ಹೆದರಿ ಸಾಯೋರು

ಉತ್ತರ ಕರ್ನಾಟಕದ ಕಡೆ, ಯಾವನಾದರೂ ಯಾವುದೋ ವಿಷಯಕ್ಕೆ ಹೆದರಿದ ಅಂದ್ರೆ ಸಾಮಾನ್ಯವಾಗಿ ಅವನನ್ನು ಗದರಿಸುವ ಪರಿ ಎಂದರೆ `ಯಾಕ್ ಹೆದರಿ ಸಾಯ್ತಿ?’ ಅಂತ. ಮೊದಲೇ ಕಂಗಾಲಾದವನನ್ನು ಹೀಗೆ ಬೈದರೆ ಅವನ ಪರಿಸ್ಥಿತಿ ಏನಾಗಬೇಡ! ಈ ಬೈಗಳು ಒಂದು ತರಹ ಧೈರ್ಯವನ್ನು ತುಂಬೋ ಪ್ರಯತ್ನ ಕೂಡ ಹೌದು. `ಕೂಲ್ ಡೌನ್ ಬ್ರೋ’ ಅಂದಂಗೆ!

ಹೆದರಿಕೆ ಯಾವುದ್ಯಾವುದಕ್ಕೆ ಅಥವಾ ಯಾವ್ಯಾವಾಗ ಬರುತ್ತದೆ ಅನ್ನುವುದು ಆಯಾ ಪರಿಸ್ಥಿತಿಗೆ ಸಂಬಧಿಸಿದ್ದು. ಆದರೆ ಕೆಲವರು, ನಾನು ಯಾರಿಗೂ ಹೆದರೋದೇ ಇಲ್ಲ ಅಂತ ಹೇಳ್ತಿರ್ತಾರೆ. ಅಂಥವರಲ್ಲೂ ನನಗೆ ಹೆದರಿಸೋನು ಯಾವನಾದ್ರೂ ಹುಟ್ಟಿಬಿಟ್ಟರೆ ಎಂಬ ಒಂದು ಭಯ ಇದ್ದೇ ಇರುತ್ತೆ! ಭಯಗಳು ಹಲವಾರು. ಅದು ನಾಯಿಗೆ ಹೆದರೋದಿರಬಹುದು, ಪರೀಕ್ಷೆಗೆ, ನೀರಿಗೆ, ಎತ್ತರಕ್ಕೆ, ಹೆಂಡತಿಗೆ ಅಥವಾ ಗಂಡನಿಗೆ!

ಮನುಷ್ಯ ಜೀವಿಯ ಹಣೆಬರಹವೇ ಅಷ್ಟು. ಒಂದು ಕಂಫರ್ಟ್ ಜೋನ್ ನಲ್ಲಿ ಬೇರು ಬಿಟ್ಟ ಅಂದ್ರೆ ಅಲ್ಲಿಂದ ಕಿತ್ತುಕೊಂಡು ಬೇರೆ ಕಡೆ ನೆಲೆನಿಲ್ಲಲು ಭಯ. ಹೊಟ್ಟೆಪಾಡಿಗೆ ಅಂತಲೋ, ಬೇರೆಯವರೆಲ್ಲ ಹೋಗುತ್ತಿದ್ದಾರೆ (ಹೊಟ್ಟೆಕಿಚ್ಚಿಗೆ!?) ಅಂತಲೋ ಉದಾಹರಣೆಗೆ ಬೆಂಗಳೂರಿಗೆ ಬಂದು ವಾಪಸ್ಸು ತನ್ನೂರಿಗೆ ಹೋಗಲಾರದೆ, ಇಲ್ಲಿ ಇರಲಾರದೆ ಪಡುವ ಸಂಕಟ ಇದೆಯಲ್ಲ ಅದು ಅನುಭವಿಸಿದವರಿಗೇ ಗೊತ್ತು! ಇದು ವಿದೇಶದಲ್ಲಿರುವ ಎಷ್ಟೋ ಭಾರತೀಯರಿಗೂ ಇರುತ್ತದೆ.

ನಾನು ಕೆಲಸದ ನಿಮಿತ್ತ ಅಮೆರಿಕೆಯಲ್ಲಿದ್ದಾಗ ಬೇರೆ ವಿಧದಲ್ಲಿ ತಲೆ ಕೆಡಿಸಿಕೊಳ್ಳುತ್ತಿದ್ದೆ. ವಾಪಸ್ಸಾಗದೆ ಅಲ್ಲೇ ಉಳಿದುಬಿಟ್ಟರೆ ಗತಿ ಏನು ಅಂತ. ಆದರೆ ಅಲ್ಲಿದ್ದ ಕೆಲವು ಭಾರತೀಯ ಸ್ನೇಹಿತರಲ್ಲೂ ಬೇರೆಯ ಬಗೆಯ ಚಿಂತೆಗಳಿದ್ದವು: `ತಮ್ಮನ್ನು ಅಲ್ಲಿಂದ ವಾಪಸ್ಸು ಕಳಿಸಿಬಿಟ್ಟರೆ ಹೇಗೆ?’ ಅಂತ. ಟ್ರಂಪಣ್ಣ ತನ್ನ ರಂಪಾಟ ಶುರು ಮಾಡಿದ್ದ ದಿನಗಳವು. ಅವರಿಗೆ ವಾಪಸ್ಸು ಹೋಗೋದಕ್ಕೆ ಯಾಕೆ ಭಯ ಅಂತ ನಾನು ಕೂಲಂಕಷ ಅಧ್ಯಯನ ಶುರು ಮಾಡಿದೆ. ಯಾಕಂದರೆ ಅವರೊಳಗೊಬ್ಬನಾಗುವುದು ನನಗೆ ಬೇಡವಾಗಿತ್ತು. ಅವಾಗ ತಿಳಿದ ಎಷ್ಟೋ ವಿಷಯಗಳು ತುಂಬಾ ಕುತೂಹಲ ಮೂಡಿಸಿದವು. ಎಷ್ಟೋ ಜನ ತಮ್ಮ ಹೆಂಡತಿ ಮಕ್ಕಳಿಗೋಸ್ಕರ ಅಲ್ಲಿ ಇದ್ದೇವೆ ಅನ್ನುವ ತರಹ ಹೇಳುತ್ತಿದ್ದರು. ಗೆಳೆಯನೊಬ್ಬ, ಇಷ್ಟು ವರ್ಷ ಅಲ್ಲಿದ್ದು ವಾಪಸ್ಸು ಹೋದರೆ ತನ್ನ ಹೆಂಡತಿ ಮಕ್ಕಳು ಭಾರತಕ್ಕೆ ಅಡ್ಜಸ್ಟ್ ಆಗ್ತಾರ ಅಂತ ಯಾವಾಗಲೂ ಕೊರಗೋನು. ಅಸಲಿಗೆ ಇವನಿಗೇ ಅಡ್ಜಸ್ಟ್ ಆಗೋದು ಕಷ್ಟ! ಇನ್ನೂ ಅಲ್ಲೇ ಇದ್ದಾನೆ, ಹೆದರ ಪುಕ್ಕ.

