ಹೊಸ ಪುಸ್ತಕ

ನೈಮಿತ್ತಿಕ
ಎನ್.ಬೋರಲಿಂಗಯ್ಯ

ಪುಟ: 104, ಬೆಲೆ: ರೂ.90
ದಾರಿದೀಪ ಪ್ರಕಾಶನ
#44, 8ನೇ ಮುಖ್ಯರಸ್ತೆ, 12ನೇ ಕ್ರಾಸ್,
ಕಾಮಾಕ್ಷಿ ಆಸ್ಪತ್ರೆ ರಸ್ತೆ, ಸರಸ್ವತೀಪುರಂ,
ಮೈಸೂರು 570009
ಪ್ರಥಮ ಮುದ್ರಣ: 2019

ನವೋದಯ ಕವಿ ಎಂ.ಗೋಪಾಲಕೃಷ್ಣ ಅಡಿಗರ ಕೆಲವು ಪ್ರಸಿದ್ಧ ಕವಿತೆಗಳ ಕುರಿತ ವಿಮರ್ಶಾ ಕೃತಿಯಿದು. ಪ್ರಾರ್ಥನೆ, ಕೂಪಮಂಡೂಕ, ಕೆಂದಾವರೆ ಮುಂತಾದ ಪ್ರಮುಖ ಕವಿತೆಗಳ ಕುರಿತು ಇಲ್ಲಿ ವಿಶ್ಲೇಷಿಸಲಾಗಿದೆ. ಅಡಿಗರ ಕಾವ್ಯವನ್ನು ಮತ್ತೆ ಮತ್ತೆ ವಿಮರ್ಶೆಗೊಡ್ಡುವ ಪ್ರಕ್ರಿಯೆಯ ಸಾಲಿನಲ್ಲಿ ಈ ಕೃತಿಯನ್ನು ಪರಿಗಣಿಸಬಹುದು.

ಹೊನ್ನಿಹಳ್ಳಿ (ಮಣ್ಣಿನ ಮೂರು ನೀಳ್ಗತೆಗಳು)
ಮನೋಜ ಪಾಟೀಲ

ಪುಟ: 176 ಬೆಲೆ: 200
ಪವನ ಪುಸ್ತಕ ಪ್ರಕಾಶನ
‘ಶ್ರೀ ಮಹಾಲಕ್ಷ್ಮಿ’, ಸನ್ಮತಿ ಮಾರ್ಗ,
ಧಾರವಾಡ-580001
ಪ್ರಥಮ ಮುದ್ರಣ: 2019

‘ಕುಸ್ತಿ ಕಲ್ಲಪ್ಪ’, ‘ಹೊನ್ನಿಹಳ್ಳಿ ವೃತ್ತಾಂತಗಳು’ ಹಾಗೂ ‘ನಾಟಕದ ಕೆಥರಿನ್’ ಎಂಬ ಮೂರು ನೀಳ್ಗತೆಗಳನ್ನು ಈ ಕೃತಿ ಒಳಗೊಂಡಿದೆ. ಮೊದಲೆರಡು ಕತೆಗಳು, ಲೇಖಕನ ಬಾಲ್ಯದ ಜೀವನಾನುಭಗಳ ಆಧಾರದಲ್ಲಿಯೇ ರೂಪಿತಗೊಂಡಿದ್ದು, ನಾಟಕದ ಕೆಥರಿನ್ ಎಂಬ ಕತೆಯು ಪತ್ತೇದಾರಿ ಜಾಡನ್ನು ಹೊಂದಿದೆ. 176 ಪುಟಗಳ ಈ ಕೃತಿ, ಸರಳ ನಿರೂಪಣೆಯ ಮೂಲಕ ಓದುಗರಿಗೆ ಆಪ್ತವಾಗುತ್ತದೆ.

