ಹೊಸಪುಸ್ತಕ

ಸಮಾಜ ಸಂಸ್ಕೃತಿ ಪ್ರಭುತ್ವ

ಸಮಾಜಸಂಸ್ಕೃತಿಪ್ರಭುತ್ವ

ಪ್ರಾಚೀನ ಭಾರತದ ಚರಿತ್ರೆಯ ಇಣುಕುನೋಟ

ಬಾರ್ಕೂರು ಉದಯ

ಪುಟ: 100, ಬೆಲೆ: ರೂ.250

ಪ್ರೊಡಿಜಿ ಪ್ರಿಂಟಿಂಗ್, ತಳ ಅಂತಸ್ತು, ಕೆನರಾ ಟವರ್,

ಮಿಷನ್ ಆಸ್ಪತ್ರೆ ರಸ್ತೆ, ಉಡುಪಿ-576101

ಪ್ರಥಮ ಮುದ್ರಣ: 2019

ಪ್ರಾಚೀನ ಭಾರತದ ಇತಿಹಾಸದ ಕಡೆಗೆ ಒಳನೋಟ ಬೀರುವ ಕೃತಿಯಿದು. ಈ ಕೃತಿಯಲ್ಲಿ ಪ್ರಾಚೀನ ಉತ್ತರ ಹಾಗೂ ದಕ್ಷಿಣ ಭಾರತದ ಚಿತ್ರಣವನ್ನು ಸಂಕ್ಷಿಪ್ತವಾಗಿ ಒದಗಿಸಲಾಗಿದೆ. ಲೇಖಕರೇ ಹೇಳುವಂತೆ, ಹರಪ್ಪ ಕಾಲದಿಂದ ಗುಪ್ತ ಸಾಮ್ರಾಜ್ಯದ ಕಾಲದವರೆಗೆ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ವ್ಯಾಖ್ಯಾನಿಸುವ ಪ್ರಯತ್ನ ಇಲ್ಲಿದೆ. ಬಹುತೇಕ ಇತಿಹಾಸದ ಬರಹಗಾರರು ಸಾಮಾನ್ಯವಾಗಿ ಇತಿಹಾಸದ ಆಡಂಬರ, ಉತ್ಪೆಕ್ಷೆಗಳ ಬಗ್ಗೆ ಬರೆದರೆ, ಈ ಕೃತಿ ಇಂತಹ ನಿರೀಕ್ಷೆಗಳಿಂದ ದೂರವಾಗಿ, ಸಾಮಾನ್ಯ ಜನರ ಬದುಕಿನ ಚಿತ್ರಣವನ್ನು ಒದಗಿಸುವ ಪ್ರಯತ್ನ ಮಾಡುವ ಮೂಲಕ ಭಿನ್ನ ಎನಿಸಿಕೊಂಡಿದೆ.

ಮಸಾಲೆ ಮೀಮಾಂಸೆ

ಸಂಪೂರ್ಣಾನಂದ ಬಳ್ಕೂರು

ಪುಟ: 172, ಬೆಲೆ: ರೂ.150

ಆಕೃತಿ ಆಶಯ ಪ್ರಕಾಶನ

ಲೈಟ್‌ಹೌಸ್ ಹಿಲ್ ರಸ್ತೆ, ಬಾವುಟಗುಡ್ಡೆ,

ಮಂಗಳೂರು-575001

ಪ್ರಥಮ ಮುದ್ರಣ: 2018

ಈ ಕೃತಿಯು 28 ಲಘು ಪ್ರಬಂಧಗಳನ್ನು ಒಳಗೊಂಡಿದೆ. ಹಾಸ್ಯದ ಧಾಟಿಯಲ್ಲಿ ಕರಾವಳಿಯ ತಮ್ಮ ಸುತ್ತಮುತ್ತಲಿನ ಪಾತ್ರಗಳನ್ನು, ಅನುಭವಗಳನ್ನು ಲೇಖಕರು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಹಾಸ್ಯದ ಜೊತೆ ಜೊತೆಗೆ ಹಲವಾರು ಸಾಮಾಜಿಕ, ವೈಚಾರಿಕ ವಿಚಾರಗಳ ಕಡೆಗೆ ತಣ್ಣಗೆ ಹೊರಳುವ ಪ್ರಯತ್ನಗಳೂ ಈ ಕೃತಿಯಲ್ಲಿ ಕಾಣಸಿಗುತ್ತವೆ. ಮುನ್ನುಡಿಯಲ್ಲಿ ಡಾ.ಭೂಮೀಗೌಡ ಅವರು ಹೇಳಿದಂತೆ, ಇದು ಸಾಹಿತ್ಯ ಪ್ರಕಾರದ ಸರ್ವ ಬಂಧಗಳನ್ನು ಕಳಚಿದ ಕೃತಿಯೂ ಹೌದು.

 

ನಾನೆಂಬುದು ನಾನಲ್ಲ

ಆತ್ಮಕಥನ

ಪ್ರೊ.ಸಣ್ಣರಾಮ

ಪುಟ: 192, ಬೆಲೆ: ರೂ.175

ಪ್ರಥಮ ಮುದ್ರಣ: 2019

ಇದೊಂದು ಆತ್ಮಕಥನದ ಮಾದರಿಯ ಕೃತಿಯಾಗಿದ್ದರೂ, ಕೇವಲ ಆತ್ಮಕಥನವಷ್ಟೇ ಆಗಿರದೆ ಸಮುದಾಯವೊಂದರ ಪ್ರತಿನಿಧೀಕರಣದ ಕೃತಿಯಾಗಿದೆ ಎನ್ನಬಹುದು. ಲಂಬಾಣಿ ಸಮುದಾಯದವರಾದ ಲೇಖಕರು ತಮ್ಮ ಆತ್ಮಕಥನದ ನೆಪದಲ್ಲಿಯೇ ಇಡೀ ಸಮಾಜವನ್ನು, ಸಮುದಾಯವನ್ನು, ಮನುಷ್ಯ ಬದುಕಿನ ಸಂಕಟಗಳನ್ನು ಈ ಕೃತಿಯಲ್ಲಿ ತೆರೆದಿಟ್ಟಿದ್ದಾರೆ. ತಮ್ಮ ತಾಂಡಾಗಳಲ್ಲಿ ನಡೆದ ಸಿಹಿ, ಕಹಿ ಅನುಭವಗಳು ಎಲ್ಲವನ್ನೂ ಲೇಖಕರು  ಮನಮುಟ್ಟುವಂತೆ ಚಿತ್ರಿಸಿದ್ದಾರೆ.

