ಹೀಗಿದೆ ನಮ್ಮೂರ ಆರೋಗ್ಯ ಸೌಲಭ್ಯ!

ಇದು ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಸರ್ಕಾರಿ ಆರೋಗ್ಯ ವ್ಯವಸ್ಥೆ ಕುರಿತ ಒಂದು ಯಥಾಸ್ಥಿತಿ ವರದಿ. ಬಹುಶಃ ಸಂಡೂರು ಬದಲು ರಾಜ್ಯದ ಯಾವುದೇ ತಾಲೂಕಿನ ಹೆಸರು ಸೇರಿಸಿಕೊಂಡು ಓದಿದರೂ ವರದಿ ಹೆಚ್ಚೇನೂ ವ್ಯತ್ಯಾಸವಿಲ್ಲದೆ ಅನ್ವಯವಾಗುವುದು ಕಳವಳಕಾರಿ ವಾಸ್ತವ!

ಕೊರೊನಾ ಸೋಂಕಿನ ಆಚೆಗೂ ನಮ್ಮ ಆರೋಗ್ಯ ಕ್ಷೇತ್ರದ ಕಾರ್ಯಕ್ಷಮತೆ ಮತ್ತದರ ಸೌಲಭ್ಯಗಳನ್ನು ನೋಡಿದರೆ ಮೊದಲು ಚಿಕಿತ್ಸೆ ಬೇಕಾಗಿರುವುದು ನಮ್ಮ ಗ್ರಾಮೀಣ ಭಾಗದ ಅರೋಗ್ಯ ಕೇಂದ್ರಗಳಿಗೆ ಎಂಬುದು ಸುಸ್ಪಷ್ಟ. ಸಾವಿರಾರು ಕೋಟಿಯ ಗಣಿ ವ್ಯವಹಾರ ನಡೆಯುವ ಬಳ್ಳಾರಿ ಜಿಲ್ಲೆಯಲ್ಲಿ ದುಡ್ಡಿಗೆ ಬರವಿಲ್ಲ! ಉತ್ತರ ಕರ್ನಾಟಕದ ಅರೋಗ್ಯದ ಹೆಬ್ಬಾಗಿಲೆಂದೇ ಖ್ಯಾತಿ ಪಡೆದ ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯು ಆರೋಗ್ಯ ಸೇವಾ ಕ್ಷೇತ್ರಕ್ಕೆ ಸಾವಿರಾರು ವೈದ್ಯರನ್ನು ಕೊಡುಗೆಯನ್ನಾಗಿ ನೀಡಿದೆ. ಆದರೆ ಜಿಲ್ಲೆಯಲ್ಲಿಯೇ ಸರ್ಕಾರಿ ಸೇವೆಯ ವೈದ್ಯರ ಕೊರತೆ ಎದ್ದುಕಾಣುತ್ತಿದೆ.

ಏಷ್ಯಾದ ಅತೀ ದೊಡ್ಡ ಸ್ಟೀಲ್ ಉದ್ದಿಮೆ ಸೇರಿದಂತೆ ಗಣಿ ಉದ್ದಿಮೆಗಳನ್ನು ಹೊಂದಿರುವ, ರಾಜ್ಯದ ಬೊಕ್ಕಸಕ್ಕೆ ಅತೀ ಹೆಚ್ಚು ಆದಾಯ ತಂದುಕೊಡುವ ತಾಲೂಕು ಸಂಡೂರು. ಆದಾಯದ ಮೂಲಗಳನ್ನು ನೋಡಿದರೆ ಇಡೀ ರಾಜ್ಯದಲ್ಲಿ ತಾಲೂಕು ಆರೋಗ್ಯ ಕ್ಷೇತ್ರದಲ್ಲಿ ಅತ್ಯಂತ ಮಂಚೂಣಿಯಲ್ಲಿರಬೇಕಾಗಿತ್ತು. ಇಲ್ಲಿನ ಉದ್ದಿಮೆಗಳ ವಹಿವಾಟಿನ ಶೇಕಡ 2 ಲಾಭದಲ್ಲಿ 0.5% ರಷ್ಟು ಅರೋಗ್ಯ ಕ್ಷೇತ್ರಕ್ಕೆ ಮೀಸಲಿಟ್ಟಿದ್ದಿದ್ದರೆ ರಾಜ್ಯದಲ್ಲಿ ಕೊರೊನ ಸೋಂಕಿನ ಸಾವಿನ ಪ್ರಮಾಣದಲ್ಲಿ ಬಳ್ಳಾರಿ ಜಿಲ್ಲೆಯು ದಾಖಲೆ ಬರೆಯುತ್ತಿರಲಿಲ್ಲ. ಅಕ್ರಮ ಅವ್ಯಾಹತ ಗಣಿಗಾರಿಕೆಯ ಫಲವಾಗಿ ಅತಿಯಾದ ಗಣಿದೂಳಿನಿಂದ ಭಾಗದ ಜನರ ಶ್ವಾಸಕೋಶದ ಮೇಲೆ ಪರಿಣಾಮವಾಗುತ್ತಿದೆ. ಗಣಿತ್ಯಾಜ್ಯದಿಂದ ಹೊರಬರುವ ನೀರು ನಾರಿಹಳ್ಳ ಜಲಾಶಯ ಸೇರಿದಂತೆ ಗಣಿಪ್ರದೇಶದ ಅಕ್ಕಪಕ್ಕದ ಕೆರೆಗಳಿಗೆ ಹರಿಯುತ್ತದೆ. ಕಲುಷಿತ ನೀರನ್ನು ಸೇವಿಸುವುದರಿಂದ ಮೂತ್ರಪಿಂಡ, ಜಠರ, ಕರುಳಿನ ಮೇಲೆ ಗಂಭೀರವಾದ ಪರಿಣಾಮ ಬೀರಿದೆ. ಅದಿರು ಲಾರಿಗಳ ಸಂಚಾರದಿಂದ ಹರಡುವ ದೂಳಿನ ಕಣಗಳಿಂದ ಚರ್ಮ, ಗಂಟಲು, ಕಣ್ಣುಗಳಿಗೆ ಸಂಬಂಧಿಸಿದ ರೋಗಗಳು ಸರ್ವೇ ಸಾಮಾನ್ಯ.

ಇಡೀ ಸಂಡೂರು ತಾಲೂಕಿಗೆ ತೋರಣಗಲ್ಲಿನಲ್ಲಿ ಮಾತ್ರ ಒಂದು ಸಮುದಾಯ ಆರೋಗ್ಯ ಕೇಂದ್ರ ಇದ್ದು ಕಾರ್ಯನಿರ್ವಹಿಸುತ್ತಿರುವ 4 ವೈದ್ಯರು ಸೇರಿದಂತೆ 5 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರ ಒಟ್ಟು ಸಂಖ್ಯೆ 11. ಇಪ್ಪತ್ತೆಂಟು ಪ್ರಾಥಮಿಕ ಆರೋಗ್ಯ ಉಪ ಕೇಂದ್ರಗಳಲ್ಲಿ 23 ನರ್ಸಿಂಗ್ ದಾದಿಯರು, 25 ಸಹಾಯಕ ಆರೋಗ್ಯ ಅಧಿಕಾರಿ, 17 ಕಿರಿಯ ಆರೋಗ್ಯ ನಿರೀಕ್ಷಕರು, 4 ಲ್ಯಾಬ್ ಟೆಕ್ನಿಷಿಯನ್, 5 ಫಾರ್ಮಸಿಸ್ಟ್, 192 ಆಶಾ ಕಾರ್ಯಕರ್ತರು ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿದ್ದುಕೊಂಡು ಸೇವೆ ಸಲ್ಲಿಸಬೇಕಾದ ಬಹುತೇಕ ಸಿಬ್ಬಂದಿ ಪಟ್ಟಣದಲ್ಲಿ ವಾಸವಾಗುವುದರಿಂದ ಹಳ್ಳಿಗಾಡಿನ ರೋಗಿಗಳಿಗೆ ಹೆರಿಗೆ, ಅಪಘಾತ, ಹಾವು ಕಡಿತ, ಸೇರಿದಂತೆ ತುರ್ತು ಪರಿಸ್ಥಿತಿಯಲ್ಲಿ ಪ್ರಾಥಮಿಕವಾಗಿ ಚಿಕಿತ್ಸೆ ಲಭ್ಯವಾಗದೆ ದೂರದ ಪಟ್ಟಣತಾಲೂಕುಜಿಲ್ಲಾ ಕೇಂದ್ರಗಳಿಗೆ ಚಿಕಿತ್ಸೆಗೆ ತೆರಳಲು ಸಮರ್ಪಕವಾದ ಸಾರಿಗೆ ಸೌಲಭ್ಯಗಳು ದೊರಕದೆ ಸಾವುನೋವುಗಳಾಗುತ್ತಿವೆ. ಇನ್ನೊಂದೆಡೆ ತಾಲೂಕು ಆಸ್ವತ್ರೆಗಳಲ್ಲಿ ತುರ್ತು ಸಂದರ್ಭಕ್ಕೆ ಬೇಕಾದ ಚಿಕಿತ್ಸೆಔಷಧಿಗಳು ಲಭ್ಯವಾಗದೆ ಖಾಸಗಿ ಆಸ್ವತ್ರೆಗಳಲ್ಲಿ ಲಕ್ಷಾಂತರ ಹಣವನ್ನು ಕೊಟ್ಟು ಚಿಕಿತ್ಸೆ ಪಡೆದುಕೊಳ್ಳುವ ಪರಿಸ್ಥಿತಿ. ಒಟ್ಟಾರೆಯಾಗಿ ಇಡೀ ತಾಲೂಕಿನಲ್ಲಿನ ಸುಮಾರು 3 ಲಕ್ಷಕ್ಕೂ ಹೆಚ್ಚು ಜನರಿಗೆ ಲಭ್ಯವಿರುವ ಸರ್ಕಾರಿ ಎಂಬಿಬಿಎಸ್ ವೈದ್ಯರ ಒಟ್ಟು ಸಂಖ್ಯೆ 23. ಸರಾಸರಿ 13043 ಜನರಿಗೆ ಒಬ್ಬ ವೈದ್ಯ!