ಮಿಂಚು ಸೆಂಚುರಿ- 2

ಪುಟ: 352+4, ಬೆಲೆ: ರೂ.300
ಪ್ರಥಮ ಮುದ್ರಣ: 2019
ಹಲವು ಕ್ರೀಡೆಗಳಿಗೆ ಸಂಬಂಧಿಸಿದ, ಲೇಖಕರ ಅಂಕಣ ಬರಹಗಳ ಸಂಗ್ರಹವಿದು. ಕಿರಿವಯಸ್ಸಿನ ಅಂಕಣಕಾರ ಅಂತಃಕರಣ, ತನ್ನ ಕ್ರೀಡಾ ಸ್ಪೂರ್ತಿಯನ್ನು ಅಕ್ಷರಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಕ್ರಿಕೆಟ್, ಫುಟ್ಬಾಲ್, ಕಬಡ್ಡಿ, ಚೆಸ್ ಹಾಗೂ ಒಲಂಪಿಕ್ಸ್ ಕುರಿತು ಆಯಾ ಪಂದ್ಯಗಳು ನಡೆದ ಸಂದರ್ಭಗಳಲ್ಲಿ ಬರೆದ
ಲೇಖನಗಳು ಇಲ್ಲಿವೆ. ಅಂತಃಕರಣ ಅವರ ಬರಹ ಶೈಲಿ, ಕ್ರೀಡಾ ಲೇಖನಗಳನ್ನುಓದಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದೆ. ಮಿಂಚು ಸೆಂಚುರಿಯ ಭಾಗ 1 ಈಗಾಗಲೇ ಬಿಡುಗಡೆಯಾಗಿದೆ. ಈ ಕೃತಿಯು ಭಾಗ 1 ರಮುಂದುವರಿದ ಭಾಗ ಎನ್ನಬಹುದು. ಹೀಗೆ ಕ್ರೀಡೆಗೆ ಸಂಬಂಧಿಸಿದ ಮಾಹಿತಿಗಳನ್ನೂ ಇಲ್ಲಿ ಪಡೆಯಬಹುದು.

ಹೊಂಬಿಸಿಲು

ಪುಟ: 144+4, ಬೆಲೆ: ರೂ.110
ಪ್ರಥಮ ಮುದ್ರಣ: 2018
ಈ ಕೃತಿಯು ಹಲವು ಬಗೆಯ ವಿಷಯಗಳ ವಿಮರ್ಶೆ ಹಾಗೂ, ಬರಹಗಳನ್ನು ಒಳಗೊಂಡಿದೆ. ಕ್ರೀಡೆ, ಸಿನಿಮಾ, ಪುಸ್ತಕ, ತಂತ್ರಜ್ಞಾನ ಹೀಗೆ ಬೇರೆ ಬೇರೆ ವಿಷಯಗಳನ್ನಿಟ್ಟುಕೊಂಡು ಬರೆದಿರುವ ಹಲವು ಲೇಖನಗಳು ಇಲ್ಲಿವೆ. ಸರಳವಾಗಿ, ಹೇಳಬೇಕಾದದ್ದನ್ನು ನೇರವಾಗಿಯೇ ಹೇಳುವ ಲೇಖಕನ ವಿನಯವಂತಿಕೆ ಇಲ್ಲಿ ಕಾಣಬಹುದು. ಸ್ಟೀಫನ್ ಹಾಕಿಂಗ್ ಅವರ ‘ಥಿಯರಿ ಆಫ್ ಎವರಿಥಿಂಗ್’, ರಾಜ್‍ದೀಪ್ ಸರ್ದೇಸಾಯಿ ಅವರ ‘ಡೆಮಾಕ್ರಸಿ’ಸ್ ಇಲೆವೆನ್’ ಕೃತಿಗಳನ್ನು ತನ್ನ ಗ್ರಹಿಕೆಯ ನೆಲೆಯಲ್ಲಿ ವಿಮರ್ಶಿಸಿದ್ದಾರೆ. ಇಲ್ಲಿ ಬಹುತೇಕ ಸಿನಿಮಾ ವಿಮರ್ಶೆಗಳೇ ಇರುವುದರಿಂದ ಸಿನಿಮಾ ಪ್ರೇಮಿಗಳಿಗೆ, ಕೆಲವು ಸಿನಿಮಾಗಳನ್ನು ಪರಿಚಯಿಸುವುದರ ಜತೆಗೆ, ಸಿನಿವಿಮರ್ಶೆಯ ಹಿತವನ್ನೂ ಇಲ್ಲಿನ ಲೇಖನಗಳು ನೀಡುತ್ತವೆ.

