ಹೊಸ ಪುಸ್ತಕ

ಹಳತು ಹೊನ್ನು
ಸಂಪಾದಕರು: ಡಾ. ಮನು ಬಳಿಗಾರ್, ಡಾ. ಪದ್ಮರಾಜ ದಂಡಾವತಿ
ಪುಟ: 276+20
ಬೆಲೆ: ರೂ.210
ಪ್ರಥಮ ಮುದ್ರಣ: 2019
ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು. 560018

ಇದು ಪ್ರಥಮ ಅಖಿಲ ಭಾರತ ಹಳಗನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಂಡಿಸಲಾದ ಪ್ರಬಂಧಗಳ ಸಂಗ್ರಹ. ನಾಡಿನ ಹಲವು ಪ್ರಮುಖ ವಿದ್ವಾಂಸರು ಮಂಡಿಸಿದ ಪ್ರಬಂಧಗಳ ಬರಹ ರೂಪವನ್ನು ಇಲ್ಲಿ ಕಾಣಲು ಸಾಧ್ಯ. ಪ್ರಸಿದ್ಧ ಇತಿಹಾಸಕಾರ ಷ. ಶೆಟ್ಟರ್ ಅವರ ಅಧ್ಯಕ್ಷ ಭಾಷಣ, ಪ್ರೊ. ಹಂಪ ನಾಗರಾಜಯ್ಯ, ಪ್ರೊ. ಪುರುಷೋತ್ತಮ ಬಿಳಿಮಲೆ, ಡಾ. ದುರ್ಗಾದಾಸ್, ಎಂ.ಎಸ್. ಆಶಾದೇವಿ ಮುಂತಾದವರ ಪ್ರಬಂಧಗಳಿವೆ. ಹಳಗನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಇರುವ ಓದುಗರಿಗೆ, ಸಂಶೋಧನಾರ್ಥಿಗಳಿಗೆ ಈ ಕೃತಿ ಸಹಕಾರಿ ಆಗಬಹುದು.

ಸುರಂಗದ ಕತ್ತಲೆ
ಡಾ. ಪದ್ಮರಾಜ ದಂಡಾವತಿ
ಪುಟ: 354+14
ಬೆಲೆ: ರೂ.300
ಪ್ರಥಮ ಮುದ್ರಣ: 2018
ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ

ಇದು ಲೇಖಕರ ಆಯ್ದ ಅಂಕಣ ಲೇಖನಗಳ ಗುಚ್ಛ. ಒಟ್ಟು 67 ಲೇಖನಗಳನ್ನು ಒಳಗೊಂಡಿರುವ ಈ ಕೃತಿಯಲ್ಲಿ ಸಮಾಜ, ನಾಡು- ನೆನಪು, ವಿದ್ಯಮಾನ, ಮಾಧ್ಯಮ ಹಾಗೂ ಪರ್ಯಾಯ ಎಂಬ ವಿಭಾಗಗಳಿವೆ. ಸಮಾಜದ ಆಗುಹೋಗುಗಳ ನಡುವೆ ಆಯಾ ಸಂದರ್ಭಗಳಲ್ಲಿ ಲೇಖಕರು ಪ್ರತಿಸ್ಪಂದಿಸಿದ ಬಗೆಯೇ ಈ ಲೇಖನಗಳು. ಸಾಮಾಜಿಕ ಕಾಳಜಿ, ನಾಡಿನ ಕುರಿತ ಸೂಕ್ಷ್ಮ ತಿಳುವಳಿಕೆ ಮುಂತಾದವು ಈ ಕೃತಿಯ ಕೆಲವು ಲೇಖನಗಳಲ್ಲಿ ಗೋಚರಿಸುತ್ತದೆ. ಗಂಭೀರ ಚಿಂತನೆಗಳ ಮೂಲಕ ಈ ಕೃತಿ ಓದುಗನನ್ನು ಹಿಡಿದಿಡುತ್ತದೆ.

ವಿತ್ತ ಜಗತ್ತು- ತಿಳಿಯಬೇಕಾದ ವಿಷಯ ಹಲವು ಹತ್ತು
ರಂಗಸ್ವಾಮಿ ಮೂಕನಹಳ್ಳಿ
ಪುಟ: 192, ಬೆಲೆ: ರೂ.190
ಪ್ರಥಮ ಮುದ್ರಣ: 2019
ಮೂಕನಹಳ್ಳಿ ಪ್ರತಿಷ್ಠಾನ, ಬೆಂಗಳೂರು.