ನಾಝಿ ಹೋರಾಟದ ಆರ್ದ್ರ ಕಾವ್ಯ ನೂರ್ ಇನಾಯತ್ ಖಾನ್

ಚಂದ್ರಶೇಖರ್ ಮಂಡೆಕೋಲು

ಪುಟ: 180, ಬೆಲೆ: ರೂ.160

ಪ್ರಥಮ ಮುದ್ರಣ: 2020

ಈ ಕೃತಿಯು ನೂರ್ ಇನಾಯತ್ ಖಾನ್ ಎಂಬ ಬ್ರಿಟಿಷ್ ಗೂಢಚಾರಿಣಿಯ ರೋಚಕ ಜೀವನ ಚರಿತ್ರೆ. ಫ್ಯಾಸಿಸಂ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಇಂಗ್ಲೆಂಡಿನಿಂದ ಗೂಢಚಾರಿಣಿಯಾಗಿ ಫ್ರಾನ್ಸ್ಗೆ ತೆರಳಿ, ಜರ್ಮನಿಯ ನಾಝಿಗಳ ಕೈಗೆ ಸಿಕ್ಕಿ ಸಜೀವ ದಹನವಾದ ನೂರ್, ಈ ಕೃತಿಯ ಮೂಲಕ ಒಬ್ಬ ದಿಟ್ಟ ಹೋರಾಟಗಾರ್ತಿಯಾಗಿ ಕಾಣಿಸಿಕೊಳ್ಳುತ್ತಾಳೆ. ಮುನ್ನುಡಿಯಲ್ಲಿ ಚಿಂತಕ ರಹಮತ್ ತರೀಕೆರೆ ಹೇಳಿದಂತೆ, ರಾಜಮಹಾರಾಜರ ಕ್ಲಾಸಿಕಲ್ ಚರಿತ್ರೆಯು ಅವಗಣಿಸಿರುವ ಮಹತ್ವದ ಅಂಶಗಳ ಮೇಲೆ ಕಟ್ಟುತ್ತಿರುವ ಈ ಚರಿತ್ರೆ, ಸಾಂಪ್ರದಾಯಿಕ ಚರಿತ್ರೆಗೆ ಬೇರೆಯದೆ ದೃಷ್ಟಿಕೋನ ಒದಗಿಸುತ್ತದೆ.

ಹರಾಂನ ಕಥೆಗಳು

ಮುಸ್ತಾಫ ಕೆ.ಎಚ್.

ಪುಟ: 104, ಬೆಲೆ: ರೂ.100

ಪ್ರಥಮ ಮುದ್ರಣ: 2020

ಇತ್ತೀಚೆಗೆ ಬಿಡುಗಡೆಗೊಂಡ ಈ ಕಥಾ ಸಂಕಲನವು ಒಟ್ಟು 9 ಕಥೆಗಳನ್ನು ಒಳಗೊಂಡಿದೆ. ಮನುಷ್ಯ ಬದುಕಿನ ಹೊಸ ಹಾದಿಗಳನ್ನು ಅನ್ವೇ಼ಷಿಸುವ, ಸಹಜವಾದ ಸಾಮಾಜಿಕ ವ್ಯವಸ್ಥೆಯನ್ನು ಮೀರಿ, ಹೊಸತನವನ್ನು ಕಟ್ಟಿಕೊಳ್ಳುವ ಪ್ರಯತ್ನಗಳನ್ನು ಇಲ್ಲಿನ ಕಥಾಪಾತ್ರಗಳು ಮಾಡುತ್ತವೆ. ಜಾತಿ ಧರ್ಮಗಳನ್ನು ಮೀರಿದ ಪ್ರೇಮ ಸಂಬಂಧ, ಸಲಿಂಗಕಾಮ, ಕೋಮುವಾದ ಮುಂತಾದ ವಿಷಯಗಳು ಇಲ್ಲಿನ ಕಥೆಗಳ ವಸ್ತುಗಳಾಗಿವೆ. ಧರ್ಮಗಳ ಕಟ್ಟು ಕಟ್ಟಳೆ ಹಾಗೂ ಸ್ವಾಭಾವಿಕ, ಸಹಜ ಬದುಕಿನ ರೀತಿಯನ್ನು ಮುಖಾಮುಖಿಯಾಗಿಸಿ ಸವಾಲೊಡ್ಡುವ ಪ್ರಯತ್ನವನ್ನು ಇಲ್ಲಿನ ಎಲ್ಲಾ ಕಥೆಗಳಲ್ಲಿ ಕಾಣಬಹುದು.

ಮೇಲಿನ ಮೂರೂ ಕೃತಿಗಳ ಪ್ರಕಾಶಕರು

ಅಹರ್ನಿಶಿ ಪ್ರಕಾಶನ

ಜ್ಞಾನವಿಹಾರ ಬಡಾವಣೆ, ಕಂಟ್ರಿ ಕ್ಲಬ್ ಎದುರು,

ವಿದ್ಯಾನಗರ, ಶಿವಮೊಗ್ಗ. 577203

ಹಾಣಾದಿ

ಕಾದಂಬರಿ

ಕಪಿಲ ಪಿ.ಹುಮನಾಬಾದೆ

ಪುಟ: 112, ಬೆಲೆ: ರೂ.110

ಕಾವ್ಯಮನೆ ಪ್ರಕಾಶನ(ಬಳ್ಳಾರಿ)

