ಭೂಪರಿವರ್ತನೆಗೆ ನಿರ್ಬಂಧ ಏಕೆ?

ಕರ್ನಾಟಕದ ಯಾವುದೇ ಕೃಷಿ ಭೂಮಿಯನ್ನು ವಸತಿ ಹಾಗೂ ವಾಣಿಜ್ಯ ಬಳಕೆಗೆ ಅನುಮತಿ ನೀಡಿ ಬಳಕೆ ಯೋಗ್ಯ ಭೂಮಿಯ ಕೃತಕ ಕೊರತೆಯನ್ನು ನೀಗಿಸಬಾರದೇಕೆ?

ಭೂಪರಿವರ್ತನೆಗೆ ನಿರ್ಬಂಧ ಬೇಕಿಲ್ಲ

ಕರ್ನಾಟಕ ಸರ್ಕಾರ ಉದ್ಯಮಶೀಲತೆ, ಕೈಗಾರಿಕೆ ಹಾಗೂ ವಾಣಿಜ್ಯ ಸಂಸ್ಥೆಗಳಿಗೆ ಉತ್ತೇಜನ ನೀಡಲು ‘ಕೈಗಾರಿಕೆ ಮತ್ತು ಹೂಡಿಕೆ ನೀತಿ’ಯನ್ನೇ ಹೊಂದಿದೆ. ಒಮ್ಮೊಮ್ಮೆ ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್‍ಗಳನ್ನೂ ನಡೆಸುತ್ತದೆ. ಕೈಗಾರಿಕೆಗಳಿಗೆ ಸಹಾಯ ಮಾಡಲು ‘ಉದ್ಯೋಗಮಿತ್ರ’ದ ಮೊದಲಾಗಿ ಹಲವಾರು ನಿಗಮ ಮಂಡಳಿಗಳಿವೆ. ಪದೇಪದೇ ಹೈಲೆವಲ್ ಕಮಿಟಿ ಮತ್ತು ಸಿಂಗಲ್ ವಿಂಡೋ ಏಜೆನ್ಸಿಯ ಸಭೆಗಳನ್ನು ನಡೆಸಿ ಉದ್ಯಮಗಳಿಗೆ ಬೇಕಾದ ಪರವಾನಗಿ ಸಹಾಯವನ್ನು ನೀಡಲಾಗುತ್ತದೆ. ಆದರೆ ಕರ್ನಾಟಕದಲ್ಲಿ ಹೆಚ್ಚಿನ ಕೈಗಾರಿಕೆಗಳು ಹಾಗೂ ವಾಣಿಜ್ಯ ಘಟಕಗಳು ಸ್ಥಾಪಿತವಾಗದೆ ಇರಲು ಮುಖ್ಯ ಕಾರಣವೆಂದರೆ ಭೂಮಿಯ ಕೃತಕ ಕೊರತೆ.

ನಿಮಗೆ ಆಶ್ಚರ್ಯವಾಗಬಹುದು. ಬೀದರಿನಿಂದ ಬಂಗಾರಪೇಟೆಯವರೆಗೆ ಕರ್ನಾಟಕದಾದ್ಯಂತ ಮಳೆಯಾಧಾರಿತ ಕೃಷಿ ಭೂಮಿಯಿದ್ದು ಇದನ್ನು ಕೈಗಾರಿಕೆಗೆ ಹಾಗೂ ವಾಣಿಜ್ಯ ಉದ್ದೇಶಗಳಿಗೆ ಬಳಸಬಹುದು. ಯಥೇಚ್ಛವಾಗಿರುವ ಈ ಭೂಮಿಯನ್ನು ಯಾರಾದರೂ ಕೊಂಡು ಉದ್ಯಮ ಸ್ಥಾಪಿಸಬಾರದೇ ಎಂದು ನೀವು ಕೇಳಬಹುದು. ಆದರೆ, ನಿಮಗೆ ನಿರಾಸೆಯಾಗುವಂತೆ ನಮ್ಮ ಘನ ಕರ್ನಾಟಕ ಸರ್ಕಾರ ಈ ಭೂಮಿಯನ್ನು ಯಾವುದೇ ಕೃಷಿಯೇತರ ಬಳಕೆಗೆ ಅನುಮತಿ ನೀಡುತ್ತಿಲ್ಲ. ಕಾರಣ: ಭ್ರಷ್ಟಾಚಾರ.