ವಿತ್ತ ಜಗತ್ತಿನ ಕಡೆಗೆ ಓದುಗರು, ಸಾಮಾನ್ಯರು ಚಿತ್ತ ಹರಿಸುವಂತೆ ಮಾಡುವ ಸರಳ ಕೃತಿಯಿದು. ಜಾಗತಿಕ ಮಟ್ಟದಿಂದ ಹಿಡಿದು, ಜನರ ಕಿಸೆಯವರೆಗೆ ಆರ್ಥಿಕ ಜಗತ್ತಿನಲ್ಲಾಗುವ ಏರುಪೇರು, ಹಿಂಜರಿತ ಮುಂತಾದ ಬೆಳವಣಿಗೆಗಳನ್ನು, ಭವಿಷ್ಯವನ್ನು ಇಲ್ಲಿ ಸುಲಭವಾಗಿ ವಿವರಿಸಲಾಗಿದೆ. ಪ್ರತಿಯೊಬ್ಬರೂ ವೈಯಕ್ತಿಕವಾಗಿ ತಮ್ಮ ಬದುಕನ್ನು ಆರ್ಥಿಕ ನೆಲೆಗಟ್ಟಿನಲ್ಲಿ ಗಟ್ಟಿಗೊಳಿಸುವುದಕ್ಕೆ ಈ ಕೃತಿಯು ಸೂಕ್ತ ಸಲಹೆಗಳನ್ನು ಒದಗಿಸುತ್ತದೆ.

ಸುಪ್ತ
ಡಾ.ಕೆ.ಬಿ.ಶ್ರೀಧರ್
ಪುಟ: 200
ಬೆಲೆ: ರೂ.175
ಪ್ರಥಮ ಮುದ್ರಣ: 2019
ಅಭಿರುಚಿ ಪ್ರಕಾಶನ, ನಂ 386, 14ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಸರಸ್ವತೀಪುರ ಮೈಸೂರು. 570009

ಸಾವಿನ ಕುರಿತ ಪರಿಕಲ್ಪನೆಯನ್ನು ಕಥಾವಸ್ತುವನ್ನಾಗಿಸಿಕೊಂಡ ಕಾದಂಬರಿ ಇದು. ಸಾವು ಮನುಷ್ಯನ ಸುಪ್ತ ಮನಸ್ಸಿನಿಂದ ತೊಡಗಿ ಬದುಕಿನ ಪ್ರತಿ ಹಂತದಲ್ಲಿಯೂ ಕಾಡುವ ಸಂಗತಿ. ಸಾವಿನ ಕಡೆಗೆ ಬದುಕು ಚಲಿಸುವ ಹೊತ್ತಿನಲ್ಲಿ ಉಂಟಾಗುವ ತಲ್ಲಣಗಳನ್ನು ಇಬ್ಬರು ಬಾಲ್ಯಸ್ನೇಹಿತರ ಸಂಬಂಧದ ಮೂಲಕ ಲೇಖಕರು ಕಟ್ಟಿಕೊಟ್ಟಿದ್ದಾರೆ. ಸಾವು ಕಾಡುವ ಬಗೆ ಈ ಕಾದಂಬರಿಯಲ್ಲಿ ಹಲವು ಕಡೆಗಳಲ್ಲಿ ವ್ಯಕ್ತಗೊಳ್ಳುತ್ತದೆ.

ಲಾಸ್ಟ್ ಪಂಚ್- 2
ಪ್ರೊ. ಭಾರ್ಗವ ಎಚ್.ಕೆ.
ಪುಟ: 109+14
ಬೆಲೆ: ರೂ.95
ಪ್ರಥಮ ಮುದ್ರಣ: 2019
ಸಪ್ನ ಬುಕ್ ಹೌಸ್, ಗಾಂಧಿನಗರ ಬೆಂಗಳೂರು- 560009

ಈ ಕೃತಿಯು ಲೇಖಕರ ನಿತ್ಯ ಬದುಕಿನ ಅನುಭವಗಳ ಅಕ್ಷರರೂಪ. ಪ್ರವಾಸ, ದಿನನಿತ್ಯದ ಓಡಾಟಗಳ ನಡುವೆ ಅನುಭವಕ್ಕೆ ಬಂದ ಕೆಲವು ಘಟನೆಗಳನ್ನು ಒಂದಕ್ಕೊಂದು ಪೋಣಿಸಿ, ಯಾವುದೋ ಒಂದು ಎಳೆಯ ಮೂಲಕ ಹಿಡಿದಿಡುತ್ತ ಓದುಗರಿಗೆ ಮೆಚ್ಚುಗೆಯಾಗುವಂತೆ ರಚನೆಗೊಂಡಿದೆ. ಲೇಖಕರು ಬಹುತೇಕ ಫೇಸ್‍ಬುಕ್, ಬ್ಲಾಗ್‍ಗಳಲ್ಲಿ ಪ್ರಕಟಿಸಿದ ಲೇಖನಗಳನ್ನು ಕೃತಿ ಒಳಗೊಂಡಿದೆ. ಕೃತಿಯ ಆರಂಭದಲ್ಲಿಯೇ ಈ ಕೃತಿಯನ್ನು ಏಕೆ ಓದಬೇಕು ಎಂಬ ಉದ್ದೇಶವನ್ನೂ ಲೇಖಕರು ನೀಡಿದ್ದಾರೆ. ಇದು ಲಾಸ್ಟ್ ಪಂಚ್ ಭಾಗ -1ರ ಮುಂದುವರಿದ ಭಾಗ.