ಸಂಡೂರು ತಾಲೂಕು ಸಾರ್ವಜನಿಕ 100 ಹಾಸಿಗೆ ಆಸ್ವತ್ರೆಯ ಐಸಿಯು ಯೂನಿಟ್ನಲ್ಲಿ ಹಿಂದೆ 3 ಬೆಡ್ ವ್ಯವಸ್ಥೆಯಿತ್ತು. ಆದರೆ ಟೆಕ್ನಿಷಿಯನ್ ಇದ್ದಿಲ್ಲ, ಈಗ ಟೆಕ್ನಿಷಿಯನ್ ಹುದ್ದೆಗೆ ತಾತ್ಕಾಲಿಕ ನೇಮಕವಾಗಿದೆ. ಆದರೆ ಇಲ್ಲಿನ 3 ಉಪಕರಣಗಳು ಸೂಕ್ತ ನಿರ್ವಹಣೆಯಿಲ್ಲದೆ ಕೆಟ್ಟುಹೋಗಿವೆ. ಛಾವಣಿಯಿಂದ ನೀರು ಸೋರುತ್ತಿರುವುದರಿಂದ ಐಸಿಯು ವಿಭಾಗ ಉಪಯೋಗವಿಲ್ಲದಂತಾಗಿದೆ. ಡಯಾಲಿಸಿಸ್ ಸೌಲಭ್ಯಕ್ಕೆ ಇದ್ದ 2 ಮಷಿನ್ ಗಳಲ್ಲಿ 1 ಕಾರ್ಯ ನಿರ್ವಹಿಸುತ್ತಿದೆ.

ಗಣಿಗಾರಿಕೆ ಚಟುವಟಿಕೆಯ ಕೇಂದ್ರವಾದ ತಾಲೂಕಿನಲ್ಲಿ ವರ್ಷಕ್ಕೆ ಸುಮಾರು 150 ಅಪಘಾತಗಳು ಸಂಭವಿಸುತ್ತಿದ್ದು ತಾಲೂಕು ಸರ್ಕಾರಿ ಆಸ್ವತ್ರೆಯಲ್ಲಿ ಶೇಕಡ 40 ಅಪಘಾತಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ಅಪಘಾತಕ್ಕೊಳಗಾದ ರೋಗಿಗಳಿಗೆ ಮೇಜರ್ ಸರ್ಜರಿ ನಡೆಸಲು ಬೇಕಾದಂತಹ ತಜ್ಞವೈದ್ಯರು, ಶಸ್ರ್ತಚಿಕಿತ್ಸಾ ಕೊಠಡಿ, ಉಪಕರಣಗಳು ಮತ್ತು ರೇಡಿಯಾಲಾಜಿಸ್ಟ್ ಹುದ್ದೆ ಇಲ್ಲ. ಸ್ಕ್ಯಾನಿಂಗ್ ಯಂತ್ರ ಪಡೆದುಕೊಳ್ಳಲು ಮಾನ್ಯತೆ ಹೊಂದಿರದೇ ಇರುವುದರಿಂದ ಇಲ್ಲಿ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಸೌಲಭ್ಯಗಳು ಸಿಗುತ್ತಿಲ್ಲ. ಹಾಗಾಗಿ ಖಾಸಗಿ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಗುತ್ತದೆ. ಸಂಡೂರು ತಾಲೂಕಿನಲ್ಲಿ ಜಿಂದಲ್ ಕಂಪನಿ ಒಡೆತನದ ಸಂಜೀವಿನಿ ಮಲ್ಟಿಸ್ಪೆಷಲಿಟಿ ಆಸ್ವತ್ರೆ ಮತ್ತು ಸ್ಮಯೋರ್ ಸಂಸ್ಥೆಯ ಸಮುದಾಯ ಆರೋಗ್ಯ ಕೇಂದ್ರದಿಂದ ತಕ್ಕಮಟ್ಟಿಗೆ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುತ್ತಿದೆ.

100 ಹಾಸಿಗೆಯುಳ್ಳ ತಾಲೂಕು ಸಾರ್ವಜನಿಕ ಆಸ್ವತ್ರೆಯಲ್ಲಿ ಎರಡನೇ ಅಲೆ ಸಂದರ್ಭದಲ್ಲಿ ಐಸಿಯು, ವೆಂಟಿಲೇಟರ್, ಆಕ್ಸಿಜನ್, ಜನರೇಟರ್ ಸೇರಿದಂತೆ ಇತರೆ ಪೂರ್ವ ತಯಾರಿ ಮಾಡಿಕೊಳ್ಳದೇ ಇದ್ದುದರಿಂದ ಬಹಳ ಅನಾಹುತವಾಗಿದೆ. ಕೊರೊನ ಸೋಂಕಿತ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದೆ ಮೇಜೂನ್ ತಿಂಗಳಲ್ಲಿ 40 ಸಾವುಗಳಾಗಿವೆ. ಮೊದಲನೆಯ ಅಲೆಯ 9 ಸಾವು ಸೇರಿದಂತೆ ಕೋವಿಡ್ನಿಂದ ಒಟ್ಟು 49 ರೋಗಿಗಳು ತಾಲೂಕು ಸಾರ್ವಜನಿಕ ಆಸ್ವತ್ರೆಯೊಂದರಲ್ಲಿಯೆ ಸಾವನ್ನಪ್ಪಿದ್ದಾರೆ.

ಇನ್ನು ತರಾತುರಿಯಲ್ಲಿ ಜಿಂದಲ್ ಪ್ರಾಯೋಜಕತ್ವದಡಿಯಲ್ಲಿ 600 ಹಾಸಿಗೆಗಳ ತಾತ್ಕಾಲಿಕ ಆಕ್ಸಿಜನ್ ಬೆಡ್ ಸೆಂಟರ್ ನಿರ್ಮಾಣ ಮಾಡಲಾಯಿತು. ಕೋವಿಡ್ ಕೇರ್ ಸೆಂಟರ್ ಸೇರಿದಂತೆ ಜಿಲ್ಲೆಯ ವಿವಿಧ ಆಸ್ವತ್ರೆಗಳಲ್ಲಿ ಕಾರ್ಯನಿರ್ವಹಿಸಲು ಅವಶ್ಯಕವಿರುವ 21 ವೈದ್ಯರು, 16 ಅರವಳಿಕೆ ತಜ್ಞರು, 20 ಇಎನ್ಟಿ ವೈದ್ಯರು, 6 ಪಿಜಿಷಿಯನ್ ಸೇರಿದಂತೆ ಒಟ್ಟು 50 ವೈದ್ಯರು (ಒಬ್ಬ ವೈದ್ಯರಿಗೆ 2.5 ಲಕ್ಷ ರೂ, ಸಂಬಳ) ಮತ್ತು 362 ಪೂರಕ ಸಿಬ್ಬಂದಿಯ ತಾತ್ಕಾಲಿಕ ನೇಮಕಾತಿಗಾಗಿ ಜಿಲ್ಲಾಡಳಿತ ಮೇ 4 ರಂದು ಪ್ರಟಣೆ ಹೊರಡಿಸಿತು. ಆದರೆ ಸಂದರ್ಶನಕ್ಕೆ ಹಾಜರಾದ ವೈದ್ಯರ ಸಂಖ್ಯೆ 7, ಸಿಬ್ಬಂದಿಗಳ ಸಂಖ್ಯೆ 80. ಅಗತ್ಯ ವೈದ್ಯರು, ಸಿಬ್ಬಂದಿ ಲಭ್ಯವಾಗದೆ 600 ಹಾಸಿಗೆಯ ಕೋವಿಡ್ ಕೇರ್ ಕೇಂದ್ರವನ್ನು ಮುಚ್ಚಲಾಯಿತು.

ಜಿಲ್ಲೆಯಲ್ಲಿ 17.09.2015 ರಿಂದ ಜನವರಿ 2021 ರವರೆಗೆ ಜಿಲ್ಲಾ ಖನಿಜ ನಿಧಿಗೆ (ಆಒಈ) ಸಂದಾಯವಾದ ಅದಿರು ಮಾರಾಟದ ಒಟ್ಟು ಸೆಸ್ ಹಣ 1214 ಕೋಟಿ 42 ಲಕ್ಷದ 84 ಸಾವಿರ ರೂಪಾಯಿ. ಇದರಲ್ಲಿ ಬಳ್ಳಾರಿ ಜಿಲ್ಲಾಡಳಿತವು 214 ಕೋಟಿ 7.5 ಲಕ್ಷ ರೂಪಾಯಿಯನ್ನು ಪ್ರಾಥಮಿಕ, ಉಪಆರೋಗ್ಯ ಕೇಂದ್ರ, ಸಮುದಾಯ ಆಸ್ವತ್ರೆಗಳ ನಿರ್ಮಾಣದುರಸ್ಥಿ, 40 ಜೀವರಕ್ಷಕ ಆಂಬುಲೆನ್ಸಗಳು, ಐಸಿಯು, ಆಡಿಯೋಮೆಟ್ರಿ, ಸಿಎಸ್ಎಸ್ಡಿ ಯಂತ್ರೋಪಕರಣಗಳು, ನೀರು ಸರಬರಾಜು, ವಿಮ್ಸ್ತಾರನಾಥ ವೈದ್ಯಕೀಯ ಕಾಲೇಜುಗಳ ಉನ್ನತೀಕರಣಕ್ಕೆ ಬಳಕೆ ಮಾಡಿಕೊಂಡಿದೆ.

ಹಾಗೆಯೆ ಸಂಡೂರು ತಾಲುಕಿನಲ್ಲಿ ಗಣಿಗಾರಿಕೆಯ ಉದ್ದಿಮೆಯನ್ನು ನಡೆಸುವ ಕಂಪನಿಗಳಸಾಮಾಜಿಕ ಹೊಣೆಗಾರಿಕೆಯಡಿಯಲ್ಲಿರಾಜ್ಯದಲ್ಲಿಯೆ ಪ್ರಥಮ ಬಾರಿಗೆಅಮೃತವಾಹಿನಿ ಯೋಜನೆಯ ಹೆಸರಿನಲ್ಲಿ 13 ಸಂಚಾರಿ ಆಂಬುಲೆನ್ಸ್ ಒದಗಿಸಲಾಗಿದೆ. ಒಬ್ಬ ವೈದ್ಯ, ಒಬ್ಬ ಫಾರ್ಮಸಿಸ್ಟ್, ಒಬ್ಬ ಶುಶ್ರೂಷಕಿಯನ್ನು ಒಳಗೊಂಡ ಅಂಬುಲೆನ್ಸ್ ವ್ಯವಸ್ಥೆ ಮೂಲಕ ಪ್ರತಿ ಹಳ್ಳಿಗಳಲ್ಲಿ ಸಂಚರಿಸಿ ಪ್ರಾಥಮಿಕ ರೋಗಗಳಿಗೆ ಚಿಕಿತ್ಸೆ ಜೊತೆಗೆ ಔಷಧಿ ನೀಡಿದ್ದರಿಂದ ಒಂದಿಷ್ಟು ರೋಗಿಗಳಿಗೆ ಸಹಕಾರಿಯಾಗಿದೆ. ಸರ್ಕಾರಿ ಆರೋಗ್ಯ ಕ್ಷೇತ್ರದಲ್ಲಿನ ಮೂಲಭೂತ ಸೌಲಭ್ಯಗಳ ಕೊರತೆ ತುಸುಮಟ್ಟಿಗೆ ನೀಗಿದೆ.

