, ಖಾಲಿಯಾದ ಸಣ್ಣಪುಟ್ಟ ಪೌಡರ್ ಇಲ್ಲವೇ ಪ್ಲಾಸ್ಟಿಕ್ ಡಬ್ಬಿಯಿಂದ ಭಕ್ಷ್ಯಭೋಜನ ಬಡಿಸುವ ಸುಳ್ಳುಸುಳ್ಳು ಸತ್ಕಾರ ಮಾಡುವ ನೆಂಟರ ಆಟ. ಅಪ್ಪನ ಹರಿದ ಪಂಚೆ, ಇಲ್ಲವೇ ಅಮ್ಮನ ಹಳೆಸೀರೆಯುಡುವ ಯಜಮಾನತಿಯ ಆಟ, ತಲೆಯ ದಿಂಬನ್ನು ತಬ್ಬಿಹಿಡಿದು ತುತ್ತುತಿನ್ನಿಸುವ ಹಾಲುಣಿಸುವ ಅಮ್ಮ ಮಗುವಿನ ಆಟ, ಹಿತ್ತಲ ಮರೆಯಲ್ಲಿ ಅಪ್ಪ ನೆಟ್ಟುಬೆಳೆಸಿದ್ದ ಹಸಿರು ಹೂ ಗಿಡಗಳ ಎಲೆಗಳನ್ನು ಕಿತ್ತು ಎಣಿಸಿ, ಪುಸ್ತಕದ ರಟ್ಟು ಕಿತ್ತು, ದಾರಕಟ್ಟಿ ತಕ್ಕಡಿಮಾಡಿ ಕಲ್ಲು ಮಣ್ಣು ತೂಗಿನೋಡಿ, ಬಿಳಿಹಾಳೆಯ ಚೂರುಗಳಿಗೆ ಹತ್ತು, ಇಪ್ಪತ್ತು, ಐವತ್ತು, ನೂರೆಂದು ಬರೆದು ಆಡಿದ ಅಂಗಡಿ ಆಟ, ಹಿತ್ತಲನ್ನು ಭಾಗಮಾಡಿ ಕಡ್ಡಿ ಹಿಡಿದು ಕೂಗಾಡಿ ಹೂಗಿಡ ಬಳ್ಳಿಗಳಿಗೆ ಪಾಠಮಾಡಿ ರಪ್-ರಪ್ ಎಂದು ಎಲೆಗಳಿಗೆ ಬಡಿದು ಬುದ್ಧಿಕಲಿಸುತ್ತಿದ್ದಾಗ, ಗಿಡ ಮುರಿದು ಹೋದಗ, ಅಪ್ಪನ್ನ ಕಂಡು ಹೆದರಿ ಓಡುತ್ತಲಿದ್ದ ಟೀಚರ್ ಆಟ.

