ಪಾರ್ಟ್‍ಟೈಮ್ ಉದ್ಯೋಗ ವ್ಯವಸ್ಥೆ

– ವಿನತೆ ಶರ್ಮ

ಉದ್ಯೋಗದಲ್ಲಿ ತೊಡಗಿಕೊಳ್ಳುವ ಸಾಂಪ್ರದಾಯಕ ವ್ಯವಸ್ಥೆಯನ್ನು ಬದಲಾಯಿಸಿ, ಇಪ್ಪತ್ತು, ಮೂವತ್ತು ವಯಸ್ಸಿನ ಹೆಣ್ಣುಗಂಡುಗಳಿಗೆ ತಮ್ಮದೇ ಕುಟುಂಬವನ್ನು ಧ್ಯಾನವಹಿಸಿ, ಮುತುವರ್ಜಿಯಿಂದ, ಹಿರೀಕರ ಸಹಾಯದಿಂದ ಸಲಹುವ ಅವಕಾಶವನ್ನು ಸರಕಾರ, ಉದ್ಯೋಗದಾರರು ಮತ್ತು ಸಮಾಜ ಮಾಡಿಕೊಡಬೇಕು.

ಮಹಿಳೆಯರಿಗೆ ಸಿಕ್ಕುವ ಹೆರಿಗೆ ರಜೆಯ ಕಾಲವನ್ನ ಈಗ ಏಳು ವಾರಗಳಿಗೆ ವಿಸ್ತರಿಸಿದ್ದಾರೆ. ಆದರೆ ಈ ಹೊಸ ಕಾನೂನು ಎಲ್ಲಾ ಉದ್ಯೋಗಸ್ಥ ಮಹಿಳೆಯರನ್ನು ತಲುಪುವ ಕಡ್ಡಾಯ ವ್ಯವಸ್ಥೆಯಾಗಬೇಕು. ಹೆಂಗಸರಿಗೆ ಆರು ತಿಂಗಳು ರಜೆ ಸಿಕ್ಕಬೇಕು. ಅಲ್ಲದೆ ಹೊಸದಾಗಿ ಹುಟ್ಟಿದ ಮಗುವಿನ ತಂದೆಗೂ ಸಹ ಕನಿಷ್ಠ ಮೂರು ತಿಂಗಳ ಪೇರೆಂಟಿಂಗ್ ರಜೆ ಕೊಡಬೇಕು. ಹೊಸ ಅಪ್ಪಂದಿರು ಹಸುಗೂಸಿನ ಮತ್ತು ಬಾಣಂತಿಯ ಆರೈಕೆಗಳನ್ನು ಮಾಡುತ್ತಾ ತಂದೆತನವನ್ನು ಆನಂದಿಸಬೇಕು.

