ಹುಡುಕಾಟ

-ಆರ್.ಬಿ.ದಿವಾಕರ್

1

ಕೃಷ್ಣನ ಹುಡುಕುತ್ತಾ ಹೋದೆ

ಯಮುನೆಯ ತೀರದಲಿ

ಕೃಷ್ಣನೂ ಇಲ್ಲ

ಕೊಳಲ ನಿನಾದವೂ

ಇಲ್ಲ

2

ದ್ವಾರಕೆಗೆ ಹೋದೆ

ಸಮುದ್ರದಲೆಗಳ ಸಪ್ಪಳ

ಮಾತುಗಳೇ

ಇಲ್ಲ

ಮೌನ… ನಿಶ್ಶಬ್ದ

3

ರಾಧೆ ನಿನಗಾದರು

ಕಂಡನೇನೆ?

ಯಮುನೆ ನೀನಾದರೂ

ನೋಡಿದೆಯೇನೆ

ಎಂದರೆ

ಹುಸಿಕೋಪ

ಮುಸಿನಗು ಮುಖದಲ್ಲಿ

4

ಹುಡುಕುತ್ತಾ ಹೋದೆ

ಬಿಲ್ಲನೆದೆಗೇರಿಸಿ

ಜಂಯ್‍ಗುಡಿಸುವ

ಯುದ್ಧ ವೀರನ ಕಂಡೆ

ಕೃಷ್ಣನಿಲ್ಲ

5

ಹುಡುಕುತ್ತಾ ಹೋದೆ

ಕೃಷ್ಣನ ಸ್ತುತಿಸುತ್ತಾ

ಶರಮಂಚದಲಿ

ಪಿತಾಮಹನ

ಕಂಡೆ

ಕೃಷ್ಣನೆಲ್ಲಿಯೆಂದೆ?

ನನಗೂ ಕಾಣನು

ಮಾತು… ಮೌನ

6

ಸದ್ದಿಲ್ಲದೆ ಇದ್ದಾನೆ

ಸುಯೋಧನ

ಕೃಷ್ಣನೆಲ್ಲಿ?

ಕತ್ತೆತ್ತಿ ನೋಡಿ

ಕಣ್ಣಲ್ಲೇ ಉತ್ತರಿಸಿದ

ಇದಕೆಲ್ಲಾ ಅವನೇ

ಕಾರಣ

ಮಾತು… ಮೌನ

ನಿಶ್ಶಬ್ದ

7

ಹುಡುಕುತ್ತಾ ಹೊದೆ

ಕೃಷ್ಣನಿಲ್ಲ

ಮಹಾಭಾರತ ಮುಗಿದಾಯಿತÀಲ್ಲ

ಯುದ್ಧಭೂಮಿಯೇ

ಎಲ್ಲಾ

ವಿಷಾದ

ಮಾತು… ಮೌನ

ನಿಶ್ಶಬ್ದ

ಕಾಲಾತೀತ

-ಪಂಪ ತೋರಣಗಲ್

ನಿನ್ನನ್ನು ಆ ದಿನ ಕಂಡಿದ್ದೆ, ನೆನಪಿದೆಯಾ

ಅಂದು ಬಜಾರಿನಲಿ ಮುತ್ತುರತ್ನಗಳ

ಬಳ್ಳದಲಿ ಅಳೆಯುತ್ತಿದ್ದರು

ನೀನು ಸೊಂಟಕ್ಕೆ ಪೊರಕೆ ಕಟ್ಟಿಕೊಂಡು

ಅಳೆಯುವವರ ಅಂಡಿನ ಕಸ ಗುಡಿಸುತ್ತಿದ್ದೆ

ಮಡದಿಯ ಮೂಗಿಗೆ ನತ್ತು ಕೊಡಿಸಲಾಗದ ನೋವ

ನನ್ನ ಬಳಿ ಹೇಳಿಕೊಂಡಿದ್ದೆ

ಮತ್ತೊಮ್ಮೆ ಸಿಕ್ಕಿದ್ದೆ

ಅಂದು ನೀನು ಗೇಣುದ್ದ ಗೇಣಿಯ ಆಸೆಗೆ

ಅರ್ಜಿ ಹಿಡಿದು ತಾಲೂಕಾಫೀಸಿನ ಮುಂದೆ ನಿಂತಿದ್ದೆ

ಉಳುವವನು ನಾನು, ಒಡೆಯನಾಗಬಹುದೇ? ಅಂತ

ನನ್ನನ್ನು ಪ್ರಶ್ನೆ ಮಾಡಿದ್ದೆ

ಅದೊಂದು ದಿನ, ಹಾರೆ ಪಿಕಾಸಿ ಹಿಡಿದು

ಮಸೀದಿಯ ಮುಂದೆ ನಿಂತಿದ್ದೆ

ಧರ್ಮ ಸಂಕಷ್ಟದಲ್ಲಿದೆಯಂತೆ

ಇದನ್ನು ಕೆಡವಿದರೆ ನಮ್ಮ ದೇವರು

ನನಗೆ ಒಳಿತು ಮಾಡಬಹುದೇ? ಎಂದಿದ್ದೆ

ಮೊನ್ನೆ ನೋಟ್ ಬ್ಯಾನ್ ಆದಾಗಲೂ ಕಂಡಿದ್ದೆ

ಬ್ಯಾಂಕಿನ ಕ್ಯೂನಲ್ಲಿ ನಿಂತು

ವಾರದೊಳಗಿರುವ ಮಗಳ ಮದುವೆಯ ಬಗ್ಗೆ

ಆತಂಕ ತೋಡಿಕೊಂಡಿದ್ದೆ

ನಾಳೆ ಅಕೌಂಟಿಗೆ ಕಪ್ಪು ಹಣ ಹಾಕುತ್ತಾರೆಂದು

ಆಸೆಯ ಕಂಗಳಲ್ಲಿ ಹೇಳಿಕೊಂಡಿದ್ದೆ

ಬಹು ದಿನಗಳ ಬಳಿಕ ಮತ್ತೆ ಸಿಕ್ಕಿರುವೆ

ಮಾತು ಆಡುತ್ತಿಲ್ಲ ನೀನು

ಮಾಡಿರುವ ಸಾಲಕ್ಕೆ ನೇಣು ಹಾಕಿಕೊಂಡಿದ್ದೆ

ಸಿಗುವ ಪರಿಹಾರ ಮನೆಯ ಖರ್ಚಿಗಾದೀತೆಂದು

ಹೇಳಿಕೊಂಡಿದ್ದೆಯಂತೆ

ನೋಡಲ್ಲಿ, ನಿನ್ನ ಆಸೆಗಳು ಮಲಗಿಸಿದ್ದ

ಹಾಸಿಗೆಯಲ್ಲಿನ್ನೂ ಹರಿದಾಡುತ್ತಿವೆ

ಸುತ್ತ ನಿಂತವರ ಮುಖಗಳು

ಥೇಟ್ ನಿನ್ನಂತೆ ಇವೆ.

Leave a Reply

Your email address will not be published.