ಹೇಳುವುದು ಒಂದು ಮಾಡುವುದು ಮತ್ತೊಂದು

-ಮಂಗ್ಳೂರ ವಿಜಯ

1995ರವರೆಗೆ ಆರೆಸ್ಸೆಸ್ ಮತ್ತು ಅದರ ರಾಜಕೀಯ ಪಕ್ಷ ಬಿಜೆಪಿಗೆ ಉದ್ಯಮಿಗಳ-ದೊಡ್ಡ ವ್ಯಾಪಾರಸ್ಥರ ಬೆಂಬಲ ಇದೆ ಎಂಬುದು ಎಲ್ಲರಿಗೆ ಗೊತ್ತಾಗಿತ್ತು. ಆದರೆ, ನಂತರದ ವರ್ಷಗಳಲ್ಲಿ ಅದು ತನ್ನ ಅಜೆಂಡಾ ಈಡೇರಿಕೆಗೆ ಭ್ರಷ್ಟಾಚಾರವನ್ನು ಬೆಂಬಲಿಸಿತು; ಚುನಾಯಿತ ಶಾಸಕರು ಗಳನ್ನು ಖರೀದಿಸಲು, ಸರ್ಕಾರಗಳನ್ನು ಉರುಳಿಸಲು ಬಿಜೆಪಿಗೆ ಕುಮ್ಮಕ್ಕು ನೀಡಿತು ಎಂಬ ಆರೋಪವಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪಿಸಿದವರು ನಾಗಪುರದಲ್ಲಿ ವೈದ್ಯರಾಗಿದ್ದ ಕೇಶವ ಬಲಿರಾಮ್ ಹೆಡಗೆವಾರ್. ಇವರಿಗೆ ಆದರ್ಶ ಹಿಂದೂ ಮಹಾಸಭಾ ಸಂಘಟನೆಯ ಬಿ.ಎಸ್.ಮೂಂಜೆ. ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಕಾಂಗ್ರೆಸ್‍ನಲ್ಲಿ ಇದ್ದ ಬಾಲಗಂಗಾಧರ ತಿಲಕ್ ಬಣಕ್ಕೆ ಸೇರಿದವರು ಇವರು.

ಹೆಡಗೆವಾರ್, ವೈದ್ಯಕೀಯ ಶಿಕ್ಷಣ ಪಡೆಯಲು ಕಲಕತ್ತಾಕ್ಕೆ ಹೋಗುವುದಕ್ಕೆ ನೆರವಾಗಿದ್ದವರೂ ಮೂಂಜೆ ಅವರೇ. ಇವರ ಸೂಚನೆ ಮೇರೆಗೆ ಹೆಡಗೆವಾರ್ ಅಲ್ಲಿ ಅನುಶೀಲನ ಸಮಿತಿ ಸದಸ್ಯರಾಗಿ, ರಹಸ್ಯ ಕ್ರಾಂತಿಕಾರಿ ಚಟುವಟಿಕೆಗಳನ್ನು ನಡೆಸುವ ಕೌಶಲ್ಯ ಕಲಿತವರು. ಇವರು ಶಿಕ್ಷಣ ಮುಗಿಸಿ ಮರಳಿ, ಕ್ರಾಂತಿಕಾರಿ ಪಾರ್ಟಿ ರಚಿಸಿದರು. ಅದೇ ಹೊತ್ತಿನಲ್ಲಿ ವಿನಾಯಕ ದಾಮೋದರ ಸಾವರ್ಕರ್ ಅವರ ‘ಹಿಂದುತ್ವ’ ಎಂಬ ಪುಸ್ತಕ ಓದಿದರು; ಅವರನ್ನು ರತ್ನಾಗಿರಿ ಜೈಲಿನಲ್ಲಿ 1925ರಲ್ಲಿ ಭೇಟಿ ಕೂಡ ಮಾಡಿದರು. ಪರಿಣಾಮ ಕ್ರಾಂತಿಕಾರಿ ಪಾರ್ಟಿ ವಿಷಯ ಅಲ್ಲಿಗೇ ಬಿಟ್ಟು, ಆರೆಸ್ಸೆಸ್ ಹುಟ್ಟು ಹಾಕಿದರು.

