ಹೃದಯ ನಿವೇದನೆಯ ಕವಿ: ಜ್ಞಾನಪೀಠ ಪುರಸ್ಕೃತ ಅಕ್ಕಿತ್ತಂ

ಅಕ್ಕಿತ್ತಂರನ್ನು ಸಾಮಾನ್ಯವಾಗಿ ಸಾಹಿತ್ಯಾಸ್ವಾದಕರು ಕಾಣುವುದು ಮಲಯಾಳಂ ಕಾವ್ಯದ ಪಿತಾಮಹನಾಗಿ. ವಯಸ್ಸಿನಿಂದಲೂ ಪಿತಾಮಹನೇ ಹೌದು. ಆದರೆ ಇದೇ ಅಕ್ಕಿತ್ತಂ ಮಲಯಾಳಂನ ಅತ್ಯಂತ ಆಧುನಿಕ ಕವಿ ಎಂಬುದೂ ವಾಸ್ತವವೇ!

ಡಾ.ಮೋಹನ ಕುಂಟಾರ್

`ಇತರರಿಗಾಗಿ ಕಣ್ಣಿಂದ ಹನಿಯೊಂದ
ನಾನುದುರಿಸಲು
ನನ್ನಂತರಾಳದಲ್ಲುದಿಸುವುದು
ಸಾವಿರ ಸೌರಮಂಡಲ
ಇತರರಿಗಾಗಿ ನಾನೊಂದು
ನಸುನಗೆಯ ಬೀರಲು
ನನ್ನ ಹೃದಯದಲ್ಲಲೆಯುವುದು
ನಿತ್ಯ ನಿರ್ಮಲ ಪೌರ್ಣಮಿ’

ಇತರರಿಗಾಗಿ ಮನಮಿಡಿಯುವ ಹೃದಯ ನಿವೇದನೆಯನ್ನು ಅಕ್ಷರರೂಪದಲ್ಲಿ ಮೂಡಿಸಿದ ಮಲಯಾಳಂ ಕವಿ ಅಕ್ಕಿತ್ತಂ ಅಚ್ಯುತನ್ ನಂಬೂದಿರಿಗೆ ಐವತ್ತೈದನೆಯ ಜ್ಞಾನಪೀಠ ಪುರಸ್ಕಾರ ಸಂದಿದೆ. ಮಲಯಾಳಂಗೆ ಆರನೆಯ ಜ್ಞಾನಪೀಠವಿದು. ಈ ಮೊದಲು ಜಿ.ಶಂಕರ ಕುರುಪ್ಪ್, ಎಸ್.ಕೆ.ಪೊಟ್ಟಕಾಡ್, ತಗಳಿ ಶಿವಶಂಕರ ಪಿಳ್ಳೆ, ಎಂ.ಟಿ. ವಾಸುದೇವನ್ ನಾಯರ್, ಒ.ಎನ್.ವಿ. ಕುರುಪ್ಪ್ ಇವರು ಗೌರವಕ್ಕೆ ಪಾತ್ರರಾದವರು. ತಾನು ಕಣ್ಣೀರು ಸುರಿಸುವಾಗಲೂ ತನ್ನೊಳಗೆ ಉದಯಿಸುವ ಸೂರ್ಯನನ್ನು ಗುರುತಿಸುವ ಕವಿ ಅಕ್ಕಿತ್ತಂ ಸ್ವಾನುಭವಗಳ ಜೊತೆಗೆ ಸಮಕಾಲೀನ ಸಾಮಾಜಿಕ ಬದುಕಿನ ಪರಿಸ್ಥಿತಿಗಳನ್ನು ಕುರಿತಂತೆ ಅನೇಕ ಕವಿತೆಗಳನ್ನು ಬರೆದು ಮಲಯಾಳಂ ಕಾವ್ಯಪ್ರಿಯರ ಹೃದಯ ಸ್ಪರ್ಶಿಸಿದ್ದಾರೆ.

ಖ್ಯಾತ ಚಿತ್ರಕಲಾವಿದ ರಾಜಾ ರವಿವರ್ಮ ಅರಮನೆಯ ಗೋಡೆಗಳ ಮೇಲೆ ಇದ್ದಲಿನಿಂದ ಚಿತ್ರಗಳನ್ನು ಬರೆದು ಮಹಾನ್ ಕಲಾವಿದರಾದಂತೆ ಅಕ್ಕಿತ್ತಂ ಸಹ ದೇವಾಲಯದ ಗೋಡೆಗಳ ಮೇಲೆ ಚಿತ್ರ ಬರೆದು ಕಲಾವಿದನಾಗುವ ಕನಸು ಕಂಡಿದ್ದರು. ಸೊಂಟದಲ್ಲಿ ಕಪ್ಪು ಉಡಿದಾರ ಹಾಗೂ ಬೆಳ್ಳಗಿನ ಕೌಪೀನವನ್ನು ಕಟ್ಟಿಕೊಂಡ ಹೆಣ್ಣೊಬ್ಬಳ ಚಿತ್ರವನ್ನು ಕಂಡು ಸ್ನಾನಕ್ಕೆ ಬಂದ ಹೆಣ್ಣು ಮಕ್ಕಳು ನಕ್ಕಾಗ ಇದು ನನ್ನದೇ ಚಿತ್ರವೆಂದು ಭಾವಿಸಿದ ನಂಬೂದಿರಿ ಹೆಣ್ಣುಮಗಳೊಬ್ಬಳು ಅತ್ತುಬಿಟ್ಟಳು. ಇದನ್ನು ನೋಡಿದ ಬಳಿಕ ಅಕ್ಕಿತ್ತಂಗೆ ಸಂಕಟವಾಯಿತು. ಮುಂದೆ ಚಿತ್ರ ಬರೆಯುವುದನ್ನೇ ನಿಲ್ಲಿಸಿಬಿಟ್ಟರು. ಮುಂದೆ ಅಕ್ಷರ ಬರವಣಿಗೆಯನ್ನೇ ಪ್ರಮುಖ ಅಭಿವ್ಯಕ್ತಿ ಮಾಧ್ಯಮವನ್ನಾಗಿಸಿಕೊಂಡರು.

