ಹೆಸರಾಯಿತು ಕರ್ನಾಟಕ ಉಸಿರಾಗಲಿಲ್ಲ ಕನ್ನಡ

ಕನಿಷ್ಠ 1-10ನೇ ತರಗತಿವರೆಗೆ ಕನ್ನಡ ಮಾಧ್ಯಮ ಕಡ್ಡಾಯಗೊಳಿಸಿ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆಯ ಶಿಕ್ಷಣಕ್ಕೆ ಸೌಲಭ್ಯಗಳನ್ನೊದಗಿಸಿ ಆಕರ್ಷಕಗೊಳಿಸಿದರೆ, ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಅನ್ನು ಸಮರ್ಥವಾಗಿ ಕಲಿಸುವಂತಾಗಿಸಿದರೆ ಖಾಸಗಿ ಶಿಕ್ಷಣಸಂಸ್ಥೆಗಳ ಆರ್ಭಟ ತಾನೇತಾನಾಗಿ ಕಡಿಮೆಯಾಗುತ್ತದೆ.

-ಡಾ.ಎಂ.ಕೆಂಪಮ್ಮ ಕಾರ್ಕಹಳ್ಳಿ

ಪ್ರತಿಯೊಂದು ಭಾಷೆಯೂ ಆಯಾ ಜನಸಮೂಹದ ಬದುಕಿನ ಕೈಗನ್ನಡಿ. ಅವರ ಸಂಸ್ಕೃತಿ ಪರಂಪರೆಯ ಸಂಕೇತ. ಭಾಷೆಯೊಂದನ್ನು ಕಡೆಗಣಿಸುವುದರಿಂದ ಸಂಸ್ಕೃತಿ ಪರಂಪರೆಯ ಮೂಲಸತ್ವವನ್ನು ಕಳೆದುಕೊಳ್ಳುತ್ತಿದ್ದೇವೆಂಬ ಅರಿವು ಜಾಗತೀಕರಣದ ಮಹಾಪ್ರವಾಹದಲ್ಲಿ ಕೊಚ್ಚಿಹೋಗುತ್ತಿದೆ. ಭಾಷೆ, ಸಂಸ್ಕೃತಿ ಎಲ್ಲಾಕಾಲಕ್ಕೂ ಅಸ್ತಿತ್ವದಲ್ಲಿರಬೇಕಾದರೆ ಅದನ್ನು ನುಡಿದು, ಅನುಭವಿಸಿ, ಅನುಸರಿಸಿ ಬದುಕುವ ಪ್ರತಿಯೊಬ್ಬ, ಅವನಿಂದ ಸ್ಥಾಪಿತವಾಗಿರುವ ಸಂಸ್ಥೆ, ಸಂಘಟನೆ, ಅಧಿಕಾರ ಕ್ಷೇತ್ರಗಳೆಲ್ಲವೂ ಒಗ್ಗೂಡಿ ಶ್ರಮಿಸಬೇಕಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಹೊಣೆಗಾರಿಕೆಯನ್ನರಿತು ನಡೆದರೆ ಈ ನಾಡಿನ ಬಹುಪಾಲು ಸಮಸ್ಯೆಗಳು ಮಂಜಿನಂತೆ ಕರಗಿಹೋಗುತ್ತವೆ.

