ಹೊಸ ಅಲೆಗೆ ಕೊಚ್ಚಿ ಹೋದವರು

ಅನಾಥರಿಗೆ, ಮಕ್ಕಳಿಂದ ಪರಿತ್ಯಕ್ತರಾದ ವೃದ್ಧರಿಗೆ, ವಿಧವೆಯರಿಗೆ ಕೊಡಲೇಬೇಕಾದ ಒಂದು ಸಾವಿರ ರೂಪಾಯಿ ಮಾಸಿಕ ವೇತನ ಈಗ ಸುಳ್ಳು ಘೋಷಣೆ ಮಾಡಿ ಕೈಯೊಡ್ಡುವವರಿಗೂ ಸಿಗುತ್ತದೆ. ಉಚಿತವಾಗಿ ಸಿಗುತ್ತದೆಂಬಾಗ ಜನರೂ ಕೂಡ ಪ್ರಾಮಾಣಿಕತೆಗೆ ಗುಡ್‍ಬೈ ಹೇಳುತ್ತಿದ್ದಾರೆ.

ರಿಕ್ಷಾ ಚಾಲಕ ಅತ್ಯಂತ ತಿರಸ್ಕಾರದ ಮುಖಭಾವದಲ್ಲಿ ಹೇಳಿದ, “ಥತ್! ಹಿಂದಿನ ಸರಕಾರದವರು ಒಬ್ಬ ಸೂಳೆಗೆ ಐದು ಸಾವಿರ ಕೊಡುತ್ತಿದ್ರು, ಲೆಕ್ಕ ಕೇಳದೆ ಎದ್ದು ಹೋಗ್ತಿದ್ರು. ಆದ್ರೆ ಇಂದಿನವರು, ಐನೂರು ಕೊಡ್ತಾರೆ. ಮಲಗಿ ಏಳುವಾಗ ತೆರಿಗೆ ಹೆಸ್ರಿನಲ್ಲಿ ಎಲ್ಲವನ್ನೂ ಕೊತ್ಕೊಂಡು ಮಲಗಿದೋಳ ಸೀರೆ ಕೂಡ ಸರಿಪಡಿಸದೆ ಎದ್ದು ಓಡ್ತಾರೆ…” ಎಂದು ಪಿಚಕ್ಕನೆ ಉಗುಳಿದ. ಇಂದಿನ ತೆರಿಗೆ ವ್ಯವಸ್ಥೆ ಎಷ್ಟು ಕೆಟ್ಟದ್ದಾಗಿದೆ ಎಂಬರ್ಥದಲ್ಲಿ ಅವನು ಇಂತಹ ಉಪಮೆ ಬಳಸಿದ್ದ.

ಬೀಡಿ ಕಟ್ಟಿ ಬದುಕುವ ಹೆಣ್ಣುಮಗಳೊಬ್ಬಳು ತುಂಬ ಬೇಸರದಿಂದ ಹೇಳಿದಳು, `ಪ್ರತೀ ಖಾತೆಗೂ ಹದಿನೈದು ಲಕ್ಷ ಬರ್ತದೆ ಅಂದ್ಬಿಟ್ಟು ನಂಬಿಸಿದ್ರು ಅಂತ ಇನ್ನೂರು ರೂಪಾಯಿ ಕಷ್ಟದಲ್ಲಿ ಕೊಟ್ಟು ಜನ ಧನ್ ಖಾತೆ ತೆರೆದ್ವಿ. ಹಣ ಬರಲಿಲ್ಲ ಅನ್ನುವಾಗ ನಮ್ಮ ಹಣಾನಾದ್ರೂ ಕೊಡಿ ಅಂತ ಕೇಳೋಕ್ ಹೋದ್ರೆ ವ್ಯವಹಾರ ಮಾಡದ ಖಾತೆಯಲ್ಲಿರುವ ಹಣನೆಲ್ಲ ಬ್ಯಾಂಕ್ ಮುಟ್ಗೋಲು ಹಾಕ್ಕೊಂಡಿದೆ ಅಂದ್ರು. ಎಷ್ಟು ಕೋಟಿ ಖಾತೆ ಮಾಡಿ ಎಷ್ಟೊಂದು ಕೋಟಿ ದೋಚಿ ಬಿಟ್ರು ಗೊತ್ತಾ?’ ಅನಕ್ಷರಸ್ಥೆ ನಿಜ. ಆದರೆ ಲೆಕ್ಕಾಚಾರ ಯಾವನೇ ಇಕಾನಮಿ ತಜ್ಞನಿಗೂ ಕಡಮೆಯಿರಲಿಲ್ಲ.