ಹೆಡಗೆವಾರ್ ನಂತರ ಆರೆಸ್ಸೆಸ್ ಪ್ರಮುಖರಾಗಿದ್ದು ಎಂ.ಎಸ್.ಗೋಳ್‍ವಲ್ಕರ್. ‘ಭಾರತೀಯ ಸನಾತನ ಪರಂಪರೆ’ಯನ್ನು ಸಂರಕ್ಷಿಸುವುದು ಮತ್ತು ವಸುಧೈವ ಕುಟುಂಬಕಮ್ ತತ್ವವನ್ನು ಸಾಕಾರಗೊಳಿಸುವುದು ಆರೆಸ್ಸೆಸ್‍ನ ಧ್ಯೇಯ. ಸಾರ್ವತ್ರಿಕ ಉನ್ನತಿಯನ್ನು ಮತ್ತು ಶಾಂತಿ-ಸಮೃದ್ಧಿಗಳನ್ನು ಸಾಧಿಸುವುದೂ ಈ ಧ್ಯೇಯದಲ್ಲಿ ಸೇರಿದೆ. ‘ಸನಾತನ ಪರಂಪರೆ’ ಎಂದರೇನು? ಎಂಬುದನ್ನು ಇದುವರೆಗೂ ಆರೆಸ್ಸೆಸ್ ವ್ಯಾಖ್ಯಾನಿಸಿಲ್ಲ. ಇನ್ನು ‘ವಸುಧೈವ ಕುಟುಂಬಕಮ್’ ತತ್ವವನ್ನು ನನಸು ಮಾಡಲು ಅದು ಪಾರದರ್ಶಕ, ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿರುವುದು ಎಲ್ಲೂ ಕಂಡು ಬರುವುದಿಲ್ಲ.

ಗೋಳ್‍ವಲ್ಕರ್ ಅವರ ಒಂದು ಪುಸ್ತಕ ‘ವಿಚಾರಧಾರಾ’(ಸಿದ್ಧಾಂತ). ಇದರಲ್ಲಿ ಮಂಡಿಸಲಾಗಿರುವ ಕೆಲವೊಂದು ಅಂಶಗಳನ್ನು ಹೀಗೆ ಸಂಕ್ಷಿಪ್ತವಾಗಿ ವಿಶ್ಲೇಷಿಸಬಹುದು.

ಈ ಕೃತಿಯಲ್ಲಿ ಅವರು ‘ಭಾರತೀಯ ಯುವಕರಲ್ಲಿ ದೇಶ ಕುರಿತು ‘ಬರ್ನಿಂಗ್ ಡಿವೋಷನ್’ ಇರತಕ್ಕದ್ದು’ ಎಂದು ಆದೇಶ ಮಾಡುತ್ತಾರೆ. ಎರಡೂ ಕಡೆ ಬಾಯಿ ಇರುವ ಖಡ್ಗ ಇದು. ಬರ್ನಿಂಗ್ ಡಿವೋಷನ್ ಎಂಬುದನ್ನು ಆರೆಸ್ಸೆಸ್ ಇದುವರೆಗೆ ಕೃತಿಯಲ್ಲಿ ತೋರಿಸಿರುವುದು ‘ದೇಶದ ಹಿತಕ್ಕಾಗಿ ತನ್ನನ್ನು ಸುಟ್ಟುಕೊಳ್ಳುವ ಮಾದರಿಯನ್ನಲ್ಲ’; ಬದಲಾಗಿ ‘ದೇಶದ ಹಿತ ಯಾವುದು ಎಂಬುದನ್ನು ತಾನೇ ನಿರ್ಧರಿಸಿ, ತನಗೆ ವೈರಿಗಳು ಎಂದು ಕಂಡು ಬರುವವರನ್ನು ಸುಟ್ಟು ಹಾಕುವ ಮಾದರಿ’ಯನ್ನೇ ಅದು ಇದುವರೆಗಿನ ದಶಕಗಳಲ್ಲಿ ಪ್ರದರ್ಶಿಸಿದೆ.

