ಹೊಸ ಪುಸ್ತಕ

ಸ್ಪ್ಯಾನಿಶ್ ಪ್ರೊವಬ್ರ್ಸ್
ಅನುವಾದಕರು: ರವಿ ಹಂಜ್
ಪುಟ: 80+4, ಬೆಲೆ: ರೂ.80
ಪ್ರಥಮ ಮುದ್ರಣ: 2019
ರೀಡ್‍ಫ್ರೆಶ್ #1163, 26ನೇ ‘ಎ’ 41ನೇ ಅಡ್ಡರಸ್ತೆ ಜಯನಗರ 9ನೇ ಬ್ಲಾಕ್ ಬೆಂಗಳೂರು. 560069

ಸ್ಪ್ಯಾನಿಶ್ ಗಾದೆಗಳ ಇಂಗ್ಲಿಷ್ ಅನುವಾದವಿದು. ರಂಗಸ್ವಾಮಿ ಮೂಕನಹಳ್ಳಿ ಕನ್ನಡಕ್ಕೆ ಅನುವಾದಿಸಿದ್ದ ಈ ಕೃತಿಯನ್ನು ರವಿ ಹಂಜ್ ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಸ್ಪ್ಯಾನಿಶ್ ಭಾಷೆಯ ಪ್ರಸಿದ್ಧ ಗಾದೆಗಳನ್ನು ಸಂಗ್ರಹಿಸಿ ಅವುಗಳ ಒಳಾರ್ಥವನ್ನೂ ಇಲ್ಲಿ ನೀಡಲಾಗಿದೆ. ಅಲ್ಲದೆ ಸ್ಪ್ಯಾನಿಶ್ ಭಾಷೆಯಲ್ಲಿಯೇ ಗಾದೆಗ¼ನ್ನು ನೀಡಿ ಅವುಗಳ ಉಚ್ಛಾರದ ಕ್ರಮಗಳನ್ನೂ ಕೊಡಲಾಗಿದೆ.


ಜುಗಾರಿ ಕ್ರಾಸ್
ಅನುವಾದಕರು: ರವಿ ಹಂಜ್
ಪುಟ: 224, ಬೆಲೆ: ರೂ.300
ಪ್ರಥಮ ಮುದ್ರಣ: 2019
ಅಭಿರುಚಿ ಪ್ರಕಾಶನ, ನಂ.386, 14ನೇ ಮುಖ್ಯರಸ್ತೆ, 3ನೇ ಕ್ರಾಸ್, ಸರಸ್ವತಿಪುರಂ, ಮೈಸೂರು-9

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಜುಗಾರಿ ಕ್ರಾಸ್ ಕನ್ನಡ ಕೃತಿಯ ಅನುವಾದ. ಇಂದಿಗೂ ಪ್ರಸಿದ್ಧಿಯನ್ನು ಉಳಿಸಿಕೊಂಡು ಬಂದಿರುವ ತೇಜಸ್ವಿಯವರ ಹಲವು ಕೃತಿಗಳಲ್ಲಿ ಒಂದಾಗಿರುವ ಜುಗಾರಿ ಕ್ರಾಸ್, ಇಂಗ್ಲಿಷ್ ಓದುಗರಿಗೂ ಲಭ್ಯವಾಗುವ ನಿಟ್ಟಿನಲ್ಲಿ ಅನುವಾದ ಮಾಡಲಾಗಿದೆ. ಅನುವಾದವು ತೇಜಸ್ವಿ ಅವರದ್ದೇ ಧಾಟಿಯಲ್ಲಿ ಓದಿಸಿಕೊಂಡು ಹೋಗುತ್ತದೆ.