ಅಜ್ಜಿಯ ಜೊತೆ ಆಡುತ್ತಿದ್ದ ಅಳಿಗುಳಿಮನೆಯ ಆಟ. ಅತ್ತೆಯಂದಿರ ಜೊತೆಕೂತು ಆಡುತ್ತಲಿದ್ದ ಗಟ್ಟೆಮನೆ (ಪಿಚ್ಚಿ) ಆಟ, ಬೀದಿಯ ಬಿಸಿಲನ್ನೂ ಲೆಕ್ಕಿಸದೆ ಸ್ನೇಹಿತೆಯರೆಲ್ಲಾ ಕೂಡಿ ಆಡುತ್ತಿದ್ದ ಕುಂಟೇಬಿಲ್ಲೆ ಆಟ. ನಾನು ಹುಡುಗಿಯ ತಾಯಿ, ಇವನು ತಂದೆ, ನೀನು ಹುಡುಗ ಇವಳು ಹುಡುಗಿ ಎಂದು ಮದುವೆ ನಿಶ್ಚಯಿಸಿಕೊಂಡು ಮನೆಮನೆಗೆ ಹೋಗಿ ದೊಡ್ಡವರನ್ನು ಮದುವೆಗೆ ಕರೆಯುತ್ತ ಆಟಕ್ಕೆ ಏನಾದರೂ ತಿಂಡಿ ಕೊಡಬೇಕೆಂದು ಜಾಣ್ಮೆಯಿಂದ ಸಂಗ್ರಹಿಸಿ ಸಂಭ್ರಮಿಸಿ, ಹಿತ್ತಲ ಹೀರೇಕುಂಬಳದ ಚಪ್ಪರದಡಿ ಆಡುತ್ತಿದ್ದ ಮದುವೆಯ ಆಟ. ಒಂದೇ ಇರಡೇ ಸಾಲುಸಾಲು ಸಂಭ್ರಮದ ದಿನಗಳವು, ಇಂದಿನ ಮಕ್ಕಳಿಗೆ ಕನಸಿನಲ್ಲೂ ಸಿಗದವು ಎಂದು ನೆನೆದಾಗ ಬೇಸರವೆನಿಸುತ್ತದೆ.

ಹಿತ್ತಲ ಮರಗಳನ್ನು ಬರದಲ್ಲಿ ಹತ್ತಿ, ಹಣ್ಣುಗಳ ಕಿತ್ತು, ಮರದಲ್ಲೇ ತಿಂದುಮುಗಿಸುತ್ತ ಕೊಂಬೆಹಿಡಿದು ಜೋತಾಡುತ್ತ ಕೆಳಗಿಳಿಯುವ ತಂತ್ರ, ಪಕ್ಷಿಗೂಡುಗಳನ್ನು ನಿತ್ಯ ಗಮನಿಸಿ ಹೊಸ ಹಕ್ಕಿಯೊಂದನ್ನು ಕಂಡಾಗ ಎಲ್ಲರಿಗೂ ತೋರಿಸಿ ಕುಣಿದಾಡುತ್ತಿದ್ದ ಆ ದಿನಗಳು, ಲೈಟುಕಂಬದ ಮರೆಯಲ್ಲಿ ಕಣ್ಣುಮುಚ್ಚಿ ‘ನಮ್ಮಯ ಹಕ್ಕಿ ಬಿಟ್ಟೆಬಿಟ್ಟೇ ಜೂಟ್’ ಎಂದು ಕಣ್ಣುತೆರೆಯುವ ಮುಂಚೆ ಓಡಿ ಓಡಿ ಸಿಕ್ಕಸಿಕ್ಕ ಗಲ್ಲಿಗಳಲ್ಲಿ ಮನೆಯ ಮೂಲೆಮೂಲೆಗಳಲ್ಲಿ ಎಷ್ಟೋಹೊತ್ತು ಉಸಿರುಗಟ್ಟಿ ಅವಿತ್ತಿದ್ದ ಕ್ಷಣಗಳು. ‘ರತ್ತೋ ರತ್ತೋ ರಾಯನ ಮಗಳೇ ಬಿತ್ತೋ ಬಿತ್ತೋ ಭೀಮನ ಮಗಳೆ..’ ಎಂದು ಒಬ್ಬರೊಬ್ಬರನ್ನು ಭಾಗಮಾಡಿಕೊಂಡು ಗುಂಪಾಗಿ ಹಿಡಿದು ಎಳೆದಾಡಿ ಗೆದ್ದಾಗ, ಬಿದ್ದು ಮೈಕೈ ಮಣ್ಣು ಮಾಡಿಕೊಂಡು ಬಟ್ಟೆ ಹರಿದುಕೊಂಡು ಇಲ್ಲವೇ ಕಲೆಮಾಡಿಕೊಂಡು ಬಂದಾಗ ಅಮ್ಮನ ಕೋಪದ ಹಿಂಡುವಿಕೆಗೆ ಕೆಂಪಗಾಗುತ್ತಿದ್ದ ಕೆನ್ನೆ. ತೊಡೆಯ ಮೇಲೆ ಬೀಳುತ್ತಿದ್ದ ಏಟಿನ ಬರೆಗಳು. ಊಟದ ಹೊತ್ತಾದರೂ ಗಮನಿಸದೇ ಆಡುತ್ತಲಿದ್ದ ನಮ್ಮನ್ನು ಕೂಗಿಕೂಗಿ ಕರೆದು, ಹಿಡಿದು ನಾಲ್ಕು ಬಡಿದು ತಟ್ಟೆಗೆ ಅನ್ನವಿಟ್ಟು ತಿನ್ನುವವರೆಗೂ ನಮ್ಮ ಮುಂದೆ ಕುಳಿತು ಬೈಗುಳದ ಸುರಿಮಳೆಗರೆದು, ಕೊನೆಗೆ ತಂತಾನೇ ಅತ್ತುಕರೆದು ಲಲ್ಲೆಗರೆದು ಮುದ್ದಿಸಿ ಮನೆಯಲ್ಲೇ ಆಟವಾಡುವಂತೆ ಓಲೈಸುತ್ತಿದ್ದ ಅಜ್ಜಿಯ ನೆನಪು.