ಆಟದ ನೋಟ

ಪುಟ: 120+4, ಬೆಲೆ: ರೂ.100
ಪ್ರಥಮ ಮುದ್ರಣ: 2018
ಈ ಕೃತಿಯೂ ಕೂಡಾ ಕ್ರೀಡೆಗೆ ಸಂಬಂಧಿಸಿದ ಬರಹಗಳನ್ನು ಒಳಗೊಂಡಿದೆ. ಕಬಡ್ಡಿ, ಫುಟ್ಬಾಲ್ ಹಾಗೂ ಏಷ್ಯನ್ ಗೇಮ್ಸ್ ಕುರಿತಂತೆ ಕೆಲವು ಲೇಖನಗಳು ಇಲ್ಲಿವೆ. ಎಲ್ಲಾ ಕ್ರೀಡೆಯ ಮೇಲಿನ ನಾಲ್ಕು ಕೃತಿಗಳ ಲೇಖಕರು; ಅಂತಃಕರಣ.ಕುರಿತು ಓದುಗರಲ್ಲಿ ಆಸಕ್ತಿ ಹುಟ್ಟಿಸುವುದು ಈ ಲೇಖಕನ ವಿಶೇಷ ಗುಣ. ಕೇವಲ ಒಂದೇ ಕ್ರೀಡೆಗೆ ಅಂಟಿಕೊಂಡಿರದೆ, ತನ್ನದೇ ಶೈಲಿಯಲ್ಲಿ ಹಲವು ಕ್ರೀಡೆಗಳನ್ನು, ಅವುಗಳ ನಿಯಮ, ಕ್ರಮಗಳನ್ನು ಪರಿಚಯಿಸುತ್ತಲೇ ಆಯಾ ಪಂದ್ಯಗಳ ಕುರಿತು ಬರೆಯುತ್ತಾರೆ. ಇಲ್ಲಿನ ಎಲ್ಲಾ ಬರಹಗಳೂ ಕುತೂಹಲಕಾರಿಯಾಗಿ ಓದಿಸಿಕೊಂಡು ಹೋಗಬಲ್ಲಂಥವು.

ಕ್ರಿಕೆಟ್ ಕ್ರಿಕೆಟ್

ಪುಟ: 152+4, ಬೆಲೆ: ರೂ.120
ಪ್ರಥಮ ಮುದ್ರಣ: 2018
ಈ ಕೃತಿಯು ಐಪಿಎಲ್ ಸೇರಿದಂತೆ ಹಲವು ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಬಗೆಗಿನ ಲೇಖನಗಳನ್ನು ಒಳಗೊಂಡಿದೆ. ಆಯಾ ಪಂದ್ಯಗಳ ಸಂದರ್ಭ ಬರೆದ
ಅಂಕಣಬರಹಗಳು ಇಲ್ಲಿವೆ. ಪಂದ್ಯಗಳನ್ನು ನೆನಪಿನಲ್ಲಿಟ್ಟುಕೊಂಡು ಓದಲು ಸಾಧ್ಯವಾಗುವವರಿಗೆ ಈ ಬರಹಗಳು ಆಪ್ತವೆನಿಸಬಹುದು. ಸಂದರ್ಭಕ್ಕೆ ತಕ್ಕಂತೆ ಚಿತ್ರಗಳನ್ನೂ ಬಳಸಲಾಗಿದೆ. ಲೇಖಕನ ಭಾಷೆಯ ಮೂಲಕ ಕೃತಿ ಓದುಗರಿಗೆ ಹತ್ತಿರವಾಗುತ್ತದೆ.

ಪ್ರಕಾಶಕರು; ಮಡಿಲು ಪ್ರಕಾಶನ, ನಂ.77, 2ನೇ ಮುಖ್ಯರಸ್ತೆ, ಐಶ್ವರ್ಯನಗರ, ಕುವೆಂಪುನಗರ ‘ಎನ್’ ಬ್ಲಾಕ್, ಮೈಸೂರು.