#220 ವೀರೇಂದ್ರ ಪಾಟೀಲ್ ಬಡಾವಣೆ

1 ಬ್ಲಾಕ್, ಸೇಡಂ ರಸ್ತೆ, ಕಲಬುರಗಿ. 585105

ಪ್ರಥಮ ಮುದ್ರಣ: 2019

ಇತ್ತೀಚಿನ ದಿನಗಳಲ್ಲಿ ಬಹುವಾಗಿ ಚರ್ಚೆಯಾಗುತ್ತಿರುವ ಕಾದಂಬರಿ ಇದು. ಗ್ರಾಮೀಣ ಪ್ರದೇಶದ ಜನಜೀವನದ ಸುತ್ತ ಹೆಣೆದ ಈ ಕಾದಂಬರಿ, ಕನ್ನಡ ಸಾಹಿತ್ಯ ವಲಯದಲ್ಲಿ ಭಿನ್ನ ಎನಿಸಿಕೊಂಡಿದೆ. ಕಾದಂಬರಿಯ ಗುಬ್ಬಿ ಆಯಿ, ಅಜ್ಜಿ, ಕಂಟಿ, ತೊತ್ಯಾ, ರಾಮಯ್ಯ ಮುಂತಾದ ಪಾತ್ರಗಳು ಮನಸ್ಸಿನಲ್ಲಿ ನೆಲೆಯೂರುತ್ತವೆ. ಚೋಮನ ದುಡಿ, ಒಡಲಾಳ, ಕುಸುಮಬಾಲೆ, ಜುಗಾರಿ ಕ್ರಾಸ್ ಮುಂತಾದ ಪ್ರಸಿದ್ಧ ಕಾದಂಬರಿಗಳು ಹಾಣಾದಿಯ ಅಲ್ಲಲ್ಲಿ ನೆನಪಾಗುತ್ತವೆ. ಈ ಕೃತಿಯು ಮೊದಲ ಮುದ್ರಣವಾದ ಕೆಲವೇ ತಿಂಗಳುಗಳಲ್ಲಿ ಮರುಮುದ್ರಣ ಕಂಡಿದೆ.

ಹೈದರಾಬಾದ್ ಕರ್ನಾಟಕ ವಿಶೇಷ ಸ್ಥಾನಮಾನ: ಕಥೆ ವ್ಯಥೆ

ಡಾ.ರಝಾಕ ಉಸ್ತಾದ

ಪುಟ: 176, ಬೆಲೆ: ರೂ.180

ಬಸವ ಪಬ್ಲಿಕೇಷನ್ಸ್

6ನೇ ವಾರ್ಡ್, ಎಲಿಗರ್ ಸ್ಟಿಟ್,

ಸಂಡೂರು, ಬಳ್ಳಾರಿ. 583119

ಲೋಕಾಂತದ ಕಾವು

ಇದು ಹೈದರಾಬಾದ್ ಕರ್ನಾಟಕದ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ ಕೃತಿ. ಸಂವಿಧಾನದ 371(ಜೆ)ನೇ ವಿಧಿಯ ಪ್ರಕಾರ ಹೈದರಾಬಾದ್ ಕರ್ನಾಟಕಕ್ಕೆ ಸಿಗಬೇಕಾದ ಸ್ಥಾನಮಾನಕ್ಕಾಗಿ ಹಾಗೂ ಆ ವಿಧಿಯ ಸಮರ್ಪಕ ಅನುಷ್ಠಾನಕ್ಕಾಗಿ ಹಲವಾರು ಪ್ರಯತ್ನಗಳು ನಡೆದಿವೆ. ಸ್ವತಃ ಲೇಖಕರು ಕೂಡಾ ಹೈದರಾಬಾದ್ ಕರ್ನಾಟಕಕ್ಕೆ ಸೌಲಭ್ಯಗಳನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಬಹಳಷ್ಟು ಶ್ರಮ ವಹಿಸಿದವರು. ತಮ್ಮ ಅನುಭವಕ್ಕೆ ಬಂದ, 371(ಜೆ) ವಿಧಿ ಅನುಷ್ಠಾನಕ್ಕಿರುವ ತೊಡಕು, ಸ್ಥಾನಮಾನದ ಸಮಸ್ಯೆಗಳ ಕುರಿತು ಸಮಗ್ರವಾದ ವಿಶ್ಲೇಷಣೆಯನ್ನು ಈ ಕೃತಿ ಮೂಲಕ ಮುಂದಿಟ್ಟಿದ್ದಾರೆ.

ಮೋಹನ ಕುಂಟಾರ್

ಪುಟ: 136 ಬೆಲೆ: ರೂ.150

ಯಾಜಿ ಪ್ರಕಾಶನ, ‘ಭೂಮಿ’,

ಎಂ.ಪಿ.ಪ್ರಕಾಶ ನಗರ, ಹೊಸಪೇಟೆ. 583201

ಪ್ರಥಮ ಮುದ್ರಣ: 2019

ಇದು ಮೋಹನ ಕುಂಟಾರ್ ಅವರ ಚೊಚ್ಚಲ ಕವನ ಸಂಕಲನ. ಈ ಕವನ ಸಂಕಲನವು ಒಟ್ಟು 54 ಕವಿತೆಗಳನ್ನು ಒಳಗೊಂಡಿದೆ. ಭಿನ್ನ ವಿಷಯಗಳ ಜತೆಗೆ ಹೊಸ ನೋಟದ ಕವಿತೆಗಳು ಇಲ್ಲಿವೆ. ಮುನ್ನುಡಿಯಲ್ಲಿ ಬಿ.ಆರ್.ಲಕ್ಷö್ಮಣರಾವ್ ಹೇಳಿದಂತೆ, ಕುಂಟಾರ್ ಅವರ ಕವಿತೆಗಳಲ್ಲಿ  ನವ್ಯದ ಪ್ರಭಾವದ ಜೊತೆ ಜೊತೆಗೇ ನವೋದಯದ ಆಶಯಗಳನ್ನೂ ಕಾಣಬಹುದು. ಸುತ್ತಲಿನ ಪರಿಸರವನ್ನು ತಮ್ಮ ಕಾವ್ಯಗಳಲ್ಲಿ ಕವಿ ಪರಿಗಣನೆಗೆ ತೆಗೆದುಕೊಂಡ ಬಗೆ ಚೆನ್ನಾಗಿದೆ. ನೋಯ್ಡಾದ ಬೀದಿ, ಹಂಪಯ ಬಂಡೆ ಮುಂತಾದ ಕವಿತೆಗಳು ಇಲ್ಲಿ ಮುಖ್ಯವಾಗುತ್ತದೆ.