ನಾ ಕೇಳಿದ್ರೆ… `ಅದಲ್ಲ ಮಾರಾಯ… ಬೆಂಗಳೂರಿನಲ್ಲಿ ಎಷ್ಟೊಂದು ಸದ್ದು ಅಂತೀಯ, ಮಲ್ಕೊಂಡ್ರೆ ನಿದ್ದೇನೆ ಬರ್ತಿರ್ಲಿಲ್ಲ’ ಅನ್ನೋದೇ?! ಇವನು ಅದೇ ಸದ್ದಿನಿಂದ ಕೂಡಿರುವ ದೇಶದಲ್ಲಿಯೇ ಹುಟ್ಟಿ ಬೆಳೆದು ಆರು ತಿಂಗಳು ಹೊರ ದೇಶಕ್ಕೆ ಬಂದಾ ಅಂದ್ರೆ ಆ ಸದ್ದು ಇಷ್ಟು ನಿದ್ದೆ ಕೆಡಿಸಿತೆ?

ಇನ್ನೊಬ್ಬ ಅಮೆರಿಕೆಗೆ ಬಂದು 6 ತಿಂಗಳು ಆಗಿತ್ತು ಅಷ್ಟೇ. ಏನೋ ಕಾರಣಕ್ಕೆ ಅಂತ ಎರಡು ವಾರದ ಮಟ್ಟಿಗೆ ಭಾರತಕ್ಕೆ ಹೋಗಿ ಬಂದ. ನಿದ್ದೆಗಣ್ಣಲ್ಲಿದ್ದ ಅವನನ್ನು ಹೇಗಿದೆ ನಮ್ದೇಶ ಅಂತ ಕೇಳಿದರೆ. ಅಯ್ಯೋ ಅಲ್ಲಿ ಇದ್ದಷ್ಟೂ ದಿವ್ಸ ನಿದ್ದೇನೆ ಆಗಿಲ್ಲ ಮಾರಾಯ ಅಂದ. ಎರಡು ಪ್ರದೇಶಗಳ ಸಮಯದ ಬದಲಾವಣೆಯ ಕಾರಣ, ಜೆಟ್ ಲ್ಯಾಗ್ ಆಗಿ ನಿದ್ದೆ ಮಾಡುವುದಕ್ಕೆ ಮೊದಲ ಕೆಲ ದಿನಗಳು ಸ್ವಲ್ಪ ತೊಂದರೆ ಆಗೇ ಆಗುತ್ತೆ. ಅದರಿಂದಾನೆ ಆಗಿರಬಹುದು ಅಂತ ನಾ ಕೇಳಿದ್ರೆ… `ಅದಲ್ಲ ಮಾರಾಯ… ಬೆಂಗಳೂರಿನಲ್ಲಿ ಎಷ್ಟೊಂದು ಸದ್ದು ಅಂತೀಯ, ಮಲ್ಕೊಂಡ್ರೆ ನಿದ್ದೇನೆ ಬರ್ತಿರ್ಲಿಲ್ಲ’ ಅನ್ನೋದೇ?! ಇವನು ಅದೇ ಸದ್ದಿನಿಂದ ಕೂಡಿರುವ ದೇಶದಲ್ಲಿಯೇ ಹುಟ್ಟಿ ಬೆಳೆದು ಆರು ತಿಂಗಳು ಹೊರ ದೇಶಕ್ಕೆ ಬಂದಾ ಅಂದ್ರೆ ಆ ಸದ್ದು ಇಷ್ಟು ನಿದ್ದೆ ಕೆಡಿಸಿತೆ?

