ಹುಟ್ಟು ಹೋರಾಟಗಾರ ಚಿಮೂ

ಡಾ.ಟಿ.ಗೋವಿಂದರಾಜು ಅವರ ಡಾ.ಎಂ.ಚಿದಾನಂದ ಮೂರ್ತಿ ಕುರಿತ ಲೇಖನ ನನಗೆ ಮೆಚ್ಚಿಗೆಯಾಯಿತು. ಈ ಲೇಖನ ಚಿಮೂ ಕುರಿತ ನನ್ನ ಹಿಂದಿನ ನೆನಪುಗಳನ್ನು ಪುನರ್‍ಮನನ ಮಾಡಿಕೊಳ್ಳುವುದಕ್ಕೆ ಪ್ರೇರೇಪಿಸಿತು. ನಾನು ಅವರ ನೇರ ಶಿಷ್ಯನಲ್ಲ. ಆದರೆ ಅವರ ಬಗ್ಗೆ ಮತ್ತು ಎಂ.ಎಂ.ಕಲಬುರ್ಗಿಯವರ ಬಗ್ಗೆ ನನ್ನ ಕಾಲೇಜು ದಿನಗಳಲ್ಲೇ (1972) ಸಾಕಷ್ಟು ತಿಳಿದು ಅವರ ಅಭಿಮಾನಿಯಾಗಿಬಿಟ್ಟೆ. ಅನಂತರ ನಾನು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಎಂ.ಎ. ಕಲಿಯುವಾಗ ಮೌಖಿಕ ಪರೀಕ್ಷೆಯ ಪರೀಕ್ಷಕರಾಗಿ ಚಿಮೂ ಬಂದಿದ್ದರು. ನಾನು ಅಪಾರವಾಗಿ ಪ್ರೀತಿಸುವ ಗುರುವನ್ನು ಕಂಡದ್ದು ಆಗ.

ಚಿಮೂ ಬಗ್ಗೆ ಯಾರಾದರೂ ಅಗೌರವದಿಂದ ನಡೆದುಕೊಂಡರೆ ಅಥವಾ ಕೆಟ್ಟದಾಗಿ ಮಾತನಾಡಿದರೆ ನನಗೆ ಬಹಳ ದುಃಖವಾಗುತ್ತಿತ್ತು. ನಾನು ಸಚಿವಾಲಯದ ‘ಕನ್ನಡ ಮತ್ತು ಸಂಸ್ಕøತಿ ಇಲಾಖೆ’ ಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ(2005) ಒಂದು ದಿನ ಚಿಮೂ ಅವರು ನಮ್ಮ ಇಲಾಖೆಯ ಕಾರ್ಯದರ್ಶಿಯವರನ್ನು ಕಾಣಲು ಬಂದಿದ್ದರು. ಬಂದ ಉದ್ದೇಶ ಹಂಪಿಯಲ್ಲಿನ ದೇವಸ್ಥಾನಗಳ ಮತ್ತು ಸ್ಮಾರಕಗಳ ಒತ್ತುವರಿ ತಡೆಯುವ ಕುರಿತು ಮನವಿ ಸಲ್ಲಿಸುವುದಾಗಿತ್ತು. ಅವರನ್ನು ಕಾರ್ಯದರ್ಶಿಯವರ ಆಪ್ತ ಸಿಬ್ಬಂದಿ, ಕಾರ್ಯದರ್ಶಿಯವರ ಚೇಂಬರಿನ ಹೊರಗಡೆ ಬಾಗಿಲ ಬಳಿ ದಲಾಯತ್‍ಗಾಗಿ ಇದ್ದ ಕುರ್ಚಿಯಲ್ಲಿ ಕುಳ್ಳಿರಿಸಿದ್ದರು. ಕರ್ನಾಟಕದ ಶ್ರೇಷ್ಠ ಸಾಹಿತಿ ಮತ್ತು ಸಂಶೋಧಕರಾದ ಚಿಮೂ ಅವರನ್ನು ಆ ಜಾಗದಲ್ಲಿ ಅಕಸ್ಮಾತ್ ನೋಡಿದ ನನಗೆ ಶಾಕ್ ಆಯಿತು. ಇವತ್ತಿಗೂ ಆ ದೃಶ್ಯ ನನಗೆ ನೋವಿನ ಸಂಗತಿಯೇ.