ಪ್ರತೀ ವರ್ಷ ನಮ್ಮ ಖಾತೆಯಿಂದ ಕೇಳದೆಯೇ ಹದಿಮೂರು ರೂಪಾಯಿ ಕಿತ್ಕೊಳ್ತಾರೆ ಬ್ಯಾಂಕಿನವರು ಎಂದು ದೂರುವ ಬೀದಿ ಬದಿ ವ್ಯಾಪಾರಿಗೆ ಆ ಮೊತ್ತ ಒಂದು ದಿನದ ಲಾಭವೂ ಆಗಿರಬಹುದು. ಅವನು ತರುವ ಅಕ್ಕಿಯನ್ನೇ ಕಾದು ಒಲೆಯ ಮೇಲೆ ಎಸರಿಟ್ಟು ಊದುಗೊಳವೆಯಿಂದ ಗಾಳಿ ಹಾಕುತ್ತ ಕುಳಿತಿರುವ ಹೆಂಡತಿಯಿದ್ದಾಳೆ. ಖಾಲಿ ಅಲ್ಯುಮಿನಿಯಂ ತಟ್ಟೆಯಲ್ಲಿ ಅಂಗೈ ಅಲ್ಲಾಡಿಸಿ ನೆಕ್ಕಿಕೊಂಡು ಹಸಿವು ಶಮನಗೊಳಿಸಲು ಪ್ರಯತ್ನಿಸುವ ಮಕ್ಕಳಿಗೆ ಅವನು ಅಂದು ನಲ್ಲಿನೀರು ಮಾತ್ರ ಕೊಡಬೇಕಷ್ಟೇ. ಹೀಗೆ ಕಿತ್ತುಕೊಳ್ಳುವ ಹಣ ಖಾತೆದಾರನು ಅಪಘಾತದಲ್ಲಿ ಮೃತನಾದರೆ ಎರಡು ಲಕ್ಷದ ವಿಮಾ ಹಣವಾಗಿ ಮರಳುತ್ತದಂತೆ.

ಬ್ಯಾಂಕ್ ಖಾತೆ ಮಾಡಿದವರಲ್ಲಿ ವರ್ಷವೂ ಎಷ್ಟು ಮಂದಿ ಅಪಘಾತದಿಂದ ಸಾಯುತ್ತಾರೋ ಈ ವಿಮಾ ಹಣಕ್ಕೆ ಕೈಯೊಡ್ಡಿ ಭರ್ಜರಿ ವೈಕುಂಠ ಸಮಾರಾಧನೆ ಮಾಡುತ್ತಾರೋ ಗೊತ್ತಿಲ್ಲ. ಸಂಸಾರಕ್ಕಾಗಿ ದುಡಿಯುವ ವ್ಯಕ್ತಿಯೊಬ್ಬ ಜ್ವರ ಬಂದು ಸತ್ತರೂ ಅವನ ಕುಟುಂಬದ ಪಾಲಿಗೆ ಅದು ಅಪಘಾತವೇ. ಆದರೆ ವಿಮಾ ಹಣ ಸಿಗಬೇಕಾದರೆ ಅವನು ಟ್ರಕ್ಕಿನ ಕೆಳಗೆ ಬಿದ್ದು ಛಿದ್ರ ಛಿದ್ರವಾಗಿ ಅವನ ನರಳಿಕೆಯ ದನಿ ನೂರಾರು ಜನರ ವಾಟ್ಸ್ ಆ್ಯಪ್ ಮೂಲಕ ವಿನಿಮಯವಾದರೆ ಮಾತ್ರ ಅವಕಾಶ.