ಪನ್ ಪನ್ ಸಂತ
ಆನಂದತೀರ್ಥ ಪ್ಯಾಟಿ
ಪುಟ: 36+4
ಬೆಲೆ: ರೂ.50
ಪ್ರಥಮ ಮುದ್ರಣ: 2018

ಥಾಯ್ಲೆಂಡ್‍ನ ಜಾನ್ ಜಾನ್ಡಾಯ್ ಎಂಬ ಕೃಷಿಕನೊಬ್ಬನ ಕುರಿತ ಸ್ಫೂರ್ತಿದಾಯಕ ಕೃತಿ ಇದು. ಸರಳ ಬದುಕಿನಲ್ಲಿ ಸಾರ್ಥಕ್ಯ ಕಾಣುತ್ತಿರುವ ಈ ವ್ಯಕ್ತಿಯನ್ನು, ಕೃತಿಯ ಲೇಖಕರು ಭೇಟಿಯಾಗಿ, ತಿಳಿದುಕೊಂಡ ಮಾಹಿತಿಗಳನ್ನು ಚಿತ್ರಸಹಿತವಾಗಿ ವಿವರಿಸಿದ್ದಾರೆ. ತಳಿ ಸಂರಕ್ಷಣೆ, ಮಾರುಕಟ್ಟೆ, ಮಣ್ಣಿನ ಮನೆ ಕಟ್ಟುವ ಬಗೆ… ಹೀಗೆ ಜೋ ಹಂಚಿಕೊಂಡ ಹಲವು ಸಂಗತಿಗಳನ್ನು ಚೊಕ್ಕದಾಗಿ ಸುಲಭ ಗ್ರಹಿಕೆಗೆ ಅನುಕೂಲವಾಗುವಂತೆ ಲೇಖಕರು ಕಟ್ಟಿಕೊಟ್ಟಿದ್ದಾರೆ.

ಪಿಪ್ಲಾಂತ್ರಿ
ಶಿವರಾಂ ಪೈಲೂರು
ಪುಟ: 40
ಬೆಲೆ: ರೂ.40
ಪ್ರಥಮ ಮುದ್ರಣ: 2019

ಪರಿಸರ ಸಂರಕ್ಷಣೆಯ ಕುರಿತ ವಿಭಿನ್ನ ಕೃತಿಯಿದು. ರಾಜಸ್ಥಾನದ ‘ಪಿಪ್ಲಾಂತ್ರಿ’ ಎನ್ನುವ ಗ್ರಾಮವೊಂದರ ಮಾದರಿ ಜೀವನಕ್ರಮ, ಸುಸ್ಥಿರ ಅಭಿವೃದ್ಧಿಯ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವನ್ನು ಲೇಖಕರು ಇಲ್ಲಿ ಮಾಡಿದ್ದಾರೆ. ಪಿಪ್ಲಾಂತ್ರಿಯ ಮಾಜಿ ಸರಪಂಚನನ್ನು ಭೇಟಿ ಮಾಡಿ, ಎರಡು ದಿನ ಪಿಪ್ಲಾಂತ್ರಿಯಲ್ಲಿ ಸುತ್ತಾಡಿ, ಕಣ್ಣಿಗೆ ಕಾಣಿಸಿದ ಹಸಿರುಪೂರಕ ವಾತಾವರಣದ ಚಿತ್ರವನ್ನು ಇಲ್ಲಿ ದಾಖಲಿಸಿದ್ದಾರೆ. ಪರಿಸರ, ಬದುಕಿನ ಸಂರಕ್ಷಣೆಯ ದೃಷ್ಟಿಯಿಂದ ಮಾದರಿ ಎನಿಸಬಹುದಾದ ಗ್ರಾಮದ ಕುರಿತ ಈ ಪುಸ್ತಕ ನಾಡಿನ ಅಭಿವೃದ್ಧಿಗೂ ಸಹಾಯಕವಾಗಬಹುದು.

ಕೃಷಿ ಗ್ರಾಮೀಣ ಪತ್ರಿಕೋದ್ಯಮ
ಶಿವರಾಂ ಪೈಲೂರು
ಪುಟ: 10+100
ಬೆಲೆ: ರೂ.120
ಪ್ರಥಮ ಮುದ್ರಣ: 2019