‘ರಾಷ್ಟ್ರೀಯ ಮೌಲ್ಯ’ಗಳನ್ನು ಗೌರವಿಸುವಂತೆ ಯುವಕರನ್ನು ಮತ್ತು ಭಾರತೀಯರನ್ನು ತರಬೇತುಗೊಳಿಸಬೇಕು ಎಂಬ ಇನ್ನೊಂದು ಮಾತೂ ಈ ಪುಸ್ತಕದಲ್ಲಿ ಇದೆ. ಆದರೆ, ‘ರಾಷ್ಟ್ರೀಯ ಮೌಲ್ಯ’ಗಳು ಯಾವುವು ಎಂಬುದನ್ನು ಗುರುತಿಸುವುದರಲ್ಲೇ ಆರೆಸ್ಸೆಸ್ ಮುಗ್ಗರಿಸುತ್ತಾ ಬಂದಿದೆ. ಹೀಗಾಗಿರುವುದು ಅಜ್ಞಾನದ ಕಾರಣಕ್ಕೇನೂ ಅಲ್ಲ, ಬದಲಾಗಿ ಉದ್ದೇಶಪೂರ್ವಕವಾಗಿ, ಸಂಕುಚಿತ ಮನೋಭಾವದಿಂದಾಗಿ, ಬಚ್ಚಿಟ್ಟುಕೊಂಡಿರುವ ಹುನ್ನಾರದಿಂದಾಗಿ’ ಎಂಬುದನ್ನು ಇದುವರೆಗಿನ ತನ್ನ ಕಾರ್ಯಗಳಲ್ಲಿ ಆರೆಸ್ಸೆಸ್ ತಾನೇ ಸಾಬೀತುಪಡಿಸಿದೆ.

ತ್ಯಾಗ, ಆದರ್ಶ ಗುಣ ಮತ್ತು ಉತ್ತಮ ನಡವಳಿಕೆ ಕುರಿತು ಆರೆಸ್ಸೆಸ್ ಮಾತನಾಡುತ್ತದೆ. ತ್ಯಾಗ ಎಂದರೇನು? ಯಾರು ತ್ಯಾಗ ಮಾಡಬೇಕು? ಏತಕ್ಕಾಗಿ ತ್ಯಾಗ ಮಾಡಬೇಕು? ಇತ್ಯಾದಿಗಳನ್ನು ಚರ್ಚಿಸಲು ಆರೆಸ್ಸೆಸ್ ಮುಂದಾಗುವುದೇ ಇಲ್ಲ. ವಿವಾಹ ಆಗದಿರುವುದೇ ತ್ಯಾಗ, ವಿವಾಹವಾಗಿದ್ದರೂ ಪತ್ನಿಯನ್ನು ತ್ಯಜಿಸುವುದೇ ತ್ಯಾಗ, ಮನೆ-ಮಕ್ಕಳು ಎಂಬ ಜವಾಬ್ದಾರಿಯಿಂದ ನುಣುಚಿಕೊಂಡು ದೇಶದ ಹಿತಕ್ಕಾಗಿ ‘ಸಂಘ’ ಸೇರಿಕೊಳ್ಳುವುದೇ ತ್ಯಾಗ ಎಂಬ ವಿವೇಚನೆ ಇಲ್ಲದ ಚಿಂತನೆ ಆರೆಸ್ಸೆಸ್‍ನ್ನು ವ್ಯಾಪಿಸಿದೆ.

ಯುವಜನರಲ್ಲಿ ಸಾಮಾಜಿಕ ವಿವೇಚನೆಯನ್ನು ಜಾಗೃತಗೊಳಿಸಬೇಕು ಎಂಬ ಮಾತನ್ನು ‘ಸಿದ್ಧಾಂತ’ದಲ್ಲಿ ಇಟ್ಟುಕೊಂಡಿರುವ ಆರೆಸ್ಸೆಸ್ ಮಾಡುತ್ತಿರುವುದೇನು? ಎಂದು ಪರಿಶೀಲಿಸಿದರೆ, ಬೂಟಾಟಿಕೆತನ ತಾನೇ ತಾನಾಗಿ ಬಯಲಾಗುತ್ತದೆ.