ಆನೆ ಸಾಕಲು ಹೊರಟವಳು

ಸಹನಾ ಕಾಂತಬೈಲು

ಪುಟ: 112 ಬೆಲೆ: ರೂ.90

ಶ್ರೀರಾಮ ಬುಕ್ ಸೆಂಟರ್,

#1573/ಎ, ವಿದ್ಯಾನಗರ ಮಂಡ್ಯ 571401

ಪ್ರಥಮ ಮುದ್ರಣ: 2019

ಇದು ಲಲಿತ ಪ್ರಬಂಧಗಳ ಸಂಕಲನ. ಗ್ರಾಮೀಣ ಭಾಗದ ರೈತ ಮಹಿಳೆಯಾಗಿರುವ ಲೇಖಕಿಯ ಈ ಕೃತಿಯ ಉದ್ದಕ್ಕೂ ಗ್ರಾಮೀಣ ಬದುಕಿನ ಸೊಗಡು ಆವರಿಸಿಕೊಂಡಿದೆ. ಮಾನವ ಸಮಾಜದ ಜೊತೆಗೆ, ಪ್ರಕೃತಿ, ಪ್ರಾಣಿ, ಪಕ್ಷಿ ಹೀಗೆ ಸಮಗ್ರ ದೃಷ್ಟಿಕೋನವನ್ನಿಟ್ಟುಕೊಂಡು ಬರೆದ ಪ್ರಬಂಧಗಳಿವು. ಒಲೆ ಬದಲಾದರೂ ಉರಿ ಬದಲಾಗದು, ಆನೆ ಸಾಕಲು ಹೊರಟವಳು, ಹೋರಿ ಕರುವಿನ ವಿದಾಯ ಪ್ರಸಂಗ ಮುಂತಾದವು ಇಲ್ಲಿ ಹೆಚ್ಚು ಮೆಚ್ಚಿಗೆಯಾಗುವಂಥವು.

ಮರಳಿ ಬಂದ ಬುದ್ಧ

ಜಾಣಗೆರೆ ವೆಂಕಟರಾಮಯ್ಯ

ಪುಟ: 424 ಬೆಲೆ: ರೂ.300

ಜಾಣಗೆರೆ ಪತ್ರಿಕೆ ಪ್ರಕಾಶನ

#67, ಗಂಗಾಧರಪ್ಪ ಲೇಔಟ್, 5ನೇ ಕ್ರಾಸ್,

ಪಾಪರೆಡ್ಡಿಪಾಳ್ಯ, ನಾಗರಬಾವಿ 2ನೇ ಹಂತ,

ಬೆಂಗಳೂರು. 560072

ಬುದ್ಧನ ಭಾವ ಸಂಕೇತವನ್ನು ಜೀವಂತವಾಗಿಸಿಕೊಂಡು ರಚಿತವಾದ ಕಾದಂಬರಿಯಿದು. ಬುದ್ಧ ಎಂಬ ಪಾತ್ರದ ಮೂಲಕ ಗೌತಮ ಬುದ್ಧನ ತತ್ವಗಳನ್ನು ಸಾರುವ ಪ್ರಯತ್ನವನ್ನು ಈ ಕಾದಂಬರಿಯಲ್ಲಿ ಮಾಡಲಾಗಿದೆ. ಇಲ್ಲಿನ ಹಲವು ಪಾತ್ರಗಳು ಬುದ್ಧನ ಪಾತ್ರಕ್ಕೆ ಪೂರಕವಾಗಿ ಕಾಣಿಸುತ್ತವೆ. ದ್ವೇಷ, ಅಸೂಯೆ ಅಸಹನೆಯಿಂದ ಸಮಾಜ ಛಿದ್ರಗೊಳ್ಳುತ್ತದೆ ಹಾಗೂ ಪ್ರೀತಿ ಸ್ನೇಹದಿಂದ ಸಮಾಜ ರೂಪಗೊಳ್ಳುತ್ತದೆ ಎಂಬ ಸಂದೇಶವೇ ಇಡೀ ಕಾದಂಬರಿಯ ಆಶಯ ಎನ್ನಬಹುದು.

ಮಗ್ಗ

ಕಥಾ ಸಂಕಲನ

ಸ್ನೇಹಲತಾ ದಿವಾಕರ್ ಕುಂಬ್ಳೆ

ಪುಟ: 92, ಬೆಲೆ: ರೂ.110

ಪ್ರಥಮ ಮುದ್ರಣ: 2020

ಸಿರಿವರ ಪ್ರಕಾಶನ, ಲಕ್ಷಿö್ಮÃನಾರಾಯಣಪುರ

ಬೆಂಗಳೂರು 560021

ಹತ್ತು ಕಥೆಗಳನ್ನು ಒಳಗೊಂಡಿರುವ ಈ ಸಂಕಲನ, ಮೂರು ದಶಕಗಳ ನಡುವಿನ ಕೊಂಡಿಯಂತೆ ಕಾಣಿಸುತ್ತದೆ. ಮೊದಲ ಕಥೆ 1989ರಲ್ಲಿ ರಚಿತವಾಗಿದ್ದರೆ ಕೊನೆಯ ಕಥೆ 2018ರಲ್ಲಿ ರಚಿತವಾಗಿದ್ದು, ಇಲ್ಲಿನ ಕಥೆಗಳಲ್ಲಿ ಲೇಖಕಿಯ ಊರಾದ ಕಾಸರಗೋಡಿನ ಜನರ ಆಡುಕನ್ನಡದ ಸೊಗಡು ಎದ್ದು ಕಾಣುತ್ತದೆ. ಎಲ್ಲಾ ಕಥೆಗಳೂ ಭಿನ್ನವಾಗಿ, ಮಲಯಾಳಂ ವಾತಾವರಣದ ಪ್ರಭಾವವನ್ನು ಸೂಚಿಸುತ್ತವೆ. ಹಸಿವು, ಕಾದವಳು ರಾಧೆ, ಬದುಕು ಮುಂತಾದ ಕಥೆಗಳು ತೀವ್ರವಾಗಿ ಕಾಡಬಲ್ಲವು.

