ಹೊಸಪುಸ್ತಕ

ಕೀರ್ತಿನಾಥ ಕುರ್ತಕೋಟಿ

ಎಸ್.ಆರ್.ವಿಜಯಶಂಕರ

ಪುಟ: 115, ಬೆಲೆ: ರೂ.50

ಪ್ರಥಮ ಮುದ್ರಣ: 2019

ಸಾಹಿತ್ಯ ಅಕಾಡೆಮಿ

ಕನ್ನಡದ ಪ್ರಸಿದ್ಧ ವಿಮರ್ಶಕರಾಗಿದ್ದ ಕೀರ್ತಿನಾಥ ಕುರ್ತಕೋಟಿ ಅವರ ಸಾಹಿತ್ಯ ವಿಮರ್ಶೆಯ ಕುರಿತ ಕೃತಿಯಿದು. ಸ್ವತಃ ವಿಮರ್ಶಕರಾಗಿರುವ ಲೇಖಕ ಎಸ್.ಆರ್.ವಿಜಯಶಂಕರ, ಕುರ್ತಕೋಟಿ ಅವರು ಕನ್ನಡದ ಪ್ರಮುಖ ಸಾಹಿತಿಗಳಾದ ಬೇಂದ್ರೆ, ಕುವೆಂಪು ಮುಂತಾದವರ ಸಾಹಿತ್ಯದ ವಿಮರ್ಶೆಗಳನ್ನು ಮಾಡಿದ ಬಗೆಯನ್ನು, ಅವುಗಳ ಒಳನೋಟಗಳನ್ನು ಇಲ್ಲಿ ವಿವರಿಸಿದ್ದಾರೆ. ಅವರ ವಿಮರ್ಶೆಗಳು ಸೃಷ್ಟಿಸಿದ ವಿವಾದ, ಚರ್ಚೆಗಳ ಕುರಿತೂ ಇಲ್ಲಿ ಉಲ್ಲೇಖಗಳಿವೆ.

 

ಚುಚ್ಚದ ಜೇನು

ಶಿವರಾಂ ಪೈಲೂರು

ಪುಟ: 176, ಬೆಲೆ: ರೂ.140

ಪ್ರಥಮ ಮುದ್ರಣ: 2020

ಕೃಷಿ ಮಾಧ್ಯಮ ಕೇಂದ್ರ, ಬೆಂಗಳೂರು.

ಈ ಕೃತಿಯು ಚುಚ್ಚದ ಜೇನಿನ ಕುರಿತು ಸಂಪೂರ್ಣವಾಗಿ ಮಾಹಿತಿಯನ್ನು ಒದಗಿಸುವ ಕೃತಿ. ಸಾಮಾನ್ಯವಾಗಿ ಚುಚ್ಚುವ ಜೇನಿನ ಕುರಿತು ಎಲ್ಲರೂ ಕೇಳಿರುತ್ತಾರೆ, ತಿಳಿದಿರುತ್ತಾರೆ. ಆದರೆ ಮುಜಂಟಿ ಎಂಬ ಚುಚ್ಚದೆ ಇರುವ ಜೇನಿನ ಕುರಿತು ಮಾಹಿತಿ ವಿರಳ. ಲೇಖಕರು ಈ ಕೃತಿಯ ಮೂಲಕ ಸಮಗ್ರವಾಗಿ ಚುಚ್ಚದ ಜೇನಿನ ಕುರಿತು ಮಾಹಿತಿಯನ್ನು ತಮ್ಮ ಅನುಭವಗಳ ಮೂಲಕ ಒದಗಿಸಿದ್ದಾರೆ. ಮುಜಂಟಿಯ ವೈಶಿಷ್ಟ್ಯತೆ, ಬದುಕು, ಗೂಡು ಕಟ್ಟಿಕೊಳ್ಳುವ ಕ್ರಮಗಳನ್ನು ಚಿತ್ರ ಸಹಿತವಾಗಿ ವಿವರಿಸಿರುವ ಲೇಖಕರು, ಬೇರೆ ಬೇರೆ ಪ್ರದೇಶಗಳಲ್ಲಿ ಮುಜಂಟಿ ಸಾಕಣೆಯ ಕ್ರಮಗಳನ್ನೂ ವಿವರಿಸಿದ್ದಾರೆ. ಅಲ್ಲದೆ ಈ ಕ್ಷೇತ್ರದಲ್ಲಿ ಅಧ್ಯಯನದಲ್ಲಿ, ಜೇನು ಕೃಷಿಯಲ್ಲಿ ತೊಡಗಿಸಿಕೊಂಡ ಹಲವು ಮುಖ್ಯ ವ್ಯಕ್ತಿಗಳನ್ನೂ, ಅವರ ಮಹತ್ವವನ್ನೂ ಇಲ್ಲಿ ತಿಳಿಸಿದ್ದಾರೆ.