ಅಖಂಡ ಕರ್ನಾಟಕ ರಚನೆಯಾಗಿ 6 ದಶಕಗಳಾದವು. ಇಂದಿನವರೆಗೂ ‘ಕರ್ನಾಟಕ-ಕನ್ನಡಿಗ-ಕನ್ನಡ’ ಅನೇಕ ಸವಾಲುಗಳನ್ನೆದುರಿಸುತ್ತಾ ಬಂದಿವೆ. ನಾವು ಅಖಂಡ ಕರ್ನಾಟಕ ಪರಿಕಲ್ಪನೆಯಲ್ಲಿ ಭೇದವೆಣಿಸುತ್ತಿದ್ದೇವೆ. ಹೈದರಾಬಾದ್ ಕರ್ನಾಟಕ, ಹಳೇಮೈಸೂರು, ಉತ್ತರಕರ್ನಾಟಕ, ದಕ್ಷಿಣ ಕರ್ನಾಟಕ ಮುಂತಾದ ಪ್ರಭೇದಗಳು, ಕೊಡಗು, ಬೆಳಗಾಂ ಪತ್ಯೇಕತೆಯ ಕೂಗು, ಕನ್ನಡಿಗರ ಒಗ್ಗಟ್ಟಿನ ಬಿರುಕುಗಳಾಗಿವೆ. ಕೃಷ್ಣ, ಕಾವೇರಿ, ಮಹದಾಯಿ ನೀರಿನ ಸಮಸ್ಯೆ, ರೈತರ ಸಮಸ್ಯೆ, ಬೆಳಗಾವಿ, ಕಾಸರಗೋಡು ಗಡಿ ಸಮಸ್ಯೆಗಳು ಯಾವುದೇ ಒಂದು ಭಾಗದ ಸಮಸ್ಯೆಯೆಂದು ಕಂಡೂ ಕಾಣದಂತೆ ಕೇಳಿಯೂ ಕೇಳಿಸದಂತೆ ಹೃದಯಶೂನ್ಯರಾಗಿ ನಡೆದುಕೊಳ್ಳುವ ಮನೋಭಾವ ತೊರೆದು ಸಮಸ್ತ ಕರ್ನಾಟಕದ ಕನ್ನಡಿಗರ ನೋವುಗಳೆಂಬ ಒಗ್ಗಟ್ಟಿನ ಬಲಪ್ರದರ್ಶನವಾಗಬೇಕು.

ಇಂದು ಕರ್ನಾಟಕ ಕೇವಲ ಕನ್ನಡಿಗರದ್ದಲ್ಲ. ಬಹುಭಾಷೆಗಳು, ಬಹುಸಂಸ್ಕೃತಿ, ಜನಾಂಗ ಜಾತಿ-ಧರ್ಮಗಳಿವೆ, ‘ಪರಕೀಯ ಮೌಲ್ಯವ್ಯವಸ್ಥೆಯೊಂದು ಪರಾಜಿತ ಸಮುದಾಯಗಳ ಮೇಲೆ ಹೇಗೆ ಹಲ್ಲೆ ಮಾಡಿದವೆಂಬುದಕ್ಕೆ’ ಘಾನಾದ ಕೋಫಿಅವನೂರ್ ಕವಿ ತಮ್ಮ ಕವಿತೆಯಲ್ಲಿ ಹೇಳಿದ ಕತೆ ಪ್ರಸ್ತುತ ನಮ್ಮ ರಾಜ್ಯಕ್ಕೆ ಅನ್ವಯವಾಗುವುದು. ‘ಮರಿಹಕ್ಕಿಯೊಂದು ತನ್ನ ಕತೆಯನ್ನು ಹೀಗೆ ಹೇಳುತ್ತದೆ. ತಾನು ಇತರ ಮರಿಹಕ್ಕಿ, ತಾಯಿಹಕ್ಕಿ ಜೊತೆಯಾಗಿ ಗೂಡಿನಲ್ಲಿ ಸುಖದಿಂದಿರುವಾಗ ಬಿಳಿಕಾಗೆಯೊಂದು ರಾತ್ರಿ ಚಳಿಯಾಗುತ್ತಿದೆಂಬ ನೆಪದಿಂದ ಕೊಕ್ಕನ್ನು ಗೂಡಿನೊಳಗಿರಿಸಲು ಅನುಮತಿ ಬೇಡಿ, ಬಳಿಕ ನಿಧಾನಕ್ಕೆ ಇಡೀ ಶರೀರವನ್ನು ಒಳತೂರಿಸಿ, ಗೂಡು ತನ್ನದಾಗಿಸಿ ತಾಯಿ, ಮರಿಹಕ್ಕಿಗಳನ್ನು ಹೊರಹಾಕಿ ಗಾಳಿಪಾಲು ಮಾಡುತ್ತದೆ’. ಹಾಗೆ ಕರ್ನಾಟಕದಲ್ಲಿ ಹೊರಗಿನಿಂದ ಬಂದು ಶಾಶ್ವತ ನೆಲೆಕಂಡುಕೊಳ್ಳುತ್ತಿರುವ ಅನ್ಯಭಾಷಿಗರ ಮುಂದೆ ಕನ್ನಡಿಗ ತನ್ನ ನಾಡಿನಲ್ಲಿ ‘ಸ್ಥಳೀಯ ನಿರಾಶ್ರಿತ’ನಾಗುತ್ತಾನೆಂಬ ಭಾವನೆ ದಟ್ಟವಾಗುತ್ತಿದೆ. ಹೀಗೆ ಬೀದಿಪಾಲಾಗುವ ಮುನ್ನ ಕನ್ನಡಿಗರು ಎಚ್ಚೆತ್ತುಕೊಳ್ಳಲೇಬೇಕಾಗಿದೆ.