ಮತ್ತೊಬ್ಬನದು ಇನ್ನೊಂದು ಕತೆ. ಅವನೂ ಆಗ ತಾನೇ ಅಮೆರಿಕೆಗೆ ಬಂದಿದ್ದ. ಭಾರತದಲ್ಲಿ ಕಾರು ಓಡಿಸುವುದರಲ್ಲಿ ನಿಷ್ಣಾತ. ಆದರೆ ಅದನ್ನು ಅಮೆರಿಕೆಯಲ್ಲಿ ಸಿದ್ಧ ಮಾಡಿ ತೋರಿಸಿ ಲೈಸೆನ್ಸ್ ತೊಗೋಬೇಕಲ್ಲ. ಅದಕ್ಕೆ ಅಂತ ಒಂದು ಟೆಸ್ಟ್ ಇರುತ್ತೆ. ಅದೂ ಅಲ್ದೆ ಆ ಬಡ್ಡಿ ಮಕ್ಳು ಇಲ್ಲಿ ತರಹ ಲಂಚಾನೂ ತೊಗೊಳಲ್ಲ. ಅನಿವಾರ್ಯವಾಗಿ ಟೆಸ್ಟ್ ಕೊಡೋಕೆ ಹೋದ. ನಾನು ಕಾರು ಓಡಿಸುವಾಗ ತಪ್ಪು ಮಾಡಿಬಿಟ್ಟರೆ ಎಂಬ ಭಯ ಅವನಿಗೆ ಎಷ್ಟು ಕಾಡಿತ್ತು ಅಂದ್ರೆ ಭಾರತದಲ್ಲಿ ಓಡಿಸಿದಂತೆ ರಸ್ತೆಯ ಎಡಬದಿಯೇ ಓಡಿಸಿಬಿಟ್ಟ. ಅಲ್ಲಿನ ನಿಯಮಗಳ ಪ್ರಕಾರ ವಾಹನಗಳು ಬಲಗಡೆ ಬದಿ ಹೋಗಬೇಕು. ಕಾರಿನಲ್ಲಿ ಇವನ ಜೊತೆಗಿದ್ದ ಅಧಿಕಾರಿ ಬೆವೆತು ರಾಡಿಯಾಗಿ ಅಯ್ಯಾ ನೀನು ಮೊದಲು ಕಾರು ನಿಲ್ಲಿಸು… ಪ್ರಾಕ್ಟೀಸ್ ಮಾಡಿಕೊಂಡು ಬಂದ ಮೇಲೆ ಟೆಸ್ಟ್ ಕೊಡು ಅಂತ ಖಡಾಖಂಡಿತವಾಗಿ ಹೇಳಿ ಕಳಿಸಿಯೇ ಬಿಟ್ಟ. ಇವನ ಹೆದರಿಕೆ ಇನ್ನೂ ಜಾಸ್ತಿಯಾಯ್ತು. ಮುಂದಿನ ಎರಡೂ ಟೆಸ್ಟ್ ಗಳಲ್ಲಿ ಮತ್ತೆ ಫೈಲ್ ಆದ. ಅದು `ಹೋದ ಸಲದಂತೆ ನಾ ನಪಾಸಾದರೆ’ ಎಂಬ ಹೆದರಿಕೆ ಆಡಿಸಿದ ಆಟ.

ಇನ್ನೊಂದು ಸಾಮಾನ್ಯ ಭಯ ಅಂದ್ರೆ ದುಡ್ಡಿನದು. ಜೇನು ನೊಣ ಜೇನನ್ನು ಕಲೆಹಾಕುವ ತರಹ ಪೂರ್ತಿ ಜೀವನ ಆ ದುಡ್ಡಿನ ಸಂಚಯದಲ್ಲೇ ಜನ ಕಳೆದುಬಿಡುತ್ತಾರೆ. ಜೇನುನೊಣ ತಾನು ಕೂಡಿಟ್ಟದ್ದನ್ನು ಕುಡಿಯುವ ಸಮಯದಲ್ಲಿ ಕುಡಿಯುತ್ತದೆ (ಆಸೆಬುರುಕ ಮನುಷ್ಯ ಅದನ್ನು ಇನ್ನೂ ಕಬಳಿಸಿಲ್ಲವಾದರೆ!). ಆದರೆ ಮನುಷ್ಯರು ಮಾತ್ರ ಅನುಭವಿಸಲೂ ಸಮಯವಿಲ್ಲದಂತೆ ಗಳಿಸುತ್ತಾರೆ. ದುಡ್ಡಿನ ಶೇಖರಣೆಗೆ ಹಲವಾರು ಕಾರಣಗಳು… ಮುಂದೆ ಕಾಯಿಲೆ ಬಿದ್ದರೆ, ಎಲ್ಲರ ಬಳಿ ದೊಡ್ಡ ಕಾರಿದೆ ನಮ್ಮ ಹತ್ತಿರ ಇಲ್ಲವೆಂದರೆ ಜನ ಏನೆಂದುಕೊಂಡಾರು, ಮಕ್ಕಳಿಗೆ ಒಳ್ಳೆ ಎಜುಕೇಶನ್ ಕೊಡಿಸಿಲ್ಲ ಅಂದ್ರೆ ಮಂದಿ ಏನೆಂದುಕೊಂಡಾರು, ಮನೆಯಲ್ಲಿ ಎರಡೇ ಬೆಡ್ ರೂಮಿದೆ ಇನ್ನೊಂದು ಬೇಕೇ ಬೇಕು… ಅದು ಇದು ಅಂತ ಹೆದರಿ ಗಂಡ ಹೆಂಡತಿ ಇಬ್ಬರೂ ದುಡಿಯೋದೆ ದುಡಿಯೋದು.

ಕೇಕಿನ ಮೇಲೆ ಮೇಣದ ಬತ್ತಿ ಹಚ್ಚಿ ಊದುವುದು… ಎಲ್ಲವೂ ನನಗೆ ವಾಕರಿಕೆಯ ಸಂಗತಿಗಳು. ಅದನ್ನೇ ಮಗಳಿಗೂ ಮನವರಿಕೆ ಮಾಡಿಕೊಟ್ಟಿದ್ದೆ. ಅವಳೂ ಅದೆಲ್ಲ ಬೇಡವೇ ಬೇಡ ಅಂದಳು. ಆದರೆ ಒಂದು ಸಲ ಒಬ್ಬ ಹಿರಿಯರ ಜೊತೆ ಇದರ ಬಗ್ಗೆ ಕೊಚ್ಚಿಕೊಳ್ಳುತ್ತಿದ್ದಾಗ ಅವರು ಹೇಳಿದರು, ನೀನೇನೋ ಅದೊಂದು ಆದರ್ಶ ಅಂತ ಅಂದುಕೊಂಡಿದ್ದೀಯ;

