ಹೊಸ ಇಸವಿ ಸವಿ ಸವಿಯಾಗಿರಲಿ

-ಎಚ್.ಡುಂಡಿರಾಜ್

ಹೊಸ ಇಸವಿ ಸವಿ ಸವಿಯಾಗಿರಲಿ ಎಂಬುದು ಪ್ರತಿ ವರ್ಷವೂ ಹೊಸ ವರ್ಷ ಬಂದಾಗ ನಾನು ಬಂಧು ಮಿತ್ರರಿಗೆ ಕಳುಹಿಸುವ ಹಳೆಯ ಸಂದೇಶ. ಸಾಮಾನ್ಯವಾಗಿ ಎಲ್ಲಾ ವರ್ಷಗಳಲ್ಲೂ ಸಿಹಿ ಕಹಿಗಳ ಹದವಾದ ಮಿಶ್ರಣ ಇರುತ್ತಿತ್ತು. ಕಳೆದ ವರ್ಷ ಮಾತ್ರ ನನ್ನ ಸಂದೇಶ ಸಂಪೂರ್ಣವಾಗಿ ಹುಸಿಯಾಯಿತು. ಕೊರೊನಾ ವರ್ಷವಿಡೀ ಎಲ್ಲರಿಗೂ ಬರೀ ಕಹಿಯನ್ನೇ ಉಣಿಸಿತು. ಗತ ವರ್ಷವನ್ನು ಎರಡು ಸಾವಿರದ ಇಪ್ಪತ್ತು ಅನ್ನುವುದಕ್ಕಿಂತ ‘ಎಡರು ಸಾವಿನ ವಿಪತ್ತು’ ಅನ್ನುವುದೇ ಸೂಕ್ತ. ಕೊರೊನಾ ನಮ್ಮ ಜೀವನ ಶೈಲಿಯನ್ನೇ ಬದಲಿಸಿತು. 

ಅಮೆರಿಕ, ಜಪಾನ್, ರಷ್ಯ

ಎಲ್ಲವೂ ಅನವಶ್ಯ

ನಾನು ಅವಳು ಮಂಚ

ಇಷ್ಟೇ ನಮ್ಮ ಪ್ರಪಂಚ

ಎನ್ನುತ್ತಾ ಮೊದಲೇ ಸಂಕುಚಿತ ಮನೋಭಾವ ಹೊಂದಿದ್ದ ನಗರದ ಸುಶಿಕ್ಷಿತ ಜನರು ಸಾಮಾಜಿಕ ಅಂತರದ ಕಾರಣದಿಂದ ಸಾಂಘಿಕ ಚಟುವಟಿಕೆಗಳಿಂದ ಇನ್ನಷ್ಟು ದೂರವಾದರು. ಕೊರೊನಾ ತಂದ ಆರ್ಥಿಕ ಸಂಕಷ್ಟದ ಬಿಸಿ ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ, ಬೇರೆ ಬೇರೆ ಪ್ರಮಾಣದಲ್ಲಿ ತಟ್ಟಿತು. ಹೀಗಾಗಿ ಹೊಸ ವರ್ಷದಲ್ಲಿ ಸಹಜವಾಗಿ ಎಲ್ಲರಂತೆ ನನ್ನ ನಿರೀಕ್ಷೆ ನಮಗಿರುವ ಈ ಒಂದೇ ಭೂಮಿ ಕೊರೋನಾದಿಂದ ಸಂಪೂರ್ಣವಾಗಿ ಮುಕ್ತವಾಗಬೇಕು. ಇಪ್ಪತ್ತೊಂದನೆ ಇಸವಿ ‘ಇಪ್ಪತ್ತೊಂದರೆ’ ಇಸವಿಯಾಗಬಾರದು!

ಕೊರೊನಾ ಪರೋಕ್ಷವಾಗಿ ಕಲಿಸಿದ ಪಾಠಗಳಿಂದ ಜನರ ಸ್ವಾರ್ಥ ಮನೋಭಾವ, ಹಣ ಮತ್ತು ಅಧಿಕಾರದ ಲಾಲಸೆ ತುಸುವಾದರೂ ಕಡಿಮೆಯಾಗಬಹುದು ಅನ್ನುವುದು ನನ್ನ ಇನ್ನೊಂದು ನಿರೀಕ್ಷೆ.