ಪ್ರತಿಯೊಂದು ಕ್ಷೇತ್ರಗಳಲ್ಲಿ ಭಾರತದ ಉತ್ತರ-ದಕ್ಷಿಣದ ರಾಜ್ಯಗಳ ಅನ್ಯಭಾಷಿಕರದೇ ಪಾರಮ್ಯ. ಎಲ್ಲಾ ಆಡಳಿತ, ಇಲಾಖೆಗಳಲ್ಲಿ ಇಂಗ್ಲೀಷ್‍ನದ್ದೇ ಮೇಲುಗೈ.

ಜ್ಞಾನದ ಭಾಷೆಯಾದ ಕನ್ನಡ ಅನ್ನದ ಭಾಷೆಯಾಗಿಲ್ಲ. ಕರ್ನಾಟಕದಲ್ಲಿ ಆಳಿಹೋದ ಸರ್ಕಾರ, ಮಂತ್ರಿ, ಅಧಿಕಾರವರ್ಗಗಳೆಷ್ಟೋ ಆದರೆ ಭರವಸೆಗಳು ಭರವಸೆಗಳಾಗೇ ಉಳಿದಿವೆ. ತನಗೆ ಸಕಲವನ್ನು ಕೊಟ್ಟು ಪೋಷಿಸಿ ಬೆಳೆಸಿದ ಭಾಷೆಯನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ. ಇದು ಕೇವಲ ಸರ್ಕಾರ, ಕಾನೂನುಗಳಿಂದಷ್ಟೇ ಸಾಧ್ಯವಿಲ್ಲ. ಕರ್ನಾಟಕದ ನೆಲ-ಜಲ, ಗಾಳಿಯನ್ನು ಅನುಭವಿಸುತ್ತಿರುವವರೆಲ್ಲ ಆ ನೆಲದ ಭಾಷೆ, ಸಂಸ್ಕೃತಿಯನ್ನು ಪ್ರೀತಿಸುವುದು, ಅವಲಂಬಿಸುವುದು ನ್ಯಾಯ, ಧರ್ಮ. ‘ತುಳಿದು ಬಾಳುವುದಕ್ಕಿಂತ ತಿಳಿದು ಬಾಳುವುದು ಮುಖ್ಯವಲ್ಲವೇ?

ಕನ್ನಡವು ಶ್ರೀಮಂತವಾದ ಸಾಹಿತ್ಯ ಸಂಪತ್ತುಳ್ಳ ಭಾಷೆಯಾಗಿದ್ದರೂ, ಇಂದಿಗೂ ಸಂಪೂರ್ಣ ಆಡಳಿತ, ನ್ಯಾಯಾಲಯ, ಶಿಕ್ಷಣದ ಭಾಷೆಯಾಗುವಲ್ಲಿ ಸೋಲುತ್ತಿದೆ. ಸ್ಥಳೀಯವಾಗಿ ಅರ್ಹರಾದ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ. ಪ್ರತಿಯೊಂದು ಕ್ಷೇತ್ರಗಳಲ್ಲಿ ಭಾರತದ ಉತ್ತರ-ದಕ್ಷಿಣದ ರಾಜ್ಯಗಳ ಅನ್ಯಭಾಷಿಕರದೇ ಪಾರಮ್ಯ. ಎಲ್ಲಾ ಆಡಳಿತ, ಇಲಾಖೆಗಳಲ್ಲಿ ಇಂಗ್ಲೀಷ್‍ನದ್ದೇ ಮೇಲುಗೈ. ‘ಸಾಯುತಿದೆ ನಿಮ್ಮ ನುಡಿ, ಓ ಕನ್ನಡದ ಕಂದರಿರ’ ಎಂಬ ಎಚ್ಚರಿಕೆಯನ್ನು ಕುವೆಂಪು ನೀಡಿ ಮುಕ್ಕಾಲು ಶತಮಾನವೇ ಕಳೆಯುತ್ತಿದೆ! ಈ ಕೂಗೂ ಹಿಂದೆಂದಿಗಿಂತಲೂ ಈಗ ನಿತ್ಯಸತ್ಯವಾಗುವ ಆತಂಕ ಎದುರಾಗಿದೆ.

