ಹೆಳವನ ಹೆಗಲ ಮೇಲೆ ಕುರುಡ ಕೂತಿದ್ದಾನೆ ದಾರಿ ಸಾಗುವುದೆಂತೋ ನೋಡಬೇಕು!

ಕೊರೋನಾ ಪಿಡುಗು ಮನುಷ್ಯ ಕುಲದ ಮೂಲಭೂತ ದ್ವಂದ್ವವನ್ನು ಮತ್ತೆ ಮುನ್ನೆಲೆಗೆ ತಂದಿದೆ. ನಾವು ಕಟ್ಟಿಕೊಳ್ಳುವ ರಾಜಕೀಯ, ಸಾಮಾಜಿಕ, ಆರ್ಥಿಕ ವ್ಯವಸ್ಥೆಗಳು ನಿಂತಿರುವುದು ಸ್ವಾರ್ಥ ಹಾಗೂ ಕ್ರೌರ್ಯದ ಮೇಲೆಯೇ ಆಗಿದ್ದರೆ ಮನುಷ್ಯರೊಳಗೆ ಇರುವ ಕರುಣೆ, ವಿಶ್ವಾಸ, ದಯೆ ನಮ್ಮ ಅಸ್ತಿತ್ವದ ಆಧಾರವಾಗುವುದು ಎಂದಿಗೂ ಸಾಧ್ಯವೇ ಇಲ್ಲವೆ?

-ರಾಜೇಂದ್ರ ಚೆನ್ನಿ

ಇತ್ತೀಚೆಗೆ ‘ದಿ ಪ್ರಿಂಟ್’ ಪತ್ರಿಕೆಯಲ್ಲಿ ಕೊರೋನಾ ಪಿಡುಗಿನಿಂದ ಭಾರತದಲ್ಲಿ ಸತ್ತವರ ಸಂಖ್ಯೆ ವಾಸ್ತವವಾಗಿ ಎಷ್ಟಿರಬಹುದು ಎನ್ನುವುದರ ಬಗ್ಗೆ ಯೋಗೇಂದ್ರ ಯಾದವ್ ಅವರ ಲೇಖನವನ್ನು ನೋಡಿದೆ. ವಿಷಯ ಹೊಸದೇನಲ್ಲದಿರಬಹುದು. ಕೊರೋನಾದ ಎರಡನೇ ಅಲೆಯಲ್ಲಿ ಆಗಿರುವ ಅಪಾರ ಪ್ರಮಾಣದ ಸಾವುಗಳ ಸಂಖ್ಯೆಯನ್ನು ಸರಕಾರಗಳು ತಿರುಚುತ್ತಿವೆ, ಮರೆಮಾಚುತ್ತಿವೆ ಎನ್ನುವುದರ ಬಗ್ಗೆ ಸಂದೇಹವೇ ಇಲ್ಲ.

ಕೆಲವು ದಿನಗಳಿಂದ ಅನೇಕ ರಾಜ್ಯ ಸರಕಾರಗಳು ಸಾವುಗಳ ವಾಸ್ತವ ಸಂಖ್ಯೆಗಳನ್ನು ಸರಿಪಡಿಸಿ (ಅದೂ ಬಹುಪಾಲು ನ್ಯಾಯಾಲಯಗಳ ನಿರ್ದೇಶನದಿಂದಾಗಿ) ಪ್ರಕಟಿಸುತ್ತಿವೆ. ಕಿರಾಣಿ ಅಂಗಡಿಯ ಮಾಲೀಕನು ದಿನದ ಕೊನೆಗೆ ಲೆಕ್ಕ ಸರಿಪಡಿಸುವಂತೆ ಭಾರತೀಯ ಪ್ರಜೆಗಳ ಸಾವಿನ ಲೆಕ್ಕವನ್ನು ‘ಡಿeಛಿoಟಿಛಿiಟe’, ‘ಚಿಜರಿusಣ’ ಮಾಡಲಾಗುತ್ತಿದೆಯೆಂದು ವರದಿಗಳಲ್ಲಿ ಹೇಳಲಾಗುತ್ತಿದೆ. ಅಂದರೆ ಮನುಷ್ಯ ಜೀವಿಗಳ ಸಾವು ವ್ಯಾಪಾರ, ವ್ಯವಹಾರದ ದಫ್ತರುಗಳ ಭಾಷೆಯಲ್ಲಿ ನಿರ್ಭಾವುಕವಾಗಿ ಚಿಜರಿusಣ ಮಾಡುವ ವಿಷಯವಾಗಿ, ಬದುಕಿನಲ್ಲೂ ಸಾವಿನಲ್ಲೂ ಘನತೆ ಇಲ್ಲದ ರಾಕ್ಷಸಿ ವ್ಯವಸ್ಥೆಯೊಂದು ಪ್ರಜೆಗಳಿಂದ ಪ್ರತಿಭಟನೆ ಇಲ್ಲದೆ ಪ್ರಜಾಪ್ರಭುತ್ವದ ಹೊರ ಚೌಕಟ್ಟಿನೊಳಗೇ ಎದ್ದುನಿಂತಿದೆ. ಇದು ಕೇವಲ ಕ್ರೂರವೂ ಅಮಾನುಷವಾದುದು ಮಾತ್ರವಲ್ಲ ನಮ್ಮ ನೈತಿಕ, ಸಾಮಾಜಿಕ ಹಾಗೂ ರಾಜಕೀಯ ತೀರ್ಮಾನ ಹಾಗೂ ನಡೆವಳಿಕೆಯನ್ನು ರೂಪಿಸಲು ಬೇಕಾದ ವಾಸ್ತವದ ತಿಳಿವಳಿಕೆಯನ್ನೇ ಅದು ನಾಶಮಾಡಿದೆ.