ಮೊದಲನೆಯ ಮಗುವಾದ ನಂತರ (ರಜೆ ಕಳೆದಾದ ಮೇಲೆ) ಅಪ್ಪಅಮ್ಮಂದಿರಿಗೆ ವಾರಕ್ಕೆ ಎರಡು ದಿನ ಮಾತ್ರ (ಪಾರ್ಟ್ ಟೈಮ್), ಒಬ್ಬರ ನಂತರ ಮತ್ತೊಬ್ಬರು ಕೆಲಸ/ಉದ್ಯೋಗ ಮಾಡುವ ಪದ್ಧತಿ ಸೃಷ್ಟಿಯಾಗಬೇಕು. ಮಿಕ್ಕ ದಿನಗಳನ್ನು ಅವರು ತಮ್ಮಿಬ್ಬರ ನಡುವಿನ ಸಂಬಂಧವನ್ನು ಗಟ್ಟಿಯಾಗಿಸುವ ಮತ್ತು ತಮ್ಮ ಕಂದನ ಬೆಳವಣಿಗೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಸ್ನೇಹಮಯಿ ಪರಿಸ್ಥಿತಿಯನ್ನು ಯಾವುದೇ ತಾರತಮ್ಯಗಳಿಲ್ಲದೇ ಕಲ್ಪಿಸಬೇಕು. ಮಗುವಿನ ಮೊದಲ ಹತ್ತು ವರ್ಷದ ಬೆಳವಣಿಗೆಯಲ್ಲಿ ಅವರಿಬ್ಬರೂ ಸಕ್ರಿಯ ಪಾತ್ರ ವಹಿಸುವ ನಿಟ್ಟಿನಲ್ಲಿ ಅಂತಹ ಉದ್ಯೋಗಸ್ಥ ಹೆಣ್ಣುಗಂಡುಗಳಿಗೆಂದೇ ಪ್ರತ್ಯೇಕ, ವಿಶೇಷ ಮೀಸಲಾತಿ ಏರ್ಪಡಬೇಕು. ಆ ಮೀಸಲಾತಿ ಎಲ್ಲಾ ಗರ್ಭಿಣಿಯ ರಿಗೂ ಮತ್ತು ಅವರ ಬಾಳಸಂಗಾತಿಗೂ (ಗಂಡಾಗಲಿ, ಹೆಣ್ಣಾಗಲಿ) ಅನ್ವಯಿಸಬೇಕು. ಕಾಲಕ್ಕೆ ಅನುಗುಣವಾಗಿ, ಅವರು ಮಾಡುವ ಉದ್ಯೋಗಕ್ಕೆ ತಕ್ಕಂತೆ ಆಗಾಗ ತಮ್ಮ ನೈಪುಣ್ಯವನ್ನು ಹೆಚ್ಚಿಸಿಕೊಳ್ಳುವ ಅವಕಾಶಗಳನ್ನು ಉದ್ಯೋಗದಾತರು ಕಲ್ಪಿಸಬೇಕು.

ಮಗು ಹೈಸ್ಕೂಲಿಗೆ ಸೇರಿದ ನಂತರ ಉದ್ಯೋಗಕ್ಕೆ ಪೂರ್ಣಾವಧಿ ಸಮಯ ಹಿಂದುರುಗಿದಾಗ ಅವರು ಅದೇ ಮಟ್ಟಿನ ಕುಶಲತೆಯನ್ನು ಹೊಂದಿರುತ್ತಾರೆ. ನಡುವೆ ಇನ್ನೊಂದು ಮಗುವಾದರೆ ಪಾರ್ಟ್ ಟೈಮ್ ಕೆಲಸದ ಅವಧಿಗೆ ಹೆಚ್ಚಿನ ಐದು ವರ್ಷಗಳನ್ನ ಸೇರಿಸಬೇಕು (ಅವರಿಗೆ ಇಷ್ಟವಿದ್ದರೆ, ಒಮ್ಮತವಿದ್ದರೆ). ಮಕ್ಕಳು ಬೆಳೆಯುವ ವರ್ಷಗಳಲ್ಲಿ ಅಪ್ಪಅಮ್ಮಂದಿರು ಹಣಕಾಸಿನ ಬಗ್ಗೆ, ತಮ್ಮ ಆರ್ಥಿಕ ಪರಿಸ್ಥಿತಿಯ ಬಗ್ಗೆ ಸದಾ ಚಿಂತಿಸುವುದು ತಪ್ಪಬೇಕು. ಮಕ್ಕಳನ್ನು ಬೆಳೆಸುವ ನಿಟ್ಟಿನಲ್ಲಿ ಅವರು ನಿಗಾ ಇಡುವಂತೆ ಅವರಿಗೆ ಪ್ರೋತ್ಸಾಹಕರ ಮತ್ತು ಉತ್ತೇಜಕ ವಾತಾವರಣವನ್ನು ಉದ್ಯೋಗದಾರರು, ಸಮುದಾಯ, ಸಮಾಜ ಮತ್ತು ಸರಕಾರಗಳು ನಿರ್ಮಿಸಬೇಕು. ಮಗುವಿನ ಅಥವಾ ಇಬ್ಬರು ಮಕ್ಕಳ ಬಾಲ್ಯದ ವರ್ಷಗಳಲ್ಲಿ ಅವರ ಜೊತೆ ತಾವಿದ್ದ ಸಂತೋಷ ಮತ್ತು ತೃಪ್ತಿ ಅಂತಹ ಅಪ್ಪಅಮ್ಮಂದಿರಿಗೆ ಇರುತ್ತದೆ.