ಇದೇ ರೀತಿ, ಎಲ್ಲರಲ್ಲಿ ಸದ್‍ಭಾವನೆ, ಪ್ರೀತಿ ಮತ್ತು ಸಹಕಾರ ಇತ್ಯಾದಿ ಮಾತುಗಳನ್ನೂ ಪುಸ್ತಕದಲ್ಲಿ ಬರೆಯಲಾಗಿದೆ. ಗೋಳ್‍ವಲ್ಕರ್ ತಾವು ಬದುಕಿದ್ದಾಗ ಅಥವಾ ಅವರ ನಿಧನಾನಂತರ ಇದುವರೆಗೆ ಈ ಅಂಶಗಳನ್ನು ಎಷ್ಟು ಮಾತ್ರಕ್ಕೆ ಆರೆಸ್ಸೆಸ್ ಅನುಷ್ಠಾನದಲ್ಲಿ ತಂದಿದೆ? ಇದಕ್ಕೆ ವಿಪರೀತವಾಗಿ ಜಾತಿಗಳಲ್ಲಿನ ವೈಷಮ್ಯವನ್ನು ತನ್ನ ಸ್ವಾರ್ಥಕ್ಕೆ, ಪ್ರೀತಿಸುವ ವಿಷಯವನ್ನು ನಿರ್ಬಂಧಿಸುವುದಕ್ಕೆ, ದ್ವೇಷವನ್ನು ಉಂಟು ಮಾಡುವುದು ಮತ್ತು ಬೆಳಸುವುದಕ್ಕೆ ಕುಮ್ಮಕ್ಕು ನೀಡಿರುವುದಕ್ಕೆ ನೂರಾರು, ಸಾವಿರಾರು ಉದಾಹರಣೆಗಳು ದೊರಕುತ್ತವೆ.

‘ಜಾತಿ, ಪಂಥ, ಭಾಷೆ ಇತ್ಯಾದಿಗಳಿಗೆ ಹೆಚ್ಚಿನ ಮಹತ್ವ ನೀಡುವುದು ಸಲ್ಲ; ದೇಶಸೇವೆ ಎಂಬುದೊಂದೇ ಸರ್ವೋಚ್ಚ’ ಎಂಬುದನ್ನು ಯುವಕರಿಗೆ ಮತ್ತು ಭಾರತೀಯರಿಗೆ ಮನವರಿಕೆ ಮಾಡಿಕೊಡುವ ಅವಶ್ಯಕತೆ ಇದೆ ಎಂದು ತಿಳಿಸಲಾಗಿದೆ. ಆದರೆ, ಆರೆಸ್ಸೆಸ್ ಜಾತಿ ಪದ್ಧತಿಯಲ್ಲಿ ನಂಬಿಕೆ ಇಟ್ಟಿಲ್ಲವೆ? ಜಾತೀಯತೆಯನ್ನು ಅದು ಮಾಡುವುದಿಲ್ಲವೆ? ಅಸ್ಪøಶ್ಯತೆ ಆಚರಣೆ ಮಾಡುವುದಕ್ಕೆ ಅದು ಒಪ್ಪುತ್ತಿಲ್ಲವೆ? ಪಂಥಗಳನ್ನು ಬಲಗೊಳಿಸುಲ್ಲಿ ಅದು ಅತ್ಯಾಸಕ್ತಿಯನ್ನು ಹೊಂದಿಲ್ಲವೆ? ಪ್ರಾದೇಶಿಕ ಭಾಷೆಗಳ ಹಿತವನ್ನು ಅದು ಬಲಿ ಕೊಡುತ್ತಿಲ್ಲವೆ?

ಈ ಪ್ರಶ್ನೆಗಳಿಗೆ ಆರೆಸ್ಸೆಸ್ ಬಳಿ ಏನು ಉತ್ತರಗಳಿವೆ? ಅದು ಹೃದಯ ಬಿಚ್ಚಿ ಮಾತನಾಡಲು ಸಿದ್ಧ ಇದೆಯೆ?