 

ಮಾತು ಮಾತಿನ ನಡುವೆ ಭೂಗರ್ಭ ಯಾತ್ರೆ

ಟಿ.ಆರ್.ಅನಂತರಾಮು

ಪುಟ: 144, ಬೆಲೆ: ರೂ.170

ಪ್ರಥಮ ಮುದ್ರಣ: 2020

ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್

ಈ ಕೃತಿಯು ಭೂವಿಜ್ಞಾನದ ಕುರಿತಾದ ಹಲವಾರು ಸಂಗತಿಗಳನ್ನು ಒಳಗೊಂಡಿದೆ. ಭೂಮಿಗೆ ಸಂಬAಧಿಸಿದೆ ಕುತೂಹಲಕರವಾದ ವಿಷಯಗಳನ್ನು ಈ ಕೃತಿಯ ಮೂಲಕ ಲೇಖಕರು ಹೇಳಹೊರಟಿದ್ದಾರೆ. ಸಂಭಾಷಣೆಯ ಮೂಲಕವೇ ಆರಂಭವಾಗುವ ಈ ಕೃತಿ, ವಿಚಾರಗಳಿಗೆ ತೆರೆಯುತ್ತಲೇ ಓದಿಸಿಕೊಳ್ಳುತ್ತ ಸಾಗುತ್ತದೆ. ವಿಜ್ಞಾನದ ಬರಹಗಳನ್ನು, ಕೃತಿಗಳನ್ನು ಕೈಗೆತ್ತಿಕೊಂಡು ಜಟಿಲ ಎನಿಸದೆ ಆಸಕ್ತಿಯಿಂದ ಓದುವಂತಾಗಲು ಲೇಖಕರ ಈ ಪ್ರಯೋಗ ಉತ್ತಮವಾಗಿದೆ. ಭೂಗರ್ಭಕ್ಕೆ, ಕಿಂಡಿ, ಕೆಜಿಎಫ್ ಚಿನ್ನದ ಗಣಿಯೊಳಗೆ, ಜಗತ್ತು ನಡುಗಿದ ದಿನ… ಮುಂತಾದ ಬರಹಗಳು ಓದುಗರನ್ನು ದಂಗುಬಡಿಸುತ್ತವೆೆ.

 

*

ಜಾಲಿಮುಳ್ಳ ಜಾತ್ರೆಯಲ್ಲಿ

ಕವನ ಸಂಕಲನ

ಡಾ.ಅಂಜನಾ ಕೃಷಪ್ಪ

ಪುಟ: 136, ಬೆಲೆ: ರೂ.120

ಪ್ರಥಮ ಮುದ್ರಣ: 2020

ಈ ಕವನ ಸಂಕಲನ 99 ಕವಿತೆಗಳನ್ನು ಒಳಗೊಂಡಿದ್ದು, ಹೆಚ್ಚಾಗಿ ಜೀವನಾನುಭವಗಳನ್ನೇ ವ್ಯಕ್ತಪಡಿಸುವ ಕವಿತೆಗಳು ಇಲ್ಲಿವೆ. ಸಾಮಾಜಿಕ ವ್ಯವಸ್ಥೆಯಲ್ಲಿನ ಲೋಪಗಳು, ಜಾತಿವ್ಯವಸ್ಥೆಯ ಕುರಿತು ಅಸಮಾಧಾನ ಹೊರಚೆಲ್ಲುವ ಕವಿತೆಗಳನ್ನು ಕಾಣಬಹುದು. ಅಲ್ಲದೆ ಬೇರೊಂದು ಬಗೆಯಲ್ಲಿ ಸಮಾಜವನ್ನು ನೋಡುವ ದೃಷ್ಟಿಕೋನವೂ ಹಿತವೆನಿಸುತ್ತದೆ. ಹಳ್ಳಿಜಾತ್ರೆ, ಜಾತ್ರೆಬಂಡಿ, ಮೊಹರಂ, ರಂಜಾನ್ ಹೀಗೆ ಹಬ್ಬ ಜಾತ್ರೆಗಳ ವರ್ಣನೆ ಒಂದೆಡೆಯಾದರೆ ಅಕ್ಕ, ಅಲ್ಲಮ, ಬಸವಣ್ಣ ಮುಂತಾದ ವಚನಕಾರರ ಮೇಲೂ ಕವಿತೆ ಕಟ್ಟಿದ್ದಾರೆ. ಜಟಿಲವೆನಿಸದೆ ಸರಳ ಭಾಷೆಯಲ್ಲಿರುವ ಈ ಕವಿತೆಗಳು ಸುಲಭ ಓದಿಗೆ ಅನುವು ಮಾಡಿಕೊಡುತ್ತವೆÉ.