ಕೃಷಿ ಹಾಗೂ ಗ್ರಾಮೀಣ ಪತ್ರಿಕೋದ್ಯಮದ ಬಗ್ಗೆ ಮಾಹಿತಿ ನೀಡಬಲ್ಲ ಕೃತಿಯಿದು. ಗ್ರಾಮೀಣ ಪತ್ರಕರ್ತನಾಗಿ ರೂಪುಗೊಳ್ಳಲು ಮಾಡಬೇಕಾದ ಪ್ರಯತ್ನಗಳ ಕುರಿತು ಹಲವು ಮಾಹಿತಿಗಳು ಇಲ್ಲಿವೆ. ಕೃಷಿ ಸಂಬಂಧಿತ ಲೇಖನಗಳನ್ನು ಸಿದ್ಧಪಡಿಸುವ ಬಗ್ಗೆ, ಮಾಹಿತಿ ಕಲೆ ಹಾಕುವ ಬಗ್ಗೆ, ಸೂಕ್ತ ಲೇಖನಗಳಿಗೆ ಸೂಕ್ತ ಪತ್ರಿಕೆ, ಪುರವಣಿಗಳನ್ನು ಆಯ್ಕೆ ಮಾಡುವ ಕುರಿತು ಇಲ್ಲಿ ವಿವರಿಸಲಾಗಿದೆ. ಗ್ರಾಮೀಣ ಪತ್ರಿಕೋದ್ಯಮದ ಕಡೆ ಒಲವು ತೋರಲು ಈ ಕೃತಿ ಪ್ರೇರೇಪಿಸುತ್ತದೆ. ಆಸಕ್ತ ಯುವ ಪತ್ರಕರ್ತರಿಗೆ ಇದೊಂದು ಮಾರ್ಗದರ್ಶಿ.

ಮೇಲಿನ ಮೂರೂ ಕೃತಿಗಳ ಪ್ರಕಾಶಕರು: ಕೃಷಿ ಮಾಧ್ಯಮ ಕೇಂದ್ರ, ಬೆಂಗಳೂರು.


ಪ್ರತ್ಯೇಕ ಬುದ್ಧ ಅಲ್ಲಮಪ್ರಭು
ಪುಟ: 140+16, ಬೆಲೆ: ರೂ.130
ಪ್ರಥಮ ಮುದ್ರಣ: 2017

ಈ ಕೃತಿಯು ಅಲ್ಲಮಪ್ರಭುವಿನ ಚಿಂತನೆಗಳ ಬಗ್ಗೆ ಭಿನ್ನ, ಗಂಭೀರ ನೆಲೆಯಲ್ಲಿ ಬೆಳಕು ಚೆಲ್ಲುತ್ತದೆ. ಬೌದ್ಧ, ಜೈನ, ನಾಥ, ಸಿದ್ಧ, ಚಾರ್ವಾಕ ಮುಂತಾದ ಪರಂಪರೆಗಳ ನಡುವಿನಲ್ಲಿಯೇ ಬಯಲಾಗಿ ನಿಂತ ಅಲ್ಲಮನ ನಿರಸನವಾದದ ಬಗ್ಗೆ ಕೃತಿಯು ಹೆಚ್ಚು ಮಾತನಾಡುತ್ತದೆ. ಆರೋಗ್ಕಕರ ಚರ್ಚೆಗೆ ಅವಕಾಶ ನೀಡಬಲ್ಲಷ್ಟು ಅಂಶಗಳು ಈ ಕೃತಿಯಲ್ಲಿವೆ. ಎಲ್ಲವನ್ನೂ ಮೀರಿ ನಿಂತ ಅಲ್ಲಮನನ್ನು ಲೇಖಕರು ‘ಪ್ರತ್ಯೇಕ ಬುದ್ಧ’ನಾಗಿಸಿ ಓದುಗರ ಮುಂದಿರಿಸಿದ್ದಾರೆ.