‘ನಿಜ ವಿನೀತ ಭಾವ’ ಎಂದು ಮತ್ತು ‘ಶುದ್ಧ ಶಿಸ್ತು’ ಎಂದು ಆರೆಸ್ಸೆಸ್ ಸಿದ್ಧಾಂತದಲ್ಲಿ ಬಳಸಲಾಗಿರುವುದು ಬಹುತೇಕವಾಗಿ ‘ಗುಲಾಮಗಿರಿ’ ಮತ್ತು ‘ಪ್ರಶ್ನೆ ಮಾಡದಿರುವಿಕೆ’ ಎಂಬ ಅರ್ಥದಲ್ಲೇ ಜಾರಿಗೆ ಬಂದಿರುವುದು ಸ್ಪಷ್ಟವಾಗಿ ಕಾಣುತ್ತದೆ.

ಆರೆಸ್ಸೆಸ್‍ನ ಮೂರನೇ ಸರ್ವೋಚ್ಚ ನಾಯಕರಾಗಿದ್ದವರು ಬಾಳಾಸಾಹೇಬ್ ದೇವರಸ್. ಇವರು ತಮ್ಮ ಕಾಲದಲ್ಲಿ ಸಿಕ್ಖರು, ಜೈನರು, ಬೌದ್ಧರು, ಆದಿವಾಸಿಗಳು, ಅಸ್ಪøಶ್ಯರು, ವೀರಶೈವರು, ಆರ್ಯ ಸಮಾಜದವರು, ರಾಮಕೃಷ್ಣ ಮಿಷನ್‍ಗೆ ಸೇರಿದವರು… ಇತ್ಯಾದಿ ಎಲ್ಲರೂ ಹಿಂದೂಗಳೇ ಎಂದರು. ಆದರೆ, ಈ ವಿವಿಧ ಸಮುದಾಯಗಳ ಒಳಗೆ ಮತ್ತು ವಿವಿಧ ಸಮುದಾಯಗಳ ಮಧ್ಯೆ ಸಮಾನತೆ ಇದೆಯೆ? ತಾರತಮ್ಯ ಇದೆಯೆ? ಎಂಬುದು ಆರೆಸ್ಸೆಸ್‍ಗೆ ಯಾವತ್ತೂ ಮುಖ್ಯ ವಿಷಯವಾಗಿಲ್ಲ. ಹಾಗಾಗಿ, ಅದು ಈ ಕುರಿತು ತನ್ನ ನಿರ್ದಿಷ್ಟ ನಿಲವನ್ನು ವ್ಯಕ್ತಪಡಿಸಿಲ್ಲ. ಬದಲಾಗಿ, ತಾರತಮ್ಯವನ್ನು ಅದು ಎತ್ತಿ ಹಿಡಿದುಕೊಂಡೇ ಬಂದಿದೆ ಎಂಬುದು ಸ್ಪಷ್ಟವಾಗಿ ಕಂಡು ಬರುತ್ತದೆ.

*

ಆಚಾರ್ಯ ವಿನೋಬಾ ಭಾವೆ ಅವರ ‘ಭೂದಾನ ಚಳವಳಿ’ಯಲ್ಲಿ ಆರೆಸ್ಸೆಸ್ ಭಾಗವಹಿಸಿದ್ದು ಭಾಗಶಃ ಮಾತ್ರ. ಇದಕ್ಕೂ ಅದು ಒಲವು ತೋರಿದ್ದು ಆ ಕಾಲದಲ್ಲಿ ಕಮ್ಯುನಿಸ್ಟರು ಇದೇ ವಿಷಯದಲ್ಲಿ ನಡೆಸಿದ್ದ ಚಳವಳಿಯನ್ನು ಬಗ್ಗು ಬಡಿಯುವುದಕ್ಕಾಗಿ. ಮುಂದೆ ಎಂದಾದರೂ, ಆರೆಸ್ಸೆಸ್ ಭೂಸುಧಾರಣೆ, ಭೂಹಂಚಿಕೆ, ಭೂಒಡೆತನ ಇತ್ಯಾದಿ ಕುರಿತು ಮಾತಾಡಲಿಲ್ಲವಲ್ಲ? ಇದಕ್ಕಾಗಿ ಧ್ವನಿ ಎತ್ತಲಿಲ್ಲವಲ್ಲ? ತನ್ನ ಕೈಗೊಂಬೆ ಸರ್ಕಾರಗಳು ಬಂದಾಗಲೂ ಈ ಕುರಿತು ನೀತಿ-ನಿರ್ಣಯ ಕೈಗೊಳ್ಳಲಿಲ್ಲವಲ್ಲ?