ಆಧುನಿಕ ವೈದ್ಯಕೀಯ ಯಂತ್ರೋಪಕರಣ ಖರೀದಿ ಮಾಡಲು, ಹೊಸದಾಗಿ ತಾಲೂಕು ಮಟ್ಟದಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸಲು, ಡಯೋಗ್ನಾಸ್ಟಿಕ್ ಕೇಂದ್ರಗಳನ್ನು ಸ್ಥಾಪಿಸಲು ಜಾಗ ಸೇರಿದಂತೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಳ್ಳಲು ಸರ್ಕಾರದ ಹಣವನ್ನೆ ಕಾಯುತ್ತ ಕೂರಬೇಕಿಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆಗಣಿಬಾಧಿತ ಪ್ರದೇಶದ ಪರಿಸರ ಪುನಶ್ಚೇತನ ಅಭಿವೃದ್ದಿಗಾಗಿ ರಚಿಸಿದ ನಿಗಮದಲ್ಲಿ (ಕೆ.ಎಂ..ಆರ್.ಸಿ) 2019 ರವರೆಗೆ ಸಂಗ್ರಹವಾದ ಮೊತ್ತ 17,672 ಕೋಟಿ ರೂಪಾಯಿ ಇದೆ. ಹಣದಿಂದ ವೈದ್ಯಕೀಯ ಸೇವೆಯಲ್ಲಿ ಕ್ರಾಂತಿಯನ್ನೆ ಮಾಡಬಹುದಾಗಿದೆ. ನಿವೃತ್ತ ನುರಿತ ವೈದ್ಯರ ಸ್ವತಂತ್ರ ಸಮಿತಿ (ಅಟನಾಮಸ್ ಬಾಡಿ) ರಚಿಸಿ ವೈದ್ಯಕೀಯ ಕ್ಷೇತ್ರಕ್ಕೆ ಬೇಕಾದ ಉಪಕರಣಗಳು, ತಜ್ಞ ವೈದ್ಯರನ್ನು ಸೇರಿದಂತೆ ಇತರೆ ಅಗತ್ಯ ಸಿಬ್ಬಂದಿಗಳ ನೇಮಕ ಮಾಡಿಕೊಂಡು ಅರೋಗ್ಯ ವ್ಯವಸ್ಥೆಯನ್ನು ಸುಧಾರಿಸಬಹುದು.

ಸರ್ಕಾರದ ವ್ಯವಸ್ಥೆಯೊಳಗೆ ಕೆಲಸ ಮಾಡಲು ಡಾಕ್ಟರುಸಿಬ್ಬಂದಿ ಹಿಂದೇಟು ಹಾಕುತ್ತಿರುವುದಕ್ಕೆ ಮುಖ್ಯ ಕಾರಣ ಖಾಸಗಿ ಆಸ್ವತ್ರೆಯಲ್ಲಿ ಸಿಗುವ ಅಧಿಕ ವೇತನ. ಮೇಲಾಧಿಕಾರಿಗಳ ಅನಗತ್ಯ ಒತ್ತಡ, ರೋಗಿಗಳ ಕಡೆಯವರಿಂದ ದೌರ್ಜನ್ಯ, ಅಭದ್ರತೆ ಸೇರಿದಂತೆ ¯ವಾರು ಕಾರಣಗಳಿಂದ ಸರ್ಕಾರಿ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ.

ಇನ್ನು ಗಣಿ ಮಾಲೀಕರು ತಮ್ಮ ಗಣಿ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ಭಾಗದ ಉಪ ಆರೋಗ್ಯ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವುದರ ಜೊತೆಗೆ ವೈದ್ಯರುನರ್ಸ್ಗಳ ಸಂಬಳ ಸೇರಿದಂತೆ ಎಲ್ಲಾ ರೀತಿಯ ಸೌಕರ್ಯಗಳನ್ನು ಕಲ್ಪಿಸಲು ಸಿದ್ಧರಿದ್ದಾರೆ; ಆದರೆ ಉದ್ದಿಮೆದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ತಾಲೂಕು/ಜಿಲ್ಲಾಡಳಿತ ನಿರಾಸಕ್ತಿವಹಿಸಿದೆ ಎಂಬುದು ಗಣಿಗುತ್ತಿಗೆದಾರರ ಅಭಿಪ್ರಾಯ.

ಜಿಲ್ಲೆಯ ಸಂಸದರು, ರಾಜ್ಯ ಸರ್ಕಾರ, ಜಿಲ್ಲಾಡಳಿತ, ಉಸ್ತುವಾರಿ ಸಚಿವರು, ಶಾಸಕರು ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗೊತ್ತಿ ಸೂಕ್ತ ರೀತಿಯಲ್ಲಿ ಕಾರ್ಯಪ್ರವೃತ್ತರಾದರೆ ಆರೋಗ್ಯ ಕ್ಷೇತ್ರವನ್ನು ಸುಸ್ಥಿರವಾಗಿಡಲು ಸಾಧ್ಯ.

ಆರೋಗ್ಯ ಅವ್ಯವಸ್ಥೆಯ ಅಂಕಿಅಂಶ!

ಸಂಡೂರು ತಾಲೂಕಿನ ಒಟ್ಟು ಜನಸಂಖ್ಯೆ 260213 (2011 ಜನಗಣತಿ). ಸರ್ಕಾರಿ ಆರೋಗ್ಯ ಕ್ಷೇತ್ರದ ವಲಯದಲ್ಲಿ ಲಭ್ಯವಿರುವ ವೈದ್ಯಕೀಯ ಸಿಬ್ಬಂದಿಗಳ ಅಂಕಿಅಂಶಗಳು ಹೀಗಿವೆ: ತಾಲೂಕು ಸಾರ್ವಜನಿಕ 100 ಹಾಸಿಗೆ ಆಸ್ವತ್ರೆಯಲ್ಲಿ ಇಡೀ ತಾಲೂಕಿನ ಆರೋಗ್ಯ ಕ್ಷೇತ್ರದ ಉಸ್ತುವಾರಿಯನ್ನು ನೋಡಿಕೊಳ್ಳಬೇಕಾದ ಮುಖ್ಯ ಆರೋಗ್ಯ ಅಧಿಕಾರಿ (ಟಿ.ಎಚ್..) ಹುದ್ದೆ ಖಾಲಿ. ಇಬ್ಬರು ಸ್ತ್ರೀರೋಗ ತಜ್ಞರ ಪೈಕಿ ಒಬ್ಬರಿದ್ದಾರೆ. ನೇತ್ರ ತಜ್ಞಮಕ್ಕಳ ತಜ್ಞರ ಹುದ್ದೆ ಖಾಲಿ. .ಎನ್.ಟಿ. ತಜ್ಞರು 1, ಸಾಮಾನ್ಯ ಶಸ್ತ್ರಚಿಕಿತ್ಸಕಅರಿವಳಿಕೆ ತಜ್ಞ 1, ಮೂಳೆ ಶಸ್ತ್ರಚಿಕಿತ್ಸೆ ತಜ್ಞ 1, ನೇತ್ರ ತಜ್ಞ 1, ಮೆಡಿಸಿನ್ ವೈದ್ಯ 1, ಸಾಮಾನ್ಯ ಕರ್ತವ್ಯ ವೈದ್ಯಕೀಯ ಅಧಿಕಾರಿ 4ರಲ್ಲಿ ಇಬ್ಬರು ಕಾರ್ಯನಿರ್ವಹಿಸುತ್ತಿದ್ದಾರೆ. ಲ್ಯಾಬ್ ಟೆಕ್ನಿಷಿಯನ್-2, ನರ್ಸಿಂಗ್ ಸ್ಟಾಫ್-7, ಡಿ ಗ್ರೂಪ್-19 ವಾಹನ ಚಾಲಕ-1, ಫಾರ್ಮಸಿಸ್ಟ್-2, ಸುಪರಿಂಡೆಂಟ್-1, ಕ್ಲಕ್-4, ಕಿ..ಸಹಾಯಕಿ -1, ಇತರೆ 10 ಸಿಬ್ಬಂದಿ ಸೇರಿದಂತೆ ಒಟ್ಟು 44 ಸಿಬ್ಬಂದಿಗಳ ಕೊರತೆ ಇದ್ದು ಪಟ್ಟಣದ ಪ್ರತಿ ವಾರ್ಡಿನಲ್ಲಿ 24 ಆಶಾ ಕಾರ್ಯಕರ್ತರು ಕೆಲಸ ನಿರ್ವಹಿಸುತ್ತಿದ್ದಾರೆ. ಕೋವಿಡ್ ಸೋಂಕಿನ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಅರೆಕಾಲಿಕ ಗುತ್ತಿಗೆಂi ಆಧಾರದಲ್ಲಿ ವೈದ್ಯರು 2, ನರ್ಸಿಂಗ್ 14, ಸಲಹೆಗಾರರು 4, ಲ್ಯಾಬ್ ಟೆಕ್ನಿಷಿಯನ್ 7, ಇತರೆ 6 ಹುದ್ದೆ ಸೇರಿದಂತೆ ಒಟ್ಟು 34 ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.


ಲಾಕ್ಡೌನ್ ಮ್ಯಾರೇಜ್ ಅರ್ಥಾತ್ ದಿಗ್ಬಂಧನದ ಅನುಬಂಧ

ಕೋರೋನಾ ಕಾಲದ ಬಹುತೇಕ ಮದ್ವಿಗಳಲ್ಲಿ ಲಗ್ನಪತ್ರ ಪ್ರಿಂಟ್ ಹಾಕ್ಸಲಿಲ್ಲ, ಬೀಗ್ರ ಮನೆಮನೆಗೆ ಹೋಗಿ ಕರಿಲಿಲ್ಲ, ಬ್ಯಾಂಡು ಭಂಜಂತ್ರಿಗಳ ಗದ್ದಲ ಮೊದ್ಲೆ ಇಲ್ಲ, ಮೈಕಾಸುರನ ಹಾವಳಿಯಂತೂ ಇಲ್ವೆ ಇಲ್ಲ. ಆದ್ರೂ ಚೆಂದ ಚೆಂದ ಮದ್ವಿ ಆದವು.

ಲಾಕ್ಡೌನ್ (ದಿಗ್ಬಂಧನ) ಕಾಲಘಟ್ಟದಲ್ಲಿನ ಬಹುತೇಕ ಮದುವೆಗಳು ಸೂರ್ಯ ಹುಟ್ಟೋಕೂ ಮುಂಚೆಯೇ ನಡೆದು ಹೋದವು. ಅದ್ದೂರಿಯ ಅಬ್ಬರವಿಲ್ಲ, ಮೆರವಣಿಗೆಯ ಉರುವಣಿಗೆ ಇಲ್ಲ, ಪಟಾಕಿ ಸಿಡಿಮದ್ದುಗಳ ಹಾವಳಿ ಇಲ್ಲ, ಮೋಜುಮಸ್ತಿಗಳ ಕಿರಿಕಿರಿ ಇಲ್ಲ, ಛತ್ರಗಳ ಬಾಡಿಗೆ ಇಲ್ಲ, ಜನಜಂಗುಳಿಯ ಜಂಜಾಟವಿಲ್ಲ, ಮಂತ್ರಘೋಷ ಘಂಟಾನಾದಗಳ ತಾರಕವಿಲ್ಲ. ಆದ್ರೂ ಮದ್ವೆ ಆದವು. ವಧೂವರರು ನವದಾಂಪತ್ಯಕ್ಕೆ ಕಾಲಿಟ್ಟರು.