 

ಬಯಲಾಟಗಳಿಗೆ ಬಳ್ಳಾರಿ ಜಿಲ್ಲೆಯ ಮಹಿಳೆಯರ ಕೊಡುಗೆ

ಡಾ.ಅಂಜನಾ ಕೃಷಪ್ಪ

ಪುಟ: 128, ಬೆಲೆ: ರೂ.120

ಪ್ರಥಮ ಮುದ್ರಣ: 2020

ಇದು ಬಳ್ಳಾರಿ ಜಿಲ್ಲೆಯ ಬಯಲಾಟದ ಮಹಿಳಾ ಪ್ರತಿಭೆಗಳನ್ನು ಪರಿಚಯಿಸುವ ಕೃತಿ. ಅಧ್ಯಯನದ ಹಿನ್ನೆಲೆಯನ್ನು ಹೊಂದಿರುವ ಈ ಕೃತಿಯಲ್ಲಿನ ವಿವರಗಳು, ಬಳ್ಳಾರಿಯ ಕಲಾ ಪ್ರತಿಭೆಗಳ ಕುರಿತು ಅರಿಯುವುದಕ್ಕೆ ಉಪಯುಕ್ತವಾದುದು. ಬಳ್ಳಾರಿಯಲ್ಲಿ ತನ್ನದೇ ಆದ ಇತಿಹಾಸವನ್ನು ಹೊಂದಿರುವ ಬಯಲಾಟಕ್ಕೆ ಮಹಿಳೆ ಪ್ರವೇಶಿಸಿದ ಬಗೆ, ನಂತರದಲ್ಲಿ ಬಹುಪಾಲು ಮಹಿಳೆಯರು ಬಯಲಾಟವನ್ನು ವೃತ್ತಿಯಾಗಿಸಿ, ಬದುಕು ಕಟ್ಟಿಕೊಂಡ ವಿವರಗಳು ಈ ಕೃತಿಯಲ್ಲಿವೆ.

 

ಮೇಲಿನ ಎರಡು ಕೃತಿಗಳ ಪ್ರಕಾಶಕರು

ರೋಹಿಣಿ ಪ್ರಕಾಶನ, ರೋಹಿಣಿ ನಿಲಯ

ಹೂವಿನಹಡಗಲಿ, ಬಳ್ಳಾರಿ- 583219

 

ಲೋಹಿಯಾ ವಿಚಾರಗಳ ಒಂದು ವಿಮರ್ಶೆ

ಯಡೂರ ಮಹಾಬಲ

ಪುಟ: 284, ಬೆಲೆ: ರೂ.200

ಪ್ರಥಮ ಮುದ್ರಣ: 2017

ಭಾರತೀಯ ರಾಜಕೀಯದಲ್ಲಿ ರಾಮಮನೋಹರ ಲೋಹಿಯಾ ಎಂಬುದು ಅಚ್ಚೊತ್ತಿದ ಹೆಸರು. ಲೋಹಿಯಾ ಸಮಾಜವಾದ, ಅವರ ವಿಚಾರಧಾರೆ, ಚಿಂತನೆ, ನಡೆ ಭಾರತದಾದ್ಯಂತ ಜನರನ್ನು, ಬರಹಗಾರರನ್ನು, ಚಿಂತಕರನ್ನು ಪ್ರಭಾವಿಸಿದ್ದವು. ಲೋಹಿಯಾ ವಿಚಾರಗಳನ್ನು ಆಯಾ ಕಾಲಕ್ಕೆ ಮರುಚಿಂತನೆಗೆ ಒಡ್ಡಿಕೊಳ್ಳುವುದರಿಂದ ಇನ್ನಷ್ಟು ಹೊಳಹು ಹುಟ್ಟಿಕೊಳ್ಳುವ ಹಿನ್ನೆಲೆಯಲ್ಲಿ ಈ ಕೃತಿ ರಚಿತವಾಗಿದೆ. ಲೋಹಿಯಾ ಚರ್ಚಿಸಿರುವ, ಸ್ಪರ್ಶಿಸಿರುವ ಹಲವು ಕ್ಷೇತ್ರಗಳಲ್ಲಿ ಅವರದೇ ಆದ ದೃಷ್ಟಿಕೋನ, ವಿಚಾರಗಳನ್ನು ಹುಟ್ಟುಹಾಕಿದ್ದು, ಅಂತಹ ಬಹಳಷ್ಟು ಸಂಗತಿಗಳನ್ನು ಲೇಖಕರು ಈ ಕೃತಿಯ ಮೂಲಕ ಓದಿಗೆ ಒದಗಿಸಿದ್ದಾರೆ.

 