ಸರಳವಾಗಿ ಹೇಳುವುದಾದರೆ ಪ್ರತಿದಿನವೂ ಕೊರೋನಾ ಬಗ್ಗೆ ಸರಕಾರಗಳು ಪ್ರಕಟಿಸುವ ಅಂಕಿಸಂಖ್ಯೆಗಳು ನಂಬಲರ್ಹವಲ್ಲ, ಬಹುಪಾಲು ಹಸೀ ಸುಳ್ಳುಗಳು ಅನ್ನುವುದಾದರೆ ಇಂಥ ಅತಾರ್ಕಿಕವಾದ, ಅಸಂಗತವಾದ ಸಂದರ್ಭದಲ್ಲಿ ನಮ್ಮ ಆಯ್ಕೆಗಳು ಏನು, ಆ ಆಯ್ಕೆಗಳ ಪರಿಣಾಮಗಳೇನು, ನಮ್ಮ ಭಾವನೆಗಳು ಏನಿರಬೇಕು ಇವೆಲ್ಲವು ಕಳ್ಳ ಉಸುಬಿನ ಮೇಲೆ ಕಟ್ಟುವ ಮನೆಯಂತಿರುತ್ತವೆ. ಇಷ್ಟೇ ಭೀಕರವಾದ ಸಂಗತಿಯೇನೆಂದರೆ ಸುಳ್ಳುಗಳ ಬುನಾದಿಯ ಮೇಲೆ ನಿಂತಿರುವ ಸರಕಾರಗಳು ಇಂಥ ಅನಿಶ್ಚತತೆಯಿಂದಾಗಿ ತಮ್ಮ ನೀತಿ ಮತ್ತು ಕ್ರಿಯೆಗಳ ಬಗ್ಗೆ ಸೂಕ್ಷ್ಮವಾಗಿರಬೇಕು, ಜನರ ಪರಿಣತರ ಮಾತು ಕೇಳಬೇಕು ಎನ್ನುವ ನಮ್ರತೆಯನ್ನೇನು ತೋರಿಸುತ್ತಿಲ್ಲ.

ಭಾರತವೂ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಕೊರೋನಾ ಪಿಡುಗು ಪ್ರಜಾಪ್ರಭುತ್ವ ವಿರೋಧಿ, ಸರ್ವಾಧಿಕಾರಿ ಸರಕಾರಗಳ ಅಧಿಕಾರಕ್ಕೆ ಬೆಂಬಲ ನೀಡಿದೆ. ಭಯಂಕರವಾದ ಜಾಗತಿಕ ಪಿಡುಗನ್ನು ನಿಭಾಯಿಸಲು ಪ್ರಜೆಗಳು ಸರಕಾರದ ನಿರ್ದೇಶನಗಳನ್ನು ವಿಧೇಯವಾಗಿ ಪಾಲಿಸಬೇಕೆನ್ನುವುದು ಅನಿವಾರ್ಯವಾಗಿರುವುದರಿಂದ ಇದರ ದುಷ್ಟ ಪ್ರಯೋಜನಗಳನ್ನು ಪಡೆದುಕೊಂಡು ಪ್ರಜೆಗಳ ನಾಗರಿಕ ಹಕ್ಕುಗಳು, ಮಾನವೀಯ ಹಕ್ಕುಗಳು, ಅಭಿವ್ಯಕ್ತಿ ಸ್ವಾತಂತ್ರ್ಯ ಇವೆಲ್ಲವನ್ನೂ ಈ ಪ್ರಭುತ್ವಗಳು ತೊತ್ತಳ ತುಳಿಯುತ್ತಿವೆ. ಅಲ್ಲದೆ ತಂತ್ರಜ್ಞಾನ, ಮಾಧ್ಯಮಗಳು ಇವುಗಳಿಂದಾಗಿ ಎಲ್ಲಾ ‘ಪ್ರಜೆಗಳ’ ಮೇಲೆ ಸಂಪೂರ್ಣವಾದ ನಿಗಾ ಇಡುವ ಮತ್ತು ಆ ಮೂಲಕ ನಿಯಂತ್ರಿಸುವ Surveillance society ಯು ಅಸ್ತಿತ್ವಕ್ಕೆ ಬರಬಹುದೆನ್ನುವ ಆತಂಕವು ಕೊರೋನಾದಿಂದಾಗಿ ನಿಜವಾಗಿಬಿಟ್ಟಿದೆ. ಪ್ರಸಿದ್ಧ ತತ್ವಜ್ಞಾನಿ Georgio Agamben ಈ ಪಿಡುಗಿನ ಬಗ್ಗೆ ಬರೆಯುತ್ತಾ ಸರಕಾರಗಳು ಪಿಡುಗನ್ನು ಅತಿವಿಶಿಷ್ಟ ಸಂದರ್ಭವೆಂದು ವಿವರಿಸಿ ಈ ಸಂದರ್ಭದಲ್ಲಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವದ ಮೌಲ್ಯಗಳು ಅನಾವಶ್ಯಕವೆಂದು ನಿರ್ಧರಿಸುತ್ತವೆ ಎನ್ನುತ್ತಾರೆ. ಈ ಸಮರ್ಥನೆಯಿಂದಾಗಿ ಪ್ರಜೆಗಳ ಮೇಲೆ ಸರ್ವಾಧಿಕಾರವನ್ನು ಚಲಾಯಿಸುತ್ತವೆ.