ಹಿಂದಣ ಹೆಜ್ಜೆಯನರಿತಲ್ಲದೆ
ಪುಟ: 230+8
ಬೆಲೆ: ರೂ.200
ಪ್ರಥಮ ಮುದ್ರಣ: 2017

ಇದೊಂದು ವಿಮರ್ಶಾ ಲೇಖನಗಳ ಸಂಕಲನ. ಲೇಖಕರೇ ಹೇಳುವಂತೆ ಇದು ಕೇವಲ ಪುಸ್ತಕ ವಿಮರ್ಶೆ ಮಾತ್ರ ಆಗಿರದೆ, ಸಂಸ್ಕತಿ, ಕಾವ್ಯಮೀಮಾಂಸೆ ಹಾಗೂ ಕೆಲವು ವೈಚಾರಿಕ ನೆಲೆಯ ಒಂದು ಹಂತದ ಚರ್ಚೆಯೂ ಹೌದು. ಕನ್ನಡದ ಕುರಿತಂತೆ, ಕಾವ್ಯ ವಚನಗಳ ಬಗ್ಗೆ, ಜನಪದ ಸಾಹಿತ್ಯದ ಬಗ್ಗೆಯೂ ಕೆಲವು ಲೇಖನಗಳನ್ನು ಈ ಕೃತಿ ಒಳಗೊಂಡಿದೆ. ಬೂದಾಳು ಅವರ ಬರಹದ ಸಹಜ ಧಾಟಿ ಇಲ್ಲಿಯೂ ಮುಂದುವರೆದಿದೆ. ಓದುಗರನ್ನು ಚಿಂತನೆಗೆ ಹಚ್ಚು ಕೃತಿ.

ಮೇಲಿನ ಎರಡೂ ಕೃತಿಗಳ ಲೇಖಕರು: ಎಸ್.ನಟರಾಜ ಬೂದಾಳು. ಪ್ರಕಾಶಕರು: ಪಲ್ಲವ ಪ್ರಕಾಶನ, ಚನ್ನಪಟ್ಟಣ, ಎಮ್ಮಿಗನೂರ್, ಬಳ್ಳಾರಿ 583113


ಹಲಸು ಬಿಡಿಸಿದಾಗ
ಎ.ಪಿ.ಚಂದ್ರಶೇಖರ, ನಿರ್ಮಲ ಎ.ಪಿ.ಸಿ., ಡಾ. ಅಭಿಜಿತ್ ಎ.ಪಿ.ಸಿ.
ಪುಟ 172+12, ರೂ.250
ಪ್ರಕಾಶನ: ಇಂದ್ರಪ್ರಸ್ಥ, ಕಳಲವಾಡಿ ಗ್ರಾಮ, ಅಂಚೆ:ಉದ್ಭೂರು, ಮೈಸೂರು 570008, ದೂ: 9480630985\

ಹಲಸಿನ ಕುರಿತು ನಮ್ಮಲ್ಲಿ ಎಲ್ಲರಿಗೂ ಹೆಚ್ಚಾಗಿ ಗೊತ್ತಿಲ್ಲ. ಹಲಸಿನಲ್ಲಿನ ಪೋಷಕಾಂಶಗಳು, ಇದನ್ನು ಬಳಸಿ ತಯಾರಿಸಬಹುದಾದ ಅಡುಗೆ, ತಿನಿಸು, ಸರ್ವಋತು ಹಲಸಿನ ಸಮರ್ಪಕ ಬಳಕೆ ಯಾವ ರೀತಿ? ಇದರ ಕುರಿತು ಆಗಬೇಕಿರುವ ಅಧ್ಯಯನ/ಸಂಶೋಧನೆಗಳ ಕುರಿತು ಮಾರ್ಮಿಕ ಉಲ್ಲೇಖಗಳಿವೆ. ಪುಸ್ತಕ ಎರಡನೆಯ ಮುದ್ರಣ ಕಂಡಿದೆ.


ನಾ ಕಂಡ ಕೈಲಾಸ
ಶ್ರೀಕೃಷ್ಣ ಎನ್. ಬುಗುಟ್ಯಾಗೋಳ
ಪುಟ 184, ಬೆಲೆ 360
ಪ್ರಕಾಶನ: ಅಕ್ಷರ ಮಂಟಪ, ನಂ.1667, 6 ನೆಯ ಕ್ರಾಸ್, 6 ನೆಯ ಮೇನ್, ಹಂಪಿನಗರ, ಬೆಂಗಳೂರು-560104, ದೂ:9986167684

ಕೈಲಾಸ ಮಾನಸ ಸರೋವರ ಯಾತ್ರೆಯ ಅನುಭವದ ಸವಿಸ್ತಾರ ಮಾಹಿತಿ ಇದೆ. ಅಗತ್ಯವಿದ್ದಲ್ಲಿ ಅಲ್ಲಿನ ನಿಸರ್ಗ, ಸ್ಥಳ, ಅಲ್ಲದೆ ಪುರಾಣ ಐತಿಹ್ಯದ ಉಲ್ಲೇಖಗಳಿವೆ. ಹೈ ರೆಸಲೂಷನ್ ಚಿತ್ರಗಳು ಪುಸ್ತಕವನ್ನು ತುಂಬ ಸುಂದರವನ್ನಾಗಿಸಿದೆ. ಗುಣಮಟ್ಟದ ಮುದ್ರಣವಿದೆ. ಪ್ರವಾಸಿಗರು, ಯಾತ್ರಿಕರು, ಛಾಯಾಚಿತ್ರಕರು ಓದಲೇಬೇಕಾದ ಅಪರೂಪದ ಪುಸ್ತಕ.