ಮುತ್ತು ಮಾಣಿಕ್ಯ
(ಕವನ ಸಂಕಲನ)
ಮೀನಾ ಮೈಸೂರು

ಪುಟ: 135 ಬೆಲೆ: ರೂ.100
ಪ್ರಕಾಶಕರು: ಕೆ.ಆರ್.ಲಕ್ಷ್ಮೀಶ
ನಂ.66/ಎ, ‘ಅಮೂರ್’, 2ನೇ ಕ್ರಾಸ್,
ಕೆ.ಎಚ್.ಬಿ.ಕಾಲೋನಿ, ಚಾಮುಂಡಿವನದ
ಬಳಿ, ವಿದ್ಯಾರಣ್ಯಪುರಂ,
ಮೈಸೂರು- 570008
ಪ್ರಥಮ ಮುದ್ರಣ: 2019
50 ಕವಿತೆಗಳ ಈ ಸಂಕಲನವು ಭಾವಕ್ಕೆ ಹತ್ತಿರವಾದ ವಸ್ತು ವಿಷಯಗಳಿಗೆ ಹುಟ್ಟಿಕೊಂಡ ಕವಿತೆಗಳ ಜತೆಗೆ, ಕಂಡ ಸ್ಥಳ, ಒಡನಾಡಿದ ವ್ಯಕ್ತಿ, ವ್ಯಕ್ತಿತ್ವಗಳ ಕುರಿತು ಚಿತ್ರಣ ಒದಗಿಸಿರುವುದು ವಿಶೇಷ. ಕೆ.ರಾಮದಾಸ್, ಕೆ.ವಿ.ಸುಬ್ಬಣ್ಣ, ಪೋಲಂಕಿ ರಾಮಮೂರ್ತಿ ಮುಂತಾದ  ವ್ಯಕ್ತಿಗಳನ್ನು ತಾನು ಕಂಡಂತೆ ಕವಿತೆಯಲ್ಲಿ
ಚಿತ್ರಿಸಿದ್ದಾರೆ ಮೀನಾ ಮೈಸೂರು. ಅಲ್ಲದೆ ಇಲ್ಲಿನ ಹಲವಾರು ಕವಿತೆಗಳಲ್ಲಿ, ಅಕ್ಕಮಹಾದೇವಿ, ಅಡಿಗ, ಬೇಂದ್ರೆ, ಕುವೆಂಪು, ಆಗಾಗ ಬರುತ್ತಲೇ ಇರುತ್ತಾರೆ. ಹೊಸಬಗೆಯ ಹಲವು ಕವಿತೆಗಳನ್ನೂ ಈ ಸಂಕಲನದಲ್ಲಿ ಕಾಣಬಹುದು.

ಎಮಿಲಿ ಡಿಕಿನ್ಸನ್
ನೂರು ಕವನಗಳು
ಅನುವಾದ: ಸಿ.ಎನ್. ಶ್ರೀನಾಥ್

ಪುಟ: 104 ಬೆಲೆ: ರೂ. 90
ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ,
ಗೋಕುಲಂ ಮೂರನೇ ಹಂತ, ಮೈಸೂರು.
ಪ್ರಥಮ ಮುದ್ರಣ: 2019
19ನೇ ಶತಮಾನದ ಪ್ರಸಿದ್ಧ ಇಂಗ್ಲಿಷ್ ಕವಯಿತ್ರಿ ಎಮಿಲಿ ಡಿಕಿನ್ಸನ್ ಅವರ ನೂರು ಕವಿತೆಗಳ ಕನ್ನಡ ಅನುವಾದ ಕೃತಿಯಿದು. 19ನೇ ಶತಮಾನದ ಇತರ ಇಂಗ್ಲಿಷ್ ಕವಿಗಳಷ್ಟೇ ಪ್ರಬಲವಾದ ಕಾವ್ಯವನ್ನು ಸೃಷ್ಟಿಸಿರುವ ಎಮಿಲಿ, ಸಾಮಾಜಿಕ ಸಂಪರ್ಕದಿಂದ ದೂರವಿದ್ದರೂ ಪ್ರಾಪಂಚಿಕ ವಿಚಾರಗಳಿಗೆ ಕಾವ್ಯವನ್ನು ಪ್ರತಿಸ್ಪಂದನವಾಗಿ ತಂದಿಟ್ಟ ಬಗೆ ವಿಭಿನ್ನ. ಸರಳ ಕನ್ನಡದಲ್ಲಿ ರೂಪುಗೊಂಡ ಈ ಅನುವಾದಿತ ಕವಿತೆಗಳು ಸ್ವಲ್ಪಮಟ್ಟಿಗೆ ಕನ್ನಡದ್ದೇ ಎನಿಸುವಂತಿವೆ.