ಉದಾಹರಣೆಗೆ ಯಾವುದೇ ಕಾನೂನಿನಲ್ಲಿ ಆಸ್ಪದವಿಲ್ಲದಿದ್ದರೂ ರಾಜ್ಯದಲ್ಲಿ ಲಾಕ್‍ಡೌನ್ ಜಾರಿಗೆ ಬಂದ ಮೊದಲೆರಡು ದಿನಗಳಲ್ಲಿ ಹೆಂಗಸರು ಸೇರಿದಂತೆ ಪ್ರಜೆಗಳನ್ನು ಅಮಾನುಷವಾಗಿ ಲಾಠಿಗಳಿಂದ ಥಳಿಸಲಾಯಿತು. ದುಡಿಮೆಯ ಆಧಾರವಾಗಿದ್ದ ಹಣ್ಣು, ತರಕಾರಿಗಳನ್ನು ಬಿಸಾಡಲಾಯಿತು. ಕೊರೋನಾ ಬಗ್ಗೆ ಸರಕಾರದ ನೀತಿ ಮತ್ತು ಕ್ರಮಗಳ ಬಗ್ಗೆ ಸುಳ್ಳು ತಿರುಚಿದ ಟಿಪ್ಪಣಿ (ಸರಿಯಾದ ಭಾಷಾಂತರವೆಂದರೆ ಸರಕಾರದ ಜನದ್ರೋಹಿ ಮೂರ್ಖ ಕ್ರಿಯೆಗಳನ್ನು ವಿವೇಕಪೂರ್ಣವಾಗಿ ವಿಮರ್ಶಿಸುವುದು) ಇವುಗಳನ್ನು ಮಾಡುವವರನ್ನು ಶಿಕ್ಷೆಗೆ ಗುರಿಪಡಿಸುವ ನಿರ್ದೇಶನಗಳು ಕಾನೂನು ತಿದ್ದುಪಡಿಗಳನ್ನು ಈ ಮೊದಲೇ ಜಾರಿಗೆ ತರಲಾಗಿದೆ.

ಈ ವಿದ್ಯಮಾನದ ಅಸಂಗತತೆಯೇನೆಂದರೆ ಪಿಡುಗು ನಿಯಂತ್ರಣಕ್ಕಾಗಿ ಸರಕಾರಗಳು ಸಮರ್ಪಕವಾದ ಕ್ರಮಗಳನ್ನು ಕೈಕೊಳ್ಳುತ್ತವೆ ಮತ್ತು ಆ ಕಾರಣಕ್ಕಾಗಿ ನಾವು ಅವುಗಳಿಗೆ ಸಮಗ್ರವಾದ ಅಧಿಕಾರವನ್ನು ಕೊಡಬೇಕು ಎನ್ನುವ ನಂಬಿಕೆಯೇ ಸುಳ್ಳಾಗಿದೆ. ಕೊರೋನಾ ಪಿಡುಗಿನ ಮೊದಲ ಅಲೆಯಿಂದಲೇ ಕೇಂದ್ರ ಸರಕಾರದ ಎಲ್ಲಾ ಪ್ರಮುಖ ನಿರ್ಧಾರಗಳು ಅತಾರ್ಕಿಕವಾಗಿಯೇ ಇವೆ. ಏಕೆಂದರೆ ಅವು ಹುಂಬತನದ ಆತ್ಮವಿಶ್ವಾಸ, ಅಧಿಕಾರದ ಅಮಲು, ಹುಸಿ ರಾಷ್ಟ್ರೀಯತೆ, ಪರಿಣತರ ಸಲಹೆಗಳ ಕಡೆಗಣನೆ ಮತ್ತು ಅವೈಜ್ಞಾನಿಕ ಧೋರಣೆಗಳಿಂದ ರೂಪಗೊಂಡ ನಿರ್ಧಾರಗಳು. ಜನರ ಹಿತದ ಬದಲಾಗಿ ಅಹಂಕಾರವನ್ನೇ ನೆಚ್ಚಿಕೊಂಡ ಅಧಿಕಾರ ವ್ಯವಸ್ಥೆಗೆ ಪಿಡುಗಿನ ನೆಪದಲ್ಲಿ ಸರ್ವಾಧಿಕಾರವು ಬಂದರೆ ಏನು ಅನಾಹುತಗಳು ಆಗಬಹುದೋ ಅವೆಲ್ಲ ಆಗಿವೆ.

ದುರ್ದೈವವೆಂದರೆ, ಇದರ ಪರಿಣಾಮವೆಂದರೆ ನಮ್ಮ ಗ್ರಹಿಕೆಯನ್ನು ಮೀರಿದ ಸಾವುಗಳು. ನಾನು ಪ್ರಸ್ತಾಪ ಮಾಡಿದ ಯೋಗೇಂದ್ರ ಯಾದವ್ ಅವರ ಲೇಖನದ ಪ್ರಕಾರ ಕನಿಷ್ಠವೆಂದರೆ 40 ಲಕ್ಷ ಸಾವುಗಳು ಈ ಅಲೆಯ ಪೂರ್ಣ ಅವಧಿಯಲ್ಲಿ ಆಗಬಹುದು ಎಂದು ಅಂದಾಜಿಸಬಹುದಾಗಿದೆ. ಭಾರತದ ವಿಭಜನೆಯಲ್ಲಿ ಆದ ಸಾವುಗಳಿಗಿಂತ ಎಷ್ಟೋ ಪಟ್ಟು ಜಾಸ್ತಿ. ಸರಳವಾಗಿ ಹೇಳುವುದಾದರೆ ಇದು ಆಧುನಿಕ ಜಗತ್ತಿನ ಅತಿ ಘೋರ ದುರಂತವಾಗಿದೆ. ಆ ದುರಂತದ ಪ್ರಮಾಣವು ಸರಕಾರಗಳು ಬಚ್ಚಿಟ್ಟಿರುವ ಅಂಕಿಸಂಖ್ಯೆಗಳಿಂದಾಗಿ ನಮಗೆ ಗೊತ್ತೂ ಆಗುವುದಿಲ್ಲ. ವಿಪರ್ಯಾಸವೆಂದರೆ ವಾಸ್ತವವೇ ಅತಿವಾಸ್ತವವಾಗಿರುವುದರಿಂದ ಇಂಥ ಹೇಳಿಕೆಗಳು ಅತಿಶಯೋಕ್ತಿಯೆಂದು ಬಹಳ ಜನ ನಂಬುತ್ತಾರೆ.