ಲಹರಿ

(ಗಜಲ್‌ಗಳು, ದ್ವಿಪದಿಗಳು ಮತ್ತು ಹೈಕುಗಳು)

ಸಿದ್ಧರಾಮ ಹಿರೇಮಠ

ಪುಟ: 92, ಬೆಲೆ: ರೂ.110

ಪ್ರಥಮ ಮುದ್ರಣ: 2019

ರೂಪ ಪ್ರಕಾಶನ, ಮೈಸೂರು 570004

ಈ ಸಂಕಲನ ಒಟ್ಟು 77 ಗಜಲ್, ದ್ವಿಪದಿಗಳು ಹಾಗೂ 45 ಹೈಕುಗಳನ್ನು ಒಳಗೊಂಡಿದೆ. ಕಡಿಮೆ ಸಾಲುಗಳಲ್ಲಿ ಭಾವಗಳನ್ನು ಹಿಡಿದಿಡುವ ಕವಿಯ ಪ್ರಯತ್ನ ಇಲ್ಲಿ ಕಾಣಿಸುತ್ತದೆ. ಗಜಲ್‌ನ ಜೊತೆ ಜೊತೆಗೆ ದ್ವಿಪದಿಗಳು ಹಾಗೂ ಹೈಕುಗಳಲ್ಲೂ ಭಾವತೀವ್ರವಾದ ಆಲೋಚನೆಗಳು ಕಾಣಸಿಗುತ್ತವೆ. ಕವಿಯ ಮೊದಲ ಕೃತಿಯ ಹೊರಬಂದ ಹತ್ತು ವರ್ಷಗಳ ಬಳಿಕ ಈ ಕೃತಿ ಹೊರಬರುತ್ತಿದ್ದು, ಸುದೀರ್ಘ ಅವಧಿಯ ಅನುಭವಗಳು ಇಲ್ಲಿನ ಸಾಲುಗಳಲ್ಲಿ ಅಡಕಗೊಂಡಿವೆ.

ನಿನ್ನ ಧ್ಯಾನಿಸಿದ ಮೇಲೂ

ಗಜಲ್‌ಗಳು

ನಿರ್ಮಲಾ ಶೆಟ್ಟರ

ಪುಟ: 80, ಬೆಲೆ: ರೂ.80

ಪ್ರಥಮ ಮುದ್ರಣ: 2019

ರೂಪ ಪ್ರಕಾಶನ, ಮೈಸೂರು 570004

ಈ ಸಂಕಲನದಲ್ಲಿರುವ ಗಜಲ್‌ಗಳು ತನ್ನ ಗಟ್ಟಿತನದಿಂದಾಗಿ ಥಟ್ಟನೆ ಸೆಳೆದುಬಿಡುತ್ತವೆ. ಬದುಕಿನ ಭಾವಗಳನ್ನು ಕೆಲವೇ ಸಾಲುಗಳಲ್ಲಿ ಹಿಡಿದಿಡುವಲ್ಲಿ ಕವಯಿತ್ರಿ ಸಮರ್ಥರಾಗಿದ್ದಾರೆ. ಸ್ತಿಸಂವೇದನೆ, ಮಹಿಳಾ ದೃಷ್ಟಿಕೋನದಿಂದ ಕೆಲವೊಂದು ಗಜಲ್‌ಗಳು ಮನಮುಟ್ಟಿದರೆ, ಇನ್ನು ಕೆಲವು ತ್ನ ಅದಮ್ಯ ಕನಸುಗಳಿಗಾಗಿ ಹೆಚ್ಚು ಆಪ್ತವೆನಿಸುತ್ತವೆ.

ಬೆಳಕಿನ ಸೌರಭ

ಮೂಲ: ಪ್ರೊ.ಸಿ.ಎನ್.ಶ್ರೀನಾಥ್

ಅನುವಾದ: ಪ್ರೊ.ನಾ.ದಯಾನಂದ

ಪುಟ: 133, ಬೆಲೆ: ರೂ.100

ಪ್ರಥಮ ಮುದ್ರಣ: 2019

ಧ್ವನ್ಯಾಲೋಕ ಪಬ್ಲಿಕೇಶನ್ಸ್, ಮೈಸೂರು 570006

ಇದು ಇಂಗ್ಲಿಷ್ ಕವಿತೆಗಳ ಅನುವಾದ ಕೃತಿ. 53 ಕವಿತೆಗಳಿರುವ ಈ ಸಂಕಲನದಲ್ಲಿ ಅನುವಾದದ ಗ್ರಹಿಕೆಗೆ ಅನುಕೂಲವಾಗುವಂತೆ ಮೂಲ ಇಂಗ್ಲಿಷ್ ಕವಿತೆಗಳನ್ನೂ ಪ್ರಕಟಿಸಲಾಗಿದೆ. ಕವಿ ಸಂದರ್ಶಿಸಿದ ಸ್ಥಳ, ಸಂದರ್ಭಗಳ ಕುರಿತು ಕೆಲವೊಂದು ಕವಿತೆಗಳನ್ನು ಇಲ್ಲಿ ಕಾಣಬಹುದು. ಕವಿ ಕೀಟ್ಸ್ ಕುರಿತಂತೆ ಕೀಟ್ಸ್ ಎಂಬ ಕವಿತೆ, ಬಸವಣ್ಣನ ಕುರಿತು ಕಲ್ಯಾಣ ವಚನ, ನಾಸಾ, ಕ್ಯಾಂಡಿ ಕುರಿತು, ತಮ್ಮ ಅನುಭವದ, ಕಾಣ್ಕೆಗಳ ವಿಷಯಗಳು ಇಲ್ಲಿ ಕವಿತೆಗಳಾಗಿವೆ. ಅನುವಾದಕರು ಈ ಕವಿತೆಗಳನ್ನು ಸರಳ, ಸುಲಲಿತವಾಗಿಸಲು ಪ್ರಯತ್ನಿಸಿದ್ದು ಗೋಚರಿಸುತ್ತದೆ.