ಒಂದರ್ಥದಲ್ಲಿ ಆಲೋಚಿಸಿದರೆ ದಿಗ್ಬಂಧನದಲ್ಲಿ ನಡೆದ ಮದುವೆಗಳು ಆದರ್ಶ ಎನಿಸುತ್ತವೆ. ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯ ವರ್ಗದವರ ಮದುವೆಗಳು ಸಹ ರಾಜಮಹಾರಾಜರ ಮದುವೆಗಳಂತೆ ವೈಭವೋಪೇತವಾಗಿ ನಡೆಯುತ್ತಿದ್ದವು. ಜಿದ್ದಾಜಿದ್ದಿಗೆ ಬಿದ್ದ ಜನರು ಅವರಿಗಿಂತ ನಮ್ಮ ಮದುವೆ ಅದ್ದೂರಿಯಾಗಿರಬೇಕೆಂಬ ಧಾವಂತದಲ್ಲಿ ಆಸ್ತಿಪಾಸ್ತಿ ಹಾನಿಮಾಡಿಕೊಂಡವರೂ ಉಂಟು. ಸಾಮಾನ್ಯ ವರ್ಗದವರ ಮದುವೆಗಳು ಅದ್ದೂರಿಯಾಗಿ ನಡೆಯಬಾರದಾ? ಎಂಬ ಪ್ರಶ್ನೆ ಮೂಡದಿರದು. ನಡೆಯಬೇಕು ನಿಜ. ಆದರೆ ಆಸ್ತಿಯನ್ನು ಕಳೆದುಕೊಂಡು, ಮದುವೆಯ ನಂತರ ಸಾಲಕ್ಕಾಗಿ ಮೈಮನಸ್ಸು ಹೈರಾಣಾಗುವಂತೆ ದುಡಿಯುವ ತಾಪತ್ರಯ ಯಾಕೆ ಬೇಕಿತ್ತು ಅನಿಸುತ್ತೆ.

ಕಳೆದ ಒಂದು ದಶಕದಿಂದ ಇತ್ತೀಚಿಗೆ ಸರಳತೆಗೆ ಸಾಮೂಹಿಕ ವಿವಾಹಗಳು ಅತ್ಯುತ್ತಮ ಎನ್ನುವಂತಾಗಿತ್ತು. ಪ್ರಸ್ತುತ ಕೋವಿಡ್ ಹಿನ್ನೆಲೆಯಲ್ಲಿ ಸಾಮೂಹಿಕ ವಿವಾಹಗಳು ನಿಷಿದ್ಧವಾಗಿವೆ. ಕೊವಿಡ್ ಕಲಿಸಿದ ಪಾಠ ಎಂದರೆ ವಿವಾಹಗಳನ್ನು ಸರಳವಾಗಿ ಹೀಗೂ ಮಾಡಬಹುದು ಎಂಬುದಾಗಿದೆ. ಮನೆ ಮುಂದೆಯೇ ಅಚ್ಚುಕಟ್ಟಾದ ಹಾಗೂ ಸರಳವಾದ ವಿವಾಹಗಳು ಈಗ ಎಲ್ಲೆಡೆ ನಡೆದವು. ಇದರಿಂದ ಮದುವೆಗಾಗಿ ಮಾಡುತ್ತಿದ್ದ ಅಪಾರ ಖರ್ಚು ವೆಚ್ಚಗಳು ಕಡಿಮೆಯಾದವು. ಮದುವೆಯ ಸಾಲ ಇಲ್ಲವಾಯ್ತು.

ವಿವಾಹಗಳು ಸರಳವಾಗಿರಬೇಕಾದುದೇನೊ ನಿಜ. ಆದರೆ ಕೋವಿಡ್ ಕಾಲಘಟ್ಟದಲ್ಲಿ ಸಂಭ್ರಮದ ಮದುವೆಗಳನ್ನೇ ನಂಬಿದ್ದ ಒಂದಿಷ್ಟು ವರ್ಗಕ್ಕೆ ದೊಡ್ಡ ಪೆಟ್ಟು ಬಿದ್ದಿತು. ಮದುವೆಗಾಗಿ ಲಗ್ನಪತ್ರಿಕೆ ತಯಾರಿಸುವ ಸಂಸ್ಥೆಗಳಲ್ಲಿನ ಕೆಲಸಗಾರರು, ಮುದ್ರಣದಲ್ಲಿದ್ದ ಕೆಲಸಗಾರರು, ಭಾಂಡೆ, ಜವಳಿ ಅಂಗಡಿಗಳಲ್ಲಿದ್ದ ಕೆಲಸಗಾರರು, ಫೋಟೋ ಮತ್ತು ವೀಡಿಯೋಗ್ರಾಫರ್, ಶಾಮಿಯಾನದವರು, ಬ್ಯಾಂಡ್ ಭಜಂತ್ರಿಯವರು, ಮೆರವಣಿಗೆ ಹಾಡುಗಾರರು ಮತ್ತು ನೃತ್ಯಗಾರರು, ಛತ್ರಗಳಲ್ಲಿನ ಕೆಲಸಗಾರರು, ಅಡುಗೆದಾರರು, ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಲಾಕ್ಡೌನ್ ಎಂಬುದು ಅಕ್ರಮ ಮದುವೆಗಳಿಗೆ ಒಂದು ರೀತಿಯ ವರದಾನವೂ ಆಯಿತು ಎನ್ನಬಹುದು. ಅದೆಷ್ಟೋ ಬಾಲ್ಯವಿವಾಹಗಳು ಯಾರ ಗಮನಕ್ಕೂ ಬಾರದೇ ನಡೆದೇ ಹೋದವು. ಇದು ನಮ್ಮ ಮಕ್ಕಳ ದೌರ್ಭಾಗ್ಯವೋ, ವ್ಯವಸ್ಥೆಯ ಲೋಪವೋ, ಪೋಷಕರ ನಿರ್ಲಕ್ಷವೋ ತಿಳಿಯದು. ಶಾಲೆಗಳು ಮುಚ್ಚಿದ್ದರಿಂದ ಅನೇಕ ಬಾಲಕಿಯರು ಮಾನಸಿಕ ಹಾಗೂ ದೈಹಿಕ ನೋವು ಅನುಭವಿಸುವಂತಾಯ್ತು. ಕೆಲ ಬಾಲಕಿಯರು ಲೈಂಗಿಕವಾಗಿ ದುರ್ಬಳಕೆಗೆ ಒಳಗಾಗಿದ್ದೂ ಇದೆ. ಇಂತಹ ಕುಕೃತ್ಯಗಳಿಂದ ಬೇಸತ್ತ ಪಾಲಕರು ತಮ್ಮ ಮಕ್ಕಳಿನ್ನೂ ಅಪ್ರಾಪ್ತರು ಎಂದು ಗೊತ್ತಿದ್ದರೂ ಮದುವೆ ಮಾಡಬೇಕಾದ ಅನಿವಾರ್ಯತೆಯಲ್ಲಿ ಸಿಕ್ಕಿಹಾಕಿಕೊಂಡರು. ಯಾವ ಸಂಸ್ಥೆಗಳು, ಯಾವ ವ್ಯವಸ್ಥೆಯು ಬಾಲ್ಯವಿವಾಹವನ್ನು ನಿಲ್ಲಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಯಿತು.

ಶ್ರೀಮಂತ ವರ್ಗಕ್ಕೆ ಅದ್ದೂರಿ ಮದುವೆಗಳು ಇದ್ದರೂ ಪರವಾಗಿಲ್ಲ, ಮಧ್ಯಮ ಮತ್ತು ಬಡವರ್ಗಕ್ಕೆ ಸರಳ ವಿವಾಹಗಳು ಅನುಕೂಲ. ಇನ್ನು ಮುಂದೆಯಾದರೂ ಇಂತಹ ಸರಳ ಮದುವೆಗಳನ್ನು ಮಾಡುವ ಮೂಲಕ ಸಾಲವಿಲ್ಲದ ಮದುವೆಯ ಸಂಭ್ರಮವನ್ನು ಅನುಭವಿಸಬಹುದಲ್ಲವೇ?

ಆರ್.ಬಿ.ಗುರುಬಸವರಾಜ, ಹೊಳಗುಂದಿ


ಕುಟುಂಬದ ಬೆಲೆ ಅರಿವಿಗೆ ತಂದ ಸೋಂಕು

ಜೀವನದ ಎಲ್ಲಾ ಕ್ಷೇತ್ರಗಳನ್ನು ಅಲ್ಲೋಲಕಲ್ಲೋಲಗೊಳಿಸಿ, ಬದುಕುವ ಮೂಲ ಸ್ತೋತ್ರವೇ ಎಲ್ಲೆಲ್ಲೂ ಮೊಳಗುವಂತೆ ಮಾಡಿತು ಕೊರೋನ ಕಾಯಿಲೆ. ನೆಗಡಿ ಕೆಮ್ಮು ಮತ್ತು ಶೀತವೂ ಕೂಡ ಮಾರಕವಾಗಿ ಕುಟುಂಬ ವ್ಯವಸ್ಥೆಯನ್ನೇ ಬುಡಮೇಲು ಮಾಡಬಹುದೆಂಬುದನ್ನು ಕೊರೋನಾ ನಿದರ್ಶನಗಳ ಮೂಲಕ ಸ್ಪಷ್ಟಪಡಿಸಿತು. ಸಭೆಸಮಾರಂಭಗಳಲ್ಲಿನ ಬೆಡಗಿನ ಸಂಭ್ರಮಕ್ಕೆ ಮಿತಿ ಹಾಕಿ, ಮತ್ತೆ ಗಾಂಧೀಜಿಯ ಸರಳ ಬದುಕಿನ ಕುರಿತು ಯೋಚಿಸುವಂತೆ ಮಾಡಿತು.

