ಹೊಸ ಪೀಳಿಗೆಯ  ನಳನಳಿಸುವ ಮಾದರಿಗಳು

ಇದು ಕರ್ನಾಟಕ ರಾಜ್ಯೋತ್ಸವ ಸಂದರ್ಭ. 22 ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡಿಗರು ಸರಿಸುಮಾರು ಏಳು ನೂರು ವರ್ಷಗಳ ನಂತರ ಒಂದೇ ರಾಜಕೀಯದ ಆಳ್ವಿಕೆಯಡಿ ಬರಲು ಐವತ್ತು ವರ್ಷಗಳ ಕಾಲ ಹೋರಾಡಿ ಪಡೆದುಕೊಂಡಿದ್ದು ಕರ್ನಾಟಕದ ಏಕೀಕರಣ. ಮೌಢ್ಯ, ಅನಕ್ಷರತೆಯೇ ತುಂಬಿದ್ದ ಕಾಲದಲ್ಲಿ, ರಸ್ತೆ, ರೈಲು ಸಂಪರ್ಕವಾಗಲಿ, ಟಿವಿ, ರೇಡಿಯೋ, ಪತ್ರಿಕೆ, ಇಂಟರ್ ನೆಟ್ ತರಹದ ಸಮೂಹ ಮಾಧ್ಯಮಗಳ ಅನುಕೂಲ ಇಲ್ಲದ ಕಾಲದಲ್ಲಿ, ಇಂತಹದೊಂದು ಚಳವಳಿ ರೂಪಿಸಿ ಗೆಲುವು ಪಡೆದಿದ್ದು ಇಪ್ಪತ್ತನೆಯ ಶತಮಾನದಲ್ಲಿ ಕನ್ನಡಿಗರು ಕನ್ನಡದ ಹೆಸರಲ್ಲಿ ಪಡೆದ ಅತೀ ದೊಡ್ಡ ರಾಜಕೀಯವಾದ ಗೆಲುವು ಅನ್ನಬಹುದು.

ಏಕೀಕರಣದ ಹೊತ್ತಲ್ಲಿ ಇದ್ದ ಹಿರಿಯರ ಆಶಯಗಳು ಬಹಳ ಸರಳವಾಗಿದ್ದವು. ಕನ್ನಡಿಗರದ್ದೇ ಒಂದು ಸರ್ಕಾರ ಬರುತ್ತಿರುವುದರಿಂದ ಕನ್ನಡಿಗರಿಗೆ ಕನ್ನಡದಲ್ಲಿ ಶಿಕ್ಷಣ, ನಾಗರಿಕ ಸೇವೆಗಳು, ನ್ಯಾಯ ದಾನದ ಸೌಲಭ್ಯ, ಎಲ್ಲ ರೀತಿಯ ಉದ್ಯೋಗಳಲ್ಲೂ ಮೊದಲ ಮನ್ನಣೆ, ಜಾತಿ-ಧರ್ಮದ ಬಂಧಗಳನ್ನು ಮೀರಿ ಕರ್ನಾಟಕತ್ವ ಅನ್ನುವ ನೆಲೆಯಲ್ಲಿ ಭಾವನಾತ್ಮಕವಾದ ಒಗ್ಗಟ್ಟು, ಎಲ್ಲ ಭಾಗದ ಕನ್ನಡಿಗರಿಗೂ ಏಳಿಗೆಯಾಗುವ ಸಮಾನ ಅವಕಾಶ ಹೀಗೆ ಅವರ ಆಶಯಗಳಿದ್ದವು.