ಹೀಗಾಗಿ ಕೊರೋನಾ ಪಿಡುಗು ಅಧಿಕಾರ, ಪ್ರಭುತ್ವ, ನಾಗರಿಕ ಪ್ರಜೆಗಳ ಬದುಕು ಸಾವುಗಳ ಹಕ್ಕು ಇಂಥ ಪ್ರಶ್ನೆಗಳನ್ನು ರಾಜ್ಯಶಾಸ್ತ್ರಗಳ ಗ್ರಂಥಗಳಿಂದ ಅನಾಮತ್ತಾಗಿ ಎತ್ತಿ ಬದುಕಿನ ವಾಸ್ತವಗಳನ್ನಾಗಿ ಮಾಡಿದೆ. ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ ತೀರಿಹೋದ ಸೋಂಕಿತರ ಹತ್ತಿರದ ಸಂಬಂಧಿ ನಾನು ಆಗಿದ್ದರೆ ಈ ಚರ್ಚೆ ನನಗೆ ಹೇಗೆ ಕಾಣುತ್ತಿತ್ತು? ಪ್ರತಿ ಮನುಷ್ಯ ಜೀವಿಗೂ ಉಸಿರಾಡುವ ಹಕ್ಕು ಇದೆ ಎಂದು ನಂಬಿಕೊಂಡಿದ್ದ ನನಗೆ ನನ್ನ ಆಪ್ತ ಬಂಧು ಉಸಿರಾಡಲು ಆಕ್ಸಿಜನ್‍ಗಾಗಿ ವಿಲವಿಲ ಒದ್ದಾಡುತ್ತಿದ್ದಾಗ ಇಪ್ಪತ್ತೊಂದನೇ ಶತಮಾನದ ಆಧುನಿಕ ರಾಜ್ಯ ಸರಕಾರವೊಂದು ತನ್ನ ಆಡಳಿತದ ಅಮಾನವೀಯ ನಿರ್ಲಕ್ಷ್ಯದಿಂದಾಗಿ ಅವರನ್ನು ಕೊಲ್ಲುತ್ತದೆ. ಇದು ನನಗೆ ಕೊಲೆಯಾಗಿಯೇ ಕಾಣುತ್ತದೆ. ಆದರೆ ಇದನ್ನು ಆಧುನಿಕ ಆಡಳಿತದ ಭಾಷೆಯಲ್ಲಿ “ಮಾಹಿತಿಯ ಕೊರತೆ; ಇಬ್ಬರು ಅಧಿಕಾರಿಗಳ ತಪ್ಪು ನಿರ್ವಹಣೆ” ಇವುಗಳಿಂದಾಗಿರುವ ಯಕಃಶ್ಚಿತ್ ಸಾವು ಆಗಿರುತ್ತದೆ.

ನಾನು ನನ್ನ ಆಪ್ತನ ಜೀವನದ ಕೊನೆಯ ಕ್ಷಣಗಳನ್ನು ಕಣ್ಣಿಂದ ನೋಡಿರುತ್ತೇನೆ. ಆದರೆ ಮರುದಿನ ಆರೋಗ್ಯ, ವೈದ್ಯಕೀಯ ಇಲಾಖೆಯ ಮಂತ್ರಿಗಳು ಬಂದು ಆಕ್ಸಿಜನ್ ಕೊರತೆಯಿಂದ ಈ ಸಾವುಗಳು ಆಗಿಲ್ಲವೆಂದು ಹೇಳುತ್ತಾರೆ. ನ್ಯಾಯಾಲಯ ಸಮಿತಿಯ ವರದಿ ಬರುತ್ತದೆ. ಆದರೆ ಈ ಕೊಲೆಗೆ ಯಾರಿಗೂ ಶಿಕ್ಷೆಯಾಗಿಲ್ಲ. ನ್ಯಾಯಾಲಯವೇ ಚೌಕಾಶಿ ಮಾಡಿ ಸತ್ತಿರುವ ನನ್ನ ಆಪ್ತ ಬಂಧುವಿನ ಕುಟುಂಬಕ್ಕೆ ಪರಿಹಾರದ ದುಡ್ಡು ಕೊಡಿಸುತ್ತದೆ. ಅಲ್ಲಿಗೆ ಅಧಿಕಾರ ವ್ಯವಸ್ಥೆಯ ಅಗಾಧವಾದ ಮರೆವಿಗೆ ನನ್ನ ಬಂಧುವಿನ ಹೆಸರು, ಸಂಖ್ಯೆ ಸೇರಿ ಹೋಗುತ್ತದೆ.

ನಾನು ಇನ್ನೊಬ್ಬ ಭಾರತೀಯ ಯುವತಿಯಾಗುತ್ತೇನೆ… ತಂದೆಗೆ ಬದುಕುಳಿಯಲು ಆಕ್ಸಿಜನ್ ಬೇಕು. ನನ್ನನ್ನು ಎತ್ತಿ ಆಡಿಸಿ, ಬೆಳೆಸಿದ ಅಪ್ಪ. ಅವನು ಸತ್ತರೆ ನಾನು ಜೀವನಪರ್ಯಂತ ಅಪರಾಧಿಯಾಗುತ್ತೇನೆ. ಆಕ್ಸಿಜನ್‍ಗಾಗಿ ಮಧ್ಯವರ್ತಿಗಳನ್ನು ಸಂಪರ್ಕಿಸುತ್ತೇನೆ. ಒಂದು ವಿಚಿತ್ರವಾದ ಸಂದೇಶ ಬರುತ್ತದೆ. ನಿನ್ನ ಅಪ್ಪನಿಗೆ ಆಕ್ಸಿಜನ್ ಕೊಡಿಸುತ್ತೇನೆ ಆದರೆ ಅದಕ್ಕಾಗಿ ನೀನು ನನ್ನ ಜೊತೆಗೆ ಮಲಗಿ ಸಂಭೋಗ ಮಾಡು. ನಾನು ಏನು ಮಾಡಬೇಕು?