ಒಂದು ಸಮುದಾಯದವರು ‘ದೇವರ ದಾಸಿಮಯ್ಯ’ನನ್ನು ತಮ್ಮ ಪೂರ್ವಿಕರೆಂದು ತಿಳಿದು ಪ್ರತಿ ವರ್ಷವೂ ‘ದೇವರ ದಾಸಿಮಯ್ಯ ಜಯಂತಿ’ ಆಚರಿಸುತ್ತಾರೆ. ಚಿಮೂ ಅವರು ಇದಕ್ಕೆ ಕಟ್ಟಾ ವಿರೋಧಿ. ಅವರ ದೃಷ್ಟಿಯಲ್ಲಿ ‘ದೇವರ ದಾಸಿಮಯ್ಯ ಜಯಂತಿ’ ತಪ್ಪು, ಅದನ್ನು ‘ಜೇಡರ ದಾಸಿಮಯ್ಯ ಜಯಂತಿ’ ಎಂದು ಆಚರಿಸಬೇಕು ಎಂಬುದು ಅವರ ವಾದ. ಈ ಜಯಂತಿ ಸಂದರ್ಭದಲ್ಲಿ ಭಾಷಣಕಾರರು ತಮ್ಮ ಭಾಷಣದಲ್ಲಿ ಚಿಮೂ ಅವರನ್ನು ಹೀಗಳೆದು ಮಾತನಾಡುತ್ತಿದ್ದುದುಂಟು. ಆ ಸಂದರ್ಭದಲ್ಲಿ ನಾನು ಬಹಳ ನೋವು ಅನುಭವಿಸಿದ್ದೇನೆ.

ಚಿಮೂ ಅವರಲ್ಲಿ ಕೆಲವು ದೌರ್ಬಲ್ಯಗಳಿದ್ದವು ನಿಜ. ಆದರೆ ಕನ್ನಡ ಸಾಹಿತ್ಯ, ಸಂಸ್ಕತಿಗೆ ಅವರು ನೀಡಿರುವ ಕೊಡುಗೆ ಅಪಾರ. ಅದರಲ್ಲೂ ಸಂಶೋಧನಾ ಕ್ಷೇತ್ರದಲ್ಲಿ ಅವರನ್ನು ಸರಿಗಟ್ಟುವವರು, ಎಂ.ಎಂ.ಕಲಬುರ್ಗಿಯವರನ್ನು ಹೊರತುಪಡಿಸಿ, ಯಾರೂ ಇಲ್ಲ ಎಂದರೆ ಅತಿಶಯೋಕ್ತಿಯಲ್ಲ. ಡಾ.ಟಿ.ಗೋವಿಂದರಾಜು ಅವರ ಲೇಖನ ವಸ್ತುನಿಷ್ಠವಾಗಿದೆ. ಯಾವುದೇ ಉತ್ಪ್ರೇಕ್ಷೆ ಇಲ್ಲ, ಕಂಡದ್ದನ್ನು ಕಂಡಂತೆ ಕಂಡರಿಸಿದ್ದಾರೆ. ಅಷ್ಟಾಗಿಯೂ ಈ ಲೇಖನ ಚಿಮೂ ಅವರ ವ್ಯಕ್ತಿತ್ವದ ಒಂದು ಸಣ್ಣ ತುಣುಕಷ್ಟೆ.

-ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು.


ಕೈಕಟ್ಟಿ ಕುಳಿತ  ಬಿಜೆಪಿ ಸಂಸದರು!