ಶನಿವಾರದ ತರಗತಿ ಮುಗಿದೊಡನೇ ಓಡಿಬಂದು ಅಮ್ಮನಿಗೆ ಒಗೆಯಲು ಸಮವಸ್ತ್ರ ಬಿಚ್ಚಿಡುವುದೇ ತಡ ಬಿಸಿಬಿಸಿ ನೀರುತಲೆಗೆ ಹಾಕಲು ಕಾಯುತ್ತ ಕುಳಿತಿರುತ್ತಿದ್ದ ಅಜ್ಜಿಯ ಕಣ್ಣುತಪ್ಪಿಸಿ ಹಿತ್ತಲಿಗೆ ಓಡುತ್ತಿದ್ದ ಆ ಸಂಭ್ರಮವೆಲ್ಲವನ್ನು ನೆನೆದಾಗ ಮುಖದಲ್ಲಿ ಸಣ್ಣಗಿನ ಮುಗುಳ್ನಗೆ ಮಿಂಚಿ ಮಾಯವಾಗುತ್ತದೆ. ಹಳ್ಳದಿಣ್ಣೆ ಎನ್ನದೆ ಮುಳ್ಳುಕಲ್ಲೆನ್ನದೆ ಮನಸ್ಸಿಗೆ ಬಂದಂತೆ ಓಡಿ-ಆಡಿ ನಲಿದ ಆ ದಿನಗಳು ಬದುಕಿನ ಸ್ವರ್ಣಯುಗವೇ ಸರಿ. ಹತ್ತಿದ್ದ ಗುಡ್ಡಗಳು, ಕದ್ದು ತಿನ್ನುತ್ತಿದ್ದ ಸೀಬೇ ಮಾವು ನೇರಳೆಯ ತೋಟದ ಹಾದಿಗಳು. ಅಜ್ಜಿಯ ಸೆರಗು ಹಿಡಿದು ಹಿಂಬಾಲಿಸಿ ಹೋಗಿ ಅವಳ ಶ್ರಮಕ್ಕೆ ಸಾಕ್ಷಿಯಾಗಿ ನಲಿದಿದ್ದ ಹೊಲದ ಹಸಿರಿನ ಹಾಸಿನ ನಡುವೆ ನಲಿದ ಕ್ಷಣಗಳು… ಅಬ್ಬಬ್ಬಾ ಅಂದು ಅನಂತ ಆನಂದ ಮನಸ್ಸಿನಲ್ಲಿ ನೆಲೆಸಿತ್ತು.