ಒಡಲ ಗೀತ

ಕವನ ಸಂಕಲನ

ಶಾಂತಾರಾಮ ನಾಯಕ, ಹಿಚಕಡ

ಪುಟ: 78, ಬೆಲೆ: ರೂ.75

ಪ್ರಥಮ ಮುದ್ರಣ: 2019

ಬಂಡಾಯ ಪ್ರಕಾಶನ, ಹೊನ್ನಾವರ

ಈ ಕವನಸಂಕಲನ ಕವಿಯ ಒಡಲಾಳದ ಮಾತುಗಳನ್ನೇ ಸಾಲುಗಳಾಗಿ ಮುಂದಿಡುತ್ತದೆ. ಇಲ್ಲಿನ ಕವಿತೆಗಳು ಕವಿಯ ಬದುಕಿನ, ಅನುಭವದ ವಿಚಾರಗಳ ಪ್ರಭಾವವಾಗಿ ಮತ್ತು ಸಾಮಾಜಿಕ, ವರ್ತಮಾನದ ಆಗುಹೋಗುಗಳಿಗೆ ಪ್ರತಿಸ್ಪಂದನವಾಗಿ ಕಾಣಿಸುತ್ತವೆ. ಅನಂತಮೂರ್ತಿ, ಖುಷ್ವಂತ್ ಸಿಂಗ್ ಮುಂತಾದ ಪ್ರಮುಖರ ಅಗಲಿಕೆಗೆ ಸಂತಾಪವನ್ನೂ, ನಿರ್ಭಯಾ ಪ್ರಕರಣ, ಗೌರಿ ಲಂಕೇಶ್ ಹತ್ಯೆ ಕುರಿತಂತೆ ಆತಂಕವನ್ನೂ ಕಾವ್ಯರೂಪದಲ್ಲಿ ಹಿಡಿದಿಡಲಾಗಿದೆ. ಕಾವ್ಯ ಲಾಲಿತ್ಯದ ಭಾಷೆಗಿಂತ ಸಂಕಟದ ಬದುಕಿನ ವ್ಯಕ್ತತೆಗೆ ತಕ್ಕನಾದ ಮಾತಿನ ಶೈಲಿಯ ಭಾಷೆ ಈ ಸಂಕಲನದ ಭಿನ್ನತೆ. ಗಿಡಗಳ ಕಡೀಬೇಡ್ರಿ, ದಮ್ಮಯ್ಯಾ ಕುಡಿಯಬೇಡಿ ಮುಂತಾದ ಜಾಗೃತಿ ಗೀತಗಳೂ ಇಲ್ಲಿವೆ.

 

*

ಮತ್ತೆ ಮತ್ತೆ ನೆನಪಾಗುವ ಗಾಂಧಿ

ಪ್ರಬಂಧ

ಪುಟ: 79, ಬೆಲೆ: ರೂ.75

ಪ್ರಥಮ ಮುದ್ರಣ: 2020

ಮಹಾತ್ಮ ಗಾಂಧಿ ಬದುಕಿನ ಘಟನೆಗಳನ್ನಾಧರಿಸಿ ಇಲ್ಲಿನ ಪ್ರಬಂಧ ಮಹತ್ತರ ಸಂದೇಶಗಳನ್ನು ಮುಂದಿಡುತ್ತದೆ. ಐದು ಅಧ್ಯಾಯಗಳಿರುವ ಈ ಕೃತಿಯಲ್ಲಿ ಒಂದೆಡೆ ಕನ್ನಡ ಕವಿಗಳು ಕಂಡ ಗಾಂಧೀಜಿಯನ್ನು ತೋರಿಸಲಾಗಿದೆ. ಕುವೆಂಪು ಎಚ್ಚೆಸ್ವಿ ಸೇರಿದಂತೆ ಹಲವು ಕವಿಗಳ ಸಾಲುಗಳು, ಪೂರ್ತಿ ಕವಿತೆಗಳನ್ನು ಪ್ರಬಂಧದ ಜೊತೆಯಲ್ಲಿಯೇ ಬಳಸಲಾಗಿದೆ. ಗಾಂಧಿ ಕುರಿತು ಪುಟ್ಟದಾದ, ಸ್ಪೂರ್ತಿದಾಯಕ ಕೃತಿ ಎನ್ನಬಹುದು.

 

ಒಡನಾಟ

ಪ್ರಬಂಧಗಳ ಸಂಕಲನ

ಪುಟ: 176, ಬೆಲೆ: ರೂ.170

ಪ್ರಥಮ ಮುದ್ರಣ: 2019

ಈ ಕೃತಿಯು, ತಮ್ಮ ಊರಿನ, ನಾಡಿನ ಹಲವು ಪ್ರಮುಖ ಸಾಹಿತಿ ಚಿಂತಕರ ಜೊತೆ ಲೇಖಕರ ಒಡನಾಟದ ಅನುಭವವನ್ನು ತೆರೆದಿಡುತ್ತದೆ. ತೇಜಸ್ವಿ, ಲಂಕೇಶ್, ಸು.ರಂ.ಎಕ್ಕುಂಡಿ, ಬಿ.ಎ.ಸನದಿ, ಹೊಸ್ತೋಟ ಮಂಜುನಾಥ ಭಾಗವತ, ಅಮ್ಮೆಂಬಳ ಆನಂದ ಮುಂತಾದ ಪ್ರಮುಖರ ಜೊತೆಗೆ ಒಡನಾಡಿದ ಅನುಭವಗಳು ಇಲ್ಲಿ ದಾಖಲಾಗಿವೆ. ಸಂಕ್ಷಿಪ್ತವಾಗಿ ಅಂತಹ ವ್ಯಕ್ತಿಗಳ ಪರಿಚಯವನ್ನೂ ಇಲ್ಲಿನ ಬರಹಗಳು ಒದಗಿಸುತ್ತವೆ.