ಹಳ್ಳಿಯ ಪುಂಡ ಹುಡುಗರು ದೇವಾಲಯದ ಗೋಡೆಗಳ ಮೇಲೆ ಇದ್ದಲಿನಿಂದ ಗೀಚಿದ ಸಾಲುಗಳನ್ನು ಓದಿದ ಅಕ್ಕಿತ್ತಂಗೆ ಉಂಟಾದ ರೋಷದ ಭರದಲ್ಲಿ ತನ್ನ ಎಂಟನೆಯ ವಯಸ್ಸಿನಲ್ಲಿ ಗೋಡೆಯ ಮೇಲೆ ಗೀಚಿದ ನಾಲ್ಕು ಸಾಲುಗಳೇ ಮೊದಲ ಕವಿತೆಯಾಯಿತು.

`ದೇವಾಲಯದ ಗೋಡೆಗಳಲ್ಲಿ
ಸುಮ್ಮನೆ ಗೀಚಿದರೆ
ದೊಡ್ಡವನಾದ ದೇವರು ಬಂದು
ಅವೆಲ್ಲವನ್ನು ಮಾಯಿಸುವನು’

ಬಾಲಕ ಅಕ್ಕಿತ್ತಂನಿಂದ ಅನಿರೀಕ್ಷಿತವಾಗಿ ಹೊರಹೊಮ್ಮಿದ ಕವಿತಾ ಲಕ್ಷಣಗಳ ಈ ಕಾವ್ಯ ಬೀಜ ಮುಂದೆ ಹೆಮ್ಮರವಾಗಿ ಬೆಳೆಯಲು ನಾಂದಿಯಾಯಿತು.

ಕುಮರನಲ್ಲೂರ್‍ನ ಅಕ್ಕಿತ್ತಂ ಅವರ ಮನೆಯ ಹಿಂಭಾಗದ ವಿಶಾಲವಾದ ಬಯಲಿನಲ್ಲಿ ಜೊತೆಗಾರರೊಡನೆ ಆಟವಾಡುತ್ತ ಕಳೆದ ಬಾಲ್ಯದ ನೆನಪುಗಳು ಕವಿಯ ಹೃದಯದ ಕನಸುಗಳಾಗಿ ಕವಿತೆಗಳಲ್ಲಿ ಕುಡಿಯೊಡೆದಿವೆ. ಹಸಿವೆಯೇ ತನ್ನಿಂದ ಕವಿತೆಗಳನ್ನು ಬರೆಯಿಸಿತು ಎಂದು ಅಕ್ಕಿತ್ತಂ ಹೇಳಿದ್ದಿದೆ. ನೋವುಗಳು ನೆರಳುಗಳಾಗಿ ಜೊತೆಗಿರುತ್ತಿದ್ದ ಆ ಕಾಲದಲ್ಲಿ ಕೈ ಹಿಡಿದು ಮುನ್ನಡೆಸಲು ಕವಿತೆಯೇ ಜೊತೆಯಾಗುತ್ತಿತ್ತು. ಇತರರ ನೋವಿಗೆ ಸ್ಪಂದಿಸುವ ಅವರ ಸಂತಸದಲ್ಲಿ ಪಾಲ್ಗೊಳ್ಳುವ ಕವಿಗೆ ಹಳ್ಳಿಯ ಕಾಲು ದಾರಿಯಲ್ಲಿ ನಡೆಯುವಾಗ ಕವಿತೆ ಸಹಯಾತ್ರಿಯಾಗಿರುತ್ತಿತ್ತು.

ಅಕ್ಕಿತ್ತಂ ಅವರ ರಚನೆಗಳಲ್ಲಿ ಪ್ರಮುಖವಾದುದೆಂದು ಪರಿಗಣಿಸಲಾದ ಕವಿತೆ `ಇಪ್ಪತ್ತನೆಯ ಶತಮಾನದ ಇತಿಹಾಸ’ ಬರೆದುದು 1952ರಲ್ಲಾದರೂ
ಪ್ರಕಟವಾದುದು 1958ರಲ್ಲಿ. ಮಲಯಾಳಂ ಕಾವ್ಯಲೋಕಕ್ಕೆ ಆಧುನಿಕತೆಯ ಪ್ರವೇಶದ ಹೆಜ್ಜೆ ಗುರುತಾಗಿಯೂ ಈ ದೀರ್ಘ ಕಥನಕವನವನ್ನು ವಿಶ್ಲೇಷಿಸಲಾಗಿದೆ. ಮಾನವ ಪ್ರೀತಿಯಲ್ಲಿ ಕೇಂದ್ರೀಕೃತವಾದ ಸಾಮಾಜಿಕ ಜೀವನ ದರ್ಶನದ ಉದಾತ್ತ ಭಾವಗಳನ್ನು ಸರಳವೂ, ಅಗಾಧವೂ ಆದ ಈ ಇತಿಹಾಸ ಪ್ರಚಾರ ಮಾಡುತ್ತದೆ. ಈ ಕವಿತೆಯ ಕುರಿತು ಅಕ್ಕಿತ್ತಂ ಹಲವು ಬಾರಿ ಪುನರಾವರ್ತಿಸಿದ್ದಿದೆ. ಇದನ್ನು ಬರೆದುದು ನಾನಲ್ಲ. ನನ್ನೊಳಗಿನ ಇನ್ನೊಬ್ಬ.