ಹೆಚ್ಚಿನ ಬೇಕುಗಳಿಲ್ಲದ, ಬೇಡದ್ದರ ಬಗೆಗೂ ಕುತೂಹಲಿಯಾಗಿ ಕಣ್ಣರಳಿಸಿ ನಿಲ್ಲುವ ಆ ವಯಸ್ಸು ಆ ಮನಸ್ಸು ಇಂದು ಎಲ್ಲೋ ಮರೆಯಾಯಿತಲ್ಲಾ ಏಕೆ, ಹೇಗೆ ಎಂಬ ಮರುಕ ಮನೆಮಾಡುತ್ತದೆ.

ಅದೆಂತಹ ದಿನಗಳವು, ಇಂದಿಗೂ ಅದೇ ಬಾಲ್ಯ ಇರಬಾರದಿತ್ತೇ! ಕೊಟ್ಟದ್ದು ಉಂಡು ಜೊತೆಗಾರರೊಡನೆ ನಲಿದು, ಬದುಕಿನ ಸಾವಿರಾರು ಪ್ರಶ್ನೆಗಳ ಗೋಜಲಿಗೆ ಸಿಲುಕದೆ, ಬಂದ ಪ್ರಶ್ನೆಗಳೆಲ್ಲವನ್ನೂ ಹಿರಿಯರ ಕಿರಿಕಿರಿಯನ್ನೂ ಲೆಕ್ಕಿಸದೆ ಅವರ ಮೇಲೆಸೆದು ಅವರು ನೀಡಿದ ಉತ್ತರವನ್ನೇ ನಂಬಿ ನೆಚ್ಚಿ ಹಿಗ್ಗುತ್ತಿದ್ದ ಸಮಯವೇ ಅದ್ಭುತವೆನಿಸುತ್ತದೆ. ಹೆಚ್ಚಿನ ಬೇಕುಗಳಿಲ್ಲದ, ಬೇಡದ್ದರ ಬಗೆಗೂ ಕುತೂಹಲಿಯಾಗಿ ಕಣ್ಣರಳಿಸಿ ನಿಲ್ಲುವ ಆ ವಯಸ್ಸು ಆ ಮನಸ್ಸು ಇಂದು ಎಲ್ಲೋ ಮರೆಯಾಯಿತಲ್ಲಾ ಏಕೆ, ಹೇಗೆ ಎಂಬ ಮರುಕ ಮನೆಮಾಡುತ್ತದೆ.

ಹೆಂಚಿನ ಕಿಂಡಿಯ ಮರೆಯಲ್ಲಿ ಕಾಣುತ್ತಿದ್ದ ಸೂರ್ಯಚಂದ್ರರ ಬೆಳಕಿನ ಕೋಲು ಜಾಡಿಸಿ, ಕನ್ನಡಿಯಲ್ಲಿ ಹಿಡಿದು ಎಲ್ಲಿಬೇಕಲ್ಲಿ ಗೋಡೆಯ ಕತ್ತಲ ಮೂಲೆಯಲ್ಲಿ ಹಾಯಿಸಿ ಗೆದ್ದಿದ್ದ ನೆನಪು. ಕನ್ನಡಿ ಒಡೆದೀತೆಂದು ನಮ್ಮೆಡೆಗೆ ಓಡಿಬರುವ ಅಮ್ಮನ್ನ ನೋಡಿ ಕನ್ನಡಿಯನ್ನು ಅಲ್ಲೇ ಇಟ್ಟು ಕಾಲುಕಿತ್ತದ್ದು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಅಮ್ಮನ ಮುನಿಸು-ಮುದ್ದು, ಅಜ್ಜಿಯ ಆರೈಕೆಯ ಅಪ್ಪುಗೆ, ಅಪ್ಪನ ಕಾಳಜಿಯ ಕಾವಲು ನೆನೆದಷ್ಟೂ ಕಣ್ಣು ಕೋರೈಸುವಂತಾಗುತ್ತದೆ.