ಮೇಲಿನ ಎರಡು ಕೃತಿಗಳ ಲೇಖಕರು ಮತ್ತು ಪ್ರಕಾಶಕರು

ಶಾಂತಾರಾಮ ನಾಯಕ, ಹಿಚಕಡ

*

ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕನ್ನಡ ಲೇಖಕರು

ಟಿ.ಪಿ. ಅಶೋಕ

ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಪುಟ: 112, ಬೆಲೆ: ರೂ.100

ಪ್ರಥಮ ಮುದ್ರಣ: 2020

ಇದು ನವಕರ್ನಾಟಕ ಪ್ರಕಾಶನದ ಸಾಹಿತ್ಯ ಸಂಪದ ಸರಣಿಯ 61ನೇ ಪುಸ್ತಕ. ಟಿ.ಪಿ.ಅಶೋಕ ಅವರ ಸಾಹಿತ್ಯ ಸೇವೆ ಕುರಿತಂತೆ ಇಲ್ಲಿ ಚರ್ಚಿಸಲಾಗಿದೆ. ಕನ್ನಡ ಸಾಹಿತ್ಯ ವಿಮರ್ಶಾ ಕ್ಷೇತ್ರದಲ್ಲಿ ಟಿ.ಪಿ.ಅಶೋಕ ಅವರ ವಿಮರ್ಶೆಗಳು ಮುಖ್ಯವಾಗುವ ಕಾರಣಗಳ ಬಗ್ಗೆ, ಅವರ ವಿಮರ್ಶೆಯಲ್ಲಿನ ಕೊರತೆಗಳ ಕುರಿತು ಪ್ರತ್ಯೇಕ ನೆಲೆಗಳಲ್ಲಿ ಇಲ್ಲಿನ ಲೇಖಕ ವಿಶ್ಲೇಷಿಸಿದ್ದಾರೆ. ಟಿ.ಪಿ.ಅಶೋಕರ ಸಾಹಿತ್ಯ ಕೊಡುಗೆ ಕುರಿತು ಸಂಕ್ಷಿಪ್ತ ಪರಿಚಯ ಒದಗಿಸುವ ಕೃತಿಯಿದು.

 

ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕನ್ನಡ ಲೇಖಕರು

ಸಿ.ಎನ್.ರಾಮಚಂದ್ರನ್

ಡಾ.ಸಿ.ನಾಗಣ್ಣ

ಪುಟ: 128, ಬೆಲೆ: ರೂ.100

ಪ್ರಥಮ ಮುದ್ರಣ: 2020

ಇದು ನವಕರ್ನಾಟಕ ಪ್ರಕಾಶನದ ಸಾಹಿತ್ಯ ಸಂಪದ ಸರಣಿಯ 57ನೇ ಪುಸ್ತಕ. ಹಿರಿಯ ಸಾಹಿತಿ ಸಿ.ಎನ್.ರಾಮಚಂದ್ರನ್ ಅವರ ಬರಹ, ಅನುವಾದ, ಅಧ್ಯಯನಗಳ ಕುರಿತು ಪರಿಚಯ ಒದಗಿಸುವ ಕೃತಿಯಿದು. ಸಿಎನ್‌ಆರ್ ಅವರ ತೌಲನಿಕ ಅಧ್ಯಯನಗಳು, ಪಾಶ್ಚಾತ್ಯ ಸಾಹಿತ್ಯದ ಜೊತೆಗೆ ನಮ್ಮ ಸಾಹಿತ್ಯದ ವಿವಿಧ ಆಯಾಮಗಳು, ಅಲ್ಲದೆ ವಿದೇಶಿ ನೆಲದಲ್ಲಿನ ಅಧ್ಯಯನಗಳ ಹಿನ್ನೆಲೆಯಲ್ಲಿ ಭಾಷಿಕ ಪ್ರಭುತ್ವಕ್ಕೆ ದೊರೆತ ಪರಿಷ್ಕಾರಕ ಶಕ್ತಿ ಸಾಮರ್ಥ್ಯವನ್ನು ಅವರು ಮುಂದಿಡುವ ಬಗ್ಗೆಯೂ ಈ ಕೃತಿ ವಿಶ್ಲೇಷಿಸುತ್ತದೆ.

ಮೇಲಿನ ಎರಡು ಕೃತಿಗಳ ಸಂಪಾದಕರು: ಡಾ.ಪ್ರಧಾನ್ ಗುರುದತ್ತ

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್

 