ಕರ್ನಾಟಕದಿಂದ ಬಿಜೆಪಿ ಪಕ್ಷದ 25 ಸಂಸದರನ್ನು ಆಯ್ಕೆ ಮಾಡಿ ಕಳುಹಿಸಲಾಗಿದೆ. ಈ ಸಂಸದರಲ್ಲಿ ಬಹುತೇಕರು ವಿದ್ಯಾವಂತರು. ಆದರೆ ಅವರು ಕರ್ನಾಟಕದ ವಿಚಾರ ಬಂದಾಗ ದಿವ್ಯ ಮೌನಕ್ಕೆ ಜಾರುತ್ತಾರೆ. ಆಯ್ಕೆಯಾದ ಸಂಸದರನ್ನು ನಾವು ಪ್ರಶ್ನೆ ಮಾಡಲೇಬೇಕು.

ಹೆಚ್ಚು ಸಂಸದರನ್ನು ಆಯ್ಕೆ ಮಾಡಿಕೊಟ್ಟ ಕನ್ನಡನಾಡಿಗೆ ಕೇಂದ್ರ ಸರ್ಕಾರ ಮಾಡಿದ ತಾರತಮ್ಯ ಅಷ್ಟಿಷ್ಟಲ್ಲ. ಮೈಸೂರು, ಸಿಂಡಿಕೇಟ್, ಕಾಪೆರ್Çರೇಷನ್ ಬ್ಯಾಂಕ್ ಲಾಭದಲ್ಲಿ ಇದ್ದರೂ ಬ್ಯಾಂಕುಗಳ ವಿಲೀನ ಮಾಡುವ ಪ್ರಕ್ರಿಯೆಯಲ್ಲಿ ಒಳಪಡಿಸಿ ನಮ್ಮ ನಾಡಿನ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡಿದೆ. ಜೊತೆಗೆ ಉತ್ತರ ಕರ್ನಾಟಕ ರೈತರು ಮಹದಾಯಿ ಕುಡಿಯುವ ನೀರಿಗಾಗಿ ವರ್ಷಪೂರ್ತಿ ಅವಿರತವಾಗಿ ಹೋರಾಟ ಮಾಡಿದರೂ ಸಣ್ಣ ರಾಜ್ಯವಾದ ಗೋವಾದ ಪರವಾಗಿ ಕೇಂದ್ರ ಸರ್ಕಾರ ವಕಾಲತ್ತು ವಹಿಸಿದೆ. ಕೇಂದ್ರ ಸರ್ಕಾರದ ಪ್ರತಿ ಬಜೆಟ್‍ನಲ್ಲೂ ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಲಾಗುತ್ತದೆ.

ಉದ್ಯೋಗ ಖಾತ್ರಿ, ಬಡವರ ವಸತಿ ಯೋಜನೆಗಳ ಹಣಕಾಸನ್ನು ಸಮಯಕ್ಕೆ ಸರಿಯಾಗಿ ನೀಡದೇ ಸತಾಯಿಸುತ್ತಾರೆ. 14ನೇ ಹಣಕಾಸು ಯೋಜನೆ ಹಣ ಬಿಡುಗಡೆ ಮಾಡೋದಿಲ್ಲ. ಕರ್ನಾಟಕದ ಪಾಲಿನ ಜಿಎಸ್‍ಟಿ ಮೊತ್ತದ ಬಿಡುಗಡೆಯಲ್ಲಿ ವಿಳಂಬ. ಹಿಂದೆಂದೂ ಕಂಡು ಕೇಳರಿಯದಂತಹ ನೆರೆ ಹಾವಳಿಗೆ ಇಡೀ ಉತ್ತರ ಕರ್ನಾಟಕದ ಜನ ತತ್ತರಿಸಿ ಹೊದರು. ಪ್ರಕೃತಿ ವಿಕೋಪಕ್ಕೆ ಒಳಗಾದ ಜನಸಾಮಾನ್ಯರು ಮನೆಮಠ ಕಳಕೊಂಡರು. ಈ ಸಂತ್ರಸ್ತರಿಗೆ ಸೂರು ಕಲ್ಪಿಸುವ ವ್ಯವಸ್ಥೆ ಮಾಡದೇ, ನೆರೆಸಂತ್ರಸ್ತರಿಗೆ ಪರಿಹಾರ ನೀಡಲು ದೊಡ್ಡ ಪ್ರಮಾಣದ ತಾರತಮ್ಯ ಮಾಡುತ್ತಾರೆ. ಇದೇ ಸಂದರ್ಭದಲ್ಲಿ ಬಿಹಾರದಲ್ಲಿ ನಡೆದ ಪ್ರಕೃತಿ ವಿಕೋಪಕ್ಕೆ ಪರಿಹಾರ ಬೇಕಾದರೆ ಕೇಳಿ, ಒದಗಿಸುವೆ ಎನ್ನುತ್ತಾರೆ ಪ್ರಧಾನಿ. ಇಂತಹ ಸಂದರ್ಭದಲ್ಲಿ 25 ಸಂಸದರನ್ನು ಗೆಲ್ಲಿಸಿದ ಕರ್ನಾಟಕದೆಡೆ ಇಣುಕಿ ನೋಡುವುದಿಲ್ಲ.