ಬಾಲ್ಯದ ಆಟ ಪಾಠಗಳ ಸಂಭ್ರಮದ ವರ್ಣನೆಯಿಂದ ಆರಂಭವಾಗುವ ಡಾ.ಮೋಹನ ಕುಂಟಾರ್ ಈ ಕವಿತೆಯು ನಿಧಾನವಾಗಿ ವಿದದ ಛಾಯೆ ಆವರಿಸಿ ಅಧ್ಯಾತ್ಮದ ಅಮೃತ ಸಿಂಚನದೊಡನೆ ಕೊನೆಯಾಗುತ್ತದೆ. ಬದಲಾವಣೆಗೆ ಸಿಲುಕಿದ ಬದುಕಿನಲ್ಲಿ ಸಂತಸ ಕಳೆದುಕೊಳ್ಳುವ ಅನೇಕ ಸಾಮಾಜಿಕ ರಾಜಕೀಯ ವಿದ್ಯಮಾನಗಳಿಂದ ನೋವಿಗೊಳಗಾದವರಿಗಾಗಿ ಕವಿ ಮನಸ್ಸು ನೊಂದಿದೆ.

ಮನುಷ್ಯ ಸಮತೆಯೇ ಮೂಲ ಆಶಯವಾಗುಳ್ಳ ಈ ಕವಿತೆಯಲ್ಲಿ ದುಃಖಿತರ ಕುರಿತ ಅನುಕಂಪವನ್ನು ಕಾಣಬಹುದು. ಮಾನವತೆಯ ಮಹಾದರ್ಶನವನ್ನು ಇತರರಿಂದಲೂ ನಿರೀಕ್ಷಿಸುವ ಕವಿ ಅಕ್ಕಿತ್ತಂರ ವೈಯಕ್ತಿಕ ದುಃಖವೆಂಬುದು ಆ ಕವಿತೆಯಲ್ಲಿಲ್ಲ. ಇತರರಿಗಾಗಿ ಕಣ್ಣೀರು ಸುರಿಸುವ ಸಿದ್ಧಿ ದೈವಸೃಷ್ಟಿಯಲ್ಲಿ ಮಾನವನಿಗೆ ಮಾತ್ರ ಸಾಧ್ಯವಿರುವ ಸಾಮಥ್ರ್ಯ.

ಕ್ರಾಂತಿಗೆ ವಿರುದ್ಧವಾಗಿ ಕವಿತೆ ಬರೆದರೆಂಬ ಆರೋಪ ಹೊರಿಸಿ ಪ್ರಮುಖ ರಾಜಕೀಯ ಪಕ್ಷವೊಂದು ಕವಿಯನ್ನು ಅವಗಣಿಸಿತ್ತು. ಕ್ರಾಂತಿಯೆಂಬುದು ರಕ್ತ ಸುರಿಸದೆಯೇ ಆಗಬೇಕು ಎಂಬುದೇ ಕವಿಯ ದೃಷ್ಟಿ. ಬಂಡವಾಳಶಾಹಿಗಳ, ಜಮೀನ್ದಾರರ ವಿರುದ್ಧ ಕಾರ್ಮಿಕ ಹೋರಾಟದ ವಯಲಾರ್ ಚಳವಳಿಯ ನಂತರ ಕವಿಯ ಆತ್ಮ ನೊಂದು ಕವಿತೆಯ ರೂಪದಲ್ಲಿ ಹೊರಹೊಮ್ಮಿತು. ಆ ಹೋರಾಟದಲ್ಲಿ ಬಡವರು ಪ್ರಾಣ ಕಳೆದುಕೊಂಡುದು ನೇತೃತ್ವದ ಅಪ್ರಬುದ್ಧತೆಯ ಪ್ರತೀಕವೆಂದು ಅವರ ಪಾಪ ನಿವೇದನೆಯ ರೂಪದಲ್ಲಿ ಕವಿತೆಯನ್ನು ಅಕ್ಕಿತ್ತಂ ಬರೆದಿದ್ದರು. ಈ ಪಶ್ಚಾತ್ತಾಪ ರೂಪದ ಭಾವವನ್ನು ಪ್ರಕಟಪಡಿಸಿದ್ದು ಕಮ್ಯುನಿಸ್ಟ್ ಪಾರ್ಟಿಗೆ ಇಷ್ಟವಾಗಲಿಲ್ಲ.

ಇಪ್ಪತ್ತನೆಯ ಶತಮಾನದ ಇತಿಹಾಸ ಬರೆದುದು ಕ್ರಾಂತಿಯಲ್ಲಿ ನಂಬಿಕೆಯಿಲ್ಲದೆ ಅಲ್ಲ. ಬದಲಾಗಿ ರಕ್ತಪಾತವಿಲ್ಲದೆ ಕ್ರಾಂತಿಯಾಗಬೇಕೆಂದು ಬಯಸುವ ಕವಿಯೇ ಅದನ್ನು ಬರೆದುದು. ಕೇರಳದಲ್ಲಷ್ಠೆ ಅಲ್ಲ ಭಾರತದ ಇತರೆ ಕಡೆಗಳಲ್ಲಿಯೂ ಕವಿ ಬಯಸುವುದೂ ಇದನ್ನೆ. ಅಕ್ಕಿತ್ತಂರನ್ನು ದೂರವಿಟ್ಟವರಾರೂ ಅದನ್ನು ಅರ್ಥಮಾಡಿಕೊಂಡಿಲ್ಲ ಎಂಬುದೇ ವಸ್ತು ಸ್ಥಿತಿಯ ಚರ್ಚೆ ಮಲಯಾಳಿಗರ ನಡುವೆ ಇದೆ.