ಕೊರೋನಾ `ಮನೆವಾಸದಿಂದ ಜೀವನದ ನಿಜ ಆಯಾಮದ ಕುರಿತು ಪುನರ್ಮನನ ಮಾಡುವಂತೆ ಆಯ್ತು. ಭಾರತೀಯ ಸಮಾಜದ ಮೂಲ ಸ್ಥಂಭವಾದ ಕುಟುಂಬದ ಬೆಲೆ ಈಗ ಎಲ್ಲರಿಗೂ ಅರಿವಾಗಿದೆ. ಮನೆಯ ಊಟ, ಆರೈಕೆ, ಕುಟುಂಬದ ಸದಸ್ಯರ ಆಸರೆ ಮತ್ತು ಮನೆಮದ್ದು ಎಲ್ಲಾ ಅವ್ಯವಸ್ಥೆಗಳಿಗೂ ರಾಮಬಾಣವೆಂದು ದೃಢವಾದಂ ತಾಗಿದೆ. ಮೂಲಕ ನಮ್ಮ ಆಧುನಿಕತೆ, ಪ್ರಗತಿಯು ನಮ್ಮ ಜೀವನದ ಮೂಲ ಆಶಯವಾದ ನೆಮ್ಮದಿಯನ್ನು ಕಳೆದುಕೊಳ್ಳುವತ್ತ ಸಾಗುತ್ತಿತ್ತು ಎಂಬುದು ಸಾಬೀತಾಯಿತು. ಮತ್ತೆ `ವ್ಯಕ್ತಿಯಿಂದ ಸಮಷ್ಟಿ ವ್ಯಾಖ್ಯಾನಕ್ಕೆ ಬಲ ತುಂಬಬೇಕಾಗಿದೆ ಹಾಗೂ ಮೂಲಕ ಎಲ್ಲಾ ನಿಟ್ಟಿನಿಂದಲೂ ವ್ಯಕ್ತಿಯನ್ನು ಆಮೂಲಾಗ್ರವಾಗಿ ಆರೋಗ್ಯವಾಗಿಡುವ ಜವಾಬ್ದಾರಿ ಸರ್ಕಾರದ್ದೂ ಕೂಡ ಎನ್ನುವಂತಾಗಿದೆ. “ನಿನ್ನ ನೆರೆಹೊರೆಯವರನ್ನು ಪ್ರೀತಿಸುಎಂಬ ಏಸುವಿನ ನುಡಿಗೆ ಮತ್ತಷ್ಟು ಹೊಳಹುಗಳು

ದಕ್ಕಿದೆ.

ಊರಿನಲ್ಲಿ ಯಾರಿಗೋ ಕೊರೋನಾ ಬಂದಿದೆ ಎಂಬ, ಮೊದಲನೇ ಅಲೆಯಲ್ಲಿನ ಭಯ, ಎರಡನೇ ಅಲೆಯಲ್ಲಿ ಮನೆಯವರೆಗೂ ಕಾಲಿಟ್ಟಿತು. ಕೋರೋನ ಕುರಿತಾದ ಮಾಹಿತಿ, ಆಮ್ಲಜನಕ ಮತ್ತು ವೈದ್ಯರ ಆಯ್ಕೆ, ಆಸ್ಪತ್ರೆ, ಹೋಮ್ ಕ್ವಾರನ್ಟೈನ್ ಕುರಿತಾದ ಅನೇಕ ಅಂಕಿಅಂಶಗಳು, ಸಂದೇಹಗಳು ನಮ್ಮ ನೆಲೆಯಲ್ಲೇ ಜೀವ ಪಡೆದವು.

ನನ್ನ ಪತಿಯ ಕೋವಿಡ್ ಆರೈಕೆಯಲ್ಲಿ, ಸಾಗಿಬಂದ ಜೀವನದ ಅನೇಕ ಹಂತಗಳು ಮನಃಪಟಲದಲ್ಲಿ ಶರವೇಗದಲ್ಲಿ ಹಾದುಹೋಗಿದ್ದು ಸುಳ್ಳಲ್ಲ. ಇರುವುದನ್ನು ಕಳೆದುಕೊಳ್ಳಬಹುದಾದ ಸಂದರ್ಭಕ್ಕೆ ಮುಖಾಮುಖಿಯಾಗಿದ್ದು ನನ್ನ ಮಟ್ಟಿಗೆ ಕೊರೋನಾ ಎರಡನೆಯ ಅಲೆಯ ಮುಖ್ಯ ಫಜೀತಿಯಾಗಿತ್ತು.

ಇರುವವರೆಗೆ ಸಂತಸದ, ಬಾಂಧವ್ಯದ ಜೀವನವನ್ನು ಸಾಗಿಸುವ ಶಪಥವನ್ನು ಬೋಧಿಸಿದಂತಿದೆ, ಕೋರೋನ ವೈರಾಣು!

ಎಂ.ಕುಸುಮ, ಹಾಸನ


`ಅನಿವಾರ್ಯ ಸಿದ್ಧತೆಗಳಬಗ್ಗೆ ಚಿಂತಿಸಬೇಕಿದೆ

2020 ಮಾರ್ಚ್ ಮೊದಲ ವಾರದಲ್ಲಿ ವಿರಳವಾಗಿ ಅಲ್ಲೊಬ್ಬ ಇಲ್ಲೊಬ್ಬ ಮಾಸ್ಕ್ ಹಾಕಿಕೊಂಡವರನ್ನು ಕುಚೇಷ್ಟೆಯಿಂದ ಕಾಣುವುದರಿಂದ, ಇಂದು ಮಾಸ್ಕ್ ಹಾಕಿಕೊಳ್ಳದವರನ್ನು ಅಪರಾಧಿಯಾಗಿಸಿ ದಂಡ ವಿಧಿಸುವವರೆಗಿನ ಪಯಣದಲ್ಲಿ ಸಾಮಾಜಿಕ, ರಾಜಕೀಯ, ಆರ್ಥಿಕ ಮಾರಣಹೋಮವೇ ನಡೆದಿದೆಯೇನೋ ಎನ್ನಿಸುತ್ತಿದೆ.

ಸ್ವಾತಂತ್ರ ಹೋರಾಟವನ್ನು ಬಹುತೇಕ ಮರೆತ, ಮಹಾಯುದ್ಧಗಳ ನೆನಪೇ ಇರದ ಕಾಲಘಟ್ಟದಲ್ಲಿ ವಿಶ್ವದ ಮುಂಚೂಣಿ ರಾಷ್ಟ್ರವಾಗಬಹುದಾದ ಎಲ್ಲ ಲಕ್ಷಣಗಳ ಹೊಳಹನ್ನೂ ತೋರಿಸುತ್ತಿದ್ದ ಭಾರತ ಕೊರೊನಾ ಕಾರಣದಿಂದ ಶತಮಾನಗಳ ಹಿಂದೆ ಹೋಗಿ ನಿಂತಿದೆ!

ಕೊರೊನಾ ದಾಳಿಯನ್ನು ಆರಂಭದಲ್ಲಿ ಬಹು ಹಗುರವಾಗಿ ಪರಿಗಣಿಸಲಾಗಿತ್ತು. ತಟ್ಟೆ ಬಾರಿಸಿ, ಕೊರೊನಾ ಗೋ ಬ್ಯಾಕ್ ಎಂಬ ಘೋಷಣೆ ಕೂಗಿ ಇದನ್ನು ಓಡಿಸುತ್ತೇವೆ ಎಂದು ನಂಬಿದ ಅಮಾಯಕ ಜನರು ಇದು ನಮ್ಮ ದೇಶಕ್ಕೆ ಬರುವುದೇ ಇಲ್ಲ ಎಂದೂ ಅಂದುಕೊಂಡಿದ್ದರು.

ಪ್ರಪಂಚದ ಮೂಲೆ ಮೂಲೆಗಳಲ್ಲಿ ಇರುವ ಭಾರತೀಯರು ತಾಯ್ನಾಡಿಗೆ ಜೀವ ಉಳಿಸಿಕೊಳ್ಳಲು ಬಂದರು. ಸೋಂಕು ಹೆಚ್ಚುತ್ತ ಹೋಯಿತು. ಪ್ರಕ್ರಿಯೆಯಲ್ಲಿ ಯಾವ ತಪ್ಪುಗಳು ಯಾರಿಂದ ಆದವು, ಸರ್ಕಾರಗಳು ಎಲ್ಲಿ ಎಡವಿದವು, ಜನರ ತಪ್ಪುಗಳೇನು? ಎಲ್ಲ ಪ್ರಶ್ನೆಗಳು ಸಾಕಷ್ಟು ಚರ್ಚಿತವಾಗಿವೆ.

ಈಗ ಗಂಭೀರವಾಗಿ ಸರ್ಕಾರ, ಸಾರ್ವಜನಿಕರು ಚಿಂತಿಸಬೇಕಾಗಿರುವುದು `ಅನಿವಾರ್ಯ ಸಿದ್ಧತೆಗಳಕುರಿತು. ಕೊರೊನಾ ಇಷ್ಟು ಬೇಗ ನಮ್ಮ ದೇಶದಿಂದ ನಿರ್ಮೂಲನವಾಗಲಾರದೆಂದು ವೈದ್ಯರು ಎಚ್ಚರಿಕೆ ಕೊಟ್ಟಿದ್ದಾರೆ. ಕೊರೊನಾದ ಆರಂಭಿಕ ವರ್ಷದಲ್ಲಿ ಸರ್ಕಾರದ ಮುಂದಿದ್ದ ಸವಾಲುಗಳು. ಪ್ರಮುಖವಾಗಿ ಜನರ ಸುರಕ್ಷತೆ ಹಾಗೂ ಸೋಂಕಿನ ನಿಗ್ರಹವಾಗಿದ್ದವು. ಆದರೆ ಈಗ ಅದರೊಂದಿಗೆ ಆರ್ಥಿಕತೆಯ ಸಮಗ್ರ ಕಟ್ಟೋಣವಾಗಬೇಕಿದೆ.

ಮುಂದಿನ ವರ್ಷಗಳಲ್ಲಿ ಇಂಥ ಸಾಂಕ್ರಾಮಿಕ ರೋಗಗಳು ಹೆಚ್ಚಬಹುದು. ಇದಕ್ಕೆ ಹವಾಮಾನ ವೈಪರೀತ್ಯ, ಹೆಚ್ಚುತ್ತಿರುವ ತಾಪಮಾನ, ಅತಿವೃಷ್ಟಿ, ಅನಾವೃಷ್ಟಿ, ಆಹಾರ ಕಲಬೆರಕೆ, ಅಪೌಷ್ಟಿಕತೆ, ಬದಲಾದ ಜೀವನ ಶೈಲಿ ಮುಂತಾದ ಅನೇಕ ಕಾರಣಗಳ ಜೊತೆಗೆ ಬಯೋವಾರ್ ಗಳಿಗೂ ನಾವು ಸಿದ್ಧವಾಗಬೇಕಾದ ಕಾಲ ಬಂದಿದೆ. ಇಂಥ ಅನಿವಾರ್ಯ ಪರಿಸ್ಥಿತಿಗಳಿಗೆ ವಿಶೇಷ ಹಣಕಾಸಿನ ಪ್ರಸ್ತಾವನೆ ಆಯವ್ಯಯದಲ್ಲಿ ಮಾಡಿಕೊಳ್ಳುವುದು ಇನ್ನು ಮುಂದೆ ತೀರಾ ಅಗತ್ಯ.