ಹಗಲು ರಾತ್ರಿ ದುಡಿಯುತ್ತಿರುವ ನನ್ನ ಗೆಳೆಯನೊಬ್ಬ ತನ್ನ ಮಕ್ಕಳನ್ನು ತುಂಬಾ ಸಲಿಗೆಯಿಂದ, ಪ್ರೀತಿಯಿಂದ ಬೆಳೆಸಿದ್ದ. ಅವರಿಗೆ ಏನು ಬೇಕೋ ಬೇಡವೋ ಅವರು ಕೇಳುವುದಕ್ಕಿಂತ ಮೊದಲೇ ಕೊಡಿಸಿಬಿಡುತ್ತಿದ್ದ. ಅಷ್ಟು ಕೊಡಿಸಿದರೂ ಮಕ್ಕಳ ಡಿಮ್ಯಾಂಡ್ ಹೆಚ್ಚುತ್ತಲೇ ಹೋಯಿತು. ಮೊದಮೊದಲು ಚಾಕಲೇಟ್ ಬೇಕು ಅಂತ ಮಗಳು ಕೆಳಗೆ ಬಿದ್ದು ಹೊರಳಾಡಿ ಅತ್ತಾಗ ಅವಳಿಗೆ ಚಾಕಲೇಟ್ ಸಿಕ್ಕೇಬಿಡುತ್ತಿತ್ತು. ಹಾಗೆ ಅಳುತ್ತಿದ್ದ ಮಗಳು ದೊಡ್ಡವಳಾದ ಮೇಲೆ ತನಗೆ ಮೊಬೈಲ್ ಬೇಕು ಅಂತ ಹಠ ಶುರು ಮಾಡಿದಳು. ಅವಳು ಕೇಳಿದ ಮಾಡೆಲ್‍ಗೆ ದುಡ್ಡು ಹೊಂದಿಸುವುದು ಕಷ್ಟವಾಗಿ ಸ್ವಲ್ಪ ದಿನ ತಡಿ ಅಂದಿದ್ದಕ್ಕೆ, ಅವಳು ಫೀನೈಲ್ ಕುಡಿದುಬಿಡೋದೇ! ಸದ್ಯ ಅವಳ ಜೀವಕ್ಕೆ ಏನೂ ಆಗಲಿಲ್ಲವಲ್ಲ ಅಂತ ಗೆಳೆಯ ಎಲ್ಲೆಲ್ಲೋ ಸಾಲ ಮಾಡಿ ಅವಳು ಕೇಳಿದ ಮಾಡೆಲ್ ತಂದು ಕೊಟ್ಟ. ಅವಳಿಗೆ ಅಪ್ಪನನ್ನು ಹೆದರಿಸಿವುವದು ಕರಗತವಾಗಿತ್ತು. ಹೆದರಿಸಲು ಎಷ್ಟು ಬೇಕೋ ಅಷ್ಟೇ ಫೀನೈಲ್ ಮಾತ್ರ ತುಟಿಗೆ ಹಚ್ಚಿಕೊಂಡಿದ್ದಳು! ಹಾಗೆ ಅವಳಿಗೆ ಹೆದರಿಸುವುದನ್ನು ಕಲಿಸಿದವರು ಯಾರು? ಅಪ್ಪನೆ ಅಲ್ಲವೇ!

ಹುಟ್ಟುಹಬ್ಬದ ಆಚರಣೆ ಮೊದಲಿನಿಂದಲೂ ನನಗೆ ಅಷ್ಟೊಂದು ಇಷ್ಟವಿಲ್ಲದ ಸಂಗತಿ. ಅದೊಂದು ಪಾಶ್ಚಾತ್ಯ ಸಂಸ್ಕೃತಿ. ಕೇಕ್ ಕತ್ತರಿ ಸುವುದರಿಂದ ಹಿಡಿದು ಹ್ಯಾಪಿ ಬರ್ತ್ ಡೇ ಟು ಯು ಎಂದು ರಾಗವಾಗಿ ಹಾಡು ಹೇಳುವುದು, ಕೇಕಿನ ಮೇಲೆ ಮೇಣದ ಬತ್ತಿ ಹಚ್ಚಿ ಊದುವುದು… ಎಲ್ಲವೂ ನನಗೆ ವಾಕರಿಕೆಯ ಸಂಗತಿಗಳು. ಅದನ್ನೇ ಮಗಳಿಗೂ ಮನವರಿಕೆ ಮಾಡಿಕೊಟ್ಟಿದ್ದೆ. ಅವಳೂ ಅದೆಲ್ಲ ಬೇಡವೇ ಬೇಡ ಅಂದಳು. ಆದರೆ ಒಂದು ಸಲ ಒಬ್ಬ ಹಿರಿಯರ ಜೊತೆ ಇದರ ಬಗ್ಗೆ ಕೊಚ್ಚಿಕೊಳ್ಳುತ್ತಿದ್ದಾಗ ಅವರು ಹೇಳಿದರು, ನೀನೇನೋ ಅದೊಂದು ಆದರ್ಶ ಅಂತ ಅಂದುಕೊಂಡಿದ್ದೀಯ; ಅವಳಿಗೆ ಮನವರಿಕೆನೂ ಮಾಡಿದೀನಿ ಅಂತಿಯ. ಆದರೆ ದೊಡ್ಡವಳಾದ ಮೇಲೆ ಅವಳು ನನ್ನ ಅಪ್ಪ ಮಹಾ ಜಿಪುಣ, ನನ್ನ ಹುಟ್ಟುಹಬ್ಬಕ್ಕೆ ಒಂದು ಕೇಕ್ ಕೂಡ ತರುತ್ತಿರಲಿಲ್ಲ ಅಂದುಕೊಂಡರೆ? ಅಂತ ಹೆದರಿಸಿದರು. ನಾನೂ ನಡುಗಿದೆ!