ನಾಡಿನ ಜನತೆಯ ಪರಿಸರದ ಭಾಷೆಯಾದ ಕನ್ನಡವೇ ಶಿಕ್ಷಣ ಮಾಧ್ಯಮವಾಗಬೇಕೆಂಬ ಕೂಗು ಹಿಂದಿನಿಂದಲೂ ಇದೆ. ಮಗುವಿನ ಕಲಿಕೆ ಮುಖ್ಯವಾಗಬೇಕೇ ಹೊರತು ಭಾಷೆಯ ಹೆಚ್ಚುಗಾರಿಕೆಯಲ್ಲ. ಭಾಷಾ ವಿಜ್ಞಾನಿಗಳು, ಮನಶಾಸ್ತ್ರಜ್ಞರ ತತ್ವಚಿಂತನೆ ಪ್ರಕಾರ, ಮಗುವಿನ ಪರಿಸರದ ಭಾಷೆಯೇ ಶಿಕ್ಷಣ ಮಾಧ್ಯಮವಾದರೆ ಸೃಜನಶೀಲತೆ ಬೆಳೆಯುತ್ತದೆ. ಇಂಗ್ಲೀಷ್ ಮಾಧ್ಯಮದಲ್ಲಿ ಓದಿದರೆ ಉದ್ಯೋಗ ಖಚಿತವೆಂಬ ಪೋಷಕರ ನಂಬಿಕೆ ಅರ್ಧಸತ್ಯ. ಒಬ್ಬ ಪದವೀಧರ ಉದ್ಯೋಗವನ್ನು ಪಡೆಯುವಲ್ಲಿ ಹಲವು ಮಾನದಂಡಗಳಿರುತ್ತವೆ. ಸೃಜನಶೀಲತೆ, ನೈಪುಣ್ಯ, ಕಾರ್ಯಕ್ಷಮತೆ, ಪ್ರಾಮಾಣಿಕತೆ, ಸಂವಹನ ಮೊದಲಾದವುಗಳಲ್ಲಿ ಇಂಗ್ಲಿಷ್‍ಅನ್ನು ಚೆನ್ನಾಗಿ ಬಳಸುವುದು ಒಂದು ಮಾನದಂಡವಷ್ಟೆ ಹೊರತು ಅದೇ ಮುಖ್ಯವಲ್ಲವೆಂಬ ಸಂಗತಿ ಜನರಿಗೆ ತಿಳಿಯಬೇಕು. ಆಂಗ್ಲ ಮಾಧ್ಯಮದಲ್ಲಿ ಕಲಿತು ಪದವಿ ಪಡೆದವರೆಲ್ಲ ಉದ್ಯೋಗಿಗಳಾಗಿಲ್ಲ, ಹಾಗೆ ಕನ್ನಡ ಮಾಧ್ಯಮದಲ್ಲಿ ಕಲಿತವರೆಲ್ಲ ನಿರುದ್ಯೋಗಿಗಳಲ್ಲವೆಂಬುದು ತಿಳಿದಿರಬೇಕು.

ಸಂಪೂರ್ಣ ಇಂಗ್ಲೀಷ್‍ಮಯವಾಗಿ ವ್ಯಾಪಾರೀಕರಣಗೊಂಡು ದುಬಾರಿಯಾಗಿವೆ. ಹೀಗೆ ತೆರೆಮರೆಯಲ್ಲಿ ಬಚ್ಚಿಟ್ಟು ಇಂಗ್ಲಿಷ್ ಪ್ರಾಧ್ಯಾನ್ಯ ಎತ್ತಿಹಿಡಿಯುತ್ತಿದ್ದ ಸಂಸ್ಥೆಗಳಿಗೆ 2014ರಲ್ಲಿ ಸುಪ್ರಿಂಕೋರ್ಟ್‍ನ ‘ಮಗು ಯಾವ ಮಾಧ್ಯಮದಲ್ಲಿ ಕಲಿಯಬೇಕೆಂಬುದನ್ನು ಪೋಷಕರೇ ನಿರ್ಧರಿಸಬೇಕು.