ಬಹುಜನ ಭಾರತ

ಡಾ.ವ್ಹಿ.ಮುನಿವೆಂಕಟಪ್ಪ

ಪುಟ: 119, ಬೆಲೆ: ರೂ.110

ಪ್ರಥಮ ಮುದ್ರಣ: 2019

ವಿದ್ಯಾವಿಶಾರದ ಪ್ರಕಾಶನ, ಗದಗ

ಇದು ವೈಚಾರಿಕ ಚಿಂತನೆಯ ಸಂಶೋಧನಾತ್ಮಕ ಬರಹಗಳ ಸಂಕಲನ. ಬುದ್ಧ, ಬಸವ, ಅಂಬೇಡ್ಕರ್, ಬಹುಜನ ಸಮಾಜ, ದಲಿತ ಚಳವಳಿ ಸಾಹಿತ್ಯ ಚಿಂತನೆಯ ವಸ್ತುಸ್ಥಿತಿಗಳ ಬಗ್ಗೆ ಇಲ್ಲಿ ವಿವರಿಸಿದ್ದಾರೆ. ಇಪ್ಪತ್ತೊಂದು ಲೇಖನಗಳಿರುವ ಈ ಕೃತಿ, ಇಲ್ಲಿನ ನಿಷ್ಟುರ ಚಿಂತನೆಗಳಿಗೆ, ಲೇಖಕರ ತೀಕ್ಷ್ಣ ಮಾತುಗಳಿಗಾಗಿ ಮುಖ್ಯವೆನಿಸುತ್ತದೆ. ದಸಂಸ ವಿಚಾರದಲ್ಲಿ ದೇವನೂರ ಮಹಾದೇವ ಹಾಗೂ ಸಿದ್ಧಲಿಂಗಯ್ಯ ಅವರನ್ನು ಇನ್ನೊಂದು ಆಯಾಮದಲ್ಲಿ ಓದುಗರ ಮುಂದಿಟ್ಟಿದ್ದಾರೆ.

 

*

1962 ಭಾರತ ಮತ್ತು ಚೈನಾ ನಡುವಿನ ಯುದ್ಧದ ಸುತ್ತ

ಯುದ್ಧ ಕಾಂಡ

ಯಡೂರು ಮಹಾಬಲ

ಪುಟ:274, ಬೆಲೆ: ರೂ.300

ಪ್ರಥಮ ಮುದ್ರಣ: 2019

ಕನ್ನಡದಲ್ಲಿ ಯುದ್ಧ ಸಾಹಿತ್ಯ ವಿರಳ ಎನಿಸುವ ಹೊತ್ತಿನಲ್ಲಿಯೇ ಈ ಕೃತಿ ಹೊರಬಂದಿದೆ. 1962ರ ಭಾರತ-ಚೈನಾ ಗಡಿ ವಿವಾದದ ಕುರಿತು ಹಲವು ಮಹತ್ವಪೂರ್ಣ ಮಾಹಿತಿಗಳನ್ನು ಲೇಖಕರು ಕಲೆ ಹಾಕಿದ್ದಾರೆ. ಅಲ್ಲದೆ ಯುದ್ಧ ಮತ್ತು ರಾಜಕೀಯ ಎಂಬುದು ಹೇಗೆ ಪರಸ್ಪರ ಪ್ರಭಾವಿಸುತ್ತವೆ ಎಂಬುದು ಕೂಡ ಇಲ್ಲಿನ ಅಂಶಗಳಿಂದ ತಿಳಿಯಬಹುದು. ಕಳಪೆ ನಾಯಕತ್ವ, ರಾಜಕೀಯ ಪ್ರೇರಿತವಾಗಿ ಹುದ್ದೆಗೇರುವ ಮುಖ್ಯಸ್ಥರು ಯುದ್ಧ ಸಂದರ್ಭದಲ್ಲಿ ವಹಿಸುವ ಪಾತ್ರ ಇಡೀ ಯುದ್ಧವನ್ನು, ಸೈನ್ಯವನ್ನು ಪರಿಣಮಿಸುವ ಬಗೆ… ಹೀಗೆ ಎಲ್ಲ ವಿಚಾರಗಳನ್ನು ಕುತೂಹಲಕಾರಿಯಾಗಿ ಈ ಕೃತಿ ತೆರೆದಿಡುತ್ತ ಸಾಗುತ್ತದೆ.

 

1962ರ ಯುದ್ಧದ ಹಿಂದಿನ ಬೆಳವಣಿಗೆಗಳು

ಯುದ್ಧ ಪೂರ್ವ ಕಾಂಡ

ಯಡೂರು ಮಹಾಬಲ

ಪುಟ: 640, ಬೆಲೆ: ರೂ.400

ಪ್ರಥಮ ಮುದ್ರಣ: 2019

ಈ ಕೃತಿ ಭಾರತ-ಚೈನಾ ನಡುವಿನ 1962ರ ಯುದ್ಧದ ಹಿಂದಿನ ಬೆಳವಣಿಗೆಗಳ ಕುರಿತು ಹಲವಾರು ಮಾಹಿತಿಗಳನ್ನು ಒದಗಿಸುತ್ತದೆ. ಭಾರತ ಚೇನಾ ಯುದ್ಧದ ಕುರಿತ ಓದಿಗೆ ಹಿನ್ನೆಲೆಯಾಗಿ ಇಲ್ಲಿನ ಮಾಹಿತಿಗಳು ಕಾಣಿಸುತ್ತವೆ. ಯುದ್ಧ ಸಂದರ್ಭದಲ್ಲಿ ಎರಡೂ ದೇಶಗಳಲ್ಲಿ ನಡೆಯುತ್ತಿದ್ದ ರಾಜಕೀಯ ಬೆಳವಣಿಗೆಗಳು ಹಾಗೂ ಯುದ್ಧದ ಕುರಿತ ಭಾರತೀಯ ಮನಸ್ಥಿತಿ ಇವೆಲ್ಲವನ್ನೂ ಇಟ್ಟುಕೊಂಡು ಈ ಕೃತಿ ಇತಿಹಾಸವನ್ನು ತೆರೆದಿಡುತ್ತಾ ಹೋಗುತ್ತದೆ.