ಹಾಗಂತ ಅವರು ಕೇಳಿದ್ದೆಲ್ಲ ಕೊಡಿಸಿ ಅವರು ಇಚ್ಛೆಪಟ್ಟಿದ್ದನ್ನೆಲ್ಲ ಮಾಡಿದರೆ ಅವರು ಮುಂದೆ ನಮ್ಮನ್ನು ಜಿಪುಣ ಅನ್ನಲಿಕ್ಕಿಲ್ಲ ಆದರೆ… ಪರಿಚಯದವರೊಬ್ಬರು ಅಮೆರಿಕೆಯಲ್ಲಿ ತುಂಬಾ ದೊಡ್ಡ ಶ್ರೀಮಂತರು. ಮುಂಚಿನಿಂದಲೂ ತಮ್ಮ ಮಗನಿಗೆ ಯಾವುದೇ ಕೊರತೆ ಆಗದಂತೆ ನೋಡಿಕೊಂಡರು. ಶಾಲೆಯಿಂದ ಹಿಡಿದು ಕಾಲೇಜ್ ವರೆಗೆ ಪ್ರತಿಷ್ಠಿತ ಸಂಸ್ಥೆಗಳಲ್ಲಿಯೇ ಅವನನ್ನು ಸೇರಿಸಿದರು. ಬೈಕು, ಕಾರು, ಮೊಬೈಲು ಎಲ್ಲವೂ ಅವನಿಗೆ ಕೇಳಿದಕ್ಕಿಂತ ಮೊದಲೇ ಸಿಕ್ಕವು. ಮುಂದೊಮ್ಮೆ ಏನೋ ಮಾತಿಗೆ, `ನಿನಗೋಸ್ಕರ ಇಷ್ಟೆಲ್ಲಾ ಮಾಡಿದೆ’ ಅಂತ ಅವರು ಹೇಳಿದರು. `ನಿನಗ್ಯಾರು ಮಾಡು ಅಂತ ಹೇಳಿದ್ದು? ನಾನು ಸಾಲ ಮಾಡಿ ಓದುತ್ತಿದ್ದೆ’ ಎನ್ನಬೇಕೆ! ಅಮೆರಿಕೆಯಲ್ಲಿ ಯಾರೂ ಬೇರೆಯವರ ವಿಷಯದಲ್ಲಿ ಮೂಗು ತೂರಿಸೋದಿಲ್ಲ, ಅವನು ಮಗನೂ ಆಗಿರಬಹುದು. ಎಲ್ಲರೂ ಸರ್ವ ಸ್ವತಂತ್ರರು. ಆದರೆ ಅಲ್ಲಿ ನೆಲೆ ನಿಂತ ನಮ್ಮವರು ತಮ್ಮ ಭಾರತೀಯ ಸಹಜ ನಿರೀಕ್ಷೆಗಳನ್ನು ಇಟ್ಟುಕೊಂಡು ಹೀಗೆ ನಿರಾಶರಾಗುತ್ತಾರೆ. ಹೌದು ಅವರು ಹಾಗೆ ಮಗನಿಗೆ ಹೇಳಬಾರದಿತ್ತು. ಹಾಗೆ ಹೇಳುವುದರ ಹಿಂದೆ, ತಾನು ಚಿಕ್ಕವನಿದ್ದಾಗ ಎಷ್ಟು ಕಷ್ಟ ಪಟ್ಟಿದ್ದೆ, ಇವನಿಗೆ ಅದೆಲ್ಲ ಎಷ್ಟೊಂದು ಸಲೀಸಾಗಿ ಸಿಕ್ಕಿದೆ, ಅದರ ಅರಿವು ಅವನಿಗೆ ಬರದಿದ್ದರೆ? ಎಂಬ ಭಯವಿತ್ತೇನೋ!

ತಪ್ಪು ಮಾಡಿದೆ ಅದನ್ನು ತಿದ್ದಿಕೊಳ್ಳುವುದು ಹೇಗೆ ಅಂತ ಎಷ್ಟೋ ಸರ್ತಿ ತಿಳಿಲೇ ಇಲ್ಲ. ಸರಿ ವರ್ಷಗಳು ಉರುಳಿದವು ಮಗ ದೊಡ್ಡವನಾದ. ಕೆಲಸಕ್ಕೆ ಅಂತ ಲಂಡನ್ ಗೆ ಹೋದ. ಈಗ ವಾಪಸ್ಸು ಬರೋಕೆ ತಯಾರಿಲ್ಲ! ಯಾಕೆಂದರೆ ಈಗಲೂ ಬಯ್ಯುತ್ತಿರುವ ಅಪ್ಪನಿಂದ ದೂರ ಓಡಿ ಹೋಗುವುದೇ ಮೇಲು ಅಂತ ಅವನಿಗೆ ಅನಿಸಿರಬೇಕು.