ಅವರಿಗೆ ಸರಿಯೆನಿಸಿದರೆ ಅಂತಹ ಅಪ್ಪಅಮ್ಮಂದಿರು ಅರವತ್ತು ವರ್ಷ ವಯಸ್ಸಾದಾಗ ನಿವೃತ್ತಿ ಹೊಂದುವ ಬದಲು ಎಪ್ಪತ್ತು ವರ್ಷ ವಯಸ್ಸಿನಲ್ಲಿ ನಿವೃತ್ತಿ ಹೊಂದುವ ಪದ್ಧತಿಯನ್ನು ರೂಢಿಸಬಹುದು. ಈಗ ಎಷ್ಟೋ ಮಂದಿ ಅರವತ್ತನೇ ವಯಸ್ಸಿನಲ್ಲಿ ನಿವೃತ್ತಿ ಹೊಂದಿದರೂ ಅವರಲ್ಲಿರುವ ವೃತ್ತಿ ಕೌಶಲ್ಯಗಳು, ಸಾಮಥ್ರ್ಯಗಳು ಮತ್ತು ಅಗಾಧ ಅನುಭವಗಳನ್ನು ಸಮರ್ಥವಾಗಿ ದುಡಿಸಿಕೊಳ್ಳುವ ಪರಿಸರ ಮತ್ತು ಸಂದರ್ಭಗಳು ಅಷ್ಟಕ್ಕಷ್ಟೇ ಇವೆ. ನಿಗದಿತ ಮತ್ತು ಸಂಘಟಿತ ಉದ್ಯೋಗಗಳಲ್ಲಿದ್ದ ಸುಮಾರು ಜನರ ಸಾಮಾಜಿಕ ಮತ್ತು ಮಾನವ ಬಂಡವಾಳ (ಕ್ಯಾಪಿಟಲ್) ಸರಿಯಾಗಿ ಉಪಯೋಗಕ್ಕೆ ಬರುತ್ತಿಲ್ಲ. ಇಂತಹವರು ತಮ್ಮ ಯೌವನದಲ್ಲಿ ಮತ್ತು ಮಕ್ಕಳಾದ ಮೇಲೆ ಬಿಡುವಿಲ್ಲದೆ ದುಡಿದಿರುತ್ತಾರೆ. ಮಕ್ಕಳಿಗೆ, ತಮ್ಮ ಹಿರಿಯರಿಗೆ, ಮತ್ತು ಕುಟುಂಬದ ನೆಮ್ಮದಿಯ ಜೀವನಕ್ಕೆ ಕೊಡಲು ಸಾಕಷ್ಟು ಸಮಯವಿಲ್ಲದೆ ಸಿಡಿಮಿಡಿಗೊಂಡೇ ಅರ್ಧ ಜೀವನವನ್ನು ಕಳೆಯುತ್ತಾರೆ. ನಿರ್ವಾಹವಿಲ್ಲದೆ ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಂಡು ಆಸ್ತಿ ಮಾಡುವ, ಮಕ್ಕಳಿಗೆ ಉತ್ತಮ ಶಾಲೆಯಲ್ಲಿ ಶಿಕ್ಷಣ ಕೊಡಿಸುವ ಮತ್ತು ಪಿಂಚಣಿಧನವನ್ನು ಕೂಡಿಡುವ ಚಿಂತೆಗಳಲ್ಲೇ ಅವರ ಜೀವನದ ಇಪ್ಪತ್ತು ಅಥವಾ ಮೂವತ್ತು ವರ್ಷಗಳು ಕರಗಿಹೋಗುತ್ತವೆ.