ಸರ್ಕಾರಿ ಮತ್ತು ಅನುದಾನಿತ ಖಾಸಗೀ ಶಿಕ್ಷಣಸಂಸ್ಥೆಗಳಷ್ಟೇ ಸರ್ಕಾರದ ಆದೇಶಗಳನ್ನು ಪಾಲಿಸುತ್ತ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿವೆ. ಉಳಿದಂತೆ ನಾಯಿಕೊಡೆಗಳಂತೆ ಹೆಚ್ಚುತ್ತಿರುವ ಖಾಸಗೀ ಶಿಕ್ಷಣಸಂಸ್ಥೆಗಳ ಮೇಲೆ ಸರ್ಕಾರದ ಯಾವ ಹಿಡಿತವೂ ಇಲ್ಲ್ಲ. ತಮ್ಮ ಹಣ ಅಧಿಕಾರ ಬಳಸಿ ಕನ್ನಡ ಮಾಧ್ಯಮದಲ್ಲಿ ನಡೆಸುತ್ತೇವೆಂದು ಅನುಮತಿ ಪಡೆದು ಸಂಪೂರ್ಣ ಇಂಗ್ಲೀಷ್‍ಮಯವಾಗಿ ವ್ಯಾಪಾರೀಕರಣಗೊಂಡು ದುಬಾರಿಯಾಗಿವೆ. ಹೀಗೆ ತೆರೆಮರೆಯಲ್ಲಿ ಬಚ್ಚಿಟ್ಟು ಇಂಗ್ಲಿಷ್ ಪ್ರಾಧ್ಯಾನ್ಯ ಎತ್ತಿಹಿಡಿಯುತ್ತಿದ್ದ ಸಂಸ್ಥೆಗಳಿಗೆ 2014ರಲ್ಲಿ ಸುಪ್ರಿಂಕೋರ್ಟ್‍ನ ‘ಮಗು ಯಾವ ಮಾಧ್ಯಮದಲ್ಲಿ ಕಲಿಯಬೇಕೆಂಬುದನ್ನು ಪೋಷಕರೇ ನಿರ್ಧರಿಸಬೇಕು. ಸರ್ಕಾರ ಹೊರೆ ಏರಬಾರದು’ ಎಂಬ ತೀರ್ಪು ಆನೆಬಲ ನೀಡಿತು.

ರಾಷ್ಟ್ರದಾದ್ಯಂತ ಸಿಬಿಸಿಎಸ್ ಪದ್ಧತಿಯನ್ನು ಯುಜಿಸಿ ಜಾರಿಗೊಳಿಸುತ್ತಿದ್ದು ಪ್ರತೀಪಠ್ಯದ ವಾರಕ್ಕೆ 4 ಗಂಟೆ ಬೋಧನೆಗೆ ಕತ್ತರಿ ಬೀಳುತ್ತಿದೆ. ಪ್ರತಿ ವಿದ್ಯಾರ್ಥಿ ದಿನಕ್ಕೆ 5 ಗಂಟೆ ಕಲಿಯುತ್ತಿದ್ದು, ಪಠ್ಯೇತರ ಕಲಿಕೆಗೆ ಅವಕಾಶವಿರಲಿಲ್ಲವೆಂದು, ವಿದ್ಯಾರ್ಥಿಗಳಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಬೇಕೆಂಬ ಉದ್ದೇಶದಿಂದ ಸಿಬಿಸಿಎಸ್‍ನಲ್ಲಿ 4 ಗಂಟೆ ಅವಧಿಗಿಳಿಸಿದಾಗ ಆ 1 ಗಂಟೆ ಕಡಿತವನ್ನು ಐಚ್ಚಿಕ ವಿಷಯಗಳನ್ನು ಬಿಟ್ಟು ಭಾಷಾಪಠ್ಯಗಳಲ್ಲಿ ಕಡಿತಮಾಡಿದ್ದರಿಂದ ಕನ್ನಡ ಭಾಷಾ ಕಾರ್ಯಭಾರ ಕಡಿಮೆಯಾಯಿತು. ಹಾಗೆ ಸಿಬಿಸಿಎಸ್ ಮತ್ತೊಂದು ನಿಯಮ ಹೇಳುವಂತೆ ವಿದ್ಯಾರ್ಥಿಗೆ ಕಲಿಯುವ ಪಠ್ಯಗಳನ್ನು ಕಡ್ಡಾಯಗೊಳಿಸುವ ಬದಲು ಆಯ್ಕೆ ನೀಡಲಾಗಿದೆ. ಇದೇ ಆಯ್ಕೆ ಮಾಡಿಕೊಳ್ಳಬೇಕೆಂಬ ನಿರ್ಬಂಧ ಹಾಕುವಂತಿಲ್ಲ. ಕಡ್ಡಾಯವಾಗಿದ್ದ ಕನ್ನಡ ಈಗ ಆಯ್ಕೆ ವಿಷಯವಾದಾಗ ಸಹಜವಾಗಿ ವಿದ್ಯಾರ್ಥಿಗಳು ಇಂಗ್ಲೀಷ್ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಎಲ್ಲಾ ಸವಾಲುಗಳು ಕನ್ನಡಕ್ಕೆ ಎದುರಾಗುತ್ತಿರವಾಗ ವಿಶ್ವವಿದ್ಯಾನಿಲಯಗಳು, ಕನ್ನಡ ಅಧ್ಯಯನಮಂಡಳಿಗಳು, ಬೋಧಕರು, ವಿದ್ವಾಂಸರು ಎಚ್ಚೆತ್ತುಕೊಳ್ಳಬೇಕಾಗಿದೆ. ಕನ್ನಡ ಭಾಷೆಯನ್ನು ವಿದ್ಯಾರ್ಥಿಗಳು ತಾವೇ ಸ್ವ-ಇಚ್ಚೆಯಿಂದ ಆಯ್ಕೆಮಾಡಿಕೊಂಡು ಓದುವ, ಉದ್ಯೋಗ ಪಡೆಯಲು ಹೆಚ್ಚು ನೆರವಾಗುವಂತೆ ಮಾಡಬೇಕಾಗಿದೆ.