‘ಬೆಳಕು ದುಃಖಕರ ಮಗುವೇ
ಇರುಳಲ್ಲವೇ ಸುಖಪ್ರದ’

ಎಂಬ ಸಾಲುಗಳನ್ನು ಹಲವರು ತಪ್ಪಾಗಿ ಗ್ರಹಿಸಿದರು. ಈ ಸಾಲುಗಳು ಕೇರಳ ಸಾಮಾಜಿಕ, ರಾಜಕೀಯ ವಲಯದಲ್ಲಿ ತಲ್ಲಣಗಳನ್ನುಂಟು ಮಾಡಿದುವು. ಕವಿ ಬೆಳಕನ್ನು ದುಃಖವೆಂದು ಹೇಳುವಾಗ ಬೆಳಕನ್ನು ನಿಷೇಧಿಸುತ್ತಾರೆ ಎಂದಲ್ಲ ಅರ್ಥೈಸಬೇಕಾದುದು. ಕವಿತೆ ಬಯಸುವುದು ಮರು ಓದನ್ನು. ತಪ್ಪಾಗಿ ಓದುವುದರಿಂದಲೇ ಅಕ್ಕಿತ್ತಂ ಬಗೆಗೆ ತಪ್ಪು ಗ್ರಹಿಕೆಗೆ ದಾರಿ ಮಾಡಿಕೊಟ್ಟಿದೆ ಎಂದು ವಿಮರ್ಶಕರು ಅಭಿಪ್ರಾಯಿಸಿದ್ದಿದೆ.

ಮಲಯಾಳಂ ಕಾವ್ಯದಲ್ಲಿ ಆಧುನಿಕತೆಯ ಪ್ರವೇಶ ಪಡೆದುದು ಅಕ್ಕಿತ್ತಂ ಅವರ ಮೂಲಕ ಎಂದೇ ವಿಮರ್ಶಕರ ಅಭಿಪ್ರಾಯ. ಕವಿ ಚಂಗಂಪು¿ ಉದ್ದೀಪಿಸಿದ ಅತಿಭಾವುಕತೆಯ ಭಾವ ಸೌಂದರ್ಯವು ಕಾವ್ಯಾಂತರಿಕ್ಷದಲ್ಲಿ ವ್ಯಾಪಿಸಿ ತುಂಬಿ ನಿಂತುದು ಒಂದು ಕಾಲ ಘಟ್ಟ. ಆಧುನಿಕತೆಗೆ ಮುನ್ನುಡಿಯೋ ಎಂಬಂತೆ ‘ಛಿದ್ರವಿಚ್ಛಿದ್ರ ಲೋಕ’ ಬರೆದರು.

‘ಅಡುಗೆ ಮಾಡುತ್ತಿದ್ದವನ ಒಲೆಯಲ್ಲಿ
ಹೋಗಿ ಬಿದ್ದ ಪತಂಗಗಳು
ಮರುದಿನ ದಾರಿ ಬದಿಯ ಹೊಂಡದಲ್ಲಿ
ಕಂಡುದು ಶಿಶು ಶವಗಳ ರೂಪದಲ್ಲಿ’

ಎಂದು ಕ್ರಾಂತಿಕಾರಿ ಚಿಂತನೆಯ ಕವಿತೆಯನ್ನು ಎಷ್ತ್ ಕಾಲಕ್ಕೂ ಮೊದಲೇ ಅಕ್ಕಿತ್ತಂ ಬರೆದಿದ್ದಾರೆ. ಕವಿತೆ ಅದರ ಪ್ರಜ್ಞಾವಲಯವನ್ನು ಕಳಚಿ ಬೀದಿಗೆ ಇಳಿದು ನಡೆಯುತ್ತಿತ್ತು. ಸುಡುವ ಕೆಂಡದ ಕಡೆಗೆ ದೃಷ್ಟಿ ಹಾಯಿಸುವದು ಕವಿತೆ. ಅದುವೇ ಅಕ್ಕಿತ್ತಂರಲ್ಲುಂಟಾದ ಬದಲಾವಣೆ. ಭಾಷೇಯ ಬದಲಾವಣೆ. ಭಾವದ ಬದಲಾವಣೆ. ದೃಷ್ಟಿಕೋನದ ಬದಲಾವಣೆ.

‘ಬೀದಿ ಬದಿಯಲ್ಲಿ ಕಾಗೆ ಕುಕ್ಕುತ್ತಿದೆ
ಸತ್ತ ಹುಡುಗಿಯ ಕಣ್ಣುಗಳನ್ನು
ಮೊಲೆ ಕಚ್ಚಿ ಎಳೆಯುತ್ತಿದೆ
ನರವರ್ಗ ನವಾತಿಥಿ’

ಅಕ್ಕಿತ್ತಂ ಬದುಕು 

ಅಮೆಟ್ಟೂರ್ ಅಕ್ಕಿತ್ತಂ ಮನೆಯ ವಾಸುದೇವನ್ ನಂಬೂದಿರಿ ಮತ್ತು ಚೇಕೂರ್ ಮನೆಯ ಪಾರ್ವತಿ ಅಂತರ್ಜನಂ ದಂಪತಿಗಳಿಗೆ ಮಗನಾಗಿ 1926 ಮಾರ್ಚ್ 18ರಂದು ಪಾಲಕ್ಕಾಡ್ ಜಿಲ್ಲೆಯ ಕುಮರನಲ್ಲೂರಿನಲ್ಲಿ ಅಕ್ಕಿತ್ತಂ ಜನಿಸಿದರು.