ಅರೇಬಿಯನ್ ನೈಟ್ಸ್
ಅನುವಾದ: ಜಿ.ಶರಣಪ್ಪ
ಭಾಗ-1
ಪುಟ: 516, ಬೆಲೆ: ರೂ.600
ಭಾಗ 2
ಪುಟ 356, ಬೆಲೆ: ರೂ.425
ಪ್ರಥಮ ಮುದ್ರಣ: 2019

ಜಗತ್ತಿನ ಅತಿ ಪ್ರಸಿದ್ಧ ಕಾದಂಬರಿಗಳಲ್ಲಿ ಅರೇಬಿಯನ್ ನೈಟ್ಸ್ ಕೂಡಾ ಒಂದು. ಜಗತ್ತಿನ ಹಲವಾರು ಭಾಷೆಗಳಿಗೆ ಅನುವಾದಗೊಂಡ ಕೃತಿಯೂ ಹೌದು. ಪತ್ನಿಯ ಅನೈತಿಕ ಕೃತ್ಯವನ್ನು ಕಂಡು ಆಕೆಯ ತಲೆ ಕಡಿಯುವಂತೆ ಆಜ್ಞೆ ನೀಡುವ ಚಕ್ರವರ್ತಿ, ಬಳಿಕ ಹೆಣ್ಣಿನ ಮೇಲಿನ ಸೇಡಿನಿಂದ ಪ್ರತಿ ರಾತ್ರಿ ಒಬ್ಬೊಬ್ಬ ಕನ್ಯೆಯರನ್ನು ಬಳಸಿ, ನಂತರ ಅವರ ತಲೆ ಕಡಿಯಲು ಸೂಚಿಸುತ್ತಾನೆ. ಕೊನೆಯದಾಗಿ ಉಳಿಯುವ ಆತನ ಮಂತ್ರಿಯ ಮಗಳು ಶಹರ್‍ಜಾದ್, ತನ್ನ ಬುದ್ಧಿವಂತಿಕೆಯಿಂದ, ಕುತೂಹಲಕರ ಕಥೆಯನ್ನು 1001 ರಾತ್ರಿಗಳವರೆಗೆ ಹೇಳುತ್ತಾ ರಾಜನನ್ನು ಗೆಲ್ಲುವ ಬಗೆ ಈ ಕತೆಯ ಗೆಲುವು. ಎರಡು ಭಾಗಗಳಲ್ಲಿ ಲಭ್ಯವಿರುವ ಈ ಬೃಹತ್ ಕೃತಿ, ಸುಲಭವಾಗಿ ಓದಿಸಿಕೊಳ್ಳುತ್ತದೆ.

ಡಾನ್ ಕ್ವಿಕ್ಸಾಟ್‍ನ ಸಾಹಸಗಳು
ಅನುವಾದ: ಜಿ.ಶರಣಪ್ಪ
ಭಾಗ-1
ಪುಟ: 533, ಬೆಲೆ: ರೂ.600
ಭಾಗ 2
ಪುಟ 623, ಬೆಲೆ: ರೂ.650
ಪ್ರಥಮ: ಮುದ್ರಣ: 2019