ಏಕೀಕರಣದ 63 ವರ್ಷಗಳ ನಂತರ ನೋಡಿದಾಗ ಈ ಆಶಯಗಳಲ್ಲಿ ಕೆಲವು ಖಂಡಿತವಾಗಿಯೂ ಈಡೇರಿದ್ದರೂ ಕೈಗೂಡದ ಕನಸುಗಳ ಪಟ್ಟಿಯೇ ದೊಡ್ಡದಿದೆ. ಭಾಷೆ ಅನ್ನುವುದು ಕೇವಲ ಒಂದು ಸಂಪರ್ಕದ ಸಾಧನವಲ್ಲ, ಅದು ಆ ಭಾಷಿಕರ ನಡುವಿನ ಸಹಕಾರದ ಸಾಧನ. ಒಂದು ಭಾಷಿಕರ ಏಳಿಗೆಯ ಕುರ್ಚಿಗೆ ಇರುವ ಕಲಿಕೆ, ದುಡಿಮೆ, ಛಲ ಮತ್ತು ಒಗ್ಗಟ್ಟು ಅನ್ನುವ ನಾಲ್ಕು ಕಾಲುಗಳನ್ನು ಚೆನ್ನಾಗಿ ಕಟ್ಟಿಕೊಡಬಲ್ಲ ಸಾಮಥ್ರ್ಯ ಯಾವುದಾದರೂ ಒಂದಕ್ಕೆ ಇದ್ದರೆ ಅದು ಆ ಭಾಷಿಕರ ನುಡಿಯೊಂದಕ್ಕೇ ಇರುವುದು. ನಮ್ಮ ನಾಡಿಗೆ ಸ್ವಾತಂತ್ರ್ಯ ಬಂದ ಹೊತ್ತಿನಲ್ಲೇ ಬಿಡುಗಡೆಯ ಭಾಗ್ಯ ಕಂಡ, ನಮ್ಮಷ್ಟೇ ಕಡುಕಷ್ಟದಲ್ಲಿ ದಿನಗಳನ್ನು ಕಳೆಯುತ್ತಿದ್ದ ದಕ್ಷಿಣ ಕೊರಿಯಾ, ಇಸ್ರೇಲ್, ಜಪಾನ್ ಮುಂತಾದ ಭಾಷಿಕ ನಾಡುಗಳು ತಮ್ಮ ನುಡಿಯನ್ನು ತಮ್ಮ ಏಳಿಗೆಯ ಸಾಧನವನ್ನಾಗಿ ಪರಿವರ್ತಿಸಿಕೊಂಡ ಕಾರಣಕ್ಕೆ ಇಂದು ಪ್ರಪಂಚದ ಅತ್ಯಂತ ಮುಂದುವರೆದ ನಾಡುಗಳ ಪಟ್ಟಿಯಲ್ಲಿವೆ.

ಆಡಳಿತ, ಕಲಿಕೆ, ಗ್ರಾಹಕಸೇವೆ, ನ್ಯಾಯದಾನ, ಉದ್ಯೋಗ ಹೀಗೆ ಜನರ ಏಳಿಗೆಯ ಮುಖ್ಯ ಕವಲುಗಳಲ್ಲಿ ಕನ್ನಡವನ್ನು ಗಟ್ಟಿಯಾಗಿ ನಿಲ್ಲಿಸುವ ನುಡಿಹಮ್ಮುಗೆಯೊಂದನ್ನು (ಲ್ಯಾಂಗ್ವೇಜ್ ಪ್ಲಾನಿಂಗ್) ಹಮ್ಮಿಕೊಳ್ಳುವಲ್ಲಿ ನಾವು ಎಲ್ಲಿ ಎಡವಿದೆವು?

ಹಾಗಿದ್ದರೆ ಭಾರತವೆಂಬ ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡಿಗರಿಗಾಗಿ ಕರ್ನಾಟಕವೆಂಬ ರಾಜ್ಯ ಸ್ಥಾಪಿತವಾದಾಗಲೂ ಈ ನಾಡುಗಳಂತೆ ಎಲ್ಲ ರೀತಿಯಲ್ಲೂ ಏಳಿಗೆ ಕಾಣುವ ಸಾಧನವಾಗಿ ನಮ್ಮ ನುಡಿ ಯಾಕೆ ಅರಳಲಿಲ್ಲ? ಶಿಕ್ಷಣದ ಮೂಲಕ ಜ್ಞಾನ, ವಿಜ್ಞಾನದ ಪ್ರಪಂಚವನ್ನು ಗೆಲ್ಲುವಂತಹ ಏರ್ಪಾಡೊಂದನ್ನು ನಮ್ಮ ಮಕ್ಕಳಿಗಾಗಿ ಕನ್ನಡದಲ್ಲಿ ಕಟ್ಟಲು ನಮಗೆ ಯಾಕೆ ಸಾಧ್ಯವಾಗಲಿಲ್ಲ? ಆಡಳಿತ, ಕಲಿಕೆ, ಗ್ರಾಹಕಸೇವೆ, ನ್ಯಾಯದಾನ, ಉದ್ಯೋಗ ಹೀಗೆ ಜನರ ಏಳಿಗೆಯ ಮುಖ್ಯ ಕವಲುಗಳಲ್ಲಿ ಕನ್ನಡವನ್ನು ಗಟ್ಟಿಯಾಗಿ ನಿಲ್ಲಿಸುವ ನುಡಿಹಮ್ಮುಗೆಯೊಂದನ್ನು (ಲ್ಯಾಂಗ್ವೇಜ್ ಪ್ಲಾನಿಂಗ್) ಹಮ್ಮಿಕೊಳ್ಳುವಲ್ಲಿ ನಾವು ಎಲ್ಲಿ ಎಡವಿದೆವು?