ಇಲ್ಲಿ ಬರೆದಿರುವ ಘಟನೆಗಳು ವಾಸ್ತವ ಘಟನೆಗಳು. ಇಂಥ ಲಕ್ಷಾನುಗಟ್ಟಳೆ ಘಟನೆಗಳು ನಡೆದಿವೆ. ಆದರೆ ಸ್ವಾತಂತ್ರ್ಯ ನಂತರ ನಾವೆಲ್ಲ ಬೆಳೆಸಿಕೊಂಡು ಬಂದಿರುವ ರಾಜಕೀಯ ಪ್ರಜ್ಞೆಯೆಂದರೆ ವಾಸ್ತವಗಳನ್ನು ಒಪ್ಪಿಕೊಂಡರೆ, ಹೇಳಿದರೆ ‘ನನ್ನ’ ಪಕ್ಷಕ್ಕೆ ನಷ್ಟವಾಗುತ್ತದೆ. ನನ್ನ ನಾಯಕನ image ಗೆ ಹೊಡೆತ ಬೀಳುತ್ತದೆ ಅಥವಾ ಹೇಳಿದರೆ ನನ್ನನ್ನು ಜೈಲಿಗೆ ಹಾಕುತ್ತಾರೆ. ನ್ಯಾಯಾಲಯವು ಹತ್ತು ವರ್ಷಗಳ ನಂತರ ನನಗೆ ಬೇಲ್ ಕೊಡುವ ಬಗ್ಗೆ ವಿಚಾರಣೆ ಆರಂಭಿಸುತ್ತದೆ. ನನ್ನ ಜಾತಿಬಾಂಧವರು ನನ್ನ ಜಾತಿಯ ಮಠವು “ನಮ್ಮವರ” ಆಡಳಿತದ ಬಗ್ಗೆ ಹೀಗೆ ವಿಮರ್ಶೆ ಮಾಡಿ ಆ “ಇನ್ನೊಬ್ಬರು” ಅಧಿಕಾರಕ್ಕೆ ಬರುವುದಕ್ಕೆ ಸಹಾಯವಾಗುತ್ತದೆಯೆಂದು ನನ್ನನ್ನು ಒತ್ತಾಯಿಸುತ್ತವೆ. ಹೀಗಾಗಿ ನಾನು ಹಾಲಿ ಇರುವ ವ್ಯವಸ್ಥೆಯ adjustment ಗಳಿಗೆ ನನ್ನ ಸಮ್ಮತಿಯನ್ನು ಕೊಡುತ್ತೇನೆ. ಮೂಲತಃ ಕ್ರಿಮಿನಲ್‍ಗಳಾಗಿರುವ ರಾಜಕೀಯ ಪ್ರತಿನಿಧಿಗಳು ಕೊರೋನಾ ಪಿಡುಗನ್ನು ದೇವರೆ ಕೊಟ್ಟ ವರವೆಂದು ಬಳಸಿಕೊಂಡು ಅಪಾರ ಭ್ರಷ್ಟತೆಯಲ್ಲಿ ತೊಡಗುವುದಕ್ಕೆ ನಾನು ನೈತಿಕವಾಗಿ ಸಹಭಾಗಿಯಾಗುತ್ತೇನೆ.

ಕರ್ನಾಟಕದ ಪತ್ರಿಕೆಯೊಂದು ಇಷ್ಟು ವರ್ಷಗಳಲ್ಲಿ ನಮ್ಮ ಸಮಾಜಶಾಸ್ತ್ರಜ್ಞರು ಮಾಡದ ಅರ್ಥಪೂರ್ಣ ಕೆಲಸವನ್ನು ಮಾಡಿತು. ನಮ್ಮ ಹಳ್ಳಿಗಳಲ್ಲಿ, ಸಣ್ಣ ಪಟ್ಟಣಗಳಲ್ಲಿ ಆರೋಗ್ಯ ವ್ಯವಸ್ಥೆ ಹೇಗಿದೆ ಎನ್ನುವುದರ ವರದಿಗಳನ್ನು ಪ್ರಕಟಿಸುತ್ತ ಬಂದಿತು. ಈ ವರದಿಗಳಿಂದ ಸಾಬೀತಾಗುವುದೆಂದರೆ ಮೂಲ ಆರೋಗ್ಯ ವ್ಯವಸ್ಥೆಯನ್ನು ನಿರ್ಮಿಸಲು ಯಾವ ಸರಕಾರವೂ ಪ್ರಯತ್ನವನ್ನೇ ಮಾಡಿಲ್ಲ. ಇದು ಕೇವಲ ಆಡಳಿತಾತ್ಮಕ ಲೋಪವಲ್ಲ, ಇದರ ಹಿಂದಿರುವ ಧೋರಣೆಯೆಂದರೆ ಪ್ರಜೆಗಳು expendable ಎನ್ನುವ ಅಮಾನುಷವಾದ ರಾಜಕೀಯ ನೀತಿ. ಆರೋಗ್ಯವಂತರಾಗಿ ತಮ್ಮ ಆಯಸ್ಸು ಪೂರೈಸುವವರೆಗೆ ಬದುಕುವ ಮಾನವೀಯ ಸಂವಿಧಾನಾತ್ಮಕ ಹಕ್ಕು ಅವರಿಗಿಲ್ಲ ಎನ್ನುವ ನಂಬಿಕೆ. ಇಷ್ಟೇ ಅಮಾನುಷವೆಂದರೆ ಅವರನ್ನು ನಿರಂತರ ಬಡತನದಲ್ಲಿ ಇಡುವ ಆರ್ಥಿಕತೆ. ಶುದ್ಧ ನೀರು, ಶೌಚಾಲಯಗಳು, ಔಷಧಿಗಳು ಇದಾವುದೂ ದಕ್ಕದ ಸ್ಥಿತಿಗಳು.