ಇಂದಿನ ಶಿಕ್ಷಣತಂತ್ರಜ್ಞಾನಕ್ಕೆ ತಕ್ಕಂತೆ ಕನ್ನಡವನ್ನು ರೂಪಿಸಬೇಕು. ಕನ್ನಡ ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ನೌಕರಿ ಕೊಡಿಸುವಲ್ಲಿ, ಬದುಕು ರೂಪಿಸಲು ನೆರವಾಗುವಂತೆ ಪಠ್ಯಗಳನ್ನು ಪುನರ್‍ರೂಪಿಸಬೇಕಾಗಿದೆ. ವಿದ್ಯಾರ್ಥಿ ಸ್ನೇಹಿಯಾದ, ಆಧುನಿಕ ಸವಾಲುಗಳನ್ನು ಎದುರಿಸಬಲ್ಲ ಪಠ್ಯ ವಿಷಯಗಳನ್ನು ಅಳವಡಿಸಿದರೆ ವಿದ್ಯಾರ್ಥಿಗಳು ಆಕರ್ಷಿತರಾಗುತ್ತಾರೆ.

‘ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯದೆ ನನ್ನ ಮಾತೃಭಾಷೆಯಾದ ಗುಜರಾತಿಯಲ್ಲಿ ಶಿಕ್ಷಣ ಪಡೆದಿದ್ದರೆ ದೇಶಕ್ಕೆ ಇನ್ನೂ ಮಿಗಿಲಾದ ಸೇವೆ ಸಲ್ಲಿಸಬಹುದಿತ್ತು! ನಮ್ಮ ಶಿಕ್ಷಣ ಪದ್ಧತಿ ಪಾಪದಲ್ಲಿ ಪರಿಪೋಷಿತವಾಗಿದೆ!’ ಎಂಬ ಮಾತುಗಳನ್ನು ಅರ್ಥಮಾಡಿಕೊಳ್ಳಬೇಕಾಗಿದೆ.

ಮುಂದುವರಿದ 10 ರಾಷ್ಟ್ರಗಳ ಪೈಕಿ 9 ರಾಷ್ಟ್ರಗಳಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ ಜಾರಿಯಲ್ಲಿದೆಯೇ ಹೊರತು ಇಂಗ್ಲೀಷ್‍ನಲ್ಲಿ ಅಲ್ಲ. ಆ ದೇಶಗಳು ತಂತ್ರಜ್ಞಾನದಲ್ಲಿ ಮುಂದುವರಿದಿಲ್ಲವೆ? ಹೀಗಾಗಿ ಇಂಗ್ಲೀಷ್ ಒಂದು ಭಾಷೆಯಾಗಿ ಇರಲಿ ಮಾಧ್ಯಮವಾಗಿ ಅಗತ್ಯವಿಲ್ಲ ಎಂಬುದು ತಜ್ಞರ ಅಭಿಪ್ರಾಯ. ರಾಷ್ಟ್ರಪಿತನ ವ್ಯಥೆಯ ಮಾತು ಇದನ್ನೇ ಹೇಳುತ್ತದೆ. ‘ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯದೆ ನನ್ನ ಮಾತೃಭಾಷೆಯಾದ ಗುಜರಾತಿಯಲ್ಲಿ ಶಿಕ್ಷಣ ಪಡೆದಿದ್ದರೆ ದೇಶಕ್ಕೆ ಇನ್ನೂ ಮಿಗಿಲಾದ ಸೇವೆ ಸಲ್ಲಿಸಬಹುದಿತ್ತು! ನಮ್ಮ ಶಿಕ್ಷಣ ಪದ್ಧತಿ ಪಾಪದಲ್ಲಿ ಪರಿಪೋಷಿತವಾಗಿದೆ!’ ಎಂಬ ಮಾತುಗಳನ್ನು ಅರ್ಥಮಾಡಿಕೊಳ್ಳಬೇಕಾಗಿದೆ.