ಉದಯ ಕನ್ನಡ
ಸಂಪಾದಕರು: ಪ್ರೊ.ಶಾಂತರಾಜು, ವಿ.ರಾಜು

ಪುಟ: 80+8, ಬೆಲೆ: ರೂ.100
ಪ್ರಥಮ ಮುದ್ರಣ: 2019
ಉದಯಭಾನು ಕಲಾಸಂಘ, ಬೆಂಗಳೂರು.
ಇದೊಂದು ವಿಭಿನ್ನ ಮತ್ತು ಅತ್ಯಂತ ಸಹಕಾರಿಯಾಗಿರುವ ಕೃತಿ. ಕನ್ನಡ ಶಿಕ್ಷಕರಿಗೆ ಹೆಚ್ಚು ಅನುಕೂಲವಾಗುವ ಪುಸ್ತಕವಿದು. ಗದ್ಯ- ಪದ್ಯಗಳ ಬಗ್ಗೆ, ಹಳಗನ್ನಡದ ಬಗ್ಗೆ, ಬೋಧನಾ ವಿಧಾನ ಹಾಗೂ ಪಠ್ಯದ ಆಯ್ಕೆಯ ಕುರಿತು ಹಲವು ಪ್ರಯೋಜನಕಾರಿ ಮಾಹಿತಿ ಇದರಲ್ಲಿವೆ. ಹಳಗನ್ನಡ ಪದ್ಯಗಳ ಜತೆಗೆ ಅವುಗಳ ಸಾರವನ್ನೂ ಇಲ್ಲಿ ನೀಡಲಾಗಿದೆ.

ಜಾತ್ಯತೀತ ಧರ್ಮ ನಿರಪೇಕ್ಷ ಧೀಮಂತ
ನಾಯಕ ಜಾರ್ಜ್ ಫೆರ್ನಾಂಡಿಸ್
ಅಮ್ಮೆಂಬಳ ಆನಂದ

ಪುಟ: 56 ಬೆಲೆ: ರೂ. 45
ಕನ್ನಡ ಸಂಘ ಕಾಂತಾವರ,
ಕಾರ್ಕಳ, ಉಡುಪಿ ಜಿಲ್ಲೆ 574129
ಪ್ರಥಮ ಮುದ್ರಣ: 2019
ವರ್ಷದ ಹಿಂದೆ ಅಗಲಿದ ಧೀಮಂತ ರಾಜಕಾರಣಿ ಜಾರ್ಜ್ ಫೆರ್ನಾಂಡಿಸ್ ಅವರ ಜೀವನದ ಕುರಿತ ಕಿರುಚಿತ್ರಣ ಈ ಕೃತಿ. ರಾಜಕೀಯ ಏಳುಬೀಳುಗಳ ನಡುವೆ ಸಂಘಟನಾ ಶಕ್ತಿಯ ಮೂಲಕ ಜಾರ್ಜ್, ತುರ್ತು ಪರಿಸ್ಥಿತಿ ಸಂದರ್ಭದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಬಗ್ಗೆ, ರೈಲ್ವೇ ಸಚಿವರಾಗಿದ್ದಾಗ ಕನ್ನಡ ನಾಡಿಗೆ ನೀಡಿದ ಕೊಡುಗೆ, ಮುಂತಾದ ವಿಚಾರಗಳ ಕುರಿತು ಈ ಕೃತಿಯಲ್ಲಿ ವಿವರಿಸಲಾಗಿದೆ. ಜಾರ್ಜ್ ಫೆರ್ನಾಂಡಿಸ್ ವ್ಯಕ್ತಿತ್ವವನ್ನು ಪರಿಚಯಿಸುವ ಕೃತಿಯಿದು.