ದಿನ ಪತ್ರಿಕೆಯೊಂದರೆ ಸ್ಟ್ರಿಂಜರ್. ಅಮ್ಮಮ್ಮ ಎಂದರೆ ತಿಂಗಳಿಗೆ ಹದಿಮೂರು ಸಾವಿರ ಮಾತ್ರ ಬರುತ್ತದೆ. ಸುದ್ದಿ ಸಂಗ್ರಹಕ್ಕೆ ಸ್ವಂತ ವಾಹನದಲ್ಲಿ ಓಡಾಡಬೇಕು. ಸಂಸಾರ ನಿರ್ವಹಣೆಯಾಗಬೇಕು. ಅವನಿಗೆ ಪತ್ರಿಕೆಯವರು ಹೇಳಿದ್ದಾರೆ, “ಇನ್ನು ಮುಂದೆ ನಿನಗೆ ಕೊಡುವ ಪ್ರತೀ ನೂರು ರೂಪಾಯಿಯಲ್ಲಿ ಇಪ್ಪತ್ತು ರೂಪಾಯಿ ಕಡಿತವಾಗಿ ತೆರಿಗೆ ಇಲಾಖೆಗೆ ಹೋಗುತ್ತದೆ. ಪಾನ್ ಕಾರ್ಡ್ ಕೊಟ್ಟರೆ ಹತ್ತು ರೂಪಾಯಿ ಕಡಿತವಾಗುತ್ತದೆ. ನೀನು ತೆರಿಗೆ ವ್ಯಾಪ್ತಿಗೆ ಬರುವುದಿಲ್ಲವೆಂದಾದರೆ ವರ್ಷದ ಕೊನೆಗೆ ತೆರಿಗೆ ಇಲಾಖೆಯನ್ನು ಸಂಪರ್ಕಿಸಿ ಈ ಹಣವನ್ನು ಮರಳಿ ಪಡೆಯಬಹುದು” ಆ ಮನುಷ್ಯನಿಗೆ ನೆತ್ತಿಗೆ ಸುತ್ತಿಗೆಯಿಂದ ಬಾರಿಸಿದ ಹಾಗಾಗಿದೆ. “ನನಗೆ ಬರುವ ಎಲ್ಲ ಹಣವೂ ಬ್ಯಾಂಕ್ ಖಾತೆಗೇ ಸಂದಾಯವಾಗುತ್ತದೆ. ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಆಗಿದ್ದರೆ ಆದಾಯ ತೆರಿಗೆಗೆ ಸೇರುವ ಹಣ ಬಂದಾಗಲೇ ತಿಳಿಯುತ್ತದೆ. ಹೀಗಿದ್ದರೂ ಈ ಜುಜುಬಿ ಮೊತ್ತಕ್ಕೆ ಇಷ್ಟೊಂದು ಕಾಟ ಕೊಡ್ತಾರಲ್ಲ!” ಎಂದು ಕಣ್ಣೀರಿಡುತ್ತಾನೆ.