ಆರೆಸ್ಸೆಸ್ ಜಾತಿಪದ್ಧತಿಯನ್ನು ವಿರೋಧಿಸುವ ಮಾತಾಡಿಲ್ಲ; ಇದಕ್ಕಾಗಿ ಅದು ನಿರ್ದಿಷ್ಟ ಕಾರ್ಯಕ್ರಮಗಳನ್ನು ಕೈಗೊಂಡಿಲ್ಲ; ಅಸ್ಪøಶ್ಯತೆ ಪ್ರಕರಣಗಳು ನಡೆದಾಗ ಅದು ಪ್ರತಿಕ್ರಿಯೆ ನೀಡಿದ್ದಿಲ್ಲ; ಈ ವಿಷಯ ಕುರಿತು ಜನಾಭಿಪ್ರಾಯವನ್ನು ರೂಪಿಸಲು ಪ್ರಯತ್ನಗಳನ್ನು ಕೈಗೊಂಡಿದ್ದು ಎಲ್ಲೂ ಕಾಣುವುದಿಲ್ಲ.

‘ಕ್ಯಾಂಪಿಗೆ ಬಂದಿದ್ದವರನ್ನು ಯಾರೂ ಜಾತಿ ಕೇಳಿರಲಿಲ್ಲ; ಅಲ್ಲಿ ಅಸ್ಪøಶ್ಯತೆ ಆಚರಿಸಲ್ಪಡುವುದು ಕಾಣಲಿಲ್ಲ’ ಎಂದಿದ್ದು ಮಹಾತ್ಮಾ ಗಾಂಧಿ; ಅವರು ಹೀಗೆ ಹೇಳಿದ್ದು 1934ರಲ್ಲಿ ವಾರ್ಧಾದಲ್ಲಿ ನಡೆದ ಆರೆಸ್ಸೆಸ್ ಕ್ಯಾಂಪಿಗೆ ಮಹಾದೇವ ಭಾಯಿ ದೇಸಾಯಿ ಮತ್ತು ಮೀರಾ ಬೆಹನ್ ಜೊತೆಗೆ ಭೇಟಿ ನೀಡಿದ ಸಂದರ್ಭದಲ್ಲಿ.

ಕ್ಯಾಂಪಿಗೆ ಬಂದಿರುವ ಶಿಬಿರಾರ್ಥಿಗಳ ಜಾತಿಯನ್ನು ಕೇಳಲಾಗಿರಲಿಲ್ಲ ಎಂಬುದು, ‘ಆ ಕ್ಯಾಂಪಿನ ಸಂಘಟಕರು ಜಾತಿಪದ್ಧತಿ ವಿರೋಧಿ ನಿಲವು ಹೊಂದಿದ್ದರು’ ಎಂಬ ಅರ್ಥವನ್ನು ನೀಡುವುದಿಲ್ಲ. ಬದಲಾಗಿ, ‘ಕ್ಯಾಂಪಿನಲ್ಲಿ ಇರುವವರು ಬೇರೆ ಬೇರೆ ಜಾತಿಯವರು ಎಂಬುದನ್ನು ತಿಳಿದ ಬಳಿಕವೂ ಯಾವೊಬ್ಬ ಶಿಬಿರಾರ್ಥಿಯೂ ಅಸ್ಪøಶ್ಯತೆ/ಜಾತೀಯತೆಯನ್ನು ಮಾಡಲಿಲ್ಲ ಎಂಬುದು ಕಂಡು ಬಂದರೆ, ಅದೊಂದು ಶ್ಲಾಘನೀಯ ಸಂಗತಿ’ ಎಂಬುದು ನಮಗೆ ಮನವರಿಕೆಯಾಗಬೇಕು.