ಇಲ್ಲಿ ಇನ್ನೊಂದು ತರಹದ ಅಪ್ಪ ಇದ್ದಾರೆ. ಅವರು ಮಗ ಸಣ್ಣವ ಇದ್ದಾಗಿಂದ ಅವನಿಗೆ ಇವರ ಮೇಲೆ ಭಯ ಇರುವಂತೆ ನೋಡಿಕೊಂಡರು. ಮಗ ಅಪ್ಪನಿಗೆ ಎಷ್ಟು ಹೆದರುತ್ತಿದ್ದ ಅಂದರೆ ಏನೇ ಮಾಡಬೇಕೆಂದರೂ ಅಪ್ಪ ಏನೆನ್ನುವನೋ ಎಂದು ಯೋಚಿಸುತ್ತಿದ್ದ. ಅದೇ ರೀತಿಯಲ್ಲಿ ಮಗ ತಾನು ಮಾಡಿದ ಯಾವುದೇ ಕೆಲಸಕ್ಕೂ ಒಂದು ಏಟು ತಿಂದೇ ತಿನ್ನುತ್ತಿದ್ದ. ಮಗನಿಗೆ ಏಟು ಬೀಳುತ್ತಿತ್ತೇನೋ ನಿಜ. ಆದರೆ ಏನು ತಪ್ಪು ಮಾಡಿದೆ ಅದನ್ನು ತಿದ್ದಿಕೊಳ್ಳುವುದು ಹೇಗೆ ಅಂತ ಎಷ್ಟೋ ಸರ್ತಿ ತಿಳಿಲೇ ಇಲ್ಲ. ಸರಿ ವರ್ಷಗಳು ಉರುಳಿದವು ಮಗ ದೊಡ್ಡವನಾದ. ಕೆಲಸಕ್ಕೆ ಅಂತ ಲಂಡನ್ ಗೆ ಹೋದ. ಈಗ ವಾಪಸ್ಸು ಬರೋಕೆ ತಯಾರಿಲ್ಲ! ಯಾಕೆಂದರೆ ಈಗಲೂ ಬಯ್ಯುತ್ತಿರುವ ಅಪ್ಪನಿಂದ ದೂರ ಓಡಿ ಹೋಗುವುದೇ ಮೇಲು ಅಂತ ಅವನಿಗೆ ಅನಿಸಿರಬೇಕು. ಅಪ್ಪನಿಗೆ ಫೋನ್ ಕೂಡ ಮಾಡೋಲ್ಲ. ಫೋನಿನಲ್ಲೂ ಬೈಸಿಕೊಳ್ಳಲು ಅವನಿಗೆ ತಲೆ ಕೆಟ್ಟಿದೆಯೇ? ಅಪ್ಪನಿಗೆ ಈಗ ಮಗ ಬೇಕಾಗಿದ್ದಾನೆ. ಆದರೆ ಮೊದಲಿನಿಂದ ಹೆದರಿಸಿ ತಮ್ಮಿಬ್ಬರ ಮಧ್ಯೆ ಒಂದು ದೊಡ್ಡ ಕಂದಕ ಸೃಷ್ಟಿಯಾಗಿದ್ದು ಅವರ ಅರಿವಿಗೆ ಬರುತ್ತಿಲ್ಲವೆ? ಅಥವಾ ಬಂದಿದ್ದರೂ ತುಂಬಾ ತಡವಾಯ್ತೇನೋ!

ದೇವರಿಗೆ ಹೆದರುವವರದು ಇನ್ನೊಂದು ಕೆಟಗರಿ. ಭಯ ಭಕ್ತಿ ಎರಡೂ ಎಷ್ಟೋ ಕಾಲದಿಂದ ಒಟ್ಟೊಟ್ಟಿಗೆ ಉಪಯೋಗಿಸಲ್ಪಡುವ ಶಬ್ದಗಳು. ಅದು ತುಂಬಾ ಕೆಲಸ ಮಾಡಿದೆ ಕೂಡ. ಈ ಒಂದು ನಂಬಿಕೆಯಿಂದ ಜನರು ಕೆಲವು ಪ್ರಾಣಿಗಳನ್ನು ಕೊಲ್ಲುತ್ತಿರಲಿಲ್ಲ, ಒಂದಿಷ್ಟು ಗಿಡಗಳನ್ನು ಬೆಳೆಸಿ, ರಕ್ಷಿಸಿ ಪೂಜೆ ಮಾಡುತ್ತಿದರು. ಅದೇ ತರಹದ ನಂಬಿಕೆ ನಾಗರಹಾವಿನ ಬಗ್ಗೆಯೂ ಇತ್ತು. ಹಾವನ್ನು ಕೊಲ್ಲಬಾರದು ಅದು ನಾಗದೇವತೆ ಅನ್ನೋದು.

ಬಾಲ್ಯದಲ್ಲಿ ನಮ್ಮ ಬಡಾವಣೆಯಲ್ಲಿ ತುಂಬಾ ನಾಗರಹಾವುಗಳು ಬರೋವು. ಆಗೆಲ್ಲ ಹಾಗೆ ಕಣ್ಣಿಗೆ ಬಿದ್ದ ಹಾವನ್ನು ಕೊಂದು ಬಿಡೋರು. ಆದರೆ ನಂತರ ಅದರ ಬಾಯಲ್ಲಿ ದುಡ್ಡಿಟ್ಟು ಪೂಜೆ ಮಾಡಿ ಸುಡೋರು! ಇಲ್ಲಿ ಎರಡು ಭಯ ಕೆಲಸ ಮಾಡಿತ್ತು. ಒಂದು ಹಾವಿನದು. ಹಾವನ್ನು ಕೊಂದಬಳಿಕ ಪಾಪ ತಲೆಗಂಟಿದರೆ ಅನ್ನೋದು ಇನ್ನೊಂದು. ಹೀಗಾಗಿ ಅದಕ್ಕೊಂದು ಪರಿಹಾರ ಕಂಡುಕೊಂಡರು. ಇದೇ ಪಾಪ ವಿಮೋಚನೆಯ ಬುದ್ಧಿ ಲಂಚ ತೆಗೆದುಕೊಂಡವನಿಗೆ ಅಥವಾ ಕೊಲೆ ಮಾಡಿದವನಿಗೂ ಇದ್ದಾಗ ಅದು ಡೇಂಜರ್! ಒಂದು ಕೊಲೆ ಮಾಡಿ ಅದರ ಪ್ರಾಯಶ್ಚಿತವಾಗಿ ದೇವರ ಹುಂಡಿಗೊಂದಿಷ್ಟು ಲಕ್ಷ ಸುರಿದು ಪಾಪ ತೊಳೆದುಕೊಂಡು ಮುಂದಿನ ಕೊಲೆಗೆ ಸಜ್ಜಾಗುವವನು ಅಥವಾ ಎಷ್ಟೋ ಲಕ್ಷ ಲಂಚ ತೆಗೆದುಕೊಂಡು ದೇವರೇ ನಿನಗೂ ಇದರಲ್ಲಿ ಪಾಲು ಕೊಟ್ಟಿರುವೆ ದಯವಿಟ್ಟು ಹೊಟ್ಟೆಗೆ ಹಾಕಿಕೋ ಅನ್ನುವ ಮನಸ್ಥಿತಿಯವನು ಇನ್ನೆಂತಹ ಹೆದರಿಕೆಗೆ ಮಣಿದಾನು?