****

ಕರ್ನಾಟಕ ವಿಧಾನಸಭೆಯಲ್ಲಿ ಬಿ.ವಿ.ಕಕ್ಕಿಲ್ಲಾಯ

ಸಂಪಾದಕ: ಡಾ.ಬಿ.ಶ್ರೀನಿವಾಸ ಕಕ್ಕಿಲ್ಲಾಯ

ಪುಟ: 652, ಬೆಲೆ: ರೂ.450

ಪ್ರಥಮ ಮುದ್ರಣ: 2019

ಹಿರಿಯ ಸ್ವಾತಂತ್ರö್ಯ ಹೋರಾಟಗಾರ, ಕಮ್ಯುನಿಸ್ಟ್ ನಾಯಕರಾಗಿದ್ದ ಬಿ.ವಿ.ಕಕ್ಕಿಲ್ಲಾಯ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಶಾಸಕರಾಗಿ ರಾಜ್ಯ ವಿಧಾನಸಭೆಯಲ್ಲಿ ಎತ್ತಿದ ಹಲವಾರು ಮಹತ್ವಪೂರ್ಣ ಪ್ರಶ್ನೆ, ವಿಚಾರಗಳನ್ನು ಈ ಕೃತಿ ಒಳಗೊಂಡಿದೆ. ನಿಜವಾದ ಜನಪ್ರತಿನಿಧಿಯ ಜವಾಬ್ದಾರಿ, ಆತನ ಮುಂದಿರುವ ಸವಾಲುಗಳನ್ನು ಎದುರಿಸುವ ಬಗೆ, ಜನಸಾಮಾನ್ಯರನ್ನು, ಬಡವರ್ಗದ ಜನರನ್ನು ಪ್ರತಿನಿಧಿಸುವ ರೀತಿ ಇವೆಲ್ಲವನ್ನೂ ಕಲಿಸಿಕೊಡುವ ವ್ಯಕ್ತಿತ್ವ ಬಿ.ವಿ.ಕಕ್ಕಿಲ್ಲಾಯ ಅವರದ್ದು. ಇಲ್ಲಿನ ಅವರ ಭಾಷಣಗಳು ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತದೆ. ಉತ್ತಮ ಆಡಳಿತದ ದೃಷ್ಟಿಯಂದ ಪರಿಗಣಿಸಬೇಕಾದ ಹಲವಾರು ಮಹತ್ವಪೂರ್ಣ ಅಂಶಗಳು ಇಲ್ಲಿವೆ.

ಮನುಷ್ಯನ ಮಹಾಯಾನ

ಬಿ.ವಿ.ಕ್ಕಿಲ್ಲಾಯ

ಪುಟ: 224, ಬೆಲೆ: ರೂ.225

ಪ್ರಥಮ ಮುದ್ರಣ: 2019

ಇದು ಬಿ.ವಿ.ಕಕ್ಕಿಲ್ಲಾಯ ಅವರು ಬರೆದ ಕೊನೆಯ ಪುಸ್ತಕ. ಅಪೂರ್ಣವಾಗಿರುವ ಈ ಕೃತಿಯನ್ನು ಕಕ್ಕಿಲ್ಲಾಯ ಅವರಿಗೆ ಪೂರ್ತಿಗೊಳಿಸಲು ಸಾಧ್ಯವಾಗಿಲ್ಲ. ಆದರೂ ಇಲ್ಲಿನ ವಿಚಾರಗಳು ಬಹಳ ಮಹತ್ವದ್ದಾಗಿರುವುದಿರಂದ ಇದನ್ನು ಪ್ರಕಟಿಸಲಾಗಿದೆ. ಮನುಷ್ಯ ಬದುಕಿನ ವಿಕಾಸ, ನಾಗರಿಕತೆ ಹಾಗೂ ಪ್ರಪಂಚದಲ್ಲಿ ಮನುಷ್ಯ ಕಾಣಿಸಿಕೊಳ್ಳುವುದಕ್ಕಿಂತ ಹಿಂದಿನ ಕುತೂಹಲಕಾರಿ ವಿಚಾರಗಳು ಇಲ್ಲಿವೆ. ಲೇಖಕರು ಮುನ್ನುಡಿಯಲ್ಲಿ ಹೇಳಿದಂತೆ, ಸ್ವಾಭಾವಿಕವಾಗಿ ಇದೊಂದು ಹೆಜ್ಜೆಗುರುತುಗಳ ದಾಖಲೆಯಾಗಿದೆ.