  • ಕೃಷಿ ಭೂಮಿಯನ್ನು ಯಾವುದೇ ಕಂಪನಿಗಳು ಕೊಳ್ಳುವಂತಿಲ್ಲ. ಜಿಲ್ಲಾ ಡಿಸಿಯ ಪೂರ್ವಾನುಮತಿಯಿಲ್ಲದೆ ಕೃಷಿಕ ಕುಟುಂಬದ ಹೊರತಾಗಿ ಬೇರಾರೂ ಭೂಮಿ ಖರೀದಿಸದಂತೆ ರಾಜ್ಯದ ಭೂಸುಧಾರಣೆ ಕಾಯ್ದೆ ನಿರ್ಬಂಧ ವಿಧಿಸಿದೆ. ಯಾವುದೇ ಜಿಲ್ಲೆಯ, ಯಾವುದೇ ಡಿಸಿ, ಯಾವುದೇ ಕಂಪನಿಗೆ ಕೃಷಿ ಜಮೀನು ಕೊಳ್ಳಲು ಪೂರ್ವಾನುಮತಿ ನೀಡುತ್ತಿಲ್ಲ ಹಾಗೂ ನೀಡಬಹುದಾದ ಮನಃಸ್ಥಿತಿ ಮತ್ತು ಪರಿಸ್ಥಿತಿಯಿಲ್ಲ.
  • ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಕಳೆದ ಹಲವಾರು ವರ್ಷಗಳಲ್ಲಿ ಹೊಸದಾಗಿ ಯಾವುದೇ ಕೈಗಾರಿಕಾ ಪ್ರದೇಶ ಸ್ಥಾಪಿಸದೆ ನಿರ್ಜೀವವಾಗಿದೆ. ಮೇಲಾಗಿ ಈ ಕೈಗಾರಿಕಾ ಪ್ರದೇಶಗಳು ಎಲ್ಲೆಂದರಲ್ಲಿ ಯಾವುದೋ ಮೂಲೆಯಲ್ಲಿ ಇದ್ದರೆ ಅದ ರಿಂದ ಪ್ರಯೋಜನವೂ ಇಲ್ಲ. ಸದ್ಯಕ್ಕೆ ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಎಲ್ಲಿಯೂ ಕೆಐಎಡಿಬಿ ಯಾವುದೇ ಕೈಗಾರಿಕಾ ಯೋಗ್ಯ ಭೂಮಿ ಹೊಂದಿಲ್ಲ. ಕೈಗಾರಿಕೆಗಳನ್ನು ರಾಯಚೂರು, ಬೀದರ್‍ಗೆ ಕಳುಹಿಸಬಹುದಾದರೂ ಉನ್ನತ ತಾಂತ್ರಿಕತೆ ಹಾಗೂ ಸೇವಾಕ್ಷೇತ್ರದ ವಾಣಿಜ್ಯ ಘಟಕಗಳನ್ನು ಎಲ್ಲೆಂದರಲ್ಲಿ ಸ್ಥಾಪಿಸುವಂತಿಲ್ಲ. ಉನ್ನತ ಗುಣಮಟ್ಟದ ಮಾನವಸಂಪನ್ಮೂಲವನ್ನೇ ಅವಲಂಬಿಸಿರುವ ಈ ಘಟಕಗಳು ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಇರಬಯಸಿದರೆ ಅದಕ್ಕೆ ಅಭ್ಯಂತರ ಮಾಡುವುದು ಸಲ್ಲದು.
  • ಯೂರೋಪಿನ ಮತ್ತು ಅಮೆರಿಕದ ಫಾಚ್ರ್ಯೂನ್ 500 ಕಂಪನಿಗಳೆಲ್ಲವೂ ಬೆಂಗಳೂರಿನ ಸುತ್ತಮುತ್ತ ತಮ್ಮ ಕ್ಯಾಂಪಸ್ ಸ್ಥಾಪಿಸಲು ಬಯಸಿವೆ. 50-100 ಎಕರೆ ಪ್ರದೇಶದಲ್ಲಿ ಸ್ಥಾಪಿಸಬಹುದಾದ ಈ ಘಟಕಗಳು ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿ ಮಾಡುತ್ತವೆ. ಈ ವಾಣಿಜ್ಯ ಚಟುವಟಿಕೆಗಳು ಹತ್ತಾರು ಸಹಸ್ರಾರು ಸಂಖ್ಯೆಯಲ್ಲಿ ಪೂರಕ ಉದ್ಯೋಗ ಸೃಷ್ಟಿ ಮಾಡುತ್ತವೆ. ಇವುಗಳಿಂದ ವಸತಿ, ಸಾರಿಗೆ, ಶಿಕ್ಷಣ, ಆರೋಗ್ಯ, ಸಂವಹನ ಮತ್ತಿತರ ಕ್ಷೇತ್ರಗಳಲ್ಲಿ ಮತ್ತಷ್ಟು ಹೂಡಿಕೆಯಾಗುವ ಸಾಧ್ಯತೆಗಳಿವೆ.
  • ಆನ್‍ಲೈನ್ ಮುಖಾಂತರ ವ್ಯಾಪಾರ ಮಾಡುವ ವಾಣಿಜ್ಯ ಘಟಕಗಳು ಬೆಂಗಳೂರನ್ನೇ ತಮ್ಮ ಕೇಂದ್ರ ಸ್ಥಾನ ಮಾಡಿಕೊಂಡಿವೆ. ಅಮೆಜಾನ್ ಫ್ಲಿಪ್‍ಕಾರ್ಟ್, ಬಿಗ್‍ಬಾಸ್ಕೆಟ್ ಮತ್ತಿತರ ನೂರಾರು ವಾಣಿಜ್ಯಗಳು ಬೆಂಗಳೂರಿನಲ್ಲಿ ತಮ್ಮ ಕೇಂದ್ರ ಉಗ್ರಾಣ ಸ್ಥಾಪಿಸಲು ಜಮೀನು ಹುಡುಕುತ್ತಿವೆ.