ಬಡವರ ಯೋಜನೆಗಳ ಮೇಲೆ ಬರೆ ಎಳೆದ ಕೇಂದ್ರ ಸರ್ಕಾರ ಬಡವರ ವಸತಿ ಶಿಕ್ಷಣ ಆರೋಗ್ಯ ಕೌಶಲ್ಯ ಅಭಿವೃದ್ಧಿ -ಈ ಎಲ್ಲಾ ಯೋಜನೆಗಳ ಕಾರ್ಯಗತಗೊಳಿಸಲು ಹಣಕಾಸು ಒದಗಿಸದೆ ಬಡವರ ಶೋಷಿತ ವರ್ಗದ ವಿರೋಧಿ ನಡೆಯನ್ನು ಅನುಸರಿಸಿದೆ. ಇದನ್ನ ಗಟ್ಟಿಯಾದ ಧ್ವನಿಯಲ್ಲಿ ಕೇಳುವ ಒಬ್ಬರೇ ಸಂಸದರು ನಮ್ಮ ಪಾಲಿಗೆ ಸಿಗದೇ ಇರುವುದು ಕರ್ನಾಟಕದ ಜನ ಬಿಜೆಪಿ ಪಕ್ಷಕ್ಕೆ ವೋಟ್ ಕೊಡುವ ಮೂಲಕ ತಮಗೆ ತಾವು ಮಾಡಿಕೊಂಡ ದೊಡ್ಡ ಪ್ರಮಾಣದ ದ್ರೋಹ ಆಗಿದೆ. ನಮ್ಮ ಸಂಸದರು ಹೆಚ್ಚು ಕಾಲಹರಣ ಮಾಡುವ ವಿಚಾರವೆಂದರೆ ಭಾಷಣದ ಉದ್ದಕ್ಕೂ ಮೋದಿಗೆ ಜೈಕಾರ ಹಾಕುವುದು. ಜನಸಾಮಾನ್ಯರಿಗೆ ಅರ್ಥವಾಗದ ಪದಪುಂಜಗಳಾದ ದೇಶದ ವಿಕಾಸ ಸುರಕ್ಷ ರಕ್ಷಣೆ… ಇತ್ತೀಚೆಗಿನ ದಿನಗಳಲ್ಲಿ ಪಕ್ಕದ ಪಾಕಿಸ್ತಾನ ಮತ್ತು ಕಾಂಗ್ರೆಸ್ ಪಕ್ಷವನ್ನು ಬೈಯುವದರಲ್ಲಿ ಕಾಲ ಕಳೆದ ಬಿಜೆಪಿ ಸಂಸದರು ಕೇಂದ್ರ ಸರ್ಕಾರದ ಈ ವರ್ಷದ ಬಜೆಟ್‍ನಲ್ಲಿ ಸಬ್‍ಅರ್ಬನ್ ರೈಲು ಎಂದು ರೈಲು ಬಿಟ್ಟು ಬರೀ ಒಂದು ಕೋಟಿ ರೂಪಾಯಿ ಮೀಸಲು ಇಟ್ಟಿದ್ದಾರೆ. ಹಾಗೆಯೇ ಕೋಲಾರದ ರೈಲು ಕೋಚ್ ಪ್ಯಾಕ್ಟರಿ ಮುಚ್ಚಿಸುವ ಪ್ರಕ್ರಿಯೆ ನಡೆದಿದೆ. ಕೇಂದ್ರ ಸರ್ಕಾರದ ಉದ್ಯೋಗದಲ್ಲಿ ಕನ್ನಡಿಗರಿಗೆ ಅನಾನುಕೂಲವಾಗಿದೆ. ಪ್ರಾಂತೀಯ ಭಾμÉಗಳಲ್ಲಿ ಪರೀಕ್ಷೆಗಳನ್ನು ನಡೆಸದ ಕೇಂದ್ರ ಸರ್ಕಾರದ ಧೋರಣೆಯೇ ಕನ್ನಡಿಗರಿಗೆ ಹೆಚ್ಚು ಅನ್ಯಾಯವಾಗಲು ಕಾರಣವಾಗಿದೆ. ಆರ್ಥಿಕ ನಿಧಿಯಿಂದ ಕೇಂದ್ರ ಸರ್ಕಾರವು ರಾಜ್ಯಕ್ಕೆ ಕೊಡಬೇಕಾದ ರೂ.9,000  ಕೋಟಿ ರೂಪಾಯಿ ತೆರಿಗೆ ಹಣವನ್ನು ಕಡಿತ ಮಾಡುವ ನಿರ್ಧಾರ ಕೈಗೊಂಡಿದೆ.

