ಹೊಸ ನಿರೂಪಣಾ ಕ್ರಮದಲ್ಲಿ ಅರಳುವ ‘ಅಗಣಿತ ಅಲೆಮಾರಿ’

-ಎಂ.ಎಸ್.ಆಶಾದೇವಿ

ರವಿ ಹಂಜ್ ಅವರ ಈ ಕೃತಿ ಚೈನಾ ಮತ್ತು ಭಾರತಗಳನ್ನು `ಕ್ರಿಟಿಕಲ್ ಇನ್ಸೈಡರ್’ ಆಗಿ ನೋಡಲು ಹಂಬಲಿಸುತ್ತದೆ. `ಅನ್ಯ’ವನ್ನು ಕುರಿತ ಅಪನಂಬಿಕೆ ಮತ್ತು `ಸ್ವ’ವನ್ನು ಕುರಿತ ಅತಿ ನಂಬಿಕೆ ಈ ಎರಡನ್ನೂ ಕಷ್ಟದಿಂದಲೇ ಬಿಟ್ಟುಕೊಟ್ಟು `ನಿಜ’ವನ್ನು ಕಾಣಲು ಹವಣಿಸುತ್ತದೆ. ಇತಿಹಾಸ, ಕಥನ, ಪ್ರವಾಸ ಸಾಹಿತ್ಯದ ಪ್ರಕಾರಗಳನ್ನೆಲ್ಲ ಒಳಗೊಂಡೂ ಅದು ಯಾವುದೂ ಅಲ್ಲದ ವಿಶಿಷ್ಟ ಪ್ರಕಾರವೊಂದನ್ನು ಈ ಕೃತಿ ಉದ್ದೇಶಿಸಿದೆ.

ಮನುಷ್ಯ ಬದುಕುವುದು ಯಾವ ಕಾಲದಲ್ಲಿ ಎನ್ನುವುದರ ಬಗ್ಗೆ ಅನೇಕ ಕುತೂಹಲಕಾರಿಯಾದ ಚರ್ಚೆಗಳು ನಡೆಯುತ್ತಲೇ ಇವೆ. ತ್ರಿಕಾಲಗಳು ಮನುಷ್ಯನನ್ನು ಆವರಿಸುವ ಬಗ್ಗೆ, ಕಾಡಿ ಕಂಗಾಲು ಮಾಡುವ ಬಗ್ಗೆ, ಕನಸು ಕನವರಿಕೆಗಳನ್ನು, ಭಯ ಬಯಕೆಗಳನ್ನು, ಆತಂಕಗಳನ್ನು ನಿರಂತರವಾಗಿ ಸೃಷ್ಟಿಸುತ್ತಲೇ ಮನುಷ್ಯನನ್ನು ನಿಯಂತ್ರಿಸುವ ಪರಿಯು ಬೆರಗು ಹುಟ್ಟಿಸುವಂಥದ್ದು.

ಕವಿಗಳು ಮತ್ತು ತತ್ವಜ್ಞಾನಿಗಳು ಇದನ್ನು ತಾತ್ವಿಕವಾಗಿಯೂ ಪ್ರತಿಮಾತ್ಮಕವಾಗಿಯೂ ಗ್ರಹಿಸಲು ನಡೆಸಿರುವ ಪ್ರಯತ್ನಗಳ ಅಧ್ಯಯನವೇ ರೋಚಕ ಅನುಭವವನ್ನು ಕೊಡುತ್ತದೆ. ಆದರೆ ಈ ಯಾವುದನ್ನೂ ತಾರ್ಕಿಕ ನೆಲೆಯಲ್ಲಿ `ಇನ್ನು ಮುಂದೆ ಶಬ್ದವಿಲ್ಲ’ ಎನ್ನುವ ಸ್ಪಷ್ಟತೆಯಲ್ಲಿ ಮಂಡಿಸಲಾಗುವುದಿಲ್ಲ ಎನ್ನುವುದು ಕೊನೆಗೂ `ಕಾಲ’ದ ಅಸೀಮ ಶಕ್ತಿ. ಕವಿ ಕಣವಿಯವರ ‘ಆ ಕಾಲನೆಂಬುವ ಪ್ರಾಣಿ ಕೈಗೆ ಸಿಕ್ಕರೆ ಚೆನ್ನಾಗಿ ಥಳಿಸಬೇಕೆಂದಿದ್ದೇನೆ’ ಎನ್ನುವ ಉದ್ಗಾರಕ್ಕೆ ಮೂರ್ತ ಅಮೂರ್ತ ಆಯಾಮಗಳೆರಡೂ ದಕ್ಕುವುದು ಈ ಕಾರಣಕ್ಕಾಗಿ. ಅಲ್ಲಮನ ಪ್ರಸಿದ್ಧವಾದ ಹಿಂದಣ ಹೆಜ್ಜೆ, ನಿಂತ ಹೆಜ್ಜೆ ಮತ್ತು ಮುಂದಣ ಹೆಜ್ಜೆಯ ಗ್ರಹಿಕೆಗಳೂ ಕೂಡ ಅಂತಿಮವಾಗಿ ಈ ಮೂರನ್ನೂ ಬೇರ್ಪಡಿಸಲಾಗದ ಸಾಂಗತ್ಯವನ್ನು ಕುರಿತೇ ಹೇಳುತ್ತವೆ.