ಇದುವರೆಗೂ ಕೆಲವು ಮಹಾನಗರಗಳು ಹಾಗೂ ನಗರಗಳಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳೂ ಕೇಂದ್ರೀಕೃತವಾಗಿವೆ. ಇದರಿಂದಾಗಿ ಕೊರೊನಾ ಸಂದರ್ಭದಲ್ಲಿ ಜನರ ಬವಣೆ ಅತೀ ಹೆಚ್ಚಾಯಿತು. ಉದ್ಯೋಗ, ಆಹಾರ, ಮನೆ ಎಲ್ಲವಕ್ಕೂ ತತ್ವಾರವಾಗಿ ನಗರಗಳನ್ನು ತೊರೆಯುವುದು ಅನಿವಾರ್ಯವಾಯಿತು. ಇಂದು ಕನಿಷ್ಠ ಸೌಲಭ್ಯಗಳೂ ಇರದ ಚಿಕ್ಕ ಪಟ್ಟಣ, ಹಳ್ಳಿಗಳೇ ಜನರಿಗೆ ಸುರಕ್ಷತೆಯ ತಾಣವಾಗಿವೆ. ಆದ್ದರಿಂದ ಇನ್ನು ಮುಂದೆ ಸರ್ಕಾರಗಳು ಗ್ರಾಮಗಳನ್ನು ಅಭಿವೃದ್ಧಿಗೊಳಿಸಲು ಹೆಚ್ಚು ಆಸಕ್ತಿ, ಹಣ ನೀಡಬೇಕು. ಗ್ರಾಮಗಳ, ಸಣ್ಣ ಪಟ್ಟಣಗಳ ಸರ್ಕಾರಿ ಆಸ್ಪತ್ರೆಗಳು ಎಲ್ಲ ರೀತಿಯ ಆರೊಗ್ಯ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಹೊಂದುವಂತಾಗಬೇಕು. ಬಡವರ, ಹಳ್ಳಿಗರ ಆರೋಗ್ಯದ ಬಗ್ಗೆ ಇರುವ ಅನಾದರ, ತಿರಸ್ಕಾರ ಅಲ್ಲಿನ ಸರ್ಕಾರಿ ಆಸ್ಪತ್ರೆಗಳ ಸ್ಥಿತಿಯಿಂದ ಜಗಜ್ಜಾಹೀರಾಗಿದೆ. ಶಹರಗಳ `ದೊಡ್ಡಾಸ್ಪತ್ರೆಗಳುಎಂದು ಕರೆಯಲ್ಪಡುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ಕೊರೊನಾದಂಥ ದುರಿತ ಕಾಲದಲ್ಲಿ ಜನರು ಹಾಗೂ ಸರ್ಕಾರದ ಪರವಾಗಿ ನಿಲ್ಲಲಿಲ್ಲ ಎಂಬುದನ್ನು ಮರೆಯಲಾಗದು. ಆದ್ದರಿಂದ ಸರ್ಕಾರಿ ಆಸ್ಪತ್ರೆಗಳನ್ನು ಹೆಚ್ಚು ಸುಸಜ್ಜಿತ ಗೊಳಿಸುವುದು ಅತ್ಯಂತ ಆದ್ಯ ಕೆಲಸವಾಗಬೇಕು.

ನೂತನ ದೋಶೆಟ್ಟಿ, ಬೆಂಗಳೂರು


ನಮ್ಮ ಮೂರ್ಖ ನಡವಳಿಕೆಗಳು ಈಗಷ್ಟೇ ಬೆತ್ತಲಾಗಿವೆ

ಕೊರೋನಾ ಕಾಲವು ಕಷ್ಟದ ಪರ್ವ ಎನ್ನುವಂತೆ ಭಾಸವಾಗುತ್ತಿದೆ. ಎಲ್ಲರ ಮುಖದಲ್ಲಿ ಖಿನ್ನತೆ, ಆತಂಕ, ಭಯ, ಅನಿಶ್ಚತತೆಯ ಅಭದ್ರತೆ ಆವರಿಸಿದೆ. ಸಾವು ಮತ್ತು ಕಾಲ ಎರಡೂ ಸಂಚು ಹೂಡಿದಂತೆ ಭಾಸವಾಗುತ್ತಿದೆ. ಇತ್ತೀಚಿನ ಸಾವಿನ ಸ್ವರೂಪ ಮತ್ತು ಆಕಸ್ಮಿಕಗಳು ಬದುಕನ್ನು ತಲ್ಲಣಗೊಳಿಸಿವೆ. ಸಾವಿನ ಬಗೆಗಿನ ನಮ್ಮ ಕಲ್ಪನೆಯ ಮರು ಚಿಂತನೆಯ ಕಾಲಘಟ್ಟದಲ್ಲಿ ನಿಂತಿದ್ದೇವೆ. ನಾವೇ ರೂಪಿಸಿಕೊಂಡ ವ್ಯವಸ್ಥೆಗಳನ್ನು ನಂಬಿದ್ದೆವು. ಅವೆಲ್ಲ ಈಗ ಕಣ್ಮುಂದೆ ಕುಸಿಯುತ್ತಿವೆ. ಜಾಗೃತ ಸ್ಥಳಗಳೆಂದು ಮಠಮಂದಿರ, ದೇವಸ್ಥಾನ, ಚರ್ಚ್, ಮಸೀದೆಗಳಿಗೆ ಹೋಗುತ್ತಿದ್ದೆವು. ಅಲ್ಲಿ ಗಾಢ ಮೌನ ಆವರಿಸಿದೆ. ದೇವರುಗಳೆಲ್ಲ ಮೂಕವಾಗಿವೆ. ಮಹಾಪುರುಷರೆಂದು ಪಾದ ಹಿಡಿಯುತ್ತದ್ದವರ ಚರಣಕಮಲಗಳಲ್ಲಿ ಹೊತ್ತು ಬರೀ ಬೆರಳು, ಚರ್ಮ ಕಾಣುತ್ತಿವೆ. ಅವರ ಶಕ್ತಿಉಕ್ತಿಗಳೆಲ್ಲ ಶ್ಯೂನ್ಯವಾಗಿವೆ. ಭವಿಷ್ಯ ಹೇಳುವವರು ತಮ್ಮ ಭವಿಷ್ಯಕ್ಕಾಗಿ ಪರದಾಡುತ್ತಿದ್ದಾರೆ. ನಮ್ಮ ಮೂರ್ಖ ನಡವಳಿಕೆಗಳು ಈಗಷ್ಟೇ ಬೆತ್ತಲೆಯಾಗಿವೆ. ಜ್ಞಾನವಿಜ್ಞಾನಕ್ಕೆ ಇರುವ ಮಿತಿಗಳು ಅನಾವರಣಗೊಂಡಿವೆ. ಮನುಷ್ಯನ ಅಸಹಾಯಕತೆ ಅರಿವಿಗೆ ಬರುವುದೇ ಇಂಥ ದುರಿತ ಕಾಲದಲ್ಲಿ.

ಸಾವಿಲ್ಲದ ಜಗತ್ತು ಯಾವ ಕಾಲಕ್ಕೂ ಇಲ್ಲ. ಸಾವು ನಿಶ್ಚಿತ. ಬರುವ ಕಾಲಕ್ಕೆ ಬಂದರೆ, ಅದು ಮೋಕ್ಷ. ಕೊರೋನಾದಂಥ ದುರಿತ ಸಾವುಗಳನ್ನು ಮುಕ್ತಿಮೋಕ್ಷ ಎನ್ನಲಾದೀತೆ? ಅಂತ್ಯ ಸಂಸ್ಕಾರವನ್ನೂ ಕಾಣದ ಹೆಣಗಳು, ಬೀದಿಯಲ್ಲಿ ಬಿಸುಡುವ ನಿರುಪಯುಕ್ತ ಸರಕುಗಾಗಿವೆ. ಬದುಕುವ ಧನ್ಯತೆಯನ್ನು ಕಿತ್ತುಕೊಂಡ ಅಸಾಧಾರಣ ಸಾವುಗಳು ಸೃಷ್ಟಿಸಿರುವ ಆವಾಂತರಗಳಿಗೆ ಮನುಕುಲ ನಿಬ್ಬೆರಗಾಗಿದೆ. ನಮ್ಮಲ್ಲ ಜ್ಞಾನ, ಆಲೋಚನೆ, ದೇವರುದೈವತ್ವಗಳನ್ನು ಮೀರಿ, ಅಟ್ಟಹಾಸಗೈಯುತ್ತಿದೆ. ಸಂದರ್ಭದಲ್ಲಿ ವಿಜ್ಞಾನ ಮತ್ತು ವೈದ್ಯಕೀಯ ವಿಶ್ಲೇಷಣೆಗಳು ಏನೇ ಆಗಿದ್ದರೂ, ಆತ್ಮಾವಲೋಕನದ ಕ್ಷಣ ಎದುರಾಗಿದೆ. ಬದುಕನ್ನು ಕುರಿತಾದ ಆತ್ಮಾನುಸಂಧಾನದ ವ್ಯಾಪ್ತಿಯಲ್ಲಿ ಹೊಸ ಪರಿಭಾಷೆಗಳು ಹುಟ್ಟಿಕೊಳ್ಳಬೇಕಿದೆ. ಅಜ್ಞಾನ, ಮೂಢನಂಬಿಕೆಗಳು, ಅರ್ಥಹೀನ ಕ್ರಿಯಾವಿಧಿಗಳು, ಇವುಗಳಾವು ನಮ್ಮನ್ನು ಕಷ್ಟದಿಂದ ಪಾರು ಮಾಡಲಾರವು ಎಂಬುದನ್ನು ಮನಗಾಣಬೇಕಾಗಿದೆ.

ಬಡವರು, ನಿರ್ಗತಿಕರು ಅಳುತ್ತಿದ್ದಂತೆ, ಸಿರಿವಂತರೂ ಗೊಣಗುತ್ತಿದ್ದಾರೆ. ಅಸಹಾಯಕರು ಒಂದೊತ್ತಿನ ಅನ್ನಕ್ಕಾಗಿ ಬಡಿದಾಡುತ್ತಿದ್ದರೆ, ಅಧಿಕಾರಸ್ಥರು ಪ್ರಸಂಗವನ್ನು ಹೇಗೆ ಲಾಭದಾಯಕವಾಗಿಸಿಕೊಳ್ಳಬಹುದೆಂದು ಹವಣಿಸುತ್ತಿದ್ದಾರೆ. ವೈದ್ಯಲೋಕದ ಅನುಪಮ ಸೇವೆಯ ಮಧ್ಯದಲ್ಲೂ, ಕೆಲವು ಸ್ವಾರ್ಥಿಗಳುಹೆಣಮತ್ತುಹಣಇವೆರಡನ್ನೂ ಒಂದೇ ತಕ್ಕಡಿಯಲ್ಲಿ ತೂಗುತ್ತಿದ್ದಾರೆ. ಪ್ರಭುತ್ವಕ್ಕೆ ಜನ ಛೀ ಥೂ ಎಂದು ಉಗಿದರೂ; ಯಾರೂ ಮಾಡದ್ದನ್ನು ಮಾಡಿದ್ದೇವೆ ಎಂಬ ನಿರ್ಲಜ್ಜತೆಯಲ್ಲಿ ಬೀಗುತ್ತಿರುವುದು ದುರಾದೃಷ್ಟಕರ.