ಮೇಲಿನ ಎರಡು ಕೃತಿಗಳ ಪ್ರಕಾಶಕರು

ಚಿಂತನ ಚಿಲುಮೆ ಪ್ರಕಾಶನ ಬೆಂಗಳೂರು

 

ಶಿಖಾಪುರದ ಶಿವಯೋಗಿ ಅರ್ಥಾತ್ ಶ್ರೀ ಗುರುಕೊಟ್ಟೂರೇಶ್ವರ ಮಹಾತ್ಮೆ

ಪೌರಾಣಿಕ ನಾಟಕ

ಹರಾಳು ಲಿಂಗಜ್ಜ

ಸಂಪಾದಕ: ಮೇಟಿ ಕೊಟ್ರಪ್ಪ

ಪುಟ: 144, ಬೆಲೆ: ರೂ.120

ಪ್ರಥಮ ಮುದ್ರಣ: 2019

ಆಹ್ವಾನ ಪ್ರಕಾಶನ, ಬಸರಕೋಡು, ಬಳ್ಳಾರಿ-583224

ಹರಾಳು ಲಿಂಗಜ್ಜ ರಚಿಸಿರುವ ಈ ನಾಟಕವನ್ನು ಅವರ ಅಗಲಿಕೆಯ ನಂತರದಲ್ಲಿ ಮೇಟಿ ಕೊಟ್ರಪ್ಪ ಅವರು ಸಂಪಾದಿಸಿದ್ದಾರೆ. ಪೌರಾಣಿಕ ಕಥೆಯೊಂದನ್ನಿಟ್ಟುಕೊಂಡು ಆಧುನಿಕ ಸನ್ನಿವೇಶಗಳ ಜೊತೆಗೆ ತಳಕು ಹಾಕುವ ಲೇಖಕರ ಪ್ರಯತ್ನ ಇಲ್ಲಿ ಕಾಣುತ್ತದೆ. ಸಾಮಾಜಿಕ ಪರಿವರ್ತನೆಗಳನ್ನು ಬಯಸಿ, ಇಲ್ಲಿನ ಹಲವು ಪಾತ್ರಗಳ ಮೂಲಕ, ಸನ್ನಿವೇಶಗಳ ಮೂಲಕ ಸಂದೇಶಗಳನ್ನು ನೀಡುತ್ತಾರೆ. ಹೆಣ್ಣು ಬಸುರಿಯಾಗದ್ದಕ್ಕೆ ಬಂಜೆ ಎನ್ನುವವರು ಅದರಲ್ಲಿ ಗಂಡಿನ ಪಾಲು ಗುರುತಿಸುವುದಿಲ್ಲ ಎಂಬ ಮಾತನ್ನೂ ಒತ್ತಿ ಹೇಳಿದ್ದಾರೆ.. ಬಸವಣ್ಣನ ವಚನಗಳ ಉಲ್ಲೇಖ ನಾಟಕದಾದ್ಯಂತ ಕಂಡುಬರುತ್ತವೆ.

 

ಹೇಳಲೇಬೇಕಾದದ್ದು ಇನ್ನೂ ಇದೆ

ಮಲ್ಲಿಕಾರ್ಜುನಗೌಡ ತೂಲಹಳ್ಳಿ

ಪುಟ: 152, ಬೆಲೆ: ರೂ.100

ಪ್ರಥಮ ಮುದ್ರಣ: 2020

ಗೀತಾಂಜಲಿ ಪುಸ್ತಕ ಪ್ರಕಾಶನ, ಶಿವಮೊಗ್ಗ

67 ಕವಿತೆಗಳು ಹಾಗೂ ಒಂದಿಷ್ಟು ಹನಿಗವಿತೆಗಳನ್ನು ಒಳಗೊಂಡಿರುವ ಈ ಸಂಕಲನ, ಕಾವ್ಯಾಸಕ್ತರನ್ನು ಬೇಗ ಸೆಳೆಯುತ್ತದೆ. ಇಲ್ಲಿನ ಕವಿತೆಗಳು ಓದುಗನನ್ನು ಎಲ್ಲೂ ತಡೆಯುವುದಿಲ್ಲ. ಒಂದೇ ಸಮನೆ ಹರಿಯುತ್ತಲೇ ಸಾಗಿದಂತೆ ಇಡೀ ಸಂಕಲನ ಓದಿ ಮುಗಿಯಬಹುದಾದಷ್ಟು ಸರಳ, ಲೀಲಾಜಾಲವಾಗಿ ಸಾಗುವ ಕವಿತೆಗಳು. ಭಾವಗಳನ್ನೂ ಅಷ್ಟೇ ಸಮರ್ಥವಾಗಿ, ಆಪ್ತವಾಗಿ ಹಿಡಿದಿಡುವ ಇಲ್ಲಿನ ಪದ್ಯಗಳು ಓದುಗನದೇ ಆಗಿಬಿಡುತ್ತವೆ.