ಕುತೂಹಲಕರ ಸಂಗತಿಯೆAದರೆ, ಬದುಕನ್ನು ರೂಪಿಸುವಲ್ಲಿ ಇವುಗಳ ಪಾತ್ರದ ಬಗ್ಗೆ, ಇವುಗಳನ್ನು ಕುರಿತ ನಮ್ಮ ನಿಲುವು ಏನಾಗಿರಬೇಕು ಎಂಬುದರ ಬಗ್ಗೆ ಪರಸ್ಪರ ವಿರುದ್ಧವಾದ ನೂರಾರು ಹೇಳಿಕೆಗಳಿವೆ ಮತ್ತು ಅವು ನಮ್ಮನ್ನು ಮನದಟ್ಟಾಗಿಸುವಷ್ಟು ಶಕ್ತವಾಗಿಯೂ ಇವೆ ಎನ್ನುವುದು.

ರವಿ ಹಂಜ್ ಅವರ `ಅಗಣಿತ-ಅಲೆಮಾರಿ’ ಕೃತಿಯು ಅಂತಿಮವಾಗಿ ಏನನ್ನು ಉದ್ದೇಶಿಸಿದೆ? ರೂಪಕದ ಭಾಷೆಯಲ್ಲಿ ಹೇಳುವುದಾದರೆ, ಪ್ರತಿಯೊಬ್ಬ ಮನುಷ್ಯನೂ ನಿಜದಲ್ಲಿ ಬದುಕಿನ ಪ್ರವಾಸಿಯೇ ಆಗಿರುತ್ತಾನೆ ಮತ್ತು ಪ್ರತಿಯೊಬ್ಬ ಪ್ರವಾಸಿಗೂ ಆತ/ಆಕೆಗೇ ವಿಶಿಷ್ಟವಾದ ಅನುಭವಲೋಕ ವೊಂದನ್ನು ಕಟ್ಟಿಕೊಳ್ಳಲು ಅವಕಾಶ ಇದ್ದೇ ಇರುತ್ತದೆ. ಆದರೆ ಮಾನವ ಮನಸ್ಸು; `ಈ ಕ್ಷಣ’ ಎನ್ನುವುದನ್ನು ಎಷ್ಟು ಬಯಸಿಯೂ ಅದನ್ನು ತನ್ನ ಬದುಕಿನ ದಾರಿಯಾಗಿಸಿಕೊಳ್ಳುವುದು ಸಾಧ್ಯವೇ ಎಲ್ಲವೇನೋ ಎನ್ನುವ ಪ್ರಶ್ನೆ ರವಿಯವರ ಈ ಕೃತಿಯಲ್ಲಿ ಮತ್ತೊಮ್ಮೆ ಅನುರಣಿತವಾಗುತ್ತದೆ.