ಜಾಗತೀಕರಣವೆಂಬ ಉದ್ಯಮಶೀಲತೆಯ ಪ್ರಪಂಚವನ್ನು ಗೆಲ್ಲಲು ಕನ್ನಡದ ಉದ್ಯಮಿಗಳನ್ನು ಹುಟ್ಟು ಹಾಕುವ ಕೆಲಸದಲ್ಲಿ ಎಲ್ಲಿ ಹಿಂದೆ ಬಿದ್ದೆವು? ಜಾಗತೀಕರಣ ತಂದು ನಿಲ್ಲಿಸಿರುವ ಖಾಸಗಿ ಬಂಡವಾಳ ಕೇಂದ್ರಿತ ಆರ್ಥಿಕತೆ ಕನ್ನಡ ನಾಡಿನ ಮಾರುಕಟ್ಟೆಯಲ್ಲಿ ಕನ್ನಡದ ಸಾರ್ವಭೌಮತ್ವವನ್ನೇ ಅಲುಗಾಡಿಸುವ ಹೊತ್ತಿನಲ್ಲಿ ಕನ್ನಡ ಚಳವಳಿ ಪಡೆಯಬೇಕಿರುವ ಮರುಹುಟ್ಟು ಯಾವ ನೆಲೆಯದ್ದು? ಭಾರತದ ಕೇಂದ್ರಿಕೃತವಾದ ಆಡಳಿತ ವ್ಯವಸ್ಥೆ ರಾಜ್ಯಗಳ ಸ್ವಾಯತ್ತೆಯನ್ನು ದಿನೇದಿನೇ ಶಿಥಿಲಗೊಳಿಸುತ್ತಿರುವ ಹೊತ್ತಲ್ಲಿ ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ದೆಹಲಿಗೂ ಮತ್ತು ಕರ್ನಾಟಕಕ್ಕೂ ಈಗಿರುವ, ಇರಬೇಕಾದ ಅಧಿಕಾರದ ಸಂಬಂಧಗಳನ್ನು ಯಾವ ರೀತಿಯಲ್ಲಿ ಮರು ಗ್ರಹಿಸಬೇಕಿದೆ?

ಹಿಂದೆ ರಾಜಮನೆಗಳು ಹೀಗಿದ್ದವು, ಎಂತೆಂತಹ ದೇವಸ್ಥಾನಗಳನ್ನು ಕಡೆದು ನಿಲ್ಲಿಸಿದ್ದೆವು, ಸಾಹಿತ್ಯದಲ್ಲಿ ಎಷ್ಟು ದೊಡ್ಡ ಸಾಧನೆಗೈದಿದ್ದೇವೆ. ಆದರೆ ಈಗೆಲ್ಲ ಕುಸಿದು ಕೈಬಿಟ್ಟು ಹೋಗುತ್ತಿದೆ ಅನ್ನುವ ಹಳಹಳಿಕೆಯಲ್ಲೇ ಯಾಕೆ ಪ್ರತಿ ರಾಜ್ಯೋತ್ಸವ ಕಳೆಯಬೇಕು?