ವೇದಾಧ್ಯಯನದ ಜೊತೆಗೆ ಇಂಗ್ಲಿಶ್, ಗಣಿತ, ತೆಲುಗು ಕಲಿತರು. ಕೋಳಿಕ್ಕೋಡಿನ ಸಾಮೂದಿರಿ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್‍ಗೆ ಸೇರಿದರೂ ಅನಾರೋಗ್ಯದ ಕಾರಣ ಶಿಕ್ಷಣ ಮುಂದುವರಿಸಲಾಗಲಿಲ್ಲ. ತೃಶ್ಶೂರಿನ ಪ್ರಸಿದ್ಧ ಮಂಗಳೋದಯ ಪ್ರೆಸ್ಸಿನಲ್ಲಿ ಕೆಲಸಕ್ಕೆ ಸೇರಿಕೊಂಡರಲ್ಲದೆ ಮುಂದೆ ಉಣ್ಣಿನಂಬೂದಿರಿ ಮಾಸಿಕದ ಪ್ರಕಾಶಕರೂ ಆದರು.

ಚಿತ್ರಕಲೆ, ಸಂಗೀತ, ಜ್ಯೋತಿಷ್ಯ ಎಂಬಿತ್ಯಾದಿ ವಿಷಯಗಳ ಕುರಿತು ಚಿಕ್ಕಂದಿನಲ್ಲಿಯೇ ಆಸಕ್ತಿ ಬೆಳೆಸಿಕೊಂಡ ಅಕ್ಕಿತ್ತಂ ಎಂಟನೆಯ ವಯಸ್ಸಿನಲ್ಲಿಯೇ ಕವಿತೆ ಬರೆಯಲಾರಂಭಿಸಿದರು. ಎಳೆಯ ದಿನಗಳಲ್ಲಿಯೇ ಮಲಯಾಳಂನ ಹಿರಿಯ ಕವಿಗಳ, ಬರೆಹಗಾರರ ಒಡನಾಟವೂ ದೊರೆಯಿತು.

ಅನೇಕ ನಾಟಕಗಳಲ್ಲಿ ಅಭಿನಯಿಸಿದರು. ಗಾಂಧೀಜಿಯ ನೇತೃತ್ವದ ದೇಶೀಯ ಚಳುವಳಿಯಿಂದ ಆಕರ್ಷಿತನಾಗಿದ್ದ ಕವಿ ಬಳಿಕ ನಂಬೂದಿರಿ ಸಮುದಾಯದ ಪರಿಷ್ಕರದ ಉದ್ದೇಶವಾಗುಳ್ಳ ‘ಯೋಗಕ್ಷೇಮ ಸಭೆ’ಯ ಸಕ್ರಿಯ ಕಾರ್ಯಕರ್ತರಾದರು. 1949ರಲ್ಲಿ ಶ್ರೀದೇವಿ ಅಂತರ್ಜನಂ ಅವರನ್ನು ಮದುವೆಯಾದರು. ಪಾರ್ವತಿ, ಇಂದಿರ, ವಾಸುದೇವನ್,ಶ್ರೀಜ, ಲೀಲ, ನಾರಾಯಣನ್ ಮಕ್ಕಳು.

1956ರಿಂದ 1985ರ ವರೆಗೆ ಕೋಳಿಕ್ಕೋಡ್ ತೃಶ್ಶೂರ್ ಮೊದಲಾದೆಡೆ ಆಕಾಶವಾಣಿಯಲ್ಲಿ ಉದ್ಯೋಗ ನಿರತರಾಗಿದ್ದು, ಸಂಪಾದಕ ಹುದ್ದೆಯಿಂದ ನಿವೃತ್ತರಾದರು. ಮುಂದೆ ಅನೇಕ ಸಂಘ ಸಂಸ್ಥೆಗಳ ಸಮಿತಿಗಳಲ್ಲಿ ವಿವಿಧ ಹುದ್ದೆಗಳಲ್ಲಿದ್ದು ಕಾರ್ಯಪ್ರವೃತ್ತರಾಗಿದ್ದರು.

ಸತ್ತ ಹುಡುಗಿಯ ಕಣ್ಣು, ಮೊಲೆಗಳ ಕುಕ್ಕಿ ಎಳೆಯುವ ಭಾಷೇಗಳೋ, ಪ್ರತಿಮೆಗಳೋ ಅಂದು ಕವಿತೆಗೆ ಒಗ್ಗುವ ಮಾತುಗಳಾಗಿರಲಿಲ್ಲ. ಆದರೂ ಮಾರ್ಮಿಕ ಮಾತುಗಳಿಂದ ಬದುಕಿನ ನಿಷ್ಠುರ ಸತ್ಯಗಳನ್ನು ಅಕ್ಕಿತ್ತಂ ಕವಿತೆಗಳಲ್ಲಿ ಆವಿಷ್ಕರಿಸಿದರು. ವಾಸ್ತವದಲ್ಲಿ ಅಲ್ಲಿಯೇ ಮಲಯಾಳಂನ ಆಧುನಿಕತೆಯ ಆರಂಭ.