ಬದುಕು `ಕೊಟ್ಟ ಕುದುರೆ’ ನಿಜ. ಆದರೆ ನೆನಪು, ಕನವರಿಕೆಗಳು ಇರಬಾರದೆಂದರೆ, ಜೊತೆಯಲ್ಲಿರುವವರ, ಕಳೆದುಹೋದ ಕಾಲದ ಜೊತೆ ಯಾವ ಸಂಬAಧವೂ ಇರಬಾರದೆಂದರೆ ಆ ಬದುಕಿಗೆ ಜೀವಂತಿಕೆಯೇ ಇರಲಾರದು ಎನ್ನುವ ನಂಬಿಕೆಯಿAದ ಈ ಕೃತಿ ಹೊರಟಿದೆ.

ಇತಿಹಾಸ, ಕಥನ, ಪ್ರವಾಸ ಸಾಹಿತ್ಯದ ಪ್ರಕಾರಗಳನ್ನೆಲ್ಲ ಒಳಗೊಂಡೂ ಅದು ಯಾವುದೂ ಅಲ್ಲದ ವಿಶಿಷ್ಟ ಪ್ರಕಾರವೊಂದನ್ನು ಈ ಕೃತಿ ಉದ್ದೇಶಿಸಿದೆ. ಕನ್ನಡವೂ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ, ಮೇಲ್ನೋಟಕ್ಕೆ `ಸಂಕರ’ ಎಂದು ಕರೆಯಬಹುದಾದ ಕಥನ/ನಿರೂಪಣಾ ಕೃತಿಗಳು ಕಾಣಿಸಿಕೊಳ್ಳುತ್ತಿವೆ. ರವಿ ಹಂಜ್ ಅವರ ಕೃತಿಯನ್ನು ನಿರೂಪಣಾ ಕಥನ ಮಾದರಿಗೆ ಸೇರಿಸಬಹುದು.

ದೇಶವೊಂದರ ರಾಜಕೀಯ ನಿಲುವುಗಳು ಅನೇಕ ಬಾರಿ ಅಲ್ಲಿನ ಸಮುದಾಯದ ಕೆಲವು ನಿಲುವುಗಳನ್ನು ಬಹು ಶಕ್ತವಾಗಿ ನಿರ್ದೇಶಿಸುತ್ತಿರುತ್ತದೆ. ಅದರಲ್ಲೂ ಮುಖ್ಯವಾಗಿ ನೆರೆಹೊರೆಯ ರಾಷ್ಟçಗಳನ್ನು ಕುರಿತ ನಮ್ಮ ಧೋರಣೆಗಳು. ಚೈನಾ ಮತ್ತು ಪಾಕಿಸ್ತಾನದ ಬಗೆಗಿನ ನಮ್ಮ ನಿಲುವುಗಳು ಎಷ್ಟೋ ಬಾರಿ ನಮಗೇ ಅತಿ ಎನ್ನಿಸುವಷ್ಟು ರಾಜಕೀಯ ಪ್ರೇರಿತವಾಗಿರುತ್ತವೆ. ಅದಕ್ಕೆ ಪುರಾವೆಗಳು ಸಿಕ್ಕಿಬಿಟ್ಟರಂತೂ ಆ ರಾಷ್ಟçಗಳು ನಮ್ಮ ಕಣ್ಣಿನಲ್ಲಿ ಖಳದೇಶಗಳಾಗಿಬಿಡುತ್ತವೆ; ವಸ್ತುನಿಷ್ಠ ದೃಷ್ಟಿಕೋನವೊಂದು ರೂಪಿತವಾಗುವುದು ಸಾಧ್ಯವೇ ಇಲ್ಲ ಎನ್ನುವ ಮಟ್ಟಿಗೆ.

ಈ ಎಲ್ಲ ಹಿನ್ನೆಲೆಯಲ್ಲಿ ರವಿ ಹಂಜ್ ಅವರ ಈ ಕೃತಿ ಚೈನಾ ಮತ್ತು ಭಾರತಗಳನ್ನು `ಕ್ರಿಟಿಕಲ್ ಇನ್ಸೈಡರ್’ ಆಗಿ ನೋಡಲು ಹಂಬಲಿಸುತ್ತದೆ. ಈಗಾಗಲೇ ಸ್ಥಾಪಿತವಾಗಿರುವ ನಿಲುವುಗಳ ಜೊತೆ ವಾಸ್ತವವನ್ನು ಎದುರಿಗಿಡಲು ಇದು ಪ್ರಯತ್ನಿಸುತ್ತದೆ. `ಅನ್ಯ’ವನ್ನು ಕುರಿತ ಅಪನಂಬಿಕೆ ಮತ್ತು `ಸ್ವ’ವನ್ನು ಕುರಿತ ಅತಿ ನಂಬಿಕೆ ಈ ಎರಡನ್ನೂ ಕಷ್ಟದಿಂದಲೇ ಬಿಟ್ಟುಕೊಟ್ಟು `ನಿಜ’ವನ್ನು ಕಾಣಲು ಹವಣಿಸುತ್ತದೆ.