ಇಲ್ಲ್ಲಿ ಸದೃಢ ವಿರೋಧ ಪಕ್ಷಗಳ ಕೊರತೆ ಇದೆ. ಇದ್ದವರು ಕೂಡ ಐಟಿ, ಇಡಿ ಭಯದಿಂದ ಕೇಂದ್ರ ಸರ್ಕಾರದ ಜನವಿರೋಧಿ ಧೋರಣೆ ಖಂಡಿಸಲು ಹಿಂಜರಿಯುತ್ತಾರೆ. ಜನರ ಧ್ವನಿಯಾಗಿ ಜನರೇ ಚಳವಳಿ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ನಾಡಿನಲ್ಲಿ ಉದ್ಭವಿಸಿದೆ.

-ಹನುಮೇಶ್ ಗುಂಡೂರು, ಬೆಂಗಳೂರು.


‘ಚಿಮೂ ಸಂಶೋಧನೆಗಳ ಚರ್ಚೆ ಆಗಬೇಕಿದೆ

ಫೆಬ್ರವರಿ ಮುಖ್ಯಚರ್ಚೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಎಲ್ಲ ಮುಖಗಳ ಮೇಲೂ ಬೆಳಕು ಚೆಲ್ಲಿರುವುದು ಸ್ವಾಗತಾರ್ಹ. ಈ ಸಂಗತಿ ಕುರಿತು ಈ ಥರದ ಚರ್ಚೆಯಿಂದ ಇನ್ನಷ್ಟು ಸ್ಪಷ್ಟತೆ ಪಡೆಯಲು ಇನ್ನಷ್ಟು ಕಾಲ ಬೇಕಾಗುತ್ತದೆಯಾದ್ದರಿಂದ ನನ್ನ ಅಭಿಪ್ರಾಯವನ್ನಿಲ್ಲಿ ದಾಖಲಿಸಲಾರೆ. ಆದರೆ ಅಗಲಿದ ಸಂಶೋಧಕ ಡಾ.ಚಿ.ಮೂ.ಕುರಿತ ಲೇಖನಕ್ಕೆ ಒಂದಷ್ಟು ಮೆಲುಕು ಹಾಕಲೇಬೇಕಾದ ಸಂಗತಿಗಳನ್ನು ಹೇಳಬಯಸುವೆ. ಅದರಲ್ಲೂ ಡಾ.ಚಿ.ಮೂ. ಅವರಂಥ ವ್ಯಕ್ತಿಗಳು ನಮ್ಮನ್ನು ಅಗಲಿದಾಗ ಆ ನೆಪದಲ್ಲಿಯೇ ಒಂದಿಷ್ಟು ಆರೋಗ್ಯಕಾರಿ ಚರ್ಚೆ ಮಾಡಬೇಕಾದುದು ನಮ್ಮ ಕರ್ತವ್ಯವೆಂದು ಭಾವಿಸುವೆ.