ಇ.ಎಂ.ಎಸ್. ನಂಬೂದಿರಿಪಾಡ್‍ರ ಸಮೀಪವರ್ತಿಯಾಗಿದ್ದ ಅಕ್ಕಿತ್ತಂ ಅವರ ಮನೆಯಲ್ಲಿ ಕಮ್ಯುನಿಸ್ಟ್ ಸಾಹಿತ್ಯಕ್ಕಾಗಿ ಪೊಲೀಸರು ಹೋಗಿ ತನಿಖೆ ಮಾಡಿದ್ದಿದೆ. ಅಂತಹ ಒಬ್ಬ ಕವಿಗೆ ಕಮ್ಯುನಿಸ್ಟ್ ಚಿಂತನೆಗೆ ವಿರುದ್ಧವಾಗಿ ಬರೆಯುವುದು ಸಾಧ್ಯವಿಲ್ಲ. ಆದರೆ `ಇಪ್ಪತ್ತನೆಯ ಶತಮಾನದ ಇತಿಹಾಸ’ವನ್ನು ಬರೆದಾಗ ಕವಿಯನ್ನು ಕಮ್ಯುನಿಸ್ಟ್ ವಿರುದ್ಧವಾಗಿ ಚಿತ್ರಿಸುವ ಶ್ರಮವೂ ನಡೆಯಿತು.

ರಮ್ಯ ಸಂಪ್ರದಾಯದ ಮಲಯಾಳಂ ಕಾವ್ಯ ಸಂಪ್ರದಾಯಕ್ಕೆ ನೆಲದ ಭಾಷೇ, ಸಂಸ್ಕಾರಗಳ ಮೂಲಕ ಆಧುನಿಕತೆಯ ಭದ್ರ ತಳಹದಿಯನ್ನೊದಗಿಸಿದ ಕವಿ ಅಕ್ಕಿತ್ತಂ. ಭಾವುಕತೆಯನ್ನು ನವೀಕರಿಸಿ ಪರಂಪರೆ ಮತ್ತೆ ಆಧುನಿಕತೆಗೆ ಬಿಗಿ ಕೊಂಡಿಯಾಗಿ ಅಕ್ಕಿತ್ತಂರ ಕವಿತೆಗಳು ಗಮನ ಸೆಳೆಯುತ್ತವೆ. ಪರಂಪರೆಯ ಉತ್ತಮಾಂಶಗಳನ್ನು ಒಳಗೊಂಡು ಆಧುನಿಕತೆಯ ಬೆಳಕಿನೆಡೆಗೆ ವಿಸ್ತರಿಸಿದ ಕವಿತೆಗಳನ್ನು ಇವರು ರಚಿಸಿದರು. ವ್ಯಾವಹಾರಿಕ ಭಾಷೇಯನ್ನು ಕಾವ್ಯ ಭಾವಕತ್ವದ ಔನ್ನತ್ಯಕ್ಕೆ ಕೊಂಡೊಯ್ದ ಕೀರ್ತಿ ಅಕ್ಕಿತ್ತಂಗೆ ಸಲ್ಲಬೇಕು.

`ವಜ್ರ ಕೋದಿರುವ ರತ್ನಗಳ ಒಳಗಿಂದ
ದಾಟಿ ಹೋಗುವ ಭಾಗವಷ್ಠೆ, ಕೇವಲ ನೂಲಾಗಿ ನಾನು’

ಎಂದು ಬರೆದ ಕವಿ. ನಿಮಗೆ ನಾನು ರತ್ನಮಾಲೆಯಂತೆ ಕಾಣಿಸುತ್ತಿರಬಹುದು. ಆದರೆ ನಾನು ಕೇವಲ ನೂಲು ಮಾತ್ರ. ಈ ರತ್ನಗಳ ನಡುವಿನಿಂದ ಹಾದು ಬರಲು ಭಾಗ್ಯ ಪಡೆದ ಒಂದು ನೂಲು! ಈ ರತ್ನವನ್ನು ಕೋದುದು ನಾನಲ್ಲ. ವಜ್ರ. ಈ ವಿನಯ ಭಾವ ಅಕ್ಕಿತ್ತಂ ಅವರ ವ್ಯಕ್ತಿತ್ವವನ್ನು ಪ್ರತಿನಿಧಿಸುತ್ತಿದೆ. `ಇದಂ ನಮಮಃ’ ಎಂಬ ಸಂಕಲ್ಪದಂತೆ ಇದಾವುದೂ ನನ್ನದಲ್ಲ ಎಂದು ಹೇಳುವ ಮನಸ್ಸು. ಆ ಮನಸ್ಸು ಅಕ್ಕಿತ್ತಂ ಅವರ ಸ್ವಯಂ ವ್ಯಕ್ತಿತ್ವಕ್ಕೆ ಸಂಬಂಧಿಸಿದ್ದು. ಹಾಗಿಲ್ಲದಿರುತ್ತಿದ್ದರೆ