*

ನವಿಲುಗರಿಯ ತೊಟ್ಟಿಲು

ಕಥಾ ಸಂಕಲನ

ಮೆಹಬೂಬ ಅಲಿ ಕೆ.ಎಂ.

ಪುಟ: 68, ಬೆಲೆ: ರೂ.80

ಪ್ರಥಮ ಮುದ್ರಣ: 2019

ಈ ಸಂಕಲನ 21 ಕಥೆಗಳನ್ನು ಒಳಗೊಂಡಿದೆ. ಬಹುತೇಕ ಇಲ್ಲಿನ ಕಥೆಗಳು ಪ್ರೀತಿ ಪ್ರೇಮದ ಬಗ್ಗೆಯೇ ಇವೆ. ಲೇಖಕರು ಮೊದಲ ಮಾತಿನಲ್ಲಿ ಹೇಳಿದಂತೆಯೇ ಪ್ರೇಮ ತನ್ನ ಹಸಿವು ಎಂಬಂತೆ ಇಲ್ಲಿನ ಕಥೆಗಳು ಮೂಡಿವೆ. ಉತ್ಕಟ ಪ್ರೇಮದ ಭಿನ್ನ ಆಯಾಮಗಳನ್ನು ಕಥೆಗಾರ ತನ್ನದೇ ಶೈಲಿಯಲ್ಲಿ ಚಿತ್ರಿಸಿದ್ದಾನೆ. ಇಲ್ಲಿ ಕೆಲವೊಂದು ಕಥೆಗಳು ಒಂದು ಪುಟದಷ್ಟು ಸಣ್ಣದಾದರೂ ಅವುಗಳಲ್ಲಿ ಒಂದು ಝಲಕ್ ಛಕ್ಕನೆ ಓದುಗನನ್ನು ಸೆಳೆದುಬಿಡುತ್ತದೆ.

 

ಕೂರಿಗಿ ತಾಳು

ಕವನ ಸಂಕಲನ

ಡಿ.ರಾಮಣ್ಣ ಅಲ್ರ‍್ಸಿಕೇರಿ

ಪುಟ:74, ಬೆಲೆ: ರೂ.100

ಪ್ರಥಮ ಮುದ್ರಣ: 2019

ಈ ಕವನ ಸಂಕಲನ ಕವಿಯ ನಿತ್ಯ ಬದುಕಿನ ಅನುಭವಗಳ ಜೊತೆಜೊತೆಗೆ ಸಮಾಜದ ಅವ್ಯವಸ್ಥೆಯನ್ನೂ ಚಿತ್ರಿಸುವ ಕವಿತೆಗಳನ್ನು ಒಳಗೊಂಡಿದೆ. ಪ್ರಕೃತಿಯ ಜೊತೆಗಿನ ನಂಟು, ಕವಿಯ ಆಶಾವಾದದ ಹಿನ್ನೆಲೆಗೆ ವಸ್ತುವಾಗಿ ಕಾಣಿಸುತ್ತದೆ. ಒಂದು ಬಗೆಯ ಉತ್ಸಾಹ ಕೆಲವು ಕವಿತೆಗಳಲ್ಲಿದ್ದರೆ ಇನ್ನು ಕೆಲವೆಡೆ, ಮರುಕ, ನಿರಾಶೆಯೂ ಕಾಣಬಹುದು. ಬದುಕಿನ ಏರಿಳಿತಗಳು ಭಾವದ ರೂಪದಲ್ಲಿ ಹೊಮ್ಮಿ ಕವಿತೆಗಳಾಗಿವೆ. ಪ್ರವಾಹದಿಂದ ದುರಂತ ಅನುಭವಿಸಿದವರು, ಅಗಲಿದ ಶಿಷ್ಯನ ಕುರಿತು, ಹೆತ್ತವರ ಬಗ್ಗೆ, ಹೀಗೆ ಹಲವು ಬಾವಗಳ ಕವಿತೆಗಳು ಇಲ್ಲಿವೆ.

 

ಮೇಲಿನ ಎರಡು ಕೃತಿಗಳ ಪ್ರಕಾಶಕರು

ನಿರಂತರ ಪ್ರಕಾಶನ, ಎಮ್.ಆರ್.ಅತ್ತಾರ ಬಿಲ್ಡಿಂಗ್,

ಅಮರೇಶ್ವರ 5ನೇ ಕ್ರಾಸ್, ಗದಗ. 582103

Leave a Reply

Your email address will not be published.