ಬೈಸಿಕೊಳ್ಳುವುದನ್ನು ಮೈಗೂಡಿಸಿಕೊಂಡಿರುತ್ತಾರೆ. ನೀವು ಹತ್ತು ಸಲ ಬೈದರೆ, ಹೊಡೆದರೆ ಮಕ್ಕಳೂ ಕೂಡ ನಿಮ್ಮ ಮಾತು ಕೇಳರು, ಯಾಕೆಂದರೆ ಅದು ಮೈ ಉಂಡುಬಿಟ್ಟಿರುತ್ತದೆ.

ಹೆದರಿಕೆಯನ್ನು ಓಡಿಸುವುದು ಹೇಗೆ? ಮುಳ್ಳನ್ನು ಮುಳ್ಳಿನಿಂದಲೇ ತೆಗೆದಂತೆ ಹೆದರಿಕೆಯನ್ನೂ ಎದುರಿಸಿಯೇ ಗೆಲ್ಲಬೇಕು. ಹೆಂಡತಿಯ ಭಯವನ್ನು ಹೆಂಡತಿಯೊಂದಿಗಿದ್ದುಕೊಂಡೇ ಎದುರಿಸಬೇಕೆ ವಿನಾ ಓಡಿ ಹೋಗಬಾರದು! ತುಂಬಾ ಗಂಡಂದಿರು ಮಾಡುವುದು ಅದನ್ನೇ ಅಲ್ಲವೇ. ಮೊದಮೊದಲು ಅಂಜಿದರೂ ಆ ಭಯಂಕರಿಯ ಜೊತೆಗೆ ಇದ್ದು ಇದ್ದು ಆ ಹೆದರಿಕೆಯನ್ನು ಓಡಿಸಿರುತ್ತಾರೆ, ಇಲ್ಲವೇ ಬೈಸಿಕೊಳ್ಳುವುದನ್ನು ಮೈಗೂಡಿಸಿಕೊಂಡಿರುತ್ತಾರೆ. ನೀವು ಹತ್ತು ಸಲ ಬೈದರೆ, ಹೊಡೆದರೆ ಮಕ್ಕಳೂ ಕೂಡ ನಿಮ್ಮ ಮಾತು ಕೇಳರು, ಯಾಕೆಂದರೆ ಅದು ಮೈ ಉಂಡುಬಿಟ್ಟಿರುತ್ತದೆ.

ಇದೇ ತರಹ ಒಬ್ಬ ಪುಂಡ ಅಥವಾ ಕಚ್ಚೆಹರುಕ ಗಂಡ ಸಿಕ್ಕಾಗ ಅವನು ಮಾಡುವ ಬ್ಲಾಕ್ಮೇಲ್ ಗೆ ತುತ್ತಾಗಿ ಎಷ್ಟೋ ಹೆಂಗಸರು ಬಾಯಿ ಬಿಡದೆ ಸಹಿಸಿಕೊಂಡಿರುತ್ತಾರೆ. ಇಲ್ಲಿ ಕೆಲಸ ಮಾಡೋದು `ಮರ್ಯಾದೆ ಹೋದರೆ’ ಎಂಬ ಭಯ! ಊರು ಸಣ್ಣದಾದಷ್ಟು ಆ ಭಯ ಹೆಚ್ಚಾಗುತ್ತದೆ. ಹೀಗಾಗಿಯೇ ಅಲ್ಲವೇ ಎಷ್ಟೋ ಜನ ಕಣ್ಣೀರಿ ನಲ್ಲೇ ಮುಖ ತೊಳೆದು ತಮ್ಮ ಪೂರ್ತಿ ಜೀವನ ಸವಿಸಿಬಿಡುತ್ತಾರೆ. ಆದರೆ ಆ ಭಂಡ ಮಾತ್ರ ಲಗಾಮಿಲ್ಲದ ಹೋರಿಯಂತೆ ಊರೆಲ್ಲ ಮೆಯುತ್ತಿರುತ್ತಾನೆ. ಆ ಹೋರಿ ಮೇಯುವುದು ಸಣ್ಣ ಊರಿನಲ್ಲಿ ಎಲ್ಲರಿಗೂ ಗೊತ್ತಿರುತ್ತದೆ. ಅದು ಮರ್ಯಾದೆ ಹೋದಂತೆಯೇ ಅಲ್ಲವೇ? ಹೆಣ್ಣುಮಕ್ಕಳು ಇದನ್ನು ಮೆಟ್ಟಿ ನಿಂತಾಗಲೇ ಇಂತಹವರಿಗೆ ಒಂದು ಪಾಠ ಕಲಿಸಿದಂತೆ. ಆ ಹೋರಿಗಳಿಗೆ ಮೇವು ಹಾಕುವವರೂ ಆ ಹೋರಿಯನ್ನು ಸೆಟೆದು ನಿಲ್ಲುವಂತೆ ಮಾಡುತ್ತಾರೆ. ಅದು ಮೇವು ಹಾಕಿದವರ ತಪ್ಪೂ ಹೌದು!