ಅಕ್ಕಿತ್ತಂ ಬರವಣಿಗೆ

ವೀರವಾದಂ (ಸವಾಲು-1944), ವಳಕ್ಕಿಲುಕ್ಕಂ (ಬಳೆಸದ್ದು-1947), ಮಧುವಿಧು (ಮಧುಚಂದ್ರ-1949), ಮನೋರಥ (1951), ಇಪ್ಪತ್ತನೆಯ ಶತಮಾನದ ಇತಿಹಾಸ (1952), ಕುದಿರ್ನ್ ಮಣ್ಣ್ (ನೆನೆದ ಮಣ್ಣು-1952), ಅಂಜು ನಾಡೋಡಿ ಪಾಟುಗಳ್ (ಐದು ಜಾನಪದ ಲಾವಣಿಗಳು-1954), ಒರು ಕುಲ ಮುಂದಿರಿಙ (ಒಂದು ದ್ರಾಕ್ಷೆಗೊಂಚಲು -1961), ಅರಂಗೇಟ್ಟಂ (ರಂಗ ಪ್ರವೇಶ-1961), ಅನಶ್ವರನ ಗಾನಂ (ಅನಶ್ವರನ ಗೀತೆ-1961), ಇಡಿಞï್ಞ ಪೊಳಿಞ್ಞ ಲೋಕಂ (ಛಿದ್ರವಿಚ್ಛಿದ್ರ ಲೋಕ-1961), ವೆಣ್ಣ ಕಲ್ಲಿಂಡೆ ಕಥ (ಅಮೃತಶಿಲೆಯ ಕತೆ-1961), ಸಂಚಾರಿಗಳ್ (ಪ್ರವಾಸಿಗರು-1961), ಕಡಂಬಿನ್ ಪೂಕಳ್ (ಕಡಂಬ ಹೂಗಳು-1961), ಉಣ್ಣಿಕ್ಕಿನಾವುಗಳ್ (ಮಕ್ಕಳ ಕನಸುಗಳು-1961), ಮಧುವಿಧುವಿನ್ ಶೇಷಂ (ಮಧುಚಂದ್ರದ ಬಳಿಕ-1961), ಉರುಕುಡನ್ ನಿಲಾವು (ಬೊಗಸೆ ತುಂಬ ಬೆಳದಿಂಗಳು). ಮೂವತ್ತಕ್ಕೂ ಹೆಚ್ಚು ಕವನ ಸಂಕಲನಗಳು, ಸಣ್ಣ ಕತೆ, ನಾಟಕ, ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಲ್ಲದೆ ಅನೇಕ ಅನುವಾದ ಕೃತಿಗಳನ್ನು ರಚಿಸಿದ್ದಾರೆ. ಸುಮಾರು ಏಳು ದಶಕಗಳ ಕಾಲ ನಿರಂತರ ಕಾವ್ಯಕೃಷಿ ಮಾಡಿದರು. ಇವರ ಅನೇಕ ಕೃತಿಗಳು ತೆಲುಗು, ಹಿಂದಿ,
ಇಂಗ್ಲಿಶ್ ಭಾಷ್ಗಳಿಗೆ ಅನುವಾದವಾಗಿವೆ.

`ನನ್ನದಲ್ಲ ನನ್ನದಲ್ಲೀ ಆನೆಗಳು
ನನ್ನದಲ್ಲೀ ಮಹಾ ದೇವಾಲಯಗಳೂ ಮಕ್ಕಳೇ’
ಎಂದು ಅವರು ಬರೆಯುತ್ತಿರಲಿಲ್ಲ.

ಅಕ್ಕಿತ್ತಂರನ್ನು ಸಾಮಾನ್ಯವಾಗಿ ಸಾಹಿತ್ಯಾಸ್ವಾದಕರು ಕಾಣುವುದು ಮಲಯಾಳಂ ಕಾವ್ಯದ ಪಿತಾಮಹನಾಗಿ. ವಯಸ್ಸಿನಿಂದಲೂ ಪಿತಾಮಹನೇ ಹೌದು. ಆದರೆ ಇದೇ ಅಕ್ಕಿತ್ತಂ ಮಲಯಾಳಂನ ಅತ್ಯಂತ ಆಧುನಿಕ ಕವಿ ಎಂಬುದೂ ವಾಸ್ತವವೇ. ಭಾಷ್ಠೆಯಲ್ಲು, ಭಾವನೆಯಲ್ಲು ಕಾಲಕ್ಕನುಗುಣವಾಗಿ ವಿನೂತನರಾಗಿಸಲು ತಿಳಿದಿದೆ ಎಂಬುದರಿಂದಲೇ ಅಕ್ಕಿತ್ತಂ ಏಕಕಾಲಕ್ಕೆ ಪಿತಾಮಹ ಕವಿಯೂ ಆಧುನಿಕ ಕವಿಯೂ ಆಗುವುದು ಸಾಧ್ಯವಾಗಿದೆ.