ಒಂದು ಮನೆ ಸೈಟ್ ಇದ್ದವನು ತನ್ನ ಅಗತ್ಯಕ್ಕಾಗಿ ಈಗ ಒಂದಿಷ್ಟು ಲಾಭಕ್ಕೆ ಮಾರಲು ಆಗುವುದಿಲ್ಲ. ಸೈಟು ಖರೀದಿಸುವವನಿಗೆ ಆ ಹಣ ಎಲ್ಲಿಂದ ಬಂತು ಎಂಬ ಲೆಕ್ಕ ಕೊಡಬೇಕು. ಹಣ ಪಡೆದವನಿಗೂ ತೆರಿಗೆ ವಂಚನೆಗೆ ಅವಕಾಶವಿಲ್ಲ ಎಂಬುದೂ ದಿಟ. ಆದರೆ ಕಡಲೆ ಮತ್ತು ಎಳ್ಳನ್ನು ಒಟ್ಟಾಗಿ ಹುರಿದರೆ ಕಡಲೆ ಕಾಯುವ ಮೊದಲೇ ಎಳ್ಳು ಕರಟಿ ಹೋಗುತ್ತದೆ. ಈಗ ಬಂದಿರುವ ತೆರಿಗೆ ನೀತಿ ಜನ ಸಾಮಾನ್ಯನ ಬದುಕನ್ನು ಸುಟ್ಟು ಹಾಕುತ್ತಿದೆ, ಕಡಲೆಯಂತೆ ದಪ್ಪ ಸಿಪ್ಪೆ ಹೊಂದಿದವರು ಆರಾಮವಾಗಿರುತ್ತಾರೆ.

ಕೆನಡಾದಲ್ಲಿರುವ ಮಿತ್ರರೊಬ್ಬರು ಊರಿಗೆ ಬಂದಾಗ ಮಾತನಾಡಲು ಸಿಕ್ಕಿದ್ದರು. “ಆ ದೇಶದಲ್ಲಿ ಪ್ರತಿಯೊಂದು ರೂಪಾಯಿಗೂ ಸಣ್ಣ ಮೊತ್ತದ ಆದಾಯ ತೆರಿಗೆ ಕೊಡಬೇಕು. ಆದರೆ ಯಾವುದೇ ಶಿಕ್ಷಣಕ್ಕೂ ಫೀಸು ಇಲ್ಲ, ಯಾವ ಖಾಯಿಲೆ ಬಂದರೂ ಪೂರ್ಣ ಚಿಕಿತ್ಸೆಯ ವೆಚ್ಚ ಸರಕಾರದಿಂದ ಪಾವತಿಯಾಗುತ್ತದೆ. ಇಲ್ಲಿ ಐದು ಲಕ್ಷದ ತನಕ ತೆರಿಗೆ ಇಲ್ಲ, ನಿಜ. ಈ ಹಣದಲ್ಲಿ ಎರಡು ಮಕ್ಕಳಿರುವ ಒಂದು ಸಂಸಾರ ಹೊಟ್ಟೆ ತುಂಬ ಊಟ ಮಾಡಿ, ಮಕ್ಕಳಿಗೆ ಶಿಕ್ಷಣ ಕೊಟ್ಟು ಜೀವನ ನಡೆಸುವುದಾದರೂ ಹೇಗೆ? ಆದಾಯ ತೆರಿಗೆ ಹತ್ತು ಲಕ್ಷದ ವರೆಗೂ ಇರಬಾರದು” ಎಂದು ಅವರು ಹೇಳಿದರು.