ಈಗ ಊರಲ್ಲಿ ಯಾರಿಲ್ಲ, ಎಲ್ಲ ನಗರ ಸೇರಿದ್ದೇವೆ. ಅಲ್ಲಿ ಹಿತ್ತಲಿನ ಮರದ ಬುಡಕ್ಕೆ ನೀರಿಲ್ಲದೆ ಅಪ್ಪ ಹಾಕಿದ್ದ ಮರಗಿಡಗಳೆಲ್ಲಾ ಒಣಗಿ ನೆಲಕಚ್ಚಿ ಬಿದ್ದಿವೆ. ಅಲ್ಲಿ ಸಾಲಾಗಿ ಬೆಳೆಸಿದ್ದ ಎಲ್ಲ ಹೂಗಿಡಗಳ ಜಾಗದಲ್ಲಿ ಮುಳ್ಳುಗಿಡಗಳು ಬೇರುಬಿಟ್ಟಿವೆ. ಶಿಸ್ತಾಗಿ ಕತ್ತರಿಸಿದ್ದ ಕಳ್ಳಿಬೇಲಿಯು ಈಗ ಇಡೀ ಹಿತ್ತಲನ್ನೇ ಆವರಿಸುವಂತೆ ವ್ಯಾಪಿಸಿ ಬೆಳೆದಿದೆ. ಸುಂದರವಾಗಿ ಹಬ್ಬಿದ್ದ ಬಳ್ಳಿಗಳು ಒಣಗಿದ ದಾರದಂತೆ ಒಣಮರಕ್ಕೆ ನೇತುಬಿದ್ದು ನೇಣುಕುಣಿಕೆಯಂತೆ ಅತ್ತಿಂದಿತ್ತ ಓಲಾಡುತ್ತಲಿವೆ. ಈಗ ಹಸಿರಿಲ್ಲ ಉಸಿರಿಲ್ಲ ನಾನು ಆಡಿಬೆಳೆದ ಹಿತ್ತಲಿಗೆ ಬೇಲಿಯಿಲ್ಲ, ಆದರೆ ಬೇಲಿಯೇ ಎಲ್ಲೆಡೆ ವ್ಯಾಪಿಸಿಬಿಟ್ಟಿದೆ. ಅಲ್ಲಿ ಹಾಡಿ ನಲಿಯುತ್ತಿದ್ದ ಪಕ್ಷಿಗಳ ಕಲರವ ಮಾಯವಾಗಿದೆ, ನೀರವ ಮೌನ ಗೂಬೆಯ ಘೃ-ಘೃ ದ್ವನಿ ಇಡೀ ಹಿತ್ತಲನ್ನು ಆವರಿಸಿದೆ.

ಅಜ್ಜಿ ಅಮ್ಮನಂತೆ ನಮ್ಮನ್ನು ತನ್ನ ಹೊಟ್ಟೆಯೊಳಗೆ ಹಿತ್ತಲ ಮುಂಜಾವಿನ ಚಳಿಗಾಳಿಯಿಂದ ಬೆಚ್ಚಗೆ ಇರಿಸಿತ್ತು, ಕೊಟ್ಟಿಗೆಯಲ್ಲಿ ಕಟ್ಟಿದ್ದ ಅದೆಷ್ಟೋ ದನಕರುಗಳಿಗೆ ಹಸುರ ಬೆಳಕಿನ ಹಾದಿಯಾಗಿ ಕೈಬೀಸಿ ಕರೆದಿತ್ತು, ಅವುಗಳ ರಕ್ಷೆಗಾಗಿ ಟೊಂಕಕಟ್ಟಿ ನಿಂತಂತಿತ್ತು. ಆದರೀಗ ಅದರ ಕಾಲ ಮುಗಿದಂತಿದೆ.