ಕನ್ನಡ ಭಾಷೆಬದುಕು

ಎಸ್.ಜಿ.ಸಿದ್ಧರಾಮಯ್ಯ

ಪುಟ: 128, ಬೆಲೆ: ರೂ.125

ಪ್ರಥಮ ಮುದ್ರಣ: 2019

ಇದು ಸಂಪೂರ್ಣವಾಗಿ ಕನ್ನಡದ ಕುರಿತ, ಕನ್ನಡಿಗರ ಬದುಕಿನ ಕುರಿತ ಕಾಳಜಿಯನ್ನು ವ್ಯಕ್ತಪಡಿಸುವ ಕೃತಿ. ಕನ್ನಡ ಶಾಲೆಗಳು ಒಂದೊಂದಾಗಿ ಮುಚ್ಚಲ್ಪಡುತ್ತಿರುವ ಹೊತ್ತಿನಲ್ಲಿ ಲೇಖಕರು ಈ ಕೃತಿಯನ್ನು ಅಂತಹ ಶಾಲೆಗಳಿಗೆ ಹಾಗೂ ಶಿಕ್ಷಣ ವಂಚಿತ, ನತದೃಷ್ಟ ಕನ್ನಡದ ಮಕ್ಕಳಿಗೆ ಅರ್ಪಿಸಿದ್ದಾರೆ. ಇಂಗ್ಲಿಷ್‌ನ ಪ್ರಭುತ್ವ, ಹಿಂದಿ ಹೇರಿಕೆ, ಗಡಿಭಾಗದ ಭಾಷಾ ಸಮಸ್ಯೆಗಳು, ತ್ರಿಭಾಷಾ ಸೂತ್ರ, ಆಡಳಿತ ಭಾಷೆಯಾಗಿ ಕನ್ನಡದ ಅಗತ್ಯ ಹೀಗೆ ಕನ್ನಡಕ್ಕೆ ಸಂಬಂಧಿಸಿ ಹಲವಾರು ಅಡೆತಡೆ, ಆತಂಕಗಳ ಕುರಿತು ಈ ಕೃತಿ ಬೆಳಕು ಚೆಲ್ಲುತ್ತದೆ.

ವರ್ತಮಾನ

ಚರಿತ್ರೆಯ ಬೆಳಕಿನಲ್ಲಿ ವರ್ತಮಾನದ ಹೆಜ್ಜೆಗಳು

ಡಾ.ಜಿ.ರಾಮಕೃಷ್ಣ

ಪುಟ: 104, ಬೆಲೆ: ರೂ.100

ಪ್ರಥಮ ಮುದ್ರಣ: 2019

ಇತಿಹಾಸಗಳೇ ಹೆಚ್ಚು ಚರ್ಚೆಯಾಗುತ್ತಿರುವ ವರ್ತಮಾನದ ಈ ಹೊತ್ತಿನಲ್ಲಿ, ಇತಿಹಾಸ, ಪುರಾಣ, ಭಗವದ್ಗೀತೆ, ಮನುಸ್ಮೃತಿ, ರಾಷ್ಟಿçÃಯತೆ ಮುಂತಾದ ವಿಚಾರಗಳನ್ನು ಮರುಪರಿಶೀಲಿಸುವ ಅಗತ್ಯವನ್ನು ತಿಳಿಸುವ ಕೃತಿಯಿದು. ಹಿರಿಯ ವಿದ್ವಾಂಸ ಜಿ.ರಾಮಕೃಷ್ಣ, ಇಂತಹ ವಿಚಾರಗಳ ಒಳಹೊಕ್ಕು ಹಲವಾರು ಸೂಕ್ಷö್ಮ ಸಂಗತಿಗಳನ್ನು ಸಮಾಜದ ಮುಂದೆ ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ಆರೋಗ್ಯಕರ ಸಮಾಜದ ನಿರ್ಮಾಣ ಬಯಸುವ ಚಿಂತನೆಗಳು ಇಲ್ಲಿವೆ.

ಸಾಮಾಜಿಕ ಕ್ರಾಂತಿಯ ಹರಿಕಾರ

ಲೋಕರಾಜ ಸಯಾಜಿರಾವ ಗಾಯಕವಾಡ

ಮೂಲ: ಬಾಬಾ ಭಾಂಡ

ಅನುವಾದ: ಚಂದ್ರಕಾಂತ ಪೋಕಳೆ

ಪುಟ: 80, ಬೆಲೆ: ರೂ.65

ಪ್ರಥಮ ಮುದ್ರಣ: 2019

ಈ ಕೃತಿಯು ಸಯಾಜಿರಾವ ಗಾಯಕವಾಡ ಅವರ ಜೀವನದ ಕುರಿತು ಸಂಕ್ಷಿಪ್ತ ಮಹಿತಿಯನ್ನು ಒಳಗೊಂಡಿದೆ. ಆಕಸ್ಮಿಕವಾಗಿ ರಾಜನಾದ ಸಯಾಜಿರಾವ ಕಡ್ಡಾಯ ಶಿಕ್ಷಣ, ಜೀತ ವಿಮೋಚನೆ, ಅಸ್ಪೃಶ್ಯತೆ ನಿವಾರಣೆ ಮುಂತಾದ ಸಾಮಾಜಿಕ ಉನ್ನತಿಯ ಕಾರ್ಯಗಳಿಗಾಗಿ ಶ್ರಮವಹಿಸಿದ್ದರು. ಪ್ರಜೆಗಳ ಕುರಿತ ಕಾಳಜಿ, ಯೋಜನಾಬದ್ಧವಾದ ಆಡಳಿತದ ಕಾರಣಕ್ಕಾಗಿ ನೆನಪಿನಲ್ಲಿ ಉಳಿಯುವ ಸಯಾಜಿ, ಹಲವಾರು ಮಹನೀಯ ನಾಯಕರಿಗೆ ಆದರ್ಶ ವ್ಯಕ್ತಿಯಾಗಿದ್ದರು. ಸಯಾಜಿರಾವ ಕುರಿತು ಸಂಕ್ಷಿಪ್ತ ಪರಿಚಯ ಒದಗಿಸಬಲ್ಲ ಕೃತಿಯಿದು.