‘ಇತಿಹಾಸ ಮೊದಲಿಂದ ಕೊನೆಯತನಕ ಕೊಲೆ, ಕದನ, ಕುಟಿಲತೆಯ ಪ್ರದರ್ಶನವಾಗಿದೆ. ಇದೆಲ್ಲ ಅಸುಂದರ. ಹೀಗಾಗಿ ಅಸತ್ಯ, ದುರಾಸೆಯ, ಅತ್ಯಂತ ಕ್ರೂರ ಅಹಂಕಾರದ, ಅತ್ಯಂತ ನೀಚ ಅಸೂಯೆಯ, ಅತ್ಯಂತ ಅಧಮ ಘಟನೆಗಳು ಇತಿಹಾಸದಲ್ಲಿ ನಮಗೆ ಸಿಗುತ್ತವೆ. ಮನುಷ್ಯ ಎಷ್ಟು ಅಮಾನುಷ ವ್ಯಕ್ತಿ ಎಂಬುದರ ಕಲ್ಪನೆ ಇತಿಹಾಸದ ಓದಿನಿಂದ ನಮಗಾಗುತ್ತದೆ. ಸ್ವಾರ್ಥಕ್ಕಾಗಿ ಸಹೋದರ ಸಹೋದರನನ್ನು ಕೊಲೆ ಮಾಡಲು ಹೇಸುವುದಿಲ್ಲ. ಮಗ ತಂದೆಯ ಕತ್ತು ಹಿಸುಕುತ್ತಾನೆ. ದೊರೆ ತನ್ನ ಪ್ರಜೆಗಳ ಕತ್ತು ಕುಯ್ಯುತ್ತಾನೆ. ಇದನ್ನೆಲ್ಲ ಓದಿದಾಗ ನೋವಾಗುತ್ತದೆ. ‘ಯಾವ ವಸ್ತು ಆನಂದವನ್ನು ನೀಡುವುದಿಲ್ಲವೋ ಅದು ಸುಂದರವಾಗಿರದು’ ಎನ್ನುತ್ತಾರೆ ನಮ್ಮ ದೇಶದ ಪ್ರಸಿದ್ಧ ಸಾಹಿತಿ ಪ್ರೇಮಚಂದ್.