‘ಡಾನ್ ಕ್ವಿಕ್ಸಾಟ್’ ಸ್ಪೇನ್ ದೇಶದ ಸವಾರ್ಂಟೇಸ್ ಅವರ ಕಾದಂಬರಿ. ಸವಾರ್ಂಟೇಸ್ ಷೇಕ್ಸ್ಪಿಯರ್‍ನಷ್ಟೇ ಲೋಕಪ್ರಸಿದ್ಧ. ಈ ಕಾದಂಬರಿಯ ಮೊದಲ ಭಾಗ 1605ರಲ್ಲಿ ಹೊರಬಂದರೆ, ಎರಡನೇ ಭಾಗ 1615 ರಲ್ಲಿ ಪ್ರಕಟವಾಗಿದೆ. ಪ್ರಪಂಚದ 140 ಭಾಷೆಗಳಿಗೆ ಈ ಕಾದಂಬರಿ ಅನುವಾದಗೊಂಡಿದೆ. ಓದುಗರನ್ನು ಕೃತಿಯ ಓದಿನಲ್ಲಿ ಒಳಗೊಳ್ಳುವಂತೆ ಮಾಡುವಲ್ಲಿ ಈ ಅನುವಾದಿತ ಕೃತಿ ಯಶಸ್ವಿಯಾಗಿದೆ.

ಕಾಡುವ ಚಿತ್ರಗಳು
ಜಿ.ಶರಣಪ್ಪ
ಪುಟ: 123+11, ಬೆಲೆ: ರೂ.120
ಪ್ರಥಮ ಮುದ್ರಣ: 2019

ಗ್ರಾಮೀಣ ಬದುಕಿನ ಅನುಭವಗಳ ಕುರಿತ ಈ ಕಥಾಸಂಕಲನ, ಲೇಖಕರು ಒಡನಾಡಿದ ವ್ಯಕ್ತಿ, ವ್ಯಕ್ತಿತ್ವಗಳ ಚಿತ್ರಣ. ಗ್ರಾಮ ಬದುಕಿನಲ್ಲಿ ತನ್ನ ಅನುಭವಕ್ಕೆ ದಕ್ಕಿದ ವಿಚಾರಗಳಿಗೆ ಕಥೆಯ ರೂಪ ನೀಡಲಾಗಿದೆ. ಹಳ್ಳಿ ಬದುಕಿನ ಸ್ಥಿತ್ಯಂತರಗಳನ್ನು ಇಲ್ಲಿ ದಾಖಲಿಸಲಾಗಿದೆ. ಹಳೆಯ ನೆನಪುಗಳು ಕಾಡುವ ಚಿತ್ರಗಳಾಗಿ, ಕಥೆಯ ರೂಪ ಪಡೆದಿದೆ. ಸಹಜವಾಗಿ ಎಲ್ಲರ ಬದುಕಿನ ಅನುಭವಗಳೂ ಇಲ್ಲಿ ಕಾಣಸಿಗುತ್ತದೆ.

ಮೇಲಿನ ಮೂರೂ ಕೃತಿಗಳ ಪ್ರಕಾಶಕರು: ಸಿ.ವಿ.ಜಿ. ಇಂಡಿಯಾ, ನಂ 277/ಎ, ನೆಲಮಹಡಿ ಚಂದ್ರಗಿರಿ, 5ನೇ ಕ್ರಾಸ್, ವಿಧಾನಸೌಧ ಬಡಾವಣೆ, ಲಗ್ಗೆರೆ, ಬೆಂಗಳೂರು.


ಕಾಲನೊದ್ದವರು
ಬಸವರಾಜು ಕುಕ್ಕರಹಳ್ಳಿ
ಪುಟ: 72, ಬೆಲೆ: ರೂ.50
ಪ್ರಥಮ ಮುದ್ರಣ: 2019
ಫಿಂಚ್ ಪಬ್ಲಿಷರ್ಸ್, ರಾಮಕೃಷ್ಣನಗರ ಮೈಸೂರು. 5700022

ಇದೊಂದು ನೀಳ್ಗತೆಯಾಗಿದ್ದು, ಗ್ರಾಮೀಣತೆಯ ಸೊಗಡು, ಬದುಕು, ಆಧುನಿಕತೆಯ ಅಬ್ಬರಕ್ಕೆ ಸಿಕ್ಕು ನಲುಗುವ ಬಗೆಯನ್ನು ಈ ಕತೆಯಲ್ಲಿ ಚಿತ್ರಿಸಲಾಗಿದೆ. ಗ್ರಾಮೀಣ ಕಸುಬುಗಳು ಕಣ್ಮರೆಯಾಗುತ್ತಿದ್ದು, ತೊಪ್ಪೆ ನಂಜಿ ಎಂಬ ಮಹಿಳೆಯೊಬ್ಬಳ ಪಾತ್ರದ ಮೂಲಕ ಭಾರತದ ಹಳ್ಳಿಗಳ ದಾರುಣ ಕತೆಯನ್ನು ಮುಖ್ಯವಾಗಿ ಬಿಂಬಿಸಲಾಗಿದೆ. ಆಧುನಿಕತೆಯ ಹಿಂದೆ ಉಳಿದ ಕರಿಛಾಯೆಯ ಕಡೆಗೆ ಈ ಕೃತಿ ಬೆಳಕು ಬೀರುತ್ತದೆ.