ಇಪ್ಪತ್ತೊಂದನೆಯ ಶತಮಾನ ಜಾಗತಿಕ ಹವಾಮಾನ ಬದಲಾವಣೆಯ ತೊಂದರೆ, ಆರ್ಟಿಫಿಶಿಯಲ್ ಇಂಟೆಲಿಜನ್ಸ್ ಮತ್ತು ಬಯೋ ಟೆಕ್ನಾಲಜಿಯ ಕ್ರಾಂತಿಯಂತಹ ದೊಡ್ಡ ಬದಲಾವಣೆಗಳನ್ನು ಮನುಕುಲದ ಮುಂದೆ ತಂದು ನಿಲ್ಲಿಸುತ್ತಿದೆ. ಇವುಗಳಿಂದ ಹೊರತಾಗಿರಲು ಕರ್ನಾಟಕಕ್ಕೂ ಸಾಧ್ಯವಿಲ್ಲ. ಇವುಗಳನ್ನು ಕನ್ನಡಿಗರಾಗಿ ನಾವು ಹೇಗೆ ಕಾಣಬೇಕು, ಯಾವ ರೀತಿಯಲ್ಲಿ ಅವು ತಂದೊಡ್ಡುವ ಸವಾಲುಗಳನ್ನು ಎದುರಿಸಲು ಸಜ್ಜಾಗಬೇಕು?

ಹೀಗೆ ಹಲವು ಹೊಸ ಪ್ರಶ್ನೆಗಳನ್ನಿಟ್ಟುಕೊಂಡು ನಮ್ಮ ನಾಡಿನ ಭವಿಷ್ಯದ ಕುರಿತು ಯೋಚಿಸಬೇಕಾದ ತುರ್ತು ಅಗತ್ಯ ಇಂದು ನಮ್ಮ ಮುಂದಿದೆ. ಹಿಂದೆ ರಾಜಮನೆಗಳು ಹೀಗಿದ್ದವು, ಎಂತೆಂತಹ ದೇವಸ್ಥಾನಗಳನ್ನು ಕಡೆದು ನಿಲ್ಲಿಸಿದ್ದೆವು, ಸಾಹಿತ್ಯದಲ್ಲಿ ಎಷ್ಟು ದೊಡ್ಡ ಸಾಧನೆಗೈದಿದ್ದೇವೆ. ಆದರೆ ಈಗೆಲ್ಲ ಕುಸಿದು ಕೈಬಿಟ್ಟು ಹೋಗುತ್ತಿದೆ ಅನ್ನುವ ಹಳಹಳಿಕೆಯಲ್ಲೇ ಯಾಕೆ ಪ್ರತಿ ರಾಜ್ಯೋತ್ಸವ ಕಳೆಯಬೇಕು?

ಇವತ್ತಿನ ಕಾಲಮಾನಕ್ಕೆ, ಇವತ್ತಿನ ಜಿಯೋಪಾಲಿಟಿಕಲ್ ಏರ್ಪಾಡಿಗೆ ಹೊಂದಿಕೊಳ್ಳುವಂತೆ ಕನ್ನಡದ ಸುತ್ತಲಿನ ಚಿಂತನೆಯನ್ನು ಹೊಸತಾಗಿ ರೂಪಿಸುವ ಆಶಯದೊಂದಿಗೆ ಈ ಬಾರಿಯ ಮುಖ್ಯಚರ್ಚೆಯನ್ನು ಹುಟ್ಟುಹಾಕಲಾಗಿದೆ. ಇದು 21ನೇ ಶತಮಾನದ ಕನ್ನಡಪರ ಚಿಂತನೆ. ಹಾಗಾಗಿ ಇಲ್ಲಿ ಸಾಂಪ್ರದಾಯಿಕ ರಾಜ್ಯೋತ್ಸವ ಲೇಖನಗಳಿಗೆ ಬದಲಾಗಿ ಕನ್ನಡ ಕಟ್ಟುವ ಕಾಯಕದಲ್ಲಿ ತೊಡಗಿಸಿಕೊಂಡ ಹೊಸ ಪೀಳಿಗೆಯ ನಳನಳಿಸುವ ಮಾದರಿಗಳನ್ನು ಪ್ರಸ್ತುತಪಡಿಸಿದ್ದೇವೆ.

*ಲೇಖಕರು ಸಮಾಜಮುಖಿ ಸಂಪಾದಕೀಯ ಸಲಹಾ ಸಮಿತಿ ಸದಸ್ಯರು.

Leave a Reply

Your email address will not be published.