ಹೀಗಾಗಿ ಕೊರಾನಾದಂಥ ಪಿಡುಗು ಬಂದರೆ ಅದನ್ನು ಎದುರಿಸುವ ಸಾಮಥ್ರ್ಯ ಎಲ್ಲಿಂದ ಬರಬೇಕು? ಪರಿಣತರ ಪ್ರಕಾರ ಕೊರೋನಾ ಪಿಡುಗಿನ ಇನ್ನೂ ಅನೇಕ ಅಲೆಗಳು ಬರಬಹುದು. ಆದರೆ ಬದುಕುವುದೇನು ಸತ್ತರೂ ಲೆಕ್ಕಕ್ಕೆ ಬಾರದಿರುವ ಪ್ರಜೆಗಳ ಸ್ಥಿತಿ ಬದಲಾಗುವುದಿಲ್ಲ. ದುರಂತವೆಂದರೆ ಈ ವಾಸ್ತವವು ನಮ್ಮನ್ನು ತಟ್ಟದಿರುವ ವಿಚಿತ್ರ ಭಾವನಾರಹಿತ ಮನೋಸ್ಥಿತಿಗೆ ವ್ಯವಸ್ಥೆ ನಮ್ಮನ್ನು ತಂದು ನಿಲ್ಲಿಸಿದೆ.

ಕೊರೋನಾ ಪಿಡುಗು ತಂದಿರುವ ಭಯ, ಆತಂಕ ಮತ್ತು ನಮ್ಮ ನಿತ್ಯಜೀವನದ ಶೈಲಿಯಲ್ಲಿ ತಂದಿರುವ ಬದಲಾವಣೆಗಳಿಂದಾಗಿ ಎರಡು ಬಗೆಯ ಮನೋಸ್ಥಿತಿಗಳು ಉಂಟಾಗಿವೆ. ಒಂದು ‘ನನಗೆ ನಾನು, ನಿನಗೆ ನೀನು’, ‘ನೀನು ನನ್ನ ಜೀವಕ್ಕೆ ಅಪಾಯ, ದೂರವಿರು’, ‘ಎಷ್ಟು ಜನ ಸತ್ತರೆ ಏನಂತೆ ಜಾಗತಿಕ ಪಿಡುಗಲ್ಲವೆ? ನಾನು ಬದುಕಿದರೆ ಸಾಕು’ ಎನ್ನುವ ಮನೋಸ್ಥಿತಿ. ಇದು ತೀರಾ ವೈಯಕ್ತಿಕತೆಯ, ಸ್ವಕೇಂದ್ರಿತವಾದ, ಸಮುದಾಯ ವಿರೋಧಿ ಮನೋಸ್ಥಿತಿಯಾಗಿದೆ. ಇದಕ್ಕೆ ವಿರುದ್ಧವಾದ ಮನೋಸ್ಥಿತಿಯೆಂದರೆ “ಜಗತ್ತಿನಲ್ಲಿ ಒಬ್ಬನಿಗೆ ಕೊರೋನಾ ಇರುವವರೆಗೆ ನಾವ್ಯಾರೂ ಸುರಕ್ಷಿತರಲ್ಲ”; “ಬದುಕುವುದಾದರೆ ಒಟ್ಟಿಗೆ, ಇಲ್ಲದಿದ್ದರೆ ಯಾರೂ ಬದುಕುವುದಿಲ್ಲ”. “ಇವತ್ತು ನೀನು, ನಾಳೆ ನಾನು, ಹೀಗಾಗಿ ಇರುವವರೆಗೆ ಏನಾದರೂ ಮಾಡುವಾ” ಎನ್ನುವ ಮನೋಸ್ಥಿತಿಯಾಗಿದೆ. ಬಹುಶಃ ಈ ತಿಳಿವಳಿಕೆಯೂ ಮನುಷ್ಯರಲ್ಲಿ ಗಾಢವಾಗಿರುವುದರಿಂದಾಗಿ ಜೀವದ ಹಂಗನ್ನು ತೊರೆದು ನಮ್ಮ ಆಶಾ ಕಾರ್ಯಕರ್ತೆಯರು, ದಾದಿಯರು, ವೈದ್ಯರು, ಅಸಂಖ್ಯಾತ ಅನಾಮಧೇಯ ಕರುಣಾಮಯಿ ಮನುಷ್ಯರು ಎಲ್ಲರ ನೆರವಿಗೆ ಬರುತ್ತಿದ್ದಾರೆ.