ಜಿಎಸ್‍ಟಿ ಜಾರಿಗೆ ಬಂದಾಗ ತಿರುಕನಿಗೂ ಕನಸು ಬಿದ್ದಿರಬಹುದು. ಇಪ್ಪತ್ತು ರೂಪಾಯಿಯ ಸೋಪು ಹತ್ತು ರೂಪಾಯಿಗೆ ಬಂದೀತು ಎಂಬ ಹಗಲು ಕನಸು ಕಂಡವರೂ ಇದ್ದರು. ಸರಕಾರದ ಖಜಾನೆ ತುಂಬಿರಬಹುದಾದರೂ ಇದರಿಂದ ಬೆಲೆಗಳು ಇಳಿದವು ಎಂದು ಹೆಮ್ಮೆಪಡಲು ಯಾವ ಆಧಾರವೂ ಸಿಗಲಿಲ್ಲ. ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದಾಗ ಸಾಕಷ್ಟು ಅನಾಹುತಗಳಾಗಿರಬಹುದು. ಆದರೆ ಸ್ವಯಂ ಪ್ರೇರಣೆಯಿಂದ ಉದ್ಯಮಿಗಳು ಉತ್ಪಾದನೆಗಳ ದರ ಇಳಿಸಿಬಿಟ್ಟಿದ್ದರು. ನಮ್ಮಲ್ಲಿ ನೋಟ್‍ಬ್ಯಾನ್ ಎಂಬುದು ಆರ್ಥಿಕ ತಜ್ಞರ ದೃಷ್ಟಿಯಲ್ಲಿ ಬಹು ದೊಡ್ಡ ಆರ್ಥಿಕ ಕ್ರಾಂತಿಯೆಂಬ ಹೊಗಳಿಕೆ ಪಡೆದಿರಬಹುದು. ಆದರೆ ದಿನದ ಕೂಳಿಗಾಗಿ ಮೈಯ ಎಲುಬುಗಳನ್ನು ತಿಕ್ಕುತ್ತಿದ್ದ ಒಬ್ಬ ಶ್ರಮಜೀವಿಯ ನಿಟ್ಟುಸಿರಿನ ಕಂಬನಿ ನೆಲದ ದೂಳಿನಲ್ಲಿ ಇಂಗಿ ಹೋಗಲು ಅದು ಕಾರಣವಾಯಿತೆಂಬುದು ಹವಾ ನಿಯಂತ್ರಿತ ಕೊಠಡಿಯಲ್ಲಿ ಕುಳಿತವರಿಗೆ ಕಾಣದೆ ಹೋಗಿರಬಹುದು.

ಜಿಎಸ್‍ಟಿ ಜಾರಿಗೆ ಬಂದ ಮಾತ್ರಕ್ಕೆ ವ್ಯಾಪಾರಿಗಳೇನೂ ಗೂಳೆ ಹೋಗಿಲ್ಲ. ಬಹುತೇಕ ಅಂಗಡಿಗಳಲ್ಲಿ ಗ್ರಾಹಕನಿಗೆ ಈಗಲೂ ಬಿಲ್ ಕೊಡುವ ಪರಿಪಾಠವಿಲ್ಲ. ಎಂಆರ್‍ಪಿ ಎಂದರೆ ಒಂದು ಪದಾರ್ಥ ತಯಾರಾದ ಜಾಗದಿಂದ ದೇಶದ ಕೊನೆಯ ಜಾಗಕ್ಕೆ ತಲುಪಿದಾಗ ವಸ್ತುವಿನ ಪ್ಯಾಕೆಟಿನಲ್ಲಿ ನಮೂದಿಸಿದಷ್ಟೇ ಹಣ ಗರಿಷ್ಠ ಬೆಲೆಯಾಗುತ್ತದೆ. ಆದರೆ ಹೆಚ್ಚಿನ ವ್ಯಾಪಾರಿಗಳು, ಔಷಧ ಮಾರಾಟಗಾರರು ಎಲ್ಲ ಕಡೆಯೂ ಗರಿಷ್ಠ ಬೆಲೆಯನ್ನೇ ಕಿತ್ತುಕೊಂಡು ಗ್ರಾಹಕನಿಗೆ ಟೋಪಿ ಹಾಕುವ ಕಾಯಕ ನಿಂತಿಲ್ಲ. ಯಾವ ಊರಿನಲ್ಲಿ ಪದಾರ್ಥದ ಬೆಲೆ ಎಷ್ಟು ಎಂಬುದನ್ನು ನಿಗದಿಗೊಳಿಸುವ ಕಾರ್ಯ ಮಾಡಿದವರಿಲ್ಲ. ಸಂಜೆಯ ಹೊತ್ತಿಗೆ ವ್ಯಾಪಾರಿಗಳು ಯಾರದೋ ಹೆಸರಿನಲ್ಲಿ ಬಿಲ್ಲು ಬರೆದು ಹರಿದು ಹಾಕುತ್ತಾರೆ. ಅಂದರೆ ಪೂರ್ಣವಾಗಿ ತೆರಿಗೆಯ ಮೊತ್ತ ಸರಕಾರದ ಖಜಾನೆಗೆ ಬರುವುದಿಲ್ಲವೆಂಬುದು ಸ್ಪಷ್ಟವಾಯಿತು.