ಮಕ್ಕಳು ದೊಡ್ಡವರಾಗುತ್ತಾರೆ; ಕುಟುಂಬದ ಹಿರೀಕರು ಇಹಲೋಕವನ್ನು ತ್ಯಜಿಸಿರುತ್ತಾರೆ; ಅದೂ ಇದೂ ಎಂಬ ರೋಗಗಳು ಆವರಿಸಿಕೊಂಡಿರುತ್ತವೆ. ಹೆಚ್ಚುತ್ತಿರುವ, ಐವತ್ತರ ನಂತರ ಉಲ್ಬಣಿಸುವ ಆರೋಗ್ಯದ ಸಮಸ್ಯೆಗಳಿಗೆ ಗಮನ ಕೊಡುವುದೇ ದಿನನಿತ್ಯದ ಗೋಳಾಗುತ್ತದೆ. ಇನ್ನು ಅಳಿದುಳಿದ ಜೀವನವನ್ನು ಹೇಗೋ ಕಳೆಯುವುದು ಎಂಬ ಮನಸ್ಥಿತಿಗೆ ಬಂದುಬಿಡುವ ಜನರೇ ಹೆಚ್ಚು.

ಯೌವನದ ವರ್ಷಗಳಲ್ಲಿ ಕೆಲಸ ಮತ್ತು ಕೌಶಲ್ಯಗಳನ್ನು ಕಲಿಯುವ ದೃಷ್ಟಿಕೋನವೇ ಬೇರೆ; ವಯಸ್ಸು ಪಕ್ವವಾದ ಮೇಲೆ ಕೆಲಸಕ್ಕೆ ಸೇರ್ಪಡುವ ಜೀವನಾನುಭವದಿಂದ ಕೆಲಸವನ್ನು ನೋಡುವ ದೃಷ್ಟಿಕೋನವೇ ಬೇರೆ. ಉದ್ಯೋಗದಲ್ಲಿ ತೊಡಗಿಕೊಳ್ಳುವ ಸಾಂಪ್ರದಾಯಕ ವ್ಯವಸ್ಥೆಯನ್ನು ಬದಲಾಯಿಸಿ, ಇಪ್ಪತ್ತು, ಮೂವತ್ತು ವಯಸ್ಸಿನ ಹೆಣ್ಣುಗಂಡುಗಳಿಗೆ ತಮ್ಮದೇ ಕುಟುಂಬವನ್ನು ಧ್ಯಾನವಹಿಸಿ, ಮುತುವರ್ಜಿಯಿಂದ, ಹಿರೀಕರ ಸಹಾಯದಿಂದ ಸಲಹುವ ಅವಕಾಶವನ್ನು ಸರಕಾರ, ಉದ್ಯೋಗದಾರರು ಮತ್ತು ಸಮಾಜ ಮಾಡಿಕೊಡಬೇಕು. ಹತ್ತು ವರ್ಷ ಅವರು ನೆಮ್ಮದಿಯಿಂದ ಪಡೆದ ತಂದೆತಾಯ್ತನದ ಅನುಭವದಿಂದ ಸಮಾಜಕ್ಕೆ ಇನ್ನೂ ಒಳಿತೇ ಆಗುತ್ತದೆ. ಅದೇ ನಿಟ್ಟಿನಲ್ಲಿ ಅರವತ್ತಾದ ಮೇಲೆಯೂ ಅವರು ಕೆಲಸದಲ್ಲಿ ಮುಂದುವರೆಯುವುದನ್ನು ಪ್ರೋತ್ಸಾಹಿಸಿದರೆ ಚೆನ್ನ. ಅವರ ಜೀವಾನುಭವದ ಲಾಭವನ್ನು ಉದ್ಯೋಗ ರಂಗ ಪಡೆದು ಸಬಲವಾದರೆ ನಮ್ಮದೇ ಸಮಾಜದ ಬುಡ ಇನ್ನಷ್ಟು ಭದ್ರವಾಗುತ್ತದೆ. ಸಮಾಜದಲ್ಲಿನ ಸಂಬಂಧಗಳು ಗಟ್ಟಿಯಾಗುತ್ತವೆ.

Leave a Reply

Your email address will not be published.