ಈ ಆಧಾರದ ಮೇಲೆ ಅನೇಕ ಚಿಂತಕರು ಕೊರೋನಾ ನಂತರ ನಾವು ಮನುಷ್ಯಪರವಾದ ಪರಸ್ಪರ ಅವಲಂಬನೆಯ, ಸಹಕಾರದ ರಾಷ್ಟ್ರಗಳನ್ನು, ರಾಜಕೀಯ ವ್ಯವಸ್ಥೆಗಳನ್ನು ಕಟ್ಟಬಹುದೆಂದು ಆಶಾವಾದಿಗಳಾಗಿದ್ದಾರೆ, ನಾನೂ ಆಗ ಬಯಸುತ್ತೇನೆ. ಆದರೆ ತನ್ನ ಆತ್ಮವನ್ನೇ ಕಳೆದುಕೊಂಡಿರುವ ನಾಗರಿಕತೆಯು ಇಂಥ ಬದಲಾವಣೆಗೆ ಆಸ್ಪದ ಕೊಡಬಲ್ಲದೆ ಎನ್ನುವ ಗಾಢ ಸಂಶಯಗಳು ಇವೆ. ವಿಭಜನೆಯ ನಂತರ ಇಡಿ ರಾಷ್ಟ್ರವು ಸಾಮೂಹಿಕ ಪಶ್ಚಾತ್ತಾಪ ಅನುಭವಿಸಿ ಕೋಮುವಾದದಿಂದ ಮುಕ್ತವಾಗುತ್ತದೆ ಎಂದು ನಿರೀಕ್ಷಿಸಿದ್ದೆವು. ಆಮೇಲೆ ದಶಕಗಳ ನಂತರ ಆದದ್ದೇನು? ಮೂಲಭೂತವಾದ, ಉಗ್ರರು ಮತ್ತು ಗುಜರಾತ್. ನಾಝಿಗಳು (Nazi) ಮಾಡಿದ ಮಾರಣಹೋಮದ ನಂತರ ಇನ್ನೆಂದೂ ಜನಾಂಗೀಯ ದ್ವೇಷ ಮರುಕಳಿಸದು ಎಂದುಕೊಂಡಿದ್ದೆವು. ಈಗ ಭಾರತದಲ್ಲಿಯೂ ಸೇರಿದಂತೆ ಓಚಿzi ವಾದವು ಹೊಸ ಅವತಾರಗಳನ್ನು ಪಡೆದಿದೆ.

ಕೊರೋನಾ ಪಿಡುಗು ಮನುಷ್ಯ ಕುಲದ ಮೂಲಭೂತ ದ್ವಂದ್ವವನ್ನು ಮತ್ತೆ ಮುನ್ನೆಲೆಗೆ ತಂದಿದೆ. ನಾವು ಕಟ್ಟಿಕೊಳ್ಳುವ ರಾಜಕೀಯ, ಸಾಮಾಜಿಕ, ಆರ್ಥಿಕ ವ್ಯವಸ್ಥೆಗಳು ನಿಂತಿರುವುದು ಸ್ವಾರ್ಥ ಹಾಗೂ ಕ್ರೌರ್ಯದ ಮೇಲೆಯೇ ಆಗಿದ್ದರೆ ಮನುಷ್ಯರೊಳಗೆ ಇರುವ ಕರುಣೆ, ವಿಶ್ವಾಸ, ದಯೆ ಇವುಗಳು ನಮ್ಮ ಅಸ್ತಿತ್ವದ ಆಧಾರವಾಗುವುದು ಎಂದಿಗೂ ಸಾಧ್ಯವೇ ಇಲ್ಲವೆ? ಬದಲಾವಣೆಯು ಯಾವಾಗಲೂ ಅಸಾಧ್ಯವಾದ ಕನಸೇ?

ಆಲ್ಬರ್ಟ್ ಕಾಮ್ಯೂ ಸಿಸಿಫಸ್‍ನ ಪುರಾಣವನ್ನು ಮನುಷ್ಯ ಅಸ್ತಿತ್ವಕ್ಕೆ ರೂಪಕವಾಗಿ ಬಳಸಿಕೊಳ್ಳುತ್ತಾನೆ. ಸಿಸಿಫಸ್ ಬಹು ಭಾರವಾದ ಬಂಡೆಯನ್ನು ತಳ್ಳುತ್ತಾ ಬೆಟ್ಟದ ತುದಿಗೆ ತಂದು ನಿಲ್ಲಿಸುತ್ತಾನೆ. ಅದು ತುದಿ ತಲುಪಿದ ಕೂಡಲೇ ಬೆಟ್ಟದ ಬುಡಕ್ಕೆ ವಾಪಸ್ಸು ಮರಳುತ್ತದೆ. ಮತ್ತೆ ಸಿಸಿಫಸ್ ಬಂಡೆಯನ್ನು ಮೇಲೆ ತಳ್ಳಲು ಆರಂಭಿಸುತ್ತಾನೆ. ಮೊದಲ ಅಲೆಯಲ್ಲಿಯಂತೆ ಕೊರೋನಾನ ಎರಡನೇ ಅಲೆಯಲ್ಲಿ ಲಾಕ್‍ಡೌನ್ ಘೋಷಿಸಿದಾಗ ಲಕ್ಷಗಟ್ಟಲೆ ಶ್ರಮಜೀವಿಗಳು ಬೆಂಗಳೂರು, ಇತರ ಮಹಾನಗರಗಳನ್ನು ತೊರೆದು ತಮ್ಮ ಹಳ್ಳಿಗಳಿಗೆ ವಾಪಸ್ಸಾದರು. ಈಗ ಲಾಕ್‍ಡೌನ್ ಸಡಿಲಿಕೆಯ ಒಂದೆರಡು ದಿನ ಮೊದಲೇ ಮತ್ತೆ ಮರುವಲಸೆ ಮಾಡಿ ಅದೇ ನರಕಗಳಿಗೆ ವಾಪಸ್ಸಾದರು. ಅದೇ ಬಡತನ, ಬವಣೆ, ಅಸಹಾಯಕತೆ. ಕೊರೋನಾ ಮುಗಿದರೂ ಇದೆಲ್ಲಾ ಹೀಗೇ ಇರುತ್ತದೆಯೆ? ಮತ್ತೆ ಮತ್ತೆ, ಪುನರಪಿ, ಪುನರಪಿ.