ಬಹುಜನ ಚಳವಳಿಯ ಇತಿಹಾಸ
ಡಾ. ವಿ.ಮುನಿವೆಂಕಟಪ್ಪ
ಪುಟ: 452+4, ಬೆಲೆ: ರೂ.400
ಪ್ರಥಮ ಮುದ್ರಣ: 2019
ಡಾ.ವಿ.ಮುನಿವೆಂಕಟಪ್ಪ, #1240 3ನೇ ಕ್ರಾಸ್, ಗಂಗೆ ರಸ್ತೆ, ಕುವೆಂಪುನಗರ, ಮೈಸೂರು. 570004

ಈ ಕೃತಿಯು ಸ್ಪರ್ಧಾತ್ಮಕ ಪರೀಕ್ಷೆಗಳ ದೃಷ್ಟಿಯಿಂದ ಉಪಯುಕ್ತ ಕೃತಿ ಎನ್ನಬಹುದು. ಅಲ್ಲದೆ ಬಹುಜನ ಚಳುವಳಿಯು ಇತಿಹಾಸದಿಂದ ಹಿಡಿದು ಪ್ರಸ್ತುತ ಕಾಲಘಟ್ಟದವರೆಗೆ ನಡೆದುಬಂದ ಬಗೆಯನ್ನು ಅರಿಯಲು ಈ ಕೃತಿ ಸಹಕಾರಿ. 456 ಪುಟಗಳ ಈ ಬೃಹತ್ ಕೃತಿಯಲ್ಲಿ ಹಲವಾರು ಲೇಖಕರ ನೂರಕ್ಕೂ ಹೆಚ್ಚು ಲೇಖನಗಳಿವೆ.


ಜನಶಕ್ತಿಯಿಂದ ನದಿಗಳುಗೆ ಮರುಜೀವ
ಶ್ರೀ ಪಡ್ರೆ
ಪುಟ: 136+12, ಬೆಲೆ: ರೂ.150
ಪ್ರಥಮ ಮುದ್ರಣ: 2018
ಜಲಕೂಟ, ವಾಣಿನಗರ ಮತ್ತು ಕೃಷಿ ಮಾಧ್ಯಮ ಕೇಂದ್ರ.

ಕೃಷಿಗೆ ಸಂಬಂಧಿಸಿದ ಲೇಖನಗಳನ್ನು ಒಳಗೊಂಡ ಕೃತಿಯಿದು. ಬರ, ಮಳೆಯ ಬಗ್ಗೆ ಜನರ ಮನಸ್ಥಿತಿ, ಆತ್ಮವಿಶ್ವಾಸದ ಕೊರತೆಯಿಂದ ಕೃಷಿ ಹಿನ್ನಡೆಯಾಗುತ್ತಿರುವ ಬಗ್ಗೆ ಈ ಕೃತಿ ಬೆಳಕು ಚೆಲ್ಲುತ್ತದೆ. ಕೃಷಿಕನ ಜತೆ ನಿಂತು ಕೃಷಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಗಮನಿಸಿ, ಆಳ ತಿಳುವಳಿಕೆಯನ್ನು ಹಿನ್ನೆಲೆಯಾಗಿಟ್ಟು ಈ ಕೃತಿ ರಚೆನಗೊಂಡಿದ್ದು, ಕೃಷಿ ಸಂಬಂಧಿ ಚಟುವಟಿಕೆಗೆ ಸ್ಫೂರ್ತಿ ತುಂಬಬಲ್ಲದು.

Leave a Reply

Your email address will not be published.