ಓಟಿನ ಖರೀದಿಯನ್ನು ದೃಷ್ಟಿಯಲ್ಲಿರಿಸಿಕೊಂಡೇ ಸಾಲ ಮನ್ನಾ ಮಾಡುತ್ತಾರೆ. ಈರುಳ್ಳಿಯೋ, ಆಲೂಗಡ್ಡೆಯೋ ಬೆಳೆದ ಬರದ ಊರಿನ ರೈತನಿಗೆ ಬೆಳೆ ಕೈ ಕೊಟ್ಟರೆ ಸಾಲ ಅವನಿಗೆ ಶೂಲವಾಗಬಾರದು. ಆದರೆ ಸಾಮೂಹಿಕ ಸಾಲ ಮನ್ನಾದ ಅನುಕೂಲ ಅದೇ ಹಣವನ್ನು ಭರ್ಜರಿ ದರದ ಬಡ್ಡಿಗೆ ಠೇವಣಿ ಇಟ್ಟ ಕುಳವಾರುಗಳಿಗೂ ಸಿಗುವಂತಾದರೆ ಸಾಲ ಮರುಪಾವತಿ ಮಾಡದ ಪ್ರವೃತ್ತಿಗೆ ಪ್ರೇರಕವಾಗುವುದಿಲ್ಲವೆ? ಸಾಲ ಮರುಪಾವತಿ ಮಾಡಿದವನಿಗೂ ಅದನ್ನು ಹಿಂತಿರುಗಿಸುವ ಮೂಲಕ ಆಳುವ ಸರಕಾರದ ಬಗೆಗೆ ಅವರಿಗೆ ಸಂಪ್ರೀತಿ ಬರಬಹುದೇನೋ ನಿಜ. ತೆರಿಗೆ ತೆರಲಾಗದೆ ಬೆನ್ನು ಮುರಿದುಕೊಳ್ಳುತ್ತಿರುವವರ ಪಾಲಿಗೂ ಈ ಓಟು ಖರೀದಿಯ ಮನ್ನಾದ ಕೊಡುಗೆ ಒಂದರ್ಥದಲ್ಲಿ ಶೂಲವೇ ಆಗುವುದಿಲ್ಲವೆ?

ಅನಾಥರಿಗೆ, ಮಕ್ಕಳಿಂದ ಪರಿತ್ಯಕ್ತರಾದ ವೃದ್ಧರಿಗೆ, ವಿಧವೆಯರಿಗೆ ಕೊಡಲೇಬೇಕಾದ ಒಂದು ಸಾವಿರ ರೂಪಾಯಿ ಮಾಸಿಕ ವೇತನ ಈಗ ಸುಳ್ಳು ಘೋಷಣೆ ಮಾಡಿ ಕೈಯೊಡ್ಡುವವರಿಗೂ ಸಿಗುತ್ತದೆ. ಉಚಿತವಾಗಿ ಸಿಗುತ್ತದೆಂಬಾಗ ಜನರೂ ಕೂಡ ಪ್ರಾಮಾಣಿಕತೆಗೆ ಗುಡ್‍ಬೈ ಹೇಳುತ್ತಿದ್ದಾರೆ.