ಡಾ.ಚಿ.ಮೂ. ಈ ಹಿನ್ನೆಲೆಯಲ್ಲಿ ಸಂಶೋಧನೆ, ಅಧ್ಯಯನ ಮಾಡಿದ್ದು ತುಂಬ ಕಡಿಮೆ. ಹೀಗಾಗಿ ಅವರಿಗೆ ಕನ್ನಡ ನಾಡಿನ ಇತಿಹಾಸ ಮತ್ತು ಸಂಸ್ಕøತಿಯ ಅಧ್ಯಯನದಲ್ಲಿ ಬರೀ ಹೆಮ್ಮೆ ಪಡುವ ಹಲವು ಅಂಶಗಳು ದೊರಕಿದವೇ ಹೊರತು ಅಲ್ಲಿ ಜನಸಾಮಾನ್ಯರ ಸಂಶೋಧನೆಯನ್ನು ಭಾವುಕ ನೆಲೆಯಲ್ಲಿ ವೈಭವೀಕರಿಸಿದರೇ ಹೊರತು ಪ್ರೇಮಚಂದ್‍ರ ಹಾಗೆ ಹೊಸ ಸಮಾಜ ಕಟ್ಟಲು ಬೇಕಾದ ಅಂಶಗಳ ಕಡೆ ಒತ್ತು ಕೊಡಲೇ ಇಲ್ಲ. ಸಮಕಾಲೀನ ಸಂದರ್ಭದ ಬಿಕ್ಕಟ್ಟು ಮತ್ತು ಅದರ ಬಿಸಿಯನ್ನು ಒಪ್ಪಿಕೊಳ್ಳಲಾಗದೆ ಅವರು ಆತ್ಮಾಹುತಿಗೆ ಯತ್ನಿಸಿದ್ದು ಈ ಹಿನ್ನೆಲೆಯಲ್ಲಿಯೇ ಎಂದು ಹೇಳಬಹುದು.

‘ನಮ್ಮ ಮಾತೃಭೂಮಿಯಲ್ಲಿ ಹಿಂದೂ ಮತ್ತು ಮುಸಲ್ಮಾನ ಧರ್ಮಗಳೆರಡೂ ಮಿಲನವಾಗಬೇಕು. ವೇದಾಂತದ ಮೆದುಳು, ಇಸ್ಲಾಮಿನ ದೇಹ ಇದೊಂದೇ ನಮ್ಮ ಪುರೋಗಮನಕ್ಕೆ ಹಾದಿ’ ಎನ್ನುತ್ತಾರೆ ಸ್ವಾಮಿ ವಿವೇಕಾನಂದರು (ಸ್ವಾಮಿ ವಿವೇಕಾನಂದ ಕೃತಿಶ್ರೇಣಿ ಸಂಪುಟ-7 ಪುಟ-238).