ಆದರೆ ಕೃಷಿ ಬಳಕೆಯಲ್ಲಿರುವ ಜಮೀನನ್ನು ಕೈಗಾರಿಕೆ, ವಸತಿ ಅಥವಾ ವಾಣಿಜ್ಯ ಬಳಕೆಗೆ ಪರಿವರ್ತಿಸಲು ಸರ್ಕಾರ ಅನುಮತಿ ನೀಡುತ್ತಿಲ್ಲ. ಅನುಮತಿ ನೀಡಲು ಕೋಟ್ಯಂತರ ರೂ.ಗಳ ಲಂಚದ ಬೇಡಿಕೆಯಲ್ಲಿ ಮತ್ತು ಈ ಭೂಪರಿವರ್ತನೆಯ ಅನಿಶ್ಚಿತತೆಯಲ್ಲಿ ಯಾವುದೇ ಉದ್ಯಮಗಳಿಗೂ ಪರಿವರ್ತಿತ ಜಮೀನು ಸಿಗುತ್ತಿಲ್ಲ. ಕರ್ನಾಟಕದಲ್ಲಿ ಕಾಲಿಡಲೇ ಜಾಗವಿಲ್ಲದ ಈ ಕಂಪನಿಗಳು ಕರ್ನಾಟಕದ ಹೊರಗೆ ಬೇರೂರಲು ಇಷ್ಟವಿಲ್ಲದಿದ್ದರೂ ಒಪ್ಪಲೇಬೇಕಾದ ಅನಿವಾರ್ಯ ಪರಿಸ್ಥಿತಿಯಿದೆ. ಭೂಪರಿವರ್ತನೆಗೆ ಒಪ್ಪದಿರಲು ಸರ್ಕಾರ ಝೋನಿಂಗ್ ರೆಗ್ಯುಲೇಷನ್ ಹಾಗೂ ಮಾಸ್ಟರ್ ಡೆವೆಲಪ್‍ಮೆಂಟ್ ಪ್ಲಾನ್ ಮತ್ತಿತರ ಸಬೂಬು ಹೇಳುತ್ತಿದೆ. ಆದರೆ ಈ ಎಲ್ಲಾ ಸಬೂಬುಗಳು ಬೂಟಾಟಿಕೆ ಮಾತ್ರ. ಹಣ ನೀಡಿದರೆ ಸರ್ಕಾರಗಳು ಯಾವುದೇ ಜಮೀನನ್ನು ಪರಿವರ್ತನೆ ಮಾಡಲು ಒಪ್ಪುತ್ತವೆ. ಯಾವುದೇ ಜಮೀನನ್ನು ಯಾವುದೇ ಝೋನ್‍ಗೆ ಸೇರಿಸಲು ಸಿದ್ಧವಿರುತ್ತವೆ.