ಆನೆ ಕಥೆ
ನಾಗರಾಜ್ ನವೀಮನೆ

ಪುಟ: 76, ಬೆಲೆ: ರೂ.50
ಪ್ರಥಮ ಮುದ್ರಣ: 2019
ಹೆಸರೇ ಸೂಚಿಸುವಂತೆ ಇದು ಸಂಪೂರ್ಣ ಆನೆಯ ಕುರಿತ ಕಥೆ, ಕೃತಿ. ಅತ್ಯಂತ ಕುತೂಹಲಕಾರಿಯಾಗಿ ಓದಿಸಿಕೊಂಡು ಹೋಗುವ ಈ ಕೃತಿ, ಪ್ರಕಾರಗಳನ್ನು
ದಾಟಿ ಎಲ್ಲ ಓದುಗರಿಗೂ ಇಷ್ಟವಾಗುತ್ತದೆ. ಮೈಸೂರು ದಸರಾ ಸಂದರ್ಭದಲ್ಲಿ ಆನೆಗಳು ಅಣಿಗೊಳ್ಳುವ ಬಗೆ, ಅವುಗಳನ್ನು ನೋಡಿಕೊಳ್ಳುವ ಮಾವುತರ ಬದುಕು, ಆನೆ ಡಾಕ್ಟ್ರು ಮುಂತಾದ ವಿಚಾರಗಳನ್ನು ಲೇಖಕರು ಇಲ್ಲಿ ದಾಖಲಿಸಿದ್ದಾರೆ. ಓದುಗನನ್ನು ನೀರಸ ಸ್ಥಿತಿಗೆ ಇಳಿಸದಂತೆ ಓದಿನ ಹಳಿಯಲ್ಲ ಕೊಂಡುಹೋಗಬಲ್ಲ ಕೃತಿಯಿದು.

ಸಿಗ್ಮಂಡ್ ಫ್ರಾಯ್ಡ್
ಎಂ.ಬಸವಣ್ಣ

ಪುಟ: 160, ಬೆಲೆ: ರೂ.150
ಪ್ರಥಮ ಮುದ್ರಣ: 2019
ಪ್ರಸಿದ್ಧ ಚಿಂತಕ ಸಿಗ್ಮಂಡ್ ಫ್ರಾಯ್ಡ್‍ನ ಪ್ರಮುಖ ಚಿಂತನೆಗಳನ್ನು ಸರಳ ಭಾಷೆಯಲ್ಲಿ ವಿವರಿಸುವ ಕೃತಿಯಿದು. ಕನಸುಗಳು, ಸುಪ್ತಚೇತನ, ಮನೋಲೈಂಗಿಕ ವಿಕಾಸ, ಈಡಿಪಸ್ ಕಾಂಪ್ಲೆಕ್ಸ್… ಹೀಗೆ ಫ್ರಾಯ್ಡ್‍ನ ಮನೋವೈಜ್ಞಾನಿಕ ಸಂಶೋಧನೆಗಳನ್ನು ಇಲ್ಲಿ ವಿವರಿಸಲಾಗಿದೆ. ಮಾನಸಿಕ ಅವಸ್ಥೆಯ ಬದಲಾವಣೆಗಳಿಗೆ ಸಂಬಂಧಿಸಿ ಫ್ರಾಯ್ಡ್ ಮುಂದಿಡುವ ವಿಚಾರಗಳ್ನು ಲೇಖಕರು ಕನ್ನಡದ ಓದುಗರಿಗೆ ಸರಳವಾಗಿ ಕಟ್ಟಿಕೊಟ್ಟಿದ್ದಾರೆ. ಫ್ರಾಯ್ಡ್ ವಿಚಾರಧಾರೆಗಳನ್ನು ಇಷ್ಟಪಡುವವರಿಗೆ ಈ ಕೃತಿ ಹೆಚ್ಚು ಆಪ್ತವೆನಿಸಬಹುದು.