ಇತಿಹಾಸದಲ್ಲಿ ಘಟಿಸಿದ ತಪ್ಪುಗಳನ್ನು ಇಂದು ಯಾರೂ ತಿದ್ದಲಾಗದು! ಇನ್ನು ಮುಂದಿನ ನಮ್ಮ ಜೀವನವನ್ನು ನಾವು ಒಳಿತಿನ ಕಡೆಗೆ ಒಯ್ಯಬೇಕೆಂಬ ತುಡಿತವಿರುವ ಯಾರೂ ಕೂಡ ಸ್ವಾಮಿ ವಿವೇಕಾನಂದರ ವಿಚಾರಗಳನ್ನು ಸ್ವೀಕರಿಸಬಹುದು. ಅಷ್ಟೇ ಏಕೆ, ರಾಷ್ಟ್ರಕವಿ ಕುವೆಂಪು ಕೂಡ ‘ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ; ಬಡತನದ ಬುಡಮಟ್ಟ ಕೀಳಬನ್ನಿ’ ಎಂದು ಕರೆ ನೀಡಿದ್ದರು. ಅದಕ್ಕೆಂದೇ ಅವರು ‘ವಿಶ್ವಮಾನವ’ ಸಂದೇಶ ನೀಡಿದ್ದರು. ಆದರೆ ಡಾ.ಚಿ.ಮೂ. ಅವರ ಸಂಶೋಧನೆ ಯಾವ ದಿಕ್ಕುದೆಸೆಯತ್ತ ತಿರುಗಿತು ಎಂಬುದು ಎಲ್ಲರಿಗೂ ಗೊತ್ತು. ಕುವೆಂಪು ಅವರಂಥ ಗುರುಗಳಿಂದ ಡಾ.ಚಿ.ಮೂ. ಕಲಿತ ಪಾಠವೇನು? ಎಂಬ ಪ್ರಶ್ನೆಯನ್ನು ನಾವು ಹಾಕಿಕೊಳ್ಳಲೇಬೇಕು. ಆಗ ಮಾತ್ರ ಚಿ.ಮೂ. ಅವರಂಥ ಸಂಶೋಧಕರ ನಿಜದ ನೆಲೆಯನ್ನು ನಾವು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಡಾ.ಚಿ.ಮೂ ಅವರನ್ನು ನಾನೂ ಕೂಡ ಒಮ್ಮೆ ತೀರ ಸನಿಹದಿಂದ ಕಂಡಿದ್ದೆ. 1986ರಲ್ಲಿ ಅವರು ಸಿದ್ಧಗಂಗಾ ಕ್ಷೇತ್ರದಿಂದ ಪಂಪಾಕ್ಷೇತ್ರಕ್ಕೆ ಪಾದಯಾತ್ರೆ ಬಂದಾಗ ನಮ್ಮ ಹಗರಿಬೊಮ್ಮನಹಳ್ಳಿಯಲ್ಲಿ ಅವರು ಒಂದು ದಿನ ತಂಗಿದ್ದರು. ಆಗ ಮತ್ತು ಆ ಪಾದಯಾತ್ರೆಯ ಸಮಾರೋಪ ಹಂಪೆಯಲ್ಲಿ ನಡೆದಾಗ ಅವರೊಂದಿಗೆ ದಿನವಿಡೀ ನಾನು ಬೆರೆತಿದ್ದೆ. ಆ ಎಲ್ಲಾ ವಿವರಗಳು ಅವರ ‘ಕನ್ನಡಾಯಣ’ ಎಂಬ ಪುಸ್ತಕದಲ್ಲಿವೆ. ನಂತರವೂ ಕೂಡ ಅವರನ್ನು ಕಾಣುವ ಮತ್ತು ಪತ್ರಸಂಪರ್ಕವಿಟ್ಟುಕೊಳ್ಳುವ ಅವಕಾಶ ನನಗೂ ಸಿಕ್ಕಿದವು. ಅವರೊಬ್ಬ ಸೌಮ್ಯ ವ್ಯಕ್ತಿ ಎಂಬ ಬಗ್ಗೆ ಯಾರಿಗೂ ಅನುಮಾನವಿಲ್ಲ. ಶಿಷ್ಯವತ್ಸಲ ಗುರು ಅವರಾಗಿದ್ದರು ಎಂಬುದನ್ನು ನಾನು ಬಲ್ಲೆ. ಅಂಥ ಕಾರಣಗಳಿಗಾಗಿ ಅವರ ಬಗ್ಗೆ ನನಗೆ ಕೂಡ ತುಂಬ ಗೌರವವಿದೆ. ಆದರೆ ಅವರು ಅಗಲಿದಾಗ ಬರೀ ಗುಣಗಾನ ಮಾಡದೆ ಅವರ ಸಂಶೋಧನೆಯ ಗುಣದೋಷಗಳನ್ನು ಚರ್ಚೆ ಮಾಡದಿರುವುದು ಸರಿಯಲ್ಲ. ಎಲ್ಲ ಬಗೆಯ ಗೌರವವಿಟ್ಟುಕೊಂಡೇ ನಾವು ನಮ್ಮ ನಮ್ಮ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಬೇಕಿದೆ. ನಮ್ಮ ಗುರಿ ಒಟ್ಟು ಸಮಾಜದ ಒಳಿತು ಆಗಿರಬೇಕೆ ಹೊರತು ಬರೀ ಅಂಧಾಭಿಮಾನವಾಗಿರಬಾರದು. ಹೀಗಾಗಿ ಡಾ.ಚಿ.ಮೂ. ಅವರ ಒಟ್ಟು ಸಂಶೋಧನೆಯ ಚರ್ಚೆ ಆಗಬೇಕಿದೆ.

-ಹುರುಕಡ್ಲಿ ಶಿವಕುಮಾರ, ಬಾಚಿಗೊಂಡನಹಳ್ಳಿ

Leave a Reply

Your email address will not be published.