ಹುಡುಗಿ, ಹುಡುಗ, ಆಕಾಶಮಲ್ಲಿಗೆ

– ರಘುನಂದನ

ಹುಡುಗಿ

ಟ್ರಾಫಿಕ್ಕು. ಎಳಬೆಳಗು. ರೋಡ್ ಡಿವೈಡರ್ ಮೇಲೆ.

ದೀಪ ಹತ್ತದ ಈ ಲೈಟು ಕಂಬದ ಪಕ್ಕ ತೆಂಗಿನ ಗರಿ
ಪೊರಕೆ ಕಾಲಿಗಾನಿಸಿ ಈ ಸೀಮೆಹುಣಿಸೆಯ ಬಿಳಲು ಇಂ
ಟರ್‍ನೆಟ್ ಕೇಬಲ್ ಜಪ್ಪಿ ಹಿಡಕೊಂಡು ಮೋಬೈಲಲ್ಲಿ
ಕಿವಿಕರಗಿ ನಿಂತ ತಿಳಿಗಪ್ಪು ಹೊಳಪಿನ ಜಲಗಾರ ಹುಡುಗಿ 
ನಿಂಬೆಹಳದಿ ಸಲ್ವಾರ್ ಮಿಡಿಮಾವುಹಸಿರು ಕೋಟು –  
ಇವಳ ಕಣ್ಣು ಯಾಕಿಷ್ಟು ಮಂಕು ತುಟಿಯಲ್ಲಿ ತಗಿಬಿಗಿ
ಹುಳಿಕಹೀ ನಗೆ ಮುಖ ಯಾಕೆ ವಿಷಣ್ಣ – ಎಳಬೆಳಗಿನಲ್ಲಿ
 
ಕಂಬದ ದೀಪ ಹತ್ತದೆಂದಲ್ಲ ಸೀಮೆಹುಣಿಸೆ ಒಗರು
ದೋರೆಯಾದ್ದಕ್ಕಲ್ಲ ಹೂಬಂಡು ಹೀರುತ್ತ ಫರ್‌ರ್‌
ರ್ರ ಹಾರುತ್ತ ಸೂರಕ್ಕಿಯಿಟ್ಟ ಹಿಕ್ಕೆಗೆ ಕೊರಳು ಹೇಸಿ
ಯಾದ್ದಕ್ಕಲ್ಲ ಮರದ ಮುಳ್ಳಿಗೆ ಇಣಚಿ ಹಲ್ಲಿಗೆ
ಈಡಾಗಿ ಕೇಬಲ್ಲು ಸರ್‌ರ್‌ರ್ರ ಬಿತ್ತೆಂದಲ್ಲ ಪೊರಕೆ
ಹಿಡಿ ಸಡಿಲಿ ಕಡ್ಡಿ ಉದುರಿದವು ಎಂದಲ್ಲ ಅಲ್ಲ
 
ಬಲ್‍ಬೊಡೆದಿದೆ ಒಳವೊಳಗೇ ಜೀವ ಮರಗಟ್ಟಿದೆ
ಒಲ್ಮೆಹಕ್ಕಿಯ ಚುಂಚ ತುಂಡಾಗಿದೆ ಬತ್ತಿಹೋಗಿದೆ
ನಿಂಬೆ ಹುಣಿಸೆ ಮಾವು ಜಗದ ಬಂಡು ರೋಡು ಟ್ರಾ
ಫಿಕ್ಕು ದೂಳು ಭರ್ರ್ರೋ – ಪೊರಕೆಯಣಕಿಸುತ್ತಿವೆ
 
ಅಯ್ಯೊ ಹುಡುಗೀ ಏನಂದ ಅವನು ಮೋ
ಬೈಲಿನಲ್ಲಿ ಎಂಥ ಕತ್ತರಿಯ ಮಾತಾಡಿದ?
 
ಹುಡುಗ
 
ಉರಿಬಿಸಿಲುಫುಟ್‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ಪಾತು. ಕಾಫೀ ಕಾರ್ನರ್.
 
ಕೂಪನ್ ಕೌಂಟರ್ ಜಂಗುಳಿಯೀಚೆ ಗ್ರೆನೇಡು ಸಿಡಿತ:
‘ನೀನಲ್ಲ ನಾನು ನಾನು ಸಾಯ್ಬೇಕ್ ವಿಸಾ ಕುಡ್ದು’
ಅಲ್ಲೆ ಪಾದರಿಯ ಕೆಳಗೆ ಹಳದಿ ಹೂಹಾಸು ನಡುವೆ
ಹಸಿರು ಮೋಪೆಡ್ಡಿಗೊರಗಿ ಮೋಬೈಲಿನೊಳಕ್ಕೆ ಸಿಗ
ರೇಟು ಘಾಟುರಿಸುತ್ತಿರುವ ಜೇನುಬಣ್ಣದ ಹುಡುಗ 
ಬೂದುಕೆಂಪು ಬರ್ಮುಡಾಷಾರ್ಟ್ಸ್ ಊದಾ ಟೀಶರ್ಟ್
ಗುಂಗುರು ಕೂದಲು – ಬಿರಿದುಬಿಟ್ಟ ಉರಿಬಿಸಿಲಲ್ಲಿ