ಇಲ್ಲ. ದೊಡ್ಡವರು ಕೂಡ ಮಕ್ಕಳಿಗೆ ಸಣ್ಣಪುಟ್ಟ ತಪ್ಪು ಮಾಡಿದಾಗ ಶಿಕ್ಷೆಯ ಬದಲು ಅದು ಯಾಕೆ ತಪ್ಪು, ಅದನ್ನು ಇನ್ನೊಮ್ಮೆ ಮಾಡಬೇಡ ಅಂತ ತಿಳಿಸಿ ಹೇಳಿದರೆ ಮುಂದೆ ಎಷ್ಟೋ ಕ್ರೈಂ ಗಳು ಆಗುವುದು ತಪ್ಪುತ್ತವೆ…

ಇವೆಲ್ಲ ಭಯಗಳಲ್ಲಿ ರಾಜನಂತೆ ಕಂಗೊಳಿಸುವ ಭಯ ಸಾವಿನದು! ತಾನು ಸತ್ತರೆ ಎಂಬ ಯೋಚನೆ ಮಾಡಿಯೇ ಸತ್ತು ಹೋದವರಿ ದ್ದಾರೆ. ತಾನು ಸತ್ತ ನಂತರ ತನ್ನನ್ನು ನಂಬಿಕೊಂಡವರ ಗತಿ ಏನು ಎಂದು ಯೋಚಿಸುವವರದು ಒಂದು ವರ್ಗ. ತಾನು ಸತ್ತರೆ ನನ್ನ ಆಸ್ತಿಪಾಸ್ತಿಯನ್ನು ತನ್ನ ಮಗ ಸರಿಯಾಗಿ ನೋಡಿಕೊಳ್ಳುವನೋ ಇಲ್ಲವೋ; ಎಲ್ಲವನ್ನೂ ನುಂಗಿ ನೀರು ಕುಡಿದರೆ ಏನು ಮಾಡೋದು ಎಂದು ಯೋಚಿಸುವವರು ಇನ್ನೊಂದು ಬಗೆಯವರು. ಇವೆರಡೂ ಬಿಟ್ಟು ತಾನು ಸತ್ತು ನರಕಕ್ಕೆ ಹೋದರೆ ಏನು ಮಾಡೋದು ಅಂತ ಯೋಚಿಸುವ ಪಾಪಪ್ರಜ್ಞೆಯ ಜನರದು ಇನ್ನೊಂದು ಗುಂಪು. ಒಟ್ಟಿನಲ್ಲಿ ಹೆದರಿಯೇ ಸಾಯುವ ಜನ ಆ ಸಾವಿಗೂ ಹೆದರಿದರೆ ಎಂತ ಮಾಡೋದು?

ಹಾಗಂತ ಯಾರಿಗೂ ಯಾರ ಮೇಲೂ ಭಯವೇ ಇರಬಾರದು ಅಂತ ಅಲ್ಲ. ಭಯ ಇದ್ದರೆ ತನ್ನ ಮೇಲೆ ತನಗೆ ಇರಬೇಕೆ ವಿನಾ ಬೇರೆಯವರ ಬಗ್ಗೆ ಅಲ್ಲ. ತಾನು ಹೀಗೆ ಮಾಡಿದರೆ ಸರಿಯೇ ಅಂತ ತನ್ನನ್ನು ತಾನು ಕೇಳಿಕೊಂಡರೆ ಆಗ ಯಾರಿಗೂ ಹೆದರುವ ಅಗತ್ಯ ಇಲ್ಲ. ದೊಡ್ಡವರು ಕೂಡ ಮಕ್ಕಳಿಗೆ ಸಣ್ಣಪುಟ್ಟ ತಪ್ಪು ಮಾಡಿದಾಗ ಶಿಕ್ಷೆಯ ಬದಲು ಅದು ಯಾಕೆ ತಪ್ಪು, ಅದನ್ನು ಇನ್ನೊಮ್ಮೆ ಮಾಡಬೇಡ ಅಂತ ತಿಳಿಸಿ ಹೇಳಿದರೆ ಮುಂದೆ ಎಷ್ಟೋ ಕ್ರೈಂ ಗಳು ಆಗುವುದು ತಪ್ಪುತ್ತವೆ… ಇವೆಲ್ಲಾ ದೊಡ್ಡ ದೊಡ್ಡ ಮಾತುಗಳು. ಆದರೆ ಹೇಳಿದರೆ ಕೇಳೋರು ಯಾರು? ಹೆದರುವವರು ಎಲ್ಲಿಯವರೆಗೆ ಇರುತ್ತಾರೋ ಅಲ್ಲಿಯವರೆಗೆ ಹೆದರಿಸುವವರೂ ಇರುತ್ತಾರೆ. ಹೀಗಾಗಿ ಇಲ್ಲಿ ತಪ್ಪು ಹೆದರಿ ಸಾಯೋರದೇ ತಾನೆ?!

*ಲೇಖಕರ ಹಲವಾರು ಹಾಸ್ಯಬರಹಗಳು ಹಾಗೂ ಕತೆಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ಎಲ್ಲರಂಥವನಲ್ಲ ನನ್ನಪ್ಪ’ ಹಾಗೂ ‘ಅಪ್ಪರೂಪ’ ಸಂಪಾದಿಸಿದ ಕೃತಿಗಳು. ವೃತ್ತಿಯಲ್ಲಿ ಜಲಕೃಷಿ (ಹೈಡ್ರೋಪೋನಿಕ್ಸ್) ತಂತ್ರಜ್ಞರು ಹಾಗೂ ತರಬೇತುದಾರರು.

Leave a Reply

Your email address will not be published.