ಚೈನಾದ ಕಮ್ಯುನಿಸ್ಟ್ ಆಡಳಿತ, ಅದರ ಆರಾಧಿತ ನಾಯಕ ಮತ್ತು ಆತನ ತತ್ವ, ಯೋಜನೆಗಳು ನಿಜಕ್ಕೂ ಚೈನಾಕ್ಕೆ ಕೊಟ್ಟದ್ದೇನು, ಆಗಿದ್ದೇನು ಈ ಎಲ್ಲವನ್ನೂ ಸಾಧಾರಣೀಕರಣದ ಭಿತ್ತಿಯಲ್ಲಿ ಮಂಡಿಸುತ್ತಾರೆ. ಇದು ಯಾರೋ ಕೆಲವರ ಅಭಿಪ್ರಾಯವಲ್ಲ, ಇದನ್ನು ಬಹುಮತ ಎಂದು ಕರೆಯಬಹುದು ಎನ್ನುವ ಖಾತ್ರಿಯನ್ನೂ ಗೆಳೆಯ ಲೀ ಕೊಟ್ಟದ್ದನ್ನು ತಮ್ಮ ಮಾತುಗಳಲ್ಲಿ ಅವರು ಸ್ಪಷ್ಟ ಪಡಿಸುತ್ತಾರೆ.

ಶಾಂಘೈನಿOದ ದಾವಣಗೆರೆಯ ತನಕದ ಈ ಅಲೆಮಾರಿಯ ನಿರೂಪಣೆಯು ನಿಂತ ಹೆಜ್ಜೆಯನ್ನು ಅರಿಯುತ್ತಲೇ `ತಿರುಗಿಸಿ, ಕಣ್ಣು ಹೊರಳಿಸಿ’ ನೋಡುವ ನೋಟವನ್ನೂ ಒಳಗೊಂಡಿದೆ. ಇರುವ ಸೂರ್ಯನಲ್ಲಿ ಮಿತಿ ದೌರ್ಬಲ್ಯಗಳನ್ನು ಕಂಡು, ಬೇರೊಬ್ಬ ಸೂರ್ಯನನ್ನು ತರುವ ವಾಗ್ದಾನ ಮಾಡಿ ಕೊನೆಗೊಂದು ದಿನ ಸ್ವಯಂ ಸೂರ್ಯ ನಾ ಬಂದೇನೆAದ ನಾಯಕನ ಸುತ್ತ ಸುಳಿದ, ಸುಳಿಯುತ್ತಲೇ ಇರುವ ಚೈನಾ ಕಮ್ಯುನಿಸ್ಟ್ ಪ್ರಣಾಳಿಕೆಗಳನ್ನು ತನಗೆ ಬೇಕಾದಂತೆ ತಿರುಚಿದ, ಜನಾಂಗಗಳೆ ನಲುಗುವಂತೆ ಮಾಡಿದ ವಿಪರ್ಯಾಸವನ್ನು ಹಲವು ಮೂಲ, ಹಲವು ವಿವರಗಳಲ್ಲಿ ಇದು ಅವ್ಯಾಖ್ಯಾನಿಸಲು ನೋಡುತ್ತದೆ.