ಹಿತ್ತಲ ಬಾಗಿಲಿನ ಮರದ ಹಲಗೆಗಳು ಬಹಳ ಕಾಲ ತೆರೆಯದ ಕಾರಣ, ಗೆದ್ದಲು ಹಿಡಿದು ತೆಳುವಾಗಿ ಅಲ್ಲಲ್ಲಿ ತೂತುಬಿದ್ದು ಮತ್ತೆ ಮಣ್ಣಿನ ಮಡಿಲೊಳಗೆ ಸೇರಲು ಕೊರಗಿ ಕರಗುವಂತಿದೆ. ಅದಕ್ಕೆ ತಾತನ ಕಾಲದಲ್ಲಿ ಹೊಡೆಸಿದ್ದ ಗಟ್ಟಿಯಾದ ಕಬ್ಬಿಣದ ಮೊಳೆಗಳು ತಮ್ಮ ಶಕ್ತಿಕಳೆದುಕೊಂಡು ತುಕ್ಕು ಹಿಡಿದಿವೆ. ನನ್ನ ಬಾಲ್ಯದ ಭಾಗ್ಯದ ಬಾಗಿಲಿನ ಎದುರಿನಲ್ಲಿ ನಿಂತಾಗ ಕಣ್ಣುತುಂಬಿ ಬರುತ್ತದೆ. ನಾವೆಷ್ಟೇ ಜನಜಗ್ಗಿ-ಹಿಗ್ಗಿದರೂ ಅಲ್ಲಾಡದೆ ಬಲಭೀಮನಂತೆ ತನ್ನ ರಾಟೆಯಲ್ಲಿ ನಮ್ಮನ್ನು ತೂಗಿ ಗಾಳಿಯಲ್ಲಿ ತೇಲಾಡಿಸಿತ್ತು. ಅಜ್ಜಿ ಅಮ್ಮನಂತೆ ನಮ್ಮನ್ನು ತನ್ನ ಹೊಟ್ಟೆಯೊಳಗೆ ಹಿತ್ತಲ ಮುಂಜಾವಿನ ಚಳಿಗಾಳಿಯಿಂದ ಬೆಚ್ಚಗೆ ಇರಿಸಿತ್ತು, ಕೊಟ್ಟಿಗೆಯಲ್ಲಿ ಕಟ್ಟಿದ್ದ ಅದೆಷ್ಟೋ ದನಕರುಗಳಿಗೆ ಹಸುರ ಬೆಳಕಿನ ಹಾದಿಯಾಗಿ ಕೈಬೀಸಿ ಕರೆದಿತ್ತು, ಅವುಗಳ ರಕ್ಷೆಗಾಗಿ ಟೊಂಕಕಟ್ಟಿ ನಿಂತಂತಿತ್ತು. ಆದರೀಗ ಅದರ ಕಾಲ ಮುಗಿದಂತಿದೆ.

ತಾತ ಕಟ್ಟಿಸಿದ್ದ ಮನೆಯ ಗೋಡೆಯ ಗಾರೆಯೂ ಅಲ್ಲಲ್ಲಿ ಕಿತ್ತುಬರುತ್ತಿದೆ. ಜಂತಿಯನ್ನು ಬಿಗಿಗೊಳಿಸಿ ಕಟ್ಟಿದ್ದ ತೆಂಗುನಾರಿನ ಹುರಿಗಂಟುಗಳು ಕಪ್ಪುಸುತ್ತಿ ಸಡಿಲಗೊಂಡಿವೆ. ಹೆಂಚು ಕೈಯ್ಯಾಡಿಸದ ಕಾರಣ ತಲೆತಲಾಂತರದಿಂದ ಮನೆಮಂದಿಯನ್ನು ಬೆಚ್ಚಗಿರಿಸಿದ್ದ ಪಿಳ್ಳೆಹೆಂಚಿನ ಹೊದಿಕೆ ಸುಳಿದುಬಂದ ಸುಂಟರಗಾಳಿ ಮಳೆಗೆ ಹಾರಿ ನೆನೆದು, ಬಿರುಬಿಸಿಲಿಗೆ ಒಣಗಿ ಮುಕ್ಕಾಲು ಒಡೆದು ಮತ್ತೆ ಜೋಡಿಸಲಾರದಂತೆ ನುಚ್ಚುನೂರಾಗಿವೆ.