ಲೀಲಾವತಿ ಪರಿಣಯ (ಯಕ್ಷಗಾನ)
ಹೊಸ್ತೋಟ ಮಂಜುನಾಥ ಭಾಗವತ

ಪುಟ: 56, ಬೆಲೆ: ರೂ.50
ಪ್ರಥಮ ಮುದ್ರಣ: 2019
ಲೀಲಾವತಿ ಪರಿಣಯ ಒಂದು ಯಕ್ಷಗಾನದ ಕೃತಿಯಾಗಿದ್ದು, ಮೂಲ ಕತೆಗೆ ಪದ್ಯಗಳನ್ನು ಸೇರಿಸಿ, ಯಕ್ಷಗಾನ ಪ್ರಸಂಗದ ರೂಪ ಕೊಟ್ಟು ಪುಸ್ತಕ ರೂಪದಲ್ಲಿ
ಹೊರತರಲಾಗಿದೆ. ಮಧುರೆಯ ರಾಜ ಧರ್ಮವೀರ ಹಾಗೂ ವಿಂಧ್ಯೆಯ ರಾಜ ವೀರವರ್ಮ ನಡುವಿನ ವೈರತ್ವದಿಂದ ಆರಂಭಗೊಂಡು ಧರ್ಮವೀರನ ಮಗ ಗುಣವರ್ಮ ಮತ್ತು ಲೀಲಾವತಿಯ ವಿವಾಹದವರೆಗೆ ಹಲವು ಸನ್ನಿವೇಶಗಳನ್ನು ಒಳಗೊಂಡ ಕಥಾಸಾರ ಇಲ್ಲಿದೆ. ಯಕ್ಷಗಾನ ಪ್ರದರ್ಶನ ನೀಡುವ ಕಲಾಮನಸ್ಸಿನ ಓದುಗರಿಗೆ ಈ ಕೃತಿಯು ಹೆಚ್ಚು ಸಹಾಯಕವಾಗಬಲ್ಲದು.

ಜ್ವಾಲಾ ಪ್ರತಾಪ (ಯಕ್ಷಗಾನ)
ಮೂಲಕತೆ: ಮಹಾದೇವ ಯಂಕ ಹಳ್ಳೇರ್
ಯಕ್ಷರೂಪ: ಹೊಸ್ತೋಟ ಮಂಜುನಾಥ
ಭಾಗವತ

ಪುಟ: 60, ಬೆಲೆ: ರೂ.50
ಪ್ರಥಮ ಮುದ್ರಣ: 2019
ಇದೂ ಕೂಡಾ ಯಕ್ಷಗಾನಕ್ಕೆ ಸಂಬಂಧಿಸಿದ ಕೃತಿಯಾಗಿದ್ದು, ಜೈಮಿನಿ ಭಾರತದ ಒಂದು ಪ್ರಸಂಗವನ್ನು ಆಯ್ದು, ಯಕ್ಷಗಾನದ ರೂಪ ನೀಡಲಾಗಿದೆ. ಹೆಣ್ಣಿನ
ಸ್ವಾತಂತ್ರ್ಯ ಸ್ವಾಭಿಮಾನಗಳ ಕುರಿತಂತೆ ಆಧುನಿಕ ಕಾಲಕ್ಕೂ ಅನ್ವಯವಾಗುವಂತೆ ಪಾತ್ರಗಳನ್ನು ಚಿತ್ರಿಸಲಾಗಿದ್ದು, ‘ಜ್ವಾಲೆ’ಯ ಪಾತ್ರ ಹೆಚ್ಚಿನ ಮಹತ್ವ ಹೊಂದಿದೆ. ಒಟ್ಟಿನಲ್ಲಿ ಈ ಕೃತಿಯು ಯಕ್ಷಗಾನಕ್ಕೆ ಸಂಬಂಧಿಸಿದ ಮುಖ್ಯ ಕೃತಿಗಳ ಸಾಲಿನಲ್ಲಿ ನಿಲ್ಲಬಹುದಾದ, ಕಡಿಮೆ ಪುಟಗಳ ಒಂದು ಸಣ್ಣ ಕೃತಿ ಎನ್ನಬಹದು.

ಮೇಲಿನ ನಾಲ್ಕು ಕೃತಿಗಳ ಪ್ರಕಾಶಕರು: ಅಭಿನವ, 17/17-2, ಮೊದಲ ಮುಖ್ಯರಸ್ತೆ, ಮಾರೆನಹಳ್ಳಿ, ವಿಜಯನಗರ, ಬೆಂಗಳೂರು. 560040

Leave a Reply

Your email address will not be published.