ಇತ್ತೀಚಿನ ದಿನಗಳಲ್ಲಿ ಅಕ್ಕಿತ್ತಂ ಅವರನ್ನು ಸಮುದಾಯವೊಂದರ ವಕ್ತಾರರನ್ನಾಗಿ ಮಾತ್ರ ಸಂಕುಚಿತ ಭಾವನೆಯಿಂದ ಕಾಣಲಾಗುತ್ತಿತ್ತು. ಅದು ಸರಿಯಾದ ಕ್ರಮವಾಗಿರಲಿಲ್ಲ ಎಂಬುದಕ್ಕೆ ಅವರ ಕವಿತೆಗಳೇ ಸಾಕ್ಷಿಯಾಗಿವೆ. `ರಕ್ತ ಪ್ರಸಾದ’ ಎಂಬ ಅವರ ಕವಿತೆಯನ್ನು ಇದಕ್ಕೆ ಉದಾಹರಣೆಯಾಗಿ ವಿಮರ್ಶಕರು ಉಲ್ಲೇಖಿಸುವುದಿದೆ. ಸಮುದಾಯಗಳ ಪರಸ್ಪರ ಸಂಘರ್ಷವೇ ಇವರ ಮುಖ್ಯ ಪ್ರಮೇಯ. ಘರ್ಷಣೆಯಲ್ಲಿ ಅನೇಕರು ಪ್ರಾಣ ಕಳೆದುಕೊಂಡರು. ಪ್ರತಿಯೊಂದು ಸಮುದಾಯದ ಎಷ್ಟು ಜನರು ತೀರಿಕೊಂಡರು ಎಂಬುದು ಜನರಿಗೆ ತಿಳಿಯುವ ಕುತೂಹಲವಿತ್ತು. ಅದನ್ನು ತಿಳಿದುಕೊಳ್ಳಲು ದೇವಾಲಯದ ದೇವರಲ್ಲಿ ಸತ್ತವರ ಸಂಖ್ಯೆ ಹೇಳಲು ಭಿನ್ನವಿಸಿಕೊಂಡರು. ನಾನದರಲ್ಲಿ ಹಿಂದುಗಳದೋ, ಕ್ರಿಶ್ಚಿಯನರದೋ, ಮುಸಲ್ಮಾನರದೋ ರಕ್ತವನ್ನು ಕಾಣಲಿಲ್ಲ. ಒ, ಎ, ಬಿ ಎಂಬೀ ಗುಂಪಿನ ರಕ್ತವನ್ನು ಮಾತ್ರ ಕಂಡೆನೆಂದು ಹಿಂದೂಗಳ ದೇವರು ಹೇಳಿದ.

ಮನುಷ್ಯರನ್ನು ಹಿಂದೂವಾಗಿಯೋ, ಮುಸಲ್ಮಾನನಾಗಿಯೋ, ಕ್ರಿಶ್ಚಿಯನನಾಗಿಯೋ ಕಾಣದ ಕವಿ ಅಕ್ಕಿತ್ತಂ. `ತಪಸ್ಯ’ದಂತಹ ಬಲಪಂಥೀಯ ಸಾಂಸ್ಕøತಿಕ ಸಂಘಟನೆಗಳ ಜೊತೆಗೆ ಗುರುತಿಸಿಕೊಂಡು ಅವರು ಕಾರ್ಯ ನಿರ್ವಹಿಸಿರಬಹುದು. ಅದರ ಹೆಸರಿನಲ್ಲಿ ಅರ್ಹತೆಗೆ ಸಲ್ಲಬೇಕಾದ ಪುರಸ್ಕಾರಗಳನ್ನು ನಿರಾಕರಿಸುವುದು ಸರಿಯ?. ಸಮತೆಯ ತತ್ವವನ್ನಾಧರಿಸಿಯೇ ಕವಿತೆಗಳನ್ನು ಬರೆದ ಕವಿಯನ್ನು ಸಂಕುಚಿತ ಭಾವದಿಂದ ಕಂಡುದೇ ಪುರಸ್ಕಾರಕ್ಕೆ ವಿಳಂಬವಾದುದು ಕಾರಣವಾಗಿರಬಹುದು ಎಂಬ ಮಾತು ಮಲಯಾಳಂ ವಲಯದಲ್ಲಿದೆ.

ಕೊನೆಗೂ ಜ್ಞಾನ ಪೀಠ ಅರಸಿ ಬಂದಾಗ ಕವಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು ನನಗಿಂತಲೂ ಸಮರ್ಥರಾದ ಬರಹಗಾರರು ಮಲಯಾಳಂನಲ್ಲಿದ್ದರು. ಆದರೆ ಆ ಗೌರವ ಅವರಿಗ್ಯಾರಿಗೂ ಸಿಗದೆ ನನಗೇ ದೊರೆಯಿತು. ಅದಕ್ಕೆ ನನ್ನ ವಯಸ್ಸು ಕಾರಣ ಎಂಬರ್ಥದ ಮಾತುಗಳನ್ನು ತೊಂಬತ್ಮೂರು ವರ್ಷದ ಕವಿ ಪ್ರತಿಕ್ರಿಯಿಸಿದರು. 1983ರಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್‍ಗೆ ಜ್ಞಾನಪೀಠ ಬಂದಾಗ ಅವರಿಗೂ ತೊಂಬತ್ಮೂರು ವರ್ಷ ಪ್ರಾಯವಾಗಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಅಕ್ಕಿತ್ತಂ ಅವರಿಗೆ ಜ್ಞಾನಪೀಠ ಪುರಸ್ಕಾರ ದೊರೆತುದಕ್ಕಾಗಿ ಕೇರಳೀಯರು ಸಂಭ್ರಮಿಸುತ್ತಿದ್ದಾರೆ. ಅದರಲ್ಲಿಯೂ ಕುಮರನಲ್ಲೂರು ಶಾಲೆಗೆ ಎಲ್ಲಿಲ್ಲದ ಸಂತಸ. ಕುಮರನಲ್ಲೂರಿನ ಗವರ್ನಮೆಂಟ್ ಹೈಯರ್ ಸೆಕೆಂಡರಿ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಜ್ಞಾನಪೀಠ ದೊರೆತಂತಾಯಿತು. ಇದೇ ಶಾಲೆಯಲ್ಲಿ ಎರಡು ವರ್ಷ ಕಿರಿಯವರಾಗಿ ಕಲಿತ ಎಂ.ಟಿ.ವಾಸುದೇವನ್ನಾಯರ್‍ಗೆ 1995ರಲ್ಲಿಯೇ ಜ್ಞಾನಪೀಠ ಲಭಿಸಿತ್ತು. ಇದೊಂದು ಅಪೂರ್ವ ಘಟನೆಯೆಂದೇ ಪರಿಭಾವಿಸಬಹುದು.

Leave a Reply

Your email address will not be published.