ಪರಿವರ್ತನೆಯ ಈ ಪ್ರಕ್ರಿಯೆಯಲ್ಲಿ ಅನ್ಯಾಯವಾಗುವುದು ಸಾಮಾನ್ಯ ಜಮೀನು ಮಾಲೀಕರಿಗೆ. ಸರ್ಕಾರಗಳಿಗೆ ದುಬಾರಿ ಲಂಚ ಕೊಡಲಾಗದೆ ಈ ಬಡ-ರೈತ ಜಮೀನು ಮಾಲೀಕರು ಜಮೀನು ಮಾರಾಟಕ್ಕೆ ಒಡಂಬಡಿಕೆ ಮಾಡಿಕೊಳ್ಳುತ್ತಾರೆ. ಈ ಮಾಲೀಕರಿಂದ ಕಡಿಮೆ ಬೆಲೆಗೆ ಜಮೀನು ಖರೀದಿಸಿ ಹಣವುಳ್ಳ ಹೂಡಿಕೆದಾರರು ಭೂಪರಿವರ್ತನೆ ಮಾಡಿಸಿಕೊಂಡು ಒಂದಕ್ಕೆ ನಾಲ್ಕರ ಬೆಲೆಗೆ ಮಾರಾಟ ಮಾಡುತ್ತಾರೆ. ಭೂಪರಿವರ್ತನೆ ಸಂದರ್ಭದ ಅನಿಶ್ಚಿತತೆಯನ್ನು ಎದುರಿಸುವ ಹಣಬಲ, ಬಾಹುಬಲ, ಅಧಿಕಾರಬಲ ಅಥವಾ/ಹಾಗೂ ರಾಜಕೀಯ ಬಲವುಳ್ಳವರು ಹೇರಳ ಹಣ ಗಳಿಸುತ್ತಾರೆ.

ಇದು ತಪ್ಪಬೇಕು. ಪರಿವರ್ತಿತ ಭೂಮಿಯ ಸಂಪೂರ್ಣ ಲಾಭವು ಮೂಲ ಭೂಮಾಲೀಕರಿಗೆ ಸಲ್ಲಬೇಕು. ಕರ್ನಾಟಕದಾದ್ಯಂತ ವಸತಿ, ಕೈಗಾರಿಕೆ ಹಾಗೂ ವಾಣಿಜ್ಯ ಬಳಕೆಗೆ ಹೇರಳವಾಗಿ ಜಮೀನು ಲಭ್ಯವಾಗಬೇಕು. ಇದಕ್ಕೆ ಕರ್ನಾಟಕದ ಯಾವುದೇ ಕೃಷಿ ಭೂಮಿಯನ್ನು ವಸತಿ ಅಥವಾ ವಾಣಿಜ್ಯ ಉದ್ದೇಶಕ್ಕೆ ಬಳಸಲು ಅನಿಯಂತ್ರಿತ ಪರವಾನಗಿ ನೀಡಬೇಕು. ಸೂಕ್ತ ಅಭಿವೃದ್ಧಿ ಶುಲ್ಕ ಪಡೆದುಕೊಂಡು ಆಟೊಮ್ಯಾಟಿಕ್ ಮಾರ್ಗದಲ್ಲಿ ಭೂಪರಿವರ್ತನೆ ಮಾಡಲೇಬೇಕಾದ ಕಾನೂನು ಜಾರಿಗೆ ಬರಬೇಕು. ಕರ್ನಾಟಕದಲ್ಲಿ ಭೂಪರಿವರ್ತಿತ ಜಮೀನಿನ ಕೊರತೆ ನೀಗಿ ಹೆಚ್ಚಿನ ಸಂಖ್ಯೆಯ ಉದ್ಯಮ ಹಾಗೂ ಹೂಡಿಕೆಯ ಚಟುವಟಿಕೆಗಳು ಪ್ರಾರಂಭವಾಗಬೇಕು.

Leave a Reply

Your email address will not be published.