ಭಾರತದಲ್ಲಿ ಕೊರೋನಾ ಪಿಡುಗು ಮಾಡಿದ ಅನಾಹುತಗಳಿಗೆ ಕಾರಣವೆಂದರೆ ಅದೆಷ್ಟೇ ಅಪೂರ್ಣವಾಗಿದ್ದರೂ, ಅಸಮರ್ಪಕವಾಗಿದ್ದರೂ ಸ್ವಾತಂತ್ರ್ಯದ ನಂತರ ಸಾಮಾಜಿಕ ಕಲ್ಯಾಣ ಯೋಜನೆಗಳು, ಸಾರ್ವಜನಿಕ ವಲಯದ ಬೆಳವಣಿಗೆ, ಶಿಕ್ಷಣ, ಆರೋಗ್ಯ ಇವುಗಳನ್ನು ಖಾಸಗೀಕರಣಗೊಳಿಸಲು ನಕಾರ ಇವೇ ಮುಂತಾದವುಗಳನ್ನು ಒಳಗೊಂಡ ನೀತಿಗಳನ್ನು ಪ್ರಭುತ್ವವು (state) ಒಪ್ಪಿಕೊಂಡಿತ್ತು. 1990ರಿಂದ ಈಚೆಗೆ ನವ ಉದಾರೀಕರಣದಿಂದಾಗಿ ಇವೆಲ್ಲವುಗಳನ್ನು ಕೈಬಿಡಲಾಯಿತು. ನವ ಉದಾರೀಕರಣವು ಮಾರುಕಟ್ಟೆ, ಖಾಸಗೀಕರಣ ಮತ್ತು ಬಂಡವಾಳಶಾಹಿಯ ಏಕೋಪಾಸನೆಯಿಂದ ದಶಕಗಳ ವರೆಗೆ ಕಟ್ಟಿದ್ದ ಸಾಮಾಜಿಕ ಭದ್ರತೆ ದುರ್ಬಲ ವರ್ಗಗಳ ಹಿತರಕ್ಷಣೆಯ ರಚನೆಗಳನ್ನು ನಾಶ ಮಾಡುತ್ತಾ ಬಂದಿದೆ. ಈ ನೀತಿಯನ್ನು ಒಪ್ಪಿಕೊಂಡಿರುವ, ಬಹುಮತದಿಂದ ಚುನಾಯಿತವಾದ ಸರಕಾರವು ಸಾರ್ವಜನಿಕ ವಲಯವನ್ನು ನಾಶ ಮಾಡಿದೆ, ಸಾಮಾಜಿಕ ಭದ್ರತೆಯ ಸಾಧನಗಳನ್ನು ಇಲ್ಲವಾಗಿಸಿದೆ.

ಹೀಗಾಗಿ ಕೊರೋನಾನಂಥ ಪಿಡುಗು ಬಂದಾಗ ಬಡವರಿಗೆ, ದುರ್ಬಲರಿಗೆ ಸಾವಿನಿಂದ ಮಾತ್ರ ಮುಕ್ತಿ ಸಾಧ್ಯವೆನ್ನುವಂತಾಗಿದೆ. ಇದು ಕೊರೋನಾದ ಎರಡನೇಯ ಅಲೆಯಲ್ಲಿ ನಿಚ್ಚಳವಾಗಿ ಕಂಡುಬಂದಿದೆ. ಲಸಿಕೆಗಳ ಮಾರಾಟ/ ಪೂರೈಕೆ ಬಗ್ಗೆ ಕೂಡ ಕೇಂದ್ರ ಸರಕಾರವು “Competitive pricing” ಇತ್ಯಾದಿ ವಾದಗಳನ್ನು ಮಂಡಿಸುತ್ತದೆಯೆಂದರೆ ನವ ಉದಾರವಾದಿ ಬಂಡವಾಳಶಾಹಿಯು ಭಾರತದಲ್ಲಿ ಬಡವರನ್ನು, ದುರ್ಬಲರನ್ನು ಕೊಂದು ಕೂಗುವ ಸ್ಥಿತಿಗೆ ಬಂದಿದೆ ಎಂದು ಅರ್ಥ. ಇದಕ್ಕೆ ಪೂರಕವಾಗಿ ವೈಯಕ್ತಿಕವಾದ, ಸ್ವಾರ್ಥ, ನಿರ್ಭಾವುಕತೆ ಇಂಥ ಧೋರಣೆಗಳನ್ನು ಈ ನೀತಿಗಳು ಪೊರೆಯುತ್ತಿವೆ. ಪ್ರಜೆಗಳ ಮನಸ್ಸುಗಳಲ್ಲಿ, ಮಿದುಳುಗಳಲ್ಲಿ ಹಿಂಸಾಪರವಾದ ಕೋಮುವಾದ, ಅತಿ ಪೌರುಷದ ರಾಷ್ಟ್ರವಾದವನ್ನು ಬಿಟ್ಟರೆ ಇನ್ನಾವ ಮನುಷ್ಯ ಭಾವನೆಗಳೆ ಇಲ್ಲವಾಗಿವೆ. ಹೀಗಾಗಿ ಕೊರೋನಾ ಈಗಾಗಲೇ ಇದ್ದ ಅಸಮಾನತೆ, ಬವಣೆ, ನಿರ್ದಯತೆಗಳನ್ನು ಗಟ್ಟಿಗೊಳಿಸಿದೆಯೆ ಹೊರತು ಹೊಸದಾಗಿ ಸೃಷ್ಟಿಸಿಲ್ಲ.

Leave a Reply

Your email address will not be published.