ಡಿ.ಆರ್.ನಾಗರಾಜ್ ಅವರ ಚೈನಾ ಪ್ರವಾಸವನ್ನು ಕುರಿತು ಬರೆದ ಮಹತ್ವದ ಲೇಖನವೊಂದು ನೆನಪಾಗುತ್ತಿದೆ. ತನ್ನ ಸಂಸ್ಕೃತಿಯ ಧಾತುಗಳನ್ನೇ ಆಂಟಿಕ್‌ಗಳಾಗಿ ಮಾರುವ ಸ್ಥಿತಿ ಯಾವ ದೇಶಕ್ಕೂ ಬರಬಾರದು ಎಂದು ಆ ಲೇಖನ ಕೊನೆಯಾಗುತ್ತದೆ. ಅದೊಂದು ಎಲ್ಲ ಅರ್ಥದಲ್ಲೂ ದಿವಾಳಿ ಎದ್ದ ದೇಶದ ಸ್ಥಿತಿಯ ದ್ಯೋತಕ ಎನ್ನುವ ಧ್ವನಿ ಆ ಲೇಖನದಲ್ಲಿದೆ. ತಮ್ಮ ಯೌವನದ ದಿನಗಳಲ್ಲಿ ಅಪಾರ ಭರವಸೆ ಮೂಡಿಸಿದ್ದ ತಾತ್ವಿಕತೆಯೊಂದು ಹೀಗೆ ಕೊನೆಯಾಗಿರುವ, ವಿಕಾರಗೊಂಡಿರುವ ಸ್ಥಿತಿಯ ಬಗ್ಗೆ ಒಂದು ವಿಷಾದವಿದೆ ಅಲ್ಲಿ. ಅಗಣಿತ ಅಲೆಮಾರಿಯನ್ನು ಓದುವಾಗ ಇದು ಅದರ ವಿವರಣೆಯನ್ನೇ ಕೊಡುತ್ತಿದೆ ಎನ್ನಿಸಿತು.

ಹೆರಿಗೆಯೊಂದರ ಸನ್ನಿವೇಶವನ್ನು ಇವರು ಇಡೀ ಚೈನಾದ ಪರಿಸ್ಥಿತಿಗೆ ರೂಪಕದಂತೆ ಕಟ್ಟಿದ್ದಾರೆ. ತನ್ನ ನಂಬಿಕೆಯಲೋಕ, ಸಾಂಸ್ಕೃತಿಕ ಬೇರುಗಳು ಮತ್ತು ಮೂಢನಂಬಿಕೆಗಳ ನಡುವಿನ ಗೆರೆಯೇ ಅಳಿಸಿಹೋದ ಅತಂತ್ರದಲ್ಲಿದ್ದ ತಂದೆ ತನ್ನ ಮಗುವಿನ ಹುಟ್ಟಿನ ಸಂದರ್ಭದಲ್ಲಿ ಅದನ್ನು ಮತ್ತೆ ಪಡೆದುಕೊಳ್ಳಲು ನಡೆಸುವ ಹರ ಸಾಹಸದಂತಿದೆ ಅದು. ತಂದೆಯ ಅಪನಂಬಿಕೆ, ಅಜ್ಜಿಯ ಶಂಕೆಯಿಲ್ಲದ ನಂಬಿಕೆ ಮತ್ತು ಈ ಎರಡರ ನಡುವೆ ಹೊಯ್ದಾಡುತ್ತಿರುವ ಬಾಲಕ ಈ ಮೂವರನ್ನೂ ಒಂದೇ ವೇದಿಕೆಯಲ್ಲಿ ತರುವ ಮೂಲಕ ಮೂರು ದೃಷ್ಟಿಕೋನಗಳನ್ನು ಈ ಪಠ್ಯ ಸೊಗಸಾಗಿ ಧ್ವನಿಸುತ್ತದೆ.