ಎಂಗ್ಟನ ಪುಂಗಿ

ಮೂಲ ಕಥೆ: ಪೂರ್ಣಚಂದ್ರ ತೇಜಸ್ವಿ

ನಾಟಕ ರೂಪಾಂತರ: .ನಾ.ರಾವ್ ಜಾದವ್

ಪುಟ: 64, ಬೆಲೆ: ರೂ.55

ಪ್ರಥಮ ಮುದ್ರಣ: 2019

ತೇಜಸ್ವಿ ಅವರ ‘ಪರಿಸರದ ಕತೆ’ ಪುಸ್ತಕದ ಕತೆಯಾಗಿರುವ ‘ಎಂಗ್ಟನ ಪುಂಗಿ’ ಇಲ್ಲಿ ನಾಟಕದ ರೂಪ ಪಡೆದಿದೆ. ತೇಜಸ್ವಿಯವರ ಕಥಾಲೋಕದ ಪಾತ್ರಗಳನ್ನೇ ಇಲ್ಲಿಯೂ ಬಳಸಲಾಗಿದೆ. ಮಂದಣ್ಣ, ವಿಜ್ಞಾನಿ,ಮಾರ, ಪ್ಯಾರ ಮುಂತಾದ ಪಾತ್ರಗಳು ಇಲ್ಲಿವೆ. ಆಧುನಿಕ ಬದುಕಿನ ನಡುವೆ ತಮ್ಮ ಹಾದಿ ಸವೆಸಲು ಪಾಡು ಪಡುವ ಎಂಗ್ಟನಂತಹ ಹಲವಾರು ಸಾಮಾನ್ಯ ಜನರು ಸದ್ಯದ ಸಮಾಜದಲ್ಲಿ ಕಾಣಸಿಗುತ್ತಾರೆ. ಅಂತಹ ಜನರನ್ನು ಪ್ರತಿನಿಧಿಸುವ ಈ ಪಾತ್ರ, ಇಡೀ ನಾಟಕದ ಜೀವಾಳವಾಗಿ ನಿಲ್ಲುತ್ತದೆ. ಲೇಖಕರನ್ನು ಸಂಪರ್ಕಿಸಿ ನಾಟಕವನ್ನು ಪ್ರದರ್ಶನಕ್ಕೆ ಉಪಯೋಗಿಸಲು ಅವಕಾಶವಿದೆ.

ಸಮಗ್ರ ಕರ್ನಾಟಕ ದರ್ಶನ

ಸಂಪಾದನೆ: ಎಚ್.ಎಸ್.ಗೋಪಾಲ ರಾವ್

ಪುಟ: 596, ಬೆಲೆ: ರೂ.950

ಪ್ರಥಮ ಮುದ್ರಣ: 2019

ಇದು ರಾಜ್ಯದ ಜಿಲ್ಲೆಗಳ ಮತ್ತು ತಾಲೂಕುಗಳ ಮಾಹಿತಿ ಕೋಶ. ಕರ್ನಾಟಕದ ಎಲ್ಲ ತಾಲೂಕುಗಳಲ್ಲಿನ ಪ್ರಮುಖ ಸ್ಥಳ, ವಾಣಿಜ್ಯ, ವ್ಯವಹಾರ, ಪ್ರವಾಸೋದ್ಯಮ, ಸಾರಿಗೆ, ಸಂಚಾರ ಮುಂತಾದ ವಲಯಗಳ  ಸಮಗ್ರ ಮಾಹಿತಿಯನ್ನು ಈ ಬೃಹತ್ ಕೃತಿ ಒಳಗೊಂಡಿದೆ. ಚಿತ್ರಗಳು, ಅಂಕಿಅಂಶಗಳ ಜೊತೆಗೆ ಎಲ್ಲ ಮಾಹಿತಿಗಳಿಗೂ ಸ್ಪಷ್ಟತೆ ಒದಗಿಸುವ ಪ್ರಯತ್ನ ಮಾಡಲಾಗಿದೆ. ರಾಜ್ಯದ ಕುರಿತ ಮಾಹಿತಿಗಳ ತಿಳುವಳಿಕೆಗೆ ಅತ್ಯಂತ ಯೋಗ್ಯ ಕೃತಿಯಿದು.

ಚಿನಾರ್ ವೃಕ್ಷದ ಅಳು

ಭಾರತದ ವಿವಿಧ ಭಾಷೆಗಳ ಸಣ್ಣಕತೆಗಳು

ಕನ್ನಡಕ್ಕೆ: ಬಸವರಾಜ ಸಾದರ

ಪುಟ: 96, ಬೆಲೆ: ರೂ.100

ಪ್ರಥಮ ಮುದ್ರಣ: 2019

ಈ ಸಣ್ಣಕಥೆಗಳ ಸಂಕಲನವು ಭಾರತದ ವಿವಿಧ ಭಾಷೆಗಳಲ್ಲಿ ರಚಿತವಾದ ಕಥೆಗಳನ್ನು ಒಳಗೊಂಡಿದೆ. ಮಾನವೀಯ ಸಂಬಂಧಗಳ ಹುಡುಕಾಟ, ಕಳೆದುಹೋಗುತ್ತಿರುವ ಬಂಧಗಳ ಬಗೆಗಿನ ವಿಷಾದತೆ ಇಲ್ಲಿನ ಕಥೆಗಳಲ್ಲಿ ಹರಡಿಕೊಂಡಿವೆ. ಭಾವತೀವ್ರತೆ, ಅನುಕಂಪ ಮುಂತಾದ ಅಂಶಗಳೇ ಇಲ್ಲಿನ ಕಥೆಗಳನ್ನು ಗಟ್ಟಿಗೊಳಿಸುತ್ತವೆ. ಎ.ಕೆ.ರಾಮಾನುಜನ್ ಸಂಪಾದಿಸಿದ ‘ಫೋಕ್ ಟೇಲ್ಸ್ ಫ್ರಮ್ ಇಂಡಿಯಾ’ ಎಂಬ ಜಾಣಪದ ಕಥಾ ಸಂಕಲನದಿಂದ ಆಯ್ದ ಒಂದು ಕಥೆಯೂ ಇಲ್ಲಿದೆ. ನಮ್ಮವೇ ಎಂದನಿಸುವಂತೆ ಇಲ್ಲಿನ ಕಥೆಗಳನ್ನು ಬಸವರಾಜ ಸಾದರ ಅವರು ಕನ್ನಡೀಕರಿಸಿದ್ದಾರೆ.

ಮೇಲಿನ ಏಳು ಕೃತಿಗಳ ಪ್ರಕಾಶಕರು

ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೆವೇಟ್ ಲಿಮಿಟೆಡ್.

ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ,

ಬೆಂಗಳೂರು. 560001.

Leave a Reply

Your email address will not be published.