ಹೂಹಾಸಿಗಿಲ್ಲ ಕಂಪು – ಇದು ಪಾದರಿ – ತೊಗಟೆ   
ಹೆಕ್ಕಳುಹೆಕ್ಕಳು ಹಣ್ಣಿಲ್ಲ ಹಕ್ಕಿಪಕ್ಕಿಗೆ ಮೆಚ್ಚಲ್ಲ
ಕಾಯಿಕಾಯಿ ಒಣಗಿ ಸುರುಟಿ ಸಿಡಿದಲ್ಲದೆ ಬೀಜ
ಬೀರಲಾಗದು ಸಿಪ್ಪೆ ಸಿಗಿದಹೆಣದ ಕರುಳಂತೆ ಜೋ
ಲಾಡುವುದು ಎಂದಲ್ಲ ಇವನ ಬೇಗುದಿ ಮೋಪೆಡ್ಡು
ಲಡಕಾಸಿ ಶರ್ಟುಷಾರ್ಟ್ಸು ಮಾಸಲು ಎಂದಲ್ಲ ಅಲ್ಲ     
                          
ಬಾಳಿನ ಕೂಪನ್ನು ಕೂಲಿ– ಸಿಗದಾಗಿದೆ ಹೂಹಾಸು 
ಹಳದಿ ಕಂಗೆಡಿಸಿದೆ ಪೆಟ್ರೋಲು ಕಾಫಿ ಸಿಗರೇಟಿಗೂ
ಅವಳ ಕೇಳಬೇಕಿದೆ ಬೂದಾಗಿ ಎಲ್ಲ ಬಣ್ಣ ಗುಂ
ಗುರು ಸಿಕ್ಕಾಗಿ ಜೇನು ನಂಜು ಸಿಡಿಮದ್ದಾಗಿದೆ
 
ಬೇಡ ಹುಡುಗಾ ಕರುಳುಬಿರಿದುಕೊಳ್ಳಬೇಡ ಬೇಡ ಜಂ
ಗುಳಿ ದುರುಗುಡುವುದು ಕಾಫಿ ಹೀರುವುದ ಬಿಡುವುದೆ?
 
ಆಕಾಶಮಲ್ಲಿಗೆ

ಎಲ್ಲೂಯಾವತ್ತೂಎಷ್ಟು ಹೊತ್ತಿಗೂ.
 
ಟ್ರಾಫಿಕ್ಕು ರೋಡ್‍ ಡಿವೈಡರ್ ಫುಟ್‍ಪಾತು ಕಾಫೀ
ಕಾರ್ನರ್ ದೀಪದ ಕಂಬ ಆ ಈ ಮರ ಕೇಬಲ್ಲುಗಳ
ಕೆಳಗೆ ಹೂಹಾಸಿನ ಮೇಲೆ –ಎಲ್ಲೂ– ನೋಡು ಇದು
ಕತ್ತರಿಯ ಮಾತಿಂದ ಮಂಕಾದ ಮನ ಇದು ನಂಜಾದ
ಜೇನಿನ ಸಿಡಿಮದ್ದು ಅಯ್ಯೋ ಎಂಬಂತೆ ಕಾಣುವುದು
ಆಕಾಶಮಲ್ಲಿಗೆ ಮರದಂತೆ ನಿಂತಾಗ ಒಂದೇ 
ಶಾಂತ ನಿರ್ಮಮ – ಯಾವತ್ತೂ ಎಷ್ಟು ಹೊತ್ತಿಗೂ
 
ಕಂಡದ್ದು ಎಂದದ್ದು ದಿಟ ಕಂಡುಕೊಂಡದ್ದೆಂದಲ್ಲ
ಆ ಹೂಬಂಡು ಒಳಬಲ್ಬು ತುಂಡಾದ ಚುಂಚ ಒಲ್ಮೆ
ಗಾಸಿಯದ್ದೆ ಗುರುತು ಎಂದಲ್ಲ ಕಂಗೆಡಿಸುವ ಹಳದಿ
ಹಾಸು ಜೋಲುಸಿಪ್ಪೆ ಸಿಗದ ಕೂಲಿಯದ್ದೆ ಎಂದಲ್ಲ
ಇದ್ದರೂ ಅವಳ ಹುಡುಗ ಇವನೆ ಎಂದಲ್ಲ ಇವನ
ವಳವಳೆಯೆಂದಲ್ಲ ಆಗಿರಬಾರದೆಂದೂ ಅಲ್ಲ ಅಲ್ಲ
 
ಬಿರಿದಕರುಳು ಬೇಗುದಿ ತುಟಿಯ ಹುಳಿಕಹಿ ತಗಿಬಿಗಿ
ಎಲ್ಲಿ ಯಾರದಾದರೇನು ಕಾಣಬೇಕು ಅದರ ಒಳಗು
ಜೊಂಪೆದೀಪ ನೋಟವಾಗಿ ನೆಲಕೆ ನೆಟ್ಟು ಒಳಗಣ್ಣು
ತಿಳಿಬಿಳಿಯ ಆಕಾಶಮಲ್ಲಿಗೆಯ ಹೂವಂತೆ ತೂಗಿ 
 
ಕಾಣಬೇಕು ತಾನೆ ಬದುಕಿನ ಇಳಿಹೊತ್ತಿನಲ್ಲಿ ಜಗದ ಬಂ
ಡು ಬತ್ತುವುದು ಯಾಕೆ ಯಾಕೆ ಗ್ರೆನೇಡು ಒಳಸಿಡಿವುದು?

Leave a Reply

Your email address will not be published.