ವೈಯಕ್ತಿಕವಾಗಿ ಹೇಳುವು ದಾದರೆ ಕೊರೊನಾದಿಂದಾಗಿ ನನ್ನ ಭಾಷಣ ಕಾರ್ಯಕ್ರಮಗಳು ಮತ್ತು ವಾರವಾರವೂ ಬರೆಯಲೇ ಬೇಕಾಗಿದ್ದ ಅಂಕಣ ಬರಹ ನಿಂತು ಹೋಯಿತು. ಹೀಗೆ ಸಿಕ್ಕಿದ ಬಿಡುವನ್ನು ನಾನು ಒಂದು ಮಕ್ಕಳ ಕವನಗಳ ಸಂಕಲನ ಹಾಗೂ ಹನಿಗವನಗಳ ಕುರಿತ ಪುಸ್ತಕ ಬರೆಯಲು ಬಳಸಿಕೊಂಡೆ. ಆದರೆ ಮುಂದಿನ ವರ್ಷವೂ ಹೀಗೆ ಗೃಹಬಂಧನದಲ್ಲಿ ಕುಳಿತು ಪುಸ್ತಕ ಬರೆಯುವುದನ್ನು ನಾನು ಬಯಸುವುದಿಲ್ಲ. ನಾನು ಏಕಾಂತಕ್ಕಿಂತ ಲೋಕಾಂತಕ್ಕೇ ಹೆಚ್ಚು ಹಾತೊರೆಯುವವನು. ಮೊಬೈಲ್ ಮತ್ತು ಲ್ಯಾಪ್ ಟಾಪ್‍ನಲ್ಲಿ ನನ್ನ ಪ್ರತಿಬಿಂಬವನ್ನೇ ನೋಡಿಕೊಂಡು ಕವನ ಓದುವ, ಭಾಷಣ ಮಾಡುವ ವರ್ಚುವಲ್ ಕಾರ್ಯಕ್ರಮಗಳು ನನಗೆ ಯಾವ ಸಂತೋಷವನ್ನೂ ನೀಡುವುದಿಲ್ಲ. ಕೆಲವೊಮ್ಮೆ ತಾಂತ್ರಿಕ ಸಮಸ್ಯೆಗಳಿಂದಾಗಿ ನಾವು ಎಷ್ಟು ಜೋರಾಗಿ ಮಾತನಾಡಿದರೂ ಆ ಕಡೆಯವರಿಗೆ ಕೇಳುವುದಿಲ್ಲ.

ಅವರು ಇನ್ನಷ್ಟು ಜೋರಾಗಿ ಮಾತಾಡಿ ಅನ್ನುತ್ತಾರೆ. ಹೀಗಾಗಿ ಇನ್ನಷ್ಟು ಕಿರುಚಬೇಕಾಗುತ್ತದೆ. ನಾನೊಮ್ಮೆ ಕಿರುಚಿ ಕಿರುಚಿ ಸಾಕಾಗಿ ಇದು ವರ್ಚುವಲ್ ಅಲ್ಲ ಕಿರ್ಚುವಲ್ ಭಾಷಣ ಅಂದಿದ್ದೆ. ಪ್ರೇಕ್ಷಕರ ನಗು ಮುಖವನ್ನು ನೋಡುತ್ತಾ ಅವರ ಚಪ್ಪಾಳೆಯನ್ನು ಕೇಳುತ್ತಾ ಮಾತನಾಡುವ, ಕವಿತೆ ಓದುವ ಖುಷಿಯೇ ಬೇರೆ. ಹೊಸ ವರ್ಷದಲ್ಲಿ ಅದು ಪುನಃ ಮರಳಲಿ ಎಂದು ನಾನು ಹಾರೈಸುತ್ತೇನೆ.

ಹೊಸ ಚಿಗುರು ಬರಬೇಕಾದರೆ ಹಳೆಯ ಎಲೆ ಉದುರಬೇಕು. ಹೊಸ ವರ್ಷ ಸಿಹಿಯಾಗಿರಲೆಂದು ನಿರೀಕ್ಷಿಸಬೇಕಾದರೆ ಹಳೆಯ ವರ್ಷದ ಕಹಿಯನ್ನು ಮರೆಯಬೇಕು. ಆದ್ದರಿಂದ ಟ್ವೆಂಟಿ ಟ್ಬೆಂಟಿಯ ಕೊರೊನಾದ ಕಹಿಯನ್ನು ಮನಸ್ಸಿನಿಂದ ಕಿತ್ತೊಗೆದು ಹೊಸ ವರ್ಷವನ್ನು ನಗುನಗುತ್ತ ಸ್ವಾಗತಿಸೋಣ. ಅದರಲ್ಲಿ ಸಿಹಿಯೇ ಹೆಚ್ಚಾಗಿರಲಿ ಎಂದು ನಿರೀಕ್ಷಿಸೋಣ.

Leave a Reply

Your email address will not be published.