ಮನೆಯ ಮುಂಬಾಗಿಲು ಮಾತ್ರ ಹಾಗೇ ಇದೆ! ಯಾವುದೋ ಕಾಲದಲ್ಲಿ ಅಜ್ಜಿ ಕಟ್ಟಿದ್ದ ಮಾವಿನೆಲೆಯ ತೋರಣ ಒಣಗಿ ವ್ಯಂಗ್ಯವಾಗಿ ಕೈಬೀಸಿ ದಯವಿಟ್ಟು ಒಳಗೆ ಬಾ ಮಗಳೇ ಎಂದು ಕರೆಯುತ್ತದೆ. ಖುಷಿಯಿಂದ ಬೀಗ ತೆರೆದು ಒಳಹೊಕ್ಕರೆ ಹಜಾರದಲ್ಲಿ ಕಟ್ಟಿದ ಜೇಡಬಲೆಯ ಹಾರ, ಮುರಿದು ಬಿದ್ದ ಕಿಟಕಿಯ ಬಾಗಿಲುಗಳು, ದನಕರುಗಳಿಲ್ಲದ ಖಾಲಿ ಕೊಟ್ಟಿಗೆಯ ಕೂಗು, ಗುಡಿಸಿದಷ್ಟೂ ಗುಡ್ಡೆಯಾಗುವ ಅಂಗಳದ ದೂಳು, `ಇಂದೋ ನಾಳೆಯೋ ಬೀಳುವಂತಿದ್ದೇನೆ ಬಿದ್ದಳೊ ಇಲ್ಲವೊ ಎಂದು ನೋಡೋಕೆ ಬಂದೆಯಾ? ನಿಮ್ಮಜ್ಜಿಯ ಜೊತೆಗೆ ನನ್ನನ್ನೂ ನೀನು ಮರೆತುಬಿಟ್ಟೆಯಾ?’ ಎಂದು ನನ್ನನ್ನೇ ದಿಟ್ಟಿಸಿ ನೋಡುವ, ನನ್ನ ಬಾಲ್ಯದ, ಸ್ವರ್ಗದ ಹಾದಿಯೆನಿಸಿದ್ದ, ಅದೇ ಹಿತ್ತಲಿನ ಬಾಗಿಲು.

ಇಂದಿನ ಯಾವ ಮಕ್ಕಳಿಗೂ ಸಿಗದ ನನ್ನ ಆ ಅನಂತ ನಿಧಿಯನ್ನು ಕಳೆದುಕೊಳ್ಳಲು ನನಗೆ ಮನಸ್ಸಾಗುತ್ತಿಲ್ಲ. ಮತ್ತೆತ್ತಲೂ ನನ್ನ ಕಣ್ಣುಹೊರಳುತ್ತಿಲ್ಲ.

ಏನಾದರಾಗಲಿ ಒಮ್ಮೆ ಹೋಗಿ ನೋಡೋಣವೆಂದು ಪೊರಕೆಯನ್ನು ಪಕ್ಕಕ್ಕೆ ಇಟ್ಟು, ಉದುರುತ್ತಿದ್ದ ಗೆದ್ದಿಲನ್ನು ಸ್ವಲ್ಪ ಬಡಿದು ಉದುರಿಸಿ ಸಾಹಸ ಮಾಡಿ ಹಿತ್ತಲ ಬಾಗಿಲನ್ನು ಜೋಪಾನವಾಗಿ ಸರಿಸಿದೆ. ಕಾಲಿಡಲು ಜಾಗವಿಲ್ಲದೆ ಬೆಳೆದ ಕುರುಚಲು ಪೊದೆಗಳ ನಡುವೆ ಹರಿದು ಮಾಯವಾದ ಹಾವೊಂದು ಮತ್ತೆ ನಾನು ಹಿತ್ತಲಿಗೆ ಕಾಲಿರಿಸದಂತೆ ಭಯಪಡಿಸಿತ್ತು.