ಆರೆಸ್ಸೆಸ್ ತನಗೆ ರಾಜಕೀಯದಲ್ಲಿ ಆಸಕ್ತಿಯೇ ಇಲ್ಲ ಎಂದು ಎಂದಿನಿಂದಲೂ ಹೇಳಿಕೊಂಡು ಬರುತ್ತಿದೆ. ತನ್ನ ಮಾತನ್ನು ಮರದ ಮೇಲೆ ಕುಳಿತಿರುವ ಕಾಗೆ ಕೂಡ ನಂಬುವುದಿಲ್ಲ ಎಂಬುದನ್ನು ಅದು ನಿರ್ಲಕ್ಷಿಸಲು ಇಚ್ಛಿಸುತ್ತದೆ. ಜನಸಂಘ ಎಂಬ ರಾಜಕೀಯ ಪಕ್ಷಕ್ಕೆ ರೆಕ್ಕೆ-ಪುಕ್ಕಗಳನ್ನು ನೀಡಿದ್ದು ಆರೆಸ್ಸೆಸ್ ಅಲ್ಲವೆ? ಅದರ ಪ್ರಥಮ ಶ್ರೇಣಿಯ ನಾಯಕರು ಖಾಕಿ ಚಡ್ಡಿ ಹಾಕಿಕೊಂಡು, ‘ನಮಸ್ತೇ ಸದಾ ವತ್ಸಲೇ…’ ಎಂದು ಹೇಳಿಕೊಂಡೇ ರಾಜಕೀಯ ಮಾಡಿದವರಲ್ಲವೆ? ಈ ಕಾರಣಕ್ಕಾಗಿಯೇ ಅಲ್ಲವೇ ಮಾಜಿ ಜನಸಂಘಿಗಳು ಜನತಾ ಪಾರ್ಟಿಯಿಂದ ಹೊರಬಿದ್ದದ್ದು?

ಆರೆಸ್ಸೆಸ್ ನಿಲವನ್ನು ರಾಜಕಾರಣದಲ್ಲಿ ಪ್ರತಿಪಾದಿಸುತ್ತಿರುವ ಪಕ್ಷ ಇಂದಿನ ‘ಭಾರತೀಯ ಜನತಾ ಪಾರ್ಟಿ’. ಇದನ್ನು ಯಾರು ಮುಚ್ಚಿಟ್ಟರೂ ಅದು ಅವಿವೇಕತನವೇ ಸೈ. ಇಷ್ಟೇ ಅಲ್ಲ, ಅದು ಹಿಂಬಾಗಿಲಿನಿಂದ ರಾಜಕಾರಣವನ್ನು ನಿಯಂತ್ರಿಸುತ್ತಾ ಬಂದಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪಹಾಸ್ಯ ಮಾಡುವ ವರಸೆ. ಕೇಂದ್ರ ಸರ್ಕಾರ ನಡೆಸಲು ನಾಗಪುರದ ಕಚೇರಿಯಿಂದ, ಕರ್ನಾಟಕ ಸರ್ಕಾರವನ್ನು ನಡೆಸಲು ಶಂಕರಪುರದ ಕೇಶವ ಶಿಲ್ಪದಿಂದ ಆದೇಶಗಳು ಬರುವುದು ಖಂಡನೀಯ.

*ಲೇಖಕರು ಪ್ರಸ್ತುತ, ಕರ್ನಾಟಕ ಸಮಾಜವಾದಿ ವೇದಿಕೆ ಮತ್ತು ಬೆಂಗಳೂರು ದಲಿತ್ ಫೋರಮ್ ಚಟುವಟಿಕೆಗಳಲ್ಲಿ ಸಕ್ರಿಯರು.

 

One Response to " ಹೇಳುವುದು ಒಂದು ಮಾಡುವುದು ಮತ್ತೊಂದು

-ಮಂಗ್ಳೂರ ವಿಜಯ

"

Leave a Reply

Your email address will not be published.