ಈಶ್ವರ ಹತ್ತಿ, ಕೊಪ್ಪಳ


ಯುರೋಪಿನ ಚಿಂತಕರ ಅಸ್ತಿತ್ವವಾದ ನೆನಪಾಯಿತು

ಒಂದೇ ವರ್ಷದಲ್ಲಿ ತ್ರಿವಿಕ್ರಮನಂತೆ ಬೆಳೆದ ಕೊರೋನಾ ನಮ್ಮ ದೇಶವನ್ನು ಹೊಕ್ಕದ್ದು ಹೇಗೆ? ಬೆಳೆದದ್ದು ಹೇಗೆ? ಅಸಂಖ್ಯರ ಸಾವಿಗೆ ಕಾರಣವಾದದ್ದು ಹೇಗೆ? ಇವೆಲ್ಲ ಪ್ರಶ್ನೆಗಳಿಗೆ ಉತ್ತರಗಳಿಲ್ಲವೆ?

ಕರೋನಾ ನನ್ನ ಮನೆ ಬಾಗಿಲು ತಟ್ಟಿ ದಿಢೀರನೆ ಒಳಹೊಕ್ಕಿದ್ದು ಸಹ ನನಗೆ ದಿಗ್ಭ್ರಮೆಯನ್ನುಂಟು ಮಾಡಿದೆ. ಮೂರು ದಿನ ಜ್ವರ, ಕೆಮ್ಮು, ಕಫಕ್ಕೆ ಗಾಬರಿಯಾಗಿ ಪರೀಕ್ಷಿಸಿಕೊಂಡಾಗ ಸೋಂಕು ಇದೆ ಎಂದು ಗೊತ್ತಾಗಿ ಹೊಟ್ಟೆಯಲ್ಲಿ ನಡುಕ ಹುಟ್ಟಿತು! ಪರದೇಶದಲ್ಲಿದ್ದ ಮಗಳು, ಮಗ ಸಹ ಅಲ್ಲಿಂದಲೇ ವ್ಯವಸ್ಥೆ ಮಾಡಿದ್ದರಿಂದ ಸ್ಪೇಶಲ್ ವಾರ್ಡು ಸಿಕ್ಕಿತು. ಜನ್ಮದಲ್ಲೇ ನುಂಗದಷ್ಟು ಗುಳಿಗೆಗಳನ್ನು ನುಂಗಿಯು ಆಯ್ತು, ಇಂಜೆಕ್ಷನ್ಗಳನ್ನು ಚುಚ್ಚಿಸಿಕೊಂಡದ್ದೂ ಆಯ್ತು. ಆಸ್ಪತ್ರೆಯ ಊಟ ಯಾರಿಗೆ ಸೇರೀತು? ನನಗೂ ಸೇರಲಿಲ್ಲ. ಆರು ದಿನದ ಆರೈಕೆಯ ನಂತರ ನನ್ನ ಅಪಾರ್ಟಮೆಂಟಿಗೆ ಮರಳಿ ಬಂದೆ. ಸುತ್ತ ಮುತ್ತಲಿನ, ಮೇಲಿನ ಕೆಳಗಿನ ಎಲ್ಲ ಮನೆ ಬಾಗಿಲು, ಕಿಟಕಿ ಮುಚ್ಚಿಕೊಂಡು ಸಂಪೂರ್ಣವಾಗಿ ಬಹಿಷ್ಕಾರವನ್ನೇ ಹಾಕಿದವು. ಹಾಗಾಗಿ ಎರಡು ತಿಂಗಳಿನ ಗೃಹಬಂಧನದ ಶಿಕ್ಷೆಯನ್ನು ಅನುಭವಿಸುವಂತಾಯಿತು!

ಮನದ ಕನ್ನಡಿಯಲ್ಲಿ ನೋಡಿಕೊಂಡಾಗ ರೋಗದ ಅರಗಿನರಮನೆಯಿಂದ ಪಾರಾದಂತೆ ನಿರ್ಬಂಧಗಳಿಂದ ಮುಕ್ತಾಯದ ಅನುಭವವಾಯಿತು. ಸಂಪರ್ಕಗಳಿಲ್ಲದಿದ್ದಾಗ ಕೈಗೆ ಸಿಕ್ಕ ಜಾದೂ ದೀಪದಂತೆ ಉಪಯೋಗವಾದದ್ದೇನು ಗೊತ್ತೆ? ನನ್ನ ಮೊಬೈಲು! ದಿನವೂ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಮಕ್ಕಳ, ಮೊಮ್ಮಕ್ಕಳೊಂದಿಗಿನ ಮಾತುಕತೆ, ದಿನವೂ ಬಾಲ್ಯದ ಸ್ನೇಹಿತೆಯೊಂದಿಗೆ ಹಳೆಯ ನೆನಪುಗಳ ಕೊಡುಕೊಳೆಯು ಮನಸ್ಸಿಗೆ ಮುದ ನೀಡಿತು. ಓದಬೇಕೆಂದು ತೆಗೆದಿಟ್ಟ ಎರಡು ಡಜನ್ ಪುಸ್ತಕಗಳಲ್ಲಿ ಓದಿದ್ದು ಕೇವಲ ಎಂಟನ್ನು ಮಾತ್ರ. ಬರೆದದ್ದು ಹತ್ತಾರು ಕವಿತೆ, ಕತೆ, ಪ್ರಬಂಧಗಳು. ಇವೆಲ್ಲಕ್ಕಿಂತ ಮಿಗಿಲಾಗಿ ನಾನು ಸಮಯ ಕಳೆದದ್ದು ಮೊಬೈಲ್ನಲ್ಲಿರುವ ಬ್ಲಾಗ್ಗಳ ಓದಿನಲ್ಲಿ! ನನ್ನ ಓದಿನ ಕೋಣೆಗೆ ದೊಡ್ಡ ಕಿಟಕಿ ಇದೆ. ಕಿಟಕಿಯಲ್ಲಿ ಕಾಣುವ ಬೃಹತ್ ಮರದ ತುಂಬ ಸದಾ ಕುಣಿದಾಡುವ ಎಲೆ, ಟೊಂಗೆ, ಪಕ್ಷಿಗಳ ಕಲರವವು ನನ್ನಲ್ಲಿ ಲವಲವಿಕೆಯನ್ನು ಹುಟ್ಟಿಸಿದವು! ಎಲ್ಲಕ್ಕಿಂತ ಮಿಗಿಲಾಗಿ ನನಗೆ ಇಷ್ಟವಾದ ಹಳೆಯ ಹಿಂದಿ ಸಿನೆಮಾಗಳ ಹಾಡುಗಳನ್ನು ಮೊಬೈಲಿನಲ್ಲಿ ಆಲಿಸುತ್ತ ಮನದುಂಬಿಕೊಂಡ ದುಗುಡದ ಹೊರೆಯನ್ನು ಇಳಿಸಿದೆ.

ಕಾಲದ ಕನ್ನಡಿಯಲ್ಲಿ ಹಿಂದಿನ ಎರಡನೇ ಮಹಾಯುದ್ಧದಿಂದಾಗಿ ಸಂಭವಿಸಿದ ಸಾವು, ನೋವು, ನಿರಾಶೆ, ಏಕಾಕಿತನ ತುಂಬಿಕೊಂಡಾಗ ಯುರೋಪಿನ ಲೇಖಕರೂ, ಚಿಂತಕರೂ ಆದ ನಿಶೆ, ಸಾತ್ರ್ರೆ ಮತ್ತು ಕಿರ್ಕಗಾರ್ಡರಂಥ ಶ್ರೇಷ್ಠರ ಬರಹಗಳಲ್ಲಿ ಹುಟ್ಟಿಕೊಂಡ ಅಸ್ತಿತ್ವವಾದದ ನೆನಪಾಯ್ತು!

ಮಾಲತಿ ಪಟ್ಟಣಶೆಟ್ಟಿ, ಧಾರವಾಡ


ಪರಿಸರ ಹಾಳು ಮಾಡಿದ ತಪ್ಪಿಗೆ…!

ಕೋವಿಡ್ ಮಾರಿ ನಮ್ಮ ಹಂತ್ಯಾಕ ಸುಳಿಬಾರ್ದು ಅಂದ್ರಾ ಹಗಲೆಲ್ಲಾ ಕೈ ತೊಳ್ಕಬೇಕಂತೆ, ಮುಖಾ ಮುಚ್ಕೊಂಡಿರಬೇಕಂತೆ, ಭಾಳ ಮಂದೀ ಜೊತೀಗೆ ಸೇರಬಾರ್ದಂತೆ, ಮನ್ಯಾಗ ಬಿದ್ದಿರಬೇಕಂತೆ, ಮದಿವ್ಯಾಗೂ ಭಾಳ ಮಂದಿ ಸೇರÀಬಾರ್ದಂತೆ. ಇವೆಲ್ಲಾ ಒಂದು ನಮೂನಿ ಛಲೋನಾ ಆಗ್ಯಾವ. ಕೆಲ್ಸಇಲ್ದ ನೊಣ, ಬೆಕ್ಕು ಮತ್ತು ಹೆಂಗಸ್ರು ಗಂಟಿಗೊಮ್ಮೆ ಮಕಾ ತೊಳಕಂತಾರ ಅನ್ನೋದನ್ನಾ ನಾನು ಎಲ್ಲೋ ಓದಿದ್ದ ಜ್ಞಾಪಕ ಐತೆ, ಈಗ ನನಗೂ ಕೆಲ್ಸ ಇಲ್ಲಾ, ನಾನೂ ಅವು ಮಾಡ್ದಂಗ ಕೈ ತೊಳ್ಕಂತಾ ಕುಂದ್ರತಿದ್ದೆ. ಆದ್ರಾ ಮನೀ ಕೆಲ್ಸದವ್ರು ಬಿಟ್ಟಿರೋದಿಂದ್ರ ನನ್ನ ಹೆಂಡ್ತಿ ಹೇಳಿದ್ಲು ಸುಮ ಸುಮ್ನಾ ಕೈ ತೊಳಕೊಂಡು ಸಬ್ಬು ಹಾಳುಮಾಡೋಬದ್ಲು ಪಾತ್ರಿನಾರ ತೊಳೀರಿ ಅಂತಾ ಕೆಲ್ಸ ಹಚ್ಚ್ಯಾಳ. ಇದ್ರಿಂದ ನನಗ ಹೇಣ್ತೀಗೆ ಸಹಾಯ ಮಾಡ್ದ ತೃಪ್ತಿ ಸಿಗತೈತಿ, ಟೈಮಿಗೆ ಸರಿಯಾಗಿ ಊಟಾನೂ ಸಿಗತೈತಿ. ಮದಿವ್ಯಾಗ ಭಾಳ ಮಂದಿ ಸೇರಂಗಿಲ್ಲಾ ಅಂತಾ ಹೇಳಿರೋದಂತೂ ಭಾಳ ಛಲೋನ, ಖರ್ಚು ಕಡಿಮೆ ಆಗೈತಿ, ಮತ್ತಾ ಮದಿವ್ಯಾಗ ನನಗ ಅದನ್ನ ಕೊಡ್ಲಿಲ್ಲಾ, ಇದನ್ನಾ ಕೊಡ್ಲಿಲ್ಲಾ, ಕೊಟ್ಟ ಸೀರಿ ಛಲೋ ಇಲ್ಲಾ, ಭಾಳ ಕಿಮ್ಮತ್ತಿಂದು ಇಲ್ಲ್ರಾಂತಾ ಸೆಟಗೊಳ್ಳಂಗಿಲ್ಲ, ಜಗ್ಳಾ ಆಗೋದನ್ನ ತಪ್ಪಿಸೈತಿ.