ಏನೇ ಇರಲಿ ಕೊನೆಗೆ ಇದು ಅದರ ತಪ್ಪಲ್ಲ, ಹಿತ್ತಲನ್ನು ಅದಕ್ಕೆ ಬಿಟ್ಟುಕೊಟ್ಟ ನನ್ನದೇ ತಪ್ಪೆಂದು ಅನಿಸಿ ಮೌನವಾಗಿ ಮತ್ತೆ ಹಿತ್ತಲ ಬಾಗಿಲು ನೂಕಿ, ಚಿಲಕಹಾಕಿ ಅಲ್ಲೇ ಇಟ್ಟಿದ್ದ ತಾತನ ಮರದ ಪೆಟ್ಟಿಗೆಯಲ್ಲಿ ಹಿತ್ತಲ ನೆನಪುಗಳ ಹೊರೆಯನ್ನು ಅದುಮಿತುಂಬಿ ನಗರಕ್ಕೆ ಹೊತ್ತುತಂದೆ. ಆದರೆ ಇದೀಗ ಕಬ್ಬಿಣದ ಹೊಸ ಬೀರು ಅದರ ಸ್ಥಾನವನ್ನು ಕಿತ್ತುಕೊಳ್ಳಲು ಹವಣಿಸುತ್ತಲಿದೆ. ಇಂದಿನ ಯಾವ ಮಕ್ಕಳಿಗೂ ಸಿಗದ ನನ್ನ ಆ ಅನಂತ ನಿಧಿಯನ್ನು ಕಳೆದುಕೊಳ್ಳಲು ನನಗೆ ಮನಸ್ಸಾಗುತ್ತಿಲ್ಲ. ಮತ್ತೆತ್ತಲೂ ನನ್ನ ಕಣ್ಣುಹೊರಳುತ್ತಿಲ್ಲ. ಬದುಕು ಬೇಸರವೆನಿಸಿದಾಗ ‘ನಾನಿದ್ದೇನೆ ನಿನ್ನ ಜೊತೆಗಾರ’ ಎನ್ನುತ್ತ ಧುತ್ತೆಂದು ತಾತನ ಮನೆಯ ಮರದ ಪಟ್ಟಿಗೆಯ ಬಾಗಿಲು ತಂತಾನೇ ತೆರೆದುಕೊಳ್ಳುತ್ತದೆ. ಅಕ್ಷಯದಂತೆ ಭರವಸೆಗಳನ್ನು ಇಂದಿಗೂ ತನ್ನೊಳಗೆ ಬೆಚ್ಚಗೆ ಇರಿಸಿಕೊಂಡು, ನನಗರಿವಿಲ್ಲದಂತೆ ನನ್ನನಪ್ಪಿ ನನ್ನೊಟ್ಟಿಗೇ ಹಸಿರಾಗಿದೆ, ಉಸಿರಾಗಿದೆ.

*ಲೇಖಕರು ಮೈಸೂರಿನ ಭಾರತೀಯ ಭಾಷಾಸಂಸ್ಥಾನದ ಶಾಸ್ತ್ರೀಯ ಕನ್ನಡ ಅತ್ತ್ಯುನ್ನತ ಅಧ್ಯಯನ ಕೇಂದ್ರದಲ್ಲಿ ಸಹ-ಸಂಶೋಧಕರಾಗಿದ್ದಾರೆ. ಕವಿತೆ, ಕತೆ, ವಿಮರ್ಶೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.

Leave a Reply

Your email address will not be published.