2014ರಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಬಗ್ಗೆಯಾಗಲಿ ಅದೇ ವರ್ಷ ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆಯಿಂದ ಐಚ್ಛಿಕ ಕನ್ನಡ ಪತ್ರಿಕೆಯನ್ನು ಕೈಬಿಟ್ಟಾಗಲಾಗಲೀ ನಮ್ಮ ಯಾವ ವಿ.ವಿ.ಗಳು, ಅಧ್ಯಾಪಕರು, ಸಂಘಟನೆಗಳು ಚಕಾರವೆತ್ತಲಿಲ್ಲ. ಅದರಿಂದ ಕನ್ನಡ ಐಚ್ಚಿಕ ವಿದ್ಯಾರ್ಥಿಗಳಿಗೆ ಇದ್ದ ಬಾಗಿಲು ಮುಚ್ಚಿದ್ದರ ಪರಿಣಾಮ ಮುಂದೆ ಬಿ.ಎ. ಓದುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿತು. ಕನ್ನಡಪರ ಸಂಘಟನೆಗಳು ಹೋರಾಟದ ರೀತಿನೀತಿಗಳನ್ನು ಬದಲಾಯಿಸಿಕೊಂಡು ಸಂಘಟನಾತ್ಮಕ ಶಿಸ್ತುಬದ್ಧ ಹೋರಾಟ ನಡೆಸಬೇಕಾಗಿದೆ. ಗಟ್ಟಿಯಾದ ನಾಯಕತ್ವವಿಲ್ಲದೆ ಸರ್ಕಾರದ ವಕ್ತಾರರಂತಾಡುವುದನ್ನು ಬಿಟ್ಟು ತಮ್ಮೊಳಗಿನ ಬಿರುಕುಗಳನ್ನು ಮುಚ್ಚಬೇಕು. ವೈರುಧ್ಯಗಳಾಚೆಗೆ ಕನ್ನಡಿಗರು ಇಂದಿನ ಮೀಡಿಯಗಳಲ್ಲಿ ಕನ್ನಡಪ್ರಜ್ಞೆಯನ್ನು ಹರಡುತ್ತಿದ್ದಾರೆ. ಅವರ ಕಾಳಜಿಗೆ ನೀರೆರೆದು ಗಟ್ಟಿಗೊಳಿಸಬೇಕಾಗಿದೆ.

ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದಾಗ ‘ರಾಜ್ಯಕ್ಕೆ ಸಂಬಂಧಿಸಿದ ಕಡತಗಳು ಕನ್ನಡದಲ್ಲಿಲ್ಲವಾದರೆ ಕಣ್ಣೆತ್ತಿಯೂ ನೋಡುವುದಿಲ್ಲ’ವೆಂದು ಆಜ್ಞಾಪಿಸಿದ್ದಾರೆ. ಸಮಸ್ತ ಕನ್ನಡಿಗರನ್ನು ಆಶಾವಾದಿಗಳನ್ನಾಗಿ ಮಾಡಿದ್ದಾರೆ. ಆದರೆ ಪರಿವರ್ತನೆಯನ್ನು ಸರ್ಕಾರ ತಳಮಟ್ಟದಿಂದಲೇ ಮಾಡಬೇಕು. ಕನಿಷ್ಠ 1-10ನೇ ತರಗತಿವರೆಗೆ ಕನ್ನಡ ಮಾಧ್ಯಮ ಕಡ್ಡಾಯಗೊಳಿಸಿ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆಯ ಶಿಕ್ಷಣಕ್ಕೆ ಸೌಲಭ್ಯನ್ನೊದಗಿಸಿ ಆಕರ್ಷಕಗೊಳಿಸಿದರೆ, ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‍ಅನ್ನು ಸಮರ್ಥವಾಗಿ ಕಲಿಸುವಂತಾಗಿಸಿದರೆ ಖಾಸಗಿ ಶಿಕ್ಷಣಸಂಸ್ಥೆಗಳ ಆರ್ಭಟ ತಾನೇತಾನಾಗಿ ಕಡಿಮೆಯಾಗುತ್ತದೆ. ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ, ಭಾಷೆಯಾಗಿ ಇಂಗ್ಲೀಷ್‍ನ್ನು ಬಲ್ಲ ಕನ್ನಡಿಗರೇ ಬಹುಸಂಖ್ಯೆಯಲ್ಲಿದ್ದಾಗ ಆಡಳಿತ, ಇಲಾಖೆಗಳು ಕನ್ನಡಮಯವಾಗುವುದು. ಆಗ ಕನ್ನಡದಲ್ಲಿ ಕಡತಗಳಿರಬೇಕೆಂಬ ಆಜ್ಞೆ ಹೊರಡಿಸಬೇಕಿಲ್ಲ. ಇವಿಷ್ಟು ಅಗತ್ಯವಾಗಿ ಜಾರಿಯಾಗದ ಹೊರತು ನಮ್ಮ ಯಾವ ಭಾಷಣ, ಬರಹ, ಹೋರಾಟಗಳೆಲ್ಲವೂ ವ್ಯರ್ಥವೇ.

ಸರ್ಕಾರ ಈ ನಿಟ್ಟಿನಲ್ಲಿ ದಿಟ್ಟತನ ಮೆರೆದರೆ ಕನ್ನಡದ ಸಮಸ್ಯೆಗಳು ಹಂತಹಂತವಾಗಿ ಬಗೆಹರಿಯುತ್ತವೆ. ತಳಮಟ್ಟದಿಂದ ಸುಧಾರಣೆಗೆ ಬೇಕಾದ ಮಾರ್ಗಸೂಚಿ, ಶಿಫಾರಸ್ಸುಗಳನ್ನು ಸಿದ್ಧಪಡಿಸುವಲ್ಲಿ ಸಂಬಂಧಪಟ್ಟವರು ಕಾರ್ಯೋನ್ಮುಖರಾಗಬೇಕು. ಮತದಾರ ಪ್ರಜೆಗಳು ಪಕ್ಷನಿಷ್ಠೆ ಮರೆತು ನಾಡಿನ ಸರ್ವತೋಮುಖ ಪ್ರಗತಿಗೆ ಬದ್ಧತೆಯಿಂದ ಕಾರ್ಯನಿರ್ವಹಿಸುವಂಥ ಜನಪ್ರತಿನಿಧಿಗಳನ್ನು ಆಯ್ಕೆಮಾಡುವ ನಿಷ್ಠೆ ತೋರಿದರೆ ಕನ್ನಡಕ್ಕೆ ಉತ್ತಮ ಭವಿಷ್ಯವಿರುತ್ತದೆ.

ಕನ್ನಡದ ಈ ದುರ್ಗತಿಗೆ ಹೊರಗಿನವರಿಗಿಂತಲೂ ಕನ್ನಡಿಗರೇ ಕಾರಣ. ಅನನ್ಯತೆ, ಸ್ವಂತಿಕೆ, ಆತ್ಮಸ್ಥೈರ್ಯ ತಂದುಕೊಟ್ಟ ನಮ್ಮ ಭಾಷೆ, ಸಂಸ್ಕೃತಿ ಬಳಸಿ ಬೆಳೆಸಬೇಕಾಗಿದ್ದು ಬೇರ್ಯಾರಿಗೋ ಅಲ್ಲ ನಮಗಾಗಿ, ಸಮಸ್ತ ಕರ್ನಾಟಕದ ಕನ್ನಡಿಗರ ಉದ್ದಾರಕ್ಕಾಗಿ.

*ಲೇಖಕರು, ಮಂಡ್ಯದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ (ಸ್ವಾಯತ್ತ) ಕನ್ನಡ ಸಹಾಯಕ ಪ್ರಾಧ್ಯಾಪಕರು

Leave a Reply

Your email address will not be published.