ಸಾಲ ಮಾಡದವ್ರು ಸಾಲಕೊಟ್ಟೋರ ಕಾಟ ತಪ್ಪಿಸ್ಕೊಳ್ಳೋಕ ಮತ್ತು ಕಳ್ರು ಮುಖ ಮುಚ್ಚಕೊಂಡು ಓಡಾಡ್ತಿದ್ದನ್ನ ನಾ ಹುಡ್ಗ ಇದ್ದಾಗ ನೋಡಿದ್ದೆ. ಈಗ ನಾವೆಲ್ರೂ ಮುಖಾ ಮುಚ್ಕೊಂಡು ಓಡಾಡ್ತೀವಿ ಅಂದ್ರಾ ನಾವೂ ಪರಿಸರ ಹಾಳು ಮಾಡಿ ತಪ್ಪು ಮಾಡೀವಿ, ಅದಕಾ ಕೆಟ್ಟ ಪರಿಸರಕ್ಕೆ ಮುಖಾ ತೋರ್ಸದ್ಹಾಂಗ ಕಳ್ಳ್ರಂಗ ಓಡಾಡ್ತೀವಿ. ಒಟ್ಟಾರ ಕೋವಿಡ್ ಕನ್ನಡಿ ಅನ್ನೋದು ನಮಗ ಬರೀ ನಮ್ಮ ಮಕಾ ತೋರ್ಸೋದಲ್ದ ಜೀವನ ಅನ್ನೋದು ಹ್ಯಾಂಗ ಬದ್ಲಾ ಆಗತೈತಿ ಅನ್ನೋ ಪಾಠನೂ

ಕಲಿಸೈತಿ.

ಚೂಟಿ ಚಿದಾನಂದ, ಬೆಂಗಳೂರು


ಪುಕ್ಕಟೆ ಆಮ್ಲಜನಕ ನೀಡುವ ಗಿಡಮರಗಳ ಆರೈಕೆ

ಮದುವೆಮನೆಯಾಗಲೀ ಸೂತಕದ ಮನೆಯಾಗಲೀ ಕೆಲಸ ಮಾಡಲು ಜನ ಬೇಕು. ಇವರಲ್ಲಿ ಬಹುತೇಕರಿಗೆ ಕೆಲಸ ಮಾಡಲು ಇಂಧನ (ಮದ್ಯ) ಬೇಕೇ ಬೇಕು. ಹಳ್ಳಿಗಳಲ್ಲಿ ಮದುವೆಯಾದರೂ ಸಾವಾದರೂ ಕುಡುಕರದೇ ದೊಡ್ಡ ಖರ್ಚು. ಬಹುಶಃ ಮದುವೆಯಾದವರಿಗಿಂತ ಹೆಚ್ಚು ಖುಷಿ ಪಟ್ಟು ಕುಣಿಯುವ ಮತ್ತು ಸತ್ತವರ ಮನೆಯ ದುಃಖವನ್ನು ತಮ್ಮ ದುಃಖವೆಂಬಂತೆ ಪರಿಗಣಿಸಿ ಅತ್ತು ಕರೆಯುವ ಹೃದಯ ವೈಶಾಲ್ಯ ಕುಡುಕರಿಗೆ ಮಾತ್ರ ಸಾಧ್ಯವಾಗುವಂಥದ್ದು. ಆದರೆ ಕೊರೋನಾ ಇದಕ್ಕೆ ತಣ್ಣೀರೆರಚಿ ಹಣ ಪೆÇೀಲಾಗುವುದನ್ನು ತಪ್ಪಿಸಿತು. ಶವಸಂಸ್ಕಾರಗಳೂ ಕೂಡ ಸದ್ದುಗದ್ದಲವಿಲ್ಲದೇ ಸಾಂಗವಾಗಿ ನಡೆದವು.

ಸಮಯ ಉರುಳಿ ಕರಾಳ ದಿನಗಳು ದೂರಾಗಿ ಸಹಜ ಸ್ಥಿತಿಗೆ ಒಗ್ಗಿಕೊಳ್ಳುತ್ತಿರುವಾಗ ಊರಾಂಜನೇಯನ ತೇರು ಹತ್ತಿರವಾಗಿತ್ತು. ಮೊದಲನೇ ಅಲೆಯ ಪ್ರಭಾವದಲ್ಲಿ ಆಂಜನೇಯನ ತೇರು, ತೇರುಗಡ್ಡೆ ಬಿಟ್ಟು ಹೊರಬರದಾಗಿತ್ತು. ಈಗ ಮತ್ತೆ ಜಾತ್ರೆ ನಿಲ್ಲುವ ಸೂಚನೆಗಳು ದಟ್ಟವಾಗಿದ್ದವು. ಎಷ್ಟೋ ವರ್ಷಗಳಿಂದ ತೇರುಗಳಿಗೆ ಬಾಳೆಹಣ್ಣು ಉತ್ತುತ್ತಿ ಎಸೆಯದೇ ಸರಳವಾಗಿ ಕೈಜೋಡಿಸುತ್ತಿದ್ದ ನನಗೆ ಒಮ್ಮೆಯಾದರೂ ನಮ್ಮ ಜನ ಸಾರ್ವತ್ರಿಕವಾಗಿ ತೇರಿಗೆ ಹಣ್ಣುಗಳನ್ನು ಎಸೆಯದೆ ಸರಳವಾಗಿ ತೇರು ಎಳೆಯುವುದನ್ನು ನೋಡಬೇಕೆಂಬ ಆಸೆಯಿತ್ತು. ಅದಕ್ಕೆಂದೇ ಹಲವು ಬಾರಿ ಮಕ್ಕಳಿಗೆ ಭಕ್ತರಿಗೆ ತಿಳಿವಳಿಕೆ ನೀಡಿ ನೀಡಿ ಸೋತಿದ್ದೆ. ಆದರೆ ಅಚ್ಚರಿಯೆಂಬಂತೆ ಬಾರಿ ನಡೆದ ತೇರಿನಲ್ಲಿ ಯಾರೊಬ್ಬರೂ ಹಣ್ಣು ಎಸೆಯದೇ ಸರಳವಾಗಿ ನಮಸ್ಕರಿಸಿ ಪುನೀತರಾದರು! ಕಾರಣ ನಸುಕಿನಲ್ಲಿ ಅವಸರವಸರವಾಗಿ ಪೂರ್ಣಗೊಂಡ ತೇರಿನ ಉತ್ಸವ ಭಕ್ತರಿಗೆ ಹಣ್ಣು ಖರೀದಿಸಲೂ ಅವಕಾಶ ನೀಡಿರಲಿಲ್ಲ.

ಎರಡನೇ ಅಲೆ ತೀವ್ರತೆ ಪಡೆದು ಎಲ್ಲೆಲ್ಲೂ ಆಮ್ಲಜನಕದ ಅಭಾವ ಉಂಟಾದಾಗ ಗಿಡಮರಗಳ ಕುರಿತಾದ ಕಾಳಜಿ ಮುನ್ನೆಲೆಗೆ ಬಂದಿತು. ಎರಡು ವರ್ಷಗಳ ಹಿಂದೆ ನಮ್ಮೂರಿನಲ್ಲಿ `ಹಸಿರು ದಸರಾಎಂಬ ಕಾರ್ಯಕ್ರಮದಡಿಯಲ್ಲಿ ನೂರಾರು ಸಸಿಗಳನ್ನು ನೆಡಲಾಗಿತ್ತು. ಅವುಗಳಲ್ಲಿ ಬಹುತೇಕ ಸಸಿಗಳು ಹೆಮ್ಮರಗಳಾಗುವ ಸೂಚನೆ ನೀಡಿದ್ದವು. ಕೆಲವು ಮಾತ್ರ ಇನ್ನೂ ಆಸರೆ ಆರೈಕೆ ಬಯಸುತ್ತಿದ್ದವು. ಇಂತಹ ಸಂದರ್ಭದಲ್ಲಿ ಕೆಎಸ್ಆರ್ಟಿಸಿಯ ನೌಕರರೊಬ್ಬರು ಸದ್ದಿಲ್ಲದೇ ಅವುಗಳ ಆರೈಕೆಗೆ ನಿಂತದ್ದು ಆಶ್ಚರ್ಯ ಆನಂದಕಾರಿಯಾಗಿತ್ತು. ಇವರನ್ನು ಸಂಧಿಸಿ ಕೆಲಸಕ್ಕೆ ಪ್ರೇರಣೆ ಏನೆಂದು ಕೇಳಿದೆ. ಅದಕ್ಕವರು ಸಾರ್ ಆಮ್ಲಜನಕವಿಲ್ಲದೇ ರೋಗಿಗಳು ಪರದಾಡುತ್ತಿರುವುದನ್ನು ದಿನನಿತ್ಯ ಟಿವಿಯಲ್ಲಿ ನೋಡುತ್ತಿದ್ದೇನೆ. ಪರಿಸರದಲ್ಲಿ ಪುಕ್ಕಟೆ ಆಮ್ಲಜನಕ ನೀಡುವ ಗಿಡಮರಗಳನ್ನು ಉಳಿಸಿಕೊಂಡರೆ ಎಷ್ಟೋ ಜನರಿಗೆ ಉಚಿತ ಆಮ್ಲಜನಕ ನೀಡಿದಂತಲ್ಲವೇ? ಅದಕ್ಕೆ ಕೆಲಸಕ್ಕೆ ಕೈ ಹಾಕಿದೆಎಂದರು. ಹೀಗೆ ಹಲವು ಸಕಾರಾತ್ಮಕ ಅಂಶಗಳನ್ನು ಕೊರೋನಾ ಬಿತ್ತಿದೆ ಎಂದರೆ ತಪ್ಪಾಗಲಾರದು.

ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ

Leave a Reply

Your email address will not be published.