ಬುದ್ಧ ಶರೀಫ- ಎರಡು ರಂಗ ರೂಪಕ
ನಿಷ್ಠಿ ರುದ್ರಪ್ಪ
ಪುಟ: 104+8
ಬೆಲೆ: ರೂ.120
ಪ್ರಥಮ ಮುದ್ರಣ: 2018
ಗೌತಮ ಬುಕ್ ಹೌಸ್, ಕಮಲಾಪುರ, ಹೊಸಪೇಟೆ (ತಾ), ಬಳ್ಳಾರಿ 583276

ಗೌತಮ ಬುದ್ಧ ಹಾಗೂ ಸಂತ ಶಿಶುನಾಳ ಶರೀಫರ ಬಗ್ಗೆ ಎರಡು ಪ್ರತ್ಯೇಕ ರಂಗರೂಪಕಗಳನ್ನು ಈ ಕೃತಿ ಒಳಗೊಂಡಿದೆ. ಬುದ್ಧ ಹಾಗೂ ಶರೀಫರ ವ್ಯಕ್ತಿತ್ವದ ಪ್ರತಿಮಾರೂಪಕ್ಕಿಂತ ಅವರ ತತ್ವಾದರ್ಶಗಳೇ ಈ ಕೃತಿಯಲ್ಲಿ ಮೇಳೈಸಿದೆ. ಇತಿಹಾಸ ಪುರುಷರಿಬ್ಬರ ಆದರ್ಶಗಳನ್ನು ರೂಪಕದ ಮೂಲಕ ಪ್ರಸಕ್ತ ಸಮಾಜದ ಮುಂದಿಟ್ಟು, ಸಾಮಾಜಿಕ ವ್ಯವಸ್ಥೆಯ ಸಮಸ್ಯೆಗಳಿಗೆ, ರಾಜಕೀಯ ಬೆಳವಣಿಗೆಗಳಿಗೆ ಕನ್ನಡಿ ಹಿಡಯುವ ಪ್ರಯತ್ನ ಈ ಕೃತಿಯಲ್ಲಿದೆ.

ನಮ್ಮ ನೆಲ ನಮ್ಮ ಜನ
ವೀರಪ್ಪ ವಾಲಿ ಕರಮುಡಿ
ಪುಟ: 224
ಬೆಲೆ: ರೂ.300
ಪ್ರಥಮ ಮುದ್ರಣ: 2019
ಶ್ರೀ ಕರಡಿ ಬಸವೇಶ್ವರ ಪ್ರಕಾಶನ ಭಾಗ್ಯನಗರ

ಇದು ಕೊಪ್ಪಳ ಜಿಲ್ಲೆಯ ಜನಸಂಸ್ಕತಿ ಹಾಗೂ ಅಲ್ಲಿ ಪ್ರಮುಖ ಸಾಧಕರ ಕುರಿತ ಮಾಹಿತಿ ಒಳಗೊಂಡ ಕೃತಿ. ಕೊಪ್ಪಳದ ರಂಗಭೂಮಿ, ಸಾಹಿತ್ಯ, ಕ್ರೀಡೆ, ಉದ್ಯಮ ಮುಂತಾದ ಕ್ಷೇತ್ರಗಳ ಬೆಳವಣಿಗೆ, ಹಿನ್ನೆಲೆಗಳ ಹಲವು ಮಾಹಿತಿ ಈ ಕೃತಿಯಲ್ಲಿದೆ. ಕೃತಿಯಲ್ಲಿ ಒಟ್ಟು 25 ಅಧ್ಯಾಯಗಳಿವೆ.

ನೀಲಿ ಮಿಂಚು
ಪರಶುರಾಮ ಶಿವಶರಣ
ಪುಟ: 148+12
ಬೆಲೆ: ರೂ.150
ಪ್ರಥಮ ಮುದ್ರಣ: 2018
ನಯನಾ ಪ್ರಕಾಶನ ವಿಜಯಪುರ

ಈ ಕವನ ಸಂಕಲನ ಹಲವು ಬಗೆಯ ವಸ್ತು, ವಿಷಯಗಳನ್ನು ಒಳಗೊಂಡಿದೆ. ಅಂಬೇಡ್ಕರ್ ಕುರಿತ ಕವಿತೆಯಿಂದ ಆರಂಭವಾಗಿ, ಬಂಡಾಯದ ಕವಿತೆ, ಪ್ರೇಮ ಕವಿತೆಗಳು ಕೆಲವೆಡೆ ಕಾಣಿಸುತ್ತವೆ. ವರ್ತಮಾನದ ವಾಸ್ತವ ಚಿತ್ರಗಳೂ ಕೆಲವು ಕವಿತೆಗಳಲ್ಲಿ ಇವೆ. ಸಾಮಾಜಿಕ ಸಮಸ್ಯೆ, ರಾಜಕೀಯದ ಅವ್ಯವಸ್ಥೆ, ವ್ಯಂಗ್ಯ ಶೈಲಿಯ ಕವಿತೆಗಳು ಕೂಡಾ ಇಲ್ಲಿ ಕಾಣಸಿಗುತ್ತವೆ.

Leave a Reply

Your email address will not be published.