ಪಡಿತರ ಚೀಟಿ ಕೊಡುಗೆಯಲ್ಲಿಯೂ ಉದಾರ ಭಾವ. ಉಚಿತವಾಗಿ ಸಿಗುವ ಅಕ್ಕಿಯನ್ನು ಹಾಗೆಯೇ ಅಂಗಡಿಗೆ ಒಯ್ದು ಕೇವಲ ಹತ್ತು ರೂಪಾಯಿಗೆ ಮಾರಾಟ ಮಾಡುವವರು ಇದ್ದಾರೆ. ಇದೇ ಅಕ್ಕಿ ಯಾವುದೋ ಬ್ರಾಂಡಿನ ಚೀಲದೊಳಗೆ ತುಂಬಿ ಮೂವತ್ತೈದು ರೂಪಾಯಿಗೆ ಉಳ್ಳವರ ಊಟದ ತಟ್ಟೆಗೆ ಬರುತ್ತದೆ. ಅನಾಥರಿಗೆ, ಮಕ್ಕಳಿಂದ ಪರಿತ್ಯಕ್ತರಾದ ವೃದ್ಧರಿಗೆ, ವಿಧವೆಯರಿಗೆ ಕೊಡಲೇಬೇಕಾದ ಒಂದು ಸಾವಿರ ರೂಪಾಯಿ ಮಾಸಿಕ ವೇತನ ಈಗ ಸುಳ್ಳು ಘೋಷಣೆ ಮಾಡಿ ಕೈಯೊಡ್ಡುವವರಿಗೂ ಸಿಗುತ್ತದೆ. ಉಚಿತವಾಗಿ ಸಿಗುತ್ತದೆಂಬಾಗ ಜನರೂ ಕೂಡ ಪ್ರಾಮಾಣಿಕತೆಗೆ ಗುಡ್‍ಬೈ ಹೇಳುತ್ತಿದ್ದಾರೆ.

ಸ್ಟ್ರಿಂಜರ್ ಪಡೆಯುವ ವರ್ಷಕ್ಕೆ ಒಂದೂವರೆ ಲಕ್ಷ ಹಣದಲ್ಲಿ ಆದಾಯ ತೆರಿಗೆಯ ಬಾಬ್ತು ಕಿತ್ತುಕೊಳ್ತಾರೆ. ದಿನದಲ್ಲಿ ಐನೂರಕ್ಕಿಂತ ಹೆಚ್ಚು ದುಡಿಯುವ ಸೆಂಟ್ರಿಂಗ್ ಕೆಲಸಗಾರ ಯಾವ ವ್ಯಾಪ್ತಿಗೂ ಬರದೆ ಈಗಲೂ ಸರಕಾರ ಕೊಡುವ ಉಚಿತ ವಿದ್ಯುತ್ತಿನಿಂದ ಭಾಗ್ಯಜ್ಯೋತಿಯ ಒಂದೇ ಬಲ್ಬಿನ ಬದಲು ಫ್ರಿಜ್, ಮಿಕ್ಸಿ ಎಲ್ಲ ನಡೆಸುತ್ತಾನೆ. ಬೈಕಿನಲ್ಲಿ ಓಡಾಡುತ್ತಾನೆ. ಲೆಕ್ಕ ಸಿಗದ ಅವನ ಗಳಿಕೆ ಅವನನ್ನು ಬಡತನದ ಲಕ್ಷ್ಮಣ ರೇಖೆಯೊಳಗೆ ಜೋಪಾನ ಮಾಡುತ್ತದೆ.

ಇಂತಹ ಕೊಡುಗೆಗಳ ಮೂಲಕ ಓಟು ಬಾಚಿಕೊಳ್ಳುವ ರಾಜಕಾರಣಿಗಳು ತೆರಿಗೆಯ ರೂಪದಿಂದ ಕಿತ್ತುಕೊಳ್ಳುವ ಪರಿ ಇದೆಯಲ್ಲ, ರಿಕ್ಷಾ ಚಾಲಕ ಹೇಳಿದ್ದು ಅದನ್ನೇ, `…ಮಲಗಿ ಏಳುವಾಗ ಕೊಟ್ಟದ್ದನ್ನೆಲ್ಲ ಕಿತ್ಕೊಂಡ್ ಹೋದ್ರು’. ಯಾರೋ ಅನುಭವಿಸಿದ ಸುರತ ಸುಖದ ಖರ್ಚು ವೆಚ್ಚ ಬಡ ಬ್ರಹ್ಮಚಾರಿಯೂ ಕೊಡುವ ಅನಿವಾರ್ಯತೆ ಬಂದಾಗ ಇಂತಹ ನಿಡುಸುಯ್ಲು ತಾನಾಗಿ ಹೊಮ್ಮುತ್ತದೆ.

Leave a Reply

Your email address will not be published.