ಕರಾರುಗಳೇ ಇಲ್ಲದೆ ಲೋಕಸಮಸ್ತವನ್ನೂ ಪ್ರೀತಿಸಬೇಕೆನ್ನುವ ತಥಾಗತನನ್ನು ತನ್ನ ಆರಾಧ್ಯ ದೈವವಾಗಿಸಿಕೊಂಡ ಸಮುದಾಯವು ಅದಕ್ಕೆ ತದ್ವಿರುದ್ಧ ಎನ್ನುವಂತೆ ಮಾನವ ದ್ವೇಷಿಯಾಗಿ ಅಮಾನವೀಯವಾಗಿ ಬಿಟ್ಟಿರುವ ಕ್ರೂರ ಬಂಡವಾಳಶಾಹಿ ಧೋರಣೆಯನ್ನು ದೇಶವಾಸಿಗಳಿಗೆ ಹೇರುತ್ತಿರುವ ವಿಪರ್ಯಾಸ, ಅದರಿಂದ ಹೊರಬರಲಾಗದ ದುಡಿಯುವ ವರ್ಗದ ತಳಮಳವನ್ನು ಮತ್ತೆ ಮತ್ತೆ ಇಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ ಇದು ವಿಘ್ನ ಸಂತೋಷವಲ್ಲ. ನಮಗೆ ತೊಂದರೆ ಕೊಡುತ್ತಿರುವ ರಾಷ್ಟçವೊಂದರ ಸ್ಥಿತಿಯನ್ನು ನೋಡಿ ಹಾಗೆ ಆಗಬೇಕು ಎನ್ನುವ ಸೇಡಿನ ಭಾವದ ಸುಳಿವೇ ಇಲ್ಲ ಇಲ್ಲಿ. ಬದಲಿಗೆ ಅಯ್ಯೋ ಇದೇನು ಪರಿಸ್ಥಿತಿ ಎನ್ನುವ ಮಾನವಾನುಭವವೇ ಮುಖ್ಯವಾಗಿರುವುದೇ ಈ ಕೃತಿಯ ಹೆಗ್ಗಳಿಕೆ.

ಇದೇ ಮಾನವಾನುಭವದ ಆರ್ದ್ರತೆ ಭಾರತದ ಮಟ್ಟಿಗೂ ಮುಂದುವರೆಯುತ್ತದೆ. ನಮ್ಮ ಭವ್ಯ ಭಾರತದ ಸ್ಥಿತಿಯಾದರೂ ಏನು ಭಿನ್ನ? ಭ್ರಷ್ಟಾಚಾರವೋ, ಹೆಣ್ಣಿನ ಮೇಲಿನ ಶೋಷಣೆಯೋ, ಅಧಿಕಾರಿಗಳ ಅಟ್ಟಹಾಸವೋ ಈ ಎಲ್ಲವೂ ಸೇರಿ ದೇಶವು ನಿರ್ನಾಮವಾಗುತ್ತಿರುವುದರ ಬಗೆಗಿನ ದಿಗ್ಭçಮೆ ಇಲ್ಲಿದೆ. ಪರದೇಶದಲ್ಲಿರುವಾಗ ಸ್ವದೇಶದ ಮಿತಿಗಳು ಗೌಣವಾಗಿ ಕಾಣುವುದೇ ಹೆಚ್ಚು ಮತ್ತು ಸಹಜ. ಅದರಾಚೆಗೆ ನೋಡ ಬೇಕೆಂದರೆ ಮಮಕಾರವನ್ನು ತೊರೆದ ಮನಸ್ಥಿತಿಯೊಂದು ಬೇಕು, ಅದು ಇಲ್ಲಿ ಸಾಧಿತವಾಗಿದೆ. ಆದರೆ ಹೀಗಿದ್ದೂ ಭಾರತದ ಬಗೆಗಿನ ನಿರೂಪಣೆಗಿಂತ ಚೈನಾದ್ದೇ ಪ್ರಿಯವಾಗಲು ನಮ್ಮ ದೇಶದ ಬಗೆಗಿನ ಅತಿ ಪರಿಚಿತತೆಯೂ ಕಾರಣವಿರಬಹುದು. ಭಾಷೆಯನ್ನು ಇನ್ನಷ್ಟು ಸೂಕ್ಷ÷್ಮವಾಗಿಸಿಕೊಳ್ಳುವುದು ಅಗತ್ಯ.

ರವಿ ಅವರ ಈ ಕೃತಿ ಕನ್ನಡದಲ್ಲಿ ಹೊಸ ನಿರೂಪಣಾ ಕ್ರಮವೊಂದನ್ನು ಪರಿಚಯಿಸುತ್ತಿದೆ. ತನ್ನ ಪ್ರಯತ್ನದಲ್ಲಿ ಅದು ಯಶಸ್ವಿಯೂ ಆಗಿದೆ.

 